ಇದುವರೆಗೆ ಕನ್ನಡದ ಸಂಧಿಗಳಾದ ಲೋಪ, ಆಗಮ, ಆದೇಶ ಸಂಧಿಗಳ ವಿಚಾರವಾಗಿ ತಿಳಿದಿರಿ.  ಸ್ವರದ ಮುಂದೆ ಸ್ವರ ಬಂದರೆ ಲೋಪ ಅಥವಾ ಆಗಮಗಳಲ್ಲಿ ಯಾವುದಾದ ರೊಂದು ಸಂಧಿಯಾಗಬೇಕು ಎಂದು ಹಿಂದೆ ಹೇಳಲಾಯಿತು.  ಆದರೆ ಈ ಕೆಳಗಿನ ಕೆಲವು ಉದಾಹರಣೆ ನೋಡಿರಿ:-

ಅಹಹಾ + ಎಷ್ಟು ಚೆನ್ನಾಗಿದೆ?

ಅಯ್ಯೋ + ಇದೇನು?

ಓಹೋ + ಇದೇನು?

ಓಹೋ + ಅವನು ಬಂದನೇ?

ಅಕ್ಕಾ + ಇತ್ತ ಬಾ

ಮೇಲಿನ ನಾಲ್ಕು ವಾಕ್ಯಗಳನ್ನು ನೋಡಿರಿ. ಅಹಹಾ + ಎಷ್ಟು ಚೆನ್ನಾಗಿದೆ, ಆ ಕಾರಕ್ಕೆ (ಹ್ ವ್ಯಂಜನದ ಮುಂದಿನ ಆಕಾರಕ್ಕೆ) ಎ ಕಾರ ಪರವಾಗಿದೆ (ಎದುರಿಗೆ ಬಂದಿದೆ).  ಹಿಂದೆ ಹೇಳಿದ ನಿಯಮದ ಪ್ರಕಾರ ಇಲ್ಲಿ ಯಕಾರಾಗಮವಾಗಬೇಕಾಗಿತ್ತಲ್ಲವೆ? ಅದರಂತೆ, ಅಯ್ಯೋ + ಇದೇನು ಎಂಬಲ್ಲಿ ಓ ಕಾರದ ಮುಂದೆ ಇ ಕಾರ ಬಂದಿದೆ.  ಓಹೋ + ಇದೇನು ಎಂಬಲ್ಲಿ ಓ ಕಾರದ ಮುಂದೆ ಇ ಕಾರ ಬಂದಿದೆ, ಅಕ್ಕಾ + ಇತ್ತ ಎಂಬಲ್ಲಿಯೂ ಆ ಕಾರದ ಮುಂದೆ ಇ ಕಾರ ಬಂದಿದೆ.  ಈ ನಾಲ್ಕೂ ಕಡೆಯಲ್ಲೂ ಸ್ವರದ ಮುಂದೆ ಸ್ವರ ಬಂದಿದ್ದರೂ ಲೋಪವನ್ನಾಗಲಿ, ಆಗಮವನ್ನಾಗಲಿ ಮಾಡಲೇಬಾರದು.  ಅವು ಹೇಗಿವೆಯೋ ಹಾಗೇ ಬಿಡಬೇಕು.  ಹೀಗೆ ಇದ್ದ ರೀತಿಯಲ್ಲೇ ಇರುವುದಕ್ಕೆ ಪ್ರಕೃತಿಭಾವ ಎಂದು ವ್ಯಾಕರಣದಲ್ಲಿ ಹೇಳುತ್ತಾರೆ.  ಆದ್ದರಿಂದ ಪ್ರಕೃತಿ ಭಾವಕ್ಕೆ ಸೂತ್ರವನ್ನು ಕೆಳಗಿನಂತೆ ಹೇಳಬಹುದು:-

(೧೯) ಸ್ವರದ ಮುಂದೆ ಸ್ವರವು ಬಂದರೂ, ಕೆಲವು ಕಡೆಗಳಲ್ಲಿ ಲೋಪ, ಆಗಮ ಮೊದಲಾದ ಸಂಧಿಕಾರ‍್ಯಗಳಾಗದೆ ಇದ್ದ ಹಾಗೆಯೇ ಇರುವುದಕ್ಕೆ ಪ್ರಕೃತಿ ಭಾವವೆನ್ನುವರು.

ಹಾಗಾದರೆ ಎಂಥ ಕಡೆ ಈ ಪ್ರಕೃತಿಭಾವ ಬರುವುದೆಂಬುದನ್ನು (ಸಂಧಿಕಾರ‍್ಯವಾಗದಿರು ವಿಕೆಯನ್ನು) ಗಮನಿಸಿರಿ:-

(i) ಪ್ಲುತಸ್ವರಗಳ

[1] ಮುಂದೆ ಸ್ವರಪರವಾದರೆ ಸಂಧಿಕಾರ‍್ಯ ಮಾಡಬಾರದು (ಪ್ರಕೃತಿಭಾವ ಬರುವುದು).

ಅಣ್ಣಾ() + ಇತ್ತಬಾ = ಅಣ್ಣಾ, ಇತ್ತ ಬಾ
ದೇವರೇ() + ಇನ್ನೇನು ಗತಿ = ದೇವರೇ, ಇನ್ನೇನು ಗತಿ
ಅಮ್ಮಾ() + ಅದು ಬೇಕು = ಅಮ್ಮಾ, ಅದು ಬೇಕು
ರಾಮಾ() + ಅಲ್ಲಿ ನೋಡು = ರಾಮಾ, ಅಲ್ಲಿ ನೋಡು
ಗುರುವೇ() + ಉದ್ಧರಿಸು = ಗುರುವೇ, ಉದ್ಧರಿಸು

 

(ii) ಭಾವಸೂಚಕಾವ್ಯಯಗಳಾದ[2] ಅಹಹಾ! ಅಬ್ಬಾ! ಅಯ್ಯೋ! ಅಕ್ಕಟಾ! ಓಹೋ! ಛೇ! __ ಇತ್ಯಾದಿ ಶಬ್ದಗಳ ಮುಂದೆ ಸ್ವರ ಪರವಾದಾಗ ಸಂಧಿ ಕಾರ‍್ಯಗಳಾಗುವುದಿಲ್ಲ.

(ಬಹುಶಃ ಈ ಭಾವಸೂಚಕಾವ್ಯಯಗಳೆಲ್ಲ ಸ್ವರಾಂತಗಳಾಗಿರುತ್ತವೆ.  ಇವುಗಳ ಮುಂದೆ ಸ್ವರ ಬಂದರೆ ಪ್ರಕೃತಿಭಾವ ಬರುವುದು)

ಉದಾಹರಣೆಗೆ:-

ಅಯ್ಯೋ + ಅವನಿಗೇನಾಯಿತು?  = ಅಯ್ಯೋ! ಅವನಿಗೇನಾಯಿತು?

ಅಬ್ಬಾ + ಅದು ಹಾವೇ?  =  ಅಬ್ಬಾ! ಅದು ಹಾವೇ?

ಅಕ್ಕಟಾ + ಇಂದ್ರನಿಗೆ ಹಾನಿಯೇ?  = ಅಕ್ಕಟಾ! ಇಂದ್ರನಿಗೆ ಹಾನಿಯೇ?

ಓಹೋ + ಅವನೇನು?  =  ಓಹೋ! ಅವನೇನು?

ಎಲಾ + ಅಧಮನೇ?  =  ಎಲಾ! ಅಧಮನೇ

ಛೇ + ಅದೆಲ್ಲಿ  =  ಛೇ! ಅದೆಲ್ಲಿ.

 

(iii) ಆ ಎಂಬ ಶಬ್ದದ ಮುಂದೆ ಅ ಆ ಐ ಔ ಸ್ವರಗಳು ಬಂದರೆ ಸಂಧಿಕಾರ್ಯ ಮಾಡಬಾರದು (ಪ್ರಕೃತಿಭಾವ ಬರುವುದು).

ಆ + ಅಂಗಡಿ = ಆ ಅಂಗಡಿ

ಆ + ಅರಸು = ಆ ಅರಸು

ಆ + ಐಶ್ವರ್ಯ = ಆ ಐಶ್ವರ್ಯ

ಆ + ಆಡು = ಆ ಆಡು

ಆ + ಆಕಳು = ಆ ಆಕಳು

ಆ + ಔನ್ನತ್ಯ = ಆ ಔನ್ನತ್ಯ

ಆ + ಔದಾರ‍್ಯ = ಆ ಔದಾರ್ಯ


[1] ಪ್ಲುತಸ್ವರವೆಂದರೆ ಸಂಬೋಧನೆಯಲ್ಲಿ ಬರುವ ಸ್ವರ.  ಈ ಉದಾಹರಣೆಗಳಲ್ಲಿ(೩) ಈ ಗುರುತಿನಿಂದ ಸೂಚಿಸಿರುವ ಸ್ವರಗಳೆಲ್ಲ ಪ್ಲುತಗಳೆಂದು ತಿಳಿಯಬೇಕು.  ಹಿಂದೆ ಸ್ವರಗಳನ್ನು ಹೇಳಿದ ಕಡೆ ಅಂದರೆ ಸಂಜ್ಞಾಪ್ರಕರಣದಲ್ಲಿ ಈ ವಿಷಯ ತಿಳಿಸಿದೆ.

[2] ಈ ಭಾವಸೂಚಕಾವ್ಯಯಗಳನ್ನು ನಿಪಾತಾವ್ಯಯಗಳೆಂದೂ ಕರೆಯುವರು.