ನಾವು ಮಾತನಾಡುವಾಗ ಕೆಲವು ಶಬ್ದಗಳನ್ನು ಬಿಡಿಬಿಡಿಯಾಗಿ ಹೇಳುವುದಿಲ್ಲ.  ಊರು ಊರು” ಎಂಬೆರಡು ಶಬ್ದಗಳನ್ನು ಊರೂರು ಎಂದು ಕೂಡಿಸಿಯೇ ಮಾತನಾಡುತ್ತೇವೆ.  ಅವನು + ಅಲ್ಲಿ ಎಂಬೆರಡು ಶಬ್ದ ರೂಪಗಳನ್ನು ಅವನಲ್ಲಿ ಎಂದು ಕೂಡಿಸಿ ಹೇಳುತ್ತೇವೆ.  ಮೇಲೆ ಹೇಳಿರುವ ಊರು + ಊರು ಎಂಬ ಶಬ್ದಗಳನ್ನೂ, ಅವನು + ಅಲ್ಲಿ ಎಂಬ ಪ್ರಕೃತಿ ಪ್ರತ್ಯಯಗಳನ್ನೂ ಕೂಡಿಸಿಯೇ ಹೇಳುತ್ತೇವೆ.  ಅಂದರೆ, ಅವನ್ನು ಸಂಧಿಸಿಯೇ ಹೇಳುತ್ತೇವೆ.  ಒಮ್ಮೊಮ್ಮೆ ಶಬ್ದ ಶಬ್ದಗಳನ್ನು ಬಿಡಿಬಿಡಿಸಿ ಹೇಳಿದರೂ, ಪಕೃತಿ ಪ್ರತ್ಯಯಗಳನ್ನು ಮಾತ್ರ ಸಂಧಿಸಿಯೇ ಹೇಳುತ್ತೇವೆ.  ಅವನ್ನು ಬಿಡಿಬಿಡಿಯಾಗಿ ಹೇಳಲಾಗುವುದೇ ಇಲ್ಲ.   ಈ ಕೆಳಗೆ ನೋಡಿ:-

ಪ್ರಕೃತಿ + ಪ್ರತ್ಯಯ = ಕೂಡಿಸಿದ ರೂಪ
ಆಡು + ಇಸು = ಆಡಿಸು
ಮರ + ಅನ್ನು = ಮರವನ್ನು
ಪುಸ್ತಕ + ಇಂದ = ಪುಸ್ತಕದಿಂದ
ದೇವರು + ಇಗೆ = ದೇವರಿಗೆ

ಪದಗಳನ್ನು ಕೂಡಿಸಿಯಾದರೂ ಹೇಳಬಹುದು ಅಥವಾ ಬಿಡಿಬಿಡಿಯಾಗಿಯೂ ಹೇಳಬಹುದು.

ಪದ + ಪದ = ಕೂಡಿಸಿದ ರೂಪ ಕೂಡಿಸದ ರೂಪ
ಅವನ + ಅಂಗಡಿ = ಅವನಂಗಡಿ ಅವನ ಅಂಗಡಿ
ಅವನಿಗೆ + ಇಲ್ಲ = ಅವನಿಗಿಲ್ಲ ಅವನಿಗೆ ಇಲ್ಲ
ಹಣ್ಣಿನ + ಅಂಗಡಿ = ಹಣ್ಣಿನಂಗಡಿ ಹಣ್ಣಿನ ಅಂಗಡಿ
ಪದ + ಪದ = ಕೂಡಿಸಿದ ರೂಪ ಕೂಡಿಸದ ರೂಪ
ಅವನ + ಅಂಗಡಿ = ಅವನಂಗಡಿ ಅವನ ಅಂಗಡಿ
ಅವನಿಗೆ + ಇಲ್ಲ = ಅವನಿಗಿಲ್ಲ ಅವನಿಗೆ ಇಲ್ಲ
ಹಣ್ಣಿನ + ಅಂಗಡಿ = ಹಣ್ಣಿನಂಗಡಿ ಹಣ್ಣಿನ ಅಂಗಡಿ

ಮೇಲೆ ಹೇಳಿರುವ ಅನೇಕ ಉದಾಹರಣೆಗಳಲ್ಲಿ ಪ್ರಕೃತಿ ಪ್ರತ್ಯಯಗಳನ್ನು ಸೇರಿಸುವಲ್ಲಿ ಅವನ್ನು ಕೂಡಿಸಿಯೇ ಹೇಳುತ್ತೇವಲ್ಲದೆ ಬಿಡಿಬಿಡಿಸಿ ಹೇಳಲು ಬರುವಂತೆಯೇ ಇಲ್ಲ.  ಆಡು ಇಸು ಎಂದು ಯಾರು ಹೇಳುವುದಿಲ್ಲ.  ಪುಸ್ತಕ ಅನ್ನು ತಾ ಎನ್ನಬಾರದು.  ಆಡಿಸು ಪುಸ್ತಕವನ್ನು ಹೀಗೆ ಕೂಡಿಸಿಯೇ ಹೇಳಬೇಕು.  ಆಡಿಸು ಎಂಬಲ್ಲಿ (ಆಡು+ಇಸು) ಉ+ಇ ಸ್ವರಗಳು ಸಂಧಿಸುತ್ತವೆ.  ಪುಸ್ತಕ+ಅನ್ನು ಎಂಬಲ್ಲಿ ಅ+ಅ ಸ್ವರಗಳು ಪರಸ್ಪರ ಸಂಧಿಸುತ್ತವೆ.  ಅವೆರಡೂ ಸಂಧಿಸುವಾಗ ಮೊದಲಿನ ಸ್ವರಗಳು ಎರಡೂ ಕಡೆ ಹೋಗುತ್ತವೆ.  ಈ ಸಂಧಿಸುವಿಕೆಯು ಕಾಲವಿಳಂಬವಿಲ್ಲದೆ ಹಾಗೆ ಆಗುತ್ತದೆ.  ಇವು ಪ್ರಕೃತಿ ಪ್ರತ್ಯಯಗಳ ಸಂಧಿಸುವಿಕೆಯನ್ನು ತಿಳಿಸುವ ಉದಾಹರಣೆಗಳು.

ಅವನ ಅಂಗಡಿ ಎಂಬ ಪದಗಳನ್ನು ಬೇಕಾದರೆ ಸಂಧಿಯಾಗುವಂತೆ ಅವನಂಗಡಿ ಎಂದಾದರೂ ಹೇಳಬಹುದು; ಅಥವಾ ಕಾಲವನ್ನು ಸ್ವಲ್ಪ ವಿಳಂಬ ಮಾಡಿ ಅವನ ಅಂಗಡಿ ಎಂದಾದರೂ ಹೇಳಬಹುದು.  ಅದು ಹೇಳುವವನ ಇಚ್ಛೆಯನ್ನು ಅವಲಂಬಿಸಿರುತ್ತದೆ.  ಅವನಂಗಡಿ ಎನ್ನುವಾಗ (ಅವನ+ಅಂಗಡಿ) ಇಲ್ಲಿ ಸಂಧಿಸುವ ಸ್ವರಗಳು ಅ+ಅ ಎಂಬುವು.  ಇವುಗಳಲ್ಲಿ ಮೊದಲಿನ ಅಕಾರವನ್ನು ತೆಗೆದುಹಾಕುತ್ತೇವೆ.  ಆದ್ದರಿಂದ ಎರಡು ಅಕ್ಷರಗಳು ಸಂಧಿಸುವಿಕೆಯೇ ಸಂಧಿಯೆನಿಸುವುದೆಂದಹಾಗಾಯಿತು.  ಇದರ ಸೂತ್ರವನ್ನು ಹೀಗೆ ಹೇಳಬಹುದು:-

(೧೫) ಎರಡು ವರ್ಣಗಳು (ಅಕ್ಷರಗಳು) ಕಾಲವಿಳಂಬವಿಲ್ಲದಂತೆ ಸೇರುವುದೇ ಸಂಧಿಯೆನಿಸುವುದು.

(i) ಸ್ವರದ ಮುಂದೆ ಸ್ವರ ಬಂದು ಹೀಗೆ ಸಂಧಿಯಾದರೆ ಸ್ವರಸಂಧಿಯೆನ್ನುತ್ತೇವೆ.

(ii) ಸ್ವರದ ಮುಂದೆ ವ್ಯಂಜನ ಬಂದು ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾದರೆ ವ್ಯಂಜನಸಂಧಿಯೆನ್ನುತ್ತೇವೆ.

(iii) ಹೀಗೆ ಸಂಧಿಯಾಗುವಾಗ ಹಲಕೆಲವು ವ್ಯತ್ಯಾಸಗಳು ಆ ಸಂಧಿಸಿದ ಅಕ್ಷರಗಳಲ್ಲಿ ಉಂಟಾಗುವುವು. ಅವನ್ನೇ ಸಂಧಿಕಾರ‍್ಯಗಳು ಎನ್ನುತ್ತೇವೆ.  ಅವುಗಳನ್ನು ಮುಂದೆ ತಿಳಿಯೋಣ.