ಹೂವಿನ ಬೆಳೆಗಳು ಕೈತೋಟದ ಅಂದವನ್ನು ಹೆಚ್ಚಿಸುತ್ತವೆ. ದೊರೆಯುವ ಸ್ಥಳಾವಕಾಶ ನೋಡಿಕೊಂಡು ಬೇಸಾಯಕ್ಕೆ ಹೂವಿನ ಬೆಳೆಗಳನ್ನು ಆಯ್ಕೆ ಮಾಡಬೇಕಾಗುವುದು. ಸಾಕಷ್ಟು ಸ್ಥಳಾವಕಾಶವಿದ್ದಲ್ಲಿ ’ಹೂದೋಟ’ ವೆಂದೇ ಒಂದು ಭಾಗ ನಿರ್ಮಿಸಬಹುದು.

ಕುಂಡಗಳಲ್ಲಿ ಕೆಲವು ಹೂವುಗಳನ್ನು ಬೆಳೆಯಲು ಸಾಧ್ಯ. ಗುಲಾಬಿ, ಮಲ್ಲಿಗೆ, ಸುಗಂಧರಾಜ ಮೊದಲಾದ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದರೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇರುತ್ತದೆ. ಹೀಗಾಗಿ ಹೆಚ್ಚಿನ ಆದಾಯವೂ ಈ ಬೆಳೆಗಳಿಂದ ಪಡೆಯಬಹುದು. ಮನೆಯ ಅಲಂಕಾರಕ್ಕಾಗಿಯೇ ಕೆಲವು ಗಿಡಗಳನ್ನು ಬೆಳೆಯುವುದುಂಟು. ಇವು ಹೆಚ್ಚು ಆಕರ್ಷಕವಾಗಿದ್ದು ನೋಡುಗರ ಕಣ್ಮನ ಸೆಳೆಯುತ್ತವೆ. ಅಲಂಕಾರಿಕ ಸಸ್ಯಗಳನ್ನು ವೃದ್ಧಿಮಾಡಿ ಮಾರಾಟ ಮಾಡಲೂಬಹುದು.

ಹೂವು ಬಿಡುವ ಗಿಡಗಳಲ್ಲದೆ ಎಲೆಗಳ ರಚನೆಯ ಅಂದದಿಂದ ಸಾಕಷ್ಟು ಗಿಡಗಳು ಜನಪ್ರಿಯವಾಗಿವೆ. ಹೀಗಾಗಿ ಕೈತೋಟದಲ್ಲಿ ಹೂವಿನ ಬೆಳೆಗಳ ಬೇಸಾಯ ಮನಸ್ಸಿಗೆ ಆನಂದ ನೀಡುವುದು. ಶ್ರಮ ವಹಿಸಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆದರೆ ಅದಕ್ಕೆ ಪ್ರತಿಫಲವೂ ಉಂಟು.

. ಮಲ್ಲಿಗೆ : ಎಲ್ಲರಿಗೂ ಪ್ರೀತಿಪಾತ್ರವಾಗಿರುವ ಜನಪ್ರಿಯ ಹೂವು ’ಮಲ್ಲಿಗೆ’. ಹೂವುಗಳನ್ನು ಮುಡಿಯಲು, ಅಲಂಕಾರಕ್ಕಾಗಿ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಹಾಗೂ ಶುಭ ಸಮಾರಂಭಗಳಲ್ಲಿ ಹೇರಳವಾಗಿ ಉಪಯೋಗಿಸುವರು. ಹೂವುಗಳಿಂದ ಸುಗಂಧ ತೈಲ ಸಹ ತಯಾರಿಸುವರು.

ಮಲ್ಲಿಗೆ ಬಹುವಾರ್ಷಿಕ ಬೆಳೆ. ಉಷ್ಣ ಹಾಗೂ ಸಮಶೀತೋಷ್ಣ ವಲಯಗಳಲ್ಲಿ ಚೆನ್ನಾಗಿ ಬೆಳೆಯುತ್ತಾರೆ. ಗಿಡಗಳನ್ನು ಜೂನ್-ಆಗಸ್ಟ್ ಅವಧಿಯಲ್ಲಿ ನಾಟಿ ಮಾಡುವುದು ಸೂಕ್ತ. ಮಲ್ಲಿಗೆಯಲ್ಲಿ ’ಕಾಕಡಾ ಮಲ್ಲಿಗೆ’, ’ಮೈಸೂರು ಮಲ್ಲಿಗೆ’, ’ವಸಂತ ಮಲ್ಲಿಗೆ’ ಮತ್ತು ’ಜಾಜಿ ಮಲ್ಲಿಗೆ’ ತಳಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.

(i) ಕಾಕಡಾ ಮಲ್ಲಿಗೆ : ಇದು ಪೊದೆಯಾಕಾರದಲ್ಲಿ ಬೆಳೆಯುವುದು, ವರ್ಷವಿಡೀ ಬೆಳೆಯಬಹುದು. ಆದರೆ ಸುವಾಸನೆ ಇರುವುದಿಲ್ಲ.

(ii) ಮೈಸೂರು ಮಲ್ಲಿಗೆ : ಇದೂ ಪೊದೆಯಾಕಾರದಲ್ಲಿ ಬೆಳೆಯುವುದು, ಹೂವುಗಳು ಸುವಾಸನೆಯಿಂದ ಕೂಡಿರುತ್ತವೆ. ಹೂವುಗಳಿಂದ ಸುಗಂಧ ತೈಲ ತಯಾರಿಸಬಹುದು.

(iii) ವಸಂತ ಮಲ್ಲಿಗೆ : ಇದು ಪೊದೆ ಮತ್ತು ಬಳ್ಳಿಯಂತೆಯೂ ಬೆಳೆಯುವುದು. ವರ್ಷವಿಡೀ ಹೂವು ಬಿಡುವುದು. ಇದರಿಂದಲೂ ಸುಗಂಧ ತೈಲ ತಯಾರಿಸಬಹುದು.

(iv) ಜಾಜಿ ಮಲ್ಲಿಗೆ : ಜಾಜಿ ಮಲ್ಲಿಗೆ ಬಳ್ಳಿಯಂತೆ ಬೆಳೆಯುತ್ತದೆ. ಸುವಾಸನೆಯಿಂದ ಕೂಡಿದ ಹೂವನ್ನು ಪಡೆಯಬಹುದು. ಹೂವುಗಳಿಂದ ಸುಗಂಧ ತೈಲ ತಯಾರಿಸುತ್ತಾರೆ.

ಮಲ್ಲಿಗೆಯನ್ನು ಕಾಂಡದ ತುಂಡುಗಳಿಂದ ಅಭಿವೃದ್ಧಿ ಪಡಿಸಬಹುದು. ೩೦ ಘನ ಸೆಂ.ಮೀ. ಅಳತೆಯ ಗುಂಡಿಗಳನ್ನು ತೋಡಿ, ಗೊಬ್ಬರದ ಮಿರ್ಶರಣ ತುಂಬಿ, ನಾಟಿ ಮಾಡಬಹುದು. ಒಂದ ಬಾರಿ ನಾಟಿ ಮಾಡಿದರೆ ಸುಮಾರು ೧೫ ವರ್ಷಗಳವರೆಗೆ ಲಾಭದಾಯಕ ಇಳುವರಿ ದೊರೆಯುವುದು. ಕಾಕಡಾ ಮಲ್ಲಿಗೆಗೆ ೧.೨ ಮೀ X ೧.೨ ಮೀ., ಮೈಸೂರು, ವಸಂತ ಮತ್ತು ಜಾಜಿ ಮಲ್ಲಿಗೆಗಳಿಗೆ ೧.೫ ಮೀ. X ೧.೫ ಮೀ. ಅಂತರ ಕೊಡಬೇಕಾಗುವುದು.

ಗಿಡ ಹೂವು ಬಿಡುವುದನ್ನು ನಿಲ್ಲಸಿದ ಮೇಲೆ ೨೦ ಸೆಂ.ಮೀ. ಎತ್ತರಕ್ಕೆ ಸವರಬೇಕು. ಇದರಿಂದ ಇಳುವರಿಯ ಮೇಲೆ ಒಳ್ಳೆಯ ಪರಿಣಾಮ ಬೀರುವುದು. ನಾಟಿ ಮಾಡಿದ ಸುಮಾರು ಒಂದು ವರ್ಷ ಅವಧಿಯ ನಂತರ ಗಿಡ ಹೂವು ಬಿಡಲು ಪ್ರಾರಂಭಿಸುತ್ತದೆ.

. ಸೇವಂತಿಗೆ : ಸೇವಂತಿಗೆ ಹೂವನ್ನು ಮಾಲೆಗಳನ್ನು ತಯಾರಿಸಲು ಹಾಗೂ ಇನ್ನಿತರ ಸಾಂಪ್ರದಾಯಿಕ ಕಾರ್ಯಗಳಲ್ಲಿ ಉಪಯೋಗಿಸುವರಲ್ಲದೇ ಸುಗಂಧ ತೈಲ ಮತ್ತು ಕೀಟನಾಶಕ ತಯಾರಿಕೆಯಲ್ಲೂ ಹೇರಳವಾಗಿ ಉಪಯೋಗಿಸುವುದುಂಟು. ಈ ಬೆಳೆಗೆ ತಂಪಿನಿಂದ ಕೂಡಿದ ವಾತಾವರಣ ಉತ್ತಮ. ಇದನ್ನು ಆಗಸ್ಟ್‌ನವೆಂಬರ್‌ತಿಂಗಳುಗಳಲ್ಲಿ ಬೆಳೆಯಬಹುದಾಗಿದೆ.

ಸೇವಂತಿಗೆಯಲ್ಲಿ ಬಿಳಿ, ಹಳದಿ ಮತ್ತು ಮಿಶ್ರ ಬಣ್ಣದ ತಳಿಗಳು ಪ್ರಚಲಿತದಲ್ಲಿವೆ. ಬಿಳಿ ಬಣ್ಣದಲ್ಲಿ ರಾಜಾ, ಹಿಮಾನಿ ಇತ್ಯಾದಿ, ಹಳದಿ ಬಣ್ಣದಲ್ಲಿ ಜಯಂತಿ, ವಾಸಂತಿಕಾ ಇತ್ಯಾದಿ ಮತ್ತು ಮಿಶ್ರ ಬಣ್ಣದಲ್ಲಿ ಮೋಹಿನಿ, ನೀಲಿಮಾ ಇತ್ಯಾದಿ ತಳಿಗಳು ಪ್ರಚಲಿತದಲ್ಲಿವೆ.

ಇದನ್ನು ಬೀಜ, ಕಾಂಡ ಮತ್ತು ಕಂದುಗಳಿಂದ ಅಭಿವೃದ್ಧಿ ಪಡಿಸಬಹುದಾಗಿದೆ. ಸಸಿಗಳನ್ನು ೩೦ ಸೆಂ.ಮೀ. ಅಂತರದಲ್ಲಿ ಸಾಲು ಬಿಟ್ಟು ೨೨ ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ಹೆಚ್ಚಿಗೆ ಕವಲುಗಳನ್ನು ಪಡೆಯಲು ತುದಿಗಳನ್ನು ಚಿವುಟಿ ಹಾಕಬೇಕು. ಅವಶ್ಯಕತೆ ಇರುವಷ್ಟು ಮಾತ್ರ ನೀರು ಪೂರೈಕೆ ಮಾಡಬೇಕು. ಇಲ್ಲವಾದರೆ ಬೇರು ಕೊಳೆ ರೋಗ ಬಾಧಿಸುವುದು. ಸಸಿಗಳನ್ನು ನಾಟಿ ಮಾಡಿದ ಮೇಲೆ ಮೂರು ತಿಂಗಳಲ್ಲಿ ಹೂವು ಬಿಡಲು ಆರಂಭವಾಗುವುದು. ಮುಂದೆ ಒಂದೂವರೆ ತಿಂಗಳವರೆಗೆ ಹೂವು ಬಿಡುತ್ತಿರುತ್ತದೆ.

. ಕನಕಾಂಬರ : ಸಾಕಷ್ಟು ಬೇಡಿಕೆ ಇರುವ ಹೂವು ಕನಕಾಂಬರ. ಮಾಲೆ ಕಟ್ಟಿ ಮಾರಾಟ ಮಾಡುವುದೇ ಹೆಚ್ಚು. ಮಹಿಳೆಯರು ಇಷ್ಟಪಟ್ಟು ಮುಡಿಯುವ ಹೂವು ಇದಾಗಿದೆ. ಇದರ ಆಕರ್ಷಕ ಬಣ್ಣ ಎಲ್ಲರನ್ನೂ ಆಕರ್ಷಿಸುತ್ತದೆ ಮತ್ತು ಬಾಡದಂತೆ ಹೆಚ್ಚು ಸಮಯದವರೆಗೆ ಇರುವುದು. ತಂಪು ವಾತಾವರಣದಲ್ಲಿ ಯಶಸ್ವಿಯಾಗಿ ಬೆಳೆಯಬಹುದು. ಬೆಳೆ ಬೆಳೆಯಲು ಜೂನ್ ತಿಂಗಳು ಸೂಕ್ತ. ಆದರೆ ವರ್ಷವಿಡೀ ಇದನ್ನು ಬೆಳೆಯಬಹುದಾಗಿದೆ.

ಕನಕಾಂಬರದಲ್ಲಿ ಹಳದಿ, ಕೆಂಪು, ಕಿತ್ತಳೆ ಮತ್ತು ಕೇಸರಿ ಬಣ್ಣದ ತಳಿಗಳಿವೆ. ’ಸೌಂದರ್ಯ’ ನಮ್ಮ ರಾಜ್ಯದ ಜನಪ್ರಿಯ ತಳಿ. ತಮಿಳುನಾಡಿನ ಕಿತ್ತಳೆ ಹಳದಿ ಬಣ್ಣದ ತಳಿ ಹೆಚ್ಚು ಹೂವುಗಳನ್ನು ಬಿಡುವುದು. ಇದನ್ನು ಬೀಜ ಅಥವಾ ಕಾಂಡದ ತುಂಡುಗಳನ್ನು ನೆಟ್ಟು ಬೆಳೆಸಬಹುದು. ಕಾಂಡದ ತುಂಡುಗಳಿಂದ ಸಸ್ಯಾಭಿವೃದ್ಧಿ ಮಾಡುವುದಾದರೆ ಅವುಗಳನ್ನು ಮೊದಲು ಮಡಿಗಳಲ್ಲಿ ನೆಟ್ಟು ಬೇರು ಬರಿಸಿ, ನಂತರ ನೆಡಬೇಕು. ೬೦ ಸೆಂ.ಮೀ. X ೩೦ ಸೆಂ.ಮೀ. ಅಂತರದಲ್ಲಿ ಸಸಿಗಳನ್ನು ನೆಡಬೇಕು. ಅವಶ್ಯಕತೆಗನುಗುಣವಾಗಿ ನೀರು ಪೂರೈಕೆ ಮಾಡಬೇಕು. ನಾಟಿ ಮಾಡಿದ ನಂತರ ಮೂರು ತಿಂಗಳಿಗೆ ಹೂವು ಬಿಡಲು ಆರಂಭವಾಗುವುದು. ವಾರಕ್ಕೆ ಮೂರು ಬಾರಿ ಹೂವುಗಳನ್ನು ಕೊಯ್ಲು ಮಾಡಬಹುದು.

. ಸುಗಂಧರಾಜ : ಸುಗಂಧರಾಜ ಬಹುವಾರ್ಷಿಕ ಹೂವಿನ ಬೆಳೆ. ಹೂವುಗಳು ಸುವಾಸನೆಯಿಂದ ಕೂಡಿರುತ್ತವೆ. ಹೂವುಗಳನ್ನು ಮಾಲೆ ತಯಾರಿಸಲು, ಹೂದಾನಿಗಳಲ್ಲಿ ಜೋಡಿಸಲು ಮತ್ತು ಒಳ ಆವರಣ ಅಲಂಕಾರಕ್ಕಾಗಿ ಹೇರಳವಾಗಿ ಬಳಸುವರಲ್ಲದೆ ಸುಗಂಧ ದ್ರವ್ಯ ತೆಗೆಯಲೂ ಉಪಯೋಗಿಸುತ್ತಾರೆ. ಇದರ ಬೇಸಾಯಕ್ಕೆ ತಂಪಾದ ಒಣ ಹವೆ ಸೂಕ್ತವಾಗಿದ್ದು ವರ್ಷವಿಡಿ ಬೆಳೆಯಬಹುದಾಗಿದೆ. ಆದರೆ ಮಾರ್ಚ್‌ಮೇ ತಿಂಗಳುಗಳು ನಾಟಿಗೆ ಸೂಕ್ತವಾದ ಸಮಯ. ತಳಿಗಳಲ್ಲಿ ಹೂವಿನ ದಳಗಳ ಸುತ್ತಿನ ಆಧಾಋದ ಮೇಲೆ ಒಂದು ಸುತ್ತಿನ ಹೂವು ಮತ್ತು ಎರಡು ಸುತ್ತಿನ ಹೂವು ಎಂಬ ಎರಡು ತಳಿಗಳು ಬೇಸಾಯದಲ್ಲಿವೆ. ಇದನ್ನು ಗೆಡ್ಡೆಗಳಿಂದ ಬೆಳೆಸಬಹುದು. ೧೫ ಸೆಂ.ಮೀ. ಬದು ಕಾಲುವೆಗಳನ್ನು ತಯಾರಿಸಿ ೨೫ ಸೆಂ.ಮೀ.ಗೆ ಒಂದರಂತೆ ಗೆಡ್ಡೆಗಳನ್ನು ನಾಟಿ ಮಾಡಬೇಕು. ಅವಶ್ಯಕತೆಗೆ ತಕ್ಕಂತೆ ನೀರು ಪೂರೈಕೆ ಮಾಡಬೇಕು. ನಾಟಿ ಮಾಡಿದ ೩-೩ ೧/೨ ತಿಂಗಳಲ್ಲಿ ಹೂವುಗಳು ಕೊಯ್ಲಿಗೆ ಬರುತ್ತವೆ. ಕೊಯ್ಲು ಮುಗಿದ ಮೇಲೆ ಕಾಂಡಗಳನ್ನು ಕತ್ತರಿಸಿ ಕೂಳೆ ಬೆಳೆ ಪಡೆಯಬಹುದು. ಇದನ್ನು ಹೂವಿನ ಬೆಳೆಯನ್ನು ಕುಂಡಗಳಲ್ಲಿ ಸಹ ಬೆಳೆಸಬಹುದು.

. ಆಸ್ಟರ್‌‌: ಇದೊಂದು ಆಕರ್ಷಕವಾದ ಹೂವಿನ ಬೆಳೆ. ಮಾಲೆ ಮತ್ತು ಹೂಗುಚ್ಛಗಳನ್ನು ತಯಾರಿಸಲು ಉಪಯೋಗಿಸುವರು. ತೋಟದ ಅಂಚುಗಳಲ್ಲಿ ಮತ್ತು ವೃತ್ತಾಕಾರವಾಗಿ ಬೆಳೆಸಲು ಅನುಕೂಲ. ಇದು ಶೀತ ಹಾಗೂ ಉಷ್ಣಪ್ರದೇಶಗಳೆರಡರಲ್ಲೂ ಯಶಸ್ವಿಯಾಗಿ ಬೆಳೆಯುವುದು. ಅಕ್ಟೋಬರ್‌‌ನವೆಂಬರ್‌‌ಹಾಗೂ ಉಷ್ಣ ಪ್ರದೇಶಗಳು ಬಿತ್ತನೆಗೆ ಸೂಕ್ತ. ತಳಿಗಳಲ್ಲಿ ಗಿಡ್ಡ ಹಾಗೂ ಎತ್ತರ ತಳಿಗಳಿವೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ ಎಗ್ವಿನ್, ಕ್ಯಾಲಿಫೋರ್ನಿಯಾ, ಪ್ರಿನ್ಸೆಸ್, ಕ್ವೀನ್ ಆಫ್ ದಿ ಮಾರ್ಕೆಟ್, ಪೌಡರ್‌‌ಪಫ್ ಇತ್ಯಾದಿ. ಹಸನುಗೊಳಿಸಿದ ಭೂಮಿಯಲ್ಲಿ ಸುಮಾರು ೨೦ ದಿನಗಳ ಸಸಿಗಳನ್ನು ನಾಟಿ ಮಾಡಬೇಕು. ಅವಶ್ಯಕತೆಗನುಸಾರವಾಗಿ ನೀರು ಪೂರೈಕೆ ಮಾಡಬೇಕು. ಜನವರಿ-ಫೆಬ್ರುವರಿ ಮತ್ತು ಜುಲೈ-ಆಗಸ್ಟ್ ತಿಂಗಳುಗಳಲ್ಲಿ ಹೂವುಗಳು ಕೊಯ್ಲಿಗೆ ಬರುತ್ತವೆ. ಹೂವುಗಳಿಂದ ಬೀಜಗಳನ್ನು ಸಂಗ್ರಹಿಸಿ ಮತ್ತೆ ಬಿತ್ತನೆಗೆ ಉಪಯೋಗಿಸಬಹುದು.

. ಗ್ಲಾಡಿಯೋಲಸ್ : ಈ ಪುಷ್ಪವನ್ನು ಅಲಂಕಾರಕ್ಕಾಗಿ ಬೆಳೆಯುವರು. ಮಡಿಗಳಲ್ಲಿ ಅಥವಾ ಕುಂಡಗಳಲ್ಲಿ ಬೆಳೆಯಬಹುದು. ಹೂದಾನಿಗಳಲ್ಲಿ ಜೋಡಿಸಿದಾಗ ಸೊಬಗು ಹೆಚ್ಚುವುದು. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಇದರ ಉಪಯೋಗ ಹೆಚ್ಚು. ಹೀಗಾಗಿ ಇದನ್ನು ಆರ್ಥಿಕ ದೃಷ್ಟಿಯಿಂದ ಬೆಳೆಯಲಾಗುತ್ತಿದೆ.

ತಂಪು ಹವಾಮಾನದಲ್ಲಿ ಗ್ಲಾಡಿಯೋಲಸ್ ಚೆನ್ನಾಗಿ ಬೆಳೆಯುವುದು. ಮತ್ತು ಜೂನ್‌ನವೆಂಬರ್‌‌ತಿಂಗಳುಗಳು ಇದನ್ನು ಬೆಳೆಯಲು ಸೂಕ್ತವಾದ ಕಾಲ. ಗ್ಲಾಡಿಯೋಲಸ್‌ನಲ್ಲಿ ಹಲವಾರು ತಳಿಗಳಿವೆ. ಈ ತಳಿಗಳು ವಿವಿಧ ಆಕರ್ಷಕ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತವೆ. ಪೂನಮ್, ಫ್ರೆಂಡ್‌ಶಿಪ್, ಮೀರಾ, ಸಪ್ನಾ, ಆರತಿ, ಶೋಭಾ, ತ್ರಿಲೋಕಿ ಇತ್ಯಾದಿಗಳು.

ವಾಣಿಜ್ಯವಾಗಿ ಗೆಡ್ಡೆಗಳನ್ನು ನಾಟಿ ಮಾಡಿ ಗಿಡಗಳನ್ನು ಬೆಳೆಸಲಾಗುವುದು. ೩೦ ಸೆಂ.ಮೀ. X ೨೨ ಸೆಂ.ಮೀ. ಅಂತರದಲ್ಲಿ ಬೋದುಗಳ ಮೇಲೆ ಇಲ್ಲವೆ ಗೊಬ್ಬರದ ಮಿಶ್ರಣ ತುಂಬಿದ ಕುಂಡಗಳಲ್ಲಿ ನಾಟಿ ಮಾಡಬಹುದು. ಈ ರೀತಿ ನಾಟಿ ಮಾಡಿದ ಸುಮಾರು ಮೂರು ತಿಂಗಳುಗಳಲ್ಲಿ ಹೂವು ಕೊಯ್ಲಿಗೆ ಬರುತ್ತದೆ. ಕೊಯ್ಲು ಆದ ನಂತರ ಗೆಡ್ಡೆಗಳನ್ನು ಅಗೆದು ಸಂಗ್ರಹಿಸಿಟ್ಟು ಮತ್ತೆ ನಾಟಿಗಾಗಿ ಬಳಸಬಹುದು.

. ಹುಲ್ಲು ಹಾಸು : ಇದನ್ನು ’ಹುಲ್ಲಿನ ಹಾಸಿಗೆ’ ಎಂತಲೂ ಕರೆಯುವರು. ವಿಶೇಷವಾಗಿ ಹೂವಿನ ತೋಟದಲ್ಲಿ ಹುಲ್ಲು ಹಾಸು ಇರಲೇಬೇಕು. ಅದು ತೋಟದ ಅಂದವನ್ನು ಹೆಚ್ಚಿಸುತ್ತದೆ. ಬಿಡುವಿನ ವೇಳೆಯಲ್ಲಿ ವಿಶ್ರಾಂತಿಗಾಗಿ ಕುಟುಂಬದ ಸದಸ್ಯರೆಲ್ಲರು ಸೇರಿ ಹುಲ್ಲು ಹಾಸಿನ ಮೇಲೆ ಕುಳಿತು ಆನಂದಿಸಬಹುದು. ನಮಗೆ ಬೇಕೆನಿಸಿದ ಆಕಾರದಲ್ಲಿ ಇದನ್ನು ಬೆಳೆಸಬಹುದು.

ಹುಲ್ಲು ಹಾಸು ಅಭಿವೃದ್ಧಿ ಪಡಿಸಲು ಕೆಲವು ಪದ್ಧತಿಗಳಿವೆ. ಅವುಗಳೆಂದರೆ :

೧. ಬೀಜ ಬಿತ್ತಿ ವೃದ್ಧಿ ಮಾಡುವುದು.

೨. ಹಂಬುಗಳನ್ನು ಕತ್ತರಿಸಿ ನಾಟಿ ಮಾಡುವುದು

೩. ಸಗಣಿ ರಾಡಿಯಲ್ಲಿ ಹುಲ್ಲು ತುಂಡುಗಳನ್ನು ಅದ್ದಿ ನಾಟಿ ಮಾಡುವುದು ಮತ್ತು

೪. ಬೇರಿನಿಂದ ಕೂಡಿದ ಕಡ್ಡಿಗಳ ನಾಟಿ.

ಇವುಗಳಲ್ಲಿ ’ಬೇರಿನಿಂದ ಕೂಡಿದ ಕಡ್ಡಿಗಳ ನಾಟಿ’ ಪದ್ಧತಿ ಅನುಸರಿಸುವುದು ಉತ್ತಮ. ಈ ಪದ್ಧತಿಯಲ್ಲಿ ಗರಿಕೆಯನ್ನು ಬೇರು ಸಹಿತ ಅಗೆದು ನಂತರ ಹಸನಗೊಳಿಸಿ ಸಿದ್ಧಪಡಿಸಿದ ಭೂಮಿಯಲ್ಲಿ ಒತ್ತಾಗಿ ನಾಟಿ ಮಾಡಬೇಕು. ಹುಲ್ಲು ಸಮೃದ್ಧಿಯಿಂದ ಬೆಳೆಯು ಗೊಬ್ಬರ ಪೂರೈಕೆ ಮಾಡಬೇಕಾಗುವುದು. ಪ್ರತಿದಿನವೂ ನೀರು ಹಾಕಬೇಕು.

ಹುಲ್ಲು ಎತ್ತರವಾಗಿ ಬೆಳೆಯುತ್ತಿದ್ದಂತೆ ಆಗಾಗ ಕತ್ತರಿಸುತ್ತಿರಬೇಕು. ಸುಮಾರು ೧೦ ಸೆಂ.ಮೀ. ಎತ್ತದ ಮೇಲೆ ಬೆಳೆಯುವ ಹುಲ್ಲನ್ನು ಸಮನಾಗಿ ಕತ್ತರಿಸಬೇಕು. ಹುಲ್ಲು ಬೆಳೆಸಬೇಕಾಗಿರುವ ಪ್ರಮಾಣ ನೋಡಿಕೊಂಡು ಕತ್ತರಿಸಬಹುದು.

* * *