೧. ಸಹಜವಾದ ನಾಮಪ್ರಕೃತಿಗಳು ೨. ಸಾಧಿತ (ನಿಷ್ಪನ್ನ)ಗಳಾದ ನಾಮಪ್ರಕೃತಿಗಳು
(i) ಮನುಷ್ಯರ ಹೆಸರನ್ನು ಹೇಳುವಂಥವು (i) ಎರಡು ಮೂರು ಪದಗಳು ಸೇರಿ ಒಂದು ಪದವಾಗುವ ಸಮಾಸಗಳು
(ii) ಪ್ರಾಣಿಗಳ ಹೆಸರು ಹೇಳುವಂಥವು (ii) ಕ್ರಿಯಾಪ್ರಕೃತಿ (ಧಾತು)ಯಿಂದ ಹುಟ್ಟಿದ ಕೃದಂತ ನಾಮಪ್ರಕೃತಿಗಳು
(iii) ವಸ್ತುಗಳ ಗುಣ, ಸ್ವಭಾವಗಳನ್ನು ಹೇಳುವಂಥವು (iii) ತದ್ಧಿತಪ್ರತ್ಯಯ ಸೇರಿ ಉಂಟಾದ ತದ್ಧಿತಾಂತ ನಾಮಪ್ರಕೃತಿಗಳು
(iv) ಕಾಲ, ಸ್ಥಾನ, ಅಳತೆ, ದಿಕ್ಕು, ಸಂಖ್ಯೆಗಳನ್ನು ಸೂಚಿಸುವ ಶಬ್ದಗಳು

ಈ ಮೇಲೆ ಸೂಚಿಸಿದಂತೆ ನಾಮಪ್ರಕೃತಿಗಳು ಮುಖ್ಯವಾಗಿ ಎರಡು ಬಗೆಯವು:

() ಸಹಜ ನಾಮಪ್ರಕೃತಿಗಳು () ಸಾಧಿತಗಳಾದ ಸಮಾಸ, ಕೃದಂತ, ತದ್ಧಿತಾಂತಗಳು.

() ಸಹಜ ನಾಮಪ್ರಕೃತಿಗಳು_

ಉದಾಹರಣೆಗೆ:-

ಹೊಲ, ನೆಲ, ಜನ, ಮನೆ, ಮರ, ಕಲ್ಲು, ಪೂರ್ವ, ಮೂಡಣ, ಎರಡು, ಕರಿದು, ದೊಡ್ಡ, ಸಣ್ಣ-ಇತ್ಯಾದಿಗಳು.

() ಸಾಧಿತ (ನಿಷ್ಪನ್ನ) ನಾಮಪ್ರಕೃತಿಗಳು_

(i) ಸಮಾಸಗಳು

[1]-ಮಳೆಗಾಲ, ದೊಡ್ಡಮರ, ಹೆಬ್ಬಾಗಿಲು, ಮುಕ್ಕಣ್ಣ, ಇಕ್ಕೆಲ, ಹೆಜ್ಜೇನು, ಹೆದ್ದೊರೆ-ಮುಂತಾದವು.

(ii) ಕೃದಂತಗಳು[2]-ಮಾಡಿದ, ಮಾಡುವಿಕೆ, ಮಾಟ, ಓಟ, ಓದುವ, ಓದಿದ, ತಿನ್ನುವ, ಇತ್ಯಾದಿಗಳು.

(iii) ತದ್ಧಿತಾಂತಗಳು[3]-ಒಕ್ಕಲಿಗ, ಗಾಣಿಗ, ಹಾವಾಡಿಗ, ಮೋಸಗಾರ, ಒಕ್ಕಲುಗಿತ್ತಿ, ಜಾಣೆ, ದೊಡ್ಡತನ, ಮಾಲೆಗಾರ-ಇತ್ಯಾದಿಗಳು.

ಮೇಲೆ ವಿವರಿಸಿರುವ ಸಮಾಸ, ಕೃದಂತ, ತದ್ಧಿತಾಂತಗಳನ್ನು ಮುಂದಿನ ಬೇರೆ ಬೇರೆ ಅಧ್ಯಾಯಗಳಲ್ಲಿ ವಿವರವಾಗಿ ತಿಳಿಯುವಿರಿ.  ಈಗ ಸಹಜ ನಾಮಪ್ರಕೃತಿ, ವಿಭಕ್ತಿಪ್ರತ್ಯಯ, ನಾಮಪದಗಳ ವಿಚಾರ ತಿಳಿಯೋಣ.

(೩೩) ನಾಮವಾಚಕಪ್ರಕೃತಿಗಳಲ್ಲಿ ಮುಖ್ಯವಾಗಿ: () ವಸ್ತುವಾಚಕಗಳು, () ಗುಣವಾಚಕಗಳು, () ಸಂಖ್ಯಾವಾಚಕಗಳು, () ಸಂಖ್ಯೇಯವಾಚಕಗಳು, () ಭಾವನಾಮಗಳು, () ಪರಿಮಾಣವಾಚಕಗಳು, () ಪ್ರಕಾರವಾಚಕಗಳು, () ದಿಗ್ವಾಚಕಗಳು, () ಸರ್ವನಾಮಗಳು ಎಂದು ಅನೇಕ ಗುಂಪು ಮಾಡಬಹುದು.

 

() ವಸ್ತುವಾಚಕಗಳು

(೩೪) ವಸ್ತುಗಳ ಹೆಸರನ್ನು ಹೇಳುವ ಶಬ್ದಗಳೆಲ್ಲ ವಸ್ತುವಾಚಕಗಳು.

ಉದಾಹರಣೆಗೆ:- ಚೇತನವುಳ್ಳ ವಸ್ತುಗಳು-ಮನುಷ್ಯ, ಹೆಂಗಸು, ಬಸವ, ಕೃಷ್ಣ, ಮುದುಕ, ಎತ್ತು, ಎಮ್ಮೆ, ನರಿ, ನಾಯಿ-ಮುಂತಾದವು.

ಚೇತನವಿಲ್ಲದ ವಸ್ತುಗಳು-ಕಲ್ಲು, ಮರ, ನೆಲ, ಜಲ, ಎಲೆ, ಹೂ, ಹಣ್ಣು, ಕಾಯಿ, ಬೆಟ್ಟ, ಅಡವಿ, ಮಠ, ಮನೆ, ಶಾಲೆ,-ಮುಂತಾದವು.

ಈ ವಸ್ತುವಾಚಕಗಳನ್ನು () ರೂಢನಾಮ, () ಅಂಕಿತನಾಮ, () ಅನ್ವರ್ಥಕನಾಮ – ಎಂದು ಮೂರು ವಿಭಾಗ ಮಾಡಬಹುದು.

() ರೂಢನಾಮ ರೂಢಿಯಿಂದ ಬಂದ ಸಾಮಾನ್ಯವಾಚಕಗಳು ರೂಢನಾಮಗಳು.

ಉದಾಹರಣೆಗೆ: – ನದಿ, ಪರ್ವತ, ಮನುಷ್ಯ, ಹೆಂಗಸು, ಹುಡುಗ, ಪಟ್ಟಣ, ದೇಶ-ಇತ್ಯಾದಿಗಳು.

ಇಲ್ಲಿ ಬಂದಿರುವ ನದಿ ಇತ್ಯಾದಿ ಶಬ್ದಗಳು ಎಲ್ಲ ನದಿಗಳಿಗೂ ಅನ್ವಯಿಸುವ ಸಾಮಾನ್ಯವಾಚಕಗಳು.

() ಅಂಕಿತನಾಮವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳೆಲ್ಲ ಅಂಕಿತ ನಾಮಗಳು.

ಉದಾಹರಣೆಗೆ:-ಗಂಗಾ, ಬ್ರಹ್ಮಪುತ್ರಾ, ಕಾವೇರಿ, ಹಿಮಾಲಯ, ವಿಂದ್ಯಾದ್ರಿ, ರಾಮ, ಕೃಷ್ಣ, ಶಂಕರ, ರಂಗ, ಸಾವಿತ್ರಿ, ಬೆಂಗಳೂರು, ಭಾರತ, ಕರ್ನಾಟಕ, ಆಲ, ಬೇವು-ಇತ್ಯಾದಿಗಳು (ಇವೆಲ್ಲ ರೂಢನಾಮಗಳಿಗೆ ಇಟ್ಟ ಹಸರುಗಳೇ ಆಗಿವೆ).

() ಅನ್ವರ್ಥಕನಾಮಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲ ಅನ್ವರ್ಥಕ ನಾಮಗಳು.

ಉದಾಹರಣೆಗೆ:-ಕುಂಟ, ಹೆಳವ, ಕಿವುಡ, ವ್ಯಾಪಾರಿ, ವಿದ್ವಾಂಸ, ರೋಗಿ, ಯೋಗಿ-ಇತ್ಯಾದಿಗಳು.

 

() ಗುಣವಾಚಕಗಳು

ಈ ಕೆಳಗಿನ ವಾಕ್ಯಗಳನ್ನು ಗಮನಿಸಿರಿ_

(೧) ಕೆಂಪುಬಟ್ಟೆಯನ್ನು ತಂದನು.

(೨) ದೊಡ್ಡ ಕಲ್ಲು ಇದೆ.

(೩) ಚಿಕ್ಕಮಕ್ಕಳು ಇರುತ್ತಾರೆ.

(೪) ಹಳೆಯ ಅಕ್ಕಿ ಬೇಕು

(೫) ಕರಿಯ ನಾಯಿ ಇದೆ

ಮೇಲಿನ ವಾಕ್ಯಗಳಲ್ಲಿ ಕೆಂಪು ಎಂಬುದು ಬಟ್ಟೆಯ ಬಣ್ಣದ ಗುಣವನ್ನೂ, ದೊಡ್ಡ ಎಂಬುದು ಕಲ್ಲಿನ ರೀತಿಯನ್ನೂ, ಚಿಕ್ಕ ಎಂಬುದು ಮಕ್ಕಳ ರೀತಿಯನ್ನೂ, ಹಳೆಯ ಎಂಬುದು ಅಕ್ಕಿಯ ಗುಣವನ್ನೂ, ಕರಿಯ ಎಂಬುದು ನಾಯಿಯ ಬಣ್ಣದ ರೀತಿಯನ್ನೂ ತಿಳಿಸುವ ಶಬ್ದಗಳು.  ಇವುಗಳಿಗೆ ವಿಶೇಷಣಗಳೆಂದೂ ಹೆಸರು.

(೩೫) ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ತಿಳಿಸುವ ವಿಶೇಷಣಗಳೆಲ್ಲಾ ಗುಣವಾಚಕಗಳೆನಿಸುವುವು.

ಉದಾಹರಣೆಗೆ:-ದೊಡ್ಡ, ಚಿಕ್ಕ, ಕಿರಿದು, ಒಳ್ಳೆಯ, ಕೆಟ್ಟದು, ಬಿಳಿದು, ಕರಿದು, ಹೊಸದು, ಹಳೆಯ, ಪಿರಿದು, ಹಿರಿದು, ಕಿರಿದು, ಎಳದು-ಮೊದಲಾದವು.

ಈ ವಿಶೇಷಣಗಳೆಲ್ಲ ಯಾವುದಕ್ಕೆ ಹೇಳಿದೆಯೋ ಅಂಥ ಶಬ್ದಗಳು ವಿಶೇಷ್ಯಗಳು.

ವಿಶೇಷಣ ವಿಶೇಷ್ಯ
ಕರಿಯ ನಾಯಿ
ದೊಡ್ಡ ಕಲ್ಲು
ಚಿಕ್ಕ ಮಗು

ಇಲ್ಲಿ ಕರಿಯ, ದೊಡ್ಡ, ಚಿಕ್ಕ ಈ ಶಬ್ದಗಳೆಲ್ಲ ವಿಶೇಷಣಗಳು. ನಾಯಿ, ಕಲ್ಲು, ಮಗು ಇತ್ಯಾದಿ ಶಬ್ದಗಳೆಲ್ಲ ವಿಶೇಷ್ಯಗಳೆನಿಸುವುವು.

 

() ಸಂಖ್ಯಾವಾಚಕಗಳು

(೩೬) ಸಂಖ್ಯೆಯನ್ನು ಹೇಳುವ ಶಬ್ದಗಳೆಲ್ಲ ಸಂಖ್ಯಾವಾಚಕಗಳು

ಉದಾಹರಣೆಗೆ:-ಒಂದು, ಎರಡು, ಹತ್ತು, ಸಾವಿರ, ಲಕ್ಷ-ಇತ್ಯಾದಿಗಳು.

(ಒಂದು ಮನೆ, ಎರಡು ಕುದುರೆ, ಸಾವಿರ ಆನೆ – ಹೀಗೆ ಸಂಖ್ಯಾವಾಚಕಗಳು ಗುಣವಾಚಕಗ ಳಂತೆ ನಾಮಪದಗಳಿಗೆ ವಿಶೇಷಣಗಳೂ ಆಗಿರುತ್ತವೆ).

 

() ಸಂಖ್ಯೇಯವಾಚಕಗಳು

ಮೂವರು ಮಕ್ಕಳು, ನಾಲ್ವರು ಶಾಸ್ತ್ರಿಗಳು, ಐವರು ವಿದ್ಯಾರ್ಥಿಗಳು-ಎಂಬ ಈ ವಾಕ್ಯಗಳಲ್ಲಿ ಮೂವರು, ನಾಲ್ವರು, ಐವರು ಮೊದಲಾದ ಶಬ್ದಗಳು ಈ ಲೆಕ್ಕದ ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ತಿಳಿಸುತ್ತದಲ್ಲವೆ? ಇಂಥ ಶಬ್ದಗಳಿಂದ ಸಂಖ್ಯೆಯೂ, ವಸ್ತುಗಳೂ ತಿಳಿವಳಿಕೆಗೆ ಬರುತ್ತವೆ.

(೩೭) ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ಹೇಳುವ ಶಬ್ದಗಳೆಲ್ಲ ಸಂಖ್ಯೇಯವಾಚಕಗಳೆನಿಸುವುವು.

ಉದಾಹರಣೆಗೆ:-

ಸಂಖ್ಯೆ ಸಂಖ್ಯೇಯ
ಮೂರು ಮೂವರು, ಮೂರನೆಯ
ಎರಡು ಇಬ್ಬರು, ಎರಡನೆಯ
ಐದು ಐವರು, ಐದನೆಯ

 

() ಭಾವನಾಮಗಳು

(೩೮) ವಸ್ತುಗಳ ಮತ್ತು ಕ್ರಿಯೆಯ ಭಾವವನ್ನು ತಿಳಿಸುವ ಶಬ್ದಗಳೆಲ್ಲ ಭಾವನಾಮಗಳೆನಿಸುವುವು[4].

ಬಿಳಿದರ ಭಾವ – ಬಿಳುಪು (ತದ್ಧಿತಾಂತ ಭಾವನಾಮ)

ಕರಿದರ ಭಾವ – ಕಪ್ಪು   (ತದ್ಧಿತಾಂತ ಭಾವನಾಮ)

ಹಿರಿದರ ಭಾವ – ಹಿರಿಮೆ (ತದ್ಧಿತಾಂತ ಭಾವನಾಮ)

ಪಿರಿದರ ಭಾವ – ಪೆರ‍್ಮೆ=(ಹೆಮ್ಮೆ) (ತದ್ಧಿತಾಂತ ಭಾವನಾಮ)

ನೋಡುವುದರ ಭಾವ – ನೋಟ (ಕೃದಂತ ಭಾವನಾಮ)

ಮಾಡುವುದರ ಭಾವ – ಮಾಟ (ಕೃದಂತ ಭಾವನಾಮ)

ಕೊಡುವುದರ ಭಾವ – ಕೂಟ  (ಕೃದಂತ ಭಾವನಾಮ)

ಇದರ ಹಾಗೆ-ಬೆಳ್ಪು (ಹಳೆಗನ್ನಡ), ಕರ್ಪು (ಹಳೆಗನ್ನಡ), ಕೆಂಪು=ಕೆಚ್ಚನೆಯದರ ಭಾವ, ಪೆಂಪು (ಹಳೆಗನ್ನಡ) ಇವನ್ನೂ ತಿಳಿಯಬಹುದು.

 

() ಪರಿಮಾಣ ವಾಚಕಗಳು

() ಅಷ್ಟು ದೊಡ್ಡ ಕಲ್ಲು () ಇಷ್ಟು ಜನರ ಗುಂಪು () ಎಷ್ಟು ಕಾಸುಗಳು? – ಇತ್ಯಾದಿ ವಾಕ್ಯಗಳಲ್ಲಿ ಅಷ್ಟು, ಇಷ್ಟು, ಎಷ್ಟು ಇತ್ಯಾದಿ ಶಬ್ದಗಳು ಒಂದು ಗೊತ್ತಾದ ಅಳತೆ, ಸಂಖ್ಯೆಯನ್ನು ಹೇಳುವುದಿಲ್ಲ, ಅಂದರೆ ನಿರ್ದಿಷ್ಟಪಡಿಸಿದ ಅಳತೆ, ಸಂಖ್ಯೆ ಇಲ್ಲಿ ಇಲ್ಲ.  ಇಂಥ ಶಬ್ದಗಳು ಕೇವಲ ಪರಿಮಾಣಗಳನ್ನು ಮಾತ್ರ ತಿಳಿಸುತ್ತವೆ.  ಇಂಥ ಶಬ್ದಗಳನ್ನೇ ಪರಿಮಾಣ ವಾಚಕಗಳು ಎನ್ನುತ್ತಾರೆ.

(೩೯) ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಹೇಳುವ ಶಬ್ದಗಳು ಪರಿಮಾಣವಾಚಕಗಳೆನಿಸುವುವು.

ಉದಾಹರಣೆಗೆ:-ಅಷ್ಟು, ಇಷ್ಟು, ಹಲವು, ಕೆಲವು, ಅನಿತು, ಇನಿತು, ಎನಿತು, ಪಲವು-ಇತ್ಯಾದಿಗಳು.

ಪರಿಮಾಣಕ್ಕೆ:- ಹಲವು ದಿನಗಳು, ಕೆಲವು ಊರುಗಳು-ಇತ್ಯಾದಿ.

ಗಾತ್ರಕ್ಕೆ:- ಗುಡ್ಡದಷ್ಟು, ಆನೆಯಷ್ಟು, ಪಲ್ಲದನಿತು-ಇತ್ಯಾದಿ.

ಅಳತೆಗೆ:- ಅಷ್ಟು ದೂರ, ಇಷ್ಟು ಪುಸ್ತಕಗಳು-ಇತ್ಯಾದಿ.

 

() ಪ್ರಕಾರವಾಚಕಗಳು

(೧) ಅಂಥ ಮನುಷ್ಯನುಂಟೇ? (೨) ಅಂತಹ ವಿಚಾರ ಬೇಡ. (೩) ಎಂಥ ಬಣ್ಣ. (೪) ಇಂಥವರೂ ಉಂಟೇ? – ಇತ್ಯಾದಿ ವಸ್ತುಗಳ ಸ್ಥಿತಿ, ರೀತಿಗಳನ್ನು ತಿಳಿಸುತ್ತವೆ.

(೪೦) ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರವಾಚಕಗಳೆನಿಸುವುವು. ಇವೂ ಒಂದು ಬಗೆಯ ಗುಣವಾಚಕಗಳೇ ಅಹುದು.

ಉದಾಹರಣೆಗೆ:- ಅಂಥ, ಅಂಥಹುದು, ಇಂಥ, ಇಂಥದು, ಇಂಥಹುದು, ಎಂತಹ, ಎಂಥ, ಅಂಥವನು, ಅಂಥವಳು, ಅಂಥದು, ಅಂತಹನು, ಇಂತಹನು, ಅಂತಹುದು-ಇತ್ಯಾದಿ.

 

() ದಿಗ್ವಾಚಕಗಳು

(೪೧) ದಿಕ್ಕುಗಳು (ನಿಟ್ಟುಗಳ) ಹೆಸರನ್ನು ಸೂಚಿಸುವ ಶಬ್ದಗಳೆಲ್ಲ ದಿಗ್ವಾಚಕಗಳೆ ನಿಸುವುವು.

ಉದಾಹರಣೆಗೆ:- ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ವಾಯುವ್ಯ, ಆಗ್ನೇಯ, ನೈಋತ್ಯ, ಮೂಡಲು, ತೆಂಕಲು, ಬಡಗಲು, ಪಡುವಲು, ಆಚೆ, ಈಚೆ-ಇತ್ಯಾದಿಗಳು.

 

() ಸರ್ವನಾಮಗಳು

ಶ್ರೀರಾಮನು ಕಾಡಿಗೆ ಹೋದನು.  ಅವನ ಸಂಗಡ ಸೀತಾಲಕ್ಷ್ಮಣರೂ ಹೊರಟರು.  ಅವರು ಅಲ್ಲಿ ಪರ್ಣಶಾಲೆಯಲ್ಲಿ ವಾಸಿಸುತ್ತಿದ್ದರು.

ಈ ವಾಕ್ಯಗಳಲ್ಲಿ ಅವನ ಸಂಗಡ ಎಂದರೆ ರಾಮನ ಸಂಗಡ ಎಂದು ಅರ್ಥ.  ಅವರು ಅಲ್ಲಿ ಎಂದರೆ ರಾಮಲಕ್ಷ್ಮಣಸೀತೆಯರು ಆ ಕಾಡಿನಲ್ಲಿ ಎಂದು ಅರ್ಥ.  ಅವನು, ಅವರು, ಅಲ್ಲಿ ಇತ್ಯಾದಿ ಶಬ್ದಗಳು ನಾಮಪದಗಳ ಸ್ಥಾನದಲ್ಲಿ ಬಳಸುವ ಬೇರೊಂದು ಬಗೆಯ ಶಬ್ದಗಳು.  ಹೀಗೆ ಸರ್ವ ವಸ್ತುವಾಚಕಗಳ ಸ್ಥಾನದಲ್ಲೂ ಅವಕ್ಕೆ ಬದಲಾಗಿ ಕೆಲವು ಬೇರೆ ಬಗೆಯ ಶಬ್ದಗಳನ್ನು ಪ್ರಯೋಗಿಸುತ್ತೇವೆ.  ಇಂಥ ಶಬ್ದಗಳೇ ಸರ್ವನಾಮಗಳು.

(೪೨) ವಸ್ತುವಾಚಕಗಳಾದ ನಾಮಪದಗಳ ಸ್ಥಾನದಲ್ಲಿ ನಿಂತು ಅವನ್ನು ಬೋಧಿಸುವ (ಸೂಚಿಸುವ) ಶಬ್ದಗಳೆಲ್ಲ ಸರ್ವನಾಮಗಳೆನಿಸುವುವು.

ಉದಾಹರಣೆಗೆ:- ಅದು, ಇದು, ಯಾವುದು, ಎಲ್ಲಾ (ಎಲ್ಲ), ಏನು, ಅವನು, ಇವನು, ಯಾವನು,  ಅವಳು,  ಇವಳು,  ಯಾವಳು,  ತಾನು, ತಾವು, ನೀನು, ನೀವು, ಆವುದು, ಆರು,

ಆರ್***, ಏನು, ಏನ್***, ಆಂ (ಆನ್) ***, ನಾಂ (ನಾನ್) ***, ನೀಂ (ನೀನ್)*** -ಇತ್ಯಾದಿಗಳು.

ಮೇಲಿನ ಉದಾಹರಣೆಗಳಲ್ಲಿ ಬಂದಿರುವ ಸರ್ವನಾಮಗಳನ್ನು ಮೂರು ಭಾಗ ಮಾಡಬಹುದು.

(೧) ಪುರುಷಾರ್ಥಕ ಸರ್ವನಾಮಗಳು.

(೨) ಪ್ರಶ್ನಾರ್ಥಕ ಸರ್ವನಾಮಗಳು.

(೩) ಆತ್ಮಾರ್ಥಕ ಸರ್ವನಾಮಗಳು.

. ಪುರುಷಾರ್ಥಕ ಸರ್ವನಾಮಗಳು

ಉದಾಹರಣೆಗೆ:-

(i) ನಾನು-ನಾವು ಇವು ಉತ್ತಮ ಪುರುಷ ಸರ್ವನಾಮಗಳು.
(ii) ನೀನು-ನೀವು ಇವು ಮಧ್ಯಮ ಪುರುಷ ಸರ್ವನಾಮಗಳು.
(iii) ಅವನು-ಅವರು

ಅವಳು-ಅವರು

ಅದು-ಅವು

ಇವು ಪ್ರಥಮ ಪುರಷ ಸರ್ವನಾಮಗಳು

 

. ಪ್ರಶ್ನಾರ್ಥಕ ಸರ್ವನಾಮಗಳು

 

ಉದಾಹರಣೆಗೆ:- ಯಾವುದು, ಏನು, ಏತರದು, ಆವುದು, ಏನು, ಏನ್ ಇತ್ಯಾದಿಗಳು ಪ್ರಶ್ನಾರ್ಥಕ ಸರ್ವನಾಮಗಳು.  (ಇವೆಲ್ಲ ಪ್ರಶ್ನೆಗೆ ಸಂಬಂಧಿಸಿದ ಸರ್ವನಾಮ ಶಬ್ದಗಳಾದ್ದರಿಂದ ಹಾಗೆ ಹೆಸರು).

. ಆತ್ಮಾರ್ಥಕ ಸರ್ವನಾಮಗಳು

 

ಉದಾಹರಣೆಗೆ:- ತಾನು-ತಾವು ಇವುಗಳನ್ನು ಆತ್ಮಾರ್ಥಕ ಸರ್ವನಾಮಗಳೆಂದು ಹೇಳುವುದು ವಾಡಿಕೆ.

ಇದುವರೆಗೆ ಹೇಳಿದ (೧) ವಸ್ತುವಾಚಕ, (೨) ಗುಣವಾಚಕ, (೩) ಸಂಖ್ಯಾವಾಚಕ, (೪) ಸಂಖ್ಯೇಯವಾಚಕ, (೫) ಭಾವನಾಮ, (೬) ಪರಿಮಾಣವಾಚಕ, (೭) ಪ್ರಕಾರವಾಚಕ, (೮) ದಿಗ್ವಾಚಕ, (೯) ಸರ್ವನಾಮ-ಪ್ರಕೃತಿಗಳು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಗಳಿಂದಲೂ, ಏಕವಚನ, ಬಹುವಚನ ಭೇದಗಳಿಂದಲೂ, ಉ, ಅನ್ನು, ಇಂದ, ಗೆ, ಕ್ಕೆ, ದೆಸೆಯಿಂದ, ಅ, ಅಲ್ಲಿ, ಏ*, ಇರಾ*, ಈ*, ಆ*, ಇತ್ಯಾದಿ ವಿಭಕ್ತಿ ಪ್ರತ್ಯಯಗಳಿಂದಲೂ ಅನೇಕ ರೂಪ ಭೇದಗಳನ್ನು ಭಾಷೆಯಲ್ಲಿ ಪಡೆಯುವುವು.  ಅವುಗಳ ವಿವರವನ್ನು ಈಗ ತಿಳಿಯೋಣ.


[1] ಸಮಾಸವೆಂದರೆ ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಗುಣವಾಗಿ ಸೇರಿ ಒಂದು ಪದವಾಗುವಿಕೆ.  ಗಿಡಮರ, ಮರಗಾಲು, ಅರಮನೆ-ಇವು ಸಮಸ್ತ (ಸಮಾಸ) ಪದಗಳು.  ಇವುಗಳಲ್ಲಿ ಗಿಡವೂ+ಮರವೂ=ಗಿಡಮರ ಎಂದೂ, ಮರದ+ಕಾಲು=ಮರಗಾಲು ಎಂದೂ, ಅರಸನ+ಮನೆ=ಅರಮನೆ ಎಂದೂ ಎರಡೆರಡು ಪದಗಳು ಸೇರಿರುವುದನ್ನು ಗಮನಿಸಿರಿ.

[2] ಧಾತುಗಳಿಗೆ (ಕ್ರಿಯಾಪ್ರಕೃತಿಗಳಿಗೆ) ಕೃತ್ ಪ್ರತ್ಯಯಗಳು ಸೇರಿ ಕೃದಂತಗಳೆನಿಸುವುವು.  ಮಾಡು+ಅ=ಮಾಡುವ, ಇದರಂತೆ-ಹೋಗುವ, ಬರುವ, ನೋಟ, ಮಾಟ, ಓಟ ಇತ್ಯಾದಿ.

[3] ನಾಮಪದಗಳ ಮೇಲೆ ಹಲವಾರು ಅರ್ಥಗಳಲ್ಲಿ ಗಾರ, ಕಾರ, ಆಡಿಗ ಇತ್ಯಾದಿ ಪ್ರತ್ಯಯ ಸೇರಿ ಆದ-ಮೋಸಗಾರ, ಮಾಲೆಗಾರ, ಹಾವಾಡಿಗ, ಹೂವಾಡಿಗ, ಗಾಣಿಗ ಇತ್ಯಾದಿಗಳು ತದ್ಧಿತಾಂತಗಳು.

[4] ಭಾವನಾಮಗಳಲ್ಲಿ ಧಾತುಗಳಿಂದ ಹುಟ್ಟತಕ್ಕವೆಲ್ಲ ಕೃದಂತಭಾವನಾಮಗಳೆಂದೂ, ನಾಮಪ್ರಕೃತಿ ಗಳಿಂದುಂಟಾಗುವ ಭಾವನಾಮಗಳನ್ನು ತದ್ಧಿತಾಂತ ಭಾವನಾಮಗಳೆಂದೂ ಹೇಳುವರು.  ಈ ವಿಷಯವನ್ನು ಆಯಾಪ್ರಕರಣಗಳಲ್ಲಿ ವಿವರವಾಗಿ  ತಿಳಿಯುತ್ತೀರಿ.  ಆ ವಿಷಯವನ್ನಿಲ್ಲಿ ಸ್ಥೂಲವಾಗಿ ತಿಳಿಸಿದೆ, ಅಷ್ಟೆ.

*** ಈ ಸರ್ವನಾಮಗಳೆಲ್ಲ ಹಳಗನ್ನಡದಲ್ಲಿ ಬಳಕೆಯಲ್ಲಿವೆ.  ಹಳಗನ್ನಡ ಕಾವ್ಯಗಳನ್ನು ಓದುವ ವಿದ್ಯಾರ್ಥಿಗಳಾದ ನೀವು ಇವುಗಳ ಬಗೆಗೆ ತಿಳಿದಿರಬೇಕು.

*** “

*** “

*** “

*** “

* ಏ, ಇರಾ, ಈ, ಆ, ವಿಭಕ್ತಿಪ್ರತ್ಯಯಗಳು ಸರ್ವನಾಮಗಳಿಗೆ ಹತ್ತುವುದಿಲ್ಲ.

* “

* “

* “