ಈ ಪುಸ್ತಕದಲ್ಲಿ ಇದುವರೆಗೆ ಹೇಳಿದ ವ್ಯಾಕರಣಶಾಸ್ತ್ರದ ನಿಯಮಗಳಿಂದ ಶುದ್ಧವಾಗಿ ಮಾತನಾಡುವುದಕ್ಕೂ, ವಾಕ್ಯರಚನೆಗೂ, ವಾಕ್ಯರೂಪವಾದ ಪ್ರಬಂಧ ರಚನೆಗೂ ತಕ್ಕ ಮಟ್ಟಿಗೆ ಅನುಕೂಲವಾಗಬಹುದು.  ಆದರೆ ಪದ್ಯಗಳನ್ನು ಹೇಗೆ ರಚಿಸಬೇಕು? ಅಲ್ಲಿ ಯಾವ ನಿಯಮಗಳನ್ನು ಕವಿಗಳು ಅನುಸರಿಸುತ್ತಾರೆ? ಎಂಬ ವಿಷಯವನ್ನು ತಿಳಿಯಬೇಕಾದರೆ ಅವಶ್ಯವಾಗಿ ಛಂದಶ್ಯಾಸ್ತ್ರದ ಪರಿಚಯ ಮಾಡಿಕೊಳ್ಳಬೇಕಾಗುವುದು.  ನಮ್ಮ ವಿದ್ಯಾರ್ಥಿಗಳು ತಾವು ಓದುತ್ತಿರುವ ಕನ್ನಡ ಪಠ್ಯ ಪುಸ್ತಕಗಳಲ್ಲಿ ಅದೆಷ್ಟೋ ಬಗೆಯ ಪದ್ಯಗಳನ್ನು ಓದುತ್ತಾರೆ.  ಆ ಎಲ್ಲ ಪದ್ಯಗಳನ್ನು ರಚನೆ ಮಾಡಿದ ಕವಿಗಳು ಹಲಕೆಲವು ನಿಯಮಗಳನ್ನನುಸರಿಸಿ ಆ ಪದ್ಯಗಳನ್ನು ರಚಿಸಿರುತ್ತಾರೆ.  ಯಾವ ನಿಯಮವನ್ನು ಅನುಸರಿಸಿ ಈ ಪದ್ಯಗಳು ರಚಿತವಾಗಿವೆ, ಎಂಬುದನ್ನು ತಿಳಿಯದೆ ಅವುಗಳನ್ನು ಓದಿದರೆ ಸಾಕಾದಷ್ಟು ಪ್ರಯೋಜನವಾಗಲಿಕ್ಕಿಲ್ಲ.  ಆದುದರಿಂದ ನಮ್ಮ ಮಕ್ಕಳು ಛಂದಶ್ಯಾಸ್ತ್ರದ ಸ್ಥೂಲವಾದ ಪರಿಚಯ ಮಾಡಿಕೊಳ್ಳಬೇಕಾ ಗುವುದು.  ಈ ದೃಷ್ಟಿಯಿಂದ ಮುಂದೆ ಸಂಗ್ರಹವಾಗಿ ಈ ವಿಷಯವನ್ನು ತಿಳಿಸಲಾಗಿದೆ.

ವ್ಯಾಕರಣ ಶಾಸ್ತ್ರವು ಗದ್ಯ ಪದ್ಯಗಳೆರಡಕ್ಕೂ ಸಂಬಂಧಿಸಿದ ಶಾಸ್ತ್ರವಾದರೆ, ಛಂದಸ್ಸು ಕೇವಲ ಪದ್ಯಗಳಿಗೆ ಮಾತ್ರ ಸಂಬಂಧಿಸಿದ ಶಾಸ್ತ್ರವಾಗಿದೆ.  ನಾವು ಓದುವ ಪದ್ಯಗಳು ನಾನಾ ತರವಾಗಿವೆ.  ಕೆಲವು ನಾಲ್ಕು ಸಾಲಿನವು, ಕೆಲವು ಆರು ಸಾಲಿನವು, ಕೆಲವು ಮೂರು ಸಾಲಿನವು, ಕೆಲವು ಸಾಲುಗಳು ಉದ್ದ, ಕೆಲವು ಚಿಕ್ಕವು.  ಹೀಗೆ ನಾನಾ ಬಗೆಯು ಪದ್ಯಗಳಲ್ಲಿ ಕಂಡುಬರುತ್ತವೆ.  ಅವುಗಳೆಲ್ಲವುಗಳ ಸ್ವರೂಪವನ್ನು ತಿಳಿಯದಿದ್ದರೂ ಮುಖ್ಯವಾದ ಕೆಲವು ಪದ್ಯಗಳ ರೀತಿನೀತಿ ಗಳನ್ನು ತಿಳಿಯಬೇಕು.

ಪದ್ಯಗಳು ವಿಸ್ತಾರವಾದ ವಿಷಯಗಳನ್ನು ಸಂಕ್ಷೇಪವಾಗಿ ತಿಳಿಸಲೂ, ರಸವತ್ತಾದ ಅಂತಗಳನ್ನು ಸ್ವಾರಸ್ಯ ಮಾತುಗಳಿಂದ ವರ್ಣಿಸಲೂ, ಮತ್ತು ಅವುಗಳನ್ನು ಸುಲಭವಾಗಿ ಜ್ಞಾಪಕದಲ್ಲಿಟ್ಟುಕೊಳ್ಳಲೂ ಅನುಕೂಲವಾದವು.  ಅಲ್ಲದೆ ರಾಗವಾಗಿ ಹಾಡಿ, ತಾವೂ ಆನಂದ ಪಡಬಹುದು.  ಇತರರನ್ನೂ ಆನಂದಗೊಳಿಸಬಹುದು.  ಇಂಥ ಮಹತ್ವದ ಕಾವ್ಯಭಾಗಗಳಾದ ಪದ್ಯಗಳ ರಚನಾಕ್ರಮದ ಬಗೆಗೆ ಲಕ್ಷಣವನ್ನು ತಿಳಿಸುವ ಗ್ರಂಥವೆಂದರೆ ಮುಖ್ಯವಾಗಿ ‘ಛಂದೋಂಬುಧಿ‘ ಎಂಬುದು.  ಇದು ಹಳಗನ್ನಡ ಪದ್ಯಗಳಲ್ಲಿ ರಚಿಸಲ್ಪಟ್ಟಿದೆ.  ಇದೇ ಕನ್ನಡ ಛಂದಸ್ಸನ್ನು ವಿಶದವಾಗಿ ತಿಳಿಸುವ ಗ್ರಂಥವಾಗಿದೆ.