ಯಾವುದೇ ದೇಶದ ಭಾಷೆಯಾಗಲಿ, ಅದು ತನ್ನ ಸುತ್ತಮುತ್ತಣ ಬೇರೆ ಬೇರೆ ಭಾಷೆಗಳ ಸಂಬಂಧವನ್ನು ಪಡೆಯತ್ತಾ, ಆಯಾ ಭಾಷೆಯ ಶಬ್ದಗಳನ್ನು ತನ್ನಲ್ಲಿ ಸೇರಿಸಿಕೊಂಡು ಬೆಳೆಯುತ್ತದೆ.  ನಾವಾಡುವ ಕನ್ನಡ ಭಾಷೆಯಲ್ಲೂ ಈ ತತ್ತ್ವಕ್ಕನುಗುಣವಾಗಿ ಅನೇಕ ಶಬ್ದಗಳು ಸೇರಿವೆ.  ನಮ್ಮ ಕನ್ನಡ ಶಬ್ದಗಳೂ ಕೂಡ ಬೇರೆ ಬೇರೆ ಭಾಷೆಗಳಲ್ಲೂ ಸೇರಿವೆ.  ಭಾಷೆಗಳು ಹೀಗೆ ಕೊಡುಕೊಳ್ಳುವ ವ್ಯವಹಾರದಿಂದ ಬೆಳೆಯುತ್ತವೆ.  ಬೇರೆ ಭಾಷೆಗಳಿಂದ ಹೀಗೆ ಶಬ್ದಗಳನ್ನು ಸೇರಿಸಿಕೊಂಡರೂ ತನ್ನ ಮೂಲ ಶಬ್ದಗಳನ್ನು ಮಾತ್ರ ಕೈಬಿಡಬಾರದು.  ಅವೂ ಇರಬೇಕು; ಪರಭಾಷಾ ಶಬ್ದಗಳೂ ಇರಬೇಕು.  ಆಗಲೆ ಭಾಷೆಯ ಸಂಪತ್ತು ಹೆಚ್ಚುವುದು.  ಈ ಕೆಳಗಿನ ಒಂದು ಉದಾಹರಣೆಯನ್ನು ಗಮನಿಸಿರಿ:-

“ಮೋಟಾರುಗಳಲ್ಲಿ ಜಬರ್ದಸ್ತಿನಿಂದ ಓಡಾಡುವುದೇ ಜೀವನದ ಮುಖ್ಯ ಗುರಿಯಲ್ಲವೆಂದು ನಾವು ತಿಳಿಯಬೇಕು.”

ಈ ವಾಕ್ಯವು ಕನ್ನಡ ಭಾಷೆಯ ವಾಕ್ಯವಾದರೂ, ಕನ್ನಡ ಶಬ್ದಗಳ ಜೊತೆಗೆ ಬೇರೆ ಬೇರೆ ಭಾಷೆಗಳ ಶಬ್ದಗಳೂ ಇದರಲ್ಲಿ ಹೆಚ್ಚಾಗಿವೆ.

(i) ಮೋಟಾರು – ಇದು ಇಂಗ್ಲೀಷ್ ಭಾಷೆಯಿಂದ ಬಂದ ಶಬ್ದ.

(ii) ಜಬರ್ದಸ್ತ್ – ಇದು ಹಿಂದೀ ಭಾಷೆಯಿಂದ ಬಂದ ಶಬ್ದ.

(iii) ಜೀವನ ಮುಖ್ಯ – ಈ ಶಬ್ದಗಳು ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು.

(iv) ಓಡಾಡು, ಗುರಿ, ನಾವು, ತಿಳಿಯಬೇಕು – ಇವು ಕನ್ನಡ ಭಾಷೆಯ ಶಬ್ದಗಳು.

ಅಲ್ಲದೆ-ಅಲ್ಲಿ, ಇಂದ, ಇನ, ಇಗೆ, ಉ-ಇತ್ಯಾದಿ ಕನ್ನಡ ಪ್ರತ್ಯಯಗಳು ಇಂಗ್ಲೀಷ್, ಹಿಂದಿ, ಸಂಸ್ಕೃತ ಶಬ್ದಗಳ ಮುಂದೆ ಬಂದು, ಅವನ್ನು ಕನ್ನಡ ಶಬ್ದಗಳನ್ನಾಗಿ ಮಾಡಿವೆ.

ಮೇಲಿನ ಉದಾಹರಣೆಯಿಂದ ನಮ್ಮ ಕನ್ನಡ ಭಾಷೆಯಲ್ಲಿ ಪರ ಭಾಷೆಯ ಶಬ್ದಗಳು ಸೇರಿಕೊಂಡಿವೆ ಎಂಬುದು ಗೊತ್ತಾಗುವುದು.  ನಮ್ಮ ಕನ್ನಡ ಭಾಷೆ ದ್ರಾವಿಡ ವರ್ಗಕ್ಕೆ ಸೇರಿದ ಭಾಷೆಯೆಂದು ತಿಳಿದಿದ್ದೀರಿ.  ಸಂಸ್ಕೃತ ಭಾಷೆ ಆರ್ಯರ ಭಾಷೆ.  ಆರ‍್ಯರಿಗೂ ದ್ರಾವಿಡರಿಗೂ ಬಹು ಪ್ರಾಚೀನ ಕಾಲದಿಂದಲೇ ಸಂಬಂಧ ಬೆಳೆದು, ಅವರಾಡುತ್ತಿದ್ದ ಸಂಸ್ಕೃತ-ಪ್ರಾಕೃತ ಭಾಷೆಗಳ ಶಬ್ದಗಳು ವಿಶೇಷವಾಗಿ ಅಂದಿನಿಂದಲೇ ಸೇರುತ್ತ ಬಂದವು.  ಅನಂತರ ಬೇರೆ ಬೇರೆ ವಿದೇಶೀಯರ ಸಂಪರ್ಕದಿಂದ, ಪಾರ್ಸಿ ಭಾಷಾ ಶಬ್ದಗಳೂ, ಇಂಗ್ಲೀಷ್, ಪೋರ್ಚುಗೀಸ್ ಭಾಷಾಶಬ್ದಗಳೂ ಸೇರಿಹೋದವು.  ಹೀಗೆ ಬೇರೆ ಬೇರೆ ಭಾಷೆಗಳಿಂದ ಬಂದ ಶಬ್ದಗಳಾವುವು? ನಮ್ಮ ಅಚ್ಚಗನ್ನಡ ಭಾಷಾಶಬ್ದಗಳಾವುವು? ಎಂಬುದನ್ನು ಸ್ಥೂಲವಾಗಿ ತಿಳಿಯಬಹುದು.

ಅಚ್ಚಗನ್ನಡ ಶಬ್ದಗಳನ್ನು ದೇಶ್ಯ ಶಬ್ದಗಳೆನ್ನುತ್ತೇವೆ.  ಉಳಿದವುಗಳನ್ನು ಅನ್ಯದೇಶ್ಯ ಶಬ್ದಗಳೆನ್ನುತ್ತೇವೆ.  ಅಲ್ಲದೆ ಸಂಸ್ಕೃತ-ಪ್ರಾಕೃತ ಶಬ್ದಗಳನೇಕವನ್ನು ಕನ್ನಡಭಾಷೆಯ ಗುಣಕ್ಕನುಗುಣವಾಗಿ ಅಲ್ಪಸ್ವಲ್ಪ ಬದಲಾವಣೆಗಳಿಂದ ಮತ್ತು ಹೆಚ್ಚಿನ ವ್ಯತ್ಯಾಸಗಳಿಂದ ಮಾರ್ಪಡಿಸಿಕೊಂಡು, ಅವಕ್ಕೆ ತದ್ಭವಗಳು ಎಂಬ ಹೆಸರಿಟ್ಟಿದ್ದೇವೆ.  ಕೆಲವು ಸಂಸ್ಕೃತ ಶಬ್ದಗಳನ್ನು ಯಾವ ವ್ಯತ್ಯಾಸವನ್ನೂ ಮಾಡದೆ ಅದೇ ಅರ್ಥದಲ್ಲಿ ಉಪಯೋಗಿಸುತ್ತೇವೆ.  ಅವನ್ನು ತತ್ಸಮಗಳು ಎನ್ನುತ್ತೇವೆ.  ಈಗ ಈ ಎಲ್ಲಾ ದೇಶ್ಯ, ಅನ್ಯದೇಶ್ಯ, ತತ್ಸಮ, ತದ್ಭವಗಳ ವಿಚಾರವಾಗಿ ಸ್ಥೂಲವಾಗಿ ತಿಳಿದುಕೊಳ್ಳೋಣ.

I – ದೇಶ್ಯ ಅಚ್ಚಗನ್ನಡ ಶಬ್ದಗಳು

ಮನೆ, ಹೊಲ, ಗದ್ದೆ, ಹಿತ್ತಿಲು, ಕದ, ಮರ, ಗಿಡ, ನೆಲ, ಆಳು, ತೆಂಕಣ, ಮೂಡಣ, ಪಡುವಣ, ಬಡಗಣ, ತೆವರು, ತಗ್ಗು, ಇಳಿ, ನೇಸರು, ತಿಂಗಳು, ಕಲ್ಲು, ನೆಲ್ಲು, ಹೊಳೆ, ಹೋಗು, ಹೊಗು, ಬರು, ತಿನ್ನು, ಒಂದು, ಎರಡು, ನೂರು, ಹೆಚ್ಚು, ಕಡಿಮೆ, ಮೆಲ್ಲಗೆ, ಚೆನ್ನಾಗಿ, ತಿಳಿವಳಿಕೆ, ನಡೆವಳಿಕೆ, ನೀರು, ಮೀನು, ಬಾನು, ಬೋನ, ಅರಸು, ಹುಡುಕು, ಅಗಿ, ಅಲರು, ಅರೆ, ನುರಿ, ಉಡು, ತೊಡು, ಕೈ, ಕಾಲು, ಬಾಯಿ, ಕಣ್ಣು, ತಲೆ, ಕಿವಿ, ಮೂಗು, ಕೆನ್ನೀರು, ಬೆನ್ನೀರು, ಬೆಚ್ಚಗೆ, ತಣ್ಣಗೆ, ಕಮ್ಮಗೆ, ಸಣ್ಣ, ದೊಡ್ಡ, ಬಿಳಿದು, ಕರಿದು, ಹಿರಿದು, ಜೇನು, ತುಪ್ಪ, ಹಾಲು, ಮೊಸರು, ಮಜ್ಜಿಗೆ, ಅವು, ಕರು, ಆಕಳು, ತುರು, ನೆರೆ, ಸೇರು, ಕಾರು, ಹೀರು, ಸೋರು, ಸಾರು, ಹುಳಿ, ಹುರುಳಿ, ಹುಲ್ಲು, ರಾಗಿ, ಜೋಳ, ಬೆಲ್ಲ, ಎಳ್ಳು, ಎಣ್ಣೆ, ಬೆಣ್ಣೆ -ಇತ್ಯಾದಿಗಳು.