() ಸಕರ್ಮಕ ಧಾತುಗಳು

ಈ ಕೆಳಗಿನ ವಾಕ್ಯವನ್ನು ಗಮನಿಸಿರಿ:-

ರಾಮನು ಮರವನ್ನು ಕಡಿದನು.  ಈ ವಾಕ್ಯದಲ್ಲಿ ಏನನ್ನು ಕಡಿದನು? ಎಂದು ಪ್ರಶ್ನಿಸಿದರೆ, ಮರವನ್ನು ಎಂಬ ಉತ್ತರ ಬರುತ್ತದೆ.  ಯಾರು? ಎಂದು ಪ್ರಶ್ನೆ ಮಾಡಿದರೆ ರಾಮ ಎಂಬ ಉತ್ತರ ಬರುತ್ತದೆ.  ಕಡಿಯುವ ಕೆಲಸ ಮಾಡಿದನಾದ್ದರಿಂದ ರಾಮನು ಎಂಬ ಪದವು ಕರ್ತೃಪದವೆನಿಸಿತು.  ಏನನ್ನು ಕಡಿದನೋ ಅದೇ ಕರ್ಮ.  ಆದ್ದರಿಂದ ಮರವನ್ನು ಎಂಬುದು ಕರ್ಮಪದ.  ಕಡಿದನು ಎಂಬುದು ಕ್ರಿಯಾಪದ.  ಕಡಿದನು – ಎಂಬ ಕ್ರಿಯೆಗೆ ಏನನ್ನು? ಎಂಬ ಪ್ರಶ್ನೆ ಮಾಡಿದಾಗ ಬರುವ ಉತ್ತರವೇ ಕರ್ಮ.  ಈ ವಾಕ್ಯವು ಕರ್ಮಪದವನ್ನುಳ್ಳ ವಾಕ್ಯವೆಂದಹಾಗಾಯಿತು.  ಇದರ ಹಾಗೆ ಕೆಳಗಿನ ಕೆಲವು ವಾಕ್ಯಗಳನ್ನು ನೋಡಿರಿ:

ಕರ್ತೃಪದ ಕರ್ಮಪದ ಕ್ರಿಯಾಪದ ಧಾತು
ದೇವರು ಲೋಕವನ್ನು ರಕ್ಷಿಸುವನು ರಕ್ಷಿಸು
ಶಿಲ್ಪಿಗಳು ಗುಡಿಯನ್ನು ಕಟ್ಟಿದರು ಕಟ್ಟು
ವಿದ್ಯಾರ್ಥಿಗಳು ಪಾಠವನ್ನು ಓದಿದರು ಓದು
ಹುಡುಗರು ಮನೆಯನ್ನು ಸೇರಿದರು ಸೇರು

ಇಲ್ಲಿ ರಕ್ಷಿಸುವನು, ಕಟ್ಟಿದರು, ಓದಿದರು, ಸೇರಿದರು ಇತ್ಯಾದಿ ಕ್ರಿಯಾಪದಗಳನ್ನುಳ್ಳ ವಾಕ್ಯಗಳಲ್ಲಿ ಕರ್ಮಪದ ಇದ್ದೇ ಇರಬೇಕು.  ರಕ್ಷಿಸುವನು ಎಂಬ ಕ್ರಿಯೆಗೆ ಏನನ್ನು ಎಂಬ ಪ್ರಶ್ನೆ ಹುಟ್ಟೇ ಹುಟ್ಟುತ್ತದೆ.  ಆದ್ದರಿಂದ ರಕ್ಷಿಸು ಎಂಬ ಧಾತು ಕರ್ಮಪದವನ್ನು ಅಪೇಕ್ಷಿಸುವ ಧಾತು.  ಇದರ ಹಾಗೆಯೇ ಕಟ್ಟು, ಓದು, ಮಾಡು, ತಿನ್ನು, ಬರೆ ಇತ್ಯಾದಿ ಧಾತುಗಳಿಗೆ ಕರ್ಮಪದ ಬೇಕೇ ಬೇಕು.  ಇಂಥ ಧಾತುಗಳೇ ಸಕರ್ಮಗಳು.

(೫೮) ಕರ್ಮಪದವನ್ನು ಅಪೇಕ್ಷಿಸುವ ಧಾತುಗಳೆಲ್ಲ ಸಕರ್ಮಕ ಧಾತುಗಳು.

ಉದಾಹರಣೆಗೆ:- ಮಾಡು, ಕೊಡು, ಕೆರೆ, ಬಿಡು, ಉಣ್ಣು, ತೊಡು, ಇಕ್ಕು, ಉಜ್ಜು, ದಾಟು, ಮೆಟ್ಟು, ತಿದ್ದು, ತುಂಬು, ನಂಬು, ಹೊಡೆ, ತಡೆ, ಹೀರು, ಸೇರು, ಹೊಯ್, ಸೆಯ್, ಕೆತ್ತು, ಕಡಿ, ತರ್ (ತರು), ಕೊಯ್, ಮುಚ್ಚು, ತೆರೆ, ಕತ್ತರಿಸು-ಇತ್ಯಾದಿ.

() ಅಕರ್ಮಕ ಧಾತುಗಳು

ಕೆಲವು ಧಾತುಗಳಿಗೆ ಕರ್ಮಪದದ ಅವಶ್ಯಕತೆ ಇರುವುದಿಲ್ಲ.  ಕೆಳಗಿನ ಈ ವಾಕ್ಯಗಳನ್ನು ಗಮನಿಸಿರಿ:-

  ಕರ್ತೃಪದ ಕ್ರಿಯಾಪದ ಧಾತು
(i) ಕೂಸು ಮಲಗಿತು ಮಲಗು
(ii) ರಾಮನು ಓಡಿದನು ಓಡು
(iii) ಆಕಾಶ ಹೊಳೆಯುತ್ತದೆ ಹೊಳೆ
(iv) ಅವನು ಬದುಕಿದನು ಬದುಕು
(v) ಗಿಡವು ಹುಟ್ಟಿತು ಹುಟ್ಟು

ಮೇಲಿನ ವಾಕ್ಯಗಳಲ್ಲಿ ಕರ್ಮಪದಗಳಿಲ್ಲ.  ಮಲಗಿತು ಎಂಬ ಕ್ರಿಯಾಪದಕ್ಕೆ ಏನನ್ನು? ಎಂಬ ಪ್ರಶ್ನೆ ಮಾಡಲು ಉತ್ತರ ಬರುವುದಿಲ್ಲ.  ಏನನ್ನು ಮಲಗಿತು? ಎಂದು ಯಾರೂ ಕೇಳುವುದಿಲ್ಲ.  ಅದರಂತೆ ಏನನ್ನು ಓಡಿತು? ಎಂದು ಯಾರೂ ಕೇಳುವುದಿಲ್ಲ.  ಅಂದರೆ ಈ ಕ್ರಿಯೆಗಳಿಗೆ ಕರ್ಮಪದಗಳು ಬೇಕಾಗಿಲ್ಲ.

(೫೯) ಕರ್ಮಪದದ ಅಪೇಕ್ಷೆಯಿಲ್ಲದ ಧಾತುಗಳನ್ನು ಅಕರ್ಮಕ ಧಾತುಗಳೆನ್ನುವರು.

ಉದಾಹರಣೆಗೆ:- ಮಲಗು, ಓಡು, ಇರು, ಬದುಕು, ಬಾಳು, ಹೋಗು, ಬರು, ನಾಚು, ಹೆದರು, ಬೀಳು, ಏಳು, ಸೋರು, ಇಳಿ, ಉರುಳು-ಇತ್ಯಾದಿ.

ಈಗ ಅಕರ್ಮಕ ಸಕರ್ಮಕ ವಾಕ್ಯ ನೋಡಿರಿ

ಅಕರ್ಮಕ ವಾಕ್ಯಗಳು ಸಕರ್ಮಕ ವಾಕ್ಯಗಳು
(೧) ಮಗು ಮಲಗಿತು ಮಗು ಹಾಲನ್ನು ಕುಡಿಯಿತು
(೨) ಹುಡುಗ ಓಡಿದನು ಹುಡುಗನು ಪುಸ್ತಕವನ್ನು ಓದಿದನು
(೩) ತಂದೆ ಇದ್ದಾರೆ ತಂದೆ ಊಟವನ್ನು ಮಾಡಿದನು
(೪) ಅವನು ಬದುಕಿದನು ಅವನು ದೇವರನ್ನು ನೆನೆದನು
(೫) ಅಕ್ಕ ಬಂದಳು ಅಕ್ಕ ಅಡಿಗೆಯನ್ನು ಮಾಡಿದಳು
(೬) ಅವನು ಬಾಳಿದನು ಅವನು ಊರನ್ನು ಸೇರಿದನು
  (ಇಲ್ಲಿ ಕರ್ಮಪದದ ಅವಶ್ಯಕತೆ ಇಲ್ಲ) (ಇಲ್ಲಿ ಕರ್ಮಪದ ಬೇಕೇ ಬೇಕು)