ಬರವಣಿಗೆಯಲ್ಲಿ ಲೇಖನ ಚಿಹ್ನೆಗಳ ಪಾತ್ರ ಅತ್ಯಂತ ಪ್ರಮುಖವಾದುದು.  ಲೇಖನ ಚಿಹ್ನೆಗಳಿಲ್ಲದ ಬರವಣಿಗೆಯು ಸ್ಪಷ್ಟಾರ್ಥವನ್ನು ಕೊಡದೆ ಅನೇಕ ತೊಡಕುಗಳಿಗೆ ಕಾರಣವಾಗುವುದುಂಟು.  ಆದುದರಿಂದ ಲೇಖನ ಚಿಹ್ನೆಗಳ ಕಡೆಗೆ ಅತ್ಯಂತ ಲಕ್ಷ್ಯ ಅವಶ್ಯಕ.  ಈ ಕೆಳಗೆ ಎಲ್ಲಿ ಎಲ್ಲಿ ಎಂಥ ಎಂಥ ಲೇಖನ ಚಿಹ್ನೆಗಳಿರಬೇಕೆಂಬ ಬಗೆಗೆ ವಿವರಿಸಲಾಗಿದೆ.  ಅದನ್ನು ಲಕ್ಷ್ಯದಲ್ಲಿಟ್ಟು ನಮ್ಮ ವಿದ್ಯಾರ್ಥಿಗಳು ಅವಶ್ಯವಾಗಿ ತಮ್ಮ ಬರವಣಿಗೆಯಲ್ಲಿ ಲೇಖನ ಚಿಹ್ನೆಗಳನ್ನು ಉಪಯೋಗಿಸುವ ಅಭ್ಯಾಸವನ್ನು ಬಲಪಡಿಸಬೇಕು.  ಇದರಿಂದ ಅವರ ಬರವಣಿಗೆಗೊಂದು ಬೆಲೆ ಬಂದಹಾಗಾಗುವುದು.

 

ಲೇಖನಚಿಹ್ನೆಗಳ ರೀತಿಗಳು

() ಪೂರ್ಣವಿರಾಮ-(.) – ಒಂದು ಪೂರ್ಣಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಈ ಪೂರ್ಣ ವಿರಾಮ ಚಿಹ್ನೆಯನ್ನು ಬರೆಯಬೇಕು.

ಉದಾಹರಣೆ:

ರಾಮನು ಮರವನ್ನು ಕಡಿದನು.

ಮಗುವು ಮಲಗಿತು.

ಇಲ್ಲಿ ಪೂರ್ಣಕ್ರಿಯೆಯನ್ನು ಸೂಚಿಸುವ ಕಡಿದನು. ಮಲಗಿತು.-ಎಂಬ ಕ್ರಿಯಾಪದಗಳ ಮುಂದೆ ಪೂರ್ಣ ವಿರಾಮವಿದೆ.

() ಅರ್ಧವಿರಾಮ-(;) – ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನ ವಾಗಿದ್ದಾಗ, ಉಪ ವಾಕ್ಯಗಳು ಮುಗಿದಲ್ಲೆಲ್ಲ ಅರ್ಧವಿರಾಮದ  ‘;’   ಈ ಚಿಹ್ನೆಯನ್ನು ಉಪಯೋಗಿಸಬೇಕು.

ಉದಾಹರಣೆ:

(i) ಅವನು ಕಾಶಿರಾಮೇಶ್ವರಗಳಿಗೆ ಹೋಗಿಬಂದನು; ಆದರೂ ಕೆಟ್ಟ ಬುದ್ಧಿಯನ್ನು ಬಿಡಲಿಲ್ಲ.

(ii) ಆ ದಿನ ಮಳೆ ಬಂದಿತ್ತು; ಆದುದರಿಂದ ಆಟವಾಡಲಿಲ್ಲ; ಇದು ಆಟಗಾರರಿಗೆ ಸ್ವಲ್ಪ ನಿರಾಸೆಯನ್ನುಂಟುಮಾಡಿತು.

ಮೇಲಿನ ಉದಾಹರಣೆಗಳಲ್ಲಿ ಮೊದಲನೆಯ ವಾಕ್ಯದಲ್ಲಿ ಒಂದು ಉಪವಾಕ್ಯವೂ ಎರಡನೆಯದರಲ್ಲಿ ಎರಡು ಉಪವಾಕ್ಯಗಳೂ ಇದ್ದು ಅಲ್ಲಿ  ‘;’  ಈ ರೀತಿಯ ಅರ್ಧವಿರಾಮ ಚಿಹ್ನೆಯನ್ನು ಬರೆದಿದೆ.  ಅದನ್ನು ಲಕ್ಷ್ಯದಲ್ಲಿಟ್ಟು ಅನುಸರಿಸಬೇಕು.

 

() ಅಲ್ಪವಿರಾಮ-(,) – ಸಂಬೋಧನೆಯ ಮುಂದೆ, ಅನೇಕ ಬೇರೆ ಬೇರೆ ವಿಶೇಷಣಗಳು ಕರ್ತೃಪದಕ್ಕಾಗಲಿ, ಕರ್ಮಪದಕ್ಕಾಗಲಿ, ಕ್ರಿಯಾಪದಕ್ಕಾಗಲಿ, ವಿಶೇಷಣಗಳಾಗಿದ್ದಾಗ ಕೊನೆಯ ವಿಶೇಷಣವನ್ನುಳಿದು ಉಳಿದವುಗಳ ಮುಂದೆ ಅಲ್ಪವಿರಾಮ ಚಿಹ್ನೆ ಬರೆಯಬೇಕು.  ಅನೇಕ ಕರ್ತೃಗಳು ಅಥವಾ ಕರ್ಮಗಳು ಬಂದಾಗ, ಕೊನೆಯದನ್ನುಳಿದು ಉಳಿದವುಗಳ ಮುಂದೆ ಅಲ್ಪವಿರಾಮ ಬರೆಯಬೇಕು.  ಇವು ಮುಖ್ಯವಾಗಿ ಅಲ್ಪವಿರಾಮ ಬರುವ ಸ್ಥಳಗಳು.

ಉದಾಹರಣೆಗೆ:-

(i) ಸಂಬೋಧನೆಯ ಮುಂದೆ ಅಲ್ಪವಿರಾಮಕ್ಕೆ-

(ಅ) ರಾಮಾ, ಊಟಮಾಡು.
(ಆ) ಪರಮಾತ್ಮಾ, ಕಾಪಾಡು.
(ಇ) ಮಕ್ಕಳೇ, ಬನ್ನಿರಿ.

(ii) ಕರ್ತೃ ಕರ್ಮ ಕ್ರಿಯಾಪದಗಳಿಗೆ ಅನೇಕ ವಿಶೇಷಣಗಳಿದ್ದಾಗ-

(ಅ) ಶೂರನೂ, ಉದಾರಿಯೂ, ಪ್ರಜಾರಂಜಕನೂ ಆದ ರಾಜನಾಗಿದ್ದನು.

ಇಲ್ಲಿ ‘ರಾಜನು’ ಎಂಬ ಕರ್ತೃಪದಕ್ಕೆ ಮೂರು ವಿಶೇಷಣಗಳಿದ್ದು ಮೊದಲಿನ ಎರಡು ವಿಶೇಷಣಗಳ ಮುಂದೆ ಅಲ್ಪವಿರಾಮ (,) ಚಿಹ್ನೆ ಕೊಡಲಾಗಿದೆ.  ಕೊನೆಯ ವಿಶೇಷಣಕ್ಕೆ ಕೊಡಬೇಕಾದುದಿಲ್ಲ.

(ಆ) ಆತನು ದೊಡ್ಡದೂ, ಭಾರವುಳ್ಳದೂ, ಉಪಯುಕ್ತವೂ ಆದ ಕಲ್ಲನ್ನು ಎತ್ತಿ ತಂದನು.

ಇಲ್ಲಿ ಕಲ್ಲನ್ನು ಎಂಬ ಕರ್ಮ ಪದಕ್ಕೆ ಮೂರು ವಿಶೇಷಣಗಳಿವೆ.  ಮೊದಲೆರಡು ವಿಶೇಷಣಗಳ ಮುಂದೆ ಅಲ್ಪವಿರಾಮ ಬಂದಿದೆ.

(ಇ) ಆತನ ಬರವಣಿಗೆ ನೋಡಲು ಅಂದವಾಗಿಯೂ, ಮನಮೋಹಕವಾಗಿಯೂ, ಸ್ಪುಟವಾಗಿಯೂ, ಅಚ್ಚುಕಟ್ಟಾಗಿಯೂ ಕಾಣುತ್ತದೆ.

ಇಲ್ಲಿ ಕ್ರಿಯೆಗೆ ನಾಲ್ಕು ವಿಶೇಷಣಗಳಿವೆ.  ಮೊದಲ ಮೂರು ವಿಶೇಷಣಗಳ ಮುಂದೆ ಅಲ್ಪವಿರಾಮ (,) ಬರೆಯಲಾಗಿದೆ.

(ಈ) ಒಂದೇ ಕ್ರಿಯೆಗೆ ಅನೇಕ ಕರ್ತೃಗಳಿದ್ದಾಗ- ಜಾತ್ರೆಯಲ್ಲಿ ಮಕ್ಕಳೂ, ಸ್ತ್ರೀಯರೂ, ಮುದುಕರೂ, ತರುಣರೂ ಬಹುಸಂಖ್ಯೆಯಲ್ಲಿ ಸೇರಿದ್ದರು.

ಇಲ್ಲಿ ಸೇರುವ ಕ್ರಿಯೆಗೆ ನಾಲ್ಕು ಕರ್ತೃ ಪದಗಳಿವೆ.  ಮೊದಲ ಮೂರು ಕರ್ತೃಪದಗಳ ಮುಂದೆ ಅಲ್ಪ ವಿರಾಮ (,) ಚಿಹ್ನೆ ಬಂದಿದೆ.

(ಉ) ಒಂದೇ ಕ್ರಿಯೆಗೆ ಅನೇಕ ಕರ್ಮಪದಗಳಿದ್ದಾಗ-

ಹಸಿದ ಆತನು ರೊಟ್ಟಿಯನ್ನೂ, ಅನ್ನವನ್ನೂ, ಹತ್ತು ಬಾಳೆಹಣ್ಣುಗಳನ್ನೂ, ತಂಬಿಗೆ ಹಾಲನ್ನೂ ಕುಡಿದನು.

ಇಲ್ಲಿ ಕುಡಿಯುವ ಕ್ರಿಯೆಗೆ ನಾಲ್ಕು ಕರ್ಮಪದಗಳಿವೆ.  ಮೊದಲ ಮೂರು ಕರ್ಮಪದಗಳ ಮುಂದೆ ಅಲ್ಪ ವಿರಾಮ (,) ಚಿಹ್ನೆಯನ್ನು ಬರೆಯಲಾಗಿದೆ.

ಹೀಗೆ ಅಲ್ಪ ವಿರಾಮವು ಅನೇಕ ಕಡೆ ಬರುವುದುಂಟು.  ಇದೂ ಅಲ್ಲದೆ ಸಾಪೇಕ್ಷ ಕ್ರಿಯೆಗಳಾದ ಕೃದಂತಾವ್ಯಯಗಳ ಮುಂದೆಯೂ ಅಲ್ಪ ವಿರಾಮ ಚಿಹ್ನೆಯನ್ನು ಬರೆಯುವ ಪದ್ಧತಿಯೂ ಉಂಟು.-

ಉದಾಹರಣೆಗೆ:-

(i) ನಮಗೆ ಕಾರ‍್ಯ ಮುಗಿಯದೆ, ತೃಪ್ತಿಯುಂಟಾಗುವುದಿಲ್ಲ.

(ii) ಮಕ್ಕಳು ಕುಣಿಯುತ್ತಾ, ಓಡಿಹೋದರು.

(iii) ನೀವು ಬಂದರೆ, ಆ ಕಾರ‍್ಯ ಸಫಲ.

ಮೇಲೆ ಹೇಳಿದ ವಾಕ್ಯಗಳಲ್ಲಿ ಬಂದಿರುವ ಮುಗಿಯದೆ  ಕುಣಿಯುತ್ತಾ  ಬಂದರೆ ಇತ್ಯಾದಿ ಸಾಪೇಕ್ಷ ಕ್ರಿಯೆಗಳಾದ ಕೃದಂತಾವ್ಯಯಗಳು ವಾಕ್ಯದಲ್ಲಿ ಎರಡು ಮೂರು ಕಡೆ ಬಂದಿದ್ದರೆ ಕೊನೆಯ ಸಾಪೇಕ್ಷ ಕ್ರಿಯೆಯನ್ನುಳಿದು ಉಳಿದವುಗಳ ಮುಂದೆ ಅಲ್ಪ ವಿರಾಮ ಚಿಹ್ನೆಯನ್ನು ಕೊಡವ ಪದ್ಧತಿ ಕೆಲವರಲ್ಲಿದೆ.  ಆದರೆ ಕೆಲವರು ಕೊಡದೆ ಇರುವುದೂ ಉಂಟು.

 

() ಪ್ರಶ್ನಾರ್ಥಕ ಚಿಹ್ನೆ-(?) – ಪ್ರಶ್ನಾರ್ಥಕ ಪದ ಮತ್ತು ವಾಕ್ಯಗಳ ಮುಂದೆ ಪ್ರಶ್ನಾರ್ಥಕವಾದ  ?  ಈ ಚಿಹ್ನೆಯನ್ನು ಹಾಕಬೇಕು.

ಉದಾಹರಣೆಗೆ:-

(i) ಏಕೆ? ಯಾವುದು?

(ii) ಇದು ನಿನಗೆ ಬೇಕೆ?

(iii) ನಿನ್ನ ವಯಸ್ಸು ಏನು?

(iv) ಅವನಿಗೆ ಅದು ಬೇಕೆ?

ನೀವು ಎಷ್ಟು ಹೊತ್ತಿನವರೆಗೆ ಓದುತ್ತೀರಿ? ಇಲ್ಲಿ ಪ್ರಶ್ನಾರ್ಥಕ ಶಬ್ದ ಮತ್ತು ವಾಕ್ಯಗಳ ಮುಂದೆ ಪ್ರಶ್ನಾರ್ಥಕವಾದ  ‘?’  ಈ ಚಿಹ್ನೆ ಬಂದಿರುವುದನ್ನು ಗಮನಿಸಿರಿ.

 

() ಭಾವ ಸೂಚಕ ಚಿಹ್ನೆ-(!) – ಹರ್ಷ, ಆಶ್ಚರ‍್ಯ, ಸಂತೋಷ, ವಿಷಾದ, ದುಃಖ, ಕೋಪ, ಆನಂದ-ಇತ್ಯಾದಿ ಭಾವ ಸೂಚಕ ಶಬ್ದಗಳ ಮುಂದೆ  ‘!’   ಈ ರೀತಿಯ ಭಾವ ಸೂಚಕ ಚಿಹ್ನೆಗಳನ್ನು ಬರೆದರೆ ಆ ಮಾತುಗಳ ಅರ್ಥ ಸ್ಪುಟವಾಗುವುದು.

ಉದಾಹರಣೆಗೆ:-

(i) ಆಹಾ! ಎಷ್ಟು ಸೊಗಸಾಗಿದೆ!

(ii) ಅಯ್ಯೋ! ಅವನಿಗೆ ಕೇಡೇ!

(iii) ಅಕ್ಕಟಾ! ತಪ್ಪಾಯಿತು!

(iv) ಛೀ! ಮೂರ್ಖಾ ತೊಲಗು!   -ಇತ್ಯಾದಿ.

 

() ಉದ್ಧರಣ ಚಿಹ್ನೆ ಅಥವಾ ವಾಕ್ಯವೇಷ್ಟನ ಚಿಹ್ನೆ-(“ “) – ಇನ್ನೊಬ್ಬರು ಹೀಗೆ ಹೇಳಿದರೆಂದು ಒಬ್ಬರ ಮಾತನ್ನು ಉದ್ಧರಿಸಿ ಬರೆಯುವಾಗ ಅಥವಾ ಇನ್ನೊಬ್ಬರ ನೇರ ಮಾತುಗಳನ್ನು ತೋರಿಸುವಾಗ ಈ ಚಿಹ್ನೆಯನ್ನು ಉಪಯೋಗಿಸಬೇಕು.  ಇದರಲ್ಲಿ ಎರಡು ರೀತಿಯ ಚಿಹ್ನೆಗಳಿರುವುದನ್ನು ನೋಡಿರಿ.

(i) “ ”- ಹೀಗೆ ಮೊದಲು ಕೆಳಮುಖವಾದ ಎರಡು ಅಲ್ಪವಿರಾಮ ಚಿಹ್ನೆಗಳೂ, ಅನಂತರ ಮೇಲ್ಮುಖವಾದ ಎರಡು ಅಲ್ಪ ವಿರಾಮ ಚಿಹ್ನೆಗಳೂ ಉಳ್ಳ ಗುರುತನ್ನು ಇನ್ನೊಬ್ಬರ ಮಾತುಗಳನ್ನು ಉದ್ಧರಿಸಿ ಬರೆದಾಗ ಆ ಮಾತು ಎಷ್ಟಿದೆಯೋ ಅಷ್ಟಕ್ಕೆ ಈ ಚಿಹ್ನೆ ಹಾಕಬೇಕು.

(ii) ‘ ‘ ಹೀಗಿರುವ ಚಿಹ್ನೆಯನ್ನು ಬರವಣಿಗೆಯಲ್ಲಿ ಪಾರಿಭಾಷಿಕ ಪದಗಳನ್ನು ಬಳಸಿದಾಗ ಆ ಪದಕ್ಕೂ ಅಥವಾ ವಾಕ್ಯಕ್ಕೂ, ಹೀಗೆ ಹೇಳುತ್ತಾರೆ, ಎಂದು ಒಂದು ಯಾವುದಾದರೂ ಪದ ಹೇಳಿದರೆ, ಅಂಥ ಪದಕ್ಕೂ ಹಾಕಬಹುದು.  ಇನ್ನೂ ಹಲವು ಕಡೆ ಉಪಯೋಗಿಸಬಹುದು.  ಕೆಳಗಿನ ಉದಾಹರಣೆಗಳಲ್ಲಿ ನೋಡಿರಿ.

(iii)  ವಾಕ್ಯವೇಷ್ಟನಕ್ಕೆ (ಉದ್ಧರಣಕ್ಕೆ), ನೇರಮಾತುಗಳಿಗೆ-

(ಅ) ನಿನ್ನೆ ಭಾಷಣದಲ್ಲಿ ನಮ್ಮ ಮುಖ್ಯೋಪಾಧ್ಯಾಯರು “ಪ್ರತಿಯೊಬ್ಬ ವಿದ್ಯಾರ್ಥಿಯೂ ಕಷ್ಟಪಟ್ಟು ಓದಬೇಕು” ಎಂದು ಹೇಳಿದರು.

ಇಲ್ಲಿ ಮುಖ್ಯೋಪಾಧ್ಯಾಯರು ಹೇಳಿದ ಮಾತು ಯಾವುದೋ ಅದನ್ನು ಉದ್ಧರಿಸಿ ಅದಕ್ಕೆ “ ” ಈ ಚಿಹ್ನೆ ಹಾಕಲಾಗಿದೆ.

(ಆ) ಮಹಾಭಾರತದಲ್ಲಿ “ಧರ್ಮಕ್ಕೆ ಜಯ ಉಂಟು” ಎಂದು ಹೇಳಿದೆ.

ಇಲ್ಲಿ ಮಹಾಭಾರತದಲ್ಲಿ ಹೇಳಿದ ಧರ್ಮಕ್ಕೆ ಜಯ ಎಂಬ ಮಾತನ್ನು ಉದ್ಧರಿಸಿ ಅದಕ್ಕೆ ಉದ್ಧರಣ ಚಿಹ್ನೆ ಹಾಕಲಾಗಿದೆ.

(ಇ) ಆಗ ಧೃತರಾಷ್ಟ್ರನು ಧರ್ಮರಾಯನಿಗೆ “ಅಪ್ಪಾ, ನನಗೆ ತಪಸ್ಸಿನ ಮೇಲೆ ಮನಸ್ಸಾಗಿದೆ.  ನನಗೆ ಕಾಡಿಗೆ ಹೋಗಲು ಅನುಮತಿ ಕೊಡು.” ಎಂದು ಕೇಳಲಾಗಿ ಧರ್ಮರಾಯನು “ಎಲ್ಲಿಯಾದರೂ ಉಂಟೆ! ಈ ಮುಪ್ಪಿನಲ್ಲಿ ನೀವು ಕಾಡಿಗೆ ಹೋಗುವು ದೆಂದರೇನು?” ಎಂದನು.

ಈ ವಾಕ್ಯವೃಂದದಲ್ಲಿ ಧೃತರಾಷ್ಟ್ರ ಮತ್ತು ಧರ್ಮರಾಯರ ನೇರ ಮಾತುಗಳಿಗೆ   ಈ ಚಿಹ್ನೆಯನ್ನು ಹಾಕಲಾಗಿದೆ.  ಹೀಗೆ ವಾಕ್ಯವೃಂದಗಳಲ್ಲಿ ಬರುವ ನೇರ ಮಾತುಗಳಿಗೆ ಉದ್ಧರಣ ಚಿಹ್ನೆ ಹಾಕಿದಾಗ ಮಾತಿನ ಸ್ಪಷ್ಟಾರ್ಥವಾಗುವುದು.

(ಈ) (೧) ಪಾರಿಭಾಷಿಕ ಪದಗಳನ್ನು ಉಪಯೋಗಿಸಿದಾಗ-

(೧) ಕನ್ನಡದಲ್ಲಿ ಅನೇಕ ‘ಇಂಗ್ಲೀಷ್’ ಪದಗಳು ಸೇರಿ ಬಳಕೆಗೆ ಬಂದಿವೆ.

(೨) ನಿನ್ನೆ ಉಪಾಧ್ಯಾಯರು ‘ಹೈಡ್ರೋಜನ್’ ವಿಷಯದಲ್ಲಿ ಪಾಠ ಹೇಳಿದರು.

ಇಲ್ಲಿ ಪಾರಿಭಾಷಿಕ ಪದಗಳಾದ ‘ಇಂಗ್ಲೀಷ್’ ‘ಹೈಡ್ರೋಜನ್’ ಮೊದಲಾದವುಗಳಿಗೆ ‘ ’ ಈ ಚಿಹ್ನೆ ಹಾಕಲಾಗಿದೆ.

(೨) ಒಂದು ವಿಷಯವನ್ನು ಕುರಿತು ಹಲವು ವಾಕ್ಯಗಳನ್ನು ಹೊಂದಿಸಿ ಬರೆದರೆ, ಆ ವಾಕ್ಯಗಳ ಗುಂಪಿಗೆ ‘ಮಹಾವಾಕ್ಯ’ವೆನ್ನುವರು.  ಇದನ್ನು ‘ವಾಕ್ಯವೃಂದ’,  ‘ವಾಕ್ಯರಾಶಿ’ – ಎಂದೂ ಕರೆಯುವುದುಂಟು.

ಮೇಲಿನ ವಾಕ್ಯವೃಂದದಲ್ಲಿ ಹೀಗೆ ಹೇಳುತ್ತಾರೆ -ಎಂದು ಅರ್ಥಬರುವ ಮಹಾವಾಕ್ಯ, ವಾಕ್ಯವೃಂದ, ವಾಕ್ಯರಾಶಿ – ಇತ್ಯಾದಿ ಪದಗಳಿಗೆ ಈ ಚಿಹ್ನೆ ಹಾಕಲಾಗಿದೆ.

(೩) ದಿವಂಗತ ಎ.ಆರ್. ಕೃಷ್ಣಶಾಸ್ತ್ರಿಗಳು ‘ಭಾಸಕವಿ’, ‘ಸಂಸ್ಕೃತ ನಾಟಕಗಳು’, ‘ನಿರ್ಮಲ ಭಾರತೀ’, ‘ಕಥಾಮೃತ’, ‘ವಚನಭಾರತ’ ಮುಂತಾದ ಗ್ರಂಥಗಳನ್ನು ರಚಿಸಿದ್ದಾರೆ.

ಈ ವಾಕ್ಯದಲ್ಲಿ ಇಂಥ ಇಂಥ ಗ್ರಂಥ ಬರೆದಿದ್ದಾರೆನ್ನುವಲ್ಲಿ ಯಾವ ಯಾವ ಗ್ರಂಥಗಳೋ ಅವಕ್ಕೆಲ್ಲ ‘ ’ ಈ ಚಿಹ್ನೆಯನ್ನು ಬಳಸಲಾಗಿದೆ.

(೪) ಶ್ರೀ ಬಿ.ಎಂ. ಶ್ರೀಕಂಠಯ್ಯನವರ ಕಾವ್ಯನಾಮ ‘ಶ್ರೀ’ ಎಂದು.

ಮೇಲೆ ಹೇಳಿರುವ, ಅನೇಕ ಕಡೆಗಳಲ್ಲಿ ಬರುವ ಈ ಚಿಹ್ನೆಯ ಬಗೆಗೆ ವಿದ್ಯಾರ್ಥಿಗಳು ಅರಿತು ಬರೆಯ ಬೇಕು.

 

() ಆವರಣ ಚಿಹ್ನೆ-() – ಒಂದು ಶಬ್ದವನ್ನೋ ಅಥವಾ ವಾಕ್ಯವನ್ನೋ ಹೇಳಿ, ಅದಕ್ಕೆ ಸಮಾನಾರ್ಥಕ ಶಬ್ದವನ್ನೋ ವಾಕ್ಯವನ್ನೋ ಹೇಳುವಾಗ ಈ ಆವರಣ ಚಿಹ್ನೆಯನ್ನು ಉಪಯೋಗಿಸಬೇಕು.

ಉದಾಹರಣೆ:-

(i) ಒಂದು ದಿನ ಒಂದು ನರಿಯು ಕೊಕ್ಕರೆಯನ್ನು (ನೀರು ಹಕ್ಕಿಯನ್ನು) ತನ್ನ ಮನೆಗೆ ಊಟಕ್ಕೆ ಕರೆಯಿತು.

(ii) ನೀರನ್ನು ವಿಭಜಿಸಿದರೆ ಆಮ್ಲಜನಕ (ಆಕ್ಸಿಜನ್), ಜಲಜನಕ (ಹೈಡ್ರೋಜನ್) ಗಳು ಉತ್ಪತ್ತಿಯಾಗುತ್ತವೆ.

 

() ವಿವರಣಾತ್ಮಕ ಚಿಹ್ನೆ-(:) – ಒಂದು ಅಭಿಪ್ರಾಯದ ವಿವರಣೆ ಮುಂದಿನಂತೆ ಇದೆ, ಎಂದು ತೋರಿಸುವಾಗ ಸಾಮಾನ್ಯವಾಗಿ  ‘:’  ಈ ಚಿಹ್ನೆ ಹಾಕುವುದುಂಟು.

ಉದಾಹರಣೆ:-

(i) ಇದುವರೆಗೆ ನಳನ ಪಾಕಶಾಸ್ತ್ರ ನೈಪುಣ್ಯ ಹೇಳಿದ್ದಾಯಿತು.  ಇನ್ನು ಭೀಮಸೇನನ ವಿಚಾರ: ಭೀಮಸೇನ ಹುಟ್ಟಿದ ತಿಥಿ, ವಾರ, ನಕ್ಷತ್ರ …………..

ಇಲ್ಲಿ ಭೀಮಸೇನನ ವಿಚಾರದ ವಿವರಣೆ ಪ್ರಾರಂಭವಾಗುವಲ್ಲಿ  ‘:’  ಈ ಚಿಹ್ನೆ ಹಾಕಲಾಗಿದೆ.  ಇದು ಭೀಮಸೇನನ ವಿಚಾರದಲ್ಲಿ ವಿವರಣೆ ಪ್ರಾರಂಭಿಸುವ ಸೂಚನೆಗಾಗಿ ಹಾಕಿದುದೆಂದು ತಿಳಿಯಬೇಕು.

(ii) ಇನ್ನು ಪಂಪ ಮಹಾಕವಿಯ ವಿಚಾರ: ಪಂಪ ಕವಿಯು ಕನ್ನಡದ ಬಹು ದೊಡ್ಡ ಕವಿ …….. ಇತ್ಯಾದಿ.

ಇಲ್ಲಿ ಪಂಪ ಕವಿಯ ವಿಚಾರ-ಎಂಬ ಪದದ ಮುಂದೆ ವಿವರಣಾತ್ಮಕವಾದ  ‘:’  ಈ ಚಿಹ್ನೆ ಹಾಕಲಾಗಿದೆ.

ಹೀಗೆ : ಈ ಚಿಹ್ನೆಯನ್ನು ಮುಂದೆ ವಿವರಣೆ ಮಾಡಿದೆ ಎಂಬರ್ಥದಲ್ಲಿ ಹಾಕಬೇಕಾಗುವುದು.

 

() ಅಧಿಕ ಚಿಹ್ನೆ – (+) – ಎರಡು ಪದಗಳನ್ನೋ, ಅಥವಾ ಪ್ರಕೃತಿ ಪ್ರತ್ಯಯಗಳನ್ನೋ, ಕೂಡಿಸಿ ಸಂಧಿಮಾಡಿ ಹೇಳುವಾಗ, ಎರಡು ಪದಗಳನ್ನು ಕೂಡಿಸಿ ಸಮಾಸ ಮಾಡುವಾಗ, ಅಥವಾ ಎರಡು ಸಂಖ್ಯೆಗಳನ್ನು ಕೂಡಿಸಿದೆ ಎಂಬರ್ಥ ಸೂಚನೆ ಮಾಡುವಾಗ ಸಾಮಾನ್ಯವಾಗಿ ‘+’ ಈ ಚಿಹ್ನೆ ಬಳಸುವುದುಂಟು.  ಇದಕ್ಕೆ ಅಧಿಕ (ಹೆಚ್ಚು) ಚಿಹ್ನೆ ಎಂದು ಕರೆಯುತ್ತಾರೆ.

ಉದಾಹರಣೆಗೆ:

(i) ಸಂಧಿಮಾಡುವಾಗ

ಮನೆ + ಅಲ್ಲಿ = ಮನೆಯಲ್ಲಿ
ಅವನ + ಊರು = ಅವನೂರು

(ii) ಸಮಾಸಮಾಡುವಾಗ

ದೇವರ + ಮಂದಿರ = ದೇವಮಂದಿರ
ಕೈಯ + ಮುಂದು = ಮುಂಗೈ

(iii) ಸಂಖ್ಯೆಗಳನ್ನು ಕೂಡಿಸುವಾಗ

೮ + ೪ = ೧೨.    ಇತ್ಯಾದಿ.

 

(೧೦) ಸಮಾನಾರ್ಥಕ ಚಿಹ್ನೆ – (=) – ಎರಡು ಪದಗಳ ಅರ್ಥ ಸಮಾನವೆನ್ನುವಾಗ, ಇವೆರಡು ಸೇರಿ ಇದಕ್ಕೆ ಸಮಾನವೆನ್ನುವಾಗ ಸಾಮಾನ್ಯವಾಗಿ ‘=’ ಈ ಚಿಹ್ನೆ ಉಪಯೋಗಿಸುವುದುಂಟು.  ಇದಕ್ಕೆ ‘ಸಮಾನಾರ್ಥಕ ಚಿಹ್ನೆ’ ಎನ್ನುವರು.

ಉದಾಹರಣೆಗೆ:-

(i) ಅರ್ಥಸಮಾನತೆ ಹೇಳುವುದಕ್ಕೆ

ಅಸುರ = ರಾಕ್ಷಸ.

ಇಲ್ಲಿ ‘ಅಸುರ’ ಎಂಬ ಪದದ ಅರ್ಥ ಮುಂದಿರುವ ರಾಕ್ಷಸ ಎಂಬ ಪದದ ಅರ್ಥಕ್ಕೆ ಸಮಾನ – ಎಂದು ತಿಳಿಯಬೇಕು.

(ii) ಎರಡೂ ಸೇರಿ ಮುಂದಿನ ಪದಕ್ಕೆ ಸಮಾನ ಎಂಬರ್ಥದಲ್ಲಿ

(ಅ) ಅರಸನ + ಮನೆ = ಅರಮನೆ
(ಆ) ೮ + ೪ = ೧೨.

ಇಲ್ಲಿ ಅರಸನ ಪದವೂ, ಮನೆ ಪದವೂ ಸೇರಿ ಅರಮನೆ ಎಂಬ ಪದದ ಅರ್ಥಕ್ಕೆ ಸಮಾನ ಎಂಬರ್ಥದಲ್ಲಿ  ‘=’  ಈ ಚಿಹ್ನೆ ಬರೆಯಲಾಗಿದೆ, ಇದರಂತೆ ಎರಡನೆಯ ಉದಾಹರಣೆಯಲ್ಲಿ  ೮ + ೪ ಎರಡೂ ಸೇರಿ ೧೨ ಕ್ಕೆ ಸಮಾನ ಎಂಬರ್ಥದಲ್ಲಿ ೮ + ೪ ರ ಮುಂದೆ  ‘= ‘ ಈ ಚಿಹ್ನೆಯನ್ನು ಬಳಸಲಾಗಿದೆ.

ಮೇಲೆ ವಿವರಿಸಿದ ಹಾಗೆ ಅನೇಕ ವಿಧವಾದ ಲೇಖನ ಚಿಹ್ನೆಗಳನ್ನು ನಾವು ನಮ್ಮ ಬರವಣಿಗೆಯಲ್ಲಿ ಅರಿತು ಬಳಸಿದರೆ ಬರವಣಿಗೆ ಅರ್ಥಪೂರ್ಣವಾಗುವುದು.  ಓದುವವರಿಗೂ ಇದರಿಂದ ಸ್ಪಷ್ಟವಾದ ಅರ್ಥವಾಗುವಂತಾಗುವುದು.