() ಮನುಷ್ಯನು ತಾನು ಚೆನ್ನಾಗಿ ಕಾಣಲು ಉಡಿಗೆ ತೊಡಿಗೆಗಳನ್ನು ಧರಿಸುವಂತೆ, ಕಾವ್ಯವು ಆಕರ್ಷಕವಾಗುವಂತೆ ಅರ್ಥವೈಚಿತ್ರ್ಯದಿಂದ ಕೂಡಿದ, ಶಬ್ದವೈಚಿತ್ರ್ಯದಿಂದ ಕೂಡಿದ ಮಾತುಗಳನ್ನು ಕಾವ್ಯಗಳಲ್ಲಿ ಪ್ರಯೋಗಿಸುತ್ತಾರೆ. ಇಂಥ ಮಾತುಗಳೇ ಅಲಂಕಾರಗಳು.

() ಅರ್ಥವೈಚಿತ್ರ್ಯದಿಂದ ಕಾವ್ಯದ ಸೊಬಗು ಹೆಚ್ಚಿದರೆ ಅದು ಅರ್ಥಾಲಂಕಾರ. ಶಬ್ದ ವೈಚಿತ್ರ್ಯದಿಂದ ಕಾವ್ಯದ ಸೊಬಗು ಹೆಚ್ಚಿದರೆ ಶಬ್ದಾಲಂಕಾರ.

() ಕನ್ನಡದಲ್ಲಿ ಅಲಂಕಾರ ಗ್ರಂಥ ಬರೆದ ಲಾಕ್ಷಣಿಕರು ಮುಖ್ಯವಾಗಿ ನೃಪತುಂಗ, ನಾಗವರ್ಮ, ತಿರುಮಲಾರ್ಯ, ಜಾಯಪ್ಪದೇಸಾಯಿ ಮುಂತಾದವರು. ಇವರು ಕ್ರಮವಾಗಿ ಕವಿರಾಜಮಾರ್ಗ, ಕಾವ್ಯಾವಲೋಕನ, ಅಪ್ರತಿಮವೀರಚರಿತೆ, ಕನ್ನಡಕುವಲಯಾನಂದಇತ್ಯಾದಿ ಗ್ರಂಥ ಬರೆದಿದ್ದಾರೆ.

 

ಅಭ್ಯಾಸ ಪ್ರಶ್ನೆಗಳು

(೧) ದೃಷ್ಟಾಂತಾಲಂಕಾರದ ಮುಖ್ಯ ಲಕ್ಷಣವೇನು? ಉಪಮಾಲಂಕಾರಕ್ಕೂ ಇದಕ್ಕೂ ಭೇದವೇನು? ವಿವರಿಸಿರಿ.

(೨) ಉತ್ಪ್ರೇಕ್ಷಾಲಂಕಾರ ಎಂದರೇನು? ದೃಷ್ಟಾಂತ ಪೂರ್ವಕ ವಿವರಿಸಿರಿ.

(೩) ಜಾಲಿ ಮರದ ನೆಳಲು ನೆಳಲಲ್ಲ; ಮನೆಗೆ ಮಾತು ತಂದವಳು ಮಗಳಲ್ಲ – ಈ ಗಾದೆಯಲ್ಲಿ ಅಡಗಿರುವ ಅಲಂಕಾರವೇನು?

(೪) ಉಪಮಾಲಂಕಾರಕ್ಕೆ ಸೂತ್ರ ಬರೆದು ಉದಾಹರಣೆಯೊಡನೆ ವಿವರಿಸಿರಿ.

(೫) ಈ ಹುಡುಗಿ ಸಾಕ್ಷಾತ್ ಲಕ್ಷ್ಮಿ ಈ ಮಾತಿನಲ್ಲಿ ಯಾವ ಅಲಂಕಾರವಡಗಿದೆ?

(೬) ತಿಳಿಗೊಳನಂ ಬಳಸಿ ಸುಳಿವೆಳಗಾಳಿ-ಈ ವಾಕ್ಯವನ್ನು ಯಾವ ಶಬ್ದಾಲಂಕಾರವೆನ್ನುವಿರಿ? ಏಕೆ?

(೭) ಶ್ಲೇಷಾಲಂಕಾರವೆಂದರೇನು? ಸೂತ್ರೋದಾಹರಣ ಪೂರ್ವಕ ವಿವರಿಸಿರಿ.

(೮) ಸಮುದ್ರವು ತನ್ನ ನೀರನ್ನು ಮೋಡಗಳಿಗೆ ಪ್ರೀತಿಯಿಂದ ಅತ್ತ ಕೊಟ್ಟರೆ-ಇತ್ತ ನದಿಯ ನಿರ್ಮಲ ಜಲವು ಅಧಿಕವಾಗಿ ಬಂದು ಸೇರುತ್ತಿತ್ತು.  ಕೊಟ್ಟವನಿಗೆ ಬಡತನ ಬರುವುದೇ? ಈ ವಾಕ್ಯವೃಂದಗಳಲ್ಲಿ ಯಾವ ಅಲಂಕಾರವಡಗಿದೆ?

 

ಈ ಕೆಳಗಿನ ವಾಕ್ಯಗಳಲ್ಲಿ ಬಿಟ್ಟಿರುವ ಸ್ಥಳದಲ್ಲಿ ಆವರಣಚಿಹ್ನೆಯಲ್ಲಿನ ಒಂದು ಸರಿಯುತ್ತರವನ್ನು ಹುಡುಕಿ ಬರೆಯಿರಿ.

(೧) ವರ್ಣ್ಯ ಮತ್ತು ಅವರ್ಣ್ಯಗಳಿಗೆ ಬಿಂಬ ಪ್ರತಿಬಿಂಬ ಭಾವವು ವ್ಯಕ್ತವಾಗುತ್ತಿದ್ದರೆ ……….. ಅಲಂಕಾರವೆನಿಸುವುದು.  (ಉತ್ಪ್ರೇಕ್ಷೆ, ದೃಷ್ಟಾಂತ, ಉಪಮೆ)

(೨) ಒಂದು ಸಾಮಾನ್ಯ ವಾಕ್ಯದಿಂದ ವಿಶೇಷವಾಕ್ಯವೂ, ವಿಶೇಷ ವಾಕ್ಯದಿಂದ ಸಾಮಾನ್ಯವಾಕ್ಯವೂ ಸಮರ್ಥಿತವಾಗಿದ್ದರೆ ……………………. ಅಲಂಕಾರವಾಗುವುದು. (ಉಪಮಾ, ಉತ್ಪ್ರೇಕ್ಷೆ, ಅರ್ಥಾಂತರನ್ಯಾಸ)

(೩) ಉಪಮೇಯ ಉಪಮಾನವಸ್ತುಗಳು ಒಂದರಂತೆ ಇನ್ನೊಂದಿದೆ ಎಂದು ಹೇಳದೆ, ಒಂದು ಮತ್ತೊಂದೇ ಆಗಿದೆ ಎಂದು ಹೇಳುವುದು ……………. ಅಲಂಕಾರವೆನಿಸುವುದು. (ದೃಷ್ಟಾಂತ, ರೂಪಕ, ಉಪಮಾ)

(೪) ಒಂದು ವಸ್ತುವನ್ನೋ ಸನ್ನಿವೇಶವನ್ನೋ ಮತ್ತೊಂದನ್ನಾಗಿ ಸಂಭಾವನೆ ಮಾಡುವುದು (ಕಲ್ಪಿಸಿ ಹೇಳುವುದು)  ……………. ಅಲಂಕಾರವೆನಿಸುವುದು. (ಉತ್ಪ್ರೇಕ್ಷೆ, ಛೇಕಾನುಪ್ರಾಸ, ದೃಷ್ಟಾಂತ)

ಕೆಳಗಣ ವಾಕ್ಯಗಳಲ್ಲಿ ತಪ್ಪುಗಳಿವೆ ಸರಿಪಡಿಸಿರಿ.

(೧) ಒಂದು ವ್ಯಂಜನವಾಗಲಿ ಎರಡು ವ್ಯಂಜನಗಳಾಗಲಿ ಒಂದು ಪದ್ಯದಲ್ಲಿ ಪುನಃ ಪುನಃ ಹೇಳಲ್ಪಟ್ಟಿದ್ದರೆ ಅದು ಛೇಕಾನುಪ್ರಾಸ.

(೨) ಎರಡು ವಾಕ್ಯಗಳಿಗೆ ಬಿಂಬ ಪ್ರತಿಬಿಂಬ ಭಾವವು ತೋರುತ್ತಿದ್ದರೆ ಉಪಮಾಲಂಕಾರ.

(೩) ಒಂದು ವಿಶೇಷವಾಕ್ಯವನ್ನು ಸಾಮಾನ್ಯವಾಕ್ಯದಿಂದ ಸಮರ್ಥನೆ ಮಾಡುವುದು ರೂಪಕಾಲಂಕಾರ.