ನಾವು ಮಾತನಾಡುವ ಮಾತುಗಳಲ್ಲಿ ಅನೇಕ ಬಗೆಯ ಶಬ್ದಗಳಿರುತ್ತವೆ.  ಆ ಶಬ್ದಗಳಿಗೆ ನಾವು ಬೇರೆ ಬೇರೆ ಹೆಸರು ಕೊಟ್ಟಿರುತ್ತೇವೆ. ಅಂದರೆ ಒಂದೊಂದು ಜಾತೀಯ ಶಬ್ದಗಳನ್ನು ಒಂದೊಂದು ಗುಂಪು ಮಾಡಿ ವ್ಯಾಕರಣದಲ್ಲಿ ಹೇಳುತ್ತೇವೆ.  ಉದಾಹರಣೆಗೆ ಈ ಕೆಳಗಿನ ಮಾತುಗಳಲ್ಲಿಯ ಶಬ್ದಗಳನ್ನು ನೋಡಿರಿ.

೧. ಆತನು ಮನೆಯನ್ನು ಚೆನ್ನಾಗಿ ಕಟ್ಟಿದನು.

೨. ಒಕ್ಕಲಿಗರು ಕಷ್ಟದಿಂದ ಬೆಳೆಯನ್ನು ಬೆಳೆಯುವರು.

ಈ ವಾಕ್ಯಗಳಲ್ಲಿ:-

. ಆತನು, ಮನೆಯನ್ನು, ಒಕ್ಕಲಿಗರು, ಕಷ್ಟದಿಂದ, ಬೆಳೆಯನ್ನುಇವೆಲ್ಲ ನಾಮಪದಗಳು.

. ಕಟ್ಟಿದನು, ಬೆಳೆಯುವರುಇವು ಕ್ರಿಯಾಪದಗಳು.

. ಚೆನ್ನಾಗಿ ಎಂಬುದು ಅವ್ಯಯ.

ಹೀಗೆ ನಾವು ಆಡುವ ಮಾತುಗಳನ್ನು ಮುಖ್ಯವಾಗಿ ಮೂರು ಗುಂಪುಗಳಾಗಿ ಮಾಡುತ್ತೇವೆ.

(೧) ನಾಮಪದ (೨) ಕ್ರಿಯಾಪದ (೩) ಅವ್ಯಯ – ಇವೇ ಆ ಮೂರು ಗುಂಪುಗಳು.

ಮನೆಯನ್ನು ಮನೆಯದೆಸೆಯಿಂದ
ಮನೆಯಿಂದ ಮನೆಯ
ಮನೆಗೆ ಮನೆಯಲ್ಲಿ

ಇವೆಲ್ಲ `ನಾಮಪದಗಳು. ಈ ಪದಗಳಲ್ಲೆಲ್ಲ `ಮನೆ ಎಂಬುದು ಮೂಲರೂಪ. ಈ ಮೂಲರೂಪವಾದ ಮನೆ ಎಂಬ ಶಬ್ದವನ್ನು ನಾಮಪದದ ಮೂಲರೂಪ ಅಥವಾ ನಾಮಪ್ರಕೃತಿ ಎನ್ನುತ್ತೇವೆ.

ಕಟ್ಟಿದನು,** ಕಟ್ಟುವನು, ಕಟ್ಟುತ್ತಾನೆ, ಕಟ್ಟಿದರು, ಕಟ್ಟನು, ಕಟ್ಟುವಳು, ಕಟ್ಟಲಿ-ಇವೆಲ್ಲ ಕ್ರಿಯಾಪದಗಳು.  ಇವುಗಳಿಗೆ ಮೂಲರೂಪ, ಕಟ್ಟು ಎಂಬುದು.  ಈ ಕಟ್ಟು ಎಂಬ ಮೂಲರೂಪವು ಕ್ರಿಯಾಪದದ ಮೂಲರೂಪ. ಇದಕ್ಕೆ ಧಾತು ಎಂಬ ಇನ್ನೊಂದು ಹೆಸರುಂಟು.

ಚೆನ್ನಾಗಿ, ನೆಟ್ಟಗೆ, ಮೆಲ್ಲಗೆ ಮತ್ತು ಆದರೆ – ಇಂಥ ಕೆಲವು ಶಬ್ದಗಳು ಭಾಷೆಯಲ್ಲಿ ಬರುತ್ತವೆ.  ಇವುಗಳು ಒಂದೇ ರೂಪವಾಗಿರುತ್ತವೆ.  ನಾಮಪದ ಕ್ರಿಯಾಪದಗಳಂತೆ ಬೇರೆ ಬೇರೆ ರೂಪವನ್ನು ಹೊಂದುವುದಿಲ್ಲ.  ಇವು ಬೇರಾವ ಮೂಲರೂಪದಿಂದಲೂ ಹುಟ್ಟಿಲ್ಲ.  ಇವೇ ಮೂಲರೂಪಗಳು.  ಇವುಗಳನ್ನು ಅವ್ಯಯವೆಂದು ಕರೆಯಬಹುದು.

ಹೀಗೆ ನಾವಾಡುವ ಮಾತುಗಳು, ಪದದ ಮೂರು ಗುಂಪುಗಳಾದ ನಾಮಪದಗಳು, ಕ್ರಿಯಾಪದಗಳು ಇಲ್ಲವೆ ಅವ್ಯಯಗಳಾಗಿರುತ್ತವೆ; ಇವುಗಳಲ್ಲಿ ಈಗ ನಾಮಪದಗಳ ವಿಚಾರವಾಗಿ ತಿಳಿಯೋಣ.

ಪದ ಎಂದರೆ ಮೂಲರೂಪ ಪ್ರಕೃತಿವೊಂದಕ್ಕೆ ಪ್ರತ್ಯಯ ಹತ್ತಿದ ರೂಪ.  ಈ ಕೆಳಗೆ ನೋಡಿರಿ:-

ನಾಮ ಪ್ರಕೃತಿ + ನಾಮವಿಭಕ್ತಿಪ್ರತ್ಯಯ = ನಾಮಪದ
ಮನೆ + = ಮನೆಯು
ಕಲ್ಲು + ಅನ್ನು = ಕಲ್ಲನ್ನು
ಹೊಲ + ಇಂದ = ಹೊಲದಿಂದ
ನೆಲ + ಕ್ಕೆ = ನೆಲಕ್ಕೆ
ಶಾಲೆ + ಅಲ್ಲಿ = ಶಾಲೆಯಲ್ಲಿ

ಇಲ್ಲಿ ಮನೆ, ಕಲ್ಲು, ಹೊಲ, ನೆಲ, ಶಾಲೆ-ಮೊದಲಾದವು ನಾಮಪ್ರಕೃತಿಗಳು.  ಉ, ಅನ್ನು, ಇಂದ, ಕ್ಕೆ, ಅಲ್ಲಿ-ಇವೆಲ್ಲ ನಾಮವಿಭಕ್ತಿಪ್ರತ್ಯಯಗಳು.  ಮನೆಯು, ಕಲ್ಲನ್ನು, ಹೊಲದಿಂದ, ನೆಲಕ್ಕೆ ಶಾಲೆಯಲ್ಲಿ-ಇವೆಲ್ಲ ನಾಮಪದಗಳು

 

(೨೯) ನಾಮಪ್ರಕೃತಿ:-ನಾಮಪದದ ಮೂಲರೂಪವಾಗಿಯೂ, ಕ್ರಿಯೆಯ ಅರ್ಥವನ್ನು ಕೊಡದೆಯೂ ಇರುವ ಶಬ್ದವೇ ನಾಮಪ್ರಕೃತಿಯೆನಿಸುವುದು. ಇವಕ್ಕೆ ಪ್ರಾತಿಪದಿಕಗಳು ಎಂಬ ಹೆಸರೂ ಉಂಟು.

ಉದಾಹರಣೆಗೆ:-ಮರ, ನೆಲ, ಮಣ್ಣು, ಉಪ್ಪು, ಹೂವು, ಬಳ್ಳಿ, ಕಾಯಿ, ಅಡವಿ, ನಗರ, ಪಟ್ಟಣ, ಜನ, ಹೆಣ್ಣು, ಗಂಡು, ಹುಡುಗ, ಶಿಶು, ಬಾಲಕ, ಮಂಚ, ಪುಸ್ತಕ, ಬಳಪ, ಸುಣ್ಣ, ಬಣ್ಣ, ಕಟ್ಟಿಗೆ, ದನ,-ಇತ್ಯಾದಿ.

(೩೦) ಪದ:-ಪ್ರಕೃತಿಗಳಿಗೆ ಪ್ರತ್ಯಯಗಳು ಸೇರಿ ಪದ ಗಳೆನಿಸುವುವು.

(೩೧) ನಾಮಪದ:-ನಾಮಪ್ರಕೃತಿಗಳಿಗೆ ನಾಮವಿಭಕ್ತಿ ಪ್ರತ್ಯಯಗಳು ಸೇರಿ ನಾಮಪದ ಗಳೆನಿಸುವುವು.

(೩೨) ವಿಭಕ್ತಿಪ್ರತ್ಯಯ:- ಸ್ವತಂತ್ರವಾಗಿ ಅರ್ಥವಿಲ್ಲದೆ, ನಾಮಪ್ರಕೃತಿಗಳ ಮುಂದೆ ಸೇರಿ, ಬೇರೆ ಬೇರೆ ಅರ್ಥವನ್ನುಂಟುಮಾಡುವ ಉ, ಅನ್ನು, ಇಂದ, ಗೆ, ಕ್ಕೆ, ದೆಸೆಯಿಂದ, ಅ, ಅಲ್ಲಿ, ಏ, ಇರಾ, ಈ, ಆ, ಇತ್ಯಾದಿಗಳಿಗೆ ವಿಭಕ್ತಿಪ್ರತ್ಯಯಗಳೆನ್ನುವರು.

ಉದಾಹರಣೆಗೆ:-

ನಾಮಪ್ರಕೃತಿ + ನಾಮವಿಭಕ್ತಿಪ್ರತ್ಯಯ = ನಾಮಪದ
ಹುಡುಗ + = ಹುಡುಗನು
ಮಂಚ + ಅನ್ನು = ಮಂಚವನ್ನು
ಬಟ್ಟೆ + ಇಂದ = ಬಟ್ಟೆಯಿಂದ
ದನ + ಕ್ಕೆ = ದನಕ್ಕೆ
ಮುದುಕ + ದೆಸೆಯಿಂದ = ಮುದುಕನ ದೆಸೆಯಿಂದ
ಅಕ್ಕ + = ಅಕ್ಕನ
ತಾಯಿ + ಅಲ್ಲಿ = ತಾಯಿಯಲ್ಲಿ
ತಂದೆ + = ತಂದೆಯೇ
ರಾಮ + = ರಾಮಾ

ಮೇಲಿನ ಈ ನಾಮಪ್ರಕೃತಿಗಳಲ್ಲಿ ಹಲವಾರು ರೀತಿಯ ಶಬ್ದಗಳಿವೆ.  ಮನುಷ್ಯರ, ಪ್ರಾಣಿಗಳ, ವಸ್ತುಗಳ-ಇತ್ಯಾದಿ ಅನೇಕ ಬಗೆಯ ಶಬ್ದಗಳಿರುವುದನ್ನು ಗಮನಿಸಿರಿ.  ಇನ್ನೂ ಅನೇಕ ಬಗೆಯ ಶಬ್ದಗಳಿವೆ.  ಅವುಗಳ ವಿವರವನ್ನು ಈ ಕೆಳಗೆ ನೋಡಿರಿ:-


** ಕ್ರಿಯೆಯನ್ನು ಹೇಳುವುದೇ ಕ್ರಿಯಾಪದವೆನಿಸುವುದು.