ಬೀಜಗಳಿಂದ ಸಸ್ಯಾಭಿವೃದ್ಧಿ ಸಾಧ್ಯವಿದ್ದರೂ ತೋಟಗಾರಿಕೆಯ ಹಲವಾರು ಬೆಳೆಗಳಲ್ಲಿ ಬೇರೆ ಬೇರೆ ವಿಧಾನಗಳನ್ನು ಅನುಸರಿಸಿ ಗಿಡಗಳನ್ನು ಬೆಳೆಸುವುದು ಲಾಭದಾಯಕವೆನಿಸಿದೆ. ಏಕೆಂದರೆ ಈ ವಿಧಾನಗಳಿಂದ ಶೀಘ್ರವಾಗಿ ಫಲ ಪಡೆಯಬಹುದಾಗಿದೆ. ಅನಿವಾರ್ಯವಿರುವ ಕೆಲವೇ ಬೆಳೆಗಳನ್ನು ಬೀಜಗಳಿಂದ ಅಭಿವೃದ್ಧಿ ಪಡಿಸುವರು. ಈ ರೀತಿಯಾಗಿ ಬೀಜದಿಂದ ಸಸ್ಯಾಭಿವೃದ್ಧಿ ಹೊರತುಪಡಿಸಿ ಬೇರೆ ಬೇರೆ ವಿಧಾನಗಳನ್ನು ಅನುಸರಿಸುವುದರಿಂದ ಶೀಘ್ರವಾಗಿ ಸಸ್ಯಾಭಿವೃದ್ಧಿ ಮಾಡಬಹುದಲ್ಲದೇ ಗುಣಮಟ್ಟದ ಫಲವನ್ನೂ ಪಡೆಯಬಹುದು.

ಸಸ್ಯಾಭಿವೃದ್ಧಿಯ ವಿಧಾನಗಳು

() ಬೀಜಗಳ ಮೂಲಕ

ಬೀಜದಿಂದ ಸಸ್ಯಾಭಿವೃದ್ಧಿ ಮಾಡುವಾಗ ಸ್ವಕೀಯ ಮತ್ತು ಪರಕೀಯ ಪರಾಗ ಸ್ಪರ್ಶಗಳು ಏರ್ಪಡುತ್ತವೆ. ಇದರ ಪ್ರತಿಫಲವಾಗಿ ಬೀಜಗಳು ಉತ್ಪಾದಿಸಲ್ಪಟ್ಟು ಮುಂದೆ ಈ ಬೀಜಗಳಿಂದಲೇ ಹೊಸ ಸಸ್ಯಗಳನ್ನು ಪಡೆಯಬಹುದು. ಬೀಜ ಪದ್ಧತಿಯಲ್ಲಿ ಕಡಿಮೆ ಖರ್ಚು ಹಾಗೂ ಅಲ್ಪ ಶ್ರಮದಿಂದ ಹೆಚ್ಚು ಸಸಿಗಳನ್ನು ಉತ್ಪಾದಿಸಬಹುದು. ಪರಕೀಯ ಪರಾಗ ಸ್ಪರ್ಶ ಕ್ರಿಯೆಯಿಂದ ಬೀಜಗಳಾಗಿ ನಂತರ ಅವು ಸಸಿಗಳಾದಾಗ ತಂದೆ ತಾಯಿಯ ಮಧ್ಯವರ್ತಿ ಗುಣಗಳನ್ನು ಹೊಂದಿರುತ್ತವೆ. ಆದರೆ ಬಹು ಭ್ರೂಣೀಯ ಬೀಜಗಳನ್ನು ಬಿತ್ತಿ ತಾಯಿಯನ್ನೇ ಹೋಲುವ ಸಸಿಗಳನ್ನು ಪಡೆಯಬಹುದಾಗಿದೆ. ಉದಾಹರಣೆ, ಮ್ಯಾಂಡರಿನ್ ಕಿತ್ತಳೆ, ನೇರಳೆ, ಹುಳಿನಿಂಬೆ ಇತ್ಯಾದಿ.

() ನಿರ್ಲಿಂಗ ಪದ್ಧತಿ

ಈ ಪದ್ಧತಿಯಲ್ಲಿ ತುಂಡು, ಗೆಡ್ಡೆ, ಗುಪ್ತಕಾಂಡ, ಕಂದು ಮುಂತಾದ ಭಾಗಗಳು, ವಿವಿಧ ಕಸಿ ವಿಧಾನಗಳು, ಲೇಯರಿಂಗ್ ವಿಧಾನಗಳು ಮತ್ತು ಅಂಗಾಂಶ ವಿದಾನಗಳಿಂದ ಸಸ್ಯಾಭಿವೃದ್ಧಿ ಮಾಡಲಾಗುವುದು. ಬೀಜವನ್ನು ಹೊರತು ಪಡಿಸಿ ಸಸ್ಯದ ವಿವಿಧ ಭಾಗಗಳಿಂದ ಸಸ್ಯೋತ್ಪಾದನೆ ಮಾಡುವ ವಿಧಾನಗಳು ಈ ಮುಂದಿನಂತಿವೆ.

. ಕಾಂಡದ ತುಂಡುಗಳ ಮುಖಾಂತರ

ಕತ್ತರಿಸಿದ ಸಸ್ಯದ ಕಾಂಡ ಅಥವಾ ರೆಂಬೆಯ ತುಂಡುಗಳನ್ನು ನಾಟಿ ಮಾಡಿ ಸಸ್ಯೋತ್ಪಾದನೆ ಮಾಡುವ ಪದ್ಧತಿ ಅತ್ಯಂತ ಸರಳವಾದುದು. ಎಲ್ಲ ಬಗೆಯ ಸಸ್ಯಗಳಲ್ಲಿ ಇದು ಸಾಧ್ಯವಿಲ್ಲ. ಆದರೆ ತೋಟಗಾರಿಕೆಗೆ ಸಂಬಂಧಿಸಿದ ಸಾಕಷ್ಟು ಗಿಡಗಳನ್ನು ತುಂಡು ನಾಟಿಪದ್ಧತಿಯಿಂದ ಅಭಿವೃದ್ಧಿ ಪಡಿಸಬಹುದು.

ತುಂಡು ನಾಟಿಪದ್ಧತಿಯಲ್ಲಿ ಅನುಸರಿಸಬೇಕಾದ  ನಿಯಮಗಳು

೧. ತುಂಡು ನಾಟಿ ಮಾಡುವ ಮಾಧ್ಯಮ ಚೆನ್ನಾಗಿ ನೀರು ಬಸಿದು ಹೋಗುವಂತಿರಬೇಕು ಮತ್ತು ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಉತ್ತಮವಾಗಿರಬೇಕು.

೨. ನಾಟಿಗೆ ಆಯ್ಕೆ ಮಾಡುವ ಕಾಂಡದ ತುಂಡು ರೋಗದಿಂದ ಮುಕ್ತವಾಗಿದ್ದು ಸಾಕಷ್ಟು ಎಲೆಗಳನ್ನು ಹೊಂದಿರಬೇಕು.

೩. ಕಾಂಡದ ಮೃದು ತುಂಡುಗಳನ್ನು ೫ ಸೆಂ.ಮೀ. ಆಳಕ್ಕೆ ಮತ್ತು ಬಲಿತ ತುಂಡುಗಳನ್ನು ೧೦ ಸೆಂ.ಮೀ. ಆಳಕ್ಕೆ ಹೂಳಬೇಕು ಅಥವಾ ನಾಟಿ ಮಾಡಬೇಕು.

೪. ಕಾಂಡದ ಮೃದು ತುಂಡುಗಳನ್ನು ನೆಟ್ಟಗೆ ನಾಟಿ ಮಾಡಿದರೆ ಬಲಿತ ತುಂಡುಗಳನ್ನು ಸ್ವಲ್ಪ ಓರೆಯಾಗಿ ನಾಟಿ ಮಾಡಬೇಕು.

ನೆಡುವ/ನಾಟಿ ವಿಧಾನ : ಸುಮಾರು ೨ ಸೆಂ.ಮೀ. ದಪ್ಪ, ೧೫ ಸೆಂ.ಮೀ. ಉದ್ದ ಮತ್ತು ೩-೫ ಮೊಗ್ಗುಗಳಿರುವ ಕಾಂಡ ಇಲ್ಲವೆ ರೆಂಬೆ ತುಂಡುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಾಟಿ ಮಾಡುವ ತುಂಡುಗಳ ಕೆಳಭಾಗವನ್ನು ಓರೆಯಾಗಿ ಮೊಗ್ಗಿನ ಕೆಳಗೆ ಕತ್ತರಿಸಿ ಹೆಚ್ಚಾಗಿರುವ ಎಲೆಗಳನ್ನು ಸವರಿ ಹಾಕಬೇಕು. ನಂತರ ನಾಟಿ ಮಾಡಿ ನಿಯಮಿತವಾಗಿ ನೀರು ಪೂರೈಕೆ ಮಾಡಬೇಕು.

ಬೆಳೆಸಿದ ಸಸಿಗಳನ್ನು ಕಾಪಾಡುವುದು : ಸಸಿ ಕಟ್ಟಿದ ಗಿಡಗಳೇ ಇರಲಿ ಅಥವಾ ಬೇರು ಬರಿಸಿದ ಸಸಿಗಳೇ ಇರಲಿ ಅವುಗಳನ್ನು ಮುಖ್ಯ ಕ್ಷೇತ್ರಕ್ಕೆ ಕೊಂಡೊಯ್ಯುವ ಮುನ್ನ ರಕ್ಷಿಸಬೇಕಾಗುವುದು. ಈ ರೀತಿಯಾಗಿ ಬೆಳೆಸಿದ ಸಸಿಗಳನ್ನು ಭಾಗಶಃ ನೆರಳಿರುವ ಪ್ರದೇಶದಲ್ಲಿ ಇಟ್ಟು ನಿಯಮಿತವಾಗಿ ನೀರು ಪೂರೈಕೆ ಮಾಡುತ್ತಿರಬೇಕು. ಸಸ್ಯಗಳ ಬೆಳವಣಿಗೆ ಗಮನಿಸಿ ಆಗಿಂದಾಗ್ಗೆ ಪೋಷಕಾಂಶಗಳನ್ನು ಪೂರೈಸುತ್ತಿರಬೇಕು.

ಕೀಟ ಮತ್ತು ರೋಗಗಳಿಗೆ ಸಂಬಂಧಿಸಿದಂತೆ ಪ್ರತಿನಿತ್ಯ ಗಿಡಗಳನ್ನು ಪರೀಕ್ಷಿಸಿ ಬಾಧೆ ಕಂಡು ಬಂದಲ್ಲಿ ಸೂಕ್ತ ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳಬೇಕು. ಕಸಿ ಕಟ್ಟಿದ ನಂತರ ಕೆಲವು ಗಿಡಗಳು ಬಹು ಬೇಗನೆ ನಾಟಿಗೆ/ನೆಡುವ ಪೂರ್ವದಲ್ಲಿಯೇ ಹೂವು-ಕಾಯಿಗಳನ್ನು ಬಿಡಲು ಪ್ರಾರಂಭಿಸಬಹುದು. ಅಂತಹ ಸಂದರ್ಭದಲ್ಲಿ ಅವುಗಳನ್ನು ಕಿತ್ತು ಹಾಕಬೇಕು. ಇದಲ್ಲದೆ ತುಂಡುಗಳನ್ನು ನಾಟಿ ಮಾಡಿದ ಮತ್ತು ಕಸಿ ಕಟ್ಟಿದ ದಿನಾಂಕ, ಉಪಯೋಗಿಸಿದ ಜಾತಿ ಇತ್ಯಾದಿಗಳನ್ನು ಒಂದೆಡೆ ದಾಖಲು ಮಾಡುವುದು ಒಳ್ಳೆಯದು. ಇದರಿಂದ ಅವುಗಳ ವಯಸ್ಸು ತಿಳಿದುಕೊಳ್ಳಲು ಹಾಗೂ ತೊಂದರೆಗಳಿಗೆ ಪರಿಹಾರ ಸೂಚಿಸಲು ಅನುಕೂಲವಾಗುವುದು.

ಸಾಮಾನ್ಯವಾಗಿ ದಾಳಿಂಬೆ, ದ್ರಾಕ್ಷಿ, ಗುಲಾಬಿ, ಕ್ರೋಟಾನ್ ಇತ್ಯಾದಿ ಬೆಳೆಗಳಲ್ಲಿ ತುಂಡುಗಳಿಂದ ನಾಟಿ ಮಾಡಿ ಹೊಸ ಸಸ್ಯಗಳನ್ನು ಪಡೆಯಬಹುದು. ತುಂಡುಗಳನ್ನು ಬಳಸಿ ಸಸ್ಯಾಭಿವೃದ್ಧಿ ಕೈಗೊಳ್ಳುವುದು ಸುಲಭ ಹಾಗೂ ಖರ್ಚು ಕಡಿಮೆ. ಆದರೆ ಗುಲಾಬಿಯಲ್ಲಿ ಕಣ್ಣು ಕಸಿ ಮಾಡುವುದು, ಕ್ರೋಟಾನ್‌ನಲ್ಲಿ ಗೂಟಿ ವಿಧಾನದ ಮೂಲಕ ಸಸ್ಯಗಳನ್ನು ಪಡೆಯುವುದು ವಾಣಿಜ್ಯ ದೃಷ್ಟಿಯಿಂದ ಒಳ್ಳೆಯದು.

. ಗೆಡ್ಡೆಗುಪ್ತಕಾಂಡ

ಬೆಳ್ಳುಳ್ಳಿಯ ಹೂವುಗೊಂಚಲುಗಳ ಕೆಳಗೆ ಇರುವ ಭಾಗ ಮಾರ್ಪಾಟುಗೊಂಡು ಇಲುಕುಗಳಾಗುತ್ತವೆ. ಅವುಗಳನ್ನು ಬೇರೆ ಬೇರೆ ಮಾಡಿ ಬಿತ್ತಿ, ಸ್ವತಂತ್ರ ಸಸಿಗಳನ್ನಾಗಿ ಬೆಳೆಸಬಹುದು. ಆಲೂಗೆಡ್ಡೆಯನ್ನು ಗೆಡ್ಡೆಗಳ ಮೂಲಕ ಸಸ್ಯಾಭಿವೃದ್ಧಿ ಮಾಡುತ್ತಾರೆ. ಮೊಳಕೆಯೊಡೆಯುವ ಸಾಮರ್ಥ್ಯವಿರುವ ಗೆಡ್ಡೆಯ ಚೂರುಗಳಲ್ಲಿ ಕನಿಷ್ಠಪಕ್ಷ ಎರಡು ಕಣ್ಣುಗಳಿರಬೇಕು.

ಗೆಡ್ಡೆಗಳಿಂದ ಸಸ್ಯಾಭಿವೃದ್ಧಿ ಮಾಡುವಾಗ ಬಿತ್ತನೆಗೆ ಉಪಯೋಗಿಸುವ ಗೆಡ್ಡೆಗಳನ್ನು ಸಂಗ್ರಹಿಸುವುದು ಮತ್ತು ಚೂರುಗಳನ್ನಾಗಿ ಮಾಡಿ ಬಿತ್ತನೆ ಮಾಡುವುದು ಶ್ರಮದಾಯಕವೆನಿಸುವುದು. ಆದರೆ ಕೈತೋಟದ ಕ್ಷೇತ್ರವು ಕಡಿಮೆ ಇರುವುದರಿಂದ ತೊಂದರೆ ಎನಿಸುವುದಿಲ್ಲ.

ಅರಿಸಿನದ ಗುಪ್ತಕಾಂಡಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು. ಇವು ಆಹಾರ ಸಂಗ್ರಹಣೆಗಾಗಿ ಮಾರ್ಪಾಡು ಹೊಂದಿರುವ ಕಾಂಡಗಳಾಗಿವೆ. ಈ ಗುಪ್ತಕಾಂಡಗಳು ಭೂಮಿಯೊಳಗಿದ್ದು ಕಣ್ಣುಗಳನ್ನು ಹೊಂದಿರುತ್ತವೆ. ಕಣ್ಣುಗಳನ್ನು ಬೇರೆ ಬೇರೆ ಮಾಡಿ ನೆಟ್ಟರೆ ಸ್ವತಂತ್ರ ಸಸ್ಯವಾಗಿ ಬೆಳೆಯುವುವು. ಇವುಗಳನ್ನು ಭೂ ಅಂತರ್ಗತ ಕಾಂಡಗಳೆಂದೂ ಕರೆಯುವರು.

ಭೂ ಮೇಲ್ಭಾಗದಲ್ಲಿ ಬಾಳೆಯ ಕಾಂಡಗಳು ಬೇರೊಡೆದು ಹೊಸ ಸಸ್ಯಗಳಾಗುತ್ತವೆ. ಇವುಗಳನ್ನು ಕಂದುಗಳು ಎನ್ನುವರು. ಕಂದುಗಳನ್ನು ತಾಯಿ ಸಸ್ಯದ ಆಶ್ರಯದಿಂದ ಬೇರ್ಪಡಿಸಿ ನೆಟ್ಟರೆ ಸ್ವತಂತ್ರ ಸಸ್ಯಗಳಾಗಿ ಬೆಳೆಯುವುವು.

. ಕಸಿ ವಿಧಾನ

ನಿರ್ಲಿಂಗ ಪದ್ಧತಿಯ ಸಸ್ಯಾಭಿವೃದ್ಧಿಯಲ್ಲಿ ಕಸಿ ವಿಧಾನ ತುಂಬಾ ಪ್ರಮುಖವಾದುದು. ಕಸಿ ಕಟ್ಟುವಲ್ಲಿ ಹಲವಾರು ವಿಧಾನಗಳಿವೆ. ಕೈತೋಟದಲ್ಲಿ ಸುಲಭವಾಗಿ ಮಾಡಬಹುದಾದ ಕೆಲವು ಪದ್ಧತಿಗಳನ್ನು ಮುಂದೆ ವಿವರಿಸಲಾಗಿದೆ.

(i) ಕಸಿ ಕ್ಟುವಿಕೆ : ಬೇರು ಸಸ್ಯ ಮತ್ತು ಕಸಿ ಕೊಂಬೆ ಇವೆರಡೂ ಬೆಸೆದುಕೊಂಡು ಹೊಸ ಸಸ್ಯವಾಗಿ ಬೆಳೆಸುವ ಕ್ರಮವನ್ನೇ ’ಕಸಿ ಕಟ್ಟುವಿಕೆ’ ಎನ್ನುವರು.

(ii) ಬೇರು ಸಸ್ಯ : ಇದು ಮೂಲ ಅಥವಾ ತಾಯಿ ಸಸಿ. ಸಾಮಾನ್ಯವಾಗಿ ಬೇರು ಸಸ್ಯವು ಸದೃಢ ಹಾಗೂ ಒರಟು ಸ್ವಭಾವದ್ದಾಗಿದ್ದು ಸಣ್ಣ ಪುಟ್ಟ ರೋಗ ರುಜಿನಗಳನ್ನು ತಡೆಯುವ ಶಕ್ತಿ ಹೊಂದಿರುತ್ತದೆ. ಬೀಜದಿಂದ ಬೇರು ಸಸ್ಯ ಬೆಳೆಸಬಹುದು. ಕಾಂಡದ ಅಥವಾ ರೆಂಬೆಯ ತುಂಡುಗಳನ್ನು ನಾಟಿ ಮಾಡಿಯೂ ಬೇರು ಸಸ್ಯವನ್ನು ಬೆಳೆಸಬಹುದು.

ಬೀಜವನ್ನು ಮಡಿಗಳಲ್ಲಿ ಬಿತ್ತನೆ ಮಾಡಿ ಸಸಿಗಳನ್ನು ಬೆಳೆಸಬಹುದು. ಕುಂಡಗಳಲ್ಲಿ ಅಥವಾ ಪಾಲಿಥೀನ್ ಚೀಲಗಳಲ್ಲಿ ಬೀಜ ಬಿತ್ತಿ ಬೇರು ಸಸ್ಯ ಬೆಳೆಸಬಹುದು. ಪಾಲಿಥೀನ್ ಚೀಲಗಳಲ್ಲಿ ಬೇರು ಸಸ್ಯಗಳನ್ನು ಬೆಳೆಸುವುದರಿಂದ ಖರ್ಚು ಕಡಿಮೆ. ಸಾಗಾಣಿಕಾ ದೃಷ್ಟಿಯಿಂದಲೂ ಅನುಕೂಲ. ಈ ರೀತಿ ಪಾಲಿಥೀನ್ ಚೀಲಗಳಲ್ಲಿ ಬೆಳೆಯುವ ಸಸಿ ಸುಮಾರು ೧೫ ಸೆಂ.ಮೀ. ಎತ್ತರ ಮತ್ತು ಕಾಂಡದ ದಪ್ಪ ಸುಮಾರು ಒಂದೂವರೆ ಸೆಂ.ಮೀ. ಆಗುವವರೆಗೆ ಆರೈಕೆ ಮಾಡಿ ನಂತರ ಅದನ್ನು ಬೇರು ಸಸ್ಯವಾಗಿ ಉಪಯೋಗಿಸಬಹುದು.

(iii) ಕಸಿಕೊಂಬೆ : ಇದು ಉತ್ತಮ ಜಾತಿಯ ಗಿಡದ ಭಾಗ. ಇದರಿಂದ ಅಪೇಕ್ಷಿತ ಹಾಗೂ ಉನ್ನತ ಗುಣಮಟ್ಟದ ಅಧಿಕ ಇಳುವರಿಯನ್ನು ಪಡೆಯಲು ಸಾಧ್ಯ. ಆಯ್ಕೆ ಮಾಡುವ ಕಸಿಕೊಂಬೆ ಪ್ರಸಕ್ತ ವರ್ಷದ್ದಾಗಿದ್ದರೆ ಉತ್ತಮ. ಕಸಿಗೊಂಬೆ ರೋಗ ಮುಕ್ತವಾಗಿರಬೇಕು. ಸುಮಾರು ಒಂದೂವರೆ ಸೆಂ.ಮೀ. ದಪ್ಪವಿದ್ದರೆ ಸಾಕು. ಕಸಿಕೊಂಬೆಗಳನ್ನು ಒಮ್ಮೊಮ್ಮೆ ಬೇರೆ ಬೇರೆ ಕಡೆಗಳಿಂದ ತರಬೇಕಾಗಬಹುದು. ಅಂತಹ ಸಂದರ್ಭಗಳಲ್ಲಿ ಕತ್ತರಿಸಿದ ಕಸಿಕೊಂಬೆಗಳನ್ನು ನೀರಿನಲ್ಲಿ ತೊಯ್ಸಿದ ಸ್ಪ್ಯಾಗ್ನಮ್ ಮಾಸ್‌ನಲ್ಲಿ ಸುತ್ತಿಕೊಂಡು ತರಬೇಕು ಮತ್ತು ಬೇರು ಸಸ್ಯಕ್ಕೆ ಕೂಡಿಸುವವರೆಗೆ ಕಸಿ ಕೊಂಬೆ ತಂಪಿನಿಂದ ಕೂಡಿರುವಂತೆ ನೋಡಿಕೊಳ್ಳಬೇಕು.

ಕಸಿಕಟ್ಟುವಿಕೆಯಲ್ಲಿ ಅನುಸರಿಸಬೇಕಾದ ಕೆಲವು ನಿಯಮಗಳು

೧. ಕಸಿಕಟ್ಟುವ ಕೆಲಸವನ್ನು ಯೋಚಿಸಿ ಬೇರು ಸಸ್ಯಗಳನ್ನು ಸಿದ್ಧ ಪಡಿಸಿಕೊಳ್ಳಬೇಕು.

೨. ಬೇರು ಸಸ್ಯ ಮತ್ತು ಕಸಿಕೊಂಬೆ ಒಂದೇ ರೀತಿಯ ಕೂಡು ಪದರಗಳನ್ನು ಹೊಂದಿರಬೇಕು ಮತ್ತು ಸಸ್ಯ ಸಂಬಂಧಗಳಲ್ಲಿ ಸಮೀಪವಿದ್ದಷ್ಟೂ ಯಶಸ್ಸಿನ ಪ್ರಮಾಣ ಹೆಚ್ಚು.

೩. ಬೇರು ಸಸ್ಯಕ್ಕೆ ಕಸಿಕೊಂಬೆಯನ್ನು ಕೂಡಿಸುವಾಗ ಎರಡಕ್ಕೂ ಮಾಡಿದ ಗಾಯಗಳು ಸರಿಯಾಗಿ ಕೂಡಿಕೊಳ್ಳುವಂತೆ ನೋಡಿಕೊಂಡರೆ ಆ ಭಾಗಗಳು ಸರಿಯಾಗಿ ಒಂದನ್ನೊಂದು ಕೂಡಿಕೊಂಡು ಕಸಿಕಟ್ಟುವಿಕೆ ಯಶಸ್ವಿಯಾಗುವುದು.

೪. ಕಸಿಕಟ್ಟುವ ಸಮಯಕ್ಕೆ ಬೇರೆ ಸಸ್ಯದ ಮತ್ತು ಕಸಿಕೊಂಬೆಯ ಗಾತ್ರಗಳು ಒಂದೇ ಸಮನಾಗಿರಬೇಕು.

() ಸಾಮಿಪ್ಯ ಕಸಿವಿಧಾನ : ಬೇರು ಸಸ್ಯ ಮತ್ತು ಕಸಿಕೊಂಬೆಗಳೆರಡಕ್ಕೂ ಸಂಪರ್ಕವೇರ್ಪಡಿಸುವುದನ್ನು ಸಾಮಿಪ್ಯ ಕಸಿ ಎನ್ನುತ್ತಾರೆ.

ಮೊದಲು ಕುಂಡ ಇಲ್ಲದೆ ಪಾಲಿಥೀನ್ ಚೀಲಗಳಲ್ಲಿ ಬೇರು ಸಸ್ಯಗಳನ್ನು ಬೆಳೆಸಿ ನಂತರ ಕಸಿ ಮಾಡುವ ಹಂತದಲ್ಲಿ ಬೇರು ಸಸ್ಯ ಕಾಂಡದ ಮೇಲೆ ಕಸಿ ಚಾಕುವಿನಿಂದ ೨.೫ – ೫ ಸೆಂ.ಮೀ ಉದ್ದದ ತೊಗಟೆ ಚಕ್ಕೆಯನ್ನು ಅಂಡಾಕಾರವಾಗಿ ಕಚ್ಚು ಕೊಟ್ಟು ತೆಗೆಯಬೇಕು. ಇದೇ ರೀತಿ ಕಸಿಕೊಂಬೆಯ ಮೇಲೂ ಅಷ್ಟೇ ಗಾತ್ರದ ಗಾಯ ಮಾಡಿ ನಂತರ ಇವೆರಡೂ ಗಾಯಗಳನ್ನು ಕೂಡಿಸಿ ಪ್ಲಾಸ್ಟಿಕ್ ಪಟ್ಟಿಯಿಂದ ಕಟ್ಟಬೇಕು. ಗಾಯಗಳು ಕೂಡಿಕೊಳ್ಳುವ ಜಾಗದಲ್ಲಿ ಗಾಳಿ-ನೀರು ಬರದಂತೆ, ಧೂಳು ಇತ್ಯಾದಿಗಳು ಸೇರಿಕೊಳ್ಳದಂತೆ ಮೇಲ್ಭಾಗದಲ್ಲಿ ಕಸಿ ಮೇಣ ಬಳಿಯಬೇಕು.

ಈ ಕಸಿ ವಿಧಾನದಲ್ಲಿ ಬೇರು ಸಸಿ ಮತ್ತು ಕಸಿಕೊಂಬೆಯ ಗಿಡಗಳೆರಡನ್ನೂ ರಕ್ಷಣೆ ಮಾಡಬೇಕಾಗುವುದು. ಕಸಿ ಕಟ್ಟುವಿಕೆ ಮುಗಿದ ಮೇಲೆ ಅವು ಸರಿಯಾಗಿ ಬೆಸೆದುಕೊಳ್ಳಲು ಕಡೇ ಪಕ್ಷ ಎರಡರಿಂದ ಮೂರು ತಿಂಗಳು ಸಮಯ ಬೇಕಾಗುತ್ತದೆ. ನಂತರ ಬೇರು ಸಸಿಯ ಮೇಲ್ಭಾಗ ಮತ್ತ ಕಸಿಕೊಂಬೆಯ ಕೆಳಭಾಗಗಳನ್ನು ಹಂತಹಂತವಾಗಿ ಕಚ್ಚುಕೊಟ್ಟು ಬೇರ್ಪಡಿಸಬೇಕು. ಆಮೇಲೆ ಅದು ಕಸಿ ಗಿಡವಾಗಿ ಬೆಳೆಯುವುದು.

ಇಲ್ಲಿ ಕಸಿಕೊಂಬೆಗಳು ನೆಲಮಟ್ಟದವರೆಗೆ ಬಾಗುವಂತಿರಬೇಕು. ಅಂತಹವುಗಳನ್ನೇ ಕಸಿ ಕಟ್ಟಲು ಆಯ್ಕೆ ಮಾಡಬೇಕು. ಇದು ಸಾಧ್ಯವಾಗದೇ ಹೋದರೆ ಕಸಿಕೊಂಬೆಯ ಗಿಡದ ಕೆಳಗೆ ಅಟ್ಟಗಳನ್ನು ನಿರ್ಮಿಸಿ ಅಟ್ಟದ ಮೇಲೆ ಬೇರು ಸಸ್ಯಗಳನ್ನಿಟ್ಟು ಆ ಮಟ್ಟದವರೆಗೆ ಇರುವ ಕಸಿಕೊಂಬೆಗಳನ್ನು ಬಗ್ಗಿಸಿ ಕಸಿ ಕಟ್ಟಬಹುದು. ಉದಾ: ಮಾವು, ಚಿಕ್ಕು ಇತ್ಯಾದಿ.

ಸಾಮೀಪ್ಯ ಕಸಿ ವಿಧಾನದಲ್ಲಿ ಆಯ್ಕೆ ಮಾಡಿದ ಕಸಿಕೊಂಬೆಯ ತಾಯಿ ಗಿಡದ ಹತ್ತಿರವೇ ಬೇರು ಸಸ್ಯಗಳನ್ನು ತೆಗೆದುಕೊಂಡು ಹೋಗಬೇಕಾಗುವುದು. ಕಸಿ ಕಟ್ಟುವಿಕೆ ಮುಗಿದ ಮೇಲೆ ತಾಯಿ ಗಿಡದ ಸುತ್ತಲೂ ದನ ಕರುಗಳು ಬರದಂತೆ ಎಚ್ಚರ ವಹಿಸಬೇಕು. ಅಟ್ಟದ ಮೇಲಿನ ಕುಂಡಗಳು ಕೆಳಗೆ ಬೀಳದಂತೆ ಕಾಳಜಿ ವಹಿಸಬೇಕು. ಇದು ಸ್ವಲ್ಪ ಕಷ್ಟವೆನಿಸಿದರೂ ಒಂದೇ ಬಾರಿಗೆ ದೊಡ್ಡ ತಾಯಿ ಗಿಡದಿಂದ ಹಲವಾರು ಕಸಿ ಗಿಡಗಳನ್ನು ಪಡೆಯಬಹುದು.

(ii) ಓಟೆ ಕಸಿ : ಪ್ರಮುಖ ಹಣ್ಣಿನ ಬೆಳೆಯಾದ ಮಾವಿನಲ್ಲಿ ಓಟೆ ಕಸಿ ವಿಧಾನವನ್ನು ಅನುಸರಿಸುವರು. ಈ ವಿಧಾನದಲ್ಲಿ ಖರ್ಚು ಕಡಿಮೆ ಹಾಗೂ ಸಮಯದ ಉಳಿತಾಯದ ದೃಷ್ಟಿಯಿಂದ ವಾಣಿಜ್ಯವಾಗಿ ಪ್ರಸಿದ್ಧಿ ಪಡೆದಿದೆ. 

ಮೊದಲು ಓಟೆ ಬಿತ್ತಿ ಬೇರು ಸಸಿ ಬೆಳೆಸಲಾಗುವುದು. ಸಸಿ ಮೊಳೆತಸುಮಾರು ೭-೧೦ ದಿನಗಳ ನಂತರ ಕಸಿ ಕಟ್ಟಲು ಬಳಸಬೇಕು. ನಾವು ಆರಿಸಿ ತಂದ ಕಸಿಕೊಂಬೆ ಪ್ರಸಕ್ತ ಸಾಲಿನಲ್ಲಿ ಬೆಳೆದುದಾಗಿರಬೇಕು. ಬೇರು ಸಸ್ಯವನ್ನು ಮಡಿ ಅಥವಾ ಪಾಲಿಥೀನ್ ಚೀಲಗಳಲ್ಲಿ ಬೆಳೆಸಬಹುದು.

ಚಿತ್ರ ೩ ರಲ್ಲಿ ತೋರಿಸಿರುವಂತೆ ಬೇರು ಸಸ್ಯದ ಮೇಲ್ಭಾಗವನ್ನು ಕತ್ತರಿಸಿದ ನಂತರ ಮೇಲಿನಿಂದ ಕೆಳಕ್ಕೆ ಸುಮಾರು ೨ ಸೆಂ.ಮೀ. ಆಳಕ್ಕೆ ಚಾಕುವಿನಿಂದ ಸೀಳು ಮಾಡಬೇಕು. ನಂತರ ಸಿದ್ಧಪಡಿಸಿಟ್ಟ ಕಸಿಕೊಂಬೆಯ ಕೆಳಭಾಗದಲ್ಲಿ ಎರಡೂ ಬದಿಗಳಲ್ಲಿ ಸುಮಾರು ೨ ಸೆಂ.ಮೀ. ಉದ್ದ ಕಚ್ಚುಕೊಟ್ಟು ಅದು ಬೇರು ಸಸಿಯಲ್ಲಿ ಸಿಕ್ಕಿಕೊಳ್ಳುವಂತೆ ಇಳಿ ಬಿಟ್ಟು ಬಿಗಿಯಾಗಿ ಸುತ್ತಿ ಕಟ್ಟಿ ನಂತರ ಬೇರು ಸಸಿಯ ಸೀಳೀನಲ್ಲಿ ಪೂರ್ಣ ತಯಾರಿಯ ಕಸಿಕೊಂಬೆ ಸಿಕ್ಕಿಸಿ ಕಟ್ಟಬೇಕು. ನಂತರ ಅದು ಕಸಿಗಿಡವಾಗಿ ಪೋಷಣೆಯೊಂದಿಗೆ ಸ್ವತಂತ್ರವಾಗಿ ಬೆಳೆಯುವುದು. ಓಟೆ ಕಸಿ ವಿಧಾನದಿಂದ ಕಡಿಮೆ ಸಮಯ ಹಾಗೂ ಖರ್ಚಿನಲ್ಲಿ ಹೆಚ್ಚು ಸಸಿಗಳನ್ನು ಉತ್ಪಾದಿಸಬಹುದು.

(iii) ಕಣ್ಣು ಕೂಡಿಸುವುದು : ಉತ್ತಮ ಜಾತಿ ಗಿಡದ ಮೊಗ್ಗುಗಳನ್ನು ಆಯ್ಕೆ ಮಾಡಿ ತೊಗಟೆ ಸಮೇತ ಅದನ್ನು ಬೇರ್ಪಡಿಸಿ ಬೇರು ಸಸ್ಯದಲ್ಲಿ ಸೇರಿಸಿ ಬೆಳೆಸುವ ಕ್ರಮವನ್ನು ’ಕಣ್ಣು ಕಸಿ’ ಅಥವಾ ’ಕಣ್ಣು ಕೂಡಿಸುವುದು’ ಎಂದು ಕರೆಯುವರು.

ಕಣ್ಣು ಕಸಿ ಮಾಡುವ ಸಮಯದಲ್ಲಿ ಬೇರು ಸಸಿಯು ರಸವತ್ತಾಗಿರಬೇಕು. ಹೀಗಾಗಿ ಬೇಸಿಗೆಯನ್ನು ಹೊರತುಪಡಿಸಿ ಕಣ್ಣು ಕೂಡಿಸುವುದು ಒಳ್ಳೆಯದು. ಆಯ್ಕೆ ಮಾಡಿದ ಮೊಗ್ಗು ದಪ್ಪವಾಗಿದ್ದು ಚಿಗುರುವ ಲಕ್ಷಣಗಳಿರಬೇಕು. ಬೇರ್ಪಡಿಸಿದ ತಕ್ಷಣ ಕಸಿ ಮೊಗ್ಗನ್ನು ಬೇರು ಸಸಿಗೆ ಜೋಡಿಸಬೇಕು. ಕಸಿ ಮೊಗ್ಗನ್ನು ದೂರದಿಂದ ತರುವುದಿದ್ದಲ್ಲಿ ಜೀವರಸ ಆರದಂತೆ ಕೊಂಬೆಯೊಂದಿಗೆ ತರಬೇಕು. ಮೊಗ್ಗನ್ನು ಬೇರು ಸಸಿಯಲ್ಲಿ ಸೇರಿಸಿದ ಮೇಲೆ ಕೂಡಿಕೆ ಸ್ಥಳದಲ್ಲಿ ಕಸಕಡ್ಡಿಗಳು ಸೇರದಂತೆ ಎಚ್ಚರ ವಹಿಸಬೇಕು.

ಗುಲಾಬಿ ಹೂವಿನ ಬೆಳೆಯಲ್ಲಿ ಕಣ್ಣು ಕೂಡಿಸುವುದರಿಂದ ಸಸ್ಯಾಭಿವೃದ್ಧಿ ಮಾಡಬಹುದು. ಒಂದು ಕಸಿ ಕೊಂಬೆಯ ಮೇಲಿರುವ ಹಲವಾರು ಕಸಿ ಮೊಗ್ಗುಗಳನ್ನು ವಿವಿಧ ಬೇರು ಸಸಿಗಳಿಗೆ ಕೂಡಿಸಲು ಉಪಯೋಗಿಸಬಹುದು. ಹೀಗಾಗಿ ಕಣ್ಣು ಕೂಡಿಸುವ ವಿಧಾನವು ಅನುಕೂಲಕರವಾಗಿದೆ.

(iv) ‘T’ ಆಕಾರದ ಕಣ್ಣು ಕಸಿ : ‘T’ ಆಕಾರದ ಕಣ್ಣು ಕಸಿ ಪದ್ಧತಿ ಬಹಳ ಜನಪ್ರಿಯವಾಗಿದೆ. ಬೇರು ಸಸಿಯ ತೊಗಟೆಯಲ್ಲಿ ಒಂದು ಉದ್ದನೆಯ ಹಾಗೂ ಅದರ ಮೇಲ್ಭಾಗದಲ್ಲಿ ಅಡ್ಡ ಕಚ್ಚು ಕೊಟ್ಟು (‘T’ ಆಕಾರದಲ್ಲಿ) ತೊಗಟೆಯನ್ನು ಸಡಿಲಗೊಳಿಸಬೇಕು. ನಂತರ ಕಸಿಕೊಂಬೆಯಿಂದ ಈ  ‘T’ ಆಕಾರಕ್ಕೆ ಹೊಂದಿಕೊಳ್ಳುವ ಹಾಗೆ ಕಚ್ಚು ಕೊಟ್ಟು ಮೊಗ್ಗು ತೆಗೆಯಬೇಕು. ಸ್ವಲ್ಪ ಕಾಂಡವನ್ನು ತೆಳುಭಾಗದೊಂದಿಗೆ ಮೊಗ್ಗು ಬೇರ್ಪಡಿಸಬೇಕು. ಆಮೇಲೆ ಬೇರು ಸಸಿಯ ‘T’ ಆಕಾರದ ಕಚ್ಚಿನ ಸೀಳುಗಳ ಮಧ್ಯೆ ಮೊಗ್ಗನ್ನು ಸೇರಿಸಿ, ಮೊಗ್ಗಿನ ಭಾಗ ಬಿಟ್ಟು ಮೇಲೆ ಮತ್ತು ಕೆಳಗೆ ಕಟ್ಟಬೇಕು. ಕಟ್ಟಲು ಪ್ಲಾಸ್ಟಿಕ್ ಪಟ್ಟಿ ಉಪಯೋಗಿಸಬಹುದು. ನಂತರ ಕಸಿಗಿಡದ ಉಪಚಾರ ಪ್ರಾರಂಭವಾಗುವುದು. ಕೆಲವು ದಿನಗಳ ನಂತರ ಮೊಗ್ಗು ಚಿಗುರುತ್ತದೆ. 

ಈ ಪದ್ಧತಿಯನ್ನು ಗುಲಾಬಿ, ಕಿತ್ತಳೆ, ಸೇಬು ಮುಂತಾದ ಬೆಳೆಗಳಿಗೆ ಅನುಸರಿಸುತ್ತಾರೆ. ವಾಣಿಜ್ಯದ ದೃಷ್ಟಿಯಿಂದ ಈ ಪದ್ಧತಿ ಹೆಚ್ಚು ಜನಪ್ರಿಯವಾಗಿದೆ. ಈ ಪದ್ಧತಿಯಿಂದ ಉತ್ಪಾದಿಸಿದ ಗಿಡಗಳು ಉತ್ತಮ ಗುಣಮಟ್ಟದ್ದಾಗಿರುತ್ತವೆ.

. ಗೂಟಿ/ಲೇಯರಿಂಗ್ ವಿಧಾನ

ಹಲವಾರು ಬಗೆಯ ಸಸ್ಯಾಭಿವೃದ್ಧಿ ವಿಧಾನಗಳಲ್ಲಿ ಗೂಟಿ ವಿಧಾನ ಸಹ ಒಂದು ಗಿಡದಲ್ಲಿನ ರೆಂಬೆಗಳನ್ನು ಸವರುವ ಮುನ್ನ ಅವುಗಳಿಗೆ ಸೂಕ್ತ ವಾತಾವರಣ ಕಲ್ಪಿಸಿ ಬೇರು ಬರಿಸುವ ಕ್ರಮವೇ ಗೂಟಿ ವಿಧಾನ.

ರೆಂಬೆಗಳ ತೊಗಟೆಯನ್ನು ಗಾಯ ಮಾಡಿ ಮಣ್ಣಿನಲ್ಲಿ ಹೂತು ಇಲ್ಲವೇ ಗಾಯ ಮಾಡಿದ ರೆಂಬೆಗಳ ಭಾಗಕ್ಕೆ ಬೇರು ಮಾಧ್ಯಮದ ಮಿಶ್ರಣ ಕೊಟ್ಟು ಪಾಲಿಥೀನ್ ಹಾಳೆಯಿಂದ ಸುತ್ತು ಕಟ್ಟಬೇಕು. ಈ ನಿಯಮಗಳನ್ನುನಸರಿಸಿ ರೆಂಬೆಗಳಲ್ಲಿ ಬೇರು ಬರಿಸಲಾಗುವುದು. ನಂತರ ಬೇರು ಬಂದ ರೆಂಬೆಗಳನ್ನು ತಾಯಿ ಗಿಡದಿಂದ ಕಚ್ಚುಕೊಟ್ಟು ಬೇರ್ಪಡಿಸಿ ಸ್ವತಂತ್ರ ಸಸ್ಯವಾಗಿ ಬೆಳೆಸಲಾಗುವುದು.

ರೆಂಬೆಗಳಿಂದ ಬೇರು ಬಿಡುವಂತೆ ಮಾಡುವ ವಿಧಾನದಲ್ಲಿ ಮೂ ರು ಬಗೆಗಳಿವೆ. ಅವುಗಳೆಂದರೆ :

(i) ಸರಳ ಗೂಟಿ ವಿಧಾನ, (ii) ಸರಣಿ ಗೂಟಿ ವಿಧಾನ ಮತ್ತು (iii) ಗೂಟಿ ಅಥವಾ ಲೇಯರಿಂಗ್ ವಿಧಾನ.

(i) ಸರಳ ಗೂಟಿ ವಿಧಾನ : ಈ ವಿಧಾನದಲ್ಲಿ ಬಾಗುವ ಸಾಮರ್ಥ್ಯ ಹೊಂದಿರುವ ರೆಂಬೆಗಳನ್ನು ಆಯ್ಕೆ ಮಾಡಲಾಗುವುದು. ಕಾಂಡದ ಬುಡದಲ್ಲಿರುವ ರೆಂಬೆಗಳು ಈ ರೀತಿ ಬಾಗುವ ಸಾಮರ್ಥ್ಯ ಹೊಂದಿರುತ್ತವೆ. ನಂತರ ಈ ರೆಂಬೆಗಳಿಗೆ ಉಂಗುರಾಕಾರದ ಕಚ್ಚು ಕೊಟ್ಟು ಸಿಪ್ಪೆ ತೆಗೆಯಬೇಕು. ಈ ರೀತಿ ಗಾಯ ಮಾಡಿದ ಭಾಗವನ್ನು ಮಣ್ಣಿನಲ್ಲಿ ಊರಬೇಕು. ಈ ಊರಿದ ರೆಂಬೆಗಳು ಪುಟಿದು ಮೇಲೇಳದಂತೆ ಎರಡೂ ಬದಿಗಳಲ್ಲಿ ಭಾರವಾದ ವಸ್ತುಗಳನ್ನಿಡಬೇಕು. 

ಗಾಯ ಮಾಡಿ ಊರಿದ ರೆಂಬೆಗಳ ಭಾಗಗಳಲ್ಲಿ ಸುಮಾರು ೪೫-೬೦ ದಿನಗಳಲ್ಲಿ ಬೇರುಗಳು ಬಂದಿರುತ್ತವೆ. ನಂತರ ಅವಶ್ಯಕತೆಗೆ ತಕ್ಕಂತೆ ಕಚ್ಚು ಕೊಟ್ಟು ಬೇರು ಬಿಟ್ಟ ಭಾಗಗಳನ್ನು ಬೇರ್ಪಡಿಸಿದ ನಂತರ ಅವು ಸ್ವತಂತ್ರ ಸಸಿಗಳಾಗಿ ಬೆಳೆಯುತ್ತವೆ.

ಒಂದು ವೇಳೆ ರೆಂಬೆಗಳು ಭೂಮಿಯ  ಮಟ್ಟಕ್ಕೆ ಬಾಗುವ ಸ್ಥಿತಿಯಲ್ಲಿಲ್ಲದಿದ್ದರೆ ಗೊಬ್ಬರದ ಮಾಧ್ಯಮದ ಮಿಶ್ರಣ ತುಂಬಿದ ಕುಂಡಗಳನ್ನು ತಾಯಿ ಗಿಡದ ಕೆಳಗೆ ಇಟ್ಟು ರೆಂಬೆಗಳನ್ನು ಕುಂಡ ಮಿಶ್ರಣದಲ್ಲಿ ಹಾಯಿಸಿ ಬೇರು ಬರಿಸಬಹುದು. ರೆಂಬೆಗಳು ಬಹಳಷ್ಟು ಎತ್ತರದಲ್ಲಿದ್ದರೆ ಬೇರೊಂದು ಕ್ರಮ ಅನುಸರಿಸಬೇಕು. ಚಿತ್ರ ೬ ರಲ್ಲಿ ತೋರಿಸಿರುವಂತೆ ಅಟ್ಟಣಿಗೆಗಳನ್ನು ನಿರ್ಮಿಸಿ ಅವುಗಳ ಮೇಲೆ ಕುಂಡಗಳನ್ನಿಟ್ಟು ಆ ಕುಂಡಗಳಲ್ಲಿ ಗೊಬ್ಬರದ ಮಿಶ್ರಣ ತುಂಬಿ ರೆಂಬೆಗಳನ್ನು ಬಗ್ಗಿಸಿ ಪೋಷಿಸಿ ಬೇರು ಬರಿಸಬಹುದು. 

(ii) ಸರಣಿ ಗೂಟಿ ವಿಧಾನ : ಮೇಲೆ ವಿವರಿಸಿದ ಸರಳ ಗೂಟಿ ವಿಧಾನವನ್ನೇ ಇಲ್ಲಿಯೂ ಅನುಸರಿಸಲಾಗುವುದಾದರೂ ಇಲ್ಲಿ ಆಯ್ಕೆ ಮಾಡಿದ ರೆಂಬೆಯನ್ನು ಹಲವಾರು ಬಾರಿ ಮಣ್ಣಿನಲ್ಲಿ ಊರಿದರೆ ಒಂದೇ ರೆಂಬೆಯಿಂದ ಹಲವಾರು ಸಸಿಗಳನ್ನು ಪಡೆಯಲು ಸಾಧ್ಯ. ಸಾಕಷ್ಟು ಉದ್ದವಾಗಿರುವ ರೆಂಬೆಯನ್ನು ಆಯ್ಕೆ ಮಾಡಿ ಈ ಕ್ರಮ ಅನುಸರಿಸಬಹುದು. ಆದರೆ ಸರಳ ಗೂಟಿ ವಿಧಾನದಲ್ಲಿ ಉತ್ಪಾದಿಸಿದ ಸಸಿಗಳಷ್ಟು ಸದೃಢ ಸಸಿಗಳು ಈ ವಿಧಾನದಲ್ಲಿ ನಮಗೆ ದೊರೆಯುವುದಿಲ್ಲ.

ಇದಕ್ಕೆ ಕಾರಣ ಪೋಷಕಾಂಶಗಳ ಕೊರತೆ, ಆದ್ದರಿಂದ ಸರಣಿ ಗೂಟಿ ವಿಧಾನದಲ್ಲಿ ಸಸಿಗಳನ್ನು ಬೇರ್ಪಡಿಸಿದ ಮೇಲೆ ಅವುಗಳನ್ನು ಹೆಚ್ಚು ಜೋಪಾನ ಮಾಡಬೇಕಾಗುವುದು.

(iii) ಗೂಟಿ ಅಥವಾ ಲೇಯರಿಂಗ್ ವಿಧಾನ : ಸುಮಾರು ಒಂದು ವರ್ಷ ವಯಸ್ಸಿನ ಸದೃಢ ರೆಂಬೆಗಳನ್ನು ಈ ವಿಧಾನಕ್ಕೆ ಆಯ್ಕೆ ಮಾಡಬೇಕು. ರೆಂಬೆ ರೋಗ ಮುಕ್ತವಾಗಿದ್ದು, ಸುಮಾರು ಒಂದೂವರೆ ಸೆಂ.ಮೀ. ದಪ್ಪವಿರಬೇಕು. ರೆಂಬೆಯ ಮೇಲೆ ಉಂಗುರಾಕಾರದ ೨ ಸೆಂ.ಮೀ. ಉದ್ದದ ಕಚ್ಚು ಕೊಟ್ಟು ತೊಗಟೆ ಬಿಡಿಸಬೇಕು. ನಂತರ ಬ್ರಶ್‌ನಿಂದ ಸಸ್ಯಚೋದಕವನ್ನು ಈ ಭಾಗಕ್ಕೆ ಬಳಿಯಬೇಕು. ಆಮೇಲೆ ಸ್ಪ್ಯಾಗ್ನಮ್ ಮಾಸನ್ನು ಹಸಿ ಮಾಡಿ ಗಾಯದ ಸುತ್ತಲೂ ಹೊದಿಸಿಟ್ಟು ಪಾರದರ್ಶಕ ಪಾಲಿಥೀನ್ ಹಾಳೆಯಿಂದ ಸುತ್ತಿ, ಎರಡೂ ತುದಿಗಳನ್ನು ಬಿಗಿಯಾಗಿ ಕಟ್ಟಬೇಕು.

ತಾಯಿ ಗಿಡದ ಪೋಷಕಾಂಶಗಳನ್ನೇ ಬಳಸಿಕೊಂಡು ಗಾಯ ಮಾಡಿದ ಭಾಗದಲ್ಲಿ ಬೇರುಗಳು ಬರಲು ಪ್ರಾರಂಭಿಸುತ್ತವೆ. ಬೇರು ಬರುತ್ತಿರುವುದನ್ನು ಪಾರದರ್ಶಕ ಪಾಲಿಥೀನ್ ಚೀಲದ ಮೂಲಕ ವೀಕ್ಷಿಸಬಹುದು. ಬೇರುಗಳು ಬಂದ ನಂತರ ಹಂತ ಹಂತವಾಗಿ ಕಚ್ಚು ಕೊಟ್ಟು ತಾಯಿಗಿಡದಿಂದ ಬೇರುಬಂದ ಭಾಗಗಳನ್ನು ಬೇರ್ಪಡಿಸಲಾಗುವುದು. ಮುಂದೆ ಅದು ಸ್ವತಂತ್ರ ಸಸ್ಯವಾಗಿ ಬೆಳೆಯುವುದು. ಸೀಬೆ, ದಾಳಿಂಬೆ, ಹಲಸು, ಕ್ರೋಟಾನ್ ಇತ್ಯಾದಿಗಳಲ್ಲಿ ಗೂಟಿ ವಿಧಾನ ಅನುಸರಿಸಿ ಸಸ್ಯಭಿವೃದ್ಧಿ ಮಾಡಬಹುದು. ಈ ವಿಧಾನದಿಂದ ಖರ್ಚು ಕಡಿಮೆ ಮತ್ತು ಸಸ್ಯಾಭಿವೃದ್ಧಿ ಸುಲಭ.

. ಅಂಗಾಂಶ ಕೃಷಿ ವಿಧಾನ

ಇದನ್ನು ಊತಕ ಕೃಷಿ ಎಂದೂ ಕರೆಯುತ್ತಾರೆ. ಈ ವಿಧಾನವು ಇತ್ತೀಚೆಗೆ ತುಂಬಾ ಜನಪ್ರಿಯವಾಗಿದ್ದು. ಉತ್ತಮ ಗುಣಮಟ್ಟದ ಸಸಿಗಳನ್ನು ತುಂಬಾ ಕಡಿಮೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಲು ಸಾಧ್ಯ.

ಸಸ್ಯದ ಭಾಗಗಳಾದ ಎಲೆ, ಕಾಂಡ, ಬೇರು ಇತ್ಯಾದಿಗಳ ಚಿಕ್ಕ ತುಂಡುಗಳ ಮೂಲಕ ಹೊಸ ಸಸ್ಯ ಪಡೆಯುವ ವಿಧಾನ ಇದಾಗಿದೆ. ಪ್ರಯೋಗ ನಳಿಕೆಗಳಲ್ಲಿ ಕೃತಕ ಪೋಷಕಾಂಶಗಳನ್ನು ಪೂರೈಸಿ ಸಸಿಗಳನ್ನು ಪಡೆಯಬಹುದು.

* * *