ಕೈತೋಟದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಪ್ರತ್ಯೇಕವಾಗಿ ಇಲ್ಲವೇ ಗುಂಪುಗಳಲ್ಲಿ ಬೆಳೆಯಬಹುದು. ಅವು ಹೆಚ್ಚು ಲಾಭದಾಯಕವಾಗಿರುವಂತೆ ನಕ್ಷೆಯನ್ನು ರೂಪಿಸಬೇಕು. ತೋಟದ ಗಾತ್ರವು ಲಭ್ಯವಿರುವ ಜಾಗ ಹಾಗೂ ಅದರ ಉಸ್ತುವಾರಿಗೆ ಸಿಗುವ ಕಾಲಾವಕಾಶ, ದಿನನಿತ್ಯ ಕುಟುಂಬಕ್ಕೆ ಬೇಕಾಗುವ ಹಣ್ಣು ಮತ್ತು ತರಕಾರಿಗಳ ಪ್ರಮಾಣ ಮುಂತಾದ ಅಂಶಗಳನ್ನವಲಂಬಿಸುತ್ತದೆ. ಸರಾಸರಿ ೫-೬ ಜನರಿರುವ ಕುಟುಂಬಕ್ಕೆ ಹಣ್ಣು ತರಕಾರಿಗಳನ್ನು ಒದಗಿಸಲು ೨೦೦ ಚದರ ಮೀಟರ್‌‌ಜಾಗ್ ಸಾಕಾಗುತ್ತದೆ. ಹಾಗಾಗಿ ಮನೆಯ ಸುತ್ತ ಲಭ್ಯವಿರುವ ಜಾಗ ಮತ್ತು ಕುಟುಂಬದ ಜನಸಂಕ್ಯೆಯನ್ನನುಸರಿಸಿ ದೊಡ್ಡ, ಮಧ್ಯಮ ಮತ್ತು ಸಣ್ಣ ಗಾತ್ರದ ತೋಟವನ್ನು ಬೆಳೆಸಬಹುದು.

ಕೈತೋಟದ ನಕ್ಷೆ

ಸಾಮಾನ್ಯವಾಗಿ ಚೌಕಾಕಾರದ ತಾಕುಗಳಿಗಿಂತ ಆಯಾತಾಕಾರದ ತಾಕುಗಳನ್ನು ಇಷ್ಟಪಡುವುದೇ ಹೆಚ್ಚು. ಅಂತಹ ತಾಕುಗಳಲ್ಲಿ ಬೇಸಾಯ ಕ್ರಮಗಳು ಸುಲಭವಿರುತ್ತವೆ. ತೋಟದ ದಕ್ಷಿಣ ಹಾಗೂ ಪಶ್ಚಿಮ ಭಾಗಗಳಲ್ಲಿ ತರಕಾರಿಗಳನ್ನು ಬೆಳೆಸಬೇಕು. ಇದರಿಂದಾಗಿ ಬಿಸಿಲು ಬೆಳಕು ಯಥೇಚ್ಛವಾಗಿ ದೊರೆತು ಹೆಚ್ಚು ಬೆಳವಣಿಗೆ ಸಾಧ್ಯ.

ತೋಟದ ಸುತ್ತ ಪಾಳಿಗೋಡೆ ಇಲ್ಲದಿದ್ದಲ್ಲಿ ಬಲವಾದ ಬೇಲಿ ಹಾಕಬೇಕು. ಐದಾರು ಮೀಟರ್‌ಗೊಂದರಂತೆ ಗೂಟಗಳನ್ನು ನೆಟ್ಟು ಮೂರು ನಾಲ್ಕು ಎಳೆ ಮುಳ್ಳುತಂತಿಯನ್ನು ಎಳೆದು ಕಟ್ಟಿದರೆ ಸಾಕಷ್ಟು ರಕ್ಷಣೆ ಸಿಗುತ್ತದೆ. ತೊಂಡೆ, ಕುಂಬಳ, ಸೋರೆ ಮುಂತಾದ ಬಳ್ಳಿ ತರಕಾರಿಗಳನ್ನು ಬೇಲಿಗೆ ಹಬ್ಬಿಸಬಹುದು. ಇದರಿಂದ ಜಾಗದ ಉಳಿತಾಯ ಸಾಧ್ಯ. ನೀರುಗಾಲುವೆಗಳು ಮತ್ತು ದಾರಿ, ತೋಟದ ಎಲ್ಲಾ ಭಾಗಗಳನ್ನು ಸಂಧಿಸುವಂತಿರಬೇಕು. ಆದರೆ ಅವುಗಳಿಗೆ ಆದಷ್ಟು ಕಡಮೆ ಜಾಗ ಬಳಕೆಯಾಗಬೇಕಷ್ಟೆ.

ಬೇರು ಮತ್ತು ಗೆಡ್ಡೆ ತರಕಾರಿಗಳನ್ನು ಬದುಗಳ ಮೇಲೆ ಬೆಳೆಸಬಹುದು. ಪಡವಲ ಮುಂತಾದುವುಗಳನ್ನು ನೆಲದ ಮೇಲೆ ಹರಡಿ ಬೆಳೆಯಲು ಬಿಡದೆ ಕಡಿಮೆ ಖರ್ಚಿನಿಂದ ಕೂಡಿದ ಚಪ್ಪರದ ಮೇಲೆ ಹಬ್ಬಿಸುವುದು ಒಳ್ಳೆಯದು. ಬಹುವಾರ್ಷಿಕ ಸಸ್ಯಗಳ ನಡುವಣ ಜಾಗದಲ್ಲಿ ಬೇಗ ಕೊಯ್ಲಿಗೆ ಬರುವ ಹಾಗೂ ಆಳವಾಗಿ ಬೇರು ಬಿಡದಂತಹ ಬೆಳ್ಳುಳ್ಳಿ, ಈರುಳ್ಳಿ, ಕೊತ್ತುಂಬರಿ ಮುಂತಾದ ಏಕ ಋತುವಿನ ತರಕಾರಿಗಳನ್ನು ಬೆಳೆಯಬೇಕು.

 

ಪೌಷ್ಟಿಕ ತೋಟಕ್ಕೆ ಸ್ನಾನದ ಹಾಗೂ ಬಚ್ಚಲು ಮನೆಯ ನೀರೂ ಬಳಸಿಕೊಳ್ಳಬಹುದು. ವಿವಿಧ ಅಗತ್ಯಗಳಿಗೆ ಸರಿಹೊಂದುವ ತೋಟಗಳ ಮಾದರಿ ನಕ್ಷೆಗಳನ್ನು ಚಿತ್ರ ೮, ೯ ಮತ್ತು ೧೦ ರಲ್ಲಿ ಕೊಟ್ಟಿದೆ. ಕ್ರಮಬದ್ಧ ಆಯ್ಕೆ ಮತ್ತು ಕೊಯ್ಲುಗಳಿದ್ದಲ್ಲಿ ಸತತ ಪೂರೈಕೆ ಹಾಗೂ ಹೆಚ್ಚುವರಿ ಸಂಗ್ರಹಣೆಯಿಂದ ಸರಕು ಹಾಳಾಗುವುದು ತಪ್ಪುತ್ತದೆ. ನಕ್ಷೆಯಲ್ಲಿ ಪ್ರತಿಯೊಂದು ಬೆಳೆಗೆ ಕೊಡಬೇಕಾದ ಅಂತರವನ್ನು ಅನುಸರಿಸಿದಲ್ಲಿ ಇತರ ಬೆಳೆಗಳಿಗೆ ನೆರಳುಂಟಾಗುವುದಿಲ್ಲ.

ಹಣ್ಣಿನ ಮತ್ತು ತರಕಾರಿ ಬೆಳೆ ತಳಿಗಳನ್ನು ಆಯ್ಕೆ ಮಾಡುವಾಗ ಬೇಗ ಫಸಲು ಬಿಡುವ ಮತ್ತು ಗಿಡ ತಳಿಗಳಿಗೆ ಆದ್ಯತೆ ನೀಡಬೇಕು. ವರ್ಷದ ಯಾವುದೇ ಋತುವಿನಲ್ಲಿ ನಾಲ್ಕಾರು ಬೆಳೆಗಳಿರುವಂತೆ ತರಕಾರಿಗಳಲ್ಲಿ ಸೂಕ್ತ ಬೆಳೆ ಪರಿವರ್ತನೆಯನ್ನು ಅನುಸರಿಸುವುದು ಲಾಭದಾಯಕ. ಪ್ರತಿಯೊಂದು ತಾಕು ತನ್ನದೇ ಆದ ಬೆಳೆ ಪರಿವರ್ತನೆಯನ್ನು ಹೊಂದಿರಬೇಕು. ವಿವಿಧ ತಾಕುಗಳಲ್ಲಿನ ಫಸಲು ಏಕಕಾಲಕ್ಕೆ ಕೊಯ್ಲಿಗೆ ಬರುವ ಬದಲಾಗಿ ಬೇರೆ ಬೇರೆ ಸಮಯಕ್ಕೆ ಕೊಯ್ಲಿಗೆ ಬರುವಂತಿರಬೇಕು. ಅಗತ್ಯವೆನಿಸಿದಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡಬಹುದು.

. ಕೈತೋಟದ ಬೆಳೆಗಳು

ಹಣ್ಣಿನ ಬೆಳೆಗಳು

ನಮ್ಮ ಆರೋಗ್ಯವನ್ನು ಕಾಪಾಡುವ ಮತ್ತು ಅನ್ನಾಂಗಗಳನ್ನು ಪೂರೈಸುವಲ್ಲಿ ಹಣ್ಣುಗಳ ಪಾತ್ರ ಪ್ರಮುಖವಾದುದು. ಆಹಾರದೊಂದಿಗೆ ನಾವು ಒಂದಿಲ್ಲೊಂದು ರೀತಿಯಲ್ಲಿ ಹಣ್ಣುಗಳನ್ನು ಉಪಯೋಗಿಸುತ್ತಲೇ ಇರುತ್ತೇವೆ. ಬೇಸಾಯದ ದೃಷ್ಠಿಯಿಂದ ಹಣ್ಣಿನ ಗಿಡಗಳನ್ನು ಬೆಳೆಸುವುದು ಅಷ್ಟೇನೂ ಕಷ್ಟಕರವಲ್ಲ. ಕೆಲವೇ ವರ್ಷಗಳು ಕಾಳಜಿ ವಹಿಸಿ ಬೆಳೆಸಿದರೆ ಸಾಕು. ಬಹುವಾರ್ಷಿಕ ಬೆಳೆಗಳಾದ ಅವು ಅನೇಕ ವರ್ಷಗಳವರೆಗೆ ನಿರಂತರವಾಗಿ ಫಲ ನೀಡುತ್ತಿರುತ್ತವೆ. ಗಿಡ ನೆಟ್ಟ ಸುಮಾರು ನಾಲ್ಕರಿಂದ ಆರು ವರ್ಷಗಳ ನಂತರ, ಕೇವಲ ನಿರ್ವಹಣೆ ಮಾಡಿಕೊಂಡು ಹೋಗುವುದಷ್ಟೇ ನಿಮ್ಮ ಕೆಲಸ.

ಕೈತೋಟದಲ್ಲಿ ಇರುವ ಸ್ಥಳಾವಕಾಶ ನೋಡಿಕೊಂಡು ಮತ್ತು ಆಯಾ ಪ್ರದೇಶಕ್ಕನುಗುಣವಾಗಿ ಹೊಂದಿಕೊಳ್ಳುವ ಬೆಳೆ ಮತ್ತು ತಳಿಗಳ ಆಯ್ಕೆ ಕೂಡಾ ಅಷ್ಟೇ ಮಹತ್ವವಾದುದು. ಮನೆಯ ಸುತ್ತಲೂ ಸಾಕಷ್ಟು ಸ್ಥಳವಿದ್ದಲ್ಲಿ ಯೋಜನೆ ಹಾಕಿಕೊಂಡು ವಿವಿಧ ಬಗೆಯ ಬಹುವಾರ್ಷಿಕ ಹಣ್ಣಿನ ಗಿಡಗಳನ್ನು ಬೆಳೆಯಬಹುದಾಗಿದೆ. ಮನೆಗೆ ಬೇಕಾಗುವ ಹಣ್ಣುಗಳ ಪಾಲನ್ನು ಕೈತೋಟದಿಂದ ಸರಿದೂಗಿಸಬಹುದು. ಇಂದು ಎಲ್ಲ ರೀತಿಯ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹೆಚ್ಚಿಗೆ ಬೆಳೆದು ಮಾರಾಟ ಮಾಡಲೂಬಹುದು.

. ಮಾವು

ಮಾವು ನಮ್ಮ ರಾಜ್ಯದ ಪ್ರಮುಖ ಹಣ್ಣಿನ ಬೆಳೆ. ’ಹಣ್ಣುಗಳ ರಾಜ’ ಎನಿಸಿಕೊಂಡಿರುವ ಮಾವು ಎಲ್ಲರಿಗೂ ಪ್ರಿಯವಾದ ಹಣ್ಣು. ಇದನ್ನು ಹಣ್ಣು ಮಾಡಿ ಸೇವಿಸಲು, ಕಾಯಿಯಾಗಿದ್ದಾಗ ಚಟ್ನಿ, ಉಪ್ಪಿನಕಾಯಿ ಇತ್ಯಾದಿ ಪದಾರ್ಥಗಳನ್ನು ತಯಾರಿಸಲು ಉಪಯೋಗಿಸುವರು. ಹಣ್ಣುಗಳನ್ನು ಸಂಸ್ಕರಿಸಿ ರಸ ತಯಾರಿಸಲು ಉಪಯೋಗಿಸುವರು. ಇಂದು ಇದು ಒಂದು ದೊಡ್ಡ ಉದ್ಯಮವೇ ಆಗಿದೆ.

ಸಾಕಷ್ಟು ತೇವಾಂಶದಿಂದ ಕೂಡಿದ ಉಷ್ಣಹವೆಯಲ್ಲಿ ಮಾವು ಬೆಳೆಯಬಹುದು. ಜೂನ್-ಜುಲೈ ತಿಂಗಳು ಗಿಡ ನೆಡಲು ಸೂಕ್ತವಾದ ಸಮಯ. ಮಾವಿನಲ್ಲಿ ಹಲವಾರು ತಳಿಗಳಿವೆ. ಸ್ಥಳೀಯ, ಸಂಕರಣ ಹಾಗೂ ವಿಶೇಷ ಗುಣಗಳನ್ನು ಹೊಂದಿದ ತಳಿಗಳು ರಾಜ್ಯದೆಲ್ಲೆಡೆ ತುಂಬಾ ಜನಪ್ರಿಯವಾಗಿವೆ. ’ಮಲ್ಲಿಕಾ’ ಮಾವು ಸಂಕರಣ ತಳಿ. ದೊಡ್ಡ ಗಾತ್ರದ ಫಲ ಬಿಡುವುದು. ಇದು ಪ್ರತಿ ವರ್ಷ ಫಲ ಬಿಡುವ ತಳಿ. ಸಂಕರಣ ತಳಿ ’ಆಮ್ರಪಾಲಿ’ ಪ್ರತಿವರ್ಷ ಫಲ ನೀಡುವುದು. ಉತ್ತಮ ಗುಣಮಟ್ಟ ಹೊಂದಿದೆ. ’ಮಲಗೋವಾ’ ತಳಿ ದೊಡ್ಡ ಗಾತ್ರದ ಕಡಿಮೆ ಸಂಖ್ಯೆಯಲ್ಲಿ ಕಾಯಿ ಬಿಡುವುದು. ಹಣ್ಣುಗಳು ತುಂಬಾ ರುಚಿಕರ ಮತ್ತು ಬಹಳ ದಿನಗಳವರೆಗೆ ಕೆಡದಂತೆ ಸಂಗ್ರಹಿಸಿಡಬಹುದು. ’ದಶೇರಿ’ ತಳಿಯು ಮೃದುವಾದ ತಿರುಳನ್ನು ಹೊಂದಿದ್ದು, ಸಂಸ್ಕರಿಸಲು ತುಂಬಾ ಸೂಕ್ತವಾದ ಹಣ್ಣು. ಇವೆಲ್ಲವುಗಳ ಜೊತೆಗೆ, ತೋತಾಪುರಿ, ನೀಲಮ್, ಪೈರಿ, ಅಲ್ಫಾನ್ಸೊ ರುಮಾನ, ಖಾದರ, ನಿಲೇಷಾನ್ ಮುಂತಾದವುಗಳು ಬೇಸಾಯದಲ್ಲಿವೆ. ಕರ್ನಾಟಕದಲ್ಲಿ ಅಲ್ಫಾನ್ಸೊ, ಪೈರಿ, ತೋತಾಪುರಿ, ಮಲಗೋವಾ, ಮುಂಡಪ್ಪ, ಲಾಂಗ್ರ, ಬಂಗನಪಲ್ಲಿ, ಆಮ್ರಪಾಲಿ, ನೀಲಗೋವಾ, ಮಲ್ಲಿಕಾ ಮುಂತಾದ ತಳಿಗಳು ಜನಪ್ರಿಯವಾಗಿವೆ. ಇವುಗಳಿಗೆ ಉತ್ತಮ ಮಾರುಕಟ್ಟೆಯೂ ಇದೆ.

ಗಿಡ ನೆಡಲು ಒಂದು ಘನ ಮಿಟರ್‌‌ಆಳದ ಗುಂಡಿ ತೋಡಿ ಅದರಲ್ಲಿ ಮೇಲ್ಮಣ್ಣು, ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆಗಳ ಮಿಶ್ರಣವನ್ನು ತುಂಬಿ ಗುಂಡಿಯ ಮಧ್ಯಭಾಗದಲ್ಲಿ ಗಿಡ ನೆಟ್ಟು, ಆಸರೆಯಾಗಿ ಕೋಲು ನಿಲ್ಲಿಸಬೇಕು. (ಗುಂಡಿಗಳನ್ನು ಪೂರ್ತಿಯಾಗಿ ತುಂಬದೇ ಮೇಲೆ ಸ್ವಲ್ಪ ಸ್ಥಳ ಇರಬೇಕು) ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ ೧೨ * ೧೨ ಮೀ. ಅಂತರ ಕೊಡಬೇಕು. ಅವಶ್ಯಕತೆ ನೋಡಿಕೊಂಡು ರಕ್ಷಣಾತ್ಮಕ ನೀರು ಪೂರೈಕೆ ಮಾಡಬೇಕು.

ಕಸಿ ಮಾಡಿದ ಭಾಗ ಭೂಮಿಯಿಂದ ೧೫ ಸೆಂ.ಮೀ. ಮೇಲೆ ಇರಬೇಕು ಮತ್ತು ಕಸಿ ಮಾಡಿದ ಭಾಗದ ಕೆಳಗೆ ಚಿಗುರುಗಳು ಬೆಳೆದಲ್ಲಿ ಅವುಗಳನ್ನು ತೆಗೆಯುತ್ತಿರಬೇಕು. ಒಂದು ಮೀ. ಎತ್ತರದವರೆಗೆ ಬರುವ ಕವಲುಗಳನ್ನು ತೆಗೆದುಹಾಕಬೇಕು.

ಕಸಿ ಮಾಡಿದ ಗಿಡಗಳು ನಾಟಿ ಮಾಡಿದ ಎರಡು ವರ್ಷಗಳ ನಂತರ ಫಲ ಬಿಡಲು ಪ್ರಾರಂಭಿಸುತ್ತವಾದರೂ ಮೊದಲೆರಡು ವರ್ಷಗಳವರೆಗೆ ಬಿಟ್ಟ ಹೂವುಗಳನ್ನು ಕಿತ್ತು, ಗಿಡ ಸದೃಢವಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು. ಮಾವಿನಲ್ಲಿ ಇಳುವರಿಯು ವ್ಯತ್ಯಾಸಗೊಳ್ಳುತ್ತದೆ. ಜವಾರಿ ಗಿಡಗಳು ಗಿಡದ ಗಾತ್ರವನ್ನು ಹೆಚ್ಚು ಅವಲಂಬಿಸಿದರೆ ಕಸಿ ಮಾಡಿದ ಗಿಡಗಳು ಗಿಡದ ವಯಸ್ಸು, ತಳಿ ಹಾಗೂ ಭೂಮಿಯ ಗುಣ ಧರ್ಮಗಳನ್ನು ಅವಲಂಬಿಸಿರುತ್ತವೆ. ಸರಾಸರಿಯಾಗಿ ಕಸಿ ಗಿಡಗಳು ೫೦೦ ರಿಂದ ೧೫೦೦ ರವರೆಗೆ (ಪ್ರತಿ ವರ್ಷ ಪ್ರತಿ ಗಿಡ) ಕಾಯಿ ಬಿಡುತ್ತವೆ.

. ಬಾಳೆ

ಬಡವರ ಬಂಧು ಬಾಳೆ. ಎಲ್ಲರಿಗೂ ದೊರೆಯುವ ಫಲ. ವರ್ಷವಿಡೀ ಎಲ್ಲ ಕಾಲಗಳಲ್ಲೂ ಬೆಳೆಯುವುದು. ಇದರಲ್ಲಿ ಇಡೀ ಗಿಡವೇ ಉಪಯೋಗಕ್ಕೆ ಬರುವುದು. ಹಣ್ಣುಗಳ ಸೇವನೆ ಜೊತೆಗೆ ದಿಂಡು (ಕಾಂಡ) ಗಳನ್ನು ಪಲ್ಯ ಮತ್ತು ಎಲೆಗಳನ್ನು ಮದುವೆ ಮೊದಲಾದ ಶುಭ ಸಮಾರಂಭಗಳಲ್ಲಿ ಊಟದೆಲೆಯಾಗಿ ಉಪಯೋಗಿಸಲಾಗುವುದು.

ತೇವಾಂಶದಿಂದ ಕೂಡಿದ ಹೆಚ್ಚಿನ ಉಷ್ಣಾಂಶವಿರುವ ಹವಾಗುಣದಲ್ಲಿ ಬಾಳೆಯನ್ನು ಬೆಳೆಯಬಹುದು. ವರ್ಷದ ೧೨ ತಿಂಗಳಲ್ಲೂ ನಾಟಿ ಮಾಡಬಹುದು. ಆದರೆ ನಾಟಿಗೆ ಜೂನ್-ಜುಲೈ ತಿಂಗಳು ಸೂಕ್ತ. ಬಾಳೆಯಲ್ಲಿ ಸುಮಾರು  ೫೦ ಕ್ಕೂ ಹೆಚ್ಚು ತಳಿಗಳಿವೆ. ಅವುಗಳಲ್ಲಿ ಕೆಲವು ತಳಿಗಳು ಮಾತ್ರ ಜನಪ್ರಿಯವಾಗಿವೆ. ಉಳಿದವುಗಳನ್ನು ಸ್ಥಳೀಯವಾಗಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುವರು.

’ಡ್ವಾರ್ಫ್ ಕ್ಯಾವೆಂಡಿಶ್’ ಜನಪ್ರಿಯವಾದ ತಳಿ. ಗಿಡ ಸುಮಾರು ೧೨೫ ಕಾಯಿಗಳನ್ನು ಬಿಡುವುದು. ಪನಾಮಾ ಸೊರಗು ರೋಗದ ಸಹಿಷ್ಣುತೆಯನ್ನು ಹೊಂದಿದೆ. ’ರೊಬಸ್ಟ್’ ಅಧಿಕ ಇಳುವರಿಕೊಡುವ ತಳಿ. ಇದೂ ಕೂಡ ಪನಾಮಾ ಸೊರಗು ರೋಗಕ್ಕೆ ಸಹಿಷ್ಣುತೆಯನ್ನು ಹೊಂದಿದೆ. ’ಪೂವನ್’ ಮತ್ತೊಂದು ಪ್ರಸಿದ್ಧವಾದ ತಳಿ. ಪ್ರತಿ ಗಿಡ ಸುಮಾರು ೨೨೫ ಕಾಯಿಗಳನ್ನು ಬಿಡುವುದು. ಆದರೆ ಕಾಯಿಗಳು ಗಾತ್ರದಲ್ಲಿ ಚಿಕ್ಕವು. ಇದು ಎಲೆ ಚುಕ್ಕೆ ರೋಗ ಮತ್ತು ಪನಾಮಾ ಸೊರಗು ರೋಗ ಇವೆರಡರ ನಿರೋಧಕ ಶಕ್ತಿ ಹೊಂದಿದೆ. ಸೇಲಂ ಬಾಳೆ, ನೇಂದ್ರ ಬಾಳೆ, ರಸ ಬಾಳೆ, ಚಂದ್ರ ಬಾಳೆ, ಪುಟ್ಟ ಬಾಳೆ, ಬೂದು ಬಾಳೆ, ಏಲಕ್ಕಿ ಬಾಳೆ, ಮಧುರಂಗ, ಮಂಥನ್, ಬಸರಾಯಿ, ಕೆಂಪು ಬಾಳೆ, ಪಚ್ಚ ಬಾಳೆ, ಸುಗಂಧ ಬಾಳೆ ಮುಂತಾದವುಗಳು ಇನ್ನಿತರ ತಳಿಗಳಾಗಿವೆ.

ಬಾಳೆಯಲ್ಲಿ ಎರಡು ಬಗೆಯ ಕಂದುಗಳಿವೆ. (೧) ಕತ್ತಿಯಾಕಾರದ ಕಂದುಗಳು (೨) ನೀರುಗಂದುಗಳು. ನಾಟಿಗಾಗಿ ಕತ್ತಿಯಾಕಾರದ ಕಂದುಗಳನ್ನೇ ಉಪಯೋಗಿಸಬೇಕು. ೫ ಘನ ಮೀ. ಅಳತೆಯ ಗುಂಡಿಗಳನ್ನು ತೋಡಿ, ಗೊಬ್ಬರದ ಮಿಶ್ರಣ ತುಂಬಿ ಮಧ್ಯದಲ್ಲಿ ಸಸಿ ನೆಡಬೇಕು. ನೆಟ್ಟ ಕೂಡಲೇ ನೀರು ಪೂರೈಕೆ ಮಾಡಬೇಕು ಮತ್ತು ಮುಂದೆ ಹವಾಗುಣವನ್ನು ಅನುಸರಿಸಿ ಪ್ರತಿ ೪-೫ ದಿನಗಳಿಗೊಮ್ಮೆ ನೀರು ಕೊಡಬೇಕು.

ಗಿಡದಲ್ಲಿ ಬುಡದ ಸುತ್ತ ಬರುವ ಕಂದುಗಳನ್ನು ಗಮನಿಸಿ ಗೊನೆ ಬಂದ ನಂತರ ಒಂದು ಕಂದನ್ನು ಮಾತ್ರ ಕೂಳೆ ಬೆಳೆಗಾಗಿ ಬಿಟ್ಟು ಉಳಿದವುಗಳನ್ನು ಗೊನೆ ಬರುವ ಪೂರ್ವದಲ್ಲಿಯೇ ತೆಗೆಯಬೇಕು. ಗೊನೆಯನ್ನು ಬಿಸಿಲಿನಿಂದ ರಕ್ಷಿಸಲು ಒಣಗಿದ ಬಾಳೆ ಎಲೆಗಳಿಂದ ಸುತ್ತಬಹುದು. ಗಿಡದಿಂದ ಗೊನೆಯನ್ನು ಬೇರ್ಪಡಿಸಿದ ನಂತರ ತಾಯಿ ಗಿಡವನ್ನು ಮೇಲಿನಿಂದ ಹಂತ ಹಂತವಾಗಿ ಕಟಾವು ಮಾಡಿ ಹೊರಗೆ ತೆಗೆಯಬೇಕಲ್ಲದೆ ಪಕ್ಕದಲ್ಲಿರುವ ಕಂದು ಚೆನ್ನಾಗಿ ಬೆಳೆಯಲು ಅನುವು ಮಾಡಿಕೊಡಬೇಕು.

ನೆಟ್ಟ ೧೨ ರಿಂದ ೧೪ ತಿಂಗಳಿಗೆ ಗೊನೆಯನ್ನು ಕೊಯ್ಲು ಮಾಡಬಹುದು. ನಂತರ ಬಿಟ್ಟ ಕೂಳೆ ಬೆಳೆ ೬-೮ ತಿಂಗಳಿಗೆ ಕೊಯ್ಲಿಗೆ ಸಿದ್ಧವಾಗುವುದು. ತಳಿಗನುಸಾರವಾಗಿ ಒಂದು ಗೊನೆಯಲ್ಲಿ ಸರಾಸರಿ ೧೨೫ ರಿಂದ ೨೨೫ ರವರೆಗೆ ಕಾಯಿಗಳು ದೊರೆಯುತ್ತವೆ.

. ನಿಂಬೆ ಮತ್ತು ಗಜ ನಿಂಬೆ

ಇವುಗಳನ್ನು ಉಪ್ಪಿನಕಾಯಿ ಮತ್ತು ಪಾನೀಯಗಳಲ್ಲಿ ಹೆಚ್ಚಿಗೆ ಬಳಸುತ್ತಾರೆ. ಪೂಜೆ, ಪುರಸ್ಕಾರಗಳು ಮತ್ತು ಇನ್ನಿತರ ಸಾಂಪ್ರದಾಯಿಕ ಕಾರ್ಯಗಳಲ್ಲಿ ಇವು ಬೇಕೇ ಬೇಕು. ಅಡುಗೆ, ಸುಗಂಧ ವಸ್ತುಗಳ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ.

ಇವುಗಳನ್ನು ಬೆಳೆಯಲು ತೇವಾಂಶವಿರುವ ಒಣಹವೆ ಅಗತ್ಯ. ಅತಿ ಕಡಿಮೆ ಉಷ್ಣಾಂಶ ಹೊಂದಿದ ಪ್ರದೇಶಗಳು ಹಾಗೂ ನೀರು ನಿಲ್ಲುವ ಪ್ರದೇಶಗಳು ಈ ಬೆಳೆಗೆ ಸೂಕ್ತವಲ್ಲ. ಜೂನ್-ಜುಲೈ ತಿಂಗಳು ಗಿಡ ನೆಡಲು ಸರಿಯಾದ ಸಮಯ. ನಿಂಬೆಯಲ್ಲಿ ’ಕಾಗಜಿ ನಿಂಬೆ’ ಮತ್ತು ’ತಾಹಿತಿ ನಿಂಬೆ’ ಎಂಬ ತಳಿಗಳಿವೆ. ತಾಹಿತಿ ನಿಂಬೆ ಬೀಜ ರಹಿತ ತಳಿಯಾಗಿದೆ. ಗಜನಿಂಬೆಯಲ್ಲಿ ’ಇಟಾಲಿಯನ್ ಗಜನಿಂಬೆ’, ’ಲಿಸ್ಟನ್ ಗಜನಿಂಬೆ’ ಮತ್ತು ’ಯುರೇಕಾ ಗಜನಿಂಬೆ’ ಎಂಬ ತಳಿಗಳಿವೆ.

೬೦ ಘನ ಸೆಂ.ಮೀ. ಅಳತೆಯ ಗುಂಡಿಗಳನ್ನು ತೆಗೆದು ಗೊಬ್ಬರದ ಮಿಶ್ರಣ ಹಾಕಬೇಕು. ಗುಂಡಿಯ ಮಧ್ಯ ಭಾಗದಲ್ಲಿ ಗಿಡ ನೆಡಬೇಕು. ಕಣ್ಣು ಹಾಕಿದ ಸಸಿ ನೆಡುವಾಗ ಕಣ್ಣು ಕಸಿ ಮಾಡಿದ ಭಾಗ ಭೂಮಿಯಿಂದ ೧೫ ಸೆಂ.ಮೀ. ಮೇಲಕ್ಕೆ ಇರುವಂತೆ ನೆಟ್ಟು ಕೋಲಿನ ಆಸರೆ ಕೊಡಬೇಕು. ಗಿಡ ಎರಡು ಅಡಿ ಎತ್ತರ ಬೆಳೆಯುವವರೆಗೆ ಮುಖ್ಯ ಕಾಂಡದ ಮೇಲೆ ಬರುವ ಕವಲುಗಳನ್ನು ತೆಗೆಯುತ್ತಾ ವಾರಕ್ಕೆ ಒಂದು ಬಾರಿ ನೀರು ಪೂರೈಕೆ ಮಾಡಬೇಕು. ನೀರಿನ ಪೂರೈಕೆ ಮಣ್ಣು ಮತ್ತು ಹವಾಗುಣವನ್ನು ಅವಲಂಬಿಸಿರುತ್ತದೆ.

ಗಿಡ ನೆಟ್ಟ ಎರಡು ವರ್ಷಗಳ ನಂತರ ಫಲ ಬಿಡಲು ಪ್ರಾರಂಭಿಸುತ್ತದೆ. ವರ್ಷದಲ್ಲಿ ಎರಡು ಬಾರಿ ಕೊಯ್ಲು ಮಾಡಬಹುದು. (೧) ಜುಲೈ-ಸೆಪ್ಟೆಂಬರ್‌‌ (೨) ಮಾರ್ಚ್-ಜೂನ್, ನೆಟ್ಟ ಎಂಟು ವರ್ಷಗಳ ನಂತರ ಹೆಚ್ಚಿನ ಫಸಲು ನಿರೀಕ್ಷಿಸಬಹುದು. ಪ್ರತಿವರ್ಷ ಪ್ರಾಯದ ಒಂದು ಗಿಡದ ಇಳುವರಿ ಇಂತಿದೆ.

(i) ನಿಂಬೆ ೧೦೦೦-೧೨೦೦ ಹಣ್ಣುಗಳು

(ii) ಗಜನಿಂಬೆ ೬೦೦-೮೦೦ ಹಣ್ಣುಗಳು

. ಕಿತ್ತಳೆ ಮತ್ತು ಮೂಸಂಬಿ

ಕಿತ್ತಳೆ ಮತ್ತು ಮೂಸಂಬಿ ಹಣ್ಣುಗಳು ತಮ್ಮ ರುಚಿ ಹಾಗೂ ಸ್ವಾದದಿಂದ ಜನರ ಮನಸ್ಸನ್ನು ಗೆಲ್ಲುತ್ತವೆ. ಈ ಹಣ್ಣುಗಳನ್ನು ನೇರ ಸೇವನೆ ಹಾಗೂ ರಸ ತಯಾರಿಕೆಗೆ ಹೆಚ್ಚಾಗಿ ಉಪಯೋಗಿಸುವರು. ಕಿತ್ತಳೆಯನ್ನು ವಿಶೇಷವಾಗಿ ಸ್ಕಾಷ್, ಜೆಲ್ಲಿ ಮತ್ತು ಮಾರ್ಮಲೇಡ್ ತಯಾರಿಸಲು ಉಪಯೋಗಿಸುವರು. ಹೆಚ್ಚಿನ ಉಷ್ಣಾಂಶ ಮತ್ತು ಆರ್ದ್ರತೆಯಿಂದ ಕೂಡಿದ ಹವಾಮಾನ ಕಿತ್ತಳೆ ಮತ್ತು ಮೂಸಂಬಿ ಬೆಳೆಗಳಿಗೆ ಹೆಚ್ಚು ಸೂಕ್ತ. ಜೂನ್-ಜುಲೈ ತಿಂಗಳುಗಳಲ್ಲಿ ಗಿಡ ನೆಡಬಹುದು.

ಕಿತ್ತಳೆ ತಳಿಗಳು : ಕೊಡುಗು ಕಿತ್ತಳೆ, ಕಾಶಿ ಕಿತ್ತಳೆ, ನಾಗಪುರ ಸಂಡ್ರಾ ಇತ್ಯಾದಿ.

ಮೂಸಂಬಿ ತಳಿಗಳು : ಮುಲ್ಟಾಬ್ಲಡ್ ರೆಡ್, ಸಾತ್‌ಗುಡಿ ಮೂಸಂಬಿ ಇತ್ಯಾದಿ.

ಗುಂಡಿಗಳಲ್ಲಿ ಗೊಬ್ಬರ ಮಿಶ್ರಣ ತುಂಬಿ ಗುಂಡಿಯ ಮಧ್ಯಭಾಗದಲ್ಲಿ ಸಸಿ ನೆಡಬೇಕು. ಕಸಿಮಾಡಿದ ಸಸಿಗಳನ್ನು ಉಪಯೋಗಿಸುವುದು ಒಳ್ಳೆಯದು. ಕಸಿಮಾಡಿದ ಭಾಗವು ಭೂಮಿಯ ಮೇಲೆ ಇರುವಂತೆ ನೋಡಿಕೊಳ್ಳಬೇಕು. ಸಸಿಗೆ ಆಸರೆಯಾಗಿ ಕೋಲು ಕೊಡಬಹುದು. ಮಣ್ಣು ಮತ್ತು ಹವಾಮಾನಗಳನ್ನನುಸರಿಸಿ ವಾರಕ್ಕೆ ಒಂದು ಬಾರಿ ನೀರು ಕೊಡಬೇಕು. ಗಿಡಗಳು ಸುಮಾರು ೬೦ ಸೆಂ.ಮೀ. ಎತ್ತರ ಬೆಳೆಯುವವರೆಗೆ ಮುಖ್ಯ ಕಾಂಡದ ಮೇಲೆ ಬರುವ ಕವಲುಗಳನ್ನು ತೆಗೆಯುತ್ತಿರಬೇಕು. ಕಿತ್ತಳೆ ಗಿಡದ ಮೇಲೆ ಲೋರಾಂಥಸ್‌ನಂತಹ ಪರಾವಲಂಬಿ ಸಸ್ಯಗಳು ಬೆಳೆಯದಂತೆ ಕಾಳಜಿ ವಹಿಸಬೇಕು.

ನೆಟ್ಟ ೩-೪ ವರ್ಷಗಳ ನಂತರ ಗಿಡಗಳು ಫಲ ನೀಡಲು ಆರಂಭಿಸುತ್ತವೆ. ಅಧಿಕ ಇಳುವರಿ ೭-೮ ವರ್ಷಗಳ ನಂತರ ಸಾಧ್ಯ. ವಾರ್ಷಿಕ ಇಳುವರಿ ಇಂತಿದೆ.

(i) ಕಿತ್ತಳೆ -೧೦೦೦ -೧೫೦೦ ಹಣ್ಣುಗಳು (ಗಿಡ ಒಂದಕ್ಕೆ).

(ii) ಮೂಸಂಬಿ – ೧೦೦೦ -೧೨೦೦ ಹಣ್ಣುಗಳು (ಗಿಡ ಒಂದಕ್ಕೆ).

. ಚಿಕ್ಕು (ಸಪೋಟಾ)

ರಾಜ್ಯದ ಎಲ್ಲ ಭಾಗಗಳಲ್ಲಿ ಚಿಕ್ಕು ಬೆಳೆಯನ್ನು ಯಶಸ್ವಿಯಾಗಿ ಬೆಳೆಯಬಹುದಾಗಿದ್ದು ವರ್ಷವಿಡೀ ಫಲ ನೀಡುವ ಒಂದು ಜನಪ್ರಿಯವಾದ ಹಣ್ಣಿನ ಮರವಾಗಿದೆ. ಚಿಕ್ಕು ಬೆಳೆಯಲು ನಿರ್ದಿಷ್ಟ ಹವಾಗುಣವೇನೂ ಬೇಕಾಗಿಲ್ಲ. ಅಧಿಕ ಮತ್ತು ಕಡಿಮೆ ಮಳೆ ಆಗುವ ಪ್ರದೇಶಗಳೆರಡರಲ್ಲೂ ಯಶಸ್ವಿಯಾಗಿ ಬೆಳೆಯಬಹುದಾಗಿದೆ. ಗಿಡ ನೆಡಲು ಜೂನ್-ಜುಲೈ ತಿಂಗಳುಗಳು ಹೆಚ್ಚು ಸೂಕ್ತ.

ತಳಿಗಳಲ್ಲಿ ಕಾಲಿಪತ್ತಿ, ಕ್ರಿಕೆಟ್ ಬಾಲ್ ಮತ್ತು ಕಲ್ಕತ್ತಾ ರೌಂಡ್ ಮುಖ್ಯವಾದುವುಗಳು. ನಮ್ಮ ರಾಜ್ಯದಲ್ಲಿ ಈ ತಳಿಗಳೇ ಹೆಚ್ಚು ಜನಪ್ರಿಯವಾಗಿವೆ. ’ಕಾಲಿಪತ್ತಿ’ ತಳಿಯ ಹಣ್ಣು ಅಂಡಾಕಾರವಿದ್ದು, ತುಂಬಾ ಸಿಹಿಯಾಗಿರುವುದು. ’ಕ್ರಿಕೆಟ್ ಬಾಲ್’ ತಳಿ ದುಂಡಗಿದ್ದು, ಗಾತ್ರದಲ್ಲಿ ದೊಡ್ಡದು. ಸಾಧಾರಣ ಮಟ್ಟಿಗೆ ಸಿಹಿಯಾಗಿರುತ್ತದೆ. ’ಕಲ್ಕತ್ತಾ ರೌಂಡ್’ ತಳಿ ದುಂಡನೆಯ ಆಕಾರ ಹೊಂದಿದ್ದು ಗಾತ್ರದಲ್ಲಿ ದೊಡ್ಡದಾಗಿದ್ದು ಸಾಧಾರಣ ಮಟ್ಟಿಗೆ ಸಿಹಿ ಇರುತ್ತದೆ.

ಒಂದು ಘನ ಮೀ. ಅಳತೆಯ ಗುಂಡಿಗಳನ್ನು ತೋಡಿ, ಗೊಬ್ಬರ ತುಂಬಿ, ಕಸಿ ಮಾಡಿದ ಸಸಿಗಳನ್ನು ನೆಡಬೇಕು. ಕಸಿ ಮಾಡಿದ ಭಾಗ ಭೂಮಿಯಿಂದ ಮೇಲೆ ಇರಬೇಕು. ಆಸರೆಗಾಗಿ ಗಿಡಗಳ ಪಕ್ಕದಲ್ಲಿ ಕೋಲು ಕೊಡಬೇಕು. ಗಿಡವು ಸುಮಾರು ಒಂದು ಮೀ. ಎತ್ತರವಾಗುವವರೆಗೆ ಪಕ್ಕದಲ್ಲಿ ಬರುವ ಕವಲುಗಳನ್ನು ಆಗಾಗ ತೆಗೆಯುತ್ತಿರಬೇಕು. ಹವಾಗುಣವನ್ನನುಸರಿಸಿ ನೀರು ಪೂರೈಕೆ ಮಾಡಬೇಕು. ಬೇಸಿಗೆಯಲ್ಲಿ ಗಿಡಗಳಿಗೆ ಬೇಕಾಗುವಷ್ಟು ನೀರನ್ನು ತಪ್ಪದೇ ಪೂರೈಸಬೇಕು.

ಗಿಡ ನೆಟ್ಟ ಮೇಲೆ ಸುಮಾರು ಮೂರು ವರ್ಷಗಳ ನಂತರ ಫಲ ಬಿಡಲು ಪ್ರಾರಂಭಿಸುತ್ತದೆ. ಸುಮಾರು ಏಳು ವರ್ಷಗಳ ನಂತರವೇ ಅಧಿಕ ಇಳುವರಿ ಪಡೆಯಲು ಸಾಧ್ಯವಾಗುವುದು. ಚಿಕ್ಕು ಗಿಡವು ವರ್ಷದ ಎಲ್ಲ ಕಾಲಗಳಲ್ಲೂ ಫಲ ಬಿಡುವುದು. ಆದರೆ ಎರಡು ಅವಧಿಗಳಲ್ಲಿ ಮಾತ್ರ (೧) ಮಾರ್ಚ್‌ಮೇ (೨) ಸೆಪ್ಟೆಂಬರ್‌ಅಕ್ಟೋಬರ್‌ಇಳುವರಿ ಹೆಚ್ಚು.

ಆಲೂಗಡ್ಡೆ ಬಣ್ಣಕ್ಕೆ ಕಾಯಿಗಳು ತಿರುಗಿದಾಗ ಕೊಯ್ಲು ಮಾಡಬೇಕು. ಕಾಯನ್ನು ಚುಚ್ಚಿದರೆ ಸಾಕಷ್ಟು ಹಾಲು ಹೊರಬರಬಾರದು. ಅಂತಹ ಸಂದರ್ಭ ಕೊಯ್ಲು ಹಂತವೆಂದು ಭಾವಿಸಬಹುದು. ಹತ್ತು ವರ್ಷಗಳ ಗಿಡ ವರ್ಷಕ್ಕೆ ೧೦೦೦-೧೫೦೦ ಕಾಯಿಗಳನ್ನು ನೀಡುವುದು.

. ಸೀಬೆ

ಇದನ್ನು ’ಪೇರಲ’ ಎಂತಲೂ ಕರೆಯುತ್ತಾರೆ. ಕೈಗೆಟುಕುವ ಬೆಲೆಯಲ್ಲಿ ಕೊಳ್ಳಬಹುದಾದ ಈ ಹಣ್ಣನ್ನು ಸಾಮಾನ್ಯ ವರ್ಗವದರು ಹೆಚ್ಚು ಪ್ರೀತಿಸುವಂತಾಗಿದೆ. ಇದರ ರುಚಿಯೂ ಎಲ್ಲರನ್ನೂ ಆಕರ್ಷಿಸಿದೆ. ಸೀಬೆಯಿಂದ ವಿಶೇಷವಾಗಿ ’ಜಾಮ್’ ಮತ್ತು ’ಜೆಲ್ಲಿ’ ತಯಾರಿಸುವರು. ಕರ್ನಾಟಕದಲ್ಲಿ ಈ ಹಣ್ಣಿಗೆ ಉತ್ತಮ ಮಾರುಕಟ್ಟೆ ಇದೆ.

ಸೀಬೆ ಉಷ್ಣವಲಯದಲ್ಲಿ ಚೆನ್ನಾಗಿ ಬೆಳೆಯುವುದು. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ರೋಗಗಳ ಬಾಧೆ ಹೆಚ್ಚು. ಹೀಗಾಗಿ ಸಾಧಾರಣ ಮಳೆ ಬೀಳುವ ಪ್ರದೇಶಗಳೇ ಸೀಬೆ ಬೆಳೆಯಲು ಸೂಕ್ತ ಎನ್ನಬಹುದು. ಗಿಡ ನೆಡಲು ಜೂನ್-ಜುಲೈ ತಿಂಗಳುಗಳು ಸೂಕ್ತ.

ತಳಿಗಳಲ್ಲಿ ’ಅಲಹಾಬಾದ್ ಸಫೇದ’ ಉತ್ತಮವಾದುದು. ಈ ತಳಿಯ ಹಣ್ಣುಗಳಲ್ಲಿ ಬೀಜಗಳು ಕಡಿಮೆ. ಮತ್ತೊಂದು ಜನಪ್ರಿಯವಾದ ತಳಿ ’ಸರ್ದಾರ್‌‌’. ಇದನ್ನು ’ಲಕ್ನೊ-೪೯’ ಎನ್ನುವರು. ಇದೂ ಕಡಿಮೆ ಬೀಜಗಳನ್ನು ಹೊಂದಿದ್ದು ಉತ್ತಮ ಗುಣಮಟ್ಟ ಹೊಂದಿದೆ. ಇನ್ನಿತರ ತಳಿಗಳೆಂದರೆ, ’ನವಲೂರ’, ’ಚಿತ್ತಿಡಾರ್‌‌’ ಮುಂತಾದವುಗಳು.

ಒಂದು ಘನ ಮೀ. ಗಾತ್ರದ ಗುಂಡಿಗಳಲ್ಲಿ ಸೂಕ್ತ ಪ್ರಮಾಣದ ಗೊಬ್ಬರ ಮಿಶ್ರಣ ತುಂಬಿ ಕಸಿ ಇಲ್ಲವೇ ಏರ್‌‌ಲೇಯರಿಂಗ್‌ನಿಂದ ಬೆಳೆಸಿದ ಗಿಡಗಳನ್ನು ಗುಂಡಿಗಳ ಮಧ್ಯ ಭಾಗದಲ್ಲಿ ತಲಾ ಒಂದರಂತೆ ನೆಟ್ಟು ನೀರು ಕೊಡಬೇಕು. ಹವಾಮಾನವನ್ನನುಸರಿಸಿ ವಾರಕ್ಕೆ ಒಂದು ಬಾರಿ ನೀರು ಪೂರೈಕೆ  ಮಾಡಬಹುದು. ಕಾಂಡದ ಬುಡದಿಂದ ಒಂದು ಮೀ. ಎತ್ತರದವರೆಗೆ ಬರುವ ಚಿಗುರುಗಳನ್ನು ತೆಗೆದುಹಾಕಬೇಕು.

ಗಿಡ ನೆಟ್ಟ ೩-೪ ವರ್ಷಗಳ ನಂತರ ಫಲ ಬಿಡಲು ಆರಂಭವಾಗುವುದು. ಸುಮಾರು ೫-೬ ವರ್ಷಗಳ ನಂತರ ಅಧಿಕ ಇಳುವರಿ ಪಡೆಯಲು ಸಾಧ್ಯ. ಸೀಬೆ ಗಿಡಗಳು ವರ್ಷದಲ್ಲಿ ಮೂರು ಬಾರಿ ಹೂವು ಫಲ ಬಿಡುತ್ತವೆ.

ಅವುಗಳೆಂದರೆ, (i) ಫೆಬ್ರುವರಿ (ಅಂಬೆ ಬಹಾರ್‌), (ii) ಜೂನ್ (ಮೃಗ್‌ಬಹಾರ್‌), ಮತ್ತು (iii) ಅಕ್ಟೋಬರ್‌(ಹಸ್ತ ಬಹಾರ್‌)

ಸೀಬೆಯಲ್ಲಿ ಹೂವು ಉದುರುವ ಸಮಸ್ಯೆ ಇದೆ. ಇದನ್ನು ನಿಯಂತ್ರಿಸಲು ೧೦-೧೫ ಪಿ.ಪಿ.ಎಂ. ಜಿಬ್ಬರ್‌ಲಿಕ್ ಆಮ್ಲವನ್ನು ಸಿಂಪಡಿಸಬೇಕು. ಇದನ್ನು ಜನವರಿ ತಿಂಗಳಲ್ಲಿ ಮಾಡಬೇಕಾಗುವುದು. ಇದರಿಂದ ಹೂವು ಉದುರುವ ಸಮಸ್ಯೆ ನಿವಾರಣೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ಕಾಯಿಕಚ್ಚುವುದು.

ಹತ್ತು ವರ್ಷದ ಗಿಡ ವರ್ಷಕ್ಕೆ ೧೦೦೦-೧೫೦೦ ಕಾಯಿಬಿಡುವುದು.

. ಪಪ್ಪಾಯಾ

ಇದನ್ನು ’ಪರಂಗಿ’, ಎಂತಲೂ ಕರೆಯುವರು. ’ಪಪ್ಪೇನ್’ ಎಂಬ ಕಿಣ್ವವನ್ನು ಈ ಹಣ್ಣಿನಿಂದ ತಯಾರಿಸುವರು. ಹೀಗಾಗಿ ಇದನ್ನು ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ದೃಷ್ಟಿಯಿಂದ ಬೆಳೆಯಲಾಗುತ್ತಿದೆ. ಇಡೀ ವರ್ಷ ಫಲ ಪಡೆಯಬಹುದು. ಕಡಿಮೆ ನೀರಿನಲ್ಲಿ ಪಪ್ಪಾಯಾ ಬೆಳೆಯನ್ನು ಚೆನ್ನಾಗಿ ನಿರ್ವಹಣೆ ಮಾಡಬಹುದು.

ಪಪ್ಪಾಯಾ ಉಷ್ಣವಲಯದ ಬೆಳೆ. ರಾಜ್ಯದಲ್ಲಿ ಬಹುಶಃ ಎಲ್ಲ ಭಾಗಗಳಲ್ಲಿ ಬೆಳೆಯಲಾಗುತ್ತಿದೆ. ಬೆಳೆಗೆ ನೀರು ಬಸಿದು ಹೋಗುವ ಭೂಮಿ ಸೂಕ್ತ. ಜೂನ್-ಜುಲೈ ತಿಂಗಳು ಗಿಡ ನೆಡಲು ಸೂಕ್ತ ಸಮಯ. ಪಪ್ಪಾಯಿನಲ್ಲಿ ಸಾಕಷ್ಟು ಉತ್ತಮ ತಳಿಗಳಿವೆ. ಕೂರ್ಗ ಹನಿಡ್ಯೂ, ವಾಷಿಂಗ್‌ಟನ್, ಸೋಲೊ, ಸಿಂಗಪೂರ್‌‌, ರಾಂಚಿ, ಸಿ.ಓ.-೧, ಸಿ.ಓ.-೨, ಸಿ.ಓ.-೩, ಸಿ.ಓ.-೪ ಮುಂತಾದುವುಗಳು. ಇವುಗಳಲ್ಲಿ ಸಿ.ಓ.-೨ ಮತ್ತು ಸಿ.ಓ.-೪ ತಳಿಗಳನ್ನು ಪಪ್ಪೇನ್ ಪುಡಿ ತಯಾರಿಸಲು ಉಪಯೋಗಿಸುತ್ತಾರೆ.

ಮಡಿಗಳಲ್ಲಿ ಇಲ್ಲವೇ ಪಾಲಿಥೀನ್ ಚೀಲಗಳಲ್ಲಿ ಸಸಿಗಳನ್ನು ಎಬ್ಬಿಸಬಹುದು. ಮಾಗಿದ ಹಣ್ಣಿನಿಂದ ತೆಗೆದ ತಾಜಾ ಬೀಜಗಳನ್ನು ಬಿತ್ತನೆಗೆ ಉಪಯೋಗಿಸಬೇಕು. ಸಸಿಗಳು ನೆಡುವುದಕ್ಕೆ ಸುಮಾರು ಎರಡು ತಿಂಗಳು ಸಮಯ ಬೇಕಾಗುತ್ತದೆ. ಆಮೇಲೆ ನೆಡುವ ಕ್ಷೇತ್ರದಲ್ಲಿ ೪೫ ಘನ ಸೆಂ.ಮೀ. ಅಳತೆಯ ಗುಂಡಿಗಳನ್ನು ತೋಡಿ ಗೊಬ್ಬರ ಮಿಶ್ರಣ ತುಂಬಿ ಮಧ್ಯದಲ್ಲಿ ಸಸಿಗಳನ್ನು ನೆಟ್ಟು, ಆಸರೆ ಕೋಲೊಂದನ್ನು ಸಸಿಯೊಂದಿಗೆ ನಿಲ್ಲಿಸಿ ಕಟ್ಟಬೇಕು. ವಾರಕ್ಕೆ ಒಂದು ಬಾರಿ ನೀರು ಪೂರೈಕೆ ಮಾಡಬೇಕಾಗುವುದು. ಇದು ಹವಾಗುಣವನ್ನು ಅವಲಂಬಿಸಿದೆ.

ಗಿಡನೆಟ್ಟ ೯-೧೦ ತಿಂಗಳುಗಳ ನಂತರ ಕೊಯ್ಲು ಮಾಡಬಹುದು. ಪ್ರತಿ ಗಿಡದಿಂದ ವರ್ಷಕ್ಕೆ ೨೦-೩೦ ಕಾಯಿಗಳು ಸಿಗುತ್ತವೆ. ಸುಮಾರು ಮೂರು ವರ್ಷಗಳವರೆಗೆ ಉತ್ತಮ ಫಲ ನೀಡುವುದು. ನಂತರ ಹೊಸದಾಗಿ ನಾಟಿ ಮಾಡುವುದು ಸೂಕ್ತ.

ಪಪ್ಪೇನ್ ತಯಾರಿಕೆ : ಬಲಿತ ಆದರೆ ಪಕ್ವಗೊಳ್ಳದ ಕಾಯಿಗಳನ್ನು ಪಪ್ಪೇನ್ ತೆಗೆಯಲು ಉಪಯೋಗಿಸುವರು. ಹರಿತವಾದ ಚಾಕು ಅಥವಾ ಕಡ್ಡಿಗಳಿಂದ ಕಾಯಿಯ ಸಿಪ್ಪೆ ಮೇಲೆ ನಾಲ್ಕು ಉದ್ದ ಗೆರೆಗಳನ್ನು ಗೀಚಬೇಕು. ಈ ಗೆರೆಗಳಿಂದ ಸುರಿದ ಹಾಲನ್ನು ಗಾಜಿನ ಪಾತ್ರೆಗಳಲ್ಲಿ ಸಂಗ್ರಹಿಸಿ ನಂತರ ೫೦-೫೦ ಸೆಲ್ಸಿಯಸ್ ಉಷ್ಣತೆಯಲ್ಲಿ ಒಣಗಿಸಬೇಕು. ಪೂರ್ಣ ಒಣಗಿದ ಮೇಲೆ ಪುಡಿಯಾಗಿಸಿ ಪಾಲಿಥೀನ್ ಚೀಲಗಳಲ್ಲಿ ಶೇಖರಿಸಿಡಬಹುದು. ಮುಂಜಾನೆ ಸಮಯ ಪಪ್ಪೇನ್ ತೆಗೆಯಲು ಸೂಕ್ತವಾದ ಕಾಲ. ಔಷಧಿಗಳ ತಯಾರಿಕೆಯಲ್ಲಿ ಪಪ್ಪೇನ್ ಉಪಯೋಗಿಸುವರು.

. ದಾಳಿಂಬೆ

ದಾಳಿಂಬೆ ಗಿಡ ಕೈತೋಟಕ್ಕೆ ಶೋಭೆ ತರುವುದು. ಇದರ ಬೀಜಗಳಿಂದ ತಂಪು ಪಾನೀಯ ತಯಾರಿಸಬಹುದು. ಇತ್ತೀಚೆಗೆ ಇದನ್ನು ವಾಣಿಜ್ಯ ದೃಷ್ಟಿಯಿಂದ ಬೆಳೆಯುತ್ತಿದ್ದಾರೆ. ಹಲವಾರು ದಿನಗಳು ಹಣ್ಣು ಕೆಡದಂತೆ ಶೇಖರಿಸಿಡಬಹುದು.

ವಿವಿಧ ಬಗೆಯ ಮಣ್ಣುಗಳಲ್ಲಿ ಬೆಳೆಯಬಹುದಾದ ದಾಳಿಂಬೆ ಬರ ನಿರೋಧಕ ಶಕ್ತಿ ಹೊಂದಿದೆ. ಜೂನ್-ಜುಲೈ ತಿಂಗಳು ಗಿಡ ನೆಡಲು ಸೂಕ್ತವಾದ ಸಮಯ. ತಳಿಗಳಲ್ಲಿ ’ಜ್ಯೋತಿ’ ಮಹತ್ವದ್ದು. ಇದು ಮೆದು ಬೀಜಗಳನ್ನು ಹೊಂದಿದ್ದು, ಅಧಿಕ ಇಳುವರಿ ನೀಡುವುದು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಈ ತಳಿಯನ್ನು ಅಭಿವೃದ್ಧಿ ಪಡಿಸಿದೆ. ಮತ್ತೊಂದು ಜನಪ್ರಿಯವಾದ ತಳಿ ಎಂದರೆ ಗಣೇಶ’;  ಗಾತ್ರದಲ್ಲಿ ದೊಡ್ಡದು. ಇದೂ ಮೆದು ಬೀಜಗಳನ್ನು ಹೊಂದಿದ್ದು ಅಧಿಕ ಇಳುವರಿ ನೀಡುವುದು. ರಾಯಚೂರು-೧, ಬೇಸಿನ್ ಸೀಡ್‌ಲೆಸ್, ಕಾಬೂಲ್, ಇವು ದಾಳಿಂಬೆಯ ಇತರ ಉತ್ತಮ ತಳಿಗಳಾಗಿವೆ.

. ಹಲಸು

’ಹಸಿದು ಹಲಸು ತಿನ್ನು ಉಂಡು ಮಾವು ತಿನ್ನು’ ಎಂಬ ಗಾದೆಯಂತೆ ಹಲಸು ತುಂಬಾ ಉಪಯುಕ್ತವಾದ ಹಣ್ಣು. ಹಣ್ಣುಗಳು ಪೈಕಿ ಹಲಸು ಬಹುದೊಡ್ಡ ಗಾತ್ರದ್ದಾಗಿದ್ದು ನೇರವಾಗಿ ಸೇವಿಸಲು ಮತ್ತು ಪಲ್ಯಕ್ಕಾಗಿ ಕಾಯಿಗಳನ್ನು ಹಾಗೂ ಒಳಗಿರುವ ಬೀಜಗಳನ್ನು ಬೇಯಿಸಿ ತಿನ್ನಲು ಮತ್ತು ಚಟ್ನಿ ಮಾಡಲು ಉಪಯೋಗಿಸುತ್ತಾರೆ.

ಹಲಸು ಮಲೆನಾಡಿನಲ್ಲಿ ಚೆನ್ನಾಗಿ ಬೆಳೆಯುವುದು. ಇದನ್ನು ಜೂನ್-ಜುಲೈ ತಿಂಗಳುಗಳಲ್ಲಿ ನೆಡುವುದು ಉತ್ತಮ. ’ಸಿಂಗಪೂರ್‌‌’, ’ರುದ್ರಾಕ್ಷಿ’, ’ಬರ್ಲಿಯಾರ್‌‌’ ಮುಂತಾದ ತಳಿಗಳು ಬೇಸಾಯದಲ್ಲಿವೆ.

ಕಸಿ ಗಿಡಗಳನ್ನು ತಯಾರಿಸಿ ನೆಡಬೇಕು. ಪಾಲಿಥೀನ್ ಚೀಲಗಳಲ್ಲಿ ಗೊಬ್ಬರ ಮಿಶ್ರಣ ತುಂಬಿ, ಬೀಜ ಬಿತ್ತನೆ ಮಾಡಿ ಸಸಿ ಬೆಳೆಸಲೂಬಹುದು. ಈ ಸಸಿಗಳನ್ನೇ ನೆಡಲು ಬಳಸಬಹುದು. ನೆಡಲು ಒಂದು ವರ್ಷದ ಸಸಿ ಉತ್ತಮ. ಸಾಮೀಪ್ಯ ಕಸಿ ಮತ್ತು ಗೂಟಿ ಪದ್ಧತಿಯಿಂದಲೂ ಸಸ್ಯಾಭಿವೃದ್ಧಿ ಮಾಡಬಹುದಾಗಿದೆ.

ಒಂದು ಘನ ಮೀ. ಅಳತೆಯ ಗುಂಡಿ ತೋಡಿ ಅದರಲ್ಲಿ ಗೊಬ್ಬರ ಮಿಶ್ರಣ ತುಂಬಿ, ಮಧ್ಯದಲ್ಲಿ ಸಸಿ ನೆಡಬೇಕು. ತಳಿಗಳನ್ನವಲಂಬಿಸಿ ಸಸಿ ನೆಟ್ಟ ಮೂರರಿಂದ ಎಂಟು ವರ್ಷಗಳಲ್ಲಿ ಫಲ ಬಿಡುತ್ತದೆ. ಒಂದು ಮರದಿಂದ ಸುಮಾರು ೨೫ ರಿಂದ ೧೫೦ ಹಣ್ಣುಗಳನ್ನು ಪಡೆಯಬಹುದು. ಇಳುವರಿಯು ತಳಿ ಮತ್ತು ಮರದ ಸಮೃದ್ಧಿಯನ್ನು ಅವಲಂಬಿಸಿದೆ.