(೫೩) ನಾವು ಮಾತಾನಾಡುವಾಗ ಶಬ್ದಗಳಿಗೆ ಪ್ರಕೃತಿಗಳಿಗೆ ಯಾವಯಾವ ವಿಭಕ್ತಿಪ್ರತ್ಯಯಗಳನ್ನು ಹಚ್ಚಿ ಹೇಳಬೇಕೋ ಅದನ್ನು ಬಿಟ್ಟು ಬೇರೆ ವಿಭಕ್ತಿಪ್ರತ್ಯಯಗಳನ್ನು ಹಚ್ಚಿ ಹೇಳುವುದುಂಟು. ಹೀಗೆ ಬರಬೇಕಾದ ವಿಭಕ್ತಿಪ್ರತ್ಯಯಕ್ಕೆ ಪ್ರತಿಯಾಗಿ ಬೇರೊಂದು ವಿಭಕ್ತಿಪ್ರತ್ಯಯ ಬರುವಂತೆ ಹೇಳುವುದೇ ವಿಭಕ್ತಿ ಪಲ್ಲಟ ವೆನಿಸುವುದು.

ಉದಾಹರಣೆಗೆ:-

(ಅ)    (i) ಬಂಡಿಯನ್ನು ಹತ್ತಿದನು.

(ii) ಊರನ್ನು ಸೇರಿದನು.

(iii) ಬೆಟ್ಟವನ್ನು ಹತ್ತಿದನು.

ಹೀಗೆ ದ್ವಿತೀಯಾ ವಿಭಕ್ತಿಯನ್ನು ಸೇರಿಸಿ ಹೇಳಬೇಕಾದ ಕಡೆಗಳಲ್ಲಿ-

(i) ಬಂಡಿಗೆ ಹತ್ತಿದನು.

(ii) ಊರಿಗೆ ಸೇರಿದನು.

(iii) ಬೆಟ್ಟಕ್ಕೆ ಹತ್ತಿದನು.

ಹೀಗೆ ಚತುರ್ಥೀವಿಭಕ್ತಿಯನ್ನು ಸೇರಿಸಿ ಹೇಳುವುದು ವಾಡಿಕೆ.  ಆದ್ದರಿಂದ ಇಲ್ಲಿ ದ್ವಿತೀಯಾರ್ಥದಲ್ಲಿ ಚತುರ್ಥೀವಿಭಕ್ತಿ ಬಂದಿದೆಯೆಂದು ತಿಳಿಯಬೇಕು.

(ಆ)      (i) ಮರದ ದೆಸೆಯಿಂದ ಹಣ್ಣು ಉದುರಿತು.

(ii) ಆತನ ದೆಸೆಯಿಂದ ಕೇಡಾಯಿತು.

ಹೀಗೆ ಪಂಚಮೀವಿಭಕ್ತಿ ಬರುವೆಡೆಗಳಲ್ಲಿ-

(i) ಮರದಿಂದ ಹಣ್ಣು ಉದುರಿತು.

(ii) ಆತನಿಂದ ಕೇಡಾಯಿತು.

ಇತ್ಯಾದಿ ತೃತೀಯಾವಿಭಕ್ತಿಯನ್ನು ಸೇರಿಸಿ ಹೇಳುವುದುಂಟು.  ಆದ್ದರಿಂದ ಇದನ್ನು ಪಂಚಮೀ ಅರ್ಥದಲ್ಲಿ ತೃತೀಯಾವಿಭಕ್ತಿ ಪಲ್ಲಟವಾಗಿದೆಯೆಂದು ತಿಳಿಯಬೇಕು.

(ಇ)      (i) ಮನೆಯ ಯಜಮಾನ.

(ii) ನಮ್ಮ ಉಪಾಧ್ಯಾಯರು.

ಹೀಗೆ ಷಷ್ಠೀವಿಭಕ್ತಿಯು ಬರಬೇಕಾದೆಡೆಯಲ್ಲಿ-

(i) ಮನೆಗೆ ಯಜಮಾನ.

(ii) ನಮಗೆ ಉಪಾಧ್ಯಾಯರು.

ಇತ್ಯಾದಿ ಚತುರ್ಥೀವಿಭಕ್ತಿಯನ್ನು ಸೇರಿಸಿ ಹೇಳುವುದುಂಟು.  ಆದುದರಿಂದ ಇದನ್ನು ಷಷ್ಠೀ ಅರ್ಥದಲ್ಲಿ ಚತುರ್ಥೀವಿಭಕ್ತಿ ಪಲ್ಲಟವಾಗಿ ಬಂದಿದೆಯೆಂದು ತಿಳಿಯಬೇಕು.

(ಉ)     (i) ಹಳ್ಳದಲ್ಲಿ ಬಿದ್ದನು.

(ii) ಅವನಲ್ಲಿ ಸಾಮರ್ಥ್ಯವಿಲ್ಲ.

ಹೀಗೆ ಸಪ್ತಮೀವಿಭಕ್ತಿ ಬರಬೇಕಾದ ಕಡೆಗಳಲ್ಲಿ-

(i) ಹಳ್ಳಕ್ಕೆ ಬಿದ್ದನು.

(ii) ಅವನಿಗೆ ಸಾಮರ್ಥ್ಯವಿಲ್ಲ.

ಇತ್ಯಾದಿ ಪಂಚಮೀವಿಭಕ್ತ್ಯಂತವಾಗಿ ಹೇಳುವುದು ವಾಡಿಕೆ.  ಇದನ್ನು ಸಪ್ತಮೀ ಅರ್ಥದಲ್ಲಿ ಪಂಚಮೀವಿಭಕ್ತಿ ಪಲ್ಲಟವೆಂದು ತಿಳಿಯಬೇಕು.