ಸಂಸ್ಕೃತ–ಸಂಸ್ಕೃತ ಶಬ್ದಗಳೇ ಸೇರಿ ಸಮಾಸವಾಗಬಹುದು ಅಥವಾ ಕನ್ನಡ–ಕನ್ನಡ ಶಬ್ದಗಳು ಸೇರಿ ಸಮಾಸವಾಗಬಹುದು. ತದ್ಭವ–ತದ್ಭವ ಶಬ್ದಗಳು ಸೇರಿ ಸಮಾಸವಾಗ ಬಹುದು. ಅಥವಾ ಅಚ್ಚಗನ್ನಡ ಶಬ್ದ ತದ್ಭವ ಶಬ್ದಗಳನ್ನು ಸೇರಿಸಿ ಸಮಾಸ ಮಾಡಬಹುದು. ಆದರೆ ಕನ್ನಡ–ಸಂಸ್ಕೃತ ಶಬ್ದಗಳನ್ನು ಸೇರಿಸಿ ಸಮಾಸ ಮಾಡಬಾರದು. ಆದರೂ ಅನೇಕ ಹಿಂದಿನ ಮಹಾಕವಿಗಳು ಹಾಗೆ ಸೇರಿಸಿ ಸಮಾಸ ಮಾಡಿದ್ದಾರೆ. ಹಾಗೆ ಆಗಿಹೋಗಿರುವ ಸಮಾಸಗಳಿಗೆ ಹೊರತಾಗಿ ಮನಸ್ಸಿಗೆ ಬಂದ ಹಾಗೆ ಸಂಸ್ಕೃತ-ಕನ್ನಡ ಶಬ್ದಗಳನ್ನು ಸೇರಿಸಿ ಸಮಾಸ ಮಾಡಬಾರದು. ಹೀಗೆ ಸಂಸ್ಕೃತ-ಕನ್ನಡ ಶಬ್ದಗಳು ಸೇರಿ ಆಗುವ ಸಮಾಸವನ್ನು ಅರಿಸಮಾಸವೆಂದು ಹೇಳುತ್ತಾರೆ. ಅರಿಸಮಾಸವೆಂದರೇನು? ಎಂಬುದಕ್ಕೆ ಸೂತ್ರವನ್ನು ಕೆಳಗಿನಂತೆ ಹೇಳಬಹುದು.
(೭೫) ಕನ್ನಡ ಪದದೊಡನೆ ಸಂಸ್ಕೃತ ಪದವನ್ನು ಸೇರಿಸಿ ಸಮಾಸ ಮಾಡಬಾರದು. ಹಾಗೆ ಮಾಡಿದರೆ ಅದನ್ನು ‘ಅರಿಸಮಾಸ’ ವೆನ್ನುವರು.
ಆದರೆ ಪೂರ್ವ ಕವಿಗಳು ಮಾಡಿರುವಲ್ಲಿ ದೋಷವೆಣಿಸಬಾರದು. ಬಿರುದಾವಳಿಗಳಲ್ಲಿ ದೋಷವಿಲ್ಲ. ಗಮಕಸಮಾಸ, ಕ್ರಿಯಾಸಮಾಸಗಳಲ್ಲಿ ದೋಷವಿಲ್ಲ.
ಉದಾಹರಣೆಗೆ:- (೧) ಪೂರ್ವಕವಿಗಳು ಮಾಡಿದ ಸಮಾಸಗಳು-
ಮಳೆಯ | + | ಕಾಲ | = | ಮಳೆಗಾಲ |
ತುರುಗದ | + | ದಳ | = | ತುರುಗದಳ |
ಮಂಗಳದ | + | ಆರತಿ | = | ಮಂಗಳಾರತಿ |
ದಳದ | + | ಪತಿ | = | ದಳಪತಿ |
ಮೇಲಿನ ಸಮಾಸಗಳಲ್ಲಿ – ಮಳೆಯ, ದಳ, ಆರತಿ, ದಳದ ಇವೆಲ್ಲ ಕನ್ನಡ ಪದಗಳು. ಕಾಲ, ತುರುಗ, ಮಂಗಳ, ಪತಿ -ಇವೆಲ್ಲ ಸಂಸ್ಕೃತ ಪದಗಳು. ಇವು ಕೂಡಿ ಸಮಾಸವಾಗು ವುದು ತರವಲ್ಲ. ಆದರೂ ಹಿಂದಿನಿಂದ ಕವಿಗಳು ತಮ್ಮ ಕಾವ್ಯಗಳಲ್ಲಿ ಮಾಡಿ, ಪ್ರಯೋಗಿಸಿಬಿಟ್ಟಿದ್ದಾರಾದ್ದರಿಂದ ಇವು ಸಾಧುವೆಂದು ತಿಳಿಯಬೇಕು. ಇದರ ಹಾಗೆ
ಕಡಿದು | + | ರಾಗ | = | ಕಡುರಾಗ |
ಮೊಗದ | + | ರಾಗ | = | ಮೊಗರಾಗ |
ಕೂರಿತ್ತಾದ | + | ಅಸಿ | = | ಕೂರಸಿ |
ಮಾರಾಂತ | + | ಬಲ | = | ಮಾರ್ಬಲ |
ಪಿರಿದು | + | ಬಲ | = | ಪೆರ್ಬಲ |
ಎರಡು | + | ಭಾಗ | = | ಇಬ್ಭಾಗ |
ಪರಮ | + | ಬೊಮ್ಮ | = | ಪರಬೊಮ್ಮ |
ಮಹಾ | + | ಕಾಳಿ | = | ಮಾಕಾಳಿ |
ಪಂಚ | + | ಸರ | = | ಪಂಚಸರ |
ಇತ್ಯಾದಿ ಪೂರ್ವಕವಿ ಪ್ರಯೋಗಗಳಲ್ಲಿ ದೋಷವೆಣಿಸಬಾರದು. ಆದರೆ ಹೊಸದಾಗಿ ಈ ರೀತಿಯ ಸಮಸ್ತ ಪದಗಳನ್ನು ಮಾಡುವುದರ ಮೂಲಕ ಭಾಷೆಯನ್ನು ಕೆಡಿಸಬಾರದೆಂದು ಕಟ್ಟುಪಾಡು ಮಾಡಿದ್ದಾರೆಂದು ಭಾವಿಸಬೇಕು.
(೨) ಬಿರುದಾವಳಿಗಳಲ್ಲಿ ದೋಷವೆಣಿಸಬಾರದು–ದಳಮುಖಧವಳ, ರಾಯಕೋಲಾಹಲ, ದಳಮುಖಾದಿತ್ಯ, ಅಂಕತ್ರಿಣೇತ್ರ – ಇತ್ಯಾದಿಗಳು ಬಿರುದಾವಳಿಗಳು.
ಯಾವುದಾದರೂ ಒಂದು ಮಹತ್ವದ ಯುದ್ಧದಲ್ಲಾಗಲಿ, ಅಥವಾ ಮಹತ್ವದ ಕಾರ್ಯದಲ್ಲಾಗಲಿ, ಇನ್ನಾವುದಾದರೂ ಅತಿಶಯವಾದ ಕಾರ್ಯದಲ್ಲಿ ಹೆಸರುವಾಸಿಯಾದಾಗಲೇ ರಾಜರು ಕೆಲವರಿಗೆ ಬಿರುದುಗಳನ್ನು ಕೊಡುವುದುಂಟು. ಇದು ಹಿಂದಿನ ಪದ್ಧತಿ. ಮೇಲೆ ಹೇಳಿದ ಬಿರುದುಗಳು ಅಂಥವು. ಇವೆಲ್ಲ ನಮ್ಮ ಕನ್ನಡ ಕಾವ್ಯಗಳಲ್ಲಿ ಬಂದಿವೆ. ಇಂಥವುಗಳಿಗೇ ನಾವು ಬಿರುದಾವಳಿಗಳು ಎನ್ನುತ್ತೇವೆ. ಮೇಲಿನ ಬಿರುದಾವಳಿಗಳಲ್ಲಿ ‘ದಳ’ ‘ರಾಯ’ ‘ಅಂಕ’ ಮೊದಲಾದ ಶಬ್ದಗಳು ಕನ್ನಡ ಶಬ್ದಗಳು. ಇವು ಸಂಸ್ಕೃತ ಶಬ್ದಗಳೊಡನೆ ಸೇರಿ ಸಮಸ್ತಪದಗಳಾಗಿವೆ.
ದಳದ | + | ಮುಖಕ್ಕೆ | + | ಧವಳ | = | ದಳಮುಖಧವಳ [1] |
ರಾಯರಲ್ಲಿ | + | ಕೋಲಾಹಲ | = | ರಾಯಕೋಲಾಹಲ[2] | ||
ದಳದ | + | ಮುಖಕ್ಕೆ | + | ಆದಿತ್ಯ | = | ದಳಮುಖಾದಿತ್ಯ[3] |
ಅಂಕದಲ್ಲಿ | + | ತ್ರಿಣೇತ್ರ | = | ಅಂಕತ್ರಿಣೇತ್ರ[4] |
(೩) ಗಮಕ ಮತ್ತು ಕ್ರಿಯಾಸಮಾಸಗಳಲ್ಲಿ ಅರಿಸಮಾಸ ದೋಷವಿಲ್ಲದಿರುವುದನ್ನು ಮುಂದೆ ಆಯಾಯ ಸಮಾಸಗಳನ್ನು ವಿವರಿಸಿರುವಲ್ಲಿ ತಿಳಿಯುತ್ತೀರಿ.
ಮೇಲಿನ ಕೆಲವು ಸೂಚನೆಗಳ ಪ್ರಕಾರ ಎಂಥ ಪದಗಳೊಡನೆ ಸಮಾಸ ಮಾಡಬೇಕು, ಮಾಡಬಾರದು ಎಂಬ ಬಗೆಗೆ ಹಲವು ವಿಷಯ ತಿಳಿದಿರಿ. ಈಗ ಹೀಗೆ ಸಮಾಸಗಳನ್ನು ಎಷ್ಟು ವಿಧಗಳಲ್ಲಿ ಮಾಡಬಹುದು? ಎಂಬ ಬಗೆಗೆ ತಿಳಿಯೋಣ.
Leave A Comment