(೧) ಅಪ್ಪಾ, ನನಗೆ ತಪಸ್ಸಿನ ಮೇಲೆ ಮನಸ್ಸಾಗಿದೆ.  ಈ ವಯಸ್ಸಿನಲ್ಲಿ ಅರಣ್ಯವಾಸವು ನಮ್ಮ ಕುಲಕ್ಕೆ ಬಂದದ್ದು.  ನಾನೂ ಬೇಕಾದಷ್ಟು ಕಾಲ ನಿಮ್ಮೊಡನೆ ಇದ್ದೆನು. -ಈ ವಾಕ್ಯಗಳಲ್ಲಿ ಬಂದಿರುವ ಸರ್ವನಾಮ ಶಬ್ದಗಳಾವುವು?

(೨) ವಸ್ತುವಾಚಕ, ಗುಣವಾಚಕ, ಶಬ್ದಗಳೆಂದರೇನು? ಹತ್ತು ಹತ್ತು ಶಬ್ದಗಳ ಪಟ್ಟಿ ಮಾಡಿರಿ.

(೩) ಉತ್ತರ, ಮಾಡಲು, ಅತ್ತ, ಅವನು, ಕುರುಡ, ಕಲ್ಲು, ಅಷ್ಟು, ಅಂಥ, ಮೂರನೆಯ – ಈ ಪ್ರಕೃತಿಗಳು ಯಾವ ಯಾವ ಗುಂಪಿಗೆ ಸೇರುವ ನಾಮಪ್ರಕೃತಿಗಳು?

(೪) ಜನ, ಮಗು, ಕೋಣ, ಸೂರ‍್ಯ, ಶನಿ, ನಾನು, ನೀನು-ಈ ಪ್ರಕೃತಿಗಳು ಯಾವ ಯಾವ ಲಿಂಗಗಳು?

(೫) ಮನೆಯನ್ನು, ದೇವರಲ್ಲಿ, ಪುಸ್ತಕವು, ಕಲ್ಲಿಗೆ, ಹುಲಿಯದೆಸೆಯಿಂದ, ದೇವರೇ, ಮಕ್ಕಳಿರಾ, ಮಂಚದಿಂದ, ನೆಲಕ್ಕೆ, ಗುರುವಿಗೆ-ಈ ಪದಗಳ ಪ್ರಕೃತಿ ಪ್ರತ್ಯಯಗಳನ್ನು ಬಿಡಿಸಿ ಬರೆದು ಆ ಪ್ರತ್ಯಯಗಳು ಯಾವ ವಿಭಕ್ತಿಗಳು? ಅವುಗಳ ಅರ್ಥವೇನು ತಿಳಿಸಿರಿ.

(೬) ತಮ್ಮಂದಿರು, ಅಕ್ಕಂದಿರುಗಳು, ತಾಯಿಯರು, ಈ ಪದಗಳಲ್ಲಿರುವ ಪ್ರಕೃತಿ-ಪ್ರತ್ಯಯ-ಆಗಮಗಳು ಯಾವುವೆಂಬುದನ್ನು ಬಿಡಿಸಿ ಬರೆದು ತೋರಿಸಿರಿ.

(೭) (ಅ) ರಾಮ-ಕಾಡು ಒಂದು ಪರ್ಣಶಾಲೆ-ಕಟ್ಟಿಕೊಂಡು ವಾಸಿಸುತ್ತಿದ್ದನು. (ಆ) ಮೀನು-ನೀರು-ವಾಸಮಾಡುತ್ತದೆ. – ಮೇಲಿನ ಈ ಎರಡೂ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ನಾಮಪ್ರಕೃತಿಗಳಿಗೆ ಯಾವ ವಿಭಕ್ತಿ ಪ್ರತ್ಯಯಗಳನ್ನು ಹಚ್ಚಿದರೆ, ವಾಕ್ಯವು ಅರ್ಥವತ್ತಾಗುವುದು?  ವಿಭಕ್ತಿಪ್ರತ್ಯಯವನ್ನು ಸೇರಿಸಿ ಬರೆಯಿರಿ.

(೮) (ಅ) ಅವನು ಮನೆ ಇಲ್ಲ (ಆ) ತಾಯಿ ದೇವರು ತಿಳಿ. -ಇವನ್ನು ಅರ್ಥಪೂರ್ಣವಾದ ವಾಕ್ಯಗಳನ್ನಾಗಿ ಮಾಡಿರಿ.

(೯) ಕೆಳಗಿನ ಪದಗಳ ಮುಂದೆ ಬಿಟ್ಟಿರುವ ಸ್ಥಳದಲ್ಲಿ ಮುಂದೆ ಆವರಣದಲ್ಲಿ ಕೊಟ್ಟಿರುವ ಒಂದು ಸರಿಯಾದ ಉತ್ತರವನ್ನು ಹುಡುಕಿ ಬರೆಯಿರಿ.

(i) ನಾನು ಎಂಬುದು (ವಾಚ್ಯಲಿಂಗ, ನಪುಂಸಕಲಿಂಗ, ಪುಲ್ಲಿಂಗ)

(ii) ಅವನು ಎಂಬುದು (ಗುಣವಾಚಕ, ಭಾವನಾಮ, ಸರ್ವನಾಮ)

(iii) ಮಕ್ಕಳಿರಾ, ಎಂಬುದು (ಚತುರ್ಥೀವಿಭಕ್ತಿ, ತೃತೀಯಾವಿಭಕ್ತಿ, ಸಂಬೋಧನಾ ವಿಭಕ್ತ್ಯಂತ ಪದ)

(iv) ಅತ್ತ ಎಂಬುದು (ಪರಿಮಾಣವಾಚಕ, ದಿಗ್ವಾಚಕ, ಸರ್ವನಾಮ)

(v) ಕೊಡಲಿಯಿಂದ ಎಂಬ ಪದವು (ಪಂಚಮೀ, ತೃತೀಯಾ, ಸಪ್ತಮೀ ವಿಭಕ್ತ್ಯಂತವಾಗಿದೆ)

(vi) ಸಂಪ್ರದಾನಾರ್ಥದಲ್ಲಿ (ತೃತೀಯಾ, ಚತುರ್ಥೀ, ಪಂಚಮೀವಿಭಕ್ತಿ ಬರುವುದು)

(vii) ಸರಸ್ವತಿ ಒಲಿದಳು.  ಇಲ್ಲಿ ಸರಸ್ವತಿ ಎಂಬ ಪ್ರಕೃತಿಯು (ನಪುಂಸಕಲಿಂಗ, ಸ್ತ್ರೀಲಿಂಗ, ಸ್ತ್ರೀನಪುಂಸಕಲಿಂಗ)

(viii) ಹೂವಾಡಗಿತ್ತಿ ಎಂಬುದು (ಸ್ತ್ರೀಲಿಂಗ, ನಪುಂಸಕಲಿಂಗ, ಪುಲ್ಲಿಂಗ)

(ix) ಹುಡುಗ ಎಂಬುದು (ವಾಚ್ಯಲಿಂಗ, ನಪುಂಸಕಲಿಂಗ, ಪುಲ್ಲಿಂಗ)

(x) ಹುಡುಗಿ ಎಂಬುದು (ಅಂಕಿತನಾಮ, ಅನ್ವರ್ಥನಾಮ, ರೂಢನಾಮ)

(೧೦) ಕೆಳಗಿನ ವಾಕ್ಯಗಳಲ್ಲಿ ತಪ್ಪುಗಳಿವೆ.  ಅವನ್ನು ತಿದ್ದಿ ಸರಿಪಡಿಸಿರಿ:-

(i) ನಾನು, ನಾವು, ನೀನು, ನೀವು-ಎಂಬುವು ಪುಲ್ಲಿಂಗಗಳು.

(ii) ಪದಕ್ಕೆ ಪ್ರತ್ಯಯ ಸೇರಿ ಪದವೆನಿಸುವುದು.

(iii) ಕರ್ತರಿ ಪ್ರಯೋಗದಲ್ಲಿ ಕರ್ಮಾರ್ಥದಲ್ಲಿ ಪ್ರಥಮಾವಿಭಕ್ತಿ ಬರುವುದು.

(iv) ಧಾತುಗಳಮೇಲೆ ನಾಮ ವಿಭಕ್ತಿಪ್ರತ್ಯಯಗಳು ಸೇರಿ ನಾಮಪದಗಳೆನಿಸುವುವು.

(v) ಅವನು, ಅವಳು, ಅದು, ಅವು-ಇವು ಮಧ್ಯಮ ಪುರುಷ ಸರ್ವನಾಮಗಳು.

(vi) ನಾಮಪದದ ಮೂಲರೂಪಕ್ಕೆ ಕ್ರಿಯಾಪ್ರಕೃತಿಯೆನ್ನುವರು.

(vii) ಸಂಬೋಧನೆಯಲ್ಲಿ ಬರುವ ಕೊನೆಯ ಸ್ವರವು ದೀರ್ಘಸ್ವರವೆನಿಸುವುದು.

(viii) ಪ್ಲುತಸ್ವರವೆಂದರೆ ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರ.

(ix) ಜನ ಶಬ್ದವು ಪುಲ್ಲಿಂಗ.

(x) ಸೂರ‍್ಯ ಶಬ್ದವು ನಪುಂಸಕಲಿಂಗ.