ಎಲ್ಲ ಕುಟುಂಬಗಳು ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಪಡೆಯಲು ತಮ್ಮ ಮನೆಯ ಆವರಣ/ಹಿತ್ತಲಿನಲ್ಲಿ ಬೆಳೆಸುವ ತೋಟಕ್ಕೆ ’ಕೈ ತೋಟ’ವೆಂದು ಹೆಸರು. ಕೈತೋಟ ಮಾಡಲು ಉಪಯೋಗಿಸುವ ಕಾಲ ಮತ್ತು ಶ್ರಮದಾನ ನಮಗೆ ಉತ್ತಮ ಆರೋಗ್ಯ ನೀಡುವುದಲ್ಲದೆ ಅಲ್ಪ ಸ್ವಲ್ಪ ಆದಾಯವನ್ನೂ ನೀಡಬಲ್ಲದು. ಕೈತೋಟದಲ್ಲಿಯ ಕಾಯಕ ವಿಶ್ರಾಂತಿ ಸಮಯವನ್ನು ಸದುಪಯೋಗ ಪಡಿಸಿಕೊಂಡು ಸಾರ್ಥಕತೆಯ ಜೀವನ ನಡೆಸಲು ಸಹಾಯಕವಾಗಬಲ್ಲದು. ಪ್ರತಿಯೊಂದು ಗೃಹವು ತನ್ನದೇ ಆದ ಒಂದು ಕೈತೋಟ ಹೊಂದಿದ್ದರೆ ಅದೆಷ್ಟು ಚೆನ್ನ? ಮನೆಯ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲ ವಯೋಮಾನದವರು ಒಟ್ಟಾಗಿ ಬೆಳೆಸಿ ಪ್ರೀತಿಸುವ ಕೈತೋಟ ಗೃಹಕ್ಕೆ ಒಂದು ಶೋಭೆ.

ಕೈತೋಟದ ಪ್ರಯೋಜನಗಳು

  • ಕೈತೋಟವು ಮನೆಯ ಅಂದವನ್ನು ಹೆಚ್ಚಿಸುತ್ತದೆಯಲ್ಲದೆ ಸುತ್ತಲಿನ ವಾತಾವರಣವನ್ನು ತಿಳಿಯಾಗಿಸಿ ಪ್ರಶಾಂತತೆಯನ್ನು ಕಾಪಾಡುತ್ತದೆ. ಮನೆಯ ಸುತ್ತಲೂ ಹಸಿರು ಕಂಗೊಳಿಸಿ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.
  • ಹಸಿರು ವಾತಾವರಣದಿಂದ ಶುದ್ಧಗಾಳಿ ದೊರೆಯುವುದಲ್ಲದೇ ಮನಸ್ಸಿಗೆ ನೆಮ್ಮದಿ ಮತ್ತು ಆನಂದ ದೊರೆಯುವುದು. ವಿಶೇಷವಾಗಿ ಮಾನಸಿಕವಾಗಿ ಅಸ್ವಸ್ಥಗೊಂಡವರು ಈ ಹಸಿರಿನ ಸೊಬಗಿನಿಂದ ಆನಂದವನ್ನು ಪಡೆಯುವರು.
  • ಬಿಡುವಿನ ವೇಳೆಯಲ್ಲಿ ಕೈತೋಟದ ಕೆಲಸಗಳಲ್ಲಿ ತೊಡಗುವುದರಿಂದ ದೇಹಕ್ಕೆ ವ್ಯಾಯಾಮ ಸಿಗುವಂತಾಗುವುದು ಮತ್ತು ನಮಗೆ ಬೇಕಾದ ಹಣ್ಣು, ತರಕಾರಿ, ಹೂವು ನಾವೇ ಬೆಳೆದುಕೊಂಡು ಸ್ವಲ್ಪ ಹಣದ ಉಳಿತಾಯ ಮಾಡಲೂ ಸಾಧ್ಯ.
  • ಮನೆಯ ಸುತ್ತಲೂ ಸಾಕಷ್ಟು ಸ್ಥಳ ಇದ್ದಲ್ಲಿ ಹೆಚ್ಚು ಬೆಳೆಗಳನ್ನು ಬೆಳೆಯಲು ಸಾಧ್ಯ. ಇದರಿಂದ ಬಂದ ಹೆಚ್ಚುವರಿ ಫಸಲನ್ನು ಮಾರಾಟ ಮಾಡಲೂಬಹುದು. ಹೀಗಾಗಿ ಇಲ್ಲಿ ಹಣ ಗಳಿಕೆಗೂ ಅವಕಾಶ ಉಂಟು.
  • ಮನೆಯಿಂದ ಹೊರಗೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು.
  • ಕೈತೋಟ ಮಾಡುವುದರಿಂದ ಮನೆಯ ಮಕ್ಕಳು ಮತ್ತು ಗೃಹಿಣಿಯರಿಗೆ ಬಿಡುವಿನ ವೇಳೆಯಲ್ಲಿ ಕೆಲಸ ಸಿಗುತ್ತದೆ. ಇದರಿಂದ ಅವರು ಯಾವಾಗಲೂ ಲವಲವಿಕೆಯಿಂದಿರಲೂ ಸಾಧ್ಯ. ಅದರಲ್ಲೂ ಮಕ್ಕಳು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿ ಬೆಳೆಯಲು ಈ ಕೈತೋಟ ನೆರವಾಗುತ್ತದೆ.
  • ಕೈತೋಟದ ನಿರ್ಮಾಣ ಒಂದು ಕಲೆ. ಇದೊಂದು ಉತ್ತಮ ಹವ್ಯಾಸವೂ ಹೌದು. ಇದನ್ನು ಅತ್ಯಂತ ಕಡಿಮೆ ವೆಚ್ಚ ಹಾಗೂ ಶ್ರಮದಿಂದ ಹೆಚ್ಚು ಪ್ರತಿಫಲ ಪಡೆಯುವ ಪುಟ್ಟ ಕ್ಷೇತ್ರವೆಂದೇ ಹೇಳಬಹುದು.
  • ದಿನ ದಿನಕ್ಕೆ ಹೆಚ್ಚುತ್ತಿರುವ ಹಣ್ಣು ತರಕಾರಿ ಬೆಲೆಗಳು ಜನಜೀವನ ನಿರ್ವಹಣೆಯನ್ನು ಸಂಕಷ್ಟಕ್ಕೀಡು ಮಾಡಿವೆ. ಇಂತಹ ಸನ್ನಿವೇಶದಲ್ಲಿ ಇದ್ದಷ್ಟು ಜಾಗದಲ್ಲಿ ಕೈತೋಟದ ನಿರ್ಮಾಣ ದುರ್ಬಲ ವರ್ಗದವರಿಗೆ ಆರ್ಥಿಕವಾಗಿ ನೆರವಾಗಬಲ್ಲದು.

ಈ ರೀತಿಯಾಗಿ ಮನಸ್ಸಿಗೆ ಮುದ ನೀಡಿ, ಪರಿಸರ ಸಂರಕ್ಷಿಸಿ, ಮನೆಯ ಸೊಬಗನ್ನು ಹೆಚ್ಚಿಸುವುದರ ಜೊತೆಗೆ ಆದಾಯವನ್ನೂ ನೀಡುವ ಕೈತೋಟವೊಂದು ಬಹುಪಯೋಗಿ ಕಸಬು ಎನ್ನಬಹುದು.

ಸಮತೋಲನ ಆಹಾರಕ್ಕೊಂದು ಮಾರ್ಗ

ಉತ್ತಮ ಆರೋಗ್ಯಕ್ಕೆ ಸತ್ವಭರಿತ ಆಹಾರವನ್ನು ಸೇವಿಸಬೇಕು. ದಿನ ನಿತ್ಯದ ಆಹಾರದಲ್ಲಿ ಅಕ್ಕಿ, ಗೋಧಿ, ಜೋಳ, ಬೇಳೆ ಹಾಗೂ ಇನ್ನಿತರ ಕಾಳುಗಳು ಹೇಗೆ ಅವಶ್ಯಕವೋ ಅದೇ ರೀತಿ ಹಣ್ಣು, ತರಕಾರಿ ಮತ್ತು ಸಂಬಾರ ಪದಾರ್ಥಗಳೂ ಅಷ್ಟೇ ಮುಖ್ಯ. ಸಮತೋಲನ ಆಹಾರದಲ್ಲಿ ಇವು ಪ್ರಮುಖ ಪಾತ್ರ ವಹಿಸುವುದಲ್ಲದೇ ಜೀವಸತ್ವ, ಖನಿಜ, ಸಸಾರಜನಕ ಮತ್ತು ಶರ್ಕರಪಿಷ್ಟಗಳನ್ನೂ ಒದಗಿಸುತ್ತವೆ.

ಹಣ್ಣುಗಳು  ಹೆಚ್ಚಿನ ಪ್ರಮಾಣದಲ್ಲಿರುವ ಪೌಷ್ಟಿಕಾಂಶಗಳು
೧. ಮಾವು ’ಎ’ ಮತ್ತು ’ಸಿ’ ಜೀವಸತ್ವಗಳು
೨. ಬಾಳೆ ’ಎ’ ಮತ್ತು ’ಸಿ’ ಜೀವಸತ್ವಗಳು, ಶರ್ಕರ ಪಿಷ್ಠ ಮತ್ತು ಖನಿಜಾಂಶಗಳು
೩. ನಿಂಬೆ ’ಸಿ’ ಜೀವಸತ್ವ, ಸಿಟ್ರಿಕ್ ಆಮ್ಲ, ಕ್ಯಾಲ್ಸಿಯಂ, ರಂಜಕ
೪. ಸಪೋಟಾ ’ಸಿ’ ಜೀವಸತ್ವ, ಕ್ಯಾಲ್ಸಿಯಂ, ಕಬ್ಬಿಣ
೫. ಸೀಬೆ (ಪೇರಲ) ’ಸಿ’ ಜೀವಸತ್ವ, ಕ್ಯಾಲ್ಸಿಯಂ, ರಂಜಕ
೬. ಅನಾನಸ್ ’ಎ’, ’ಬಿ’ ಮತ್ತು ’ಸಿ’ ಜೀವಸತ್ವಗಳು
೭. ಪಪ್ಪಾಯಾ (ಪರಂಗಿ) ’ಎ’ ಜೀವಸತ್ವಗಳು
೮. ಹಲಸು ಶರ್ಕರ ಪಿಷ್ಠ ಮತ್ತು ಬೀಜಗಳಲ್ಲಿ ಸಸಾರಜನಕ
ತರಕಾರಿಗಳು
೧. ಟೊಮಾಟೊ ’ಎ’, ’ಬಿ’ ಮತ್ತು ’ಸಿ’ ಜೀವಸತ್ವಗಳು
೨. ಬದನೆ ’ಎ’ ಮತ್ತು ’ಬಿ’ ಜೀವಸತ್ವಗಳು
೩. ಸೌತೇಕಾಯಿ ’ಎ’ ಮತ್ತು ’ಸಿ’ ಜೀವಸತ್ವಗಳು
೪. ಹಾಗಲಕಾಯಿ ’ಎ’ ಜೀವಸತ್ವ, ಕ್ಯಾಲ್ಸಿಯಂ, ಮೆಗ್ನೇಷಿಯಂ, ಸೋಡಿಯಂ, ರಂಜಕ ಮತ್ತು ಪೊಟ್ಯಾಸಿಯಂ
೫. ಮೆಣಸಿನಕಾಯಿ ’ಎ’ ಮತ್ತು ’ಸಿ’ ಜೀವಸತ್ವಗಳು
೬. ಚವಳಿಕಾಯಿ ’ಎ’ ಜೀವಸತ್ವ, ಕ್ಯಾಲ್ಸಿಯಂ, ಕಬ್ಬಿಣ
೭. ಎಲೆಕೋಸು ’ಎ’ ಮತ್ತು ’ಸಿ’ ಜೀವಸತ್ವಗಳು
೮. ಹೂಕೋಸು ’ಎ’ ಮತ್ತು ’ಸಿ’ ಜೀವಸತ್ವಗಳು, ರಂಜಕ, ಗಂಧಕ ಮತ್ತು ಪೊಟ್ಯಾಸಿಯಂ
೯. ನವಿಲುಕೋಸು ’ಎ’ ಮತ್ತು ’ಸಿ’ ಜೀವಸತ್ವಗಳು
೧೦. ಮೂಲಂಗಿ ’ಸಿ’ ಜೀವಸತ್ವ, ಕ್ಯಾಲ್ಸಿಯಂ, ರಂಜಕ, ಜಿಡ್ಡು
೧೧. ಗಜ್ಜರಿ ’ಎ’ ಜೀವಸತ್ವ ಮತ್ತು ಕೆರೋಟಿನ್
೧೨. ಈರುಳ್ಳಿ ಕ್ಯಾಲ್ಸಿಯಂ ಮತ್ತು ರಂಜಕ
೧೩. ಬೆಳ್ಳುಳ್ಳಿ ರಂಜಕ
೧೪. ತಿಂಗಳವರೆ ’ಎ’ ಜೀವಸತ್ವ, ಸುಣ್ಣ, ಕಬ್ಬಿಣ ಮತ್ತು ರಂಜಕ
೧೫. ಬಟಾಣಿ ’ಎ’, ’ಬಿ’ ಮತ್ತು ’ಸಿ’ ಜೀವಸತ್ವಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣ
೧೬. ಕೊತ್ತಂಬರಿಸೊಪ್ಪು ’ಎ’ ಮತ್ತು ’ಸಿ’ ಜೀವಸತ್ವಗಳು ಮತ್ತು ಕ್ಯಾಲ್ಸಿಯಂ
೧೭. ಮೆಂತೆಸೊಪ್ಪು ’ಎ’, ’ಬಿ’ ಮತ್ತು ’ಸಿ’ ಜೀವಸತ್ವ, ಕ್ಯಾಲ್ಸಿಯಂ ಮತ್ತು ಕಬ್ಬಿಣ
೧೮. ಪುದೀನ ’ಎ’, ’ಬಿ’ ಮತ್ತು ’ಸಿ’ ಜೀವಸತ್ವ, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣ
೧೯. ಪಾಲಕ್ ’ಎ’ ಮತ್ತು ’ಸಿ’ ಜೀವಸತ್ವ ಮತ್ತು ಕ್ಯಾಲ್ಸಿಯಂ
೨೦. ನುಗ್ಗೇಕಾಯಿ ’ಎ’, ’ಬಿ’ ಮತ್ತು ’ಸಿ’ ಜೀವಸತ್ವಗಳು
೨೧ ಕರಿಬೇವು ’ಎ’, ’ಬಿ’ ಮತ್ತು ’ಸಿ’ ಜೀವಸತ್ವ, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣ
ಸಂಬಾರ ಬೆಳೆಗಳು
೧. ಅರಿಸಿನ ’ಎ’, ’ಬಿ’ ಮತ್ತು ’ಸಿ’ ಜೀವಸತ್ವಗಳು ಮತ್ತು ಶರ್ಕರಪಿಷ್ಟ
೨. ಜೀರಿಗೆ ಶರ್ಕರಪಿಷ್ಟ, ಸುಣ್ಣ, ರಂಜಕ ಮತ್ತು ಕಬ್ಬಿಣ
೩. ಸಾಸಿವೆ ಸಸಾರಜನಕ, ಜಿಡ್ಡು ಮತ್ತು ನಾರು
೪. ಒಣಶುಂಠಿ ’ಎ’ ಮತ್ತು ’ಸಿ’ ಜೀವಸತ್ವ, ಸಸಾರಜನಕ ಮತ್ತು ಜಿಡ್ಡು

ಹೀಗೆ ಹಣ್ಣು, ತರಕಾರಿ ಮತ್ತು ಸಂಬಾರು ಪದಾರ್ಥಗಳಲ್ಲಿ ಸಾಮಾನ್ಯವಾಗಿ ’ಎ’, ’ಬಿ’ ಮತ್ತು ’ಸಿ’ ಜೀವಸತ್ವಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುವುವಲ್ಲದೇ ಕೆಲವು ಖನಿಜಗಳು ಮತ್ತು ಶರ್ಕರ ಪಿಷ್ಟಗಳೂ ಇರುತ್ತವೆ. ಇನ್ನೂ ಈ ಜೀವಸತ್ವಗಳು ಖನಿಜಗಳು ಮತ್ತು ಶರ್ಕರ ಪಿಷ್ಟಗಳ ಕೊರತೆಯಿಂದ ಆಗಬಹುದಾದ ತೊಂದರೆಗಳನ್ನು ತಿಳಿದುಕೊಂಡರೆ ಅವುಗಳ ಮಹತ್ವ ಅರಿತು ಕೊಂಡಂತಾಗುವುದು.

’ಎ’ ಜೀವಸತ್ವದ ಕೊರತೆಯಿಂದ ಇರುಳುಗಣ್ಣು (Night Blindness) ಬರುವುದು. ದೃಷ್ಟಿ ದುರ್ಬಲವಾಗುವುದು. ಕಣ್ಣುಗಳು ಆರೋಗ್ಯಪೂರ್ಣವಾಗಿ ಉಳಿಯುವುದಿಲ್ಲ.

’ಬಿ’ ಜೀವಸತ್ವದ ಕೊರತೆಯಿಂದ ಉಂಟಾದರೆ ’ಬೆರಿ ಬೆರಿ’ ಎಂಬ ರೋಗ ಬರುವುದು. ಇದರಿಂದ ದೇಹಕ್ಕೆ ನಿಶ್ಯಕ್ತಿಯಾಗಿ ಬೇಗನೆ ಆಯಾಸಕ್ಕೆ ಒಳಗಾಗುತ್ತಾರೆ. ಇದಲ್ಲದೇ ನರಗಳಲ್ಲಿ ನೋವೂ ಕಾಣಿಸಿಕೊಳ್ಳುವುದು.

’ಸಿ’ ಜೀವಸತ್ವದ ಕೊರತೆ ’ಸ್ಕರ್ವಿ’ ಎಂಬ ರೋಗಕ್ಕೆ ಕಾರಣವಾಗುವುದು. ಇದರಿಂದ ಒಸಡುಗಳಲ್ಲಿ ರಕ್ತಸ್ರಾವವಾಗಿ ಊದಿಕೊಳ್ಳುವುದರಿಂದ ಹಲ್ಲು ಮತ್ತು ಕೀಲುಗಳು ಸಡಿಲಗೊಂಡು ಅಭದ್ರಗೊಳ್ಳುತ್ತವೆ.

ಶರ್ಕರ ಪಿಷ್ಟಗಳೂ ದೇಹದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುವುವು. ಶರ್ಕರ ಪಿಷ್ಟಗಳ ಪೂರೈಕೆಯಲ್ಲಿ ಕೊರತೆ ಕಂಡುಬಂದರೆ ದೇಹ ನಿಶ್ಯಕ್ತವಾಗುವುದು ಮತ್ತು ಚಿಕ್ಕ ಮಕ್ಕಳಿಗೆ ’ಮರಾಸ್ಮಸ್’ ಎಂಬ ರೋಗ ಬರುವುದು. ಇದರಿಂದ ಮಕ್ಕಳಲ್ಲಿ ನಿಶ್ಯಕ್ತಿ ಉಂಟಾಗಿ ಬೆಳವಣಿಗೆ ಮಂದಗತಿಯಲ್ಲಿ ಸಾಗುವುದು.

ದೇಹಾರೋಗ್ಯಕ್ಕೆ ಖನಿಜಗಳ ಪಾತ್ರವೂ ಮುಖ್ಯ. ಖನಿಜಗಳ ಕೊರತೆಯಿಂದ ಹಲ್ಲುಗಳಲ್ಲಿ ತೊಂದರೆ ಕಾಣಿಸಿಕೊಳ್ಳುವುದು. ಕ್ಯಾಲ್ಸಿಯಂ ಕೊರತೆ ಉಂಟಾದರೆ ಹಲ್ಲುಗಳು ಹುಳುಕಲ್ಲಾಗಬಹುದು ಮತ್ತು ಕಬ್ಬಿಣದ ಸಂಯುಕ್ತ ವಸ್ತುಗಳ ಪೂರೈಕೆಯ ಕೊರತೆಯಿಂದ ರಕ್ತಹೀನತೆ ಉಂಟಾಗುವುದು. ಇದೇ ರೀತಿ ಸಸಾರಜನಕದ ಕೊರತೆಯಿಂದಲೂ ತೊಂದರೆ ಉಂಟಾಗುವುದು. ನಿಗದಿತ ಪ್ರಮಾಣದಲ್ಲಿ ಸಸಾರಜನಕ ಪೂರೈಕೆಯಾಗದಿದ್ದರೆ ಆರೋಗ್ಯ ಕೆಡುತ್ತದೆ. ಮಕ್ಕಳಲ್ಲಿ ಸ್ನಾಯುಗಳ ಬಲಹೀನತೆ ಕಂಡುಬರುವುದು.

* * *