ಕೈತೋಟ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಇಡೀ ಕ್ಷೇತ್ರದ ಸಮಗ್ರ ಮಾಹಿತಿಯನ್ನು ಒದಗಿಸುವ ನೋಟ್ ಪುಸ್ತಕವೊಂದನ್ನು ನಿರ್ವಹಿಸಬೇಕು. ಅದರಲ್ಲಿ ಕೈತೊಟದ ಎಲ್ಲ ಆಗುಹೋಗುಗಳನ್ನು ಬರೆದಿಡಲು ಸಾಧ್ಯವಾಗುವುದು. ಇದೊಂದು ದಾಕಲು ಪುಸ್ತಕವಾಗಿರಬೇಕು. ಈ ರೀತಿಯಾಗಿ ಪುಸ್ತಕದಲ್ಲಿ ವಿಷಯಗಳನ್ನು ಬರೆದಿಡುವುದು ಹೆಚ್ಚುವರಿ ಕೆಲಸ ಎನಿಸಬಹುದು ಆದರೆ ಪಡುವ ಶ್ರಮಕ್ಕಿಂತ ಲಾಭವೇ ಹೆಚ್ಚು.

ತೋಟದಲ್ಲಿ ನೆಟ್ಟ ಪ್ರತಿಯೊಂದು ಗಿಡ ಮತ್ತು ತಳಿಯ ಹೆಸರು ಹಾಗೂ ಬಿತ್ತಿದ ಬೀಜಗಳ ಕಂಪನಿ ಹೆಸರನ್ನು ಬರೆದಿಡಬೇಕು. ಬಿತ್ತಿದ ಬೀಜಗಳ ಕಂಪನಿ ಹೆಸರನ್ನು ಬರೆದಿಡಬೇಕು. ಬಿತ್ತಿದ ಅಥವಾ ಸಸಿಗಳನ್ನು ನೆಟ್ಟ ದಿನಾಂಕ, ಕೀಟ-ರೋಗಗಳ ಅಧ್ಯಯನ, ಇಳುವರಿ ಇವೆಲ್ಲವುಗಳನ್ನು ತಿಳಿದುಕೊಳ್ಳುವುದರಿಂದ ಸಮಸ್ಯೆ ತಿಳಿಯಲು ಸಾಧ್ಯವಾಗುವುದು. ನಂತರ ಪರಿಹಾರ ಸೂಚಿಸಲೂ ಸುಲಭವಾಗುವುದು.

ಪ್ರತಿಯೊಂದು ಬೆಳೆಯನ್ನೂ ಪುಸ್ತಕದಲ್ಲಿ ನಮೂದಿಸಿ ಬಿತ್ತನೆಯಿಂದ ಕೊಯ್ಲು ಹಂತದವರೆಗೆ ಎಲ್ಲ ಬೇಸಾಯ ಕ್ರಮಗಳನ್ನು ಅಂದರೆ ಬಿತ್ತನೆ, ಸಸಿ ಮಡಿ ತಯಾರಿಕೆ, ಮಣ್ಣಿನ ಗುಣಧರ್ಮಗಳು, ಕಾಲ, ತಳಿ, ಸಾಮಗ್ರಿ, ನಾಟಿ ಪದ್ಧತಿ, ನೀರು ಮತ್ತು ಗೊಬ್ಬರಗಳ ಪೂರೈಕೆ, ಸಸ್ಯ ಸಂರಕ್ಷಣೆ ಇತ್ಯಾದಿಗಳನ್ನು ದಾಖಲಿಸುವುದರಿಂದ, ತೊಂದರೆಗೀಡಾದಾಗ ಪರೀಕ್ಷಿಸಿ ಪರಿಹಾರ ಸೂಚಿಸಲು ಪರಿಣಿತರಿಗೆ/ತಜ್ಞರಿಗೆ ಸಾಧ್ಯವಾಗುವುದು.

ಕೈತೋಟ ಕ್ಷೇತ್ರ ದೊಡ್ಡದಾಗಿದ್ದರೆ ಉತ್ಪನ್ನಗಳ ಮಾರಾಟ ವಹಿವಾಟು ನಡೆಯುವುದು. ಇಂತಹ ಸ್ಥಿತಿಯಲ್ಲಿ ಈ ಪುಸ್ತಕವನ್ನು ನಿರ್ವಹಣೆ ಮಾಡುವುದರಿಂದ ನಮ್ಮ ಕೈತೋಟದ ಹಣಕಾಸಿನ ಸ್ಥಿತಿಗತಿಗಳನ್ನು ಬೇಕೆಂದಾಗ ತಕ್ಷಣ ತಿಳಿದುಕೊಳ್ಳಬಹುದು. ಲಾಭದಲ್ಲಿ ಅಥವಾ ನಷ್ಟದಲ್ಲಿದ್ದೇವೆ ಎಂಬುದನ್ನಾದರೂ ಈ ಪುಸ್ತಕ ತಿಳಿಸುವುದು.

ಲಾಭವಾಗಿದ್ದರೆ ಇನ್ನೂ ಹೆಚ್ಚು ಲಾಭವಾಗುವಂತಹ ತೋಟವನ್ನು ಬಲಪಡಿಸಲು ಯಾವ ಕ್ರಮ ಕೈಗೊಳ್ಳಲು ಸಾಧ್ಯ? ಎಂಬುದನ್ನು ಯೋಜಿಸಬಹುದು. ಒಂದು ವೇಳೆ ನಷ್ಟವಾಗಿದ್ದರೆ ಯಾವ ಹಂತದಲ್ಲಿ ತಪ್ಪಿದ್ದೇವೆ? ಎಂಬುದನ್ನು ಪರಿಶೀಲಿಸಿ ಅದನ್ನು ಸುಧಾರಿಸಬಹುದು.

ಕೈತೋಟಕ್ಕೆ ಖರೀದಿಸಿದ ವಸ್ತುಗಳಿಗೆ ಹೂಡಿದ ಬಂಡವಾಳ ಮತ್ತು ಉತ್ಪಾದನೆಯ ಫಸಲಿನ ಮಾರಾಟದಿಂದ ಬಂದ ಹಣ ಇತ್ಯಾದಿಗಳನ್ನು ಪುಸ್ತಕದಲ್ಲಿ ಪ್ರತ್ಯೇಕವಾಗಿ ದಾಖಲಿಸಬೇಕು. ಉತ್ಪನ್ನಗಳನ್ನು ಇಡಿಯಾಗಿ ಅಥವಾ ಸಂಸ್ಕರಿಸಿ ಮಾರಾಟ ಮಾಡುವುದರ ವ್ಯತ್ಯಾಸ ಕೂಡಾ ತಿಳಿಯುವುದು. ಆಯಾ ತಿಂಗಳ ಕೊನೆಯಲ್ಲಿ ಖರ್ಚು ಮತ್ತು ಆದಾಯದ ಪಟ್ಟಿ ಸಿದ್ಧವಾಗಿರಬೇಕು. ಸಾಮಾನ್ಯವಾಗಿ ತೋಟಗಾರಿಕೆ ಬೆಳೆಗಳಲ್ಲಿ ಅದರಲ್ಲೂ ವಿಶೇಷವಾಗಿ ಹಣ್ಣಿನ ಬೇಸಾಯ ಮತ್ತು ಸಂಬಾರ ಬೆಳೆಗಳಲ್ಲಿ ಪ್ರಾರಂಭದ ವರ್ಷಗಳಲ್ಲಿ ಆದಾಯ ಕಡಿಮೆ. ಫಲ ಬಿಡಲು ಪ್ರಾರಂಭಿಸಿದಾಗ ಖರ್ಚಿನ ಪರದೆ ಸರಿಯುತ್ತಾ ಹೋಗಿ ಆದಾಯದ ಮುಖ ಕಾಣುತ್ತದೆ. ಅಲ್ಪಾವಧಿ ಬೆಳೆಗಳು ಮತ್ತು ಸೊಪ್ಪು ತರಕಾರಿಗಳನ್ನು ಉಳಿದ ಬೆಳೆಗಳ ಜೊತೆ ಮಿಶ್ರ ಬೆಳೆಯಾಗಿ ಬೆಳೆಯುವುದರಿಂದ ಪ್ರಮುಖ ಬೆಳೆಗಳು ಅಥವಾ ದೀರ್ಘಾವಧಿ ಬೆಳೆಗಳು ಫಲ ನೀಡುವವರೆಗೆ ಖರ್ಚನ್ನು ಸರಿದೂಗಿಸಿಕೊಂಡು ಹೋಗಬಹುದು ಮತ್ತು ಮನೆಯ ಸ್ವಂತಕ್ಕೆ ಉಪಯೋಗಿಸಿದ ಹಣ್ಣು-ತರಕಾರಿಗಳ ಖರ್ಚನ್ನು ಆ ಪುಸ್ತಕದಲ್ಲಿಯೇ ಒಂದೆಡೆ ಬರೆದಿಟ್ಟಿರಬೇಕು. ಖರ್ಚು-ಆದಾಯ ಪಟ್ಟಿ ಸಿದ್ಧಪಡಿಸುವಾಗ ಇದು ಅನುಕೂಲವಾಗುವುದು.

ಪ್ರತಿ ವರ್ಷ ಒಂದು ಪುಸ್ತಕವನ್ನು ಇದಕ್ಕಾಗಿಯೇ ಉಪಯೋಗಿಸುವುದು ಒಳ್ಳೆಯದು. ವರ್ಷದ ಕೊನೆಯಲ್ಲಿ ಅಥವಾ ನಾವೇ ನಿರ್ದಿಷ್ಟ ಪಡಿಸಿಕೊಂಡ ಯಾವುದೇ ಒಂದು ವೇಳೆಯಲ್ಲಿ ದಾಖಲಿಸಿದ ಎಲ್ಲ ವಿಷಯಗಳನ್ನೂ ಗಮನಹರಿಸಿ ಕೈತೋಟದಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಬಹುದು.

ಬೆಳೆಗಳ ಬದಲಾವಣೆ, ಸಾವಯವ ಮತ್ತು ರಸಗೊಬ್ಬರಗಳನ್ನು ಉಪಯೋಗಿಸುವ ಪ್ರಮಾಣ, ಹೊಸ ವಿಧಾನಗಳ ಅಳವಡಿಕೆ ಇತ್ಯಾದಿಗಳನ್ನು ಮುಂದಿನ ವರ್ಷಕ್ಕೆ ಅಥವಾ ಸರಿಯಾದ ಅವಧಿಗೆ ಯೋಜಿಸಿಕೊಳ್ಳಬಹುದು.

ಇದಲ್ಲದೆ ತೋಟಗಾರಿಕೆಗೆ ಸಂಬಂಧಿಸಿದ ಪುಸ್ತಕಗಳನ್ನು ಖರೀದಿಸಿ ಇಟ್ಟುಕೊಂಡಿರುವುದು ಸೂಕ್ತ. ಕನ್ನಡ ಮಾಧ್ಯಮದಲ್ಲಿಯೂ ಇಂದು ಎಲ್ಲಾ ಬಗೆಯ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಇವು ತೋಟಗಾರರಿಗೆ ಮಾರ್ಗದರ್ಶಿಯಾಗಬಲ್ಲವಲ್ಲದೆ ತೋಟಗಾರಿಕೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಮತ್ತು ಕೃಷಿ ವಿಸ್ತರಣಾ ಸಿಬ್ಬಂದಿ ವರ್ಗದವರ ನಿಕಟ ಸಂಪರ್ಕ ಅಭಿವೃದ್ಧಿಗೆ ಪೂರಕವಾಗಬಲ್ಲವು. ಇವರು ಕಾಲಕಾಲಕ್ಕೆ ಅಗತ್ಯ ಕ್ರಮಗಳನ್ನು ಸೂಚಿಸುವರು.

ಮಾದರಿಯಾಗಿ ನಿರ್ವಹಣೆ ಮಾಡಿದ ಕೈತೋಟಗಳಿಗೆ ಭೇಟಿ ಕೊಡುವುದು ಮತ್ತೊಂದು ಉತ್ತಮ ಹವ್ಯಾಸ. ಅಲ್ಲಿಯ ಹಸುರಿನ ಸೊಬಗನ್ನು ಸವಿಯುವುವಲ್ಲದೆ ನಮ್ಮ ತೋಟಕ್ಕೆ ಬೇಕಾಗಬಹುದಾದ ಹಲವಾರು ವಿಷಯಗಳು ಅಲ್ಲಿ ಸಿಗುತ್ತವೆ.

* * *