(೧೩೧) ಶಬ್ದ ಜೋಡಣೆಯ ಚಮತ್ಕಾರದಿಂದ ಕಾವ್ಯದ ಸೊಬಗು ಹೆಚ್ಚಿದರೆ ಶಬ್ದಾಲಂಕಾರ ವೆನ್ನುವರೆಂದು ಪೂರ್ವದಲ್ಲಿ ಉದಾಹರಣೆ ಸಮೇತ ವಿವರಿಸಲಾಗಿದೆ. ಶಬ್ದಾಲಂಕಾರಗಳು ಎರಡು ವಿಧ.

() ಅನುಪ್ರಾಸ

 

() ವೃತ್ತ್ಯನುಪ್ರಾಸ

[1]

ಈ ಗಾದೆಗಳನ್ನು ನೋಡಿರಿ

() ತುಪ್ಪದ ಮಾತಿಗೆ ಒಪ್ಪಿಕೊಂಡು ತಿಪ್ಪೆಪಾಲಾದ

() ತುಂಟನಾದವ ಮಂಟಪದಲ್ಲಿ ಕೂತರೂ ತಂಟೆ ಬಿಡಲಾರ

ಇತ್ಯಾದಿ ಮಾತುಗಳಲ್ಲಿ ಒಂದೇ ಅಕ್ಷರ ಎರಡು ಮೂರು ಸಲ ಬಂದು ವಾಕ್ಯಗಳ ಸೊಬಗನ್ನು ಹೆಚ್ಚಿಸಿದೆ.  ಹಾಗೆಯೇ ಈ ಕೆಳಗಿನ ಒಂದು ಪದ್ಯವನ್ನು ನೋಡಿ.

ಮುರಾರಿ ಶಂಬರಾರಿ ವಾಗ್ವರಾರಿ ನಿರ್ಜರಾರ್ಜಿತೇ

ಧರಾಧರೇಶ್ವರಾತ್ಮಜೇಹರ ಪ್ರಿಯೇ ಜಯಾಂಬಿಕೆ ||”

(-ವೃಷಭೇಂದ್ರ ವಿಜಯ)

ಈ ಪದ್ಯದಲ್ಲಿ ರಕಾರವು ಹಲವಾರು ಸಲ ಪುನರುಕ್ತವಾಗಿ ಪದ್ಯದ ಸೌಂದರ‍್ಯವು ಶಬ್ದಗಳಿಂದ ಹೆಚ್ಚಿದೆ.  ಇದಕ್ಕೆ ಸೂತ್ರವನ್ನು ಹೀಗೆ ಹೇಳಬಹುದು.

 

(೧೩೨) ವೃತ್ತ್ಯನುಪ್ರಾಸ:- ಒಂದಾಗಲಿ, ಎರಡಾಗಲಿ ವ್ಯಂಜನಗಳು ಪುನಃ ಪುನಃ ಹೇಳಲ್ಪಟ್ಟಿದ್ದರೆ ಅದು ವೃತ್ತ್ಯನುಪ್ರಾಸವೆನಿಸುವುದು.

ಉದಾಹರಣೆಗೆ:

ಎಳೆಗಿಳಿಗಳ ಬಳಗಂ ಗಳ
ಗಳನಿಳಿ ತಂದೆಳಸಿ ಬಳಸಿ ಸುಳಿದೊಳವುಗುತುಂ
ನಳನಳಿಸಿ ಬೆಳೆದು ಕಳಿಯದ |
ಕಳವೆಯಕಣಿಶಂಗಳಂ ಕರಂ ಖಂಡಿಸುಗುಂ ||
(-ರಾಜಶೇಖರ ವಿಳಾಸ)

ಅರ್ಥ:- ಎಳೆಯ ಗಿಳಿಗಳ ಸಮೂಹವು ಗಳಗಳನೆ ಇಳಿದು ಬಂದು ಬತ್ತದ ಹಾಲುಗಾಳನ್ನು ಬಯಸಿ ಸುತ್ತುತ್ತಾ, ಸುಳಿಯುತ್ತಾ ನಳನಳಿಸಿ ಬೆಳೆದುನಿಂತ ಬತ್ತದ ಎಳೆಗಾಳುಗಳ ಗೊನೆಗಳನ್ನು ಸೀಳುತ್ತಿದ್ದವು.

ಇಲ್ಲಿ ಳ ಕಾರವು ಅನೇಕ ಸಲ ಪುನರುಕ್ತಿಗೊಂಡು ಪದ್ಯದ ಸೌಂದರ‍್ಯವು ಹೆಚ್ಚಿದೆ.  ಆದ್ದರಿಂದ ಇದು ವೃತ್ತ್ಯನುಪ್ರಾಸ ಅಲಂಕಾರವೆನಿಸಿದೆ.

 

() ಛೇಕಾನುಪ್ರಾಸ[2]

(i)ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ (-ಬಸವಣ್ಣ)

(i) ಹಾಡಿ ಹಾಡಿ ರಾಗ ಬಂತು
ಉಗುಳಿ ಉಗುಳಿ ರೋಗ ಬಂತು (-ಗಾದೆ)

ಮೇಲಿನ ಒಂದು ವಚನ ಮತ್ತು ಒಂದು ಗಾದೆ ಇವುಗಳಲ್ಲಿ ಬಂದಿರುವ ಎರಡೆರಡು ವ್ಯಂಜನಗಳಿಂದ ಕೂಡಿದ ಶಬ್ದಗಳ ಆವೃತ್ತಿಯು ಆ ಮಾತುಗಳ ಸೌಂದರ‍್ಯವನ್ನು ಹೆಚ್ಚಿಸಿದೆ.  ಮಾಡಿ ಮಾಡಿ ಎಂಬಲ್ಲಿ ಮಕಾರ ಡಕಾರಗಳು ಸೇರಿದ ಶಬ್ದ ಎರಡು ಸಲ ಬಂದಿದೆ.  ಅನಂತರ ನೀಡಿ ನೀಡಿ ಎಂಬ ಶಬ್ದ ಎರಡು ಸಲ ಬಂದಿದೆ.  ಅದರಂತೆ ಗಾದೆಯಲ್ಲೂ ಎರಡೆರಡು ವ್ಯಂಜನಗಳನ್ನೊಳಗೊಂಡ ಶಬ್ದ ಜೊತೆ ಜೊತೆಯಾಗಿ ಬಂದಿವೆ.  ಹೀಗೆ ಬಂದರೆ ಅದು ‘ಛೇಕಾನುಪ್ರಾಸ’ವೆನಿಸುವುದು.

ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

 

(೧೩೩) ಛೇಕಾನುಪ್ರಾಸ:- ಎರಡೆರಡು ವ್ಯಂಜನಗಳಿಂದ ಕೂಡಿದ ಶಬ್ದವು ಪುನಃ ಪುನಃ (ಆವೃತ್ತಿಯಾಗಿ) ಪದ್ಯದಲ್ಲಿ ಬಂದಿದ್ದರೆ ಅದು ಛೇಕಾನುಪ್ರಾಸವೆನಿಸುವುದು.

ಉದಾಹರಣೆಗೆ:-

ಸುತ್ತುಲುಂ ಪರಿವ ಪ್ರಚಾರದಿಂ ಪೂರದಿಂ|
ದೊತ್ತಿರಿಸಿಬರ್ಪ ಬಲ್ದೆರೆಗಳಿಂ ನೊರೆಗಳಿಂ|
ದೆತ್ತೆತ್ತಲೊಗೆವ ಸವ್ವಳೆಗಳಿಂ ಸುಳಿಗಳಿಂ ನಾನಾಪ್ರಕಾರದಿಂದೆ||
ಒತ್ತಿಭೋರ್ಗರೆವ ರವದುರ್ಬಿನಿಂ ಪರ್ಬಿನಿಂ|
ಹತ್ತೊಂದುಗೂಡಿ ವಿಸ್ತೀರ್ಣದಿಂ ಪೂರ್ಣದಿಂ|
ತುತ್ತಿದುದು ಸಕಲಲೋಕಂಗಳಂ ತಿಂಗಳಂ ಪೋತ್ತವಂಬೆರಗಾಗಲು||
(-ಚನ್ನಬಸವ ಪುರಾಣ)

ಇದು ಜಲಪ್ರಳಯವಾದ ಒಂದು ಸಂದರ್ಭದ ವರ್ಣನೆ.  ಪಾರ್ವತಿಯು ಈಶ್ವರನ ಕಣ್ಣನ್ನು ಹಿಂದಿನಿಂದ ಬಂದು ಮುಚ್ಚಿದಳು.  ಈಶ್ವರನ ಆನಂದಾಶ್ರುಗಳು ಪಾರ್ವತಿಯ ಬೊಗಸೆಯಲ್ಲಿ ತುಂಬಿದವು.  ಆ ಆನಂದಾಶ್ರುಗಳು ಪಾರ್ವತಿಯ ಹತ್ತು ಬೆರಳುಗಳಿಂದ ಹತ್ತು ನದಿಗಳಾಗಿ ಹರಿದು ಜಗತ್ತನ್ನೆಲ್ಲ ಆ ನೀರು ಆವರಿಸಿ ಜಲ ಪ್ರಳಯವಾಯಿತೆಂದು ಹೇಳುವ ಒಂದು ಭವ್ಯವರ್ಣನೆಯಿದು.  ಇಲ್ಲಿ ಎರಡೆರಡು ವ್ಯಂಜನಗಳ ಆವೃತ್ತಿಯು ಹಲವಾರು ಕಡೆಗಳಲ್ಲಿ ಬಂದು ಪದ್ಯದ ಸೌಂದರ‍್ಯವನ್ನು ಹೆಚ್ಚಿಸಿವೆ.  ಆದ್ದರಿಂದ ಇದು ಛೇಕಾನುಪ್ರಾಸ.

 

() ಯಮಕಾಲಂಕಾರ[3]

(೧೩೪) ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದವೋ, ಪದಭಾಗವೋ ಒಂದು ಪದ್ಯದ ಆದಿ, ಮಧ್ಯ, ಅಂತ್ಯ ಸ್ಥಾನಗಳಲ್ಲಿ ಎಲ್ಲಿಯಾದರೂ ನಿಯತವಾಗಿ ಬಂದಿದ್ದರೆ ಅದು ಯಮಕಾಲಂಕಾರವೆನಿಸುವುದು.

ಉದಾ:-

ಬರಹೇಳ್ ನಿಕುಂಭನಂ ಶುಂಭನಂ ಜಂಭನಂ|
ಬರಹೇಳ್ ಸಶಬಲನಂ, ಪ್ರಬಲನಂ, ಸುಬಲನಂ|
ಬರಹೇಳ್ ಪ್ರವೀರನಂ, ಘೋರನಂ, ಶೂರನಂ, ಬರಹೇಳ್ ಮಹಾನಾಭನಂ||
ಬರಹೇಳ್ ನಿಶುಂಭನಂ ಕುಂಭನಂ ಲಂಬನಂ|
ಬರಹೇಳ್ ಸುವಿಪುಳನಂ ಚಪಳನಂ ಕಪಿಳನಂ|
ಬರಹೇಳ್ ಮುಹುಂಡನಂ ಮುಂಡನಂ ಹುಂಡಮುಖ್ಯರನೆನುತ್ತುರಿದೆದ್ದನು||
(-ಚೆನ್ನಬಸವಪುರಾಣ)

ಅಂಧಕಾಸುರನು ಶಿವನ ಮೇಲೆ ಯದ್ಧಕ್ಕೆ ಹೊರಟಾಗಿನ ಸಂದರ್ಭದ ಒಂದು ಪದ್ಯವಿದು.  ಇಲ್ಲಿ ಆರೂ ಸಾಲುಗಳ ಆದಿಯಲ್ಲಿ ಬರಹೇಳ್ ಎಂಬ ನಾಲ್ಕು ವ್ಯಂಜನಗಳ ಶಬ್ದವೊಂದು ಕ್ರಮವಾಗಿ ಬರುವುದು.  ಆದ್ದರಿಂದ ಇದು ಯಮಕಾಲಂಕಾರ ವಾಯಿತು.

(ಯಮಕಾಲಂಕಾರಗಳಲ್ಲಿ ಹೀಗೆ ಒಂದೇ ಶಬ್ದ ಒಂದು ಗೊತ್ತಾದ ಕಡೆ ಬಂದಿದ್ದರೂ ಒಂದೊಂದು ಕಡೆಯಲ್ಲಿ ಒಂದೊಂದರ್ಥವಾಗುವಂತಹ ರೀತಿಯಲ್ಲೂ ಇರುವುದುಂಟು.  ಪ್ರಕೃತ ಅಂಥ ಪದ್ಯದ ವಿವರಣೆ ಅನವಶ್ಯಕ.)


[1] ಏಕದ್ವಿಪ್ರಭೃತೀನಾಂತು ವ್ಯಂಜನಾನಾಂ ಯದಾ ಭವೇತ್ ಪುನರುಕ್ತಿರಸೌ ನಾಮ ವೃತ್ಯನುಪ್ರಾಸ ಇಷ್ಯತೇ.

ಅರ್ಥ:- ಒಂದಕ್ಕರಮಾದೊಡಂ ಎರಡಕ್ಕರಮಾದೊಡಂ ಪಲವುಂ ವೇಳೆಯೊಳ್ ಬಳಸಿ ಬರುತ್ತಿರೆಯದು ವೃತ್ತ್ಯನುಪ್ರಾಸವೆನಿಪ್ಪುದು.        (-ಅಪ್ರತಿಮವೀರ ಚರಿತೆ)

[2] ಭವೇದವ್ಯವಧಾನೇನ ದ್ವಯೋರ್ವ್ಯಂಜನ ಯುಗ್ಮಯೋಃ |

ಆವೃತ್ತಿರ‍್ಯತ್ರ ಸ ಬುಧೈಃ ಛೇಕಾನುಪ್ರಾಸ ಇಷ್ಯತೇ ||

ಅರ್ಥ:- ಒಂದು ಪದ್ಯದೊಳ್ ಎರಡೆರಡುಂ ಅಕ್ಕರಂ ಜತೆಜತೆಯಾಗಿ ಪಲವುಂ ಬಳಿಯೊಳ್ ಬರೆ, ಅದು ಛೇಕಾನುಪ್ರಾಸವೆನಿಪುದು.      (-ಅಪ್ರತಿಮವೀರ ಚರಿತೆ)

[3] ಯಮಕಂ ಪೌನರುಕ್ತೇತು ಸ್ವರವ್ಯಂಜನ ಯುಗ್ಮಯೋಃ

ಅರ್ಥ:- ಸ್ವರಭೇದಮಿಲ್ಲದೆ, ಪಲವುಮಕ್ಕರಂಗಳ್, ಎರಡುಂ ಪಾದದೊಳಾದೊಡಂ, ಮಿತಿಯಾದ ತಾಣದೊಳ್ ಬಳಸಿಬರೆ ಅದು ಯಮಕಮೆನಿಪುದು.   (-ಅಪ್ರತಿಮವೀರ ಚರಿತೆ)

(ಈ ಅಲಂಕಾರವನ್ನು ಹೆಚ್ಚಿನ ತಿಳಿವಳಿಕೆಗಾಗಿ ಮಾತ್ರ ಕೊಟ್ಟಿದೆ.  ಹೈಸ್ಕೂಲುಗಳಲ್ಲಿ ಓದುವ ಮಕ್ಕಳಿಗೆ ಛೇಕಾನುಪ್ರಾಸ ತಿಳಿದರೆ ಸಾಕು.)