ಮನುಷ್ಯನು ಚೆನ್ನಾಗಿ ಕಾಣುವ ಉದ್ದೇಶದಿಂದ ಅಥವಾ ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ಕಾರಣದಿಂದ ಬಟ್ಟೆ ಬರೆ, ವಸ್ತು, ಒಡವೆ-ಇತ್ಯಾದಿಗಳನ್ನು ಧರಿಸಿಕೊಳ್ಳುತ್ತಾನೆ.  ಇವನ ಈ ಅಲಂಕಾರದಿಂದ ಜನರೂ ಆಕರ್ಷಿತರಾಗುತ್ತಾರೆ.  ಇದರ ಹಾಗೆಯೆ ಮಾತನಾಡುವಾಗಲೂ, ಕೇಳುವವರಿಗೆ ಹರ್ಷವಾಗುವಂತೆ, ಕಿವಿಗೆ ಇಂಪಾಗುವಂತೆ ಚಮತ್ಕಾರವಾದ ರೀತಿಯಲ್ಲಿ ಮಾತನಾಡುವುದೂ ಉಂಟು.  ಉದಾಹರಣೆಗೆ ನಿಮ್ಮ ಹೆಸರೇನು?’ ಎಂದು ಕೇಳುವುದಕ್ಕೆ ಬದಲಾಗಿ ’ತಮ್ಮ ಹೆಸರು ಯಾವ ಅಕ್ಷರಗಳಿಂದ ಅಲಂಕೃತವಾಗಿದೆ?’ ಎಂದು ಕೇಳಿದಾಗ ಎರಡೂ ಮಾತಿನ ಅರ್ಥ ಒಂದೇ ಆದರೂ ಎರಡನೆಯ ಮಾತಿನಲ್ಲಿ ಚಮತ್ಕಾರದ ವಾಣಿ ಕಾಣುವುದು.  ಇದರ ಹಾಗೆ ’ಪೂರ್ವದಿಕ್ಕಿನಲ್ಲಿ ಸೂರ್ಯ ಹುಟ್ಟಿದನು’ ಎನ್ನುವ ಮಾತನ್ನು – ಪೂರ್ವದಿಕ್ಕಿನಲ್ಲಿ ಹುಟ್ಟಿದ ಸೂರ್ಯನು ಮುತ್ತೈದೆಯ ಹಣೆಯ ಕುಂಕುಮದಂತೆ ಕಾಣುತ್ತಿದ್ದನು.  ಹೀಗೆ ಹೇಳಿದಾಗ ಸೌಂದರ‍್ಯದ ಚಿತ್ರ, ಅರ್ಥ ಚಮತ್ಕಾರ, ಕೇಳುವವರ ಮನಸ್ಸಿನ ಮೇಲೆ ಪರಿಣಾಮಕಾರಿಯಾಗುವುದು. ಇವೆಲ್ಲ ಅಲಂಕಾರದ ಮಾತುಗಳು.

ಇದರ ಹಾಗೆಯೆ ಶಬ್ದಗಳ ಜೋಡಣೆಯನ್ನೂ ಚಮತ್ಕಾರವಾಗಿ ಮಾಡಿ ಕೇಳುವುದಕ್ಕೆ ಹಿತವಾಗಿರುವಂತೆ ಮಾತನಾಡುವುದೂ ಉಂಟು.  ಉದಾಹರಣೆಗೆ-

() ಬಲ್ಲವನೇ ಬಲ್ಲ ಬೆಲ್ಲದ ರುಚಿಯ.

() ಕತ್ತೆಗೆ ಗೊತ್ತೆ? ಹೊತ್ತ ಕತ್ತುರಿಯ ಪರಿಮಳ?

() ಎಳೆಗಿಳಿಗಳ ಬಳಗಗಳು ನಳನಳಸಿ ಬೆಳೆದ ಕಳವೆಯ ಎಳೆಯ ಕಾಳಿಗೆ ಆಶಿಸಿ ಬಂದವು.

ಮೇಲಿನ ವಾಕ್ಯಗಳಲ್ಲಿ ಒಂದೇ ವಾಕ್ಯದಲ್ಲಿ-ಬಲ್ಲ, ಬೆಲ್ಲ, ಬಲ್ಲ ಇತ್ಯಾದಿ ಶಬ್ದಗಳೂ, ಕತ್ತೆ, ಹೊತ್ತ, ಗೊತ್ತೆ, ಕತ್ತುರಿ ಇತ್ಯಾದಿ ಶಬ್ದಗಳೂ, ಎಳೆ, ಗಿಳಿ, ಗಳೆ, ಬಳಗ, ಗಳು, ನಳ, ನಳ ಕಳವೆ, ಎಳೆ, ಕಾಳು-ಇತ್ಯಾದಿ ಒಂದೇ ಶಬ್ದ ಅಥವಾ ಅಕ್ಷರಗಳು ಪದೇ ಪದೇ ಬಂದು ಶಬ್ದಗಳ ರಚನೆಯಲ್ಲಿ ಬುದ್ಧಿವಂತಿಕೆ ಕಂಡಂತಾಗಿ ಕೇಳುವವರಿಗೆ ಒಂದು ಬಗೆಯ ಹಿತವನ್ನುಂಟು ಮಾಡುವುವು.  ಇವೆಲ್ಲ ಶಬ್ದಗಳ ಅಲಂಕಾರಗಳು.

ಹೀಗೆ ಅರ್ಥದ ಚಮತ್ಕಾರದಿಂದಲೂ, ಶಬ್ದಗಳ ಚಮತ್ಕಾರದಿಂದಲೂ ಮಾತಿನ ಸೌಂದರ‍್ಯವನ್ನು ಹೆಚ್ಚು ಮಾಡಿ ಮಾತನಾಡುವುದೂ ಒಂದು ಕಲೆ; ಕವಿಗಳು ಕಾವ್ಯಗಳಲ್ಲಿ ಬರೆದ ಈ ರೀತಿಯ ಚಮತ್ಕಾರದ ನುಡಿಗಳು ಆ ಕಾವ್ಯಕ್ಕೆ ಒಂದು ಬಗೆಯ ಅಲಂಕಾರ.  ಅಂದರೆ, ಒಡವೆಗಳು ವಸ್ತ್ರಗಳು ಶರೀರಕ್ಕೆ ಹೇಗೆ ಭೂಷಣವೋ ಹಾಗೆಯೆ ಇಂತಹ ಮಾತುಗಳು ಕಾವ್ಯಕ್ಕೆ ಭೂಷಣ ಅಥವಾ ಅಲಂಕಾರಗಳು.

ಕಾವ್ಯಗಳಲ್ಲಿನ ಕವಿಗಳ ಇಂತಹ ಅಲಂಕಾರ ಮಾತುಗಳು ಅರ್ಥಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದ್ದರೆ, ಅವುಗಳಿಗೆ ‘ಅರ್ಥಾಲಂಕಾರ’ಗಳೆನ್ನುವರು.  ಶಬ್ದಗಳ ಚಮತ್ಕಾರ ದಿಂದ ಕಾವ್ಯದ ಸೊಬಗು ಹೆಚ್ಚುವಂತೆ ರಚಿಸಿದ್ದರೆ, ಅಂಥವುಗಳನ್ನು ‘ಶಬ್ದಾಲಂಕಾರ’ಗಳೆಂದು ಕರೆಯುವರು.

(i) ಅರ್ಥಾಲಂಕಾರಕ್ಕೆ ಕೆಳಗಿನ ಒಂದು ಉದಾಹರಣೆಯನ್ನು ನೋಡಿರಿ-

“ಬರು ಶಠಗನ ಭಕ್ತಿ ದಿಟವೆಂದು ನಂಬಬೇಡ; ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತ್ತು ಕಾಣಾ ರಾಮನಾಥ”[1] (-ದೇವರದಾಸಿಮಯ್ಯ)

ಇಲ್ಲಿ ವಚನಕಾರನ ಮಾತುಗಳಲ್ಲಿ ಡಾಂಭಿಕನಾದ ಮನುಷ್ಯನ ಭಕ್ತಿಯನ್ನು ನಂಬಲಾಗದು ಎಂದು ಹೇಳುವ ಮಾತಿಗೆ ಮಠದೊಳಗೆ ವಾಸಮಾಡುವ ಬೆಕ್ಕಿನ ಹೋಲಿಕೆಯಿದೆ.  ಮಠದಂಥ ಪವಿತ್ರ ಸ್ಥಳದಲ್ಲಿ ಬೆಕ್ಕು ಎಷ್ಟೇ ದಿನ ವಾಸವಾಗಿದ್ದರೂ, ಅದಕ್ಕೆ ಮಠದ ಸಭ್ಯತೆ ಗೊತ್ತಿದ್ದರೂ, ಮಠದಲ್ಲಿ ಅದಕ್ಕೆ ಉತ್ತಮ ತಿಂಡಿತಿನಸುಗಳು ಸಿಗುತ್ತಿದ್ದರೂ, ಇಲಿಯನ್ನು ಕಂಡಕೂಡಲೆ, ಅದರ ಮೂಲಹಿಂಸೆಯ ಗುಣವು ಪ್ರಕಟಗೊಂಡು ಇಲಿಯ ಮೇಲೆ ನೆಗೆದು ಅದನ್ನು ತಿನ್ನುವ ಕ್ರಿಯೆಯನ್ನು ಮಾಡಿಬಿಡುವುದು.  ಇದರ ಹಾಗೆಯೇ ಡಂಭಾಚಾರ ಭಕ್ತಿಯನ್ನು ನಟಿಸುವ ಮನುಷ್ಯ.  ಅವನು ಎಷ್ಟೇ ದಿನ ಡಂಭದಿಂದ ಕೂಡಿದ ಭಕ್ತಿಯನ್ನು ಆಚರಿಸಿದರೂ ಅದು ನಿಜವಾದ ಭಕ್ತಿ ಆಗುವುದಿಲ್ಲ.  ನಿಜವಾದ ಭಕ್ತಿಜೀವನದಿಂದ ಉಂಟಾಗುವ ಸಂಸ್ಕಾರ ಉಂಟಾಗುವುದಿಲ್ಲ.-ಇತ್ಯಾದಿ ಅರ್ಥ ಚಮತ್ಕಾರ ಆ ಎರಡು ಸಣ್ಣ ವಾಕ್ಯಗಳಲ್ಲಿ ಅಡಕವಾಗಿದೆ.  ಹೀಗೆ ಅರ್ಥ ಚಮತ್ಕಾರವುಂಟಾಗುವಂತೆ ಹೇಳುವ ಮಾತುಗಳೇ ಅರ್ಥಾಲಂಕಾರಗಳು.

(ii) ಶಬ್ದಾಲಂಕಾರಕ್ಕೆ ಕೆಳಗಿನ ಇನ್ನೊಂದು ಪದ್ಯವನ್ನು ಗಮನಿಸಿರಿ-

ಈ ವನದ ನಡುನಡುವೆ ತೊಳತೊಳಗುತಿರುತಿಹ
ಸರೋವರ ವರದೊಳೆ ದಳೆದಳೆದು ಬೆಳೆಬೆಳೆದು

ರಾಜೀವದಲರಲರ, ತುಳಿತುಳಿದು ಇಡಿದಿಡಿದ
ಬಂಡನೊಡನೆ ಸವಿದು ಸವಿದು-

ಅವಗಮಗಲದೆ ಯುಗಯುಗಮಾಗಿ ನೆರೆನೆರೆದು,
ಕಾವಸೊಗಸೊಗಸಿನಲಿ ನಲಿದು ಮೊರೆಮೊರೆವ,

ಬೃಂಗಾವಳಿಯ ಗಾವಳಿಯ, ಕಳಕಳಂಗಳೆ
ನೋಡುನೋಡು ರವಿತನಯ ತನಯ

-ಜೈಮಿನಿ ಭಾರತ

ಅರಣ್ಯಮಧ್ಯದ ಸರೋವರವೊಂದರಲ್ಲಿ ಅರಳಿರುವ ಕಮಲದಲ್ಲಿ ದುಂಬಿಗಳು ಮಕರಂದ ಪಾನಮಾಡಿ, ಜೊತೆಜೊತೆಯಾಗಿ ಝೇಂಕಾರಮಾಡುತ್ತ ನಲಿಯುತ್ತಿರುವ ದೃಶ್ಯದ ಈ ವರ್ಣನೆಯಲ್ಲಿ ಒಂದೇ ಅನುಪೂರ್ವಿಯ ಅನೇಕ ಶಬ್ದಗಳು ಜೊತೆಜೊತೆಯಾಗಿ ಬಂದು, ನೃತ್ಯ ಮಾಡುವಾಗ ಕಾಲಲ್ಲಿ ಕಟ್ಟಿಕೊಂಡು ಧ್ವನಿಮಾಡುತ್ತಿರುವ ಗೆಜ್ಜೆಗಳ ಸದ್ದಿನಂತೆ ಪದ್ಯದಲ್ಲಿ ಒಂದು ಬಗೆಯ ಶಬ್ದ ಸೌಂದರ‍್ಯವನ್ನುಂಟುಮಾಡುತ್ತಿವೆ.  ಈ ರೀತಿ ಶಬ್ದಗಳಿಂದ ಪದ್ಯದ ಸೌಂದರ‍್ಯ ಹೆಚ್ಚಿದಾಗ ಅದಕ್ಕೆ ನಾವು ‘ಶಬ್ದಾಲಂಕಾರ’ ಎಂದು ಕರೆಯುತ್ತೇವೆ.  ಹೀಗೆ ಕಾವ್ಯಗಳಲ್ಲಿ ಅರ್ಥಾಲಂಕಾರ ಶಬ್ದಾಲಂಕಾರಗಳು ಎಷ್ಟು ಬಗೆಯಾಗಿ ಬರುತ್ತವೆ? ಅವುಗಳ ಲಕ್ಷಣವೇನು? ಎಂತು? ಎಂಬ ಬಗೆಗೆ ಅನೇಕಾನೇಕ ಗ್ರಂಥಗಳು ಹುಟ್ಟಿವೆ.  ಇವುಗಳ ಬಗೆಗೆ ಗ್ರಂಥ ಬರೆದವರನ್ನು ‘ಲಾಕ್ಷಣಿಕರು’ ಎನ್ನುತ್ತಾರೆ.  ಸಂಸ್ಕೃತದಲ್ಲಿ, ಕನ್ನಡದಲ್ಲಿ ಅನೇಕ ಲಾಕ್ಷಣಿಕರು ಅಲಂಕಾರ ಗ್ರಂಥ ಬರೆದಿದ್ದಾರೆ.  ಈ ಕೆಳಗೆ ಕನ್ನಡದಲ್ಲಿ ಮಾತ್ರ ಅಲಂಕಾರ ಗ್ರಂಥ ಬರೆದ ಲಾಕ್ಷಣಿಕರ ಬಗೆಗೆ ಸ್ಥೂಲವಾದ ಪರಿಚಯಕೊಟ್ಟಿದೆ.  ಅವರ ಪರಿಚಯ ಮಾಡಿಕೊಳ್ಳಿರಿ.

 

() ನೃಪತುಂಗ (ಕ್ರಿ..೮೧೪)

ರಾಷ್ಟ್ರಕೂಟ ಚಕ್ರವರ್ತಿಯೆನಿಸಿದ್ದ ನೃಪತುಂಗನು, ಕವಿರಾಜಮಾರ್ಗ ವೆಂಬ ಲಕ್ಷಣಗ್ರಂಥ ಬರೆದಿದ್ದಾನೆ.  ಇದರಲ್ಲಿ ಅಲಂಕಾರಗಳ ಬಗೆಗೆ ಅನೇಕ ವಿಷಯಗಳು ಹೇಳಲ್ಪಟ್ಟಿವೆ.

 

() ನಾಗವರ್ಮ II (ಕ್ರಿ..೧೧೪೫)

೨ನೆಯ ನಾಗವರ್ಮನೆಂಬುವನು ಬರೆದ ‘ಕಾವ್ಯಾವಲೋಕನ’ ಎಂಬ ಗ್ರಂಥವು ಉತ್ತಮ ಮಟ್ಟದ ಲಕ್ಷಣಗ್ರಂಥವೆನಿಸಿದೆ.  ಇದರಲ್ಲಿ ಅಲಂಕಾರಗಳ ವಿಷಯದಲ್ಲಿ ಅನೇಕ ವಿವರಣೆಗಳು ಬಂದಿವೆ[2].

 

() ತಿರುಮಲಾರ್ಯ (ಕ್ರಿ..೧೬೭೨)

ನಾಗವರ್ಮನ ಅನಂತರ ಲಕ್ಷಣಗ್ರಂಥ ಬರೆದವರಲ್ಲಿ ತಿರುಮಲಾರ‍್ಯನೇ ಮುಖ್ಯನಾದವನು.  ಮೈಸೂರಿನ ಚಿಕ್ಕದೇವರಾಜರ ಆಸ್ಥಾನ ಪಂಡಿತನಾದ ಈತನು ‘ಅಪ್ರತಿಮವೀರ ಚರಿತ್ರೆ’ ಎಂಬ ಅಲಂಕಾರ ಗ್ರಂಥ ಬರೆದಿದ್ದಾನೆ.  ಚಿಕ್ಕದೇವರಾಜ ಒಡೆಯರ ಚರಿತ್ರೆಗೆ ಸಂಬಂಧಿಸಿದ ಅನೇಕ ಪದ್ಯಗಳನ್ನು ತಾನೇ ರಚಿಸಿ ಅಲಂಕಾರಕ್ಕೆ ಉದಾಹರಣೆಗಳನ್ನು ಕೊಟ್ಟಿದ್ದಾನೆ.  ಇದರಲ್ಲಿ ಒಟ್ಟು ೧೨೦ ಅಲಂಕಾರ ಹೇಳಲಾಗಿದೆ.

 

() ಜಾಯಪ್ಪದೇಸಾಯಿ (ಕ್ರಿ.. ೧೭೩೫)

ತೊರಗಲ್ ಸೀಮೆಗೆ ದೊರೆಯೆನಿಸಿದ್ದ ಜಾಯಪ್ಪದೇಸಾಯಿಯೆಂಬ ದೊರೆಯು ಕನ್ನಡ ‘ಕುವಲಯಾನಂದ’ವೆಂಬ ಹೆಸರಿನ ಲಕ್ಷಣ ಗ್ರಂಥ ಬರೆದಿದ್ದಾನೆ[3].  ಈತನು ತನ್ನ ಈ ಲಕ್ಷಣ ಗ್ರಂಥಕ್ಕೆ ಉದಾಹರಣೆ (ಲಕ್ಷ್ಯ) ಗಳನ್ನು ಕನ್ನಡ ಷಟ್ಪದಿಗ್ರಂಥಗಳಿಂದ ಆಯ್ದುಕೊಂಡಿದ್ದಾನೆ.  ೧೦೦ ಅಲಂಕಾರಗಳನ್ನು ಮಾತ್ರ ಹೇಳಿರುವ ಈ ಗ್ರಂಥವನ್ನು, ಸಂಸ್ಕೃತದಲ್ಲಿರುವ ಅಪ್ಪಯ್ಯದೀಕ್ಷಿತರ ‘ಕುವಲಯಾನಂದ’ವೆಂಬ ಅಲಂಕಾರಗ್ರಂಥವನ್ನು ಅನುಸರಿಸಿ ಬರೆದಂತೆ ಹೇಳಿಕೊಂಡಿದ್ದಾನೆ.  ಕನ್ನಡದಲ್ಲಿರುವ ಅಲಂಕಾರ ಗ್ರಂಥಗಳಲ್ಲಿ ಇದು ಉತ್ತಮವಾಗಿದೆ.

ಇದುವರೆಗೆ ಅಲಂಕಾರವೆಂದರೇನು? ಕವಿಗಳ ಕಾವ್ಯಗಳಲ್ಲಿ ಯಾವ ದೃಷ್ಟಿಯಿಂದ ಅಲಂಕಾರಗಳನ್ನು ಸೇರಿಸುತ್ತಾರೆ? ಅವುಗಳಿಂದ ಕಾವ್ಯಕ್ಕೆ ಎಷ್ಟರಮಟ್ಟಿಗೆ ಪ್ರಯೋಜನ? ಇಂಥ ಅಲಂಕಾರ ಗ್ರಂಥಗಳೂ, ಗ್ರಂಥ ಕರ್ತರೂ ಕನ್ನಡದಲ್ಲಿ ಯಾರು ಯಾರು? ಇತ್ಯಾದಿ ಅಂಶಗಳ ಬಗೆಗೆ ಸ್ಥೂಲವಾಗಿ ಪರಿಚಯ ಮಾಡಿಕೊಂಡಿದ್ದೀರಿ.  ಪ್ರೌಢಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ನೂರಾರು ಅಲಂಕಾರಗಳಲ್ಲಿ ಮುಖ್ಯವಾದ ಎಂಟು ಅಲಂಕಾರಗಳ ಬಗೆಗೆ ತಿಳಿದರೆ ಸಾಕು.  ಮುಂದಿನ ತರಗತಿಗಳಲ್ಲಿ ಇವುಗಳ ಬಗೆಗೆ ಹೆಚ್ಚಿಗೆ ತಿಳಿಯುವಿರಿ.


[1] ಸಾಹಿತ್ಯ ಮಂದಾರ IX ಸ್ಟಾಂಡರ‍್ಡ್ ಪಠ್ಯಪುಸ್ತಕ, ೧೯೬೯-೭೦ ರ ಮುದ್ರಣ.

[2] ನೃಪತುಂಗನ ನಂತರ ಉದಯಾದಿತ್ಯ, ಮಾಧವ ಎಂಬ ಇಬ್ಬರು ಲಾಕ್ಷಣಿಕರು ಅಲಂಕಾರಗಳ ಬಗೆಗೆ ಲಕ್ಷಣಗ್ರಂಥ ಬರೆದಿದ್ದಾರೆ.

[3] ಈ ಗ್ರಂಥವನ್ನು ಡಾ|| ಎಸ್.ಸಿ. ನಂದೀಮಠ, ಅವರು ಇತ್ತೀಚೆಗೆ ಸಂಪಾದಿಸಿ ಪ್ರಕಟಿಸಿದ್ದಾರೆ.