ಇದುವರೆಗೆ ನಾಮಪ್ರಕೃತಿ, ಲಿಂಗ ಮತ್ತು ವಚನಗಳ ಬಗೆಗೆ ಅರಿತಿರುವಿರಿ.  ಈ ನಾಮಪ್ರಕೃತಿಗಳಿಗೆ ೮ ವಿಧವಾದ ವಿಭಕ್ತಿಪ್ರತ್ಯಯಗಳು

[1] ಅನೇಕ ಕಾರಕಾರ್ಥಗಳಲ್ಲಿ ಸೇರುವುವು. ಈಗ ಹಾಗೆ ಬರುವ ಪ್ರತ್ಯಯಗಳಾವುವು? ಅವುಗಳ ಪ್ರಯೋಜನವೇನು ಎಂಬುದನ್ನು ತಿಳಿಯೋಣ.  ಈ ಕೆಳಗಿನ ವಾಕ್ಯಗಳನ್ನು ನೋಡಿರಿ:-

ಭೀಮನು ತನ್ನ ಬಲಗಾಲಿನಿಂದ ಚೆಂಡನ್ನು ಒದೆದನು ಈ ವಾಕ್ಯವು-ಭೀಮ, ತಾನು, ಬಲಗಾಲು, ಚೆಂಡು-ಹೀಗೆ ಕೇವಲ ನಾಮಪ್ರಕೃತಿಗಳನ್ನೇ ಹೇಳಿ ಒದೆದನು ಎಂದಿದ್ದರೆ ಅರ್ಥವಾಗುತ್ತಿರಲಿಲ್ಲ.

ಭೀಮ, ತಾನು, ಬಲಗಾಲು, ಚೆಂಡು ಈ ನಾಲ್ಕು ಪ್ರಕೃತಿಗಳಿಗೆ ಪರಸ್ಪರ ವಾಕ್ಯದಲ್ಲಿ ಒಂದು ಸಂಬಂಧವಿದೆ. ಈ ಸಂಬಂಧವನ್ನು ಪ್ರತ್ಯಯಗಳು ಉಂಟುಮಾಡುತ್ತವೆ.  ಹೇಗೆಂಬುದನ್ನು ನೋಡಿರಿ.

ಭೀಮ ಎಂಬ ಪ್ರಕೃತಿಯ ಮೇಲೆ ಉ ಪ್ರತ್ಯಯ ಸೇರಿದಾಗ ಭೀಮನು ಎಂಬ ಕರ್ತೃಪದವಾಗಿ ಒದೆಯುವ ಕೆಲಸ ಮಾಡಿದನು ಎಂಬ ಅರ್ಥವು ಹೊಳೆಯುವುದು-ಮುಂದಿನ ಪ್ರಶ್ನೆ ಏನನ್ನು ಒದೆದನು? ಎಂಬುದು.  ಆಗ ಚೆಂಡು ಎಂಬ ಪ್ರಕೃತಿಯಮೇಲೆ ಕರ್ಮಾರ್ಥದ ಅನ್ನು ಪ್ರತ್ಯಯ ಸೇರಿ ಚೆಂಡನ್ನು ಎಂಬ ಕರ್ಮಪದವಾಯಿತು.  ಒದೆಯುವುದಕ್ಕೆ ಇದು ಕರ್ಮವಾಯಿತು.  ಇದರಂತೆ ಮುಂದೆ ಯಾವುದರಿಂದ? ಎಂಬ ಪ್ರಶ್ನೆ ಹುಟ್ಟುವುದು.  ಆಗ ಬಲಗಾಲು ಎಂಬ ಪ್ರಕೃತಿಯ ಮುಂದೆ ಸಾಧನಾರ್ಥಕ (ಕರಣಾರ್ಥಕ) ಇಂದ ಪ್ರತ್ಯಯವು ಸೇರಿ ಬಲಗಾಲಿನಿಂದ ಎಂಬ ಕರಣಾರ್ಥಕ ಪದದ ಸಂಬಂಧವುಟಾಯಿತು.  ತಾನು ಎಂಬ ಪ್ರಕೃತಿಯ ಮೇಲೆ ಅ ಎಂಬ ಸಂಬಂಧಾರ್ಥಕ ಪ್ರತ್ಯಯ ಸೇರಿ ತನ್ನ ಸಂಬಂಧವಾದ ಬಲಗಾಲಿ ನಿಂದ ಎಂಬ ಸಂಬಂಧವು ಸೂಚಿತವಾಗುವುದು.

ಇಲ್ಲಿ ಬಂದಿರುವ ನಾಲ್ಕು ಪ್ರಕೃತಿಗಳ ಮೇಲೂ_

೧. ಭೀಮನು ಎಂಬಲ್ಲಿಯ ಪ್ರತ್ಯಯ ಕರ್ತೃರ್ಥದಲ್ಲೂ,

೨. ಚೆಂಡನ್ನು ಎಂಬಲ್ಲಿಯ ಅನ್ನು ಪ್ರತ್ಯಯ ಕರ್ಮಾರ್ಥದಲ್ಲೂ,

೩. ತನ್ನ ಎಂಬಲ್ಲಿಯ ಪ್ರತ್ಯಯ ಸಂಬಂಧದಲ್ಲೂ,

೪. ಬಲಗಾಲಿನಿಂದ ಎಂಬಲ್ಲಿಯ ಇಂದ ಪ್ರತ್ಯಯ ಸಾಧನಾರ್ಥದಲ್ಲೂ ಎಂದರೆ ಕರಣಾರ್ಥದಲ್ಲೂ ಸೇರಿ ವಾಕ್ಯದಲ್ಲಿ ಪರಸ್ಪರ ಸಂಬಂಧವನ್ನುಂಟುಮಾಡುವುವು.

ಕೇವಲ ಪ್ರಕೃತಿಗಳನ್ನೇ ಪ್ರಯೋಗ ಮಾಡುವುದು ಸಾಧ್ಯವಿಲ್ಲ.  ಪ್ರಯೋಗ ಮಾಡಲೂ ಬಾರದು ಎಂಬುದು ಮೇಲಿನ ವಿವರಣೆಯಿಂದ ಅರ್ಥವಾಗುವುದು.  ಅಲ್ಲದೆ ಉ, ಅನ್ನು, ಇಂದ,-ಇತ್ಯಾದಿ ಪ್ರತ್ಯಯಗಳೂ ಪ್ರಯೋಗಕ್ಕೆ ಯೋಗ್ಯವಲ್ಲ.  ಕೆಲವು ಕಡೆ ವಾಕ್ಯಗಳಲ್ಲಿ ವಿಭಕ್ತಿಪ್ರತ್ಯಯವು ಇಲ್ಲದಂತೆ ಕಂಡುಬಂದರೂ ಅವು ಬಂದು ಲೋಪವಾಗಿವೆಯೆಂದು ಭಾವಿಸಬೇಕು.

ಉದಾಹರಣೆಗೆ:-

ಭೀಮನು ಚೆಂಡನ್ನು ಎಸೆದನು – ಎಂಬ ವಾಕ್ಯವು ಭೀಮ ಚೆಂಡನ್ನು ಎಸೆದನು – ಹೀಗೆ ಪ್ರಯೋಗಿಸಲ್ಪಟ್ಟರೆ ಭೀಮ ಎಂಬುದರ ಮೇಲೆ ವಿಭಕ್ತಿಪ್ರತ್ಯಯವೇ ಬಂದಿಲ್ಲವೆಂದು ಹೇಳಲಾಗದು.  ಆದರೆ ಅಲ್ಲಿ ಉ ಎಂಬ ವಿಭಕ್ತಿಪ್ರತ್ಯಯ ಬಂದು ಲೋಪವಾಗಿದೆ ಎಂದು ತಿಳಿಯಬೇಕು.  ಹಾಗಾದರೆ ವಿಭಕ್ತಿಪ್ರತ್ಯಯವೆಂದರೇನು? ಎಂಬ ಬಗೆಗೆ ಕೆಳಗಿನಂತೆ ಸೂತ್ರವನ್ನು ಹೇಳಬಹುದು.

(೫೨) ಕರ್ತೃ, ಕರ್ಮ, ಕರಣ, ಸಂಪ್ರದಾನ, ಅಪಾದಾನ, ಆಧಿಕರಣಾಧಿಕಾರಕಾರ್ಥ ಗಳನ್ನು ವಿಭಾಗಿಸಿಕೊಡುವ ಶಬ್ದರೂಪವೇ ವಿಭಕ್ತಿ ಎನಿಸುವುದು.

ಷಷ್ಠೀವಿಭಕ್ತಿಯು ಕಾರಕಾರ್ಥಗಳಲ್ಲಿ ಸೇರಿಲ್ಲ.  ಅದರ ಹಾಗೆ ಸಂಬೋಧನಾ ವಿಭಕ್ತಿಯೂ ಸೇರಿಲ್ಲ.  ಕೇವಲ ಪ್ರಥಮಾ, ದ್ವಿತೀಯಾ, ತೃತೀಯಾ, ಚತುರ್ಥೀ, ಪಂಚಮೀ, ಸಪ್ತಮೀ ಈ ಆರು ವಿಭಕ್ತಿಗಳೇ ಕಾರಕಾರ್ಥಗಳನ್ನು ವಿಭಾಗಿಸಿ ಕೊಡುವಂಥವುಗಳು.  ಅವುಗಳ ವಿಷಯವನ್ನು ಈಗ ತಿಳಿಯೋಣ.

ವಿಭಕ್ತಿಗಳುಕಾರಕಾರ್ಥಗಳುಪ್ರತ್ಯಯಗಳುಪದಗಳು
ಸಂ ವಿಭಕ್ತಿಗಳು ಅರ್ಥಗಳು
(ಕಾರಕಾರ್ಥಗಳು)
ವಿಭಕ್ತಿಪ್ರತ್ಯಯ ಹೊಸಗನ್ನಡ ನಾಮಪದಗಳು ಹಳಗನ್ನಡ ನಾಮಪದಗಳು
ಹೊಸಗನ್ನಡ ಹೊಸಗನ್ನಡ ಏಕವಚನ ಬಹುವಚನ ಏಕವಚನ ಬಹುವಚನ
ಪ್ರಥಮಾ[2] ಕರ್ತ್ರರ್ಥ ಮ್ ರಾಮನು ರಾಮರು ರಾಮಮ್ ರಾಮರ್
ದ್ವಿತೀಯಾ ಕರ್ಮಾರ್ಥ ಅನ್ನು ಅಂ ರಾಮನನ್ನು ರಾಮರನ್ನು ರಾಮನಂ ರಾಮರಂ
ತೃತೀಯಾ ಕರಣಾರ್ಥ
(ಸಾಧನಾರ್ಥ)
ಇಂದ ಇಂ,
ಇಂದು,
ಇಂದೆ
ರಾಮನಿಂದ ರಾಮರಿಂದ ರಾಮನಿಂ
ರಾಮನಿಂದಂ
ರಾಮನಿಂದೆ
ರಾಮರಿಂ
ರಾಮರಿಂದಂ
ರಾಮರಿಂದೆ
ಚತುರ್ಥೀ ಸಂಪ್ರದಾನ
(ಕೊಡುವಿಕೆ)
ಗೆ, ಇಗೆ,  ಕ್ಕೆ, ಅಕ್ಕೆ[3] ಗೆ, ಕೆ,  ಕ್ಕೆ ರಾಮನಿಗೆ ರಾಮರಿಗೆ ರಾಮಂಗೆ ರಾಮರ್ಗೆ
ಪಂಚಮೀ[4] ಅಪಾದಾನ (ಅಗಲಿಕೆ) ದೆಸೆಯಿಂದ ಅತ್ತಣಿಂ,

ಅತ್ತಣಿಂದಂ

ಅತ್ತಣಿಂದೆ

ರಾಮನ
ದೆಸೆಯಿಂದ
ರಾಮರ
ದೆಸೆಯಿಂದ
ರಾಮನತ್ತಣಿಂ
ರಾಮರತ್ತಣಿಂ
ರಾಮನತ್ತಣಿಂದಂರಾಮನತ್ತಣಿಂದೆ
ರಾಮರತ್ತಣಿಂದಂ
ರಾಮರತ್ತಣಿಂದೆ
ಷಷ್ಠೀ[5] ಸಂಬಂಧ ರಾಮನ ರಾಮರ ರಾಮನ ರಾಮರ
ಸಪ್ತಮೀ ಅಧಿಕರಣ ಅಲ್ಲಿ, ಅಲಿ,
ಒಳು, ಎ
ಒಳ್ ರಾಮನಲ್ಲಿ
ರಾಮನಲಿ
ರಾಮನೊಳು
ರಾಮರಲ್ಲಿ
ರಾಮರಲಿ
ರಾಮರೊಳು
ರಾಮನೊಳ್ ರಾಮರೊಳ್
ಸಂಬೋಧನಾ[6] ಕರೆಯುವಿಕೆ
(ಅಭಿಮುಖೀಕರಣ)
ಆ, ಇರಾ,
ಏ, ಈ
ಆ, ಇರಾ,
ಏ, ಈ
ರಾಮಾ
ರಾಮನೇ
ರಾಮರಿರಾ,
ರಾಮರುಗಳೇ
ರಾಮಾ,
ರಾಮನೇ
ರಾಮರಿರಾ,
ರಾಮರ್ಗಳಿರಾ

ವಿಭಕ್ತಿಪ್ರತ್ಯಯಗಳು ನಾಮಪ್ರಕೃತಿಗಳ ಮೇಲೆ ಸೇರುವಾಗ ಬರುವ ಕೆಲವು ಆಗಮಾಕ್ಷರ ಗಳನ್ನು ಈಗ ನೋಡೋಣ.

[‘ಆಗಮಾಕ್ಷರ’ ಎಂದರೆ ಪ್ರಕೃತಿಗೂ ಪ್ರತ್ಯಯಕ್ಕೂ ಮಧ್ಯದಲ್ಲಿ ಬರುವ (ಹೊಸದಾಗಿ ಬರುವ) ಅಕ್ಷರ ಅಥವಾ ಅಕ್ಷರಗಳು.]

() ಅ ಕಾರಾಂತ ನಾಮಪ್ರಕೃತಿ ಅಣ್ಣ ಶಬ್ದ_

 

ಏಕವಚನ ಬಹುವಚನ
ಪ್ರಥಮಾ ಅಣ್ಣ + = ಅಣ್ಣ + + = ಅಣ್ಣನು ಅಣ್ಣಂದಿರು
ದ್ವಿತೀಯಾ ಅಣ್ಣ + ಅನ್ನು = ಅಣ್ಣ + + ಅನ್ನು = ಅಣ್ಣನನ್ನು ಅಣ್ಣಂದಿರನ್ನು
ತೃತೀಯಾ ಅಣ್ಣ + ಇಂದ = ಅಣ್ಣ + + ಇಂದ = ಅಣ್ಣನಿಂದ ಅಣ್ಣಂದಿರಿಂದ
ಚತುರ್ಥೀ ಅಣ್ಣ + ಇಗೆ = ಅಣ್ಣ + + ಇಗೆ = ಅಣ್ಣನಿಗೆ ಅಣ್ಣಂದಿರಿಗೆ
ಪಂಚಮೀ ಅಣ್ಣ + ದೆಸೆಯಿಂದ = ಅಣ್ಣ + + ದೆಸೆಯಿಂದ = ಅಣ್ಣನ
ದೆಸೆಯಿಂದ
ಅಣ್ಣಂದಿರ
ದೆಸೆಯಿಂದ
ಷಷ್ಠೀ ಅಣ್ಣ + = ಅಣ್ಣ + + = ಅಣ್ಣನ ಅಣ್ಣಂದಿರ
ಸಪ್ತಮೀ ಅಣ್ಣ + ಅಲ್ಲಿ = ಅಣ್ಣ + + ಅಲ್ಲಿ = ಅಣ್ಣನಲ್ಲಿ ಅಣ್ಣಂದಿರಲ್ಲಿ
ಸಂಬೋಧನಾ ಅಣ್ಣ + = ಅಣ್ಣ + + = ಅಣ್ಣನೇ ಅಣ್ಣಂದಿರೇ
ಅಣ್ಣ + = ಅಣ್ಣ + = ಅಣ್ಣಾ ಅಣ್ಣಂದಿರಾ

‘ಅಣ್ಣ’ ಎಂಬ ಅಕಾರಾಂತ ಪುಲ್ಲಿಂಗದಲ್ಲಿ ಏಕವಚನದಲ್ಲಿ ವಿಭಕ್ತಿಪ್ರತ್ಯಯಗಳು ಎಲ್ಲ ಕಡೆಗೂ ಪ್ರಕೃತಿಗೂ ಪ್ರತ್ಯಯಕ್ಕೂ ಮಧ್ಯದಲ್ಲಿ ನ ಕಾರವು ಆಗಮವಾಗಿ ಬರುತ್ತದೆ.  ಸಂಬೋಧನೆಯಲ್ಲಿ ಆ ಪ್ರತ್ಯಯ ಪರವಾದಾಗ ಮಾತ್ರ ನ ಕಾರಾಗಮವಾಗುವುದಿಲ್ಲ.

 

() ಅ ಕಾರಾಂತ ಸ್ತ್ರೀಲಿಂಗ ಅಕ್ಕ ಶಬ್ದ_

 

ಏಕವಚನ ಬಹುವಚನ
ಪ್ರಥಮಾ ಅಕ್ಕ + = ಅಕ್ಕ + + = ಅಕ್ಕನು ಅಕ್ಕಂದಿರು
ದ್ವಿತೀಯಾ ಅಕ್ಕ + ಅನ್ನು = ಅಕ್ಕ + + ಅನ್ನು = ಅಕ್ಕನನ್ನು ಅಕ್ಕಂದಿರನ್ನು
ತೃತೀಯಾ ಅಕ್ಕ + ಇಂದ = ಅಕ್ಕ + + ಇಂದ = ಅಕ್ಕನಿಂದ ಅಕ್ಕಂದಿರಿಂದ
ಚತುರ್ಥೀ ಅಕ್ಕ + ಇಗೆ = ಅಕ್ಕ + + ಇಗೆ = ಅಕ್ಕನಿಗೆ ಅಕ್ಕಂದಿರಿಗೆ
ಪಂಚಮೀ ಅಕ್ಕ + ದೆಸೆಯಿಂದ = ಅಕ್ಕ + + ದೆಸೆಯಿಂದ = ಅಕ್ಕನ ದೆಸೆಯಿಂದ ಅಕ್ಕಂದಿರ ದೆಸೆಯಿಂದ
ಷಷ್ಠೀ ಅಕ್ಕ + = ಅಕ್ಕ + + = ಅಕ್ಕನ ಅಕ್ಕಂದಿರ
ಸಪ್ತಮೀ ಅಕ್ಕ + ಅಲ್ಲಿ = ಅಕ್ಕ + + ಅಲ್ಲಿ = ಅಕ್ಕನಲ್ಲಿ ಅಕ್ಕಂದಿರಲ್ಲಿ
ಸಂಬೋಧನಾ ಅಕ್ಕ + = ಅಕ್ಕ + + = ಅಕ್ಕನೇ ಅಕ್ಕಂದಿರೇ
ಅಕ್ಕ + = ಅಕ್ಕ + = ಅಕ್ಕಾ ಅಕ್ಕಂದಿರಾ

ಪುಲ್ಲಿಂಗದಂತೆಯೇ ಈ ಸ್ತ್ರೀಲಿಂಗ ಅಕಾರಾಂತ ಪ್ರಕೃತಿಯ ಮೇಲೆ ಏಕವಚನದಲ್ಲಿ ವಿಭಕ್ತಿಪ್ರತ್ಯಯಗಳು ಸೇರುವಾಗ ಬಹುಶಃ ಎಲ್ಲ ಕಡೆಗೂ ನ ಕಾರಾಗಮ ಬಂದಿರುವುದನ್ನು ಕಾಣಬಹುದು.  ಸಂಬೋಧನೆಯಲ್ಲಿ ಆ ವಿಭಕ್ತಿಪ್ರತ್ಯಯ ಸೇರಿದಾಗ ಮಾತ್ರ ನ ಕಾರಾ ಗಮವಿಲ್ಲ[7].

ಮೇಲೆ ತಿಳಿಸಿದಂತೆ ಸಾಮಾನ್ಯವಾಗಿ ಅಕಾರಾಂತ ಪುಲ್ಲಿಂಗ, ಸ್ತ್ರೀಲಿಂಗಗಳಲ್ಲಿ ಏಕವಚನದ ವಿಭಕ್ತಿಪ್ರತ್ಯಯಗಳು ಸೇರುವಾಗ ನಕಾರವು ಆಗಮವಾಗುತ್ತದೆಂದು ತಿಳಿಯಬೇಕು.  ಬಹುವಚನ ದಲ್ಲಿ ಬರುವುದಿಲ್ಲ.  ಅಲ್ಲಿ ಬೇರೆ ಬಹುವಚನ ಸೂಚಕ ಆಗಮವು ಬರುವುದನ್ನು ಹಿಂದೆಯೇ ತಿಳಿಸಿದೆ.

ಈಗ ಇನ್ನೊಂದು ಬಗೆಯ ಆಗಮ ಬರುವುದನ್ನು ಕೆಳಗಿನ ಅಕಾರಾಂತ ನಪುಂಸಕಲಿಂಗದಲ್ಲಿ ಗಮನಿಸಿರಿ.

 

() ‘ಮರ‘ ಎಂಬ ಅ ಕಾರಾಂತ ನಪುಂಸಕಲಿಂಗ ಪ್ರಕೃತಿ_

ವಿಭಕ್ತಿ

ಏಕವಚನ ಬಹುವಚನ
ಪ್ರಥಮಾ ಮರ + = ಮರ + + = ಮರವು ಮರಗಳು
ದ್ವಿತೀಯಾ ಮರ + ಅನ್ನು = ಮರ + + ಅನ್ನು = ಮರವನ್ನು ಮರಗಳನ್ನು
ತೃತೀಯಾ ಮರ + ಇಂದ = ಮರ + + ಇಂದ = ಮರದಿಂದ ಮರಗಳಿಂದ
ಚತುರ್ಥೀ ಮರ + ಕ್ಕೆ = ಮರ + + ಕ್ಕೆ, ಇಗೆ = ಮರಕ್ಕೆ ಮರಗಳಿಗೆ
ಪಂಚಮೀ ಮರ + ದೆಸೆಯಿಂದ = ಮರ + + ದೆಸೆಯಿಂದ = ಮರದ
ದೆಸೆಯಿಂದ
ಮರಗಳ
ದೆಸೆಯಿಂದ
ಷಷ್ಠೀ ಮರ + = ಮರ + + = ಮರದ ಮರಗಳ
ಸಪ್ತಮೀ ಮರ + ಅಲ್ಲಿ = ಮರ + + ಅಲ್ಲಿ = ಮರದಲ್ಲಿ ಮರಗಳಲ್ಲಿ
ಸಂಬೋಧನಾ ಮರ + = ಮರ + + = ಮರವೇ ಮರಗಳಿರಾ

ಮರ ಎಂಬ ಅಕಾರಾಂತ ನಪುಂಸಕಲಿಂಗ ನಾಮಪ್ರಕೃತಿಯ ಮೇಲೆ ೮ ವಿಧವಾದ ನಾಮವಿಭಕ್ತಿಪ್ರತ್ಯಯಗಳನ್ನು ಹಚ್ಚಿದಾಗ ಪ್ರಥಮಾ, ದ್ವಿತೀಯಾ, ಸಂಬೋಧನೆಗಳಲ್ಲಿ ವ ಕಾರವೂ, ಚತುರ್ಥಿಯನ್ನುಳಿದು ಬೇರೆ ಕಡೆಗಳಲ್ಲಿ ದ ಕಾರವೂ ಆಗಮಗಳಾಗಿ ಬಂದಿವೆ ಎಂಬುದನ್ನು ಗಮನಿಸಿರಿ.

ಆದ್ದರಿಂದ ಅಕಾರಾಂತ ನಪುಂಸಕಲಿಂಗ ಪ್ರಕೃತಿಗಳ ಮೇಲೆ ಏಕವಚನದಲ್ಲಿ ವಿಭಕ್ತಿ ಪ್ರತ್ಯಯಗಳು ಸೇರುವಾಗ ಪ್ರಾಯಶಃ ಪ್ರಥಮಾ, ದ್ವಿತೀಯಾ, ಸಂಬೋಧನಗಳಲ್ಲಿ ವ ಕಾರವೂ, ತೃತೀಯಾ, ಪಂಚಮೀ, ಷಷ್ಠೀ, ಸಪ್ತಮಿಗಳಲ್ಲಿ ದ ಕಾರವೂ ಆಗಮವಾಗಿ ಬರುವುವು.

ಪ್ರಾಯಶಃ ಬರುವುವು ಎಂದು ಹೇಳಿರುವುದರಿಂದ ಪ್ರಾಣಿವಾಚಕಗಳಾದ ಅಕಾರಾಂತ ನಪುಂಸಕಲಿಂಗಗಳಲ್ಲಿ ಕೆಲವು ಕಡೆ ದಕಾರವು ಬರುವುದಿಲ್ಲ.

ಉದಾಹರಣೆಗೆ:-

ಅಕಾರಾಂತ ನಪುಂಸಕಲಿಂಗ ಕೋಣಶಬ್ದ:- ಕೋಣವು, ಕೋಣನನ್ನು, ಕೋಣನಿಂದ, ಕೋಣನಿಗೆ, ಕೋಣನ ದೆಸೆಯಿಂದ, ಕೋಣನ, ಕೋಣನಲ್ಲಿ, ಕೋಣವೇ (ಕೋಣನೇ)

ಅಕಾರಾಂತ ನಪುಂಸಕಲಿಂಗ ಗರುಡ ಶಬ್ದ:- ಗರುಡವು, ಗರುಡನನ್ನು, ಗರುಡನಿಂದ, ಗರುಡನಿಗೆ, ಗರುಡನ ದೆಸೆಯಿಂದ, ಗರುಡನ, ಗರುಡನಲ್ಲಿ, ಗರುಡವೇ (ಗರುಡನೇ).

ಮೇಲಿನ ‘ಕೋಣ’,ಗರುಡ’ ಈ ಎರಡೂ ಅಕಾರಾಂತ ನಪುಂಸಕಲಿಂಗ ಪ್ರಕೃತಿಗಳ ಮೇಲೆ ದ್ವಿತೀಯಾ, ತೃತೀಯಾ, ಚತುರ್ಥೀ, ಪಂಚಮಿ, ಷಷ್ಠೀ, ಸಪ್ತಮೀಗಳಲ್ಲಿ ಪುಲ್ಲಿಂಗದಂತೆ ನಕಾರಾಗಮವೂ, ಪ್ರಥಮಾ ಮತ್ತು ಸಂಬೋಧನೆಗಳಲ್ಲಿ ವ ಕಾರವೂ, ಸಂಬೋಧನೆಯಲ್ಲಿ ವಿಕಲ್ಪದಿಂದ[8] ನ ಕಾರವೂ, ತೃತೀಯೇಯಲ್ಲಿ ವಿಕಲ್ಪದಿಂದ ಕೋಣದಿಂದ, ಗರುಡದಿಂದ ಎಂದು ಆದಾಗ ದ ಕಾರವೂ ಆಗಮಗಳಾಗುತ್ತವೆಂದು ತಿಳಿಯಬೇಕು.

() ಇನ ಎಂಬ ಆಗಮ ಬರುವ ವಿಚಾರ

ಗುರು, ಊರು, ಮಗು, ವಧು-ಮೊದಲಾದ ಉಕಾರಾಂತ ಪ್ರಕೃತಿಗಳಿಗೆ ತೃತೀಯಾ, ಪಂಚಮಿ, ಷಷ್ಠೀ, ಸಪ್ತಮೀ ವಿಭಕ್ತಿಗಳಲ್ಲಿ ಇನ ಎಂಬ ಆಗಮ ವಿಕಲ್ಪವಾಗಿ ಬರುವುದು.  (ವಿಕಲ್ಪವಾಗಿ ಬರುವುದೆಂದು ಹೇಳಿರುವುದರಿಂದ ಬೇರೊಂದು ಆಗಮವೂ ಬರುವುದೆಂದು ತಿಳಿಯಬೇಕು.  ಅಥವಾ ಯಾವ ಆಗಮವೂ ಬಾರದೆ ಇರುವುದೆಂದೂ ತಿಳಿಯಬೇಕು).

ಉದಾಹರಣೆಗೆ:-

ತೃತೀಯಾ (i) ಗುರುವಿನಿಂದ (ಇನಾಗಮ) ಗುರುವಿನಿಂದ (ವಕಾರಾಗಮ)
(ii) ಊರಿನಿಂದ (ಇನಾಗಮ) ಊರಿಂದ (ಯಾವ ಆಗಮವೂ ಇಲ್ಲ)
(iii) ವಧುವಿನಿಂದ (ಇನಾಗಮ) ವಧುವಿನಿಂದ (ವಕಾರಾಗಮ)
(iv) ಮಗುವಿನಿಂದ (ಇನಾಗಮ) ಮಗುವಿನಿಂದ (ವಕಾರಾಗಮ)
ಪಂಚಮೀ (i) ಗುರುವಿನದೆಸೆಯಿಂದ (ಇನಾಗಮ)
(ii) ಊರಿನದೆಸೆಯಿಂದ (ಇನಾಗಮ) ಊರದೆಸೆಯಿಂದ (ಯಾವ ಆಗಮವೂ ಇಲ್ಲ)
(iii) ವಧುವಿನದೆಸೆಯಿಂದ (ಇನಾಗಮ)
(iv) ಮಗುವಿನದೆಸೆಯಿಂದ (ಇನಾಗಮ)
ಷಷ್ಠೀ (i) ಗುರುವಿನ (ಇನಾಗಮ)
(ii) ಊರಿನ (ಇನಾಗಮ) ಊರ (ಯಾವ ಆಗಮವೂ ಇಲ್ಲ)
(iii) ವಧುವಿನ (ಇನಾಗಮ)
(iv) ಮಗುವಿನ (ಇನಾಗಮ)
ಸಪ್ತಮೀ (i) ಗುರುವಿನಲ್ಲಿ (ಇನಾಗಮ)
(ii) ಊರಿನಲ್ಲಿ (ಇನಾಗಮ) ಊರಲ್ಲಿ(ಯಾವ ಆಗಮವೂ ಇಲ್ಲ)
(iii) ವಧುವಿನಲ್ಲಿ (ಇನಾಗಮ)
(iv) ಮಗುವಿನಲ್ಲಿ (ಇನಾಗಮ)

 

() ಅರ ಎಂಬಾಗಮ ಬರುವ ವಿಚಾರ

(i) ಉಕಾರಾಂತಗಳಾದ ಹಿರಿದು, ಕಿರಿದು ಮುಂತಾದ ಗುಣವಾಚಕ ಶಬ್ದಗಳು, (ii) ಒಂದು ಎಂಬ ಸಂಖ್ಯಾವಾಚಕ ಪದ (iii) ಅದು, ಇದು ಮುಂತಾದ ಸರ್ವನಾಮ (iv) ಕೊಡುವುದು, ಹೋಗುವುದು ಇತ್ಯಾದಿ ಉದು ಪ್ರತ್ಯಯಾಂತ ಕೃದಂತಗಳಿಗೆ ತೃತೀಯಾ, ಪಂಚಮೀ, ಷಷ್ಠೀ, ಸಪ್ತಮೀ ವಿಭಕ್ತಿಗಳಲ್ಲಿ ಅರ ಎಂಬಾಗಮವು ಬರುವುದು.

ಉದಾಹರಣೆಗೆ:-

(i) ಗುಣವಾಚಕಗಳು ಹಿರಿದು, ಕಿರಿದುಇತ್ಯಾದಿ

ತೃತೀಯಾ ಹಿರಿದು + ಅರ + ಇಂದ = ಹಿರಿದರಿಂದ (ಅರ ಆಗಮ)
ಪಂಚಮೀ ಹಿರಿದು + ಅರ + ದೆಸೆಯಿಂದ = ಹಿರಿದರದೆಸೆಯಿಂದ (ಅರ ಆಗಮ)
ಷಷ್ಠೀ ಹಿರಿದು + ಅರ + = ಹಿರಿದರ (ಅರ ಆಗಮ)
ಸಪ್ತಮೀ ಹಿರಿದು + ಅರ + ಅಲ್ಲಿ = ಹಿರಿದರಲ್ಲಿ (ಅರ ಆಗಮ)
ತೃತೀಯಾ ಕಿರಿದು + ಅರ + ಇಂದ = ಕಿರಿದರಿಂದ (ಅರ ಆಗಮ)
ಪಂಚಮೀ ಕಿರಿದು + ಅರ + ದೆಸೆಯಿಂದ = ಕಿರಿದರದೆಸೆಯಿಂದ (ಅರ ಆಗಮ)
ಷಷ್ಠೀ ಕಿರಿದು + ಅರ + = ಕಿರಿದರ (ಅರ ಆಗಮ)
ಸಪ್ತಮೀ ಕಿರಿದು + ಅರ + ಅಲ್ಲಿ = ಕಿರಿದರಲ್ಲಿ (ಅರ ಆಗಮ)

 

(ii) ಸಂಖ್ಯಾವಾಚಕ ಒಂದು

ತೃತೀಯಾ ಒಂದು + ಅರ + ಇಂದ = ಒಂದರಿಂದ (ಅರ ಆಗಮ)
ಪಂಚಮೀ ಒಂದು + ಅರ + ದೆಸೆಯಿಂದ = ಒಂದರದೆಸೆಯಿಂದ (ಅರ ಆಗಮ)
ಷಷ್ಠೀ ಒಂದು + ಅರ + = ಒಂದರ (ಅರ ಆಗಮ)
ಸಪ್ತಮೀ ಒಂದು + ಅರ + ಅಲ್ಲಿ = ಒಂದರಲ್ಲಿ (ಅರ ಆಗಮ)

 

(iii) ಸರ್ವನಾಮ ಅದು, ಇದುಇತ್ಯಾದಿಗಳು

ತೃತೀಯಾ ಅದು + ಅರ + ಇಂದ = ಅದರಿಂದ (ಅರ ಆಗಮ)
ಪಂಚಮೀ ಅದು + ಅರ + ದೆಸೆಯಿಂದ = ಅದರದೆಸೆಯಿಂದ (ಅರ ಆಗಮ)
ಷಷ್ಠೀ ಅದು + ಅರ + = ಅದರ (ಅರ ಆಗಮ)
ಸಪ್ತಮೀ ಅದು + ಅರ + ಅಲ್ಲಿ = ಅದರಲ್ಲಿ (ಅರ ಆಗಮ)
ತೃತೀಯಾ ಇದು + ಅರ + ಇಂದ = ಇದರಿಂದ (ಅರ ಆಗಮ)
ಪಂಚಮೀ ಇದು + ಅರ + ದೆಸೆಯಿಂದ = ಇದರದೆಸೆಯಿಂದ (ಅರ ಆಗಮ)
ಷಷ್ಠೀ ಇದು + ಅರ + = ಇದರ (ಅರ ಆಗಮ)
ಸಪ್ತಮೀ ಇದು + ಅರ + ಅಲ್ಲಿ = ಇದರಲ್ಲಿ (ಅರ ಆಗಮ)

 

(iv) ಉದು ಪ್ರತ್ಯಯಾಂತ ಕೃದಂತಗಳು ಕೊಡುವುದು, ಹೋಗುವುದುಇತ್ಯಾದಿ

ತೃತೀಯಾ ಕೊಡುವುದು + ಅರ + ಇಂದ = ಕೊಡುವುದರಿಂದ (ಅರ ಆಗಮ)
ಪಂಚಮಿ ಕೊಡುವುದು + ಅರ + ದೆಸೆಯಿಂದ = ಕೊಡುವುದರ
ದೆಸೆಯಿಂದ
(ಅರ ಆಗಮ)
ಷಷ್ಠೀ ಕೊಡುವುದು + ಅರ + = ಕೊಡುವುದರ (ಅರ ಆಗಮ)
ಸಪ್ತಮೀ ಕೊಡುವುದು + ಅರ + ಅಲ್ಲಿ = ಕೊಡುವುದರಲ್ಲಿ (ಅರ ಆಗಮ)
ತೃತೀಯಾ ಹೋಗುವುದು + ಅರ + ಇಂದ = ಹೋಗುವುದರಿಂದ (ಅರ ಆಗಮ)
ಪಂಚಮೀ ಹೋಗುವುದು + ಅರ + ದೆಸೆಯಿಂದ = ಹೋಗುವುದರ (ಅರ ಆಗಮ)
ದೆಸೆಯಿಂದ
ಷಷ್ಠೀ ಹೋಗುವುದು + ಅರ + = ಹೋಗುವುದರ (ಅರ ಆಗಮ)
ಸಪ್ತಮೀ ಹೋಗುವುದು + ಅರ + ಅಲ್ಲಿ = ಹೋಗುವುದರಲ್ಲಿ (ಅರ ಆಗಮ)

 

ಇದುವರೆಗೆ ಪ್ರಕೃತಿಗಳಿಗೆ ವಿಭಕ್ತಿಪ್ರತ್ಯಯಗಳು ಸೇರುವಾಗ ಏಕವಚನದಲ್ಲಿ ಬರುವ ನ ದ ಇನ ಅರ ಎಂಬ ಆಗಮಗಳ ಸ್ಥೂಲಪರಿಚಯ ಮಾಡಿಕೊಂಡಿದ್ದೀರಿ.  ವ ಕಾರಾಗಮವಂತೂ ವಿಭಕ್ತಿಪ್ರತ್ಯಯ ಸೇರುವಲ್ಲಷ್ಟೇ ಅಲ್ಲ.  ಸಂಧಿಯ ನಿಯಮದಂತೆ ಅದು ಬರಬೇಕಾದಲ್ಲೆಲ್ಲ ಬಂದೇ ಬರುತ್ತದೆ.

() ಈಗ ಚತುರ್ಥೀ ಸಪ್ತಮೀ ಸಂಬೋಧನೆ ಮೊದಲಾದ ವಿಭಕ್ತಿಪ್ರತ್ಯಯಗಳನ್ನು ಒಂದಕ್ಕಿಂತ ಹೆಚ್ಚಾಗಿ ಹೇಳಿದೆ. ಎಲ್ಲಿ ಎಲ್ಲಿ ಯಾವ ಯಾವ ವಿಭಕ್ತಿಪ್ರತ್ಯಯ ಬರುತ್ತದೆಂಬುದನ್ನು ತಿಳಿಯೋಣ.

(i) ಚತುರ್ಥಿ ಗೆಇಗೆ  ಕ್ಕೆಅಕ್ಕೆ ವಿಭಕ್ತಿಗಳು.

(ಅ) ಗೆ:- ಹರಿಗೆ, ದೊರೆಗೆ, ಲಕ್ಷ್ಮಿಗೆ, ಕೈಗೆ, ಮೈಗೆ, ವಿಧಿಗೆ, ಅತ್ತೆಗೆ, ತಾಯಿಗೆ, ಮನೆಗೆ.

(ಆ) ಎ, ಐ ಕಾರಾಂತ ಪ್ರಕೃತಿಗಳಿಗೆ ಸಾಮಾನ್ಯವಾಗಿ ಗೆ ಪ್ರತ್ಯಯ ಬರುವುದು.

(ಇ) ಇಗೆ:- ರಾಮನಿಗೆ, ಭೀಮನಿಗೆ, ಕಾಮನಿಗೆ, ದೇವರಿಗೆ, ಬ್ರಾಹ್ಮಣನಿಗೆ, ರಾಮರಿಗೆ, ಭೀಮರಿಗೆ, ಕಾಮರಿಗೆ, ಬ್ರಾಹ್ಮಣರಿಗೆ, ದೇವರಿಗೆ, ಕರುವಿಗೆ, ಹಸುವಿಗೆ, ಅಕ್ಕನಿಗೆ, ಕರುಗಳಿಗೆ, ಹಸುಗಳಿಗೆ, ಅಕ್ಕಂದಿರುಗಳಿಗೆ.

(ಸಾಮಾನ್ಯವಾಗಿ ಅಕಾರಂತ, ಉಕಾರಾಂತ, ಪ್ರಕೃತಿಗಳಿಗೆ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳ ಏಕವಚನ, ಬಹುವಚನಗಳೆರಡರಲ್ಲೂ ಇಗೆ ಎಂಬ ಚತುರ್ಥೀವಿಭಕ್ತಿಪ್ರತ್ಯಯ ಬರುವುದು)

(ಈ) ಕ್ಕೆ:- ನೆಲಕ್ಕೆ, ಹೊಲಕ್ಕೆ, ಕಣಕ್ಕೆ, ತಿಲಕ್ಕೆ, ತೈಲಕ್ಕೆ, ಪುಸ್ತಕಕ್ಕೆ, –  ಇತ್ಯಾದಿ.

(ಸಾಮಾನ್ಯವಾಗಿ ಅಕಾರಾಂತ ನಪುಂಸಕಲಿಂಗಕ್ಕೆ ಕ್ಕೆ ಎಂಬ ವಿಭಕ್ತಿಪ್ರತ್ಯಯವು ಬರುವುದು.)

(ಉ) ಅಕ್ಕೆ:- ಒಂದು+ಅಕ್ಕೆ=ಒಂದಕ್ಕೆ.  ಇದರಂತೆ- ಎರಡಕ್ಕೆ, ಹತ್ತಕ್ಕೆ, ಎಷ್ಟಕ್ಕೆ, ಅಷ್ಟಕ್ಕೆ -ಇತ್ಯಾದಿ.

(ಸಾಮಾನ್ಯವಾಗಿ ಅಕ್ಕೆ ಪ್ರತ್ಯಯವು ಉ ಕಾರಾಂತಗಳಾದ ನಪುಂಸಕಲಿಂಗ ಪ್ರಕೃತಿಗಳ ಮೇಲೆ ಬರುತ್ತದೆಂದು ತಿಳಿಯಬೇಕು.)

 

(ii) ಸಂಬೋಧನೆಯ ಆ, , ಇರಾ, ಈ ಪ್ರತ್ಯಯಗಳು ಎಲ್ಲೆಲ್ಲಿ ಬರುತ್ತವೆಂಬು ದನ್ನು ಗಮನಿಸಿರಿ.

(ಅ) [9]:- ರಾಮಾ, ಅಣ್ಣಾ, ಭೀಮಾ, ಕೌರವಾ, ಅಕ್ಕಾ, ಇತ್ಯಾದಿ ಅಕಾರಾಂತ ಪುಲ್ಲಿಂಗ, ಸ್ತ್ರೀಲಿಂಗ ಪ್ರಕೃತಿಗಳ ಮೇಲೆ ಸಂಬೋಧನೆಯ ಆ ಕಾರವು ಏಕವಚನದಲ್ಲಿ ಮಾತ್ರ  ಬರುವುದೆಂದು ತಿಳಿಯಬೇಕು.

(ಆ) , :– ರಾಮನೇ, ಅಣ್ಣನೇ, ಭೀಮನೇ, ಕೌರವನೇ, ತಾಯಿಯೇ, ಅಜ್ಜಿಯೇ – ಇತ್ಯಾದಿ.  ತಂಗೀ, ತಾಯೀ – ಇಲ್ಲಿ ಈ ಬಂದಿದೆ.

ಅಕಾರಾಂತ ಪುಲ್ಲಿಂಗದಲ್ಲಿ ನಕಾರಾಗಮ ಬಂದಲ್ಲೆಲ್ಲ ಮತ್ತು ಇಕಾರಾಂತ ಸ್ತ್ರೀಲಿಂಗಗಳಲ್ಲಿ, ನಪುಂಸಕಲಿಂಗಗಳಲ್ಲಿ, ಉಕಾರಾಂತ ಪುಲ್ಲಿಂಗದಲ್ಲಿ ಏ೩ ಎಂಬ ಸಂಬೋಧನಾ ವಿಭಕ್ತಿಯು ಸಾಮಾನ್ಯವಾಗಿ ಎಲ್ಲ ಕಡೆಗೂ ಬರುತ್ತದೆ.

(ಇ) ಇರಾ:– ಅಣ್ಣಂದಿರಾ, ತಾಯಂದಿರಾ, ರಾಮರುಗಳಿರಾ, ಮರಗಳಿರಾ, ತಾಯಿಯರುಗಳಿರಾ, ಅಕ್ಕಂದಿರುಗಳಿರಾ, ವನಗಳಿರಾ, ವಧುಗಳಿರಾ, ಗಿಡಗಳಿರಾ, ಕಮಲಗಳಿರಾ, ಕೋಗಿಲೆಗಳಿರಾ, ದೇವರುಗಳಿರಾ-ಇತ್ಯಾದಿ.

(ಬಹುವಚನದಲ್ಲಿ ಸಾಮಾನ್ಯವಾಗಿ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗದ ಎಲ್ಲ ಪ್ರಕೃತಿಗಳ ಮೇಲೂ, ಇರಾ೩ ಪ್ರತ್ಯಯವು ಸೇರುವುದು. ಆಗ ಬಹುವಚನ ಸೂಚಕ ಅರು, ಗಳು, ಅರುಗಳು, ಅಂದಿರು, ಅಂದಿರುಗಳು-ಇತ್ಯಾದಿ ಪ್ರತ್ಯಯಗಳು ಆಗಮಗಳಾಗಿ ಬರುತ್ತವೆ.)

 

(iii) ಸಪ್ತಮೀಯಲ್ಲಿ ಅಲ್ಲಿ, ಅಲಿ, ಒಳು, ಎಂದು ನಾಲ್ಕು ವಿಧವಾದ ವಿಭಕ್ತಿ ಪ್ರತ್ಯಯಗಳನ್ನು ಹೇಳಿರುವೆವಷ್ಟೆ. ಅವು ಎಲ್ಲೆಲ್ಲಿ ಬರುವುವೆಂಬುದನ್ನು ಗಮನಿಸಿರಿ.

(ಅ) ಅಲ್ಲಿ:- ರಾಮನಲ್ಲಿ, ಭೀಮನಲ್ಲಿ, ತಾಯಿಯಲ್ಲಿ, ಅಕ್ಕನಲ್ಲಿ, ಮರದಲ್ಲಿ, ನೆಲದಲ್ಲಿ-ಇತ್ಯಾದಿ.

(ಸಾಮಾನ್ಯವಾಗಿ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗದ ಎಲ್ಲ ಪ್ರಕೃತಿಗಳ ಮೇಲು ಅಲ್ಲಿ ಎಂಬ ವಿಭಕ್ತಿಪ್ರತ್ಯಯವು ಸೇರುವುದು.)

(ಆ) ಅಲಿ:- ರಾಮನಲಿ, ಭೀಮನಲಿ, ಮರದಲಿ, ಹೊಲದಲಿ, ನೆಲದಲಿ, ಕಲ್ಲಿನಲಿ, ಮುಳ್ಳಿನಲಿ-ಇತ್ಯಾದಿ.

(ಸಾಮಾನ್ಯವಾಗಿ ನಡುಗನ್ನಡ ಶೈಲಿಯ ಬರವಣಿಗೆಯಲ್ಲಿ ಅಲಿ ಪ್ರತ್ಯಯದ ಪ್ರಯೋಗ ವಿಶೇಷ.  ಹೊಸಗನ್ನಡದಲ್ಲೂ ಕೆಲವರು ಪ್ರಯೋಗಿಸುತ್ತಾರೆ.  ಇದೂ ಕೂಡ ಸಾಮಾನ್ಯವಾಗಿ ಎಲ್ಲಾ  ಪ್ರಕೃತಿಗಳ ಮೇಲೂ ಬರುತ್ತದೆ.)

(ಇ) ಒಳು:- ರಾಮನೊಳು, ಭೀಮನೊಳು, ಮರದೊಳು, ಕಲ್ಲಿನೊಳು, ಮನೆಯೊಳು, ರಾಮರೊಳು, ಭೀಮರೊಳು, ಮರಗಳೊಳು, ಕಲ್ಲುಗಳೊಳು, ಮನೆಗಳೊಳು, ಅಮ್ಮನೊಳು, ಅಕ್ಕನೊಳು, ಅಮ್ಮಂದಿರೊಳು, ಅಕ್ಕಂದಿರೊಳು-ಹೀಗೆ ಪುಲ್ಲಿಂಗ ಸ್ತ್ರೀಲಿಂಗ, ನಪುಂಸಕಲಿಂಗ ಮೂರರ ಏಕವಚನ, ಬಹುವಚನಗಳಲ್ಲೂ ಒಳು ಸಪ್ತಮೀ ವಿಭಕ್ತಿಯನ್ನು ಬಳಸುವುದುಂಟು.  ಮುಖ್ಯವಾಗಿ ನಡುಗನ್ನಡ ಶೈಲಿಯಲ್ಲಿ ಇದು ವಿಶೇಷವಾಗಿ ಕಂಡುಬರುತ್ತದೆ.  ಹೊಸಗನ್ನಡದಲ್ಲೂ ಬಳಸುತ್ತಾರೆ.

(ಈ) ಎ:- ಮೇಲೆ, ಕೆಳಗೆ, ಒಳಗೆ, ಹೊರಗೆ, ಹಿಂದೆ, ಮುಂದೆ-ಇತ್ಯಾದಿ ದಿಗ್ವಾಚಕಗಳ ಮೇಲೆ ಎ ಎಂಬ ಸಪ್ತಮೀ ವಿಭಕ್ತಿಪ್ರತ್ಯಯವು ಪ್ರಯೋಗಿಸಲ್ಪಡುವುದು.

() ಈಗ, ತಾನು, ನಾನು, ನೀನು, ಏನು ಇತ್ಯಾದಿ ಸರ್ವನಾಮಗಳ ಮೇಲೆ ವಿಭಕ್ತಿಪ್ರತ್ಯಯಗಳು ಸೇರುವಾಗ ಆಗುವ ರೂಪಾಂತರಗಳನ್ನು ನೋಡೋಣ. (ಸರ್ವನಾಮಗಳಿಗೆ ಸಂಬೋಧನಾವಿಭಕ್ತಿ ಪ್ರತ್ಯಯಗಳು ಸೇರುವುದಿಲ್ಲವೆಂಬುದನ್ನು ಜ್ಞಾಪಕದಲ್ಲಿ ಡಬೇಕು.)

() ‘ತಾನು‘ ಸರ್ವನಾಮ ಪ್ರಕೃತಿ

ವಿಭಕ್ತಿ ಏಕವಚನ ಬಹುವಚನ
ಪ್ರಥಮಾವಿಭಕ್ತಿ ತಾನು+ಉ=ತಾನು ತಾನು+ವ+ಉ=ತಾವು
ದ್ವಿತೀಯಾವಿಭಕ್ತಿ ತಾನು+ಅನ್ನು=ತನ್ನನ್ನು ತಾನು+ಅನ್ನು=ತಮ್ಮನ್ನು
ತೃತೀಯಾವಿಭಕ್ತಿ ತಾನು+ಇಂದ=ತನ್ನಿಂದ ತಾನು+ಇಂದ=ತಮ್ಮಿಂದ
ಚತುರ್ಥೀವಿಭಕ್ತಿ ತಾನು+ಗೆ=ತನಗೆ ತಾನು+ಗೆ=ತಮಗೆ
ಪಂಚಮೀವಿಭಕ್ತಿ ತಾನು+ದೆಸೆಯಿಂದ = ತನ್ನದೆಸೆಯಿಂದ ತಾನು+ದೆಸೆಯಿಂದ = ತಮ್ಮದೆಸೆಯಿಂದ
ಷಷ್ಠೀವಿಭಕ್ತಿ ತಾನು+ಅ=ತನ್ನ ತಾನು+ಅ=ತಮ್ಮ
ಸಪ್ತಮೀವಿಭಕ್ತಿ ತಾನು+ಅಲ್ಲಿ=ತನ್ನಲ್ಲಿ ತಾನು+ಅಲ್ಲಿ=ತಮ್ಮಲ್ಲಿ

ಇದರ ಹಾಗೆಯೇ – ‘ನೀನು‘ ಶಬ್ದ

ವಿಭಕ್ತಿ ಏಕವಚನ ಬಹುವಚನ
ಪ್ರಥಮಾವಿಭಕ್ತಿ ನೀನು (ನೀನು+ಉ) ನೀವು
ದ್ವಿತೀಯಾವಿಭಕ್ತಿ ನಿನ್ನನ್ನು ನಿಮ್ಮನ್ನು
ತೃತೀಯಾವಿಭಕ್ತಿ ನಿನ್ನಿಂದ ನಿಮ್ಮಿಂದ
ಚತುರ್ಥೀವಿಭಕ್ತಿ ನಿನಗೆ ನಿಮಗೆ
ಪಂಚಮೀವಿಭಕ್ತಿ ನಿನ್ನ ದೆಸೆಯಿಂದ ನಿಮ್ಮ ದೆಸೆಯಿಂದ
ಷಷ್ಠೀವಿಭಕ್ತಿ ನಿನ್ನ ನಿಮ್ಮ
ಸಪ್ತಮೀವಿಭಕ್ತಿ ನಿನ್ನಲ್ಲಿ ನಿಮ್ಮಲ್ಲಿ

ಇದರ ಹಾಗೆಯೇ ‘ನಾನು’ ಶಬ್ದ

ವಿಭಕ್ತಿ ಏಕವಚನ ಬಹುವಚನ
ವಿಭಕ್ತಿ ಏಕವಚನ ಬಹುವಚನ
ಪ್ರಥಮಾವಿಭಕ್ತಿ ನಾನು ನಾವು
ದ್ವಿತೀಯಾವಿಭಕ್ತಿ ನನ್ನನ್ನು ನಮ್ಮನ್ನು
ತೃತೀಯಾವಿಭಕ್ತಿ ನನ್ನಿಂದ ನಮ್ಮಿಂದ
ಚತುರ್ಥೀವಿಭಕ್ತಿ ನನಗೆ ನಮಗೆ
ಪಂಚಮೀವಿಭಕ್ತಿ ನನ್ನ ದೆಸೆಯಿಂದ ನಮ್ಮ ದೆಸೆಯಿಂದ
ಷಷ್ಠೀವಿಭಕ್ತಿ ನನ್ನ ನಮ್ಮ
ಸಪ್ತಮೀವಿಭಕ್ತಿ ನನ್ನಲ್ಲಿ ನಮ್ಮಲ್ಲಿ

ಇದರ ಹಾಗೆಯೇ ‘ಏನು’ ಶಬ್ದ

ವಿಭಕ್ತಿ ಏಕವಚನ (ಏನು ಶಬ್ದದ ಬಹುವಚನ ರೂಪವಿಲ್ಲ)
ಪ್ರಥಮಾವಿಭಕ್ತಿ ಏನು
ದ್ವಿತೀಯಾವಿಭಕ್ತಿ ಏನನ್ನು
ತೃತೀಯಾವಿಭಕ್ತಿ ಏತರಿಂದ
ಚತುರ್ಥೀವಿಭಕ್ತಿ ಏತಕ್ಕೆ
ಪಂಚಮೀವಿಭಕ್ತಿ ಏತರ ದೆಸೆಯಿಂದ
ಷಷ್ಠೀವಿಭಕ್ತಿ ಏತರ
ಸಪ್ತಮೀವಿಭಕ್ತಿ ಏತರಲ್ಲಿ

ಮೇಲಿನ ತಾನು, ನಾನು, ನೀವು, ಏನು ಶಬ್ದಗಳ ಸಿದ್ಧರೂಪ ನೋಡಿದರೆ-ತಾನು, ನೀನು, ನಾನು ಶಬ್ದಗಳು ಪ್ರಥಮಾವಿಭಕ್ತಿಯನ್ನುಳಿದು ಉಳಿದ ವಿಭಕ್ತಿಪ್ರತ್ಯಯಗಳು ಸೇರುವಾಗ ಕ್ರಮವಾಗಿ ತನ್ನ, ನಿನ್ನ, ನನ್ನ-ಎಂಬ ರೂಪ ಧರಿಸಿ ವಿಭಕ್ತಿಪ್ರತ್ಯಯಗಳನ್ನು ಹೊಂದುತ್ತವೆ.  ಚತುರ್ಥೀವಿಭಕ್ತಿ ಪ್ರತ್ಯಯ ಸೇರುವಾಗ ಮಾತ್ರ ತನ, ನಿನ, ನನ-ರೂಪ ಧರಿಸುತ್ತವೆ.  ಏನು ಎಂಬ ಪ್ರಶ್ನಾರ್ಥಕ ಸರ್ವನಾಮವು ಪ್ರಥಮಾ, ದ್ವಿತೀಯಾ, ಚತುರ್ಥೀ ವಿಭಕ್ತಿಗಳನ್ನುಳಿದು ಉಳಿದ ಕಡೆಗೆ ಏತರ ಎಂದೂ, ದ್ವಿತೀಯೆಯಲ್ಲಿ ಏನು ಎಂದೂ, ಚತುರ್ಥೀಯಲ್ಲಿ ಮಾತ್ರ ಏತ ಎಂದೂ ರೂಪ ಧರಿಸಿ ವಿಭಕ್ತಿಪ್ರತ್ಯಯ ಹೊಂದುತ್ತವೆ.

() ದೊಡ್ಡದು, ಸಣ್ಣದು ಮೊದಲಾದ ಗುಣವಾಚಕಗಳು ವಿಭಕ್ತಿಪ್ರತ್ಯಯಗಳನ್ನು ಹೊಂದುವಾಗ ಆಗುವ ವ್ಯಾಕರಣ ಕ್ರಿಯೆಯನ್ನು ಈ ಕೆಳಗೆ ನೋಡಿರಿ:-

() ದೊಡ್ಡದು ಶಬ್ದ ಪುಲ್ಲಿಂಗದಲ್ಲಿ:-

ವಿಭಕ್ತಿ ಏಕವಚನ ಬಹುವಚನ
ಪ್ರಥಮಾ ದೊಡ್ಡ+ಅವನು+ಉ = ದೊಡ್ಡವನು ದೊಡ್ಡ+ಅವರು+ಉ = ದೊಡ್ಡವರು
ದ್ವಿತೀಯಾ ದೊಡ್ಡ+ಅವನು+ಅನ್ನು=ದೊಡ್ಡವನನ್ನು ದೊಡ್ಡ+ಅವರು+ಅನ್ನು = ದೊಡ್ಡವರನ್ನು
ತೃತೀಯಾ ದೊಡ್ಡ+ಅವನು+ಇಂದ = ದೊಡ್ಡವನಿಂದ ದೊಡ್ಡ+ಅವರು+ಇಂದ = ದೊಡ್ಡವರಿಂದ
ಚತುರ್ಥೀ ದೊಡ್ಡ+ಅವನು+ಇಗೆ = ದೊಡ್ಡವನಿಗೆ ದೊಡ್ಡ+ಅವರು+ಇಗೆ = ದೊಡ್ಡವರಿಗೆ
ಪಂಚಮೀ ದೊಡ್ಡ+ಅವನು+ದೆಸೆಯಿಂದ = ದೊಡ್ಡವನ ದೆಸೆಯಿಂದ ದೊಡ್ಡ+ಅವರು+ದೆಸೆಯಿಂದ = ದೊಡ್ಡವರ ದೆಸೆಯಿಂದ
ಷಷ್ಠೀ ದೊಡ್ಡ+ಅವನು+ಅ=ದೊಡ್ಡವನ ದೊಡ್ಡ+ಅವರು+ಅ=ದೊಡ್ಡವರ
ಸಪ್ತಮೀ ದೊಡ್ಡ+ಅವನು+ಅಲ್ಲಿ = ದೊಡ್ಡವನಲ್ಲಿ ದೊಡ್ಡ+ಅವರು+ಅಲ್ಲಿ = ದೊಡ್ಡವರಲ್ಲಿ
ಸಂಬೋಧನಾ ದೊಡ್ಡ+ಅವನು+ಏ=ದೊಡ್ಡವನೇ ದೊಡ್ಡ+ಅವರು+ಏ=ದೊಡ್ಡವರೇ

 

() ಸಣ್ಣದು ಶಬ್ದ ಪುಲ್ಲಿಂಗದಲ್ಲಿ:-

ವಿಭಕ್ತಿ ಏಕವಚನ ಬಹುವಚನ
ಪ್ರಥಮಾ ಸಣ್ಣ+ಅವನು+ಉ=ಸಣ್ಣವನು ಸಣ್ಣ+ಅವರು+ಉ=ಸಣ್ಣವರು
ದ್ವಿತೀಯಾ ಸಣ್ಣ+ಅವನು+ಅನ್ನು = ಸಣ್ಣವನನ್ನು ಸಣ್ಣ+ಅವರು+ಅನ್ನು = ಸಣ್ಣವರನ್ನು
ತೃತೀಯಾ ಸಣ್ಣ+ಅವನು+ಇಂದ = ಸಣ್ಣವನಿಂದ ಸಣ್ಣ+ಅವರು+ಇಂದ = ಸಣ್ಣವರಿಂದ
ಚತುರ್ಥೀ ಸಣ್ಣ+ಅವನು+ಇಗೆ=ಸಣ್ಣವನಿಗೆ ಸಣ್ಣ+ಅವರು+ಇಗೆ=ಸಣ್ಣವರಿಗೆ
ಪಂಚಮೀ ಸಣ್ಣ+ಅವನು+ದೆಸೆಯಿಂದ = ಸಣ್ಣವನ ದೆಸೆಯಿಂದ ಸಣ್ಣ+ಅವರು+ದೆಸೆಯಿಂದ = ಸಣ್ಣವರ ದೆಸೆಯಿಂದ
ಷಷ್ಠೀ ಸಣ್ಣ+ಅವನು+ಅ=ಸಣ್ಣವನ ಸಣ್ಣ+ಅವರು+ಅ=ಸಣ್ಣವರ
ಸಪ್ತಮೀ ಸಣ್ಣ+ಅವನು+ಅಲ್ಲಿ=ಸಣ್ಣವನಲ್ಲಿ ಸಣ್ಣ+ಅವರು+ಅಲ್ಲಿ=ಸಣ್ಣವರಲ್ಲಿ
ಸಂಬೋಧನಾ ಸಣ್ಣ+ಅವನು+ಏ=ಸಣ್ಣವನೇ ಸಣ್ಣ+ಅವರು+ಏ=ಸಣ್ಣವರೇ

ಇದರ ಹಾಗೆಯೇ ಚಿಕ್ಕ ಶಬ್ದ ಪುಲ್ಲಿಂಗದಲ್ಲಿ:-

ವಿಭಕ್ತಿ ಏಕವಚನ ಬಹುವಚನ
ಪ್ರಥಮಾ ಚಿಕ್ಕ+ಅವನು+ಉ=ಚಿಕ್ಕವನು ಚಿಕ್ಕ+ಅವರು+ಉ=ಚಿಕ್ಕವರು
ದ್ವಿತೀಯಾ ಚಿಕ್ಕ+ಅವನು+ಅನ್ನು = ಚಿಕ್ಕವನನ್ನು ಚಿಕ್ಕ+ಅವರು+ಅನ್ನು=ಚಿಕ್ಕವರನ್ನು
ತೃತೀಯಾ ಚಿಕ್ಕ+ಅವನು+ಇಂದ = ಚಿಕ್ಕವನಿಂದ ಚಿಕ್ಕ+ಅವರು+ಇಂದ = ಚಿಕ್ಕವರಿಂದ
ಚತುರ್ಥೀ ಚಿಕ್ಕ+ಅವನು+ಇಗೆ=ಚಿಕ್ಕವನಿಗೆ ಚಿಕ್ಕ+ಅವರು+ಇಗೆ=ಚಿಕ್ಕವರಿಗೆ
ಪಂಚಮೀ ಚಿಕ್ಕ+ಅವನು+ದೆಸೆಯಿಂದ = ಚಿಕ್ಕವನ ದೆಸೆಯಿಂದ ಚಿಕ್ಕ+ಅವರು+ದೆಸೆಯಿಂದ = ಚಿಕ್ಕವರ ದೆಸೆಯಿಂದ
ಷಷ್ಠೀ ಚಿಕ್ಕ+ಅವನು+ಅ=ಚಿಕ್ಕವನ ಚಿಕ್ಕ+ಅವರು+ಅ=ಚಿಕ್ಕವರ
ಸಪ್ತಮೀ ಚಿಕ್ಕ+ಅವನು+ಅಲ್ಲಿ=ಚಿಕ್ಕವನಲ್ಲಿ ಚಿಕ್ಕ+ಅವರು+ಅಲ್ಲಿ=ಚಿಕ್ಕವರಲ್ಲಿ
ಸಂಬೋಧನಾ ಚಿಕ್ಕ+ಅವನು+ಏ=ಚಿಕ್ಕವನೇ ಚಿಕ್ಕ+ಅವರು+ಏ=ಚಿಕ್ಕವರೇ

ಮೇಲಿನ ದೊಡ್ಡದು, ಸಣ್ಣದು, ಚಿಕ್ಕದು ಶಬ್ದಗಳು ಪುಲ್ಲಿಂಗದಲ್ಲಿ ದೊಡ್ಡ, ಸಣ್ಣ, ಚಿಕ್ಕ, ಎಂದಾಗಿ, ಏಕವಚನದಲ್ಲಿ ಅವನು ಎಂಬುದೂ, ಬಹುವಚನದಲ್ಲಿ ಅವರು ಎಂಬುದೂ ಪ್ರಕೃತಿಗೂ ಪ್ರತ್ಯಯಕ್ಕೂ ಮಧ್ಯದಲ್ಲಿ ಬರುತ್ತವೆ. ಪಂಚಮೀಯಲ್ಲಿ ಅವನು ಎಂಬುದು ಅವನ ಎಂದೂ, ಅವರು ಎಂಬುದು ಅವರ ಎಂದೂ ಉಳಿಯುವುದು.

 

() ಇವೇ ದೊಡ್ಡದು, ಸಣ್ಣದು, ಚಿಕ್ಕದು ಶಬ್ದಗಳು ಸ್ತ್ರೀಲಿಂಗದಲ್ಲಿ ಹೇಗಾಗುತ್ತವೆಂಬುದನ್ನು ಕೆಳಗೆ ನೋಡಿರಿ:-

() ದೊಡ್ಡದು ಶಬ್ದ ಸ್ತ್ರೀಲಿಂಗದಲ್ಲಿ:-

ವಿಭಕ್ತಿ ಏಕವಚನ ಬಹುವಚನ
ಪ್ರಥಮಾ ದೊಡ್ಡ+ಅವಳು+ಉ = ದೊಡ್ಡವಳು ದೊಡ್ಡ+ಅವರು+ಉ = ದೊಡ್ಡವರು
ದ್ವಿತೀಯಾ ದೊಡ್ಡ+ಅವಳು+ಅನ್ನು = ದೊಡ್ಡವಳನ್ನು ದೊಡ್ಡ+ಅವರು+ಅನ್ನು = ದೊಡ್ಡವರನ್ನು
ತೃತೀಯಾ ದೊಡ್ಡ+ಅವಳು+ಇಂದ = ದೊಡ್ಡವಳಿಂದ ದೊಡ್ಡ+ಅವರು+ಇಂದ = ದೊಡ್ಡವರಿಂದ
ಚತುರ್ಥೀ ದೊಡ್ಡ+ಅವಳು+ಗೆ = ದೊಡ್ಡವಳಿಗೆ ದೊಡ್ಡ+ಅವರು+ಇಗೆ = ದೊಡ್ಡವರಿಗೆ
ಪಂಚಮೀ ದೊಡ್ಡ+ಅವಳು+ ದೆಸೆಯಿಂದ = ದೊಡ್ಡವಳ                         ದೆಸೆಯಿಂದ ದೊಡ್ಡ+ಅವರು+ದೆಸೆಯಿಂದ = ದೊಡ್ಡವರ                        ದೆಸೆಯಿಂದ
ಷಷ್ಠೀ ದೊಡ್ಡ+ಅವಳು+ಅ = ದೊಡ್ಡವಳ ದೊಡ್ಡ+ಅವರು+ಅ = ದೊಡ್ಡವರ
ಸಪ್ತಮೀ ದೊಡ್ಡ+ಅವಳು+ಅಲ್ಲಿ = ದೊಡ್ಡವಳಲ್ಲಿ ದೊಡ್ಡ+ಅವರು+ಅಲ್ಲಿ = ದೊಡ್ಡವರಲ್ಲಿ
ಸಂಬೋಧನಾ ದೊಡ್ಡ+ಅವಳು+ಏ = ದೊಡ್ಡವಳೇ ದೊಡ್ಡ+ಅವರು+ಏ = ದೊಡ್ಡವರೇ

 

() ಇದರ ಹಾಗೆಯೇ ಸಣ್ಣದು ಶಬ್ದ ಸ್ತ್ರೀಲಿಂಗದಲ್ಲಿ

ವಿಭಕ್ತಿ ಏಕವಚನ ಬಹುವಚನ
ಪ್ರಥಮಾವಿಭಕ್ತಿ ಸಣ್ಣವಳು ಸಣ್ಣವರು
ದ್ವಿತೀಯಾವಿಭಕ್ತಿ ಸಣ್ಣವಳನ್ನು ಸಣ್ಣವರನ್ನು
ತೃತೀಯಾವಿಭಕ್ತಿ ಸಣ್ಣವಳಿಂದ ಸಣ್ಣವರಿಂದ
ಚತುರ್ಥೀವಿಭಕ್ತಿ ಸಣ್ಣವಳಿಗೆ ಸಣ್ಣವರಿಗೆ
ಪಂಚಮೀವಿಭಕ್ತಿ ಸಣ್ಣವಳ ದೆಸೆಯಿಂದ ಸಣ್ಣವರ ದೆಸೆಯಿಂದ
ಷಷ್ಠೀವಿಭಕ್ತಿ ಸಣ್ಣವಳ ಸಣ್ಣವರ
ಸಪ್ತಮೀವಿಭಕ್ತಿ ಸಣ್ಣವಳಲ್ಲಿ ಸಣ್ಣವರಲ್ಲಿ
ಸಂಬೋಧನಾ ಸಣ್ಣವಳೇ ಸಣ್ಣವರೇ

() ಚಿಕ್ಕದು ಶಬ್ದ ಸ್ತ್ರೀಲಿಂಗದಲ್ಲಿ (ಮೇಲಿನವುಗಳ ಹಾಗೆಯೇ)

ವಿಭಕ್ತಿ ಏಕವಚನ ಬಹುವಚನ
ಪ್ರಥಮಾವಿಭಕ್ತಿ ಚಿಕ್ಕವಳು ಚಿಕ್ಕವರು
ದ್ವಿತೀಯಾವಿಭಕ್ತಿ ಚಿಕ್ಕವಳನ್ನು ಚಿಕ್ಕವರನ್ನು
ತೃತೀಯಾವಿಭಕ್ತಿ ಚಿಕ್ಕವಳಿಂದ ಚಿಕ್ಕವರಿಂದ
ಚತುರ್ಥೀವಿಭಕ್ತಿ ಚಿಕ್ಕವಳಿಗೆ ಚಿಕ್ಕವರಿಗೆ
ಪಂಚಮೀವಿಭಕ್ತಿ ಚಿಕ್ಕವಳ ದೆಸೆಯಿಂದ ಚಿಕ್ಕವರ ದೆಸೆಯಿಂದ
ಷಷ್ಠೀವಿಭಕ್ತಿ ಚಿಕ್ಕವಳ ಚಿಕ್ಕವರ
ಸಪ್ತಮೀವಿಭಕ್ತಿ ಚಿಕ್ಕವಳಲ್ಲಿ ಚಿಕ್ಕವರಲ್ಲಿ
ಸಂಬೋಧನಾ ಚಿಕ್ಕವಳೇ ಚಿಕ್ಕವರೇ

ಮೇಲಿನ ಈ ಮೂರು ದೊಡ್ಡದು, ಸಣ್ಣದು, ಚಿಕ್ಕದು ಶಬ್ದಗಳ ಸ್ತ್ರೀಲಿಂಗದ ಉದಾಹರಣೆಗಳನ್ನು ನೋಡಿದರೆ, ಕ್ರಮವಾಗಿ ಇವು ದೊಡ್ಡ, ಚಿಕ್ಕ, ಸಣ್ಣ-ಎಂಬ ರೂಪಧರಿಸಿ ವಿಭಕ್ತಿಪ್ರತ್ಯಯ ಹೊಂದುವಾಗ ಅವಳು ಎಂಬುದು ಏಕವಚನದಲ್ಲೂ, ಅವರು ಎಂಬುದು ಬಹುವಚನದಲ್ಲೂ ಪ್ರಕೃತಿಗೂ ಪ್ರತ್ಯಯಕ್ಕೂ ಮಧ್ಯದಲ್ಲಿ ಆಗಮಗಳಾಗಿ ಬರುವುವು.  ಪಂಚಮೀವಿಭಕ್ತಿಪ್ರತ್ಯಯ ಹತ್ತುವಾಗ ಅವಳು ಎಂಬುದು ಅವಳ ಎಂದೂ, ಅವರು ಎಂಬುದು ಅವರ ಎಂದೂ ಉಳಿಯುವುವು.

 

(೧೦) ನಪುಂಸಕಲಿಂಗದಲ್ಲಿ ಈ ದೊಡ್ಡದು, ಸಣ್ಣದು, ಚಿಕ್ಕದು ಶಬ್ದಗಳು ಹೇಗಾಗುತ್ತವೆ ನೋಡಿರಿ:-

() ದೊಡ್ಡದು ಶಬ್ದ ನಪುಂಸಕಲಿಂಗದಲ್ಲಿ

ವಿಭಕ್ತಿ ಏಕವಚನ ಬಹುವಚನ
ಪ್ರಥಮಾವಿಭಕ್ತಿ ದೊಡ್ಡದು ದೊಡ್ಡವು
ದ್ವಿತೀಯಾವಿಭಕ್ತಿ ದೊಡ್ಡದನ್ನು ದೊಡ್ಡವನ್ನು
ತೃತೀಯಾವಿಭಕ್ತಿ ದೊಡ್ಡದರಿಂದ ದೊಡ್ಡವುಗಳಿಂದ
ಚತುರ್ಥೀವಿಭಕ್ತಿ ದೊಡ್ಡದಕ್ಕೆ ದೊಡ್ಡವುಗಳಿಗೆ
ಪಂಚಮೀವಿಭಕ್ತಿ ದೊಡ್ಡದರ ದೆಸೆಯಿಂದ ದೊಡ್ಡವುಗಳ ದೆಸೆಯಿಂದ
ಷಷ್ಠೀವಿಭಕ್ತಿ ದೊಡ್ಡದರ ದೊಡ್ಡವುಗಳ
ಸಪ್ತಮೀವಿಭಕ್ತಿ ದೊಡ್ಡದರಲ್ಲಿ ದೊಡ್ಡವುಗಳಲ್ಲಿ
ಸಂಬೋಧನಾ ದೊಡ್ಡದೇ ದೊಡ್ಡವುಗಳೇ

 

() ಸಣ್ಣದು, ಚಿಕ್ಕದು ಶಬ್ದಗಳು ನಪುಂಸಕಲಿಂಗದಲ್ಲಿ

ವಿಭಕ್ತಿ ಏಕವಚನ ಬಹುವಚನ ಏಕವಚನ ಬಹುವಚನ
ಪ್ರಥಮಾವಿಭಕ್ತಿ ಸಣ್ಣದು ಸಣ್ಣವು ಚಿಕ್ಕದು ಚಿಕ್ಕವು
ದ್ವಿತೀಯಾವಿಭಕ್ತಿ ಸಣ್ಣದನ್ನು ಸಣ್ಣವನ್ನು ಚಿಕ್ಕದನ್ನು ಚಿಕ್ಕವುಗಳನ್ನು
ತೃತೀಯಾವಿಭಕ್ತಿ ಸಣ್ಣದರಿಂದ ಸಣ್ಣವುಗಳಿಂದ ಚಿಕ್ಕದರಿಂದ ಚಿಕ್ಕವುಗಳಿಂದ
ಚತುರ್ಥೀವಿಭಕ್ತಿ ಸಣ್ಣದಕ್ಕೆ ಸಣ್ಣವುಗಳಿಗೆ ಚಿಕ್ಕದಕ್ಕೆ ಚಿಕ್ಕವುಗಳಿಗೆ
ಪಂಚಮೀವಿಭಕ್ತಿ ಸಣ್ಣದರ ದೆಸೆಯಿಂದ ಸಣ್ಣವುಗಳ ದೆಸೆಯಿಂದ ಚಿಕ್ಕದರ ದೆಸೆಯಿಂದ ಚಿಕ್ಕವುಗಳ ದೆಸೆಯಿಂದ
ಷಷ್ಠೀವಿಭಕ್ತಿ ಸಣ್ಣದರ ಸಣ್ಣವುಗಳ ಚಿಕ್ಕದರ ಚಿಕ್ಕವುಗಳ
ಸಪ್ತಮೀವಿಭಕ್ತಿ ಸಣ್ಣದರಲ್ಲಿ ಸಣ್ಣವುಗಳಲ್ಲಿ ಚಿಕ್ಕದರಲ್ಲಿ ಚಿಕ್ಕವುಗಳಲ್ಲಿ
ಸಂಬೋಧನಾ ಸಣ್ಣದೇ ಸಣ್ಣವುಗಳೇ ಚಿಕ್ಕದೇ ಚಿಕ್ಕವುಗಳೇ

ಮೇಲೆ ವಿವರಿಸಿದಂತೆ ನಪುಂಸಕಲಿಂಗದಲ್ಲಿ ಈ ಮೂರು ಗುಣವಾಚಕ ಶಬ್ದಗಳು ಎಲ್ಲ ವಿಭಕ್ತಿಗಳ ಏಕವಚನದಲ್ಲಿ ಇದ್ದ ಹಾಗೆಯೇ ಇದ್ದು, ತೃತೀಯಾ, ಪಂಚಮೀ, ಷಷ್ಠೀ, ಸಪ್ತಮೀ ವಿಭಕ್ತಿಗಳಲ್ಲಿ ಅರ ಎಂಬ ಆಗಮ ವನ್ನು ಹೊಂದಿ ವಿಭಕ್ತಿಪ್ರತ್ಯಯಗಳನ್ನು ಧರಿಸಿರುತ್ತವೆ.  ಬಹುವಚನದಲ್ಲಿ ಎಲ್ಲ ಕಡೆಗೂ, ದೊಡ್ಡ, ಸಣ್ಣ, ಚಿಕ್ಕ ರೂಪ ಧರಿಸಿ ಪ್ರಥಮೆಯಲ್ಲಿ ಅವು ಎಂಬಾಗಮವನ್ನೂ, ಉಳಿದ ಎಲ್ಲ ಕಡೆಗೂ ಅವುಗಳು ಎಂಬಾಗಮವನ್ನೂ ಧರಿಸಿ ವಿಭಕ್ತಿ ಪ್ರತ್ಯಯಗಳನ್ನು ಧರಿಸುತ್ತವೆ.

ಮೂಡಲು, ತೆಂಕಲು, ಪಡುವಲು, ಬಡಗು, ಮುಂದು, ಹಿಂದು, ನಡುವೆ, ಅತ್ತ, ಇತ್ತ, ಎತ್ತ ಮುಂತಾದ ದಿಗ್ವಾಚಕ ಶಬ್ದಗಳಿಗೆ ಅಣ ಎಂಬುದು ಆಗಮವಾಗಿ ಬರುವುದು.

ಉದಾಹರಣೆಗೆ:- ಮೂಡಣ, ಪಡುವಣ, ತೆಂಕಣ, ಬಡಗಣ, ನಡುವಣ, ಅತ್ತಣ, ಇತ್ತಣ, ಎತ್ತಣ.  ಹೀಗೆ ಅಣ ಆಗಮವು ಬಂದನಂತರ ವಿಭಕ್ತಿಪ್ರತ್ಯಯಗಳು ಸೇರುವುವು.

 

(೧೧) ಈಗ ಮುಖ್ಯವಾದ ಕೆಲವು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳಲ್ಲಿನ ಶಬ್ದಗಳ ಸಿದ್ಧರೂಪಗಳನ್ನು ಏಕವಚನ ಬಹುವಚನಗಳೆರಡರಲ್ಲೂ ನೋಡಿರಿ.

() ಅಕಾರಾಂತ ಪುಲ್ಲಿಂಗ ಹುಡುಗ ಶಬ್ದ () ಅಕಾರಾಂತ ಪುಲ್ಲಿಂಗ ಮನುಷ್ಯ ಶಬ್ದ

 

ವಿಭಕ್ತಿ ಏಕವಚನ ಬಹುವಚನ ಏಕವಚನ ಬಹುವಚನ
ಪ್ರಥಮಾವಿಭಕ್ತಿ ಹುಡುಗ(ನು) ಹುಡುಗರು ಮನುಷ್ಯ(ನು) ಮನುಷ್ಯರು
ದ್ವಿತೀಯಾವಿಭಕ್ತಿ ಹುಡುಗನನ್ನು ಹುಡುಗರನ್ನು ಮನುಷ್ಯನನ್ನು ಮನುಷ್ಯರನ್ನು
ತೃತೀಯಾವಿಭಕ್ತಿ ಹುಡುಗನಿಂದ ಹುಡುಗರಿಂದ ಮನುಷ್ಯನಿಂದ ಮನುಷ್ಯರಿಂದ
ಚತುರ್ಥೀವಿಭಕ್ತಿ ಹುಡುಗನಿಗೆ ಹುಡುಗರಿಗೆ ಮನುಷ್ಯನಿಗೆ ಮನುಷ್ಯರಿಗೆ
ಪಂಚಮೀವಿಭಕ್ತಿ ಹುಡುಗನ ದೆಸೆಯಿಂದ ಹುಡುಗರ  ದೆಸೆಯಿಂದ ಮನುಷ್ಯನ  ದೆಸೆಯಿಂದ ಮನುಷ್ಯರ ದೆಸೆಯಿಂದ
ಷಷ್ಠೀವಿಭಕ್ತಿ ಹುಡುಗನ ಹುಡುಗರ ಮನುಷ್ಯನ ಮನುಷ್ಯರ
ಸಪ್ತಮೀವಿಭಕ್ತಿ ಹುಡುಗನಲ್ಲಿ ಹುಡುಗರಲ್ಲಿ ಮನುಷ್ಯನಲ್ಲಿ ಮನುಷ್ಯರಲ್ಲಿ
ಸಂಬೋಧನಾ ಹುಡುಗನೇ ಹುಡುಗಾ ಹುಡುಗರಿರಾ ಹುಡುಗರುಗಳಿರಾ ಮನುಷ್ಯನೇ ಮನುಷ್ಯಾ ಮನುಷ್ಯರೇ ಮನುಷ್ಯರುಗಳಿರಾ

ಇದರ ಹಾಗೆಯೇ – ಗಾಣಿಗ, ಒಕ್ಕಲಿಗ, ಮೋಸಗಾರ, ಶಂಕರ, ರಾಮ – ಮುಂತಾದ ಶಬ್ದಗಳನ್ನು ಹೇಳಬಹುದು.

() ಇಕಾರಾಂತ ಪುಲ್ಲಿಂಗ ಕವಿ ಶಬ್ದ () ಇಕಾರಾಂತ ಪುಲ್ಲಿಂಗ ಹರಿ ಶಬ್ದ

ವಿಭಕ್ತಿ ಏಕವಚನ ಬಹುವಚನ ಏಕವಚನ ಬಹುವಚನ
ಪ್ರಥಮಾವಿಭಕ್ತಿ ಕವಿ (ಯು) ಕವಿಗಳು ಹರಿ(ಯು) ಹರಿಗಳು
ದ್ವಿತೀಯಾವಿಭಕ್ತಿ ಕವಿಯನ್ನು ಕವಿಗಳನ್ನು ಹರಿಯನ್ನು ಹರಿಗಳನ್ನು
ತೃತೀಯಾವಿಭಕ್ತಿ ಕವಿಯಿಂದ ಕವಿಗಳಿಂದ ಹರಿಯಿಂದ ಹರಿಗಳಿಂದ
ಚತುರ್ಥೀವಿಭಕ್ತಿ ಕವಿಗೆ ಕವಿಗಳಿಗೆ ಹರಿಗೆ ಹರಿಗಳಿಗೆ
ಪಂಚಮೀವಿಭಕ್ತಿ ಕವಿಯ  ದೆಸೆಯಿಂದ ಕವಿಗಳ  ದೆಸೆಯಿಂದ ಹರಿಯ ದೆಸೆಯಿಂದ ಹರಿಗಳ ದೆಸೆಯಿಂದ
ಷಷ್ಠೀವಿಭಕ್ತಿ ಕವಿಯ ಕವಿಗಳ ಹರಿಯ ಹರಿಗಳ
ಸಪ್ತಮೀವಿಭಕ್ತಿ ಕವಿಯಲ್ಲಿ ಕವಿಗಳಲ್ಲಿ ಹರಿಯಲ್ಲಿ ಹರಿಗಳಲ್ಲಿ
ಸಂಬೋಧನಾ ಕವಿಯೇ ಕವಿಗಳೇ ಕವಿಗಳಿರಾ ಹರಿಯೇ ಹರಿಗಳೇ      ಹರಿಗಳಿರಾ

 

() ಉಕಾರಾಂತ ಪುಲ್ಲಿಂಗ ಗುರು ಶಬ್ದ () ಉಕಾರಾಂತ ಪುಲ್ಲಿಂಗ ಮನು ಶಬ್ದ

ವಿಭಕ್ತಿ ಏಕವಚನ ಬಹುವಚನ ಏಕವಚನ ಬಹುವಚನ
ಪ್ರಥಮಾವಿಭಕ್ತಿ ಗುರು (ವು) ಗುರುಗಳು ಮನು (ವು) ಮನುಗಳು
ದ್ವಿತೀಯಾವಿಭಕ್ತಿ ಗುರುವನ್ನು ಗುರುಗಳನ್ನು ಮನುವನ್ನು ಮನುಗಳನ್ನು
ತೃತೀಯಾವಿಭಕ್ತಿ ಗುರುವಿಂದ ಗರುವಿನಿಂದ ಗುರುಗಳಿಂದ ಮನುವಿನಿಂದ  ಮನುವಿಂದ ಮನುಗಳಿಂದ
ಚತುರ್ಥೀವಿಭಕ್ತಿ ಗುರುವಿಗೆ ಗುರುಗಳಿಗೆ ಮನುವಿಗೆ ಮನುಗಳಿಗೆ
ಪಂಚಮೀವಿಭಕ್ತಿ ಗುರುವಿನ ದೆಸೆಯಿಂದ ಗುರುಗಳ ದೆಸೆಯಿಂದ ಮನುವಿನ  ದೆಸೆಯಿಂದ ಮನುಗಳ  ದೆಸೆಯಿಂದ
ಷಷ್ಠೀವಿಭಕ್ತಿ ಗುರುವಿನ ಗುರುಗಳ ಮನುವಿನ ಮನುಗಳ
ಸಪ್ತಮೀವಿಭಕ್ತಿ ಗುರುವಿನಲ್ಲಿ ಗುರುಗಳಲ್ಲಿ ಮನುವಿನಲ್ಲಿ ಮನುಗಳಲ್ಲಿ
ಸಂಬೋಧನಾ ಗರುವೇ ಗುರುಗಳೇ ಗುರುಗಳಿರಾ ಮನುವೇ ಮನುಗಳೇ ಮನುಗಳಿರಾ

 

() ಋಕಾರಾಂತ ಪುಲ್ಲಿಂಗ ‘ಪಿತೃ’ ಶಬ್ದ () ಋಕಾರಾಂತ ಪುಲ್ಲಿಂಗ ‘ಭ್ರಾತೃ’ ಶಬ್ದ

ವಿಭಕ್ತಿ ಏಕವಚನ ಬಹುವಚನ ಏಕವಚನ ಬಹುವಚನ
ಪ್ರಥಮಾವಿಭಕ್ತಿ ಪಿತೃ (ವು) ಪಿತೃಗಳು ಭ್ರಾತೃ (ವು) ಭ್ರಾತೃಗಳು
ದ್ವಿತೀಯಾವಿಭಕ್ತಿ ಪಿತೃವನ್ನು ಪಿತೃಗಳನ್ನು ಭ್ರಾತೃವನ್ನು ಭ್ರಾತೃಗಳನ್ನು
ತೃತೀಯಾವಿಭಕ್ತಿ ಪಿತೃವಿಂದ ಪಿತೃವಿನಿಂದ ಪಿತೃಗಳಿಂದ ಭ್ರಾತೃವಿನಿಂದ ಭ್ರಾತೃವಿಂದ ಭ್ರಾತೃಗಳಿಂದ
ಚತುರ್ಥೀವಿಭಕ್ತಿ ಪಿತೃವಿಗೆ ಪಿತೃಗಳಿಗೆ ಭ್ರಾತೃವಿಗೆ ಭ್ರಾತೃಗಳಿಗೆ
ಪಂಚಮೀವಿಭಕ್ತಿ ಪಿತೃವಿನ ದೆಸೆಯಿಂದ ಪಿತೃಗಳ ದೆಸೆಯಿಂದ ಭ್ರಾತೃವಿನ  ದೆಸೆಯಿಂದ ಭ್ರಾತೃಗಳ  ದೆಸೆಯಿಂದ
ಷಷ್ಠೀವಿಭಕ್ತಿ ಪಿತೃವಿನ ಪಿತೃಗಳ ಭ್ರಾತೃವಿನ ಭ್ರಾತೃಗಳ
ಸಪ್ತಮೀವಿಭಕ್ತಿ ಪಿತೃವಿನಲ್ಲಿ ಪಿತೃಗಳಲ್ಲಿ ಭ್ರಾತೃವಿನಲ್ಲಿ ಭ್ರಾತೃಗಳಲ್ಲಿ
ಸಂಬೋಧನಾ ಪಿತೃವೇ ಪಿತೃಗಳೇ ಪಿತೃಗಳಿರಾ ಭ್ರಾತೃವೇ ಭ್ರಾತೃಗಳೇ ಭ್ರಾತೃಗಳಿರಾ

 

ಸ್ತ್ರೀಲಿಂಗ ಶಬ್ದಗಳು

() ಅಕಾರಾಂತ ಸ್ತ್ರೀಲಿಂಗ ಅಕ್ಕ ಶಬ್ದ () ಅಕಾರಾಂತ ಸ್ತ್ರೀಲಿಂಗ ಅಮ್ಮ ಶಬ್ದ

ವಿಭಕ್ತಿ ಏಕವಚನ ಬಹುವಚನ ಏಕವಚನ ಬಹುವಚನ
ಪ್ರಥಮಾವಿಭಕ್ತಿ ಅಕ್ಕ (ನು) ಅಕ್ಕಂದಿರು ಅಮ್ಮ (ನು) ಅಮ್ಮಂದಿರು
ದ್ವಿತೀಯಾವಿಭಕ್ತಿ ಅಕ್ಕನನ್ನು ಅಕ್ಕಂದಿರನ್ನು ಅಮ್ಮನನ್ನು ಅಮ್ಮಂದಿರನ್ನು
ತೃತೀಯಾವಿಭಕ್ತಿ ಅಕ್ಕನಿಂದ ಅಕ್ಕಂದಿರಿಂದ ಅಮ್ಮನಿಂದ ಅಮ್ಮಂದಿರಿಂದ
ಚತುರ್ಥೀವಿಭಕ್ತಿ ಅಕ್ಕನಿಗೆ ಅಕ್ಕಂದಿರಿಗೆ ಅಮ್ಮನಿಗೆ ಅಮ್ಮಂದಿರಿಗೆ
ಪಂಚಮೀವಿಭಕ್ತಿ ಅಕ್ಕನ ದೆಸೆಯಿಂದ ಅಕ್ಕಂದಿರ ದೆಸೆಯಿಂದ ಅಮ್ಮನ ದೆಸೆಯಿಂದ ಅಮ್ಮಂದಿರ ದೆಸೆಯಿಂದ
ಷಷ್ಠೀವಿಭಕ್ತಿ ಅಕ್ಕನ ಅಕ್ಕಂದಿರ ಅಮ್ಮನ ಅಮ್ಮಂದಿರ
ಸಪ್ತಮೀವಿಭಕ್ತಿ ಅಕ್ಕನಲ್ಲಿ ಅಕ್ಕಂದಿರಲ್ಲಿ ಅಮ್ಮನಲ್ಲಿ ಅಮ್ಮಂದಿರಲ್ಲಿ
ಸಂಬೋಧನಾ ಅಕ್ಕನೇ ಅಕ್ಕಾ ಅಕ್ಕಂದಿರಾ ಅಕ್ಕಗಳಿರಾ ಅಮ್ಮಾ ಅಮ್ಮಂದಿರಾ ಅಮ್ಮಂದಿರುಗಳಿರಾ

 

() ಇಕಾರಾಂತ ಸ್ತ್ರೀಲಿಂಗ ಅಜ್ಜಿ ಶಬ್ದ () ಈಕಾರಾಂತ ಸ್ತ್ರೀಲಿಂಗ ಸ್ತ್ರೀ ಶಬ್ದ

ವಿಭಕ್ತಿ ಏಕವಚನ ಬಹುವಚನ ಏಕವಚನ ಬಹುವಚನ
ಪ್ರಥಮಾವಿಭಕ್ತಿ ಅಜ್ಜಿ (ಯು) ಅಜ್ಜಿಯರು ಸ್ತ್ರೀ (ಯು) ಸ್ತ್ರೀಯರು
ದ್ವಿತೀಯಾವಿಭಕ್ತಿ ಅಜ್ಜಿಯನ್ನು ಅಜ್ಜಿಯರನ್ನು ಸ್ತ್ರೀಯನ್ನು ಸ್ತ್ರೀಯರನ್ನು
ತೃತೀಯಾವಿಭಕ್ತಿ ಅಜ್ಜಿಯಿಂದ ಅಜ್ಜಿಯರಿಂದ ಸ್ತ್ರೀಯಿಂದ ಸ್ತ್ರೀಯರಿಂದ
ಚತುರ್ಥೀವಿಭಕ್ತಿ ಅಜ್ಜಿಗೆ ಅಜ್ಜಿಯರಿಗೆ ಸ್ತ್ರೀಗೆ ಸ್ತ್ರೀಯರಿಗೆ
ಪಂಚಮೀವಿಭಕ್ತಿ ಅಜ್ಜಿಯ ದೆಸೆಯಿಂದ ಅಜ್ಜಿಯರ ದೆಸೆಯಿಂದ ಸ್ತ್ರೀಯ ದೆಸೆಯಿಂದ ಸ್ತ್ರೀಯರ ದೆಸೆಯಿಂದ
ಷಷ್ಠೀವಿಭಕ್ತಿ ಅಜ್ಜಿಯ ಅಜ್ಜಿಯರ ಸ್ತ್ರೀಯ ಸ್ತ್ರೀಯರ
ಸಪ್ತಮೀವಿಭಕ್ತಿ ಅಜ್ಜಿಯಲ್ಲಿ ಅಜ್ಜಿಯರಲ್ಲಿ ಸ್ತ್ರೀಯಲ್ಲಿ ಸ್ತ್ರೀಯರಲ್ಲಿ
ಸಂಬೋಧನಾ ಅಜ್ಜೀ ಅಜ್ಜಿಯೇ ಅಜ್ಜಿಯರಿರಾ ಅಜ್ಜಿಯರುಗಳಿರಾ ಸ್ತ್ರೀಯೇ ಸ್ತ್ರೀಯರಿರಾ ಸ್ತ್ರೀಯರುಗಳಿರಾ

 

() ಉಕಾರಾಂತ ಸ್ತ್ರೀಲಿಂಗ ವಧು ಶಬ್ದ () ಋಕಾರಾಂತ ಸ್ತ್ರೀಲಿಂಗ ಮಾತೃ ಶಬ್ದ

ವಿಭಕ್ತಿ ಏಕವಚನ ಬಹುವಚನ ಏಕವಚನ ಬಹುವಚನ
ಪ್ರಥಮಾವಿಭಕ್ತಿ ವಧು (ವು) ವಧುಗಳು ಮಾತೃ (ವು) ಮಾತೃಗಳು
ದ್ವಿತೀಯಾವಿಭಕ್ತಿ ವಧುವನ್ನು ವಧುಗಳನ್ನು ಮಾತೃವನ್ನು ಮಾತೃಗಳನ್ನು
ತೃತೀಯಾವಿಭಕ್ತಿ ವಧುವಿನಿಂದ ವಧುಗಳಿಂದ ಮಾತೃವಿನಿಂದ  ಮಾತೃವಿಂದ ಮಾತೃಗಳಿಂದ
ಚತುರ್ಥೀವಿಭಕ್ತಿ ವಧುವಿಗೆ ವಧುಗಳಿಗೆ ಮಾತೃವಿಗೆ ಮಾತೃಗಳಿಗೆ
ಪಂಚಮೀವಿಭಕ್ತಿ ವಧುವಿನ ದೆಸೆಯಿಂದ ವಧುಗಳ ದೆಸೆಯಿಂದ ಮಾತೃವಿನ  ದೆಸೆಯಿಂದ ಮಾತೃಗಳ  ದೆಸೆಯಿಂದ
ಷಷ್ಠೀವಿಭಕ್ತಿ ವಧುವಿನ ವಧುಗಳ ಮಾತೃವಿನ ಮಾತೃಗಳ
ಸಪ್ತಮೀವಿಭಕ್ತಿ ವಧುವಿನಲ್ಲಿ ವಧುಗಳಲ್ಲಿ ಮಾತೃವಿನಲ್ಲಿ ಮಾತೃಗಳಲ್ಲಿ
ಸಂಬೋಧನಾ ವಧುವೇ ವಧುಗಳೇ ವಧುಗಳಿರಾ ಮಾತೃವೇ ಮಾತೃಗಳೇ ಮಾತೃಗಳಿರಾ

 

() ಎಕಾರಾಂತ ಸ್ತ್ರೀಲಿಂಗ ಅತ್ತೆ ಶಬ್ದ () ಎಕಾರಾಂತ ಸ್ತ್ರೀಲಿಂಗ ಸೊಸೆ ಶಬ್ದ

ವಿಭಕ್ತಿ ಏಕವಚನ ಬಹುವಚನ ಏಕವಚನ ಬಹುವಚನ
ಪ್ರಥಮಾವಿಭಕ್ತಿ ಅತ್ತೆ (ಯು) ಅತ್ತೆಯರು ಸೊಸೆ (ಯು) ಸೊಸೆಯರು
ದ್ವಿತೀಯಾವಿಭಕ್ತಿ ಅತ್ತೆಯನ್ನು ಅತ್ತೆಯವರನ್ನು ಸೊಸೆಯನ್ನು ಸೊಸೆಯವರನ್ನು
ತೃತೀಯಾವಿಭಕ್ತಿ ಅತ್ತೆಯಿಂದ ಅತ್ತೆಯರುಗಳಿಂದ ಸೊಸೆಯಿಂದ ಸೊಸೆಯರುಗಳಿಂದ ಸೊಸೆಯರಿಂದ
ಚತುರ್ಥೀವಿಭಕ್ತಿ ಅತ್ತೆಗೆ ಅತ್ತೆಯರುಗಳಿಗೆ ಸೊಸೆಗೆ ಸೊಸೆಯರುಗಳಿಗೆ ಸೊಸೆಯರಿಗೆ
ಪಂಚಮೀವಿಭಕ್ತಿ ಅತ್ತೆಯ ದೆಸೆಯಿಂದ ಅತ್ತೆಯರುಗಳ ದೆಸೆಯಿಂದ ಸೊಸೆಯ ದೆಸೆಯಿಂದ ಸೊಸೆಯರ ದೆಸೆಯಿಂದ ಸೊಸೆಯರುಗಳ ದೆಸೆಯಿಂದ
ಷಷ್ಠೀವಿಭಕ್ತಿ ಅತ್ತೆಯ ಅತ್ತೆಯರ ಅತ್ತೆಯರುಗಳ ಸೊಸೆಯ ಸೊಸೆಯರ ಸೊಸೆಯರುಗಳ
ಸಪ್ತಮೀವಿಭಕ್ತಿ ಅತ್ತೆಯಲ್ಲಿ ಅತ್ತೆಯರಲ್ಲಿ ಅತ್ತೆಯರುಗಳಲ್ಲಿ ಸೊಸೆಯಲ್ಲಿ ಸೊಸೆಯರಲ್ಲಿ ಸೊಸೆಯರುಗಳಲ್ಲಿ
ಸಂಬೋಧನಾ ಅತ್ತೆಯೇ ಅತ್ತೆಯರುಗಳೇ ಅತ್ತೆಯರುಗಳಿರಾ ಸೊಸೆಯೇ ಸೊಸೆಯರಿರಾ ಸೊಸೆಯರುಗಳೇ

 

ನಪುಂಸಕಲಿಂಗದ ಶಬ್ದಗಳು

() ಅಕಾರಾಂತ ನಪುಂಸಕಲಿಂಗ ನೆಲ ಶಬ್ದ () ಅಕಾರಾಂತ ನಪುಂಸಕಲಿಂಗ ಪುಸ್ತಕ ಶಬ್ದ

ವಿಭಕ್ತಿ ಏಕವಚನ ಬಹುವಚನ ಏಕವಚನ ಬಹುವಚನ
ಪ್ರಥಮಾವಿಭಕ್ತಿ ನೆಲ (ವು) ನೆಲಗಳು ಪುಸ್ತಕ (ವು) ಪುಸ್ತಕಗಳು
ದ್ವಿತೀಯಾವಿಭಕ್ತಿ ನೆಲವನ್ನು ನೆಲಗಳನ್ನು ಪುಸ್ತಕವನ್ನು ಪುಸ್ತಕಗಳನ್ನು
ತೃತೀಯಾವಿಭಕ್ತಿ ನೆಲದಿಂದ ನೆಲಗಳಿಂದ ಪುಸ್ತಕದಿಂದ ಪುಸ್ತಕಗಳಿಂದ
ಚತುರ್ಥೀವಿಭಕ್ತಿ ನೆಲಕ್ಕೆ ನೆಲಗಳಿಗೆ ಪುಸ್ತಕಕ್ಕೆ ಪುಸ್ತಕಗಳಿಗೆ
ಪಂಚಮೀವಿಭಕ್ತಿ ನೆಲದ ದೆಸೆಯಿಂದ ನೆಲಗಳ ದೆಸೆಯಿಂದ ಪುಸ್ತಕದ ದೆಸೆಯಿಂದ ಪುಸ್ತಕಗಳ ದೆಸೆಯಿಂದ
ಷಷ್ಠೀವಿಭಕ್ತಿ ನೆಲದ ನೆಲಗಳ ಪುಸ್ತಕದ ಪುಸ್ತಕಗಳ
ಸಪ್ತಮೀವಿಭಕ್ತಿ ನೆಲದಲ್ಲಿ ನೆಲಗಳಲ್ಲಿ ಪುಸ್ತಕದಲ್ಲಿ ಪುಸ್ತಕಗಳಲ್ಲಿ
ಸಂಬೋಧನಾ ನೆಲವೇ ನೆಲಗಳೇ ಪುಸ್ತಕವೇ ಪುಸ್ತಕಗಳೇ

ಇದರಂತೆ ಹೊಲ, ಮೊಲ, ಜೋಳ, ತೋಳ, ಬೆಟ್ಟ-ಇತ್ಯಾದಿ ಶಬ್ದಗಳನ್ನು ನಡೆಯಿಸಬೇಕು.

() ಇಕಾರಾಂತ ನಪುಂಸಕಲಿಂಗ ನಾಯಿ ಶಬ್ದ () ಇಕಾರಾಂತ ನಪುಂಸಕ ಲಿಂಗ ಗಿರಿ ಶಬ್ದ

ವಿಭಕ್ತಿ ಏಕವಚನ ಬಹುವಚನ ಏಕವಚನ ಬಹುವಚನ
ಪ್ರಥಮಾವಿಭಕ್ತಿ ನಾಯಿ (ಯು) ನಾಯಿಗಳು ಗಿರಿ (ಯು) ಗಿರಿಗಳು
ದ್ವಿತೀಯಾವಿಭಕ್ತಿ ನಾಯಿಯನ್ನು ನಾಯಿಗಳನ್ನು ಗಿರಿಯನ್ನು ಗಿರಿಗಳನ್ನು
ತೃತೀಯಾವಿಭಕ್ತಿ ನಾಯಿಯಿಂದ ನಾಯಿಗಳಿಂದ ಗಿರಿಯಿಂದ ಗಿರಿಗಳಿಂದ
ಚತುರ್ಥೀವಿಭಕ್ತಿ ನಾಯಿಗೆ ನಾಯಿಗಳಿಗೆ ಗಿರಿಗೆ ಗಿರಿಗಳಿಗೆ
ಪಂಚಮೀವಿಭಕ್ತಿ ನಾಯಿಯ  ದೆಸೆಯಿಂದ ನಾಯಿಗಳ ದೆಸೆಯಿಂದ ಗಿರಿಯ ದೆಸೆಯಿಂದ ಗಿರಿಗಳ ದೆಸೆಯಿಂದ
ಷಷ್ಠೀವಿಭಕ್ತಿ ನಾಯಿಯ ನಾಯಿಗಳ ಗಿರಿಯ ಗಿರಿಗಳ
ಸಪ್ತಮೀವಿಭಕ್ತಿ ನಾಯಿಯಲ್ಲಿ ನಾಯಿಗಳಲ್ಲಿ ಗಿರಿಯಲ್ಲಿ ಗಿರಿಗಳಲ್ಲಿ
ಸಂಬೋಧನಾ ನಾಯಿಯೇ ನಾಯಿಗಳಿರಾ ನಾಯಿಗಳೇ ಗಿರಿಯೇ ಗಿರಿಗಳೇ ಗಿರಿಗಳಿರಾ

ಇದರಂತೆ ಕರಿ, ಮರಿ, ಕುರಿ, ಹೋರಿ, ಗಿಳಿ, ನದಿ, ನರಿ, ಸಿರಿ-ಈ ಶಬ್ದಗಳನ್ನು ನಡೆಯಿಸಬೇಕು.

() ಉಕಾರಾಂತ ನಪುಂಸಕ ಲಿಂಗ ಕರು ಶಬ್ದ () ಉಕಾರಾಂತ ನಪುಂಸಕ ಲಿಂಗ ಕಲ್ಲು ಶಬ್ದ

ವಿಭಕ್ತಿ ಏಕವಚನ ಬಹುವಚನ ಏಕವಚನ ಬಹುವಚನ
ಪ್ರಥಮಾವಿಭಕ್ತಿ ಕರು (ವು) ಕರುಗಳು ಕಲ್ಲು ಕಲ್ಲುಗಳು
ದ್ವಿತೀಯಾವಿಭಕ್ತಿ ಕರುವನ್ನು ಕರುಗಳನ್ನು ಕಲ್ಲನ್ನು ಕಲ್ಲುಗಳನ್ನು
ತೃತೀಯಾವಿಭಕ್ತಿ ಕರುವಿನಿಂದ ಕರುವಿಂದ ಕರುಗಳಿಂದ ಕಲ್ಲಿಂದ ಕಲ್ಲಿನಿಂದ ಕಲ್ಲುಗಳಿಂದ
ಚತುರ್ಥೀವಿಭಕ್ತಿ ಕರುವಿಗೆ ಕರುಗಳಿಗೆ ಕಲ್ಲಿಗೆ ಕಲ್ಲುಗಳಿಗೆ
ಪಂಚಮೀವಿಭಕ್ತಿ ಕರುವಿನ ದೆಸೆಯಿಂದ ಕರುಗಳ ದೆಸೆಯಿಂದ ಕಲ್ಲಿನ ದೆಸೆಯಿಂದ ಕಲ್ಲುಗಳ ದೆಸೆಯಿಂದ
ಷಷ್ಠೀವಿಭಕ್ತಿ ಕರುವಿನ ಕರುಗಳ ಕಲ್ಲಿನ ಕಲ್ಲುಗಳ
ಸಪ್ತಮೀವಿಭಕ್ತಿ ಕರುವಿನಲ್ಲಿ ಕರುಗಳಲ್ಲಿ ಕಲ್ಲಿನಲ್ಲಿ ಕಲ್ಲುಗಳಲ್ಲಿ
ಸಂಬೋಧನಾ ಕರುವೇ ಕರುಗಳೇ ಕರುಗಳಿರಾ ಕಲ್ಲೇ ಕಲ್ಲುಗಳೇ

ಇದರಂತೆ ಕಣ್ಣು, ಮಣ್ಣು, ತುರು-ಇತ್ಯಾದಿ ಶಬ್ದಗಳನ್ನು ನಡೆಯಿಸಬೇಕು.

() ಎಕಾರಾಂತ  ನಪುಂಸಕಲಿಂಗ ಮನೆ ಶಬ್ದ ()ಎಕಾರಾಂತ  ನಪುಂಸಕಲಿಂಗ ನನೆ ಶಬ್ದ (ನನೆಹೂವು)

ವಿಭಕ್ತಿ ಏಕವಚನ ಬಹುವಚನ ಏಕವಚನ ಬಹುವಚನ
ಪ್ರಥಮಾವಿಭಕ್ತಿ ಮನೆ(ಯು) ಮನೆಗಳು ನನೆ (ಯು) ನನೆಗಳು
ದ್ವಿತೀಯಾವಿಭಕ್ತಿ ಮನೆಯನ್ನು ಮನೆಗಳನ್ನು ನನೆಯನ್ನು ನನೆಗಳನ್ನು
ತೃತೀಯಾವಿಭಕ್ತಿ ಮನೆಯಿಂದ ಮನೆಗಳಿಂದ ನನೆಯಿಂದ ನನೆಗಳಿಂದ
ಚತುರ್ಥೀವಿಭಕ್ತಿ ಮನೆಗೆ ಮನೆಗಳಿಗೆ ನನೆಗೆ ನನೆಗಳಿಗೆ
ಪಂಚಮೀವಿಭಕ್ತಿ ಮನೆಯ ದೆಸೆಯಿಂದ ಮನೆಗಳ ದೆಸೆಯಿಂದ ನನೆಯ ದೆಸೆಯಿಂದ ನನೆಗಳ ದೆಸೆಯಿಂದ
ಷಷ್ಠೀವಿಭಕ್ತಿ ಮನೆಯ ಮನೆಗಳ ನನೆಯ ನನೆಗಳ
ಸಪ್ತಮೀವಿಭಕ್ತಿ ಮನೆಯಲ್ಲಿ ಮನೆಗಳಲ್ಲಿ ನನೆಯಲ್ಲಿ ನನೆಗಳಲ್ಲಿ
ಸಂಬೋಧನಾ ಮನೆಯೇ ಮನೆಗಳೇ ನನೆಯೇ ನನೆಗಳೇ ನನೆಗಳಿರಾ

ಇದರಂತೆ ಕೆರೆ, ತೆರೆ, ಅಲೆ, ಗೆರೆ, ತಿರೆ, ತೊರೆ, ಮಲೆ-ಇತ್ಯಾದಿ ಶಬ್ದಗಳನ್ನು ನಡೆಯಿಸಬೇಕು.

() ಐಕಾರಾಂತ ನಪುಂಸಕಲಿಂಗ ಕೈ ಶಬ್ದ () ಐಕಾರಾಂತ ನಪುಂಸಕಲಿಂಗ ಮೈ ಶಬ್ದ

ವಿಭಕ್ತಿ ಏಕವಚನ ಬಹುವಚನ ಏಕವಚನ ಬಹುವಚನ
ಪ್ರಥಮಾವಿಭಕ್ತಿ ಕೈ (ಯು) ಕೈಗಳು ಮೈ(ಯು) ಮೈಗಳು
ದ್ವಿತೀಯಾವಿಭಕ್ತಿ ಕೈಯನ್ನು ಕೈಗಳನ್ನು ಮೈಯನ್ನು ಮೈಗಳನ್ನು
ತೃತೀಯಾವಿಭಕ್ತಿ ಕೈಯಿಂದ ಕೈಗಳಿಂದ ಮೈಯಿಂದ ಮೈಗಳಿಂದ
ಚತುರ್ಥೀವಿಭಕ್ತಿ ಕೈಗೆ ಕೈಗಳಿಗೆ ಮೈಗೆ ಮೈಗಳಿಗೆ
ಪಂಚಮೀವಿಭಕ್ತಿ ಕೈಯ ದೆಸೆಯಿಂದ ಕೈಗಳ ದೆಸೆಯಿಂದ ಮೈಯ ದೆಸೆಯಿಂದ ಮೈಗಳ ದೆಸೆಯಿಂದ
ಷಷ್ಠೀವಿಭಕ್ತಿ ಕೈಯ ಕೈಗಳ ಮೈಯ ಮೈಗಳ
ಸಪ್ತಮೀವಿಭಕ್ತಿ ಕೈಯಲ್ಲಿ ಕೈಗಳಲ್ಲಿ ಮೈಯಲ್ಲಿ ಮೈಗಳಲ್ಲಿ
ಸಂಬೋಧನಾ ಕೈಯೇ ಕೈಗಳೇ ಮೈಯೇ ಮೈಗಳೇ

ಏನು ಎಂಬ ಪ್ರಶ್ನಾರ್ಥಕ ಸರ್ವನಾಮವು ಏಕವಚನದಲ್ಲಿ ಮಾತ್ರ ವಿಭಕ್ತಿಪ್ರತ್ಯಯಗಳನ್ನು ಹೊಂದುತ್ತದೆ.  (ಸಂಬೋಧನೆಯಲ್ಲಿ ಯಾವ ಸರ್ವನಾಮಗಳಿಗೂ ವಿಭಕ್ತಿಪ್ರತ್ಯಯ ಹತ್ತುವುದಿಲ್ಲ.)

() ಪ್ರಶ್ನಾರ್ಥಕ ಸರ್ವನಾಮ ಏನು ಶಬ್ದ

ವಿಭಕ್ತಿ ಏಕವಚನ ಬಹುವಚನ
ಪ್ರಥಮಾವಿಭಕ್ತಿ ಏನು
ದ್ವಿತೀಯಾವಿಭಕ್ತಿ ಏನನ್ನು ಈ ಶಬ್ದವು   ಬಹುವಚನದಲ್ಲಿ   ವಿಭಕ್ತಿ ಪ್ರತ್ಯಯಗಳನ್ನು   ಹೊಂದುವುದಿಲ್ಲ
ತೃತೀಯಾವಿಭಕ್ತಿ ಏತರಿಂದ
ಚತುರ್ಥೀವಿಭಕ್ತಿ ಏತಕ್ಕೆ
ಪಂಚಮೀವಿಭಕ್ತಿ ಏತರ ದೆಸೆಯಿಂದ
ಷಷ್ಠೀವಿಭಕ್ತಿ ಏತರ
ಸಪ್ತಮೀವಿಭಕ್ತಿ ಏತರಲ್ಲಿ

 

() ಎಲ್ಲಾ (ಎಲ್ಲ) ಸರ್ವನಾಮ ಶಬ್ದ ರೂಪಗಳು

ವಿಭಕ್ತಿ ಏಕವಚನ ಬಹುವಚನ
ಪ್ರಥಮಾವಿಭಕ್ತಿ ಎಲ್ಲ (ಎಲ್ಲಾ) (ಎಲ್ಲದು) ಎಲ್ಲವು
ದ್ವಿತೀಯಾವಿಭಕ್ತಿ ಎಲ್ಲದನ್ನು ಎಲ್ಲವನ್ನು
ತೃತೀಯಾವಿಭಕ್ತಿ ಎಲ್ಲದರಿಂದ ಎಲ್ಲವುಗಳಿಂದ
ಚತುರ್ಥೀವಿಭಕ್ತಿ ಎಲ್ಲದಕ್ಕೆ ಎಲ್ಲವುಗಳಿಗೆ
ಪಂಚಮೀವಿಭಕ್ತಿ ಎಲ್ಲದರ ದೆಸೆಯಿಂದ ಎಲ್ಲವುಗಳ ದೆಸೆಯಿಂದ
ಷಷ್ಠೀವಿಭಕ್ತಿ ಎಲ್ಲದರ ಎಲ್ಲವುಗಳ
ಸಪ್ತಮೀವಿಭಕ್ತಿ ಎಲ್ಲದರಲ್ಲಿ ಎಲ್ಲವುಗಳಲ್ಲಿ

 

() ಮೂಡಲು, ಪಡುವಲು, ತೆಂಕಲು, ಬಡಗು ಮುಂತಾದ ದಿಗ್ವಾಚಕ ಶಬ್ದಗಳ ಸಿದ್ಧರೂಪಗಳು:-

ವಿಭಕ್ತಿ ಏಕವಚನ ಬಹುವಚನ
ಪ್ರಥಮಾವಿಭಕ್ತಿ ಮೂಡಲು+ಅಣ+ಉ=ಮೂಡಣವು ಮೂಡಣಗಳು
ದ್ವಿತೀಯಾವಿಭಕ್ತಿ ಮೂಡಲು+ಅಣ+ಅನ್ನು=ಮೂಡಣವನ್ನು ಮೂಡಣಗಳನ್ನು
ತೃತೀಯಾವಿಭಕ್ತಿ ಮೂಡಲು+ಅಣ+ಇಂದ=ಮೂಡಣಿಂದ ಮೂಡಣಗಳಿಂದ
(ಮೂಡಲು+ಅಣ+ಇಂದ=ಮೂಡಣದಿಂದ)
ಚತುರ್ಥೀವಿಭಕ್ತಿ ಮೂಡಲು+ಅಣ+ಕ್ಕೆ=ಮೂಡಣಕ್ಕೆ ಮೂಡಣಗಳಿಗೆ
ಪಂಚಮೀವಿಭಕ್ತಿ ಮೂಡಲು+ಅಣ+ದೆಸೆಯಿಂದ=ಮೂಡಣದ ದೆಸೆಯಿಂದ, (ಮೂಡಣದೆಸೆಯಿಂದ) ಮೂಡಣಗಳ ದೆಸೆಯಿಂದ
ಷಷ್ಠೀವಿಭಕ್ತಿ ಮೂಡಲು+ಅಣ+ದ+ಅ=ಮೂಡಣದ ಮೂಡಣಗಳ
ಸಪ್ತಮೀವಿಭಕ್ತಿ ಮೂಡಲು+ಅಣ+ದ+ಅಲ್ಲಿ=ಮೂಡಣದಲ್ಲಿ ಮೂಡಣಗಳಲ್ಲಿ
ಸಂಬೋಧನಾ ಮೂಡಲು+ಅಣ+ಏ=ಮೂಡಣವೇ ಮೂಡಣಗಳಿರಾ, ಮೂಡಣಗಳೇ

ಮೇಲಿನ ಉದಾಹರಣೆಗಳನ್ನು ಅವಲೋಕಿಸಿದಾಗ ಏನು ಶಬ್ದ ತೃತೀಯಾ ಮೊದಲ್ಗೊಂಡು ಎಲ್ಲ ವಿಭಕ್ತಿಪ್ರತ್ಯಯ ಹತ್ತುವಾಗ ಏತರ ಎಂದು ರೂಪ ಧರಿಸುವುದು.  ಎಲ್ಲಾ (ಎಲ್ಲ) ಶಬ್ದದ ಮುಂದೆ ಎಲ್ಲ ವಿಭಕ್ತಿಗಳಲ್ಲೂ ಏಕವಚನದಲ್ಲಿ ಅದು ಮತ್ತು ಬಹುವಚನದಲ್ಲಿ ಅವು ಎಂಬುವು ಬಂದು ವಿಭಕ್ತಿಪ್ರತ್ಯಯಗಳು ಮುಂದೆ ಹತ್ತುತ್ತವೆ.  ಪ್ರಥಮೆಯಲ್ಲಿ ಮಾತ್ರ ಪ್ರಕೃತಿರೂಪವೇ ಉಳಿಯುವುದು.

ಮೂಡಲು ಶಬ್ದಕ್ಕೆ ವಿಭಕ್ತಿಪ್ರತ್ಯಯಗಳು ಸೇರುವಾಗ ಅಣ ಎಂಬಾಗಮವು ಬರುವುದು.  ಕೊನೆಯ ಲು ಕಾರವು ಲೋಪ ಹೊಂದುವುದು.  ಬಡಗು ಶಬ್ದದ ಗು ಅಕ್ಷರಕ್ಕೆ ಲೋಪ ತೃತೀಯಾ, ಪಂಚಮೀಗಳಲ್ಲಿ ವಿಕಲ್ಪದಿಂದಲೂ, ಷಷ್ಠೀ, ಸಪ್ತಮೀಗಳಲ್ಲಿ ನಿತ್ಯವಾಗಿಯೂ ಅಣ ಪ್ರತ್ಯಯಕ್ಕೂ ವಿಭಕ್ತಿಪ್ರತ್ಯಯಕ್ಕೂ ಮಧ್ಯದಲ್ಲಿ ದ ಪ್ರತ್ಯಯವು ಆಗಮವಾಗಿ ಬರುವುದು.  ಇದರ ಹಾಗೆಯೇ ಪಡುವಲು, ಬಡಗು, ತೆಂಕಲು ಶಬ್ದಗಳನ್ನು ನಡೆಯಿಸಬೇಕು.


[1] ವಿಭಕ್ತಿಪ್ರತ್ಯಯಗಳು ಏಳು ಮಾತ್ರ.  ಸಂಬೋಧನೆಯನ್ನು ಸೇರಿಸಿದರೆ ಎಂಟಾಗುವುವು.  ಆದರೆ ಸಂಬೋಧನೆಯು ಪ್ರಥಮಾ ವಿಭಕ್ತಿಯಲ್ಲಿಯೇ ಸೇರಿ ಸಂಬೋಧನಾ ಪ್ರಥಮಾವಿಭಕ್ತಿಯೆನಿಸುವುದು.  ಇಲ್ಲಿ ಸ್ಪಷ್ಟತೆಗೋಸುಗ ೮ ವಿಭಕ್ತಿಯೆಂದು ಹೇಳಿದೆ.  ಇವುಗಳಲ್ಲಿ ಷಷ್ಟೀ, ಸಂಬೋಧನೆಯನ್ನುಳಿದು ಉಳಿದ ಆರು ವಿಭಕ್ತಿಗಳು ಕಾರಕಾರ್ಥಗಳೆನಿಸುವುವು.

[2] ಪ್ರಥಮಾವಿಭಕ್ತಿಪ್ರತ್ಯಯವು ಹೊಸಗನ್ನಡ-ಹಳಗನ್ನಡ ಎರಡರಲ್ಲೂ ಇಲ್ಲವೆಂದೂ, ಪ್ರಕೃತಿಗಳೇ ಪ್ರಥಮಾವಿಭಕ್ತ್ಯಂತ ರೂಪಗಳಾಗಿರುತ್ತವೆಂದೂ ಆಧುನಿಕ ಭಾಷಾಶಾಸ್ತ್ರಜ್ಞರ ಅಭಿಪ್ರಾಯವಾಗಿದೆ.

[3] ಕೆಲವುಕಡೆ ವಿಭಕ್ತಿಪ್ರತ್ಯಯಗಳು ಮೂರು ನಾಲ್ಕು ಇದ್ದು ಒಂದೇ ಪ್ರಕೃತಿಯ ಮೇಲೆ ಅವೆಲ್ಲವೂ ಬರುತ್ತವೆಂದು ತಿಳಿಯಬಾರದು.  ಒಂದೊಂದು ಕಡೆಯಲ್ಲಿ ಒಂದೊಂದು ವಿಭಕ್ತಿಪ್ರತ್ಯಯ ಬರುತ್ತದೆಂದು ತಿಳಿಯಬೇಕು.  ಹಳಗನ್ನಡದಲ್ಲಿ ತೃತೀಯಾ ವಿಭಕ್ತಿಪ್ರತ್ಯಯವು ಎ ಎಂದು ಕೆಲವುಕಡೆ ಅಕಾರಾಂತ ನಪುಂಸಕಲಿಂಗ ಶಬ್ದಗಳಿಗೆ ಮಾತ್ರ ಬರುವುದು.  ಉದಾಹರಣೆಗೆ:- ಕ್ರಮದೆ, ನಯದೆ-ಇತ್ಯಾದಿ.

[4] ಪಂಚಮೀವಿಭಕ್ತಿಪ್ರತ್ಯಯವು ಕನ್ನಡದಲ್ಲಿ ಇಲ್ಲವೆಂದೂ, ಅದರ ಕಾರ‍್ಯವನ್ನು ತೃತೀಯಾ ವಿಭಕ್ತಿಪ್ರತ್ಯಯವೇ ಮಾಡುವುದೆಂದೂ, ಸಂಸ್ಕೃತ ವ್ಯಾಕರಣದಲ್ಲಿದ್ದ ಹಾಗೆ ಕನ್ನಡದಲ್ಲೂ ಪಂಚಮೀ ವಿಭಕ್ತಿ ಇರಬೇಕೆಂದು ತಿಳಿದು ಕನ್ನಡ ವ್ಯಾಕರಣಕಾರರು ಹಿಂದಿನಿಂದಲೂ ಆ ವಿಭಕ್ತಿಯನ್ನು ಹೇಳುತ್ತ ಬಂದಿರುವರೆಂದೂ ಆಧುನಿಕ ವಿದ್ವಾಂಸರ ಮತ.

[5] ಷಷ್ಠೀವಿಭಕ್ತಿಗೆ ಸಂಬಂಧಾನ್ವಯವಲ್ಲದೆ ಕಾರಕಾನ್ವಯವಿಲ್ಲ.  ಎಲ್ಲ ಕಾರಕಾರ್ಥಗಳ ಸಂಬಂಧದಲ್ಲೂ ಷಷ್ಠೀವಿಭಕ್ತಿ ಬರುತ್ತದಾದ್ದರಿಂದ ಇದು ನೇರವಾಗಿ ಕಾರಕಾರ್ಥವಿಲ್ಲದ್ದೆಂದು ತಿಳಿಯಬೇಕು.

[6] ಸಂಬೋಧನೆಯೆಂಬುದು ಎಂಟನೆಯ ವಿಭಕ್ತಿಯಲ್ಲ.  ಇದನ್ನು ಪ್ರಥಮೆಯಲ್ಲಿಯೇ ಸೇರಿಸುವರು.  ಇದು ಕಾರಕಾರ್ಥವಲ್ಲ.  ಇರಾ ಪ್ರತ್ಯಯ ಬಹುವಚನದಲ್ಲಿ ಮಾತ್ರ ಬರುವುದು.

[7] ಅಣ್ಣ, ಅಕ್ಕ ಎಂಬ ಶಬ್ದಗಳ ಹಳಗನ್ನಡ ಏಕವಚನದ ರೂಪಗಳು ಕ್ರಮವಾಗಿ ಕೆಳಗಿನಂತಾಗುತ್ತವೆ.  ಅಣ್ಣಂ, ಅಣ್ಣನಂ, ಅಣ್ಣನಿಂ, (ಅಣ್ಣನಿಂದಂ, ಅಣ್ಣನಿಂದೆ), ಅಣ್ಣಂಗೆ, ಅಣ್ಣನತ್ತಣಿಂ, (ಅಣ್ಣನತ್ತಣಿಂದಂ, ಅಣ್ಣನತ್ತಣಿಂದೆ), ಅಣ್ಣನ, ಅಣ್ಣನೊಳ್, ಅಣ್ಣಾ, ಅಣ್ಣನೇ-ಇತ್ಯಾದಿ, ಅಕ್ಕಂ, ಅಕ್ಕನಂ, ಅಕ್ಕನಿಂ, (ಅಕ್ಕನಿಂದಂ, ಅಕ್ಕನಿಂದೆ), ಅಕ್ಕಂಗೆ, ಅಕ್ಕನತ್ತಣಿಂ, ಅಕ್ಕನತ್ತಣಿಂದಂ, ಅಕ್ಕನತ್ತಣಿಂದೆ, ಅಕ್ಕನ, ಅಕ್ಕನೊಳ್, ಅಕ್ಕಾ, ಅಕ್ಕನೇ-ಇತ್ಯಾದಿ.

[8] ವಿಕಲ್ಪ ಎಂದರೆ ಯಾವುದೇ ಒಂದು ಹೇಳಿದ ಕಾರ‍್ಯವು ಕೆಲವು ಕಡೆ ಬರುವುದು, ಕೆಲವು ಕಡೆ ಬರದಿರುವುದು, ಕೆಲವು ಕಡೆ ಬೇರೆ ಕಾರ‍್ಯ ಬರುವುದು ಎಂದೂ ಅರ್ಥ.

[9] ಆ ಹೀಗೆ ಆಕಾರದ ಕೆಳಗೆ ೩ ನ್ನು ಬರೆದು ತೋರಿಸಿರುವುದರ ಉದ್ದೇಶ ಹಿಂದೆ ಸಂಜ್ಞಾಪ್ರಕರಣದಲ್ಲಿ ತಿಳಿಸಿರುವಂತೆ ಪ್ಲುತಸ್ವರ ಎಂಬುದರ ಗುರುತಿಗಾಗಿ.  ಆ ಆಕಾರವು ದೀರ್ಘಸ್ವರಮಾತ್ರ ಅಲ್ಲ.  ೩ ಮಾತ್ರೆಗಳ ಕಾಲದವರೆಗೆ ಎಳೆದು ಹೇಳುವ ಪ್ಲುತಸ್ವರವೆಂಬ ತಿಳಿವಳಿಕೆಗಾಗಿ.  ಗ್ರಂಥಾದಿಗಳಲ್ಲಿ ಹಾಗೆ ಬರೆಯುವುದಿಲ್ಲ.  ವ್ಯಾಕರಣದ ಈ ಪುಸ್ತಕದಲ್ಲಿ ಹಾಗೆ ಬರೆದಿರುವುದು ಕೇವಲ ತಿಳಿವಳಿಕೆಗಾಗಿ ಮಾತ್ರ.