“ಬುದ್ದಿವಂತ/ಬುದ್ದವಂತೆ” ಎನಿಸಿಕೊಳ್ಳಲು ಎಲ್ಲರಿಗೂ ಇಷ್ಟ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳುವವರನ್ನು ಬುದ್ದಿವಂತರೆನ್ನುತ್ತಾರೆ. ಯಾವುದೇ ಸಮಸ್ಯೆ ಕನಿಷ್ಟ ವಿಷಯಗಳನ್ನು ವಿಶ್ಲೇಷಿಸಿ, ಪರಿಹಾರ ನೀಡುವವರನ್ನು ಬುದ್ಧಿವಂತರೆನ್ನುತ್ತಾರೆ. ಒಳ್ಳೆಯ ವ್ಯವಹಾರ ಜ್ಞಾನ ಉಳ್ಳವರನ್ನು ಬುದ್ದಿವಂತರೆನ್ನುತ್ತಾರೆ. ಬುದ್ಧಿವಂತರಿಗೆ ಹೆಚ್ಚು ಮನ್ನಣೆ ಗೌರವ ಸಿಗುತ್ತದೆ. ಹೀಗಾಗಿ ತಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಎಲ್ಲರಿಗೂ ಇಷ್ಟವೇ. ಹೆಚ್ಚು ಬುದ್ದಿವಂತರೆನಸಿಕೊಳ್ಳಲು ನಮ್ಮಲ್ಲಿರಬೇಕಾದ ಸಾಮರ್ಥ್ಯಗಳೇನು?

. ಗ್ರಹಿಸುವ ಶಕ್ತಿ: ಪಂಚೇಂದ್ರಿಯಗಳ ಮೂಲಕ ಯಾವುದೇ ಮಾಹಿತಿ, ವಿಷಯವನ್ನು ಬೇಗ ಗ್ರಹಿಸುವ ಶಕ್ತಿ ನಮಗಿರಬೇಕು. ಕಣ್ಣನಿಂದ ನೋಡಿದ್ದನ್ನು, ಕಿವಿಯಿಂದ ಕೇಳಿದ್ದನ್ನು, ಚರ್ಮ ಅನುಭವಿಸಿದ್ದನ್ನು ಸೂಕ್ಷ್ಮವಾಗಿ ಗಮನಿಸಿ, ವಿವರಗಳನ್ನು ಗುರುತಿಸಿ, ಅರ್ಥಮಾಡಿಕೊಳ್ಳಬೇಕು. ಇದಕ್ಕೆ ಬಹಳ ಮುಖ್ಯವಾಗಿ ಬೇಕಾದದ್ದು “ಏಕಾಗ್ರತೆ”. ಮನಸ್ಸು ಸ್ವಾಭಾವತಃ ಚಂಚಲ. ಒಂದೇ ಕ್ಷಣದಲ್ಲಿ ಹಲವಾರು ವಿಷಯಗಳನ್ನು ಅದು ಯೋಚಿಸಬಹುದು ಹಾಗೂ ಪ್ರಚೋದನೆಗಳಿಗೆ ಗಮನ ಕೊಡಬಹುದು. ಮಿದುಳಿಗೆ ಒಂದು ಸೆಕೆಂಡಿಗೆ ದೇಹದೊಳಗಿಂದ ಹಾಗೂ ಹೊರಗಿನಿಂದ ೧೫ ಸಾವಿರ ಮಾಹಿತಿಗಳು ಬಂದು ತಲುಪುತ್ತವೆ. ಒಂದು ವಿಷಯದ ಬಗ್ಗೆ ಮನಸ್ಸನ್ನು ಕೇಂದ್ರಿಕರಿಸುವ ಸಾಮರ್ಥ್ಯ ಹೆಚ್ಚಬೇಕು. ಹಾಗಾಗಬೇಕಾದರೆ ಏಕಾಗ್ರತೆಯನ್ನು ಭಂಗಗೊಳಿಸುವ ಅಂಶಗಳನ್ನು ನಿವಾರಿಸಿಕೊಳ್ಳಬೇಕು. ಏಕಾಗ್ರತೆಗೆ ಅಡ್ಡಿಯಾಗುವ ಸಾಮಾನ್ಯ ಅಂಶಗಳಾವುವು ನೋಡೋಣ.

) ಉಪವಾಸ ಅಥವಾ ಅತಿಯಾದ ಆಹಾರ ಸೇವನೆ: ಎಂಟು ಅಥವಾ ಹತ್ತು ಗಂಟೆಗಳ ಕಾಲ ಆಹಾರ ಸೇವಿಸದಿದ್ದಾಗ ರಕ್ತದಲ್ಲಿ ಗ್ಲೂಕೋಸ್‌ ಪ್ರಮಾಣ ಕಡಿಮೆಯಾಗುತ್ತದೆ. ಆಗ ಮಿದುಳಿನ ನರಕೋಶಗಳಿಗೆ ಗ್ಲೂಕೋಸ್‌ ಸರಬರಾಜು ಕಡಿಮೆಯಾಗಿ ಅವುಗಳ ಕಾರ್ಯಕ್ಷಮತೆ ತಗ್ಗುತ್ತದೆ. ಹಾಗೆಯೇ ಅತಿಯಾದ ಆಹಾರ ಸೇವಿಸಿದಾಗ ತೂಕಡಿಕೆ ಬಂದು, ಹೊಟ್ಟೆ ಭಾರವಾಗಿ, ಏಕಾಗ್ರತೆ ಕುಗ್ಗುತ್ತದೆ.

) ನಿದ್ದೆ ಮಾಡದಿರುವುದು: ಮೈಮನಸ್ಸುಗಳು ವಿರಮಿಸಲು ನಿದ್ರೆ ನೆರವಾಗುತ್ತದೆ. ನಿದ್ರೆ ಮಾಡದಿದ್ದರೆ ಪದೇ ಪದೇ ನಿದ್ರಾಭಂಗವಾಗುತ್ತಿದ್ದರೆ, ಮರುದಿನ ಮನಸ್ಸಿನ ಏಕಾಗ್ರತೆ ಕಡಿಮೆಯಾಗುತ್ತದೆ. ಬೇಗ ಆಯಾಸವಾಗುತ್ತದೆ.

) ಚಿಂತೆ ವ್ಯಥೆಗಳು: ಮನಸ್ಸು ಯಾವುದೇ ನೋವು, ನಿರಾಶೆ, ಮುರಿದ ಸಂಬಂಧ, ಈಡೇರದ ಆಸೆ, ಬಯಕೆಗಳು, ಅವಮಾನ, ಇತರರ ತಿರಸ್ಕಾರ, ಹಣಕಾಸಿನ ಅಡಚಣೆ, ನಕಾರಾತ್ಮಕ ಘಟನೆ ಮತ್ತು ಅನುಭವಗಳ ಬಗ್ಗೆ ಚಿಂತೆ ಮಾಡಿದರೆ ಸಹಜವಾಗಿ ಏಕಾಗ್ರತೆ ಹಾಳಾಗುತ್ತದೆ.

) ಭಾವೋದ್ವೇಗಗಳು: ಯಾವುದೇ ಕಾರಣದಿಂದ ಮನಸ್ಸಿಗೆ ದುಃಖ, ಭಯ, ಕೋಪ, ಮತ್ಸರಗಳುಂಟಾದರೆ ಭಾವೋದ್ವೇಗಕ್ಕೆ ನಾವು ಒಳಗಾಗುತ್ತೇವೆ. ಆ ಭಾವನೆ ಇರುವಷ್ಟು ಕಾಲ ನಮ್ಮ ಏಕಾಗ್ರತೆ, ಗ್ರಹಿಸುವ ಶಕ್ತಿ ಕುಂದುತ್ತದೆ.

) ವಿಷಯ, ವಸ್ತುವಿನಲ್ಲಿ ನಮಗೆ ಆಸಕ್ತಿ ಇಲ್ಲದಿರುವುದು: ವಿಷಯ, ವಸ್ತು ಆಸಕ್ತಿದಾಯಕವಾಗಿದ್ದರೆ, ಅದನ್ನು ಅರ್ಥಮಾಡಿಕೊಳ್ಳಬೇಕೆಂಬ ಕುತೂಹಲವಿದ್ದರೆ ಏಕಾಗ್ರತೆ ಇರುತ್ತದೆ. ಇಲ್ಲವಾದರೆ ವಿಷಯ ಅಥವಾ ವಸ್ತುವಿನಲ್ಲಿ ನಮಗೆ ಆಸಕ್ತಿ, ಕುತೂಹಲ ವಿಲ್ಲದಿದ್ದರೆ, ಅದನ್ನು ಕಲಿಯುವುದರಿಂದ ಅನುಕೂಲವಿಲ್ಲದಿದ್ದರೆ, ಲಾಭವಿಲ್ಲದಿದ್ದರೆ ಏಕಾಗ್ರತೆ ಸಹಜವಾಗಿ ಕುಂಠಿತವಾಗುತ್ತದೆ.

) ದೈಹಿಕ ಅನಾರೋಗ್ಯ: ರಕ್ತ ಕೊರೆ (ಅನಿಮಿಯಾ) ಪದೇ ಪದೇ ಸೋಂಕು ರೋಗಗಳು, ಹಲ್ಲು ಮತ್ತು ಒಸಡು ರೋಗಗಳು, ಕಿವಿಸೋರುವಿಕೆ ಇತ್ಯಾದಿ ದೈಹಿಕ ರೋಗಗಳು, ನೋವುಗಳು ಏಕಾಗ್ರತೆಯನ್ನು ಕದಡುತ್ತವೆ.

) ಆಕರ್ಷಣೆ ವಿಕರ್ಷಣೆಗಳು: ವಿಷಯವನ್ನು ಗ್ರಹಿಸುವಾಗ, ಮನಸ್ಸು ಆಂತರಿಕ ಅಥವಾ ಬಾಹ್ಯವಿಕರ್ಷಣೆಗೆ ಒಳಗಾದರೆ, ಏಕಾಗ್ರತೆ ಇರುವುದಿಲ್ಲ. ಲೈಂಗಿಕ ಆಸಕ್ತಿ, ಸ್ನೇಹಿತ, ಸ್ನೇಹಿತೆಯರ ಆಕರ್ಷಣೆ, ಮನರಂಜನಾ ಚಟುವಟಿಕೆ, ಟೀವಿ ಕಾರ್ಯಕ್ರಮಗಳು, ಆಟಗಳು, ಗದ್ದಲ್ಲ, ಇತರರ ಟೀಕೆಟಿಪ್ಪಣಿಗಳು, ನೋವು ಅಪಮಾನದ ಘಟನೆಗಳು ಈ ರೀತಿಯ ಅಕರ್ಷಣೆ ವಿಕರ್ಷಣೆಯನ್ನು ಒಡ್ಡುತ್ತವೆ.

) ಮಾನಸಿಕ ಅನಾರೋಗ್ಯ: ಖಿನ್ನತೆ, ತೀವ್ರವಾದ ಆತಂಕ, ಸ್ಕಿಜೋಫ್ರಿನಿಯಾ, ಮೇನಿಯಾ ರೋಗಗಳು ಏಕಾಗ್ರತೆಯನ್ನು  ಕದಡುತ್ತವೆ.

ಏಕಾಗ್ರತೆಯನ್ನು ಹೆಚ್ಚಿಸುವುದು ಹೇಗೆ:

 • ವಿಷಯವನ್ನು ಗ್ರಹಿಸಲು, ಅಧ್ಯಯನ ಮಾಡಲು ಒಂದು ನಿರ್ಧಿಷ್ಟ ಸಮಯ ಮತ್ತು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.
 • ಗಟ್ಟಿಯಾಗಿ ಓದಿ. ೨೦ ರಿಂದ ೩೦ ನಿಮಿಷಗಳ ಕಾಲ ಓದಿದ ನಂತರ ಪುಸ್ತಕ ಮುಚ್ಚಿಟ್ಟು ಓದಿದರೆ ಸಾರಾಂಶವನ್ನು ಬರೆಯಿರಿ ಅಥವಾ ನಿಮ್ಮ ಸಹಪಾಠಿಗೆ ಹೇಳಿ.
 • ಹಿನ್ನಲೆಯಲ್ಲಿ ಮಂದಸ್ವರದಲ್ಲಿ “ವಾದ್ಯ ಸಂಗೀತ”ವಿರಲಿ.
 • ಪ್ರತಿನಿತ್ಯ ಬೆಳಿಗ್ಗೆ ಹತ್ತು ನಿಮಿಷ, ರಾತ್ರಿ ಹತ್ತು ನಿಮಿಷ ಧೀರ್ಘವಾದ ಉಸಿರಾಟ ಮಾಡಿ. ಆರಾಮವಾಗಿ ಕಣ್ಣು ಮುಚ್ಚಿ ಕೂರಿ. ನಿಧಾನವಾಗಿ ಆಳವಾಗಿ ಉಸಿರೆಳೆದುಕೊಳ್ಳಿ. ಆನಂತರ ನಿಧಾನವಾಗಿ ಉಸಿರು ಬಿಡಿ. ಓಂ ಎನ್ನಿ.
 • ಮುದ್ರಿತ ಹಾಳೆ ತೆಗೆದುಕೊಳ್ಳಿ, ಇಂಗ್ಲೀಷ್‌ ಭಾಷೆಯದಾದರೆ ಅದರಲ್ಲಿ ಬರುವ ಪ್ರತಿ “ಎ” ಅಕ್ಷರವನ್ನು ಅಥವಾ “ಐ” ಅಕ್ಷರವನ್ನು ಕ್ರಾಸ್‌ ಮಾಡುತ್ತಾ ಹೋಗಿ. ಕನ್ನಡ ಭಾಷೆಯಾದ್ದದಾದರೆ ಯಾವುದೇ ಓ ಒಂದು ಅಕ್ಷರವನ್ನು ಆಯ್ಕೆ ಮಾಡಿ ಅದನ್ನು ಕ್ರಾಸ್‌ ಮಾಡುವ ಅಭ್ಯಾಸಮಾಡಿ.
 • ವೇಳೆಗೆ ಸರಿಯಾಗಿ, ಹಿತ ಮಿತವಾಗಿ ಆಹಾರ ಸೇವಿಸಿ ಹಾಗೆ ಒಂದು ನಿರ್ಧಿಷ್ಟ ಅವಧಿಗೆ ನಿದ್ರೆ ಮಾಡಿ.
 • ನಿಮ್ಮನ್ನು ಕಾಡುವ ಯಾವುದೇ ವಿಷಯ ಸಮಸ್ಯೆ, ಘಟನೆ, ಅನುಮಾನಗಳನ್ನು ಮನೆಯವರೊಂದಿಗೆ ಅಥವಾ ಗೆಳೆಯರೊಂದಿಗೆ ಚರ್ಚಿಸಿ ಪರಿಹಾರ ಕಂಡು ಹಿಡಿದುಕೊಳ್ಳಿ, ಚಿಂತೆ/ವ್ಯಥೆ ಪಡುವುದುದನ್ನು ಕಡ್ಡಾಯವಾಗಿ ನಿಲ್ಲಿಸಿ.
 • ಮನಸ್ಸಿಗೆ ಮುದಕೊಡುವ, ಸಂತೋಷ ಸಂಭ್ರಮವನ್ನು ಕೊಡುವ ಹವ್ಯಾಸಗಳನ್ನು ಹಮ್ಮಿಕೊಳ್ಳಿ. ಇದರಿಂದ ಬೇಸರ, ಏಕತಾನತೆ ಇರುವುದಿಲ್ಲ.

ಬಿ. ನೆನಪಿನ ಶಕ್ತಿ:

ಒಮ್ಮೆ ಕೇಳಿದ್ದು, ಒಮ್ಮೆ ಓದಿದ್ದು, ಒಮ್ಮೆ ಕಲಿತದ್ದು ಸಹಾ ನೆನಪಿನಲ್ಲಿರುವಂತಾದರೆ ಎಷ್ಟು ಚೆನ್ನ. ನಮ್ಮ ಪರೀಕ್ಷೆಗಳೆಲ್ಲ, “ನೆನಪು ಆಧಾರಿತವೇ.” ಪರಿಕ್ಷಾ ಹಾಲ್‌ನಲ್ಲಿ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೆನಪಿಗೆ ಬಂದರೆ ಒಳ್ಳೆಯ ಅಂಕಗಳನ್ನು ಗಳಿಸುವುದು ಸುಲಭ. ಆದರೆ ಬಹುತೇಕ ಜನರಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ನೆನಪು ಕಡಿಮೆ. ಇಂದು ಕಲಿತದ್ದು ನಾಳೆಗೆ ನೆಪಿನಲ್ಲಿರುವುದಿಲ್ಲ. ಬುದ್ದಿವಂತರೆನಸಿಕೊಳ್ಳಲು ಒಳ್ಳೆಯ ನೆನಪಿನ ಶಕ್ತಿ ಇರಬೇಕು. ನೆನಪಿನ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯುತ್ತದೆ.

 

(ಚಿತ್ರ ೫)

 

೧) ಗ್ರಹಿಸುವಿಕೆ (Registration)

೨) ಮುದ್ರಣ (Record) ಮತ್ತು

೩) ಸ್ಮರಣೆ (Recall).

ಗ್ರಹಿಸುವಿಕೆಯ ಹಂತದಲ್ಲೇ ಅನೇಕ ಎಡವಟ್ಟುಗಳಾಗಿ ಮುಖ್ಯವಾಗಿ ಏಕಾಗ್ರತೆಯ ಕೊರತೆಯುಂಟಾಗಿ ನೆನಪಿನ ಪ್ರಕ್ರಿಯೆ ಮೊಟಕುಗೊಳ್ಳುತ್ತದೆ. ಮಿದುಳಿನ ನರಕೋಶಗಳಲ್ಲಿ ಮಾಹಿತಿ ಮುದ್ರಣವಾಗಲು “ಅಸಿಟೈಲ್‌ ಕೋಲಿನ್‌ ” ಎಂಬ ನರವಾಹಕ ವಸ್ತು ಬೇಕಾಗುತ್ತದೆ. ಇದು ನಮ್ಮ ಆಹಾರದಲ್ಲಿನ ಪ್ರೋಟೀನ್‌ನಿಂದ, ದೇಹದಲ್ಲೇ ಉತ್ಪತ್ತಿಯಾಗುತ್ತದೆ. ನರ ತಂತುಗಳ ತುದಿಯಲ್ಲಿ ಸಂಗ್ರಹವಾಗಿರುತ್ತದೆ. ೪೫ ರಿಂದ ೬೦ ನಿಮಿಷಗಳ ಕಾಲ ಕೇಳಿದ ಮತ್ತು ಓದಿದ ವಿಷಯಗಳನ್ನು ಮುದ್ರಣ ಮಾಡುವಷ್ಟು ಸ್ಟಾಕ್‌ ಇರುತ್ತದೆ. ಆಮೇಲೆ, ಪ್ರಮಾಣ ತಗ್ಗಿ ಮುದ್ರಣ ಕಾರ್ಯವು ಕುಂಠಿತವಾಗುತ್ತದೆ. ಆದ್ದರಿಂದ ಗಂಟೆಗಟ್ಟಲೆ ಬಿಡುವು ಕೊಡದೇ ಕೇಳಿದರೆ, ಓದಿದರೆ ಪ್ರಯೋಜನವಿಲ್ಲ! ಕಲಿತದ್ದು ಬೇಕೆಂದಾಗ ಸ್ಮರಣೆಗೆ ಬರಬೇಕು. ಅದಕ್ಕೆ ಪ್ರಾಕ್ಟೀಸ್‌ ಆಗಬೇಕು.

Retention and Recall Capacity (ಕಲಿತದ್ದನ್ನು ಉಳಿಸಿಕೊಳ್ಳುವುದು ಮತ್ತು ಸ್ಮರಣೆ ಮಾಡಿಕೊಳ್ಳುವುದು) ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ, ಹಾಗೆಯೇ ವಿಷಯದಿಂದ ವಿಷಯಕ್ಕೆ ಭಿನ್ನವಾಗಿರುತ್ತದೆ. ಉದಾ. ಹತ್ತು ಸಾಲಿನ ಪದ್ಯವನ್ನು ಕಲಿತು ಪುನರುಚ್ಚಾರ ಮಾಡುವ ವ್ಯಕ್ತಿಗೆ ನಾಲ್ಕು ಸಾಲಿನ ಕೆಮಿಷ್ಟ್ರಿ ಸೂತ್ರವನ್ನು ಪುನರುಚ್ಛಾರ ಮಾಡಲಾಗುವುದಿಲ್ಲ. ಗಣಿತದ ಕ್ಲಿಷ್ಟ ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ವ್ಯಕ್ತಿಗೆ, ಮನೆಯವರು ತರಲು ಹೇಳಿದ ನಾಲ್ಕು ಸಾಮಾನುಗಳ ಹೆಸರುಗಳು ಮರೆತುಹೋಗಬಹುದು.

ನೆನಪು ಅಳಿಸಿಹೋಗುವ ವೇಗ (Memory attresion rate) : ಕಲಿತದ್ದು ನೆನಪಿನ ಉಗ್ರಾಣದಲ್ಲಿದ್ದು, ಅಲ್ಲೇ ಅಳಿಸಿಹೋಗುವುದು ಅಥವಾ ಸ್ಮರಣೆಗೆ ಬಾರದಿರಬಹದು ಈ ಅಳಿಸಿಹೋಗುವ ಕ್ರಿಯೆ ಒಂದು ದಿನದಲ್ಲಾಗಬಹುದು ಅಥವಾ ಹಲವು ದಿನಗಳು/ವಾರಗಳು/ ತಿಂಗಳುಗಳ ನಂತರ ಆಗಬಹುದು. ಇದೂ ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ವಿಷಯದಿಂದ ವಿಷಯಕ್ಕೆ ಭಿನ್ನವಾಗಿರುತ್ತದೆ. ಅಗತ್ಯ ವಿಷಯಗಳು, ಕೌಶಲಗಳು, ಅಳಸಿಹೋಗದಂತೆ ಅವನ್ನು ಮತ್ತೆ ಮತ್ತೆ ಅವಧಿಗೊಂದಾವರ್ತಿ ಪುನರ್ಮನನ ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿ ಪ್ರತಿಯೊಂದು ವಿಷಯ ಅಥವಾ ಕೌಶಲ ಎಷ್ಟು ವೇಗದಲ್ಲಿ ಮರೆತು ಹೋಗುತ್ತದೆ ಎಂಬುದನ್ನು ತಿಳಿದು, ಆಗಾಗ ಪುನರ್ಮನನ ಮಾಡಬೇಕು.

ಯಾವ ವಿಚಾರ ಮರೆತು ಹೋಗುತ್ತದೆ, ಏಕೆ ಮರೆತು ಹೋಗುತ್ತದೆ ಎಂಬುದು ಅರ್ಥವಾಗುವುದಿಲ್ಲ. ಕೆಲವು ವಿಚಾರ ವಿಷಯಗಳನ್ನು ಅನುಭವಗಳನ್ನು ನಾವು ಮರೆಯಬೇಕೆಂದರೂ ಮರೆಯಲಾಗುವುದಿಲ್ಲ. ಕೆಲವನ್ನು ಮರೆಯಬಾರದೆಂದು ನಿರ್ಧಾರ ಮಾಡಿದರೂ ಮರೆಯುತ್ತೇವೆ. ಏಕೆ?

ಮರೆತುಹೋಗಲು ಕಾರಣಾಂಶಗಳು:

 • ಆಸಕ್ತಿ ಇಲ್ಲದ, ಕುತೂಹಲವನ್ನು ಹುಟ್ಟಿಸದ ವಿಚಾರಗಳು.
 • ಲಾಭವಿಲ್ಲದ ವಿಷಯ, ಕೌಶಲಗಳು.
 • ಏಕಾಗ್ರತೆ ಇಲ್ಲದೆ, ಕಲಿತ ವಿಷಯಗಳು, ಅನ್ಯಮನಸ್ಕರಾಗಿ ಕೇಳಿದ ಸಂಗತಿಗಳು.
 • ಅರ್ಥವಾಗದ, ಕ್ಲಿಷ್ಟ ವಿಷಯಗಳು.
 • ಮಾನಸಿಕ ಒತ್ತಡ, ಭಾವೋದ್ವೇಗಗಳು.
 • ದೈಹಿಕ ಆಯಾಸ, ನೋವು ಅಸ್ವಸ್ಥತೆ.
 • ಕಲಿತದ್ದನ್ನು ಮನನ ಮಾಡದಿರುವುದು.
 • ಆಗಾಗ್ಗೆ ನೆನೆಸಿಕೊಳ್ಳದಿರುವುದು.

ನೆನಪಿನ ಶಕ್ತಿ ಹೆಚ್ಚಿಸುವ ವಿಧಾನಗಳು:

 • ಕಲಿಯಬೇಕಾದ ವಿಷಯ/ ವಿಚಾರಗಳನ್ನು ಆಸಕ್ತಿಯಿಂದ ಪ್ರೀತಿಯಿಂದ ಕೇಳುವುದು, ಓದುವುದು.
 • ಕೇಳಿದ್ದನ್ನು, ಓದಿದ್ದನ್ನು ಅರ್ಥಮಾಡಿಕೊಳ್ಳುವುದು.
 • ಅರ್ಥಮಾಡಿಕೊಂಡಿದ್ದನ್ನು ಬರೆಯುವುದು, ಇತರರೊಂದಿಗೆ ಚರ್ಚಿಸುವುದು ಅಥವಾ ಇತರರಿಗೆ ಕಲಿಸಲು ಪ್ರಯತ್ನಿಸುವುದು.
 • ವಿಷಯದ ಬಗ್ಗೆ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯವುದು.
 • ಕೇವಲ ಧ್ವನಿರೂಪದ ಮಾಹಿತಗಿಂತ, ದೃಶ್ಯರೂಪದ ಮಾಹಿತಿ ಹೆಚ್ಚುಕಾಲ ನೆನಪಿನಲ್ಲಿರುತ್ತದೆ. ಧ್ವನಿ ದೃಶ್ಯ ರೂಪಗಳ ಮಾಹಿತಿ ಇನ್ನಷ್ಟು ಕಾಲ ನೆನಪಿನಲ್ಲಿ ಉಳಿಯುತ್ತದೆ.

ಭಾವನೆಗಳೊಂದಿಗೆ ಮಿಶ್ರಣವಾದ ಮಾಹಿತಿ, ಜ್ಞಾನ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ. ಆದ್ದರಿಂದಲೇ ಸಿನೇಮಾ ಕಥೆ ಬಹಳ ಕಾಲ ನೆನಪಿನಲ್ಲಿ ಉಳಿದರೆ, ಪಠ್ಯವಿಷಯ ಸ್ವಲ್ಪಕಾಲವೇ ಉಳಿಯುತ್ತದೆ.

ಕಲಿತದ್ದನ್ನು ನೆನಪಿನಲ್ಲಿ ಉಳಿಯಬೇಕಾದ್ದನ್ನು ಆಗಾಗ ಮೆಲಕು ಹಾಕಬೇಕು, ಬರೆಯಬೇಕು. ಇತರರೊಂದಿಗೆ ಹೇಳಿ ಹಂಚಿಕೊಳ್ಳಬೇಕು.

ಸಿ. ಆಲೋಚನೆ ವಿವೇಚನೆ ವಿಶ್ಲೇಷಣಾ ಸಾಮಾರ್ಥ್ಯ:

ಇವು ಬುದ್ಧಿವಂತಿಕೆಯ ಪ್ರಮುಖ ಲಕ್ಷಣಗಳು. ಯವುದೇ ವಿಷಯ, ಸನ್ನಿವೇಶ, ಸಮಸ್ಯೆಯನ್ನು ವಸ್ತುನಿಷ್ಟವಾಗಿ ವಿಶ್ಲೇಷಣೆ ಮಾಡಬೇಕು. ಕಾರ್ಯಾಕಾರಣ ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕು. ಗೋಚರ ಮತ್ತು ಅಗೋಚರ ಅಂಶಗಳನ್ನು ಗುರುತಿಸಬೇಕು. ನಿರ್ಧಾರ ಕೈಗೊಳ್ಳುವಾಗ, ಯಾವುದು ಸರಿ, ಯಾವುದು ತಪ್ಪು ಯಾವುದು ಎಷ್ಟು ಅನುಕೂಲಕರ ಎಷ್ಟು ಅನಾನುಕೂಲಕರ ಎಂಬುದನ್ನು ಚಿಂತಿಸಬೇಕು. ಯಾವುದೇ ಕ್ರಿಯೆ ಮಾಡುವಾಗ ಪ್ರತಿಕ್ರಿಯೆ ತೋರಿಸುವಾಗ, ಯೋಚಿಸಿ ಯುಕ್ತವಾದುದನ್ನೇ ಮಾಡಬೇಕು. ತರ್ಕಬದ್ಧವಾದ ಆಲೋಚನೆ, ಅನುಷ್ಠಾನಕ್ಕೆ ತರಬಹುದಾದದಂತಹ, ಬಹುಜನ ಒಪ್ಪುವಂತಹ ಪರಿಹಾರಗಳು, ಸೋಲು ಗೆಲವುಗಳನ್ನು ಪರಿಣಾಮಕಾರಿಯಾಗಿ ಸಮರ್ಥಿಸಿಕೊಳ್ಳುವ ವಾದ ವೈಖರಿ ಇರಬೇಕು. ಈ ಕೌಶಲವನ್ನು ನಿರಂತರ ಸಾಧನೆಯಿಂದ ಕರಗತ ಮಾಡಿಕೊಳ್ಳಬೇಕು. ಬಾಲ್ಯದಿಂದಲೇ ಶಾಲೆ ಮತ್ತು ಕಾಲೇಜು ಶಿಕ್ಷಣ ಅವಧಿಯಲ್ಲಿ ಪ್ರತಿಯೊಂದು ಮಗುವಿಗೆ ಯೋಚಿಸಿಲು ವಿಶ್ಲೇಷಿಸಲು, ನಿರ್ಧಾರವನ್ನು ಕೈಗೊಳ್ಳಲು, ಸಮಸ್ಯೆ ಪರಿಹಾರಗಳ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡಬೇಕು. ವೈಯಕ್ತಿಕ, ಕೌಟುಂಬಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮಸ್ಯೆ -ವಿಚಾರಗಳ ಮನನ ಮಾಡಿ, ಸರಿ ತೀರ್ಮಾನಗಳನ್ನು ಕೈಗೊಳ್ಳಲು ಉತ್ತೇಜನವನ್ನು ನೀಡಬೇಕು.

ಡಿ. ಸಂವಹನಾ ಸಾಮರ್ಥ್ಯ:

ಪ್ರತಿಯೊಬ್ಬ ವ್ಯಕ್ತಿ ತನ್ನ ಅನಿಸಿಕೆ, ಅಭಿಪ್ರಾಯ, ಆಸೆ, ನಿರೀಕ್ಷೆಗಳನ್ನು, ಭಾವನೆಗಳನ್ನು ನಿರ್ಧಾರಗಳನ್ನು ಇತರರಿಗೆ ಪರಿಣಾಮಕಾರಿಯಾಗಿ, ಅರ್ಥವಾಗುವ ಹಾಗೆ ಹೇಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಹಾಗೇ ಇತರರು ಹೇಳಿದ್ದನ್ನು ಅಭಿಪ್ರಾಯಗಳನ್ನು ಅವರ ಸ್ಥಾನದಲ್ಲಿಯೇ ನಿಂತು ಅರ್ಥಮಾಡಿಕೊಂಡು ಸ್ಪಂದಿಸಬೇಕು. ಇದೇ ಸಂವಹನ ಕ್ರಿಯೆ. ಈ ಸಂವಹನ ಕ್ರಿಯೆಯಲ್ಲಿ ಭಾಷೆ ಪ್ರಮುಖ ಪಾತ್ರವಹಿಸುತ್ತದೆ. ಸರಿಯಾದ ಖಚಿತವಾದ ಅರ್ಥಕೊಡುವ ಪದಗಳು, ವಾಕ್ಯಗಳು, ಅವುಗಳನ್ನು ಹೇಳುವಾಗ ಧ್ವನಿಯ ಏರಿಳಿತ, ಬರವಣಿಗೆಯ ರೂಪದಲ್ಲಿ ಸಂವಹನೆ ಮಾಡುವಾಗ, ಆಕರ್ಷಕ ರೀತಿಯಲ್ಲಿ, ಸ್ಪಷ್ಟವಾದ ವಿಧಾನದಲ್ಲಿ ಭಾಷೆಯನ್ನು ಬಳಸಬೇಕಾಗುತ್ತದೆ.

ಹೀಗಾಗಿ ಉತ್ತಮ ಸಂವಹನಕ್ಕೆ ಉತ್ತಮ ಭಾಷಾ ಸಾಮರ್ಥ್ಯವಿರಬೇಕು. ಮಾತೃಭಾಷೆ ಇರಲಿ, ಮತ್ತೊಂದು ಭಾಷೆ ಇರಲಿ, ಸಂವಹನಕ್ಕೆ ಅದನ್ನು ಸಮರ್ಥವಾಗಿ ಬಳಸುವ ಕೌಶಲವಿರಬೇಕು. ಇಲ್ಲದಿದ್ದರೆ, ನಾವು ಹೇಳಿದ್ದು ಇತರರಿಗೆ ಅರ್ಥವಾಗುವಿದಿಲ್ಲ. ಮನವರಿಕೆಯಾಗುವುದಿಲ್ಲ. ಅಪಾರ್ಥಗಳಾಗಿ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಸಂಬಂಧಗಳು ಹಾಳಾಗುತ್ತವೆ. ಆದ್ದರಿಂದಲೇ ಮಾತಿನ ಮಹತ್ವನ್ನು ವಿವರಿಸುವ ಅನೇಕ ನಾಣ್ನುಡಿಗಳು ಚಾಲ್ತಿಯಲ್ಲಿವೆ. ಮಾತೇ ಮಾಣಿಕ್ಯ, ಮಾತು ಬಲ್ಲವನಿಗೆ ಜಗಳವಿಲ್ಲ, ಮಾತು ಬಲ್ಲವನು ಬರಗಾಲದಲ್ಲೂ ಬದುಕಬಲ್ಲ, ಮಾತೇ ಮುತ್ತು, ಮಾತೇ ಮೃತ್ಯು ಇತ್ಯಾದಿ, ಚಿಕ್ಕಂದಿನಿಂದಲೇ ಮಕ್ಕಳಿಗೆ, ಮಾತಾಡುವ, ಬರೆಯುವ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಅಭಿವ್ಯಕ್ತಗೊಳಿಸುವ ತರಬೇತಿ ನೀಡಬೇಕು. ಕಥೆ ಕೇಳುವದು, ಕಥೆ ಹೇಳುವುದು, ಲೇಖನ ಬರೆಯುವುದು, ಚರ್ಚಾ ಸ್ಪರ್ಧೆ ಸಂವಾದ ಗೋಷ್ಠಿಗಳಲ್ಲಿ ಭಾಗವಹಿಸುವುದು, ಆಶುಭಾಷಣ ಮಾಡುವುದು. ಸಭೆ ಸಮಾರಂಭಗಳಲ್ಲಿ ಸ್ವಾಗತ ಭಾಷಣ, ವಂದನಾರ್ಪಣೆಗಳನ್ನು ಮಾಡುವುದು ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಜೊತೆಗೆ ಕಥೆ, ಕವನ, ಪತ್ರಿಕೆಗಳ ವಾಚಕರ ವಾಣಿಗೆ ಪತ್ರಗಳನ್ನು ಬರೆಯಬೇಕು. ಪತ್ರಿಕೆ ನಿಯತ ಕಾಲಿಕೆಗಳು, ಕಥೆ, ಕಾದಂಬರಿ, ಕಾವ್ಯಗಳನ್ನು ಓದಬೇಕು. ಇದರಿಂದ ವ್ಯಕ್ತಿಯ ಭಾಷಾ ಸಾಮರ್ಥ್ಯ ಮತ್ತು ಸಂವಹನ ಸಾಮರ್ಥ್ಯ ಹೆಚ್ಚುತ್ತದೆ.

. ಲೆಕ್ಕಾಚಾರ ಗಣಿತ ಸಾಮರ್ಥ್ಯ:

ಅಂಕಿ ಅಂಶಗಳು, ಕೂಡುವುದು, ಕಳೆಯುವುದು, ಗುಣಾಕಾರ, ಭಾಗಾಕಾರ, ಹಣದ ಲೆಕ್ಕಾಚಾರ ಚೆನ್ನಾಗಿ ಬಂದರೆ, ಬುದ್ಧಿವಂತ ಎಂದು ಬಿರುದು ಪಡೆಯುವುದು ಸುಲಭ, ಗಣಿತ ಸಾಕಷ್ಟು ಮಂದಿಗೆ ಕಷ್ಟಕರವಾದ ವಿಚಾರ. ಪ್ರಾರಂಭದ ಶಿಕ್ಷಣದಿಂದಲೇ, ಗಣಿತವನ್ನು ಸುಲಭವಾಗಿ ಕಲಿಸುವ ಏರ್ಪಾಟು ಮಾಡಬೇಕು. ಗಣಿತ ಕಷ್ಟ/ ತಲೆ ನೋವು ಎಂಬ ನಕರಾತ್ಮಕ ಯೋಚನೆ ಮಕ್ಕಳ ಮನಸ್ಸಿನಲ್ಲಿ ಹುಟ್ಟದಂತೆ ಎಚ್ಚರಿಸಬೇಕು. ಗಣಿತ ಅತ್ಯಂತ ತರ್ಕ ಬದ್ಧವಾದ ವಿಷಯ. ತರ್ಕವನ್ನು ಅನುಸರಿಸಿದರೆ ಗಣಿತದ ಸಮಸ್ಯೆಗಳನ್ನು ಬಿಡಿಸುವುದು ಸುಲಭವಾಗುತ್ತದೆ. ವಿನೋದ ಗಣಿತ, ಜನರಂಜನಾ ಗಣಿತದ ಉದಾಹರಣೆಗಳೊಂದಿಗೆ, ಶಿಕ್ಷಕರು ಗಣಿತದ ಬಗ್ಗೆ ಮಕ್ಕಳ ಮನಸ್ಸಿನಲ್ಲಿ ಸಕಾರಾತ್ಮಕ ಧೋರಣೆಯನ್ನು ಬೆಳಸಬೇಕು. ಗಣಿತದ ಸಮಸ್ಯೆಗಳನ್ನು ಬಿಡಿಸುವ ಸ್ಪರ್ಧೆಗಳನ್ನು ಏರ್ಪಡಿಸಬೇಕು.

ಎಫ್. ಹಣಕಾಸು ವ್ಯವಹಾರಿಕ ಜಾಣ್ಮೆ:

ಬದುಕಲು, ಬದುಕಿನಲ್ಲಿ ಯಶಸ್ಸು ಮತ್ತು ನೆಮ್ಮದಿಯನ್ನು ಕಾಣಲು ಹಣ ಪ್ರಮುಖ ಪಾತ್ರವಹಿಸುತ್ತದೆ. ಹಣವನ್ನು ಯೋಗ್ಯ ಮಾರ್ಗದಲ್ಲಿ ಸಂಪಾದಿಸುವದು ಹಾಗೂ ಅದನ್ನು ವಿವೇಚನೆಯಿಂದ, ವಿಚಕ್ಷಣೆಯಿಂದ ಖರ್ಚು ಮಾಡುವುದು, ಗಳಿಸಿದ ಹಣ ವೃದ್ದಿಯಾಗುವಂತೆ ಮಾಡುವುದು ವ್ಯವಹಾರಿಕ ಜಗತ್ತಿನ “ಜಾಣ್ಮೆ” ಎನಿಸಿಕೊಳ್ಳುತ್ತದೆ. ಕೆಲವು ಉದ್ಯೋಗಗಳು ನಿಯಮಿತವಾದ ಆದಾಯವನ್ನು ತರುತ್ತವೆ. ಕೆಲವು ಉದ್ಯೋಗಗಳು (ಉದಾಃ ವ್ಯಾಪಾರ, ಮದ್ಯವರ್ತಿಯಾಗಿ ಕೆಲಸ ಮಾಡುವುದು, ಯಾವುದೋ ಸಂಸ್ಥೆಯ ಪ್ರತಿನಿಧಿಯಾಗಿ ಕೆಲಸ ಮಾಡುವುದು, ಜನ ಬಳಕೆಯ ವಸ್ತುಗಳನ್ನು ಉತ್ಪಾದಿಸುವದು, ಸೇವಾಕ್ಷೇತ್ರ) ಅನಿಶ್ಚಿತ ಆದಾಯವನ್ನು ತರುವಂಥವು. ಈ ಕ್ಷೇತ್ರಗಳಲ್ಲಿ ನಿರಂತರವಾಗಿ ಹೆಚ್ಚೆಚ್ಚು ಹಣಗಳಿಸುವುದು ಈಗ ಬುದ್ಧಿವಂತಿಕೆಯ ಪ್ರತೀಕವಾಗುತ್ತದೆ. ಚೆನ್ನಾಗಿ ಮಾತನಾಡುವ ಕಲೆ, ಮಾರುಕಟ್ಟೆಯನ್ನು ಜನರ ಮನಸ್ಸನ್ನು ಅಧ್ಯಯನ ಮಾಡಿ, ಅದಕ್ಕೆ ತಕ್ಕಂತೆ ನಡೆಯುವುದು, ನಿರ್ಧಾರವನ್ನು ಕೈಗೊಳ್ಳುವುದು ಸೀಮಿತ ಬಂಡವಾಳದಲ್ಲಿ ಅಧಿಕ ಲಾಭವನ್ನು ಗಳಿಸುವುದು ಈ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ದಿನನಿತ್ಯದ ಅಗತ್ಯ ವಸ್ತುಗಳು ವಿಶೇಷ ವಸ್ತುಗಳ ಖರೀದಿ, ಸಮಾಜದ ವಿವಿಧ ಬಗೆಯ ಜನರು, ಸಂಸ್ಥೆಗಳೊಡನೆ ಸಂಪರ್ಕ, ವ್ಯವಹಾರ ನಡೆಸುವ ಕೌಶಲಗಳನ್ನು ಕಲಿಯಬೇಕು.

ಹೀಗೆ ಬುದ್ಧಿವಂತಿಕೆಯ ಹಲವು ವಿಶೇಷಗಳನ್ನು ಗರಿಷ್ಟಮಟ್ಟಕ್ಕೆ ಅಭಿವೃದ್ಧಿಗೊಳಸಿಕೊಳ್ಳುವುದರ ಜೊತೆಗೆ, ಬುದ್ಧಿವಂತಿಕೆಯನ್ನು ಸ್ವಕ್ಷೇಮಕ್ಕೆ ಬಳಸಿಕೊಳ್ಳುವುದರ ಜೊತೆಗೆ, ಇತರರು ಸಮಾಜದ ಒಳಿತಿಗೂ, ಅಭಿವೃದ್ಧಿಗೂ ಬಳಸುವ ನೈತಿಕ ಪ್ರಜ್ಞೆಯನ್ನೂ ಬೆಳೆಸಿಕೊಳ್ಳಬೇಕು. ಬುದ್ಧಿವಂತಿಕೆಯನ್ನು ಇತರರಿಗೆ ಮೋಸ, ವಂಚನೆ, ಕೆಡಕು ಮಾಡಲು, ಸಮಾಜ ವ್ಯವಸ್ಥೆಯನ್ನು ಶೋಷಿಸಲು, ನಾಶಮಾಡಲು ಖಂಡಿತ ಉಪಯೋಗಿಸಬಾರದು. ಬುದ್ಧಿವಂತಿಕೆಯನ್ನು ಕಟ್ಟುವ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬೇಕೇ ಹೊರತು, ಕೆಡಹುವ, ವಿನಾಶಕಾರಿ ಕೆಲಸಗಳಿಗೆ ಉಪಯೋಗಿಸಬಾರದು. ಮೌಲ್ಯಗಳಿಲ್ಲದ ಬುದ್ಧಿವಂತರು ಕುಟುಂಬ, ಸಮಾಜದ, ರಾಷ್ಟ್ರದ ಅವನತಿಗೆ ಕಾರಣರಾಗುತ್ತಾರೆ. ಮೌಲ್ಯಗಳಿರುವ ಬುದ್ಧಿವಂತರು ಎಲ್ಲರ ಮತ್ತು ವಿಶ್ವದ ನೆಮ್ಮದಿಗೆ ಪ್ರೇರಣೆ ನೀಡುತ್ತಾರೆ.