ಸಸ್ಯಗಳು ಬೆಳೆಯಲು ನೀರು ಬೇಕೇ ಬೇಕು. ಮಣ್ಣಿನಲ್ಲಿರುವ ಪೋಷಕಾಂಶಗಳು ಬೇರಿನ ಮೂಲಕ ಸಸ್ಯದ ವಿವಿಧ ಭಾಗಗಳಿಗೆ ಒದಗುತ್ತವೆ. ಈ ಕ್ರಿಯೆಗೆ ನೀರು ಸಹಕಾರಿಯಾಗುವುದು. ನಿರ್ದಿಷ್ವ ಪ್ರಮಾಣದಲ್ಲಿ ಸಸ್ಯಗಳಿಗೆ ನೀರು ದೊರೆಯದೇ ಇದ್ದರೆ ಬೆಳವಣಿಗೆ ಕುಂಠಿತಗೊಂಡು ಇಳುವರಿಯಲ್ಲಿ ಗಮನಾರ್ಹ ವ್ಯತ್ಯಾಸಗಳು ಕಂಡುಬರುವುವು.

ಬಹುವಾರ್ಷಿಕ ಬೆಳೆಗಳಿಗೆ ಆರಂಭದ ಕೆಲವು ವರ್ಷಗಳಲ್ಲಿ ಸೂಕ್ತ ಪ್ರಮಾಣದಲ್ಲಿ ನೀರು ಪೂರೈಕೆಯಾಗುವಂತೆ ನೋಡಿಕೊಂಡರೆ ನಂತರ ಮೊದಲಿನಂತೆ ನೀರು ಪೂರೈಸುವ ಅಗತ್ಯವಿರುವುದಿಲ್ಲ. ಅವು ಮಳೆಯನ್ನು ಅವಲಂಬಿಸಿ ಬದುಕುಳಿದು ಫಲ ನೀಡುತ್ತವೆ. ಆದಾಗ್ಯೂ ದೊಡ್ಡ ಗಿಡಗಳಿಗೆ ಸೂಕ್ತ ಪ್ರಮಾಣದಲ್ಲಿ ನೀರು ಪೂರೈಸಿದರೆ ಚೆನ್ನಾಗಿ ಬೆಳೆದು ಅಧಿಕ ಇಳುವರಿ ನೀಡುತ್ತವೆ. ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಗಿಡಗಳಿಗೆ ನೀರು ಪೂರೈಸುವುದು ಅಗತ್ಯ ಉದಾ, ಬಾರೆ ಹಣ್ಣಾಗುವ ಸಮಯದಲ್ಲಿ ನೀರು ಪೂರೈಸಬೇಕು. ಹೆಚ್ಚು ನೀರಿನ ಅಗತ್ಯತೆ ಹೊಂದಿರುವ ಬಾಳೆ, ನಿಂಬೆ, ದ್ರಾಕ್ಷಿ ಇತ್ಯಾದಿ ಬೆಳೆಗಳಿಗೆ ಹೆಚ್ಚು ನೀರನ್ನು ಕೊಡುವುದು ಅಗತ್ಯ. ಮಾವು, ಚಿಕ್ಕು, ಬಾರೆ ಇತ್ಯಾದಿ ಬೆಳೆಗಳನ್ನು ಖುಷ್ಕಿ ತೋಟಗಾರಿಕೆಯಲ್ಲಿ ಬೆಳೆಯಬಹುದು. ಆದರೆ ಈ ಬೆಳೆಗಳಿಗೂ ಸೂಕ್ತ ಪ್ರಮಾಣದ ನೀರು ಒದಗಿಸಿದಲ್ಲಿ ಹೆಚ್ಚಿನ ಇಳುವರಿ ಕೊಡುತ್ತವೆ.

ನೀರನ್ನು ಯಾವ ಸಂದಭ್ದಲ್ಲಿ ಪೂರೈಸಬೇಕೆಂಬುದು ಮುಖ್ಯ. ತೋಟದಲ್ಲಿ ಆಗಾಗ ಗಿಡಗಳನ್ನು ವೀಕ್ಷಿಸುತ್ತಿರಬೇಕು. ಚಿಗುರೆಲೆಗಳು ಬಾಡುವ ಸೂಚನೆ ತೋರಿದಾಗ ಅಗತ್ಯತೆಗನುಸಾರವಾಗಿ ನೀರು ಕೊಡಬೇಕು. ಆದರೆ ಬಿಸಿಲಿನಿಂದ ಕಾಯ್ದ ಗಿಡಗಳಿಗೆ ಒಮ್ಮೆಲೆ ಸಾಕಷ್ಟು ನೀರು ಪೂರೈಕೆ ಮಾಡಬಾರದು. ಹಾಗೆ ಮಾಡಿದರೆ ಕಾಯಿ ಮತ್ತು ಹಣ್ಣುಗಳು ಬಿರಿಯುತ್ತವೆ. ಕಾಂಡದ ಸಿಪ್ಪೆ ಸುಲಿಯುವಿಕೆ ಪ್ರಾರಂಭವಾಗುವುದು. ಅಗತ್ಯತೆಗಿಂತ ಕಡಿಮೆ ನೀರು ಕೊಡುವುದರಿಂದ ಬೆಳೆಗಳ ಬೆಳವಣಿಗೆ ಕುಂಠಿತಗೊಳ್ಳುವುದು ಮತ್ತು ನೀರು ಹೆಚ್ಚಾಗಿದೆಯೆಂದು ಗೊತ್ತುಗುರಿ ಇಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕೊಡುವುದರಿಂದ ಅದು ವ್ಯರ್ಥವೆನಿಸುವುದಲ್ಲದೆ ಬೆಳೆಗಳಿಗೆ ಹಾನಿಯುಂಟಾಗುವುದು.

ಎಲ್ಲರ ಮನೆಯ ಕೈತೋಟದ ಕ್ಷೇತ್ರ ಒಂದೇ ಆಗಿರುವುದಿಲ್ಲ. ಕೆಲವರ ಕೈತೋಟಗಳಿಗೆ ಮನೆಯಲ್ಲಿ ಅಳಿದುಳಿದ ನೀರು ಸಾಕಾಗಬಹುದು. ಆದರೆ ತೋಟದ ಕ್ಷೇತ್ರ ಹೆಚ್ಚಾಗಿದ್ದಲ್ಲಿ ಮನೆಬಳಿಕೆ ನೀರು ಸಾಕಾಗದೇ ಹೋಗಬಹುದು. ಆಗ ತೋಟದ ಬೆಳೆಗಳಿಗಾಗಿಯೇ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕಾಗುವುದು.

ನೀರಾವರಿ ವಿಧಾನಗಳು

ನೀರಾವರಿಯಲ್ಲಿ ಅನೇಕ ವಿಧಾನಗಳುಂಟು. ಅವುಗಳಲ್ಲಿ ಕೆಲವು ಪ್ರಮುಖವಾದ ವಿಧಾನಗಳನ್ನು ಈ ಮುಂದೆ ವಿವರಿಸಲಾಗಿದೆ.

. ಹರಿದು ಬಿಡುವ ವಿಧಾನ: ಇದೊಂದು ಸರಳ ವಿಧಾನ. ನೀರು ಪೂರೈಕೆಯಾಗಬೇಕಾಗಿರುವ ಕ್ಷೇತ್ರದ ಒಂದು ಮೂಲೆಯಿಂದ ನೀರು ಹರಿದು ಬಿಡುವ ವ್ಯವಸ್ಥೆ ಮಾಡಲಾಗುವುದು. ಭೂಮಿ ಸಮತಟ್ಟಾಗಿದ್ದರೆ ಈ ವಿಧಾನವನ್ನು ಅನುಸರಿಸಬಹುದು. ಈ ವಿಧಾನದಲ್ಲಿ ಹೆಚ್ಚಿನ ಶ್ರಮವಿಲ್ಲವಾದರೂ ಹೆಚ್ಚು ನೀರು ವ್ಯರ್ಥವಾಗುವುದು ಹಾಗೂ ಸ್ವಲ್ಪ ಮಟ್ಟಿಗೆ ಮಣ್ಣಿನ ಸವೆತ ಉಂಟಾಗುವುದು. ಉದಾ: ಈರುಳ್ಳಿ, ಆಲೂಗಡ್ಡೆ ಇತ್ಯಾದಿ

. ಸಾಲು ನೀರಾವರಿ ವಿಧಾನ: ಈ ವಿಧಾನ ಮೇಲಿನ ವಿಧಾನವನ್ನೇ ಹೋಲುವುದು. ಆದರೆ ಇಲ್ಲಿ ಸಾಲುಗಳ ಮೂಲಕ ಬೆಳೆಗಳಿಗೆ ನೀರು ಪೂರೈಕೆಯಾಗುವುದು. ಈ ವಿಧಾನವನ್ನನುಸರಿಸಲು ಭೂಮಿ ಸ್ವಲ್ಪ ಇಳಿಜಾರಿನಿಂದ ಕೂಡಿರಬೇಕು. ಉದಾ: ಟೊಮಾಟೊ, ಬದನೆ ಇತ್ಯಾದಿ.

. ಬೇಸಿನ್ ವಿಧಾನ: ಗಿಡದ ಸುತ್ತಲೂ ತಟ್ಟೆಯಾಕಾರದ ಗುಣಿಗಳನ್ನು ಮಾಡಬೇಕು. ಈ ಗುಣಿಗಳೇ ’ಬೇಸಿನ್’ಗಳು. ಒಂದು ಗಿಡದ ಬೇಸಿನ್‌ಗೆ ನೀರು ಪೂರೈಕೆಯಾದಾಗ ಹೆಚ್ಚಿನ ನೀರು ಚಿಕ್ಕ ಕಾಲುವೆ ಮೂಲಕ ಮುಂದಿನ ಗಿಡದ ಬೇಸಿನ್‌ಗೆ ಹೋಗುವಂತೆ ರಚನೆ ಇರುವುದು. ಹೀಗೆ ಒಂದು ಗಿಡಕ್ಕೆ ನೀರು ಪೂರೈಕೆಯಾದಾಗ ಅಲ್ಲಿಂದ ಮುಂದೆ ಆ ಸರಪಳಿಯಲ್ಲಿ ಬರುವ ಎಲ್ಲಾ ಗಿಡಗಳಿಗೆ ಸ್ವಯಂಚಾಲಿತವಾಗಿ ನೀರು ಪೂರೈಸಲ್ಪಡುವುದು.

ಈ ವಿಧಾನದಲ್ಲಿ ನೀರು ವ್ಯರ್ಥವಾಗುವುದಿಲ್ಲ. ಆದರೆ ಪೋಷಕಾಂಶಗಳು ಒಂದು ಗಿಡದ ಬೇಸಿನ್‌ನಿಂದ ಮತ್ತೊಂದಕ್ಕೆ ಹರಿದು ಹೋಗುವ ಸಾಧ್ಯತೆ ಇದೆ ಮತ್ತು ಬೇಸಿನ್‌ಗಳಲ್ಲಿ ನೀರು ನಿಂತು ಕೆಲವು ರೋಗಗಳೂ ಬರಬಹುದು. ಉದಾ: ತೆಂಗು, ನಿಂಬೆ ಇತ್ಯಾದಿ

. ಉಂಗುರ ವಿಧಾನ: ಇಲ್ಲಿ ಗಿಡದ ಸುತ್ತಲೂ ಉಂಗುರಾಕಾರದ ರಚನೆ ಇರುವುದು. ಗಿಡಕ್ಕೆ ನೀರು ಪೂರೈಸಿದಾಗ ಕಾಂಡಕ್ಕೆ ತಗಲುವುದಿಲ್ಲ. ಹೀಗಾಗಿ ನೀರು ನಿಂತು ಅದರಿಂದ ಬರುವ ರೋಗಗಳ ಭಯವಿಲ್ಲ. ಆದರೆ ಗಿಡ ದೊಡ್ಡದಾಗುತ್ತಿದ್ದಂತೆ ಉಂಗುರಾಕಾರವನ್ನು ಅಗಲಗೊಳಿಡಬೇಕಾಗುವುದು. ಉದಾ: ದಾಳಿಂಬೆ, ನಿಂಬೆ ಇತ್ಯಾದಿ

. ತುಂತುರ ನೀರಾವರಿ ವಿಧಾನ: ಕೊಳವೆ ನೀರು ಹರಿಸಿ ಒತ್ತಡದ ಮೂಲಕ ಈ ನೀರು ಬೆಳೆಗಳ ಮೇಲೆ ಮಳೆಯಂತೆ ಹರಡುವುದನ್ನು ಇಲ್ಲಿ ಕಾಣಬಹುದು. ಈ ವಿಧಾನದಲ್ಲಿ ನೀರಿನ ಮಿತವ್ಯಯ ಸಾಧ್ಯ. ಮಣ್ಣಿನ ರಚನೆ ಹಾಳಾಗುವುದಿಲ್ಲ. ಸಸ್ಯಗಳು ಒತ್ತೊತ್ತಾಗಿ ಬೆಳೆಯುವಲ್ಲಿ ಈ ವಿಧಾನ ಅನುಸರಿಸುವುದು ಸೂಕ್ತ. ಉದಾ: ಸೊಪ್ಪು ತರಕಾರಿಗಳು.

. ಹನಿ ನೀರಾವರಿ ವಿಧಾನ: ನೀರಿನ ಕೊರತೆ ಇರುವ ಸ್ಥಳದಲ್ಲಿ ಹನಿ ನೀರಾವರಿ ವಿಧಾನ ಅನುಸರಿಸುವುದು ಸೂಕ್ತ. ಸಂಪೂರ್ಣ ನೀರಿನ ಮಿತವ್ಯಯ ಈ ವಿಧಾನದಲ್ಲಿ ಸಾಧ್ಯವಾಗುವುದು. ಕಡಿಮೆ ಪ್ರಮಾಣದಲ್ಲಿ ನೀರನ್ನು ಬಳಸಿಕೊಂಡು ಹೆಚ್ಚು ಗಿಡಗಳನ್ನು ಬೆಳೆಯಬಹುದಾಗಿದೆ. ಹೆಸರೇ ಸೂಚಿಸುವಂತೆ ಗಿಡಗಳಿಗೆ ನೀರು ಹನಿಹನಿಯಾಗಿ ಪೂರೈಸಲ್ಪಡುವುದು. ನೇರವಾಗಿ ಗಿಡಗಳಿಗೆ ನೀರು ಪೂರೈಕೆಯಾಗುವುದರಿಂದ ವ್ಯರ್ಥವಾಗುವುದಿಲ್ಲ. ನೀರು ಸಂಗ್ರಹದಿಂದ ಕೊಳವೆಗಳ ಮೂಲಕ ಗಿಡಗಳಿಗೆ ನೀರಿನ ಸಂಪರ್ಕವಿರುವುದು. ಇಲ್ಲಿ ಹನಿ ಸಲಕರಣೆಯ ಮೂಲಕ ಹಣಿ ಹನಿಯಾಗಿ ಅಥವಾ ಸಣ್ಣ ಝರಿಗಳ ರೂಪದಲ್ಲಿ ನೀರು ಪೂರೈಸಲಾಗುವುದು. ಹನಿ ನೀರಾವರಿ ವ್ಯವಸ್ಥೆ ಅಳವಡಿಸುವುದು ಪ್ರಾರಂಭದಲ್ಲಿ ಖರ್ಚುದಾಯಕ ಎನಿಸುವುದು. ಆದರೆ ನಂತರ ಈ ವ್ಯವಸ್ಥೆ ಲಾಭದಾಯಕವಾಗಿದೆ.

ಹನಿ ನೀರಾವರಿ ವಿಧಾನದ ಅನುಕೂಲಗಳು

೧. ಹೆಚ್ಚಿನ ಅಂತರ ಕೊಟ್ಟು ಬೆಳೆಸುವ ಗಿಡಗಳಾದ ನಿಂಬೆ, ಕಿತ್ತಳೆ, ಚಿಕ್ಕು ಇತ್ಯಾದಿ ಬೆಳೆಗಳಿಗೆ ಈ ವಿಧಾನ ಸೂಕ್ತ.

೨. ಕುಂಡದ ಸಸ್ಯಗಳಿಗೆ ಹಾಗೂ ಹಸಿರು ಮನೆಗಳಲ್ಲಿ ಈ ವ್ಯವಸ್ಥೆ ಅನುಕೂಲಕರ.

೩. ಕಡಿಮೆ ನೀರಿನಲ್ಲಿ ಹೆಚ್ಚು ಗಿಡಗಳನ್ನು ಬೆಳೆಯಬಹುದು.

೪. ತಗ್ಗು, ದಿಣ್ಣೆ ಮತ್ತು ಇಳಿಜಾರು ಪ್ರದೇಶಗಳಲ್ಲಿ ಭೂಮಿಯನ್ನು ಸಮಪಾತಳಿಯಾಗಿ ಮಾಡದೇ ನೇರವಾಗಿ ಗಿಡಗಳನ್ನು ನೆಟ್ಟು ನೀರು ಪೂರೈಸಬಹುದು.

೫. ಕೂಲಿ ಆಳುಗಳ ಮತ್ತು ವಿದ್ಯುತ್ ಕೊರತೆ ಇರುವ ಸಂದರ್ಭಗಳಲ್ಲಿ ಹನಿ ನೀರಾವರಿ ವಿಧಾನ ಸಹಕಾರಿ.

೬. ನೀರಿನ ಹಂಚಿಕೆಯಲ್ಲಿ ಏಕರೂಪತೆ ಸಾಧಿಸಲು ಹನಿ ನೀರಾವರಿ ವಿಧಾನದಲ್ಲಿ ಸಾಧ್ಯ.

. ಹೂಜಿ ನೀರಾವರಿ ವಿಧಾನ: ಇದನ್ನು ’ಮಡಿಕೆ ನೀರಾವರಿ’ ಎಂದು ಕರೆಯುವರು. ಹೂಜಿಗಳನ್ನು ಗಿಡಗಳ ಪಕ್ಕದಲ್ಲಿಟ್ಟು ಅದರ ತಳದಲ್ಲಿ ಸಣ್ಣ ರಂಧ್ರವನ್ನು ಮಾಡಿ ನಂತರ ಹೂಜಿಗೆ ನೀರು ತುಂಬಬೇಕು. ಇದರಿಂದಲೂ ಗಿಡಗಳಿಗೆ ನೀರು ಹನಿಹನಿಯಾಗಿ ಪೂರೈಕೆಯಾಗುವುದು. ಹೂಜಿಗೆ ಮಾಡಿದ ಸಣ್ಣ ರಂಧ್ರದಲ್ಲಿ ಬಟ್ಟೆಯ ತುಂಡು ಇಡುವ ವ್ಯವಸ್ಥೆ ಮಾಡಿದರೆ, ನೀರು ಬೇಕೆಂದಾಗ ಬಟ್ಟೆ ತೆಗೆಯಬಹುದು. ಬೇಡವಾದಾಗ ಮತ್ತೆ ಬಟ್ಟೆ ಇಟ್ಟು ನಿಲ್ಲಿಸಬಹುದು. ಇದು ಸ್ವಲ್ಪ ಶ್ರಮದಾಯಕವೆನಿಸುವುದು. ಉದಾ: ಚಿಕ್ಕು, ಮಾವು ಇತ್ಯಾದಿ.

* * *