ಪ್ರತಿನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳಲ್ಲಿ ಒಂದಿಲ್ಲೊಂದು ಸಂಬಾರ ಪದಾರ್ಥ ಇದ್ದೇ ಇರುವುದು. ಸಂಬಾರ ಪದಾರ್ಥಗಳು ಆಹಾರಕ್ಕೆ ಕಂಪು ನೀಡು ರುಚಿಯನ್ನು ಹೆಚ್ಚಿಸುತ್ತವೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಗಳ ತಯಾರಿಕೆಯಲ್ಲಿ ಸಂಬಾರ ಪದಾರ್ಥಗಳನ್ನು ಹೇರಳವಾಗಿ ಉಪಯೋಗಿಸುವರು. ಕೈತೋಟದ ವಿಸ್ತೀರ್ಣ ಕಡಿಮೆ ಇರುವುದರಿಂದ ಎಲ್ಲ ಸಂಬಾರ ಬೆಳೆಗಳನ್ನು ಬೆಳೆಯುವುದು ಕಷ್ಟ. ದಿನ ನಿತ್ಯ ಉಪಯೋಗದಲ್ಲಿರುವ ಕೆಲವು ಬೆಳೆಗಳನ್ನು ಕೈತೋಟದಲ್ಲಿ ಬೆಳೆಯಲು ತೊಂದರೆಯೇನಿಲ್ಲ.

. ಅರಿಸಿನ

ಅರಿಸಿನ ನಿತ್ಯೋಪಯೋಗಿ ವಸ್ತು. ಒಗ್ಗರಣೆಗೆ, ಸಾರು, ಪಲ್ಯ ಇತ್ಯಾದಿಗಳ ತಯಾರಿಕೆಯಲ್ಲಿ ಅರಿಸಿನದ ಪಾತ್ರ ಮಹತ್ವದ್ದು. ಅನೇಕ ಸಾಂಪ್ರದಾಯಿಕ ಶುಭ ಕಾರ್ಯಗಳಲ್ಲಿ ಅರಿಸಿನ ಬೇಕೇ ಬೇಕು ಹಾಗೂ ಸುಗಂಧ ವಸ್ತುಗಳ ಮತ್ತು ಅನೇಕ ಔಷಧಿಗಳ ತಯಾರಿಕೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಳಸುವರು.

ನೀರಾವರಿ ವ್ಯವಸ್ಥೆ ಇದ್ದಲ್ಲಿ ಅರಿಸಿನವನ್ನು ಫಲಪ್ರದವಾಗಿ ಬೆಳೆಯಬಹುದು. ವಿವಿಧ ಬಗೆಯ ಮಣ್ಣುಗಳಲ್ಲಿ ಬೆಳೆಯಬಹುದಾದರೂ ಮರಳು ಮಿಶ್ರಿತ ಕಪ್ಪು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ತಳಿಗಳಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ಎಂಬ ಎರಡು ಬಗೆಗಳಿವೆ. ಅಲ್ಪಾವಧಿ ತಳಿಗಳು ಸುಮಾರು ಏಳು ತಿಂಗಳಿಗೆ ಕೊಯ್ಲಿಗೆ ಬರುತ್ತವೆ. ಉದಾ, ಅರೆಪ್ಪಿ ತಳಿ, ಟೆಕೂರ ಪೇಟ ಇತ್ಯಾದಿ. ದೀರ್ಘಾವಧಿ ತಳಿಗಳು ಒಂಭತ್ತು ತಿಂಗಳಿಗೆ ಕೊಯ್ಲಿಗೆ ಬರುತ್ತವೆ. ಉದಾ: ಅಮಲಾಪುರಂ.

ಬೇರು ಕಾಂಡಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು. ಮಡಿಗಳಲ್ಲಿ ಇಲ್ಲದೆ ಸಾಲು ನಾಟಿ ಮಾಡಬಹುದು. ಮಣ್ಣಿನ ಗುಣಧರ್ಮಗಳನ್ನು ಅನುಸರಿಸಿ ಅವಶ್ಯಕತೆಗನುಗುಣವಾಗಿ ನೀರು ಪೂರೈಕೆ ಮಾಡಬೇಕು. ಗೆಡ್ಡೆಗಳನ್ನು ಅಗೆದು ಹೊರತೆಗೆದು ನಂತರ ಅವುಗಳನ್ನು ಹದಗೊಳಿಸಬಹುದು.

. ಜೀರಿಗೆ

ಜಿರಿಗೆ ಪ್ರಮುಖವಾದ ಸಂಬಾರ ಬೆಳೆಗಳಲ್ಲಿ ಒಂದು. ಬೇರೆ ಬೇರೆ ದೇಶಗಳಿಗೆ ಭಾರತದಿಂದ ರಫ್ತು ಮಾಡುವ ಮಟ್ಟಕ್ಕೆ ಜೀರಿಗೆ ವ್ಯವಸಾಯದಲ್ಲಿದೆ. ಅಡುಗೆ ಪದಾರ್ಥಗಳಲ್ಲಿ ಇದನ್ನು ಬಳಸುವುದಲ್ಲದೇ ಕೆಲವು ಬೇಕರಿ ಪದಾರ್ಥಗಳ ತಯಾರಿಕೆಯಲ್ಲೂ ಉಪಯೋಗಿಸುವರು. ಜೀರಿಗೆಯಿಂದ ತೆಗೆದ ತೈಲವನ್ನು ಸುವಾಸನೆಗೋಸ್ಕರ ವಿವಿಧ ವಸ್ತುಗಳ ತಯಾರಿಕೆಯಲ್ಲಿ ಬಳಸುವರು. ಸಮಶೀತೋಷ್ಣ ಹವಾಗುಣ ಈ ಬೆಳೆಗೆ ಒಳ್ಳೆಯದು. ಗೋಡು ಮಣ್ಣು ಬೇಸಾಯಕ್ಕೆ ಸೂಕ್ತ. ಏಪ್ರಿಲ್ ಮತ್ತು ಅಕ್ಟೋಬರ್‌‌ತಿಂಗಳುಗಳು ಬಿತ್ತನೆಗೆ ಸೂಕ್ತ ಸಮಯ.

ಜೀರಿಗೆಯಲ್ಲಿ ಅನೇಕ ಸುಧಾರಿತ ತಳಿಗಳಿವೆ. ಆರ್‌‌.ಎಸ್.-೧, ಎಂ.ಸಿ.-೪೩ ಮತ್ತು ಎಸ್.-೪೦೪ ತಳಿಗಳು ಪ್ರಮುಖವಾದುವುಗಳು. ಮಡಿಗಳನ್ನು ತಯಾರಿಸಿ ಬೀಜ ಬಿತ್ತನೆ ಮಾಡಬೇಕು. ಬೀಜೋಪಚಾರ ಮಾಡಿದ ಬೀಜವನ್ನೇ ಬಿತ್ತಲು ಉಪಯೋಗಿಸಬೇಕು. ಆರಂಭದಲ್ಲಿ ೩-೪ ದಿನಗಳಿಗೊಮ್ಮೆ ನೀರು ಪೂರೈಸಬೇಕು. ಬೀಜ ಬಿತ್ತನೆ ಮಾಡಿದ ಸುಮಾರು ಮೂರೂವರೆ ತಿಂಗಳಿಗೆ ಬೆಳೆ ಕೊಯ್ಲಿಗೆ ಬರುತ್ತದೆ. ಇಡೀ ಸಸ್ಯವನ್ನೇ ಕಿತ್ತು ಒಣಗಿಸಿ ನಂತರ ಕಾಳುಗಳನ್ನು ಬೇರ್ಪಡಿಸಬೇಕು.

. ಸಾಸುವೆ

ನಿತ್ಯೋಪಯೋಗಿ ಸಂಬಾರ ದಿನಸುಗಳಲ್ಲಿ ಸಾಸುವೆ ಕೂಡಾ ಒಂದು. ಜೀರಿಗೆ-ಸಾಸುವೆ ಸಹೋದರರಿದ್ದಂತೆ. ಈ ಎರಡನ್ನೂ ಸೇರಿಸಿ ತಯಾರಿಸುವ ಪದಾರ್ಥಗಳು ಅನೇಕ. ಸಾಸುವೆಗೆ ಔಷಧೀಯ ಗುಣಗಳೂ ಇವೆ. ಇದನ್ನು ಅಡುಗೆಯಲ್ಲಂತೂ ಹೇರಳವಾಗಿ ಉಪಯೋಗಿಸುವರು. ಸಾಸುವೆಯನ್ನು ಕಪ್ಪು ಮಣ್ಣು ಹೊರತುಪಡಿಸಿ ಮಿಕ್ಕೆಲ್ಲಾ ಮಣ್ಣುಗಳಲ್ಲಿ ಮಿಶ್ರ ಬೆಳೆಯಾಗಿಯೂ ಬೆಳೆಯುತ್ತಾರೆ. ಜುಲೈ, ಆಗಸ್ಟ್ ಮತ್ತು ಅಕ್ಟೋಬರ್‌‌ತಿಂಗಳುಗಳಲ್ಲಿ ಬಿತ್ತನೆ ಮಾಡಬಹುದು.

ತಳಿಗಳಲ್ಲಿ ಆರ್‌‌.ಟಿ.-೧೧ ಮತ್ತು ವರುಣ ಉತ್ತಮವಾದುವುಗಳು. ಇದರಲ್ಲಿ ’ಬಿಳಿ ಸಾಸುವೆ’ ಮತ್ತು ’ಕಪ್ಪು ಸಾಸುವೆ’ ಎಂಬ ಎರಡು ಬಗೆಗಳಿವೆ. ೪೫ ಸೆಂ.ಮೀ. ಅಂತರದ ಸಾಲುಗಳಲ್ಲಿ ತೆಳುವಾಗಿ ಬಿತ್ತನೆ ಮಾಡಿ ಸಸಿ ಮೇಲೇಳುತ್ತಿರುವಾಗ ೧೫ ಸೆಂ.ಮೀ. ಗೆ ಒಂದರಂತೆ ಸಸಿಗಳನ್ನು ಉಳಿಸಿಕೊಂಡು ಉಳಿದವುಗಳನ್ನು ಕಿತ್ತು ಹಾಕಬೇಕು. ಬಿತ್ತನೆ ಮಾಡಿದ ನಾಲ್ಕು ತಿಂಗಳ ನಂತರ ಬೆಳೆ ಕಟಾವಿಗೆ ಬರುತ್ತದೆ. ಗಿಡಗಳನ್ನು ಕಿತ್ತು ಒಣಗಿಸಿ ಕಾಳುಗಳನ್ನು ಸಂಗ್ರಹಿಸಬಹುದು.

. ಶುಂಠಿ

ಶುಂಠಿಯನ್ನು ಹಸಿ ಶುಂಠಿ ಮತ್ತು ಒಣ ಶುಂಠಿ ಎಂದು ಎರಡು ರೂಪಗಳಲ್ಲಿ ಉಪಯೋಗಿಸುತ್ತಾರೆ. ದಿನನಿತ್ಯದ ಆಹಾರ, ಔಷಧಿ ಮತ್ತು ಪಾನೀಯಗಳ ತಯಾರಿಕೆಯಲ್ಲಿ ಇದನ್ನು ಹೇರಳವಾಗಿ ಬಳಸುವರು.

ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಶುಂಠಿಯಿಂದ ಹೆಚ್ಚು ಇಳುವರಿ ಬರುತ್ತದೆ. ಆರ್ದ್ರತೆಯಿಂದ ಕೂಡಿದ ವಾತಾವರಣ ಇದಕ್ಕೆ ಒಳ್ಳೆಯದು. ಸಾವಯವ ವಸ್ತುಗಳಿಂದ ಕೂಡಿದ ಮಣ್ಣು ಈ ಬೆಳೆಗೆ ಸೂಕ್ತ ಮತ್ತು ಮರಳು ಮಿಶ್ರಿತ ಗೋಡು ಮಣ್ಣು ಸೂಕ್ತ. ತಳಿಗಳಲ್ಲಿ ವೈನಾಡ್ ಮಾನಂದೋಡಿ, ಮಾರನ್, ತಾಯ್‌ಗುಪ್ಪ ಮುಂತಾಗಿ ಬೇಸಾಯದಲ್ಲಿವೆ. ಸುಧಾರಿತ ತಳಿಗಳಾದ ರಿಯೋಡಿ ಜನೈರೊ ಮತ್ತು ಚೈನಾ ಉತ್ತಮ ತಳಿಗಳು.

ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳು ಬಿತ್ತನೆಗೆ ಸೂಕ್ತ. ಮಡಿಗಳನ್ನು ತಯಾರಿಸಿ ಹದಗೊಳಿಸಿ ೪೫ ಸೆಂ.ಮೀ. ಅಂತರದಲ್ಲಿ ಸಾಲು ಬಿಡಬೇಕು. ನಂತರ ಒಂದು ಅಥವಾ ಎರಡು ಕಣ್ಣುಗಳಿರುವ ಶುಂಠಿಯ ತುಂಡುಗಳನ್ನು ೩೦ ಸೆಂ.ಮೀ. ಅಂತರದ ಸಾಲುಗಳಲ್ಲಿ ಊರಿ ಮಣ್ಣಿನಿಂದ ಮುಚ್ಚಬೇಕು. ಊರಿದ ಆರು ತಿಂಗಳ ನಂತರ ಫಸಲು ಪಡೆಯಬಹುದು. ಇದು ಹಸಿ ಶುಂಠಿ. ಇದನ್ನು ಹದ ಮಾಡಿ ಒಣ ಶುಂಠಿ ತಯಾರಿಸಬಹುದು