ಇದುವರೆಗೆ ೫೦ ಅಕ್ಷರಗಳ ಬಗೆಗೆ ವಿವರವಾಗಿ ತಿಳಿದಿದ್ದೀರಿ. ಈ ಅಕ್ಷರಗಳೆಲ್ಲ ಹೊಕ್ಕಳದ ಮೂಲ ಭಾಗದಿಂದ ಹೊರಟ ಶಬ್ದವೊಂದರಿಂದ ಹುಟ್ಟುತ್ತವೆ. ಹಾಗೆ ಹೊರಟ ಶಬ್ದವು ಗಂಟಲು, ದವಡೆ, ಮೂರ್ಧ (ನಾಲಗೆಯ ಮೇಲ್ಭಾಗದ ಭಾಗ), ತುಟಿ, ಹಲ್ಲು – ಇತ್ಯಾದಿ ಅವಯವಗಳ ಸಹಾಯದಿಂದ ಬೇರೆ ಬೇರೆ ಅಕ್ಷರಗಳಾಗುತ್ತವೆ. ಹಾಗಾದರೆ ಯಾವ ಯಾವ ಅಕ್ಷರಗಳು ಎಲ್ಲೆಲ್ಲಿ ಹುಟ್ಟುತ್ತವೆ? ಎಂಬ ಬಗೆಗೆ ಈ ಕೆಳಗಿನ ವಿವರಣೆಯನ್ನು ನೋಡಿರಿ:-
(೧) ಅ, ಆ, ಕ, ಖ, ಗ, ಘ, ಙ, ಹ ಮತ್ತು ವಿಸರ್ಗ (ಃ) – ಇವು ಕಂಠದಲ್ಲಿ ಹುಟ್ಟುತ್ತವಾದ್ದರಿಂದ ಇವನ್ನು ಕಂಠ್ಯ ವರ್ಣಗಳೆನ್ನುತ್ತಾರೆ.
(೨) ಇ, ಈ, ಚ, ಛ, ಜ, ಝ, ಞ, ಯ, ಶ – ಇವುಗಳು ತಾಲುವಿನ (ದವಡೆಯ) ಸಹಾಯದಿಂದ ಹುಟ್ಟುತ್ತವಾದ್ದರಿಂದ ಇವನ್ನು ತಾಲ್ವಕ್ಷರಗಳೆನ್ನುವರು.
(೩) ಋ, ೠ, ಟ, ಠ, ಡ, ಢ, ಣ, ರ, ಷ – ಅಕ್ಷರಗಳು ನಾಲಗೆಯ ಮೇಲ್ಭಾಗವಾದ ಮೂರ್ಧವೆಂಬುದರ ಸಹಾಯದಿಂದ ಹುಟ್ಟುತ್ತವೆ. ಆದುದರಿಂದ ಇವು ಮೂರ್ಧನ್ಯಗಳೆನಿಸುವುವು.
(೪) ತ, ಥ, ದ, ಧ, ನ, ಲ, ಸ – ಅಕ್ಷರಗಳು ಹಲ್ಲುಗಳ ಸಹಾಯದಿಂದ ಹುಟ್ಟುತ್ತವಾದ್ದರಿಂದ ಇವು ದಂತ್ಯ ವರ್ಣಗಳೆನಿಸುವುವು. (ದಂತ=ಹಲ್ಲು)
(೫) ಉ, ಊ, ಪ, ಫ, ಬ, ಭ, ಮ – ಅಕ್ಷರಗಳು ತುಟಿಯ (ಓಷ್ಠದ) ಸಹಾಯದಿಂದ ಹುಟ್ಟುತ್ತವಾದ್ದರಿಂದ ಇವನ್ನು ಓಷ್ಠ್ಯ ವರ್ಣಗಳೆನ್ನುವರು.
(೬) ಙ, ಞ, ಣ, ನ, ಮ – ವರ್ಣಗಳು ನಾಸಿಕದ ಸಹಾಯದಿಂದ ಹುಟ್ಟುತ್ತವಾದ್ದರಿಂದ ಇವು ನಾಸಿಕಗಳು (ಅನುನಾಸಿಕಗಳು) ಎನಿಸುವುವು.
(೭) ಎ, ಏ, ಐ – ಅಕ್ಷರಗಳು ಹುಟ್ಟಲು ಕಂಠ ಮತ್ತು ತಾಲು (ದವಡೆ) ಗಳೆರಡರ ಸಹಾಯ ಬೇಕಾಗುವುದರಿಂದ ಇವು ಕಂಠತಾಲು ಅಕ್ಷರಗಳೆನಿಸುವುವು.
(೮) ಒ, ಓ, ಔ – ಅಕ್ಷರಗಳು ಕಂಠ ಮತ್ತು ತುಟಿ (ಓಷ್ಠ) ಗಳೆರಡರ ಸಹಾಯದಿಂದ ಹುಟ್ಟುತ್ತವಾದ್ದರಿಂದ ಇವು ಕಂಠೋಷ್ಠ್ಯ ವರ್ಣಗಳೆನಿಸುವುವು.
(೯) ವ – ಎಂಬಕ್ಷರವು ಹಲ್ಲು (ದಂತ) ಮತ್ತು ತುಟಿ (ಓಷ್ಠ) ಗಳೆರಡರ ಸಹಾಯದಿಂದ ಹುಟ್ಟುತ್ತಾದ್ದರಿಂದ ಇದು ದಂತೋಷ್ಠ್ಯ ವರ್ಣವೆನಿಸುವುದು.
(೧೦) ಅನುಸ್ವಾರ (ಂ)ವು – ಕಂಠ ಮತ್ತು ನಾಸಿಕದ ಸಹಾಯದಿಂದ ಹುಟ್ಟುತ್ತಾದ್ದರಿಂದ ಇದು ಕಂಠನಾಸಿಕ ವರ್ಣವೆನಿಸುವುದು.
ಈ ರೀತಿಯಲ್ಲಿ ಅಕ್ಷರಗಳು ಹುಟ್ಟುವ ರೀತಿಯನ್ನು ವ್ಯವಸ್ಥೆಗೊಳಿಸಿದ್ದಾರೆ.
Leave A Comment