ಭೂಮಿಯನ್ನು ಸಿದ್ಧಪಡಿಸುವ ಕ್ರಿಯೆಯಿಂದ ಹಿಡಿದು ಫಲ ನೀಡುವವರೆಗೆ ಕೃಷಿ ಸಲಕರಣೆಗಳು ಬೇಕೇ ಬೇಕು. ಕೆಲಸಕ್ಕೆ ತಕ್ಕಂತೆ ಅವುಗಳನ್ನು ಉಪಯೋಗಿಸುವುದರಿಂದ ಶ್ರಮ ಕಡಿಮೆಯಾಗಿ ನಿಗದಿತ ವೇಳೆಯಲ್ಲಿ ಕೆಲಸ ಪೂರ್ಣವಾಗುವುದು. ಕೈತೋಟವು ತೋಟಗಾರಿಕೆಯ ಒಂದು ಭಾಗ. ಈ ಕೈತೋಟ ನಿರ್ವಹಣೆಗಾಗಿಯೇ ಕೆಲವು ಸಾಮಗ್ರಿ-ಸಲಕರಣೆಗಳನ್ನು ನಮ್ಮೊಂದಿಗೆ ಇಟ್ಟುಕೊಳ್ಳಬೇಕಾಗುತ್ತದೆ.

ಸಲಕರಣೆಗಳು :

. ಪಿಕಾಸಿ : ಭೂಮಿಯನ್ನು ಅಗೆಯಲು ಅಗತ್ಯವಿರುವ ಸಲಕರಣೆ. ಹೆಚ್ಚು ಬಿರುಸಾದ ಭೂಮಿಯಲ್ಲಿ ಸಣ್ಣಪುಟ್ಟ ಕಲ್ಲಿನಂತಹ ವಸ್ತುಗಳನ್ನು ಹೊರತೆಗೆಯಲು ಇದು ಸಹಕಾರಿ. ಇದರಿಂದ ತರಕಾರಿ ಮತ್ತು ಹೂವಿನ ಮಡಿಗಳನ್ನು ಅಗೆದು ಮಣ್ಣನ್ನು ಸಡಿಲಿಸಬಹುದು.

. ಸನಿಕೆ : ಸನಿಕೆಯ ಕಾರ್ಯ ಪಿಕಾಸಿಗಿಂತ ಭಿನ್ನವಾದುದು. ಪಿಕಾಸಿ ಕೆಲಸ ಮುಗಿದ ಮೇಲೆ ಸನಿಕೆ ಪಾತ್ರ ಬರುತ್ತದೆ. ಅಗೆದ ಮಣ್ಣನ್ನು ಸಮಗೂಡಿಸುವುದು, ಗೊಬ್ಬರ, ಮಣ್ಣು ಇತ್ಯಾದಿ ತುಂಬಲು ಮತ್ತು ನೀರು ಹಾಯಿಸಲು ಇದು ಬೇಕೇ ಬೇಕು

. ಬುಟ್ಟಿ : ಕೈತೋಟದಲ್ಲಿ ೫-೬ ಬುಟ್ಟಿಗಳಾದರೂ ಇರಬೇಕು. ಇವು ಮಣ್ಣು, ಗೊಬ್ಬರ ಇತ್ಯಾದಿಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಸಹಾಯಕವಾಗುತ್ತವೆ.

. ಕುಡುಗೋಲು : ಇದು ಕೈತೋಟದಲ್ಲಿ ಕಳೆ ಕೀಳಲು ಮತ್ತು ಬೆಳೆ ಕೊಯ್ಲು ಮಾಡಲು ಸಹಾಯಕವಾಗುತ್ತದೆ.

. ಸಣ್ಣಗುದ್ದಲಿ : ಸಣ್ಣಪುಟ್ಟ ಹೆಂಟೆಗಳನ್ನು ಒಡೆದು ಪುಡಿ ಮಾಡಲು, ಮಡಿಗಳಲ್ಲಿ ಸಾಲು ತೆಗೆಯಲು, ಬೀಜ ಬಿತ್ತಲು, ತಗ್ಗು ತೆಗೆಯಲು ಮತ್ತು ಮಡಿಗಳಲ್ಲಿ ಮಣ್ಣನ್ನು ಪುಡಿ ಮಾಡಲು ಬೇಕಾಗುತ್ತದೆ.

. ಸವರುಗತ್ತರಿ : ಇದೊಂದು ಬಹುಪಯೋಗಿ ಸಾಧನವಾಗಿದ್ದು ವಿವಿಧ ಆಕಾರಗಳಲ್ಲಿ ದೊರೆಯುವುದು. ಕಾಂಡದ ರೆಂಬೆಗಳನ್ನು ಕತ್ತರಿಸಿ ’ತುಂಡು’ಗಳನ್ನು ತಯಾರಿಸಲು ಇದು ಬೇಕು. ಸವರುಗತ್ತರಿಯಿಂದ ಸರಿಯಾದ ಸ್ಥಳದಲ್ಲಿ ಗುಂಜು ಅಥವಾ ನಾರು ಮೇಲೇಳದಂತೆ ಮತ್ತು ಸೀಳದಂತೆ ಕತ್ತರಿಸಬಹುದು. ವಿಶೇಷವಾಗಿ ಸಸ್ಯಾಭಿವೃದ್ಧಿಯಲ್ಲಿ ಗಿಡದ ಟೊಂಗೆಯನ್ನು ಕತ್ತರಿಸಿ, ತುಂಡುಗಳಾಗಿ ಮಾಡಲು ಇದು ಬೇಕಾಗುತ್ತದೆ.

. ಕಸಿ ಚಾಕು : ಇದು ವಿಶೇಷವಾಗಿ ಸಸ್ಯಾಭಿವೃದ್ಧಿ ಕಾರ್ಯಕ್ಕೆ ರಚಿಸಲ್ಪಟ್ಟಿರುವ ಚಾಕು ಅಥವಾ ಚೂರಿ. ಬಡ್ಡಿಂಗ್ ಮತ್ತು ಕಸಿ ಚಾಕುಗಳೆಂದು ಬೇರೆ ಬೇರೆಯಾಗಿಯೂ ಸಿಗುತ್ತವೆ. ಕಸಿ ಕಟ್ಟುವಾಗ ಮತ್ತು ಗೂಟಿ ಕಟ್ಟುವಾಗ ಟೊಂಗೆಗಳನ್ನು ಸವರಲು ಇದನ್ನು ಉಪಯೋಗಿಸುವರು. ಗಿಡಗಳಿಗೆ ಕಣ್ಣು ಕೂಡಿಸುವಾಗ ಕಸಿ ಚಾಕುವನ್ನೇ ಉಪಯೋಗಿಸಬೇಕಾಗುವುದು. 

. ಬೇಲಿಯ ಸವರುಗತ್ತರಿ : ಇದಕ್ಕೆ ಕೈಯಿಂದ ಹಿಡಿದುಕೊಳ್ಳಲು ಎರಡು ಮರದ ತುಂಡುಗಳಿದ್ದು ಮುಂದಿನ ಭಾಗವು ಎರಡು ಚೂರಿಗಳ ಆಕಾರದಲ್ಲಿ ಕತ್ತರಿ ಹಾಗೆ ಕಾಣುವುದು. ತೋಟಗಳಲ್ಲಿ, ಉದ್ಯಾನಗಳಲ್ಲಿ ಮತ್ತು ಬೇಲಿಯಲ್ಲಿ ಹೆಚ್ಚುವರಿಯಾಗಿ ಬೆಳೆದ ರೆಂಬೆ-ಕೊಂಬೆಗಳನ್ನು ಕತ್ತರಿಸಲು ಉಪಯೋಗಿಸುವರು.

. ಗರಗಸ : ದಪ್ಪನೆಯ ಕಾಂಡಗಳನ್ನು ಕತ್ತರಿಸಲು ಗರಗಸ ಸಹಕಾರಿಯಾಗುತ್ತದೆ.

೧೦. ಬೇಬಿ ಸ್ಪ್ರೇಯರ್‌‌: ಕೈತೋಟದಲ್ಲಿ ಔಷಧಿ ಸಿಂಪರಣೆಗೆ ಇದು ಅವಶ್ಯಕ. ಕೀಟ-ರೋಗಗಳ ನಿಯಂತ್ರಣಕ್ಕಾಗಿ ಔಷಧಿ ಮೇಲೆ ಸಿಂಪರಣೆ ಮಾಡಲು ಬೇಕಾಗುವುದು.

೧೧. ಹರಿವಾಣ : ಬೀಜ ಮೊಳಕೆ ಪರೀಕ್ಷೆಗಾಗಿ ಪ್ಲಾಸ್ಟಿಕ್ ಅಥವಾ ಲೋಹದಿಂದ ತಯಾರಿಸಿದ ಹರಿವಾಣ ಅವಶ್ಯ. ಅತಿ ಸಣ್ಣ ಗಾತ್ರದ ಬೀಜಗಳನ್ನು ಮೊಳಕೆ ಪರೀಕ್ಷೆಗಾಗಿ ಈ  ಹರಿವಾಣಗಳನ್ನು ಉಪಯೋಗಿಸಬಹುದು. ಇದು ಬೀಜ ಒಣಗಿಸಲು ಸಹ ನೆರವಾಗುತ್ತದೆ.

೧೨. ತಳ್ಳುವ ಕೈ ಗಾಡಿ : ಕೈತೋಟ ಸ್ವಲ್ಪ ವಿಶಾಲವಾಗಿದ್ದಲ್ಲಿ ಗೊಬ್ಬರ, ಮಣ್ಣು ಮತ್ತು ಸಸಿಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಇದು ಉಪಯೋಗವಾಗುವ ಎರಡು ಚಕ್ರಗಳ ಚಿಕ್ಕ ಗಾಡಿ.

ಕೃಷಿ ಸಾಮಗ್ರಿಗಳು

ಕೈತೋಟದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ಕೆಲವು ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದರಿಂದ ನಾವು ಸಮಯಕ್ಕೆ ಸರಿಯಾಗಿ ಎಲ್ಲ ಕೆಲಸಗಳನ್ನು ನಿರ್ವಹಿಸಬಹುದು.

. ಸಾವಯವ ಗೊಬ್ಬರಗಳು : ಸಾವಯವ ಗೊಬ್ಬರಗಳಲ್ಲಿ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಮೂಳೆ ಗೊಬ್ಬರ, ಮೀನಿನ ಗೊಬ್ಬರ, ಕೋಳಿ ಗೊಬ್ಬರ ಇತ್ಯಾದಿಯಾಗಿ ಹಲವಾರು ವಿಧಗಳಿವೆ. ಅವುಗಳಲ್ಲಿ ಕೊಟ್ಟಿಗೆ ಗೊಬ್ಬರ ಶ್ರೇಷ್ಠವಾದುದು. ಇದನ್ನು ಕೈತೋಟದ ಮೂಲೆಯಲ್ಲಿ ನಾವೇ ತಯಾರಿಸಿಕೊಳ್ಳಬಹುದು. ಅನಾನುಕೂಲವಿದ್ದಲ್ಲಿ ಬೇರೆಡೆಯಿಂದ ತರುವುದಾದರೆ ಅದಕ್ಕೆ ತಕ್ಕ ವ್ಯವಸ್ಥೆ ಮಾಡಿಕೊಂಡಿರಬೇಕು.

. ರಸಗೊಬ್ಬರಗಳು : ಕೈತೋಟದ ಬೆಳೆಗಳಿಗೆ ಸೂಕ್ತ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಉಪಯೋಗಿಸಬೇಕಾಗುವುದು. ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಅಂಶಗಳನ್ನು ಹೊಂದಿದ ರಸಗೊಬ್ಬರಗಳು ಹೆಚ್ಚು ಅವಶ್ಯಕ. ಇವುಗಳನ್ನು ಒಂದೆಡೆ ಸಂಗ್ರಹಿಸಿಡಬೇಕು. ಇವುಗಳ ಜೊತೆಗೆ ಕ್ಯಾಲ್ಸಿಯಂ, ಮೆಗ್ನೇಸಿಯಂ ಮತ್ತು ಗಂಧಕಯುಕ್ತ ರಸಗೊಬ್ಬರಗಳನ್ನು ಪೂರೈಸಬೇಕಾಗುತ್ತದೆ. ಸ್ವಲ್ಪ ಮಟ್ಟಿಗೆ ಈ ಅಂಶಗಳನ್ನು ಹೊಂದಿದ ಗೊಬ್ಬರಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗುವುದು. ಇವಲ್ಲದೇ ಲಘು ಪೋಷಕಾಂಶಗಳಾದ ತಾಮ್ರ, ಮಾಲಿಬ್ಡಿನಂ, ಸತು ಇತ್ಯಾದಿಗಳು ಒಮ್ಮೊಮ್ಮೆ ಬೆಳೆಗೆ ಅವಶ್ಯವೆನಿಸುತ್ತವೆ. ತಜ್ಞರ ಶಿಫಾರಸಿನ ಮೇರೆಗೆ ಇವುಗಳನ್ನು ಬೇಕಾಗುವ ಸಮಯದಲ್ಲಿಯೇ ತಂದು ಪೂರೈಸಬಹುದು.

. ಕೀಟನಾಶಕಗಳು : ಇತ್ತೀಚೆಗೆ ಕೀಟ-ರೋಗಗಳ ಹಾವಳಿ ಹೆಚ್ಚಾಗುತ್ತಿದೆ. ಅವುಗಳ ಹತೋಟಿಗೆ ಔಷಧಿಗಳನ್ನು ಉಪಯೋಗಿಸಲೇಬೇಕು. ಇಲ್ಲವಾದರೆ ನಷ್ಟ ಖಂಡಿತ. ಸಾಧ್ಯವಾದಷ್ಟು ಮುಂಜಾಗೃತಾ ಕ್ರಮಗಳನ್ನು ಅನುಸರಿಸಬೇಕು. ಅದಾದ ಮೇಲೂ ಕೀಟ ರೋಗಗಳ ಬಾಧೆ ಕಂಡುಬಂದಲ್ಲಿ ತಜ್ಞರ ಶಿಫಾರಸಿನ ಮೇರೆಗೆ ಕೀಟನಾಶಕಗಳನ್ನು ಸಿಂಪಡಿಸಬೇಕು. ಅವರವರ ಕೈತೋಟದಲ್ಲಿ ವರ್ಷವಿಡೀ ಕಂಡುಬರುವ ಕೀಟ ಹಾಗೂ ರೋಗಗಳನ್ನು ಅಭ್ಯಸಿಸಿ ಸಾಧ್ಯವಾದಷ್ಟು ಕೀಟನಾಶಕಗಳನ್ನು ಖರೀದಿಸಿ ಇಟ್ಟುಕೊಂಡಿರಬೇಕು.

ಕೀಟನಾಶಕಗಳು ಮಾತ್ರವಲ್ಲದೇ ಶಿಲೀಂಧ್ರ ನಾಶಕಗಳು, ಇಲಿ ಪಾಷಾಣಗಳು ಇತ್ಯಾದಿಯಾಗಿ ತಯಾರಿಯಲ್ಲಿ ಇಟ್ಟುಕೊಂಡಿರಬೇಕು. ಬೋರ್ಡೊ ಮಿಶ್ರಣ ಮತ್ತು ಅಂಟುಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಇವು ಉತ್ತಮ ಶಿಲೀಂಧ್ರನಾಶಕಗಳಾಗಿವೆ. (ತಯಾರಿಸುವ ವಿಧಾನವನ್ನು ’ಸಸ್ಯ ಸಂರಕ್ಷಣೆ’ ಅಧ್ಯಾಯದಲ್ಲಿ ವಿವರಿಸಲಾಗಿದೆ.)

. ಸಸ್ಯಾಭಿವೃದ್ಧಿ ಸಾಮಗ್ರಿಗಳು : ಕೈತೋಟದಲ್ಲಿ ಸಸ್ಯಾಭಿವೃದ್ಧಿ ಕೈಗೊಳ್ಳುವುದಾದರೆ ಸ್ಥಳದ ವಿಸ್ತೀರ್ಣವನ್ನು ನಿರ್ಧರಿಸಿಕೊಂಡು ಬೇಕಾಗುವ ಸಾಮಗ್ರಿಗಳನ್ನು ಖರೀದಿಸಿಟ್ಟುಕೊಂಡಿರಬೇಕು.

ಸಾಮಾನ್ಯವಾಗಿ ಕಸಿ ಮೇಣ, ಪ್ಲಾಸ್ಟಿಕ್ ಹಾಳೆ, ಕಾಂಡದ ತುಂಡುಗಳಲ್ಲಿ ಬೇರು ಬರಿಸುವ ಸಸ್ಯವರ್ಧಕ, ಪಾಲಿಥೀನ್ ಚೀಲಗಳು, ಸ್ಪ್ಯಾಗ್ನಂಮಾಸ್, ಮರಳು ಇತ್ಯಾದಿಗಳನ್ನು ಸಂಗ್ರಹಿಸಿಟ್ಟುಕೊಂಡಿರಬೇಕು.

* * *