ಒಂದು ಗೊತ್ತಾದ ಸಾಲುಗಳ (ಪಾದಗಳು) ನಿಯಮದಿಂದ ಬರೆದವುಗಳೇ ಪದ್ಯಗಳು.  ಅಂದರೆ ಪದ್ಯಗಳು ಪಾದ (ಸಾಲು) ಗಳಿಂದಲೂ, ಪ್ರತಿಯೊಂದು ಪಾದವೂ ಪ್ರಾಸ, ಯತಿ, ಗಣಗಳ ನಿಯಮದಿಂದಲೂ ಕೂಡಿರುತ್ತವೆ.  ಈಗ ಈ ವಿಚಾರವಾಗಿ ಒಂದೊಂದಾಗಿ ತಿಳಿಯೋಣ.

() ಪ್ರಾಸ

(೧೦೧) ಪದ್ಯಗಳ ಪ್ರತಿಯೊಂದು ಸಾಲಿನ ಒಂದನೆಯ ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿಯ ವ್ಯಂಜನಾಕ್ಷರಗಳು ಬರುವುದಕ್ಕೆ ಪ್ರಾಸವೆನ್ನುತ್ತಾರೆ ಪ್ರಾಸವನ್ನು ಕೆಲವರು ಸಾಲುಗಳ (ಪಾದಗಳ) ಕೊನೆಯಲ್ಲೂ ಬರುವಹಾಗೆ ಪದ್ಯ ರಚಿಸುತ್ತಾರೆಪಾದಾಂತದಲ್ಲಿ ಬರುವ ಪ್ರಾಸದ ನಿಯಮವು ಕೇವಲ ರಗಳೆಗಳಲ್ಲಿ ಮಾತ್ರ ಕಂಡು ಬರುತ್ತದೆ.

ಈ ಪ್ರಾಸಾಕ್ಷರದ ಹಿಂದೆ ಹ್ರಸ್ವಸ್ವರವಿದ್ದರೆ ಎಲ್ಲ ಸಾಲುಗಳಲ್ಲಿ ಹ್ರಸ್ವಸ್ವರವೂ ದೀರ್ಘಸ್ವರವಿದ್ದರೆ ಎಲ್ಲ ಕಡೆಗೆ ದೀರ್ಘಸ್ವರವೂ, ಅನುಸ್ವಾರ ವಿಸರ್ಗಗಳಿದ್ದರೆ ಎಲ್ಲ ಕಡೆಗೆ ಅನುಸ್ವಾರ ವಿಸರ್ಗಗಳೂ ಬಂದಿರಬೇಕು.

ಉದಾಹರಣೆಗೆ:-

ಭವದನುಜನರುಣ ಜಲಮಂ |
ಸವಿನೋಡಿದೆನಿಂತು ನಿನ್ನ ಬಲಜಲನಿಧಿಯಂ |
ಸವಿನೋಡಿದೆನೀ ಕೊಳನಂ |
ತವೆಪೀರ್ದು ಬಳಿಕ್ಕೆ ನಿನ್ನ ಸವಿಯಂ ನೋಳ್ಪೆಂ ||

ಈ ಪದ್ಯದಲ್ಲಿ ಮೊದಲನೆಯ ಸ್ವರ-‘ಭ‘ ಕಾರದ ಮುಂದಿರುವ ಅಕಾರ, ೨ನೆಯ ಸ್ವರ ‘ವ‘ ಕಾರದ ಮುಂದಿರುವ ಅಕಾರ.  ಇವೆರಡರ ಮಧ್ಯದಲ್ಲಿ ‘ವ್‘ ಎಂಬ ವ್ಯಂಜನವಿದೆ.  ಇದರಂತೆ ೨ನೆಯ ಸಾಲಿನಲ್ಲಿ ಅಕಾರ ಇಕಾರಗಳ ಮಧ್ಯದಲ್ಲಿ ‘ವ್‘ ವ್ಯಂಜನವಿದೆ.  ೩ನೆಯ ಸಾಲಿನಲ್ಲಿ ಅಕಾರ ಇಕಾರಗಳ ಮಧ್ಯದಲ್ಲಿ ‘ವ್‘ ಕಾರವಿದೆ.  ನಾಲ್ಕನೆಯ ಸಾಲಿನಲ್ಲಿ ಅಕಾರ ಎಕಾರಗಳ ಮಧ್ಯದಲ್ಲಿ ‘ವ್‘ ಕಾರವಿದೆ.  ಹೀಗೆ ನಾಲ್ಕು ಸಾಲುಗಳಲ್ಲಿಯೂ ಇರುವ ಒಂದನೆಯ ಎರಡನೆಯ ಸ್ವರಗಳ ಮಧ್ಯದಲ್ಲಿ ‘ವ್‘ ಎಂಬ ವ್ಯಂಜನವಿರುವುದು ಗೊತ್ತಾಗುವುದು.  ಈ ‘ವ‘ ಕಾರವೇ ಪ್ರಸಾಕ್ಷರವೆನಿಸುವುದು.  ಅಲ್ಲದೆ ಪ್ರಾಸಾಕ್ಷರದ ಹಿಂದೆ ಎಲ್ಲ ಕಡೆಗೂ ಹ್ರಸ್ವಸ್ವರವೇ ಇರುವುದು.  ಈಗ ಒಂದಕ್ಕಿಂತ ಹೆಚ್ಚು ವ್ಯಂಜನಗಳ ಪ್ರಾಸಾಕ್ಷರವಾಗಿರುವುದನ್ನು ಗಮನಿಸಿರಿ.

ಉದಾಹರಣೆಗೆ:-

ಬಲ್ಗಯ್ಯ ನೃಪರಂಜಿ ತಡೆಯದೆ ರಘೂದ್ವಹನ |
ಸೊಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ |
ನಲ್ಗುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು||
ಪುಲ್ಗಳಪಸುರ್ಗೆಳಸಿ ಪೊಕ್ಕೊಡಾ ತೋಟಗಾ- |
ವಲ್ಗೆ ತನ್ನೊಡನಾಡಿಗಳ ಕೂಡಿ ಲೀಲೆಮಿಗೆ |
ಬಿಲ್ಗೊಂಡು ನಡೆತಂದನಂ ಕಂಡನರ್ಚಿತ ಸುವಾಜಿಯಂ ವೀರಲವನು ||

೧ನೆಯ ಸಾಲು-ಬಲ್ಗಯ್ಯ    ………………………… ಅ + ಲ್ ಗ್ + ಅ
೨ನೆಯ ಸಾಲು-ಸೊಲ್ಗೇಳಿ  ………………………… ಒ + ಲ್ ಗ್ + ಏ
೩ನೆಯ ಸಾಲು-ನಲ್ಗುದುರೆ  ………………………… ಅ + ಲ್ ಗ್ + ಉ
೪ನೆಯ ಸಾಲು-ಪುಲ್ಗಳ      ………………………… ಉ + ಲ್ ಗ್ + ಅ
೫ನೆಯ ಸಾಲು-ವಲ್ಗೆತನ್ನೊ          ………………………… ಅ + ಲ್ ಗ್ + ಎ
೬ನೆಯ ಸಾಲು-ಬಿಲ್ಗೊಂಡು          ………………………… ಇ + ಲ್ ಗ್ + ಒ

ಎಲ್ಲ ಸಾಲುಗಳಲ್ಲೂ ಒಂದನೆಯ ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿ ವ್ಯಂಜನಗಳನ್ನು ನೋಡಿರಿ.

ಮೇಲಿನ ಈ ಪದ್ಯದಲ್ಲಿ ‘ಲ್ ಗ್‘ ಈ ಎರಡು ವ್ಯಂಜನಗಳು ಆರೂ ಸಾಲುಗಳಲ್ಲಿ ಪ್ರಾಸಾಕ್ಷರಗಳಾಗಿ ಬಂದಿರುವುದನ್ನು ಗಮನಿಸಿರಿ.  ಮತ್ತು ಪ್ರಾಸಾಕ್ಷರಗಳ ಹಿಂದೆ ಅ, , , , , ಇ – ಇತ್ಯಾದಿ ಹ್ರಸ್ವಸ್ವರಗಳೇ ಬಂದಿರುವುದನ್ನೂ ಗಮನಿಸಿರಿ.  ಇದರ ಹಾಗೆಯೇ ಕೆಲವು ಕಡೆ ಪ್ರಸಾಕ್ಷರಗಳು ಮೂರು ವ್ಯಂಜನಗಳಿಂದಲೂ ಕೂಡಿರುವುದುಂಟು.  ಕೆಲವು ಸಜಾತೀಯ ಸಂಯುಕ್ತಾಕ್ಷರಗಳಿಂದಲೂ ಕೂಡಿರುವುದುಂಟು.[1]

ಒಮ್ಮೊಮ್ಮೆ ದೊಡ್ಡ ದೊಡ್ಡ ಕವಿಗಳೂ ಈ ಪ್ರಾಸದ ನಿಯಮದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಮಾಡಿರುವುದೂ ಉಂಟು.  ಹಾಗಾಗಿರುವುದು ಎಲ್ಲೋ ಕೆಲವು ಕಡೆ ಮಾತ್ರ.  ಆದರೆ ಎಲ್ಲ ಕಡೆಗೂ ಪ್ರಾಸದ ನಿಯಮವನ್ನು ಪ್ರಾಚೀನ ಕವಿಗಳು ಪಾಲಿಸಿಕೊಂಡೇ ಬಂದಿದ್ದಾರೆ.  ರಗಳೆಗಳಲ್ಲಿ ಇದುವರೆಗೆ ಹೇಳಿದ ಆದಿ ಪ್ರಾಸದ ಜೊತೆಗೆ ಅಂತ್ಯದಲ್ಲಿಯೂ ಈ ಪ್ರಾಸದ ನಿಯಮವನ್ನು ಪಾಲಿಸಿರುವುದುಂಟು.-

ಉದಾಹರಣೆಗೆ:-

ಆಡುವ ಗಂಡಯ್ಯನ ಹೊಸ ನೃತ್ಯಂ
ನೋಡುವ ಶಿವನಂ ಮುಟ್ಟಿತು ಸತ್ಯಂ

ಇಲ್ಲಿ ಮೊದಲ ಸಾಲಿನ ಕೊನೆಯ ಎರಡು ಸ್ವರಗಳಾದ (ನ್ ಋ + ತ್ ಯ್ + ಅಂ) ಋಕಾರ ಅಕಾರಗಳ ಮಧ್ಯದಲ್ಲಿ ತ್ ಯ್ ಎಂಬುವು ಪ್ರಾಸಾಕ್ಷರಗಳು ೨ನೆಯ ಸಾಲಿನಲ್ಲಿ ಕೊನೆಯ ಎರಡು ಸ್ವರಗಳಾದ (ಸ್ ಅ + ತ್ ಯ್ + ಅಂ) ಅಕಾರ ಮತ್ತು ಅಕಾರಗಳ ಮಧ್ಯದಲ್ಲಿ ‘ತ್ ಯ್‘ ಎಂಬಿವು ಪ್ರಾಸಾಕ್ಷರಗಳಾಗಿವೆ.

ಮೇಲಿನ ಎರಡು ಸಾಲುಗಳ ರಗಳೆಯ ಛಂದಸ್ಸಿನಲ್ಲಿ ಆದಿಪ್ರಾಸವು ಡ್ ವ್ಯಂಜನವಾಗಿದ್ದರೆ, ಅಂತ್ಯ ಪ್ರಾಸವು ‘ತ್ ಯ್‘ ಎಂಬೆರಡು ವ್ಯಂಜನಗಳಾಗಿವೆ.  ಈ ತರದಲ್ಲಿ ಅಂತ್ಯಪ್ರಾಸದ ನಿಯಮವನ್ನು ರಗಳೆಯಲ್ಲಲ್ಲದೆ ಬಹುಶಃ ಉಳಿದ ಕಡೆಗೆ ಕಾಣುವುದು ಅಪರೂಪ.

 

() ಯತಿ

ಯತಿ ಯೆಂದರೆ ಪದ್ಯಗಳನ್ನು ಓದುವಾಗ ನಿಲ್ಲಿಸುವ ಸ್ಥಳಗಳು.  ಹೀಗೆ ನಿಲ್ಲಿಸುವುದಕ್ಕೆ ಗೊತ್ತಾದ ಸ್ಥಳಗಳಲ್ಲಿ ನಿಲ್ಲಿಸಿದರೆ ಅರ್ಥ ಕೆಡುವಂತಿರಬಾರದು.  ಅಲ್ಲಿಗೆ ಪದ ಮುಗಿದಿರಬೇಕು.  ಕನ್ನಡ ಕವಿಗಳು ಪ್ರಾಸ ನಿಯಮವನ್ನೂ ಪಾಲಿಸಿ ಯತಿಯ ನಿಯಮವನ್ನು ಪಾಲಿಸುವುದು ಕಷ್ಟವೆಂದು ಪ್ರಾಸಕ್ಕೇ ಪ್ರಾಧಾನ್ಯತೆ ಕೊಟ್ಟು, ಯತಿಯ ನಿಯಮವನ್ನು ಮಿಕ್ಕಿದ್ದಾರೆ.  ಸಂಸ್ಕೃತ ಕವಿಗಳು ಪ್ರಾಸನಿಯಮವನ್ನು ಪಾಲಿಸದೆ ಯತಿಯ ನಿಯಮವನ್ನು ಎಲ್ಲ ಕಡೆಗೂ ಪಾಲಿಸಿದ್ದಾರೆ.  ಆದ್ದರಿಂದ ಯತಿಯ ನಿಯಮವು ಕನ್ನಡ ಕಾವ್ಯಗಳಲ್ಲಿ ಅಷ್ಟು ಮುಖ್ಯವಲ್ಲ.  ಅದರ ವಿಷಯವಾಗಿ ಹೆಚ್ಚಿಗೆ ತಿಳಿಯಬೇಕಾದ ಅವಶ್ಯಕತೆಯಿಲ್ಲ.

 

() ಗಣಗಳು

(೧೦೨) ಗಣ ಎಂದರೆ ಗುಂಪು ಸಮೂಹ ಎಂದು ಅರ್ಥಛಂದಶ್ಯಾಸ್ತ್ರದಲ್ಲಿ ಗಣ ಎಂದರೆಪದ್ಯದ ಪ್ರತಿಯೊಂದು ಪಾದದಲ್ಲೂ ವಿಭಾಗಿಸುವ ಮಾತ್ರೆಗಳ ಅಥವಾ ಅಕ್ಷರಗಳ ಗುಂಪು ಮತ್ತು ಅಂಶಗಳ ಗುಂಪು.

ಮಾತ್ರೆಗಳ ಲೆಕ್ಕದಿಂದ-ಮೂರುಮಾತ್ರೆ ಅಥವಾ ನಾಲ್ಕುಮಾತ್ರೆ ಮತ್ತು ಐದುಮಾತ್ರೆಗಳ ಗುಂಪುಗಳು ಕೆಲವು ಪದ್ಯಗಳಲ್ಲಿ ಬರುತ್ತವೆ.  ಅವೆಲ್ಲ ಮಾತ್ರಾಗಣಗಳು.  ಕೆಲವು ಪದ್ಯಗಳಲ್ಲಿ ಮೂರು ಅಕ್ಷರಗಳ ಗುಂಪುಗಳನ್ನು ವಿಭಾಗಿಸುವರು.  ಅವೆಲ್ಲ ಅಕ್ಷರಗಣಗಳು.  ಕೆಲವು ಪದ್ಯಗಳಲ್ಲಿ ಒಂದೊಂದು ಅಂಶಕ್ಕೆ ಒಂದೊಂದು ಗಣವನ್ನು ವಿಂಗಡಿಸುವರು.  ಅವೆಲ್ಲ ಅಂಶಗಣಗಳು.  ಮುಖ್ಯವಾಗಿ ಈಗ ಮಾತ್ರಾಗಣ, ಅಕ್ಷರಗಣಗಳ ವಿಷಯವನ್ನು ತಿಳಿದರೆ ಸಾಕು.


[1] (i) ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನವು ಬಂದ ಹಿಂದಿನ ಸ್ವರ ಹ್ರಸ್ವವಾಗಿದ್ದರೆ ಸಿಂಹಪ್ರಾಸ.  ಇದರ ಹಾಗೆಯೇ ಪ್ರಸಾಕ್ಷರದ ಪ್ರಾಸಾಕ್ಷರಗಳ-

(ii) ಹಿಂದಿನ ಸ್ವರವು ದೀರ್ಘವಾಗಿದ್ದರೆ ಗಜಪ್ರಾಸ.

(iii) ಪ್ರಾಸಾಕ್ಷರದ ಹಿಂದೆ ಅನುಸ್ವಾರ (ಂ) ವಿದ್ದರೆ ವೃಷಭಪ್ರಾಸ.

(iv) ಪ್ರಾಸಾಕ್ಷರದ ಹಿಂದೆ ವಿಸರ್ಗ (ಃ) ವಿದ್ದರೆ ಅಜಪ್ರಾಸ.

(v) ಬೇರೆ ಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಶರಭಪ್ರಾಸ.

(vi) ಒಂದೇ ಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಹಯಪ್ರಾಸ.  ಹೀಗೆ ಪ್ರಾಸದಲ್ಲಿ ಆರು ವಿಧಗಳನ್ನು ಹೇಳುವುದುಂಟು.  ಈ ಆರು ಪ್ರಾಸಗಳನ್ನು ನೆನಪಿನಲ್ಲಿಡಲು ಈ ಕೆಳಗಿನ ಪದ್ಯ ಸಹಕಾರಿ.

ನಿಜದಿಂ ಒಂದೊಡೆಸಿಂಹಂ || ಗಜದೀರ್ಘಂ ಬಿಂದುವೃಷಭ ವ್ಯಂಜನಶರಭಂ ||

ಅಜನು ವಿಸರ್ಗಂ ಹಯನಂ || ಬುಜಮುಖಿದಡ್ಡಕ್ಕರಂಗಳಿವು ಷಟ್ ಪ್ರಾಸಂ||

ಸಿಂಹ, ಗಜ, ವೃಷಭ, ಶರಭ, ಅಜ, ಹಯ-ಈ ಆರೂ ಪ್ರಾಸಗಳ ಸಂಕ್ಷೇಪ ಲಕ್ಷಣ ಈ ಪದ್ಯದಲ್ಲಿ ಇದೆ.