ಕರ್ತರಿ ಪ್ರಯೋಗ ಕರ್ಮಣಿ ಪ್ರಯೋಗ
ರಾಮನು ಹೊಲವನ್ನು ಕೊಂಡನು ರಾಮನಿಂದ ಹೊಲವು ಕೊಳ್ಳಲ್ಪಟ್ಟಿತು
ಭೀಮನು ಅನ್ನವನ್ನು ಉಂಡನು ಭೀಮನಿಂದ ಅನ್ನವು ಉಣ್ಣಲ್ಪಟ್ಟಿತು

ಮೇಲಿನ ವಾಕ್ಯಗಳಲ್ಲಿ ಕರ್ತರಿ ಪ್ರಯೋಗದಲ್ಲಿರುವ ರಾಮನು-ಭೀಮನು-ಎಂಬ ಈ ಕರ್ತೃಪದಗಳು ಪುಲ್ಲಿಂಗಗಳಾಗಿದ್ದು, ಈ ಕರ್ತೃಪದದ ಲಿಂಗವನ್ನೇ-ಕೊಂಡನು, ಉಂಡನು ಎಂಬ ಕ್ರಿಯಾಪದಗಳು ಹೊಂದಿ ಅವೂ ಪುಲ್ಲಿಂಗಗಳಾಗಿವೆ.  ಕರ್ಮಣಿ ಪ್ರಯೋಗದಲ್ಲಿ ಹೀಗಾಗುವುದಿಲ್ಲ.  ಅಲ್ಲಿ ಕ್ರಿಯಾಪದಗಳಾದ ಕೊಳ್ಳಲ್ಪಟ್ಟಿತು, ಉಣ್ಣಲ್ಪಟ್ಟಿತು – ಎಂಬ ಕ್ರಿಯಾಪದಗಳು ಹೊಲವು, ಅನ್ನವು ಎಂಬ ಕರ್ಮಪದಗಳ ಲಿಂಗವನ್ನು ಎಂದರೆ-ನಪುಂಸಕಲಿಂಗವನ್ನು ಹೊಂದಿವೆ.

(೭೦) ಕ್ರಿಯಾಪದಕ್ಕೆ ಕರ್ತರಿಪ್ರಯೋಗದಲ್ಲಿ (ಸಕರ್ಮಕ, ಅಕರ್ಮಕ ಕರ್ತರಿ ಪ್ರಯೋಗಗಳಲ್ಲಿ) ಕರ್ತೃವಿನ ಲಿಂಗವಚನಗಳೂ, ಕರ್ಮಣಿ ಪ್ರಯೋಗದಲ್ಲಿ ಕರ್ಮಪದದ ಲಿಂಗವಚನಗಳೂ ಬರುತ್ತವೆ.

ಉದಾಹರಣೆಗೆ:-

ಕರ್ತರಿ ಶಂಕರನು ಊರನ್ನು ಸೇರಿದನು. (ಪುಲ್ಲಿಂಗ)

ಕರ್ಮಣಿ ಶಂಕರನಿಂದ ಊರು ಸೇರಲ್ಪಟ್ಟಿತು. (ನಪುಂಸಕಲಿಂಗ)

ಕರ್ತರಿ ಕವಿಯು ಕಾವ್ಯವನ್ನು ಬರೆಯುತ್ತಾನೆ. (ಪುಲ್ಲಿಂಗ)

ಕರ್ಮಣಿ ಕವಿಯಿಂದ ಕಾವ್ಯವು ಬರೆಯಲ್ಪಡುತ್ತದೆ. (ನಪುಂಸಕಲಿಂಗ)

ಕರ್ತರಿ ತಾಯಿಯು ಹಾಲನ್ನು ಕೊಡುವಳು. (ಸ್ತ್ರೀಲಿಂಗ)

ಕರ್ಮಣಿ ತಾಯಿಯಿಂದ ಹಾಲು ಕೊಡಲ್ಪಡುವುದು. (ನಪುಂಸಕಲಿಂಗ)

ಕರ್ತರಿ ಅವನು ನನ್ನನ್ನು ಹೊಡೆದನು. (ಪುಲ್ಲಿಂಗ)

ಕರ್ಮಣಿ ಅವನಿಂದ ನಾನು ಹೊಡೆಯಲ್ಪಟ್ಟೆನು. (ಪುಲ್ಲಿಂಗ)

ಕರ್ತರಿತಂದೆಯು ಮಗುವನ್ನು ರಕ್ಷಿಸುವನು. (ಪುಲ್ಲಿಂಗ)

ಕರ್ಮಣಿತಂದೆಯಿಂದ ಮಗವು ರಕ್ಷಿಸಲ್ಪಡುವುದು. (ನಪುಂಸಕಲಿಂಗ)

ಒಂದು ಕ್ರಿಯೆಗೆ ಅನೇಕ ಕರ್ತೃಗಳು ಇದ್ದಾಗ ಕ್ರಿಯಾಪದದ ರೂಪ ಹೇಗಾಗುತ್ತದೆ?

(೧) ಆನೆಯೂ, ಕುದುರೆಯೂ, ಒಂಟೆಯೂ, ಮನುಷ್ಯರೂ ಬಂದರು.

(೨) ಮನುಷ್ಯರೂ, ಕುದುರೆಗಳೂ, ಆನೆಗಳೂ, ದನಗಳೂ ಬಂದವು.

ಮೇಲಿನ ವಾಕ್ಯಗಳಲ್ಲಿ ಬಂದರು ಎಂಬ ಕ್ರಿಯಾಪದವನ್ನು ವಿಚಾರಿಸಿ ನೋಡಿರಿ.  ಈ ಕ್ರಿಯಾಪದಕ್ಕೆ ಕರ್ತೃಸ್ಥಾನದಲ್ಲಿ ಆನೆಯೂ, ಕುದುರೆಯೂ, ಒಂಟೆಯೂ, ಮನುಷ್ಯರೂ ಎಂಬ ನಾಲ್ಕು ಬಗೆಯ ಕರ್ತೃಪದಗಳಿವೆ.  ಇವುಗಳಲ್ಲಿ ಆನೆ, ಕುದುರೆ, ಒಂಟೆ ಇವು ನಪುಂಸಕ ಲಿಂಗಗಳು. ಮನುಷ್ಯರು ಎಂಬ ಕರ್ತೃಪದ ಪುಲ್ಲಿಂಗವಾಗಿ ಕೊನೆಯ ಕರ್ತೃಪದವಾಗಿದೆ.  ಆದ್ದರಿಂದ ಬಂದರು ಎಂಬ ಕ್ರಿಯಾಪದವು ಕೊನೆಯ ಕರ್ತೃಪದವಾದ ಪುಲ್ಲಿಂಗದ ಲಿಂಗವನ್ನೇ ಹೊಂದಿದೆ.

ಎರಡನೆಯ ವಾಕ್ಯದಲ್ಲಿ ಮನುಷ್ಯರು, ಆನೆಗಳು, ಕುದುರೆಗಳು, ದನಗಳು-ಎಂಬ ನಾಲ್ಕು ಕರ್ತೃಪದಗಳು ಬಂದವು ಎಂಬ ಕ್ರಿಯಾಪದಕ್ಕೆ ಇವೆ.  ಮನುಷ್ಯ ಎಂಬ ಮೊದಲನೆಯ ಪದ ಪುಲ್ಲಿಂಗವಾಗಿದ್ದು ಉಳಿದ ಮೂರು ನಪುಂಸಕಲಿಂಗಗಳಾಗಿವೆ.  ಕೊನೆಯ ಕರ್ತೃಪದವಾದ ದನಗಳು ಎಂಬುದು ನಪುಂಸಕಲಿಂಗವೇ ಆಗಿದ್ದು ಬಂದವು ಎಂಬ ಕ್ರಿಯಾಪದವೂ ನಪುಂಸಕ ಲಿಂಗವೇ ಆಗಿದೆ.  ಅದ್ದರಿಂದ-

(೭೧) ಭಿನ್ನಭಿನ್ನವಾದ ಅನೇಕ ಕರ್ತೃಪದಗಳು ಒಂದು ಕ್ರಿಯೆಗೆ ಇರುವಾಗ ಕೊನೆಯ ಕರ್ತೃಪದದ ಲಿಂಗವೇ ಕ್ರಿಯಾಪದಕ್ಕೆ ಬರುವುದು.

ಉದಾಹರಣೆಗೆ:-

ಬೇಟೆಗಾರನೂ, ನಾಯಿಗಳೂ ಬಂದವು. (ನಪುಂಸಕಲಿಂಗ)

ನಾಯಿಗಳೂ, ಬೇಟೆಗಾರನೂ ಬಂದರು. (ಪುಲ್ಲಿಂಗ)

ಹಸುವೂ, ಎತ್ತೂ, ಹುಡುಗನೂ ಬಂದರು. (ಪುಲ್ಲಿಂಗ)

ಹುಡುಗನೂ, ಹಸುವೂ, ಎತ್ತೂ ಬಂದವು. (ನಪುಂಸಕಲಿಂಗ)

ಸರ್ವನಾಮಗಳು ಕರ್ತೃಪದವಾಗಿದ್ದಾಗ ಕ್ರಿಯಾಪದದ ರೂಪಗಳು ಹೇಗಾಗುತ್ತವೆ?

(ಅ) ಅವನೂ, ನೀನೂ, ಕೂಡಿ ಬಂದಿರಿ.

(ಆ) ಅವಳೂ, ನೀವೂ, ಒಟ್ಟಿಗೆ ಬಂದಿರಿ.

(ಇ) ನೀನೂ, ಆತನೂ ಕೂಡಿ ಹೋದಿರಿ.

ಮೇಲಿನ ವಾಕ್ಯಗಳಲ್ಲಿ ಅವನು ಎಂಬ ಸರ್ವನಾಮವು ಮೊದಲನೆಯ ವಾಕ್ಯದಲ್ಲಿದ್ದು ಕರ್ತೃಪದವಾಗಿದೆ.  ಅದು ಪ್ರಥಮ ಪುರುಷ ಪುಲ್ಲಿಂಗವಾಗಿದೆ.  ಎರಡನೆಯ ಕರ್ತೃವಾದ ನೀನು ಎಂಬುದು ಮಧ್ಯಮ ಪುರುಷ.  ಕ್ರಿಯಾಪದವಾದ ಬಂದಿರಿ ಎಂಬುದೂ ಮಧ್ಯಮ ಪುರುಷವೇ ಆಗಿದೆ.

೨ ನೆಯ ವಾಕ್ಯದಲ್ಲಿ ಅವಳು ಎಂಬ ಕರ್ತೃಪದ ಪ್ರಥಮ ಪುರುಷ ಸರ್ವನಾಮ, ನೀವು ಎಂಬುದು ಮಧ್ಯಮ ಪುರುಷ.  ಬಂದಿರಿ ಎಂಬ ಕ್ರಿಯಾಪದವೂ ಕೂಡ ಮಧ್ಯಮ ಪುರುಷವೇ ಆಗಿದೆ.

೩ ನೆಯ ವಾಕ್ಯದಲ್ಲಿ ನೀನು ಎಂಬ ಕರ್ತೃಪದ ಮಧ್ಯಮ ಪುರುಷ, ಆತನು ಎಂಬ ಕರ್ತೃ ಪದದ ಪ್ರಥಮ ಪುರುಷ, ಕ್ರಿಯಾಪದವೂ ಕೂಡ ಮಧ್ಯಮ ಪುರುಷವೇ ಆಯಿತು.

(೭೨) ನೀನು ಎಂಬ ಮಧ್ಯಮ ಪುರುಷ ಸರ್ವನಾಮವು ಕರ್ತೃವಾಗಿ, ಜೊತೆಗೆ ಪ್ರಥಮ ಪುರುಷ ಸರ್ವನಾಮದ ಕರ್ತೃಪದ ಬೇರೆ ಇದ್ದರೂ ಕ್ರಿಯಾ ಪದವು ಮಧ್ಯಮ ಪುರುಷದಲ್ಲಿ ಇರುತ್ತದೆ.

ಉದಾಹರಣೆಗೆ:-

ನೀನೂ ರಾಮನೂ ಬಂದಿರಿ.

ರಾಮನೂ ನೀನೂ ಬಂದಿರಿ.

ಸೀತೆಯು, ರಾಮನೂ, ನೀನೂ ಬಂದಿರಿ.

ಇದರಂತೆಯೇ

(೭೩) ನಾನು ಎಂಬ ಉತ್ತಮ ಪುರುಷ ಸರ್ವನಾಮವೂ, ಇತರ ಸರ್ವನಾಮಗಳೂ ಒಂದೇ ಕ್ರಿಯೆಗೆ ಕರ್ತೃಗಳಾಗಿದ್ದಾಗ ಕ್ರಿಯಾಪದವು ಉತ್ತಮ ಪುರುಷವೇ ಆಗುವುದು.

ಉದಾಹರಣೆಗೆ:-

ನಾನೂ, ಅವನೂ, ನೀನೂ ಬಂದೆವು.

ನೀನೂ, ನಾನೂ ಕೂಡಿ ಹೋದೆವು.

ಅವನೂ, ನಾನೂ ಸೇರಿ ಉಂಡೆವು.