ಸಮಾಸ ಸಮಸ್ತ ಪದವಾಗುವಿಕೆಯನ್ನು ಎಂಟು ವಿಧಗಳಲ್ಲಿ ವಿಂಗಡಿಸುವುದು ಕನ್ನಡದಲ್ಲಿ ರೂಢಿ. ಅವುಗಳಿಗೆ ಬೇರೆ ಬೇರೆ ಹೆಸರುಗಳನ್ನು ಕೊಟ್ಟಿದ್ದಾರೆ.
(೭೬) ಸಮಾಸಗಳು ಒಟ್ಟು (೧) ತತ್ಪುರುಷ (೨) ಕರ್ಮಧಾರಯ (೩) ದ್ವಿಗು (೪) ಅಂಶಿ (೫) ದ್ವಂದ್ವ (೬) ಬಹುವ್ರೀಹಿ (೭) ಕ್ರಿಯಾ
(೧) ತತ್ಪುರುಷಸಮಾಸ
‘ಅರಮನೆ’ ಎಂಬ ಸಮಸ್ತಪದವನ್ನು ಬಿಡಿಸಿದಾಗ ಅರಸನ+ಮನೆ ಎಂದು ಆಗುವುದು. ಇಲ್ಲಿ ಅರಸನ ಎಂಬ ಪದದ ಅರ್ಥ ಮುಖ್ಯವೋ? ‘ಮನೆ’ ಎಂಬ ಪದದ ಅರ್ಥ ಮುಖ್ಯವೋ? ಎಂದರೆ-ಮನೆ ಎಂಬ ಪದದ ಅರ್ಥವೇ ಮುಖ್ಯ. ಯಾರ ಮನೆ? ಎಂಬ ಪ್ರಶ್ನೆಗೆ ‘ಅರಸನ’ ಸಂಬಂಧವಾದ ಮನೆ ಎಂದು ಗೊತ್ತಾಗುವುದು. ಆದುದರಿಂದ ‘ಮನೆ’ ಎಂಬ ‘ಪದ’ ಈ ಸಮಸ್ತಪದದಲ್ಲಿ ಮುಖ್ಯ.
‘ಕಾಲುಬಳೆ’ ಎಂಬ ಸಮಸ್ತಪದದಲ್ಲೂ ಹೀಗೆಯೆ ಕಾಲಿನ ಸಂಬಂಧವಾದ ‘ಬಳೆ’ ಎಂಬರ್ಥ ಬರುವುದು. ‘ಬಳೆ’ಗಳು ಅನೇಕ ವಿಧ. ಆದರೆ ‘ಕಾಲಿನ’ ಎಂಬ ಪದವು ಕಾಲಿಗೆ ಸಂಬಂಧಿಸಿದ ‘ಬಳೆ’ ಎಂಬ ಪದದ ಅರ್ಥವನ್ನು ಪ್ರಧಾನವೆಂದು ವ್ಯವಸ್ಥೆ ಮಾಡಿ ತೋರಿಸುವುದು.
ಅರಮನೆ, ಕಾಲುಬಳೆ ಈ ಸಮಸ್ತಪದಗಳಲ್ಲಿ ಎರಡೂ ಪದಗಳು ನಾಮಪದಗಳೇ ಆಗಿವೆ ಮತ್ತು ಉತ್ತರದಲ್ಲಿರುವ ಪದಗಳ ಅರ್ಥವೇ ಪ್ರಧಾನವಾಗಿದೆ. ಆದ್ದರಿಂದ ಇದರ ಸೂತ್ರವನ್ನು ಹೀಗೆ ಹೇಳಬಹುದು.
(೭೭) ತತ್ಪುರುಷಸಮಾಸ:- ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸವೆನ್ನುವರು.
(ಪೂರ್ವಪದವು ತೃತೀಯಾದಿ ವಿಭಕ್ತಿಗಳಿಂದ ಮೊದಲ್ಗೊಂಡು ಸಪ್ತಮೀವಿಭಕ್ತಿಯ ವರೆಗೆ ಯಾವುದಾದರೂ ವಿಭಕ್ತ್ಯಂತವಾಗಿರಬೇಕು. ಆಗ ಮೊದಲಪದದ ವಿಭಕ್ತಿ ಯಾವುದೋ ಅದರ ಹೆಸರಿನಲ್ಲಿ ಸಮಾಸ ಹೇಳುವುದು ವಾಡಿಕೆ[2].)
ಉದಾಹರಣೆಗೆ:- (i) ಕನ್ನಡ–ಕನ್ನಡ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ–
ಮರದ | + | ಕಾಲು | = | ಮರಗಾಲು | (ಷಷ್ಠೀತತ್ಪುರುಷ) |
ಬೆಟ್ಟದ | + | ತಾವರೆ | = | ಬೆಟ್ಟದಾವರೆ | ( ) |
ಕಲ್ಲಿನ | + | ಹಾಸಿಗೆ | = | ಕಲ್ಲುಹಾಸಿಗೆ | ( ) |
ತಲೆಯಲ್ಲಿ | + | ನೋವು | = | ತಲೆನೋವು | (ಸಪ್ತಮೀತತ್ಪುರುಷ) |
ಹಗಲಿನಲ್ಲಿ | + | ಕನಸು | = | ಹಗಲುಗನಸು | ( ) |
ತೇರಿಗೆ | + | ಮರ | = | ತೇರುಮರ | (ಚತುರ್ಥೀತತ್ಪುರುಷ) |
ಕಣ್ಣಿನಿಂದ | + | ಕುರುಡ | = | ಕಣ್ಣುಕುರುಡ | (ತೃತೀಯಾತತ್ಪುರುಷ) |
(ii) ಸಂಸ್ಕೃತ–ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ–
ಕವಿಗಳಿಂದ | + | ವಂದಿತ | = | ಕವಿವಂದಿತ | (ತೃತೀಯಾತತ್ಪುರುಷ) |
ವ್ಯಾಘ್ರದೆಸೆಯಿಂದ | + | ಭಯ | = | ವ್ಯಾಘ್ರಭಯ | (ಪಂಚಮೀತತ್ಪುರುಷ) |
ಉತ್ತಮರಲ್ಲಿ | + | ಉತ್ತಮ | = | ಉತ್ತಮೋತ್ತಮ | (ಸಪ್ತಮೀತತ್ಪುರುಷ) |
ದೇವರ | + | ಮಂದಿರ | = | ದೇವಮಂದಿರ | (ಷಷ್ಠೀತತ್ಪುರುಷ) |
ಧನದ | + | ರಕ್ಷಣೆ | = | ಧನರಕ್ಷಣೆ | (ಷಷ್ಠೀತತ್ಪುರುಷ) |
ವಯಸ್ಸಿನಿಂದ | + | ವೃದ್ಧ | = | ವಯೋವೃದ್ಧ | (ತೃತೀಯಾತತ್ಪುರುಷ) |
ವಿಚಾರ:- ಮೇಲೆ ವಿವರಣೆ ಮಾಡಿರುವಂತಹ ಸಮಾಸವಾಗಿರುವ ಉದಾಹರಣೆಗಳಲ್ಲಿ ಮಳೆಗಾಲ, ಮರಗಾಲು, ಬೆಟ್ಟದಾವರೆ-ಈ ಸಮಾಸಗಳಲ್ಲಿ ‘ಕಾಲ’ ಎಂಬಲ್ಲಿಯ ಕಕಾರಕ್ಕೆ ಗಕಾರವೂ, ‘ಕಾಲು’ ಎಂಬಲ್ಲಿ ಕಕಾರಕ್ಕೆ ಗಕಾರವೂ[3], ತಾವರೆ ಎಂಬಲ್ಲಿ ತಕಾರಕ್ಕೆ ದಕಾರವೂ ಆದೇಶಗಳಾಗಿ ಬಂದಿರುವುದನ್ನು ಗಮನಿಸಿರಿ. ಹೀಗೆ ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಕತಪ ವ್ಯಂಜನಗಳಿಗೆ ಕ್ರಮವಾಗಿ ಗದಬ ವ್ಯಂಜನಗಳೂ, ಪಬಮ ವ್ಯಂಜನಗಳಿಗೆ ವಕಾರವೂ ಆದೇಶವಾಗಿ ಬರುವುದುಂಟು. ಬಾರದಿರುವುದೂ ಕೆಲವು ಕಡೆಗುಂಟು. ಈ ವಿಚಾರವನ್ನು ಹಿಂದಿನ ಸಂಧಿಪ್ರಕರಣದಲ್ಲಿ ಆದೇಶ ಸಂಧಿಗಳು ಎಂಬಲ್ಲಿ ವಿಷದವಾಗಿ ಹೇಳಿದೆ. ಜ್ಞಾಪಿಸಿಕೊಳ್ಳಿ.
(೨) ಕರ್ಮಧಾರಯ ಸಮಾಸ
ದೊಡ್ಡವನು | + | ಹುಡುಗನು | = | ದೊಡ್ಡಹುಡುಗನು |
ದೊಡ್ಡವಳು | + | ಹೆಂಗಸು | = | ದೊಡ್ಡಹೆಂಗಸು |
ಹಿರಿಯರು | + | ಮಕ್ಕಳು | = | ಹಿರಿಯಮಕ್ಕಳು |
ಚಿಕ್ಕವರಿಂದ | + | ಮಕ್ಕಳಿಂದ | = | ಚಿಕ್ಕಮಕ್ಕಳಿಂದ |
ಮೇಲಿನ ಈ ಉದಾಹರಣೆಗಳನ್ನು ನೋಡಿದರೆ-ದೊಡ್ಡವನು, ದೊಡ್ಡವಳು, ಹಿರಿಯರು, ಚಿಕ್ಕವರು ಇತ್ಯಾದಿ ಪದಗಳು ಕ್ರಮವಾಗಿ ಹುಡುಗನು, ಹೆಂಗಸು, ಮಕ್ಕಳು, ಮಕ್ಕಳಿಂದ-ಎಂಬ ಪದಗಳಿಗೆ ವಿಶೇಷಣಗಳಾಗಿವೆ. ನಾಲ್ಕು ಕಡೆಯಲ್ಲೂ ವಿಭಕ್ತಿಗಳು ಸಮನಾಗಿವೆ. ಅಂದರೆ-ದೊಡ್ಡವರು ಎಂಬುದು ಪ್ರಥಮಾವಿಭಕ್ತಿಯಾದರೆ ಹುಡುಗನು ಎಂಬುದೂ ಪ್ರಥಮಾವಿಭಕ್ತಿಯಾಗಿದೆ. ಚಿಕ್ಕವರಿಂದ ಎಂಬುದು ತೃತೀಯಾವಿಭಕ್ತಿಯಾದರೆ ಮಕ್ಕಳಿಂದ ಎಂಬದೂ ತೃತೀಯಾವಿಭಕ್ತಿಯೇ ಆಗಿದೆ. ವಚನಗಳೂ (ಏಕವಚನ, ಬಹುವಚನಗಳೂ) ಸಮಾನವಾಗಿಯೇ ಇವೆ. ಅಲ್ಲದೆ ಲಿಂಗಗಳೂ ಸಮನಾಗಿವೆ. ಅಂದರೆ – ಪೂರ್ವೋತ್ತರ ಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮನಾಗಿರುತ್ತವೆ ಎಂದು ಅರ್ಥ. ಈ ಸಮಾಸದ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
(೭೮) ಕರ್ಮಧಾರಯ ಸಮಾಸ:- ಪೂರ್ವೋತ್ತರಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರಯಸಮಾಸವೆನ್ನುವರು.
ಇದರಲ್ಲೂ ಉತ್ತರಪದದ ಅರ್ಥವೇ ಪ್ರಧಾನವಾಗಿರುವುದು[4].
ಉದಾಹರಣೆಗೆ:-
(i) ಕನ್ನಡ ಕನ್ನಡ ಪದಗಳು ಸೇರಿ ಸಮಾಸವಾಗಿರುವುದಕ್ಕೆ–
ಹಿರಿದು | + | ಜೇನು | = | ಹೆಜ್ಜೇನು | |
ಹಳೆಯದು | + | ಕನ್ನಡ | = | ಹಳೆಗನ್ನಡ | (ಕಕಾರಕ್ಕೆ ಗಕಾರಾದೇಶ) |
ಹೊಸದು | + | ಕನ್ನಡ | = | ಹೊಸಗನ್ನಡ | ( “ ) |
ಇನಿದು | + | ಸರ | = | ಇಂಚರ | (ಸಕಾರಕ್ಕೆ ಚಕಾರಾದೇಶ) |
ಹಿರಿದು | + | ಮರ | = | ಹೆಮ್ಮರ | ( “ ) |
ಇನಿದು | + | ಮಾವು | = | ಇಮ್ಮಾವು | ( “ ) |
ಹಿರಿದು | + | ಬಾಗಿಲು | = | ಹೆಬ್ಬಾಗಿಲು | ( “ ) |
ಚಿಕ್ಕವಳು | + | ಹುಡುಗಿ | = | ಚಿಕ್ಕಹುಡುಗಿ | ( “ ) |
ಚಿಕ್ಕದು | + | ಮಗು | = | ಚಿಕ್ಕಮಗು | ( “ ) |
ಹಳೆಯದು | + | ಬಟ್ಟೆ | = | ಹಳೆಯಬಟ್ಟೆ | ( “ ) |
ಮೆಲ್ಲಿತು | + | ಮಾತು | = | ಮೆಲ್ವಾತು | (ಮಕಾರಕ್ಕೆ ವಕಾರಾದೇಶ) |
ಮೆಲ್ಲಿತು | + | ನುಡಿ | = | ಮೆಲ್ನುಡಿ | ( “ ) |
ಮೆಲ್ಲಿತು | + | ಪಾಸು | = | ಮೆಲ್ವಾಸು | (ಪಕಾರಕ್ಕೆ ವಕಾರಾದೇಶ) |
ಬಿಳಿದು | + | ಕೊಡೆ | = | ಬೆಳ್ಗೊಡೆ | (ಕಕಾರಕ್ಕೆ ಗಕಾರಾದೇಶ) |
(ii) ಸಂಸ್ಕೃತ ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ–
ನೀಲವಾದ | + | ಉತ್ಪಲ | = | ನೀಲೋತ್ಪಲ[5] | (ನೀಲಕಮಲ) |
ಶ್ವೇತವಾದ | + | ವಸ್ತ್ರ | = | ಶ್ವೇತವಸ್ತ್ರ | (ಬಿಳಿಯವಸ್ತ್ರ) |
ಶ್ವೇತವಾದ | + | ಛತ್ರ | = | ಶ್ವೇತಛತ್ರ | (ಬಿಳಿಯಕೊಡೆ) |
ಬೃಹತ್ತಾದ | + | ವೃಕ್ಷ | = | ಬೃಹದ್ವೃಕ್ಷ | (ದೊಡ್ಡಗಿಡ) |
ನೀಲವಾದ | + | ಶರಧಿ | = | ನೀಲಶರಧಿ | |
ನೀಲವಾದ | + | ಸಮುದ್ರ | = | ನೀಲಸಮುದ್ರ | |
ಶ್ವೇತವಾದ | + | ವರ್ಣ | = | ಶ್ವೇತವರ್ಣ | |
ಮತ್ತವಾದ | + | ವಾರಣ | = | ಮತ್ತವಾರಣ | (ಮದ್ದಾನೆ) |
ಪೀತವಾದ | + | ವಸ್ತ್ರ | = | ಪೀತವಸ್ತ್ರ | |
ಪೀತವಾದ | + | ಅಂಬರ | = | ಪೀತಾಂಬರ | |
ದಿವ್ಯವಾದ | + | ಪ್ರಕಾಶ | = | ದಿವ್ಯಪ್ರಕಾಶ |
ಮೇಲಿನ ಕನ್ನಡ, ಸಂಸ್ಕೃತ ಸಮಾಸಗಳಲ್ಲೆಲ್ಲ ಪೂರ್ವಪದಗಳು ವಿಶೇಷಣಗಳಾಗಿದ್ದು ಉತ್ತರಪದಗಳು ವಿಶೇಷ್ಯಗಳಾಗಿವೆ. ಇವುಗಳಿಗೆ ವಿಶೇಷಣ ಪೂರ್ವಪದ ಕರ್ಮಧಾರಯ ಎಂದು ಸ್ಪಷ್ಟಪಡಿಸಿ ಹೇಳುವ ಪರಿಪಾಠವುಂಟು.
(iii) ಕರ್ಮಧಾರಯ ಸಮಾಸದಲ್ಲಿ ಉಪಮಾನೋಪಮೇಯಭಾವ ಸಂಬಂಧದಿಂದಲೂ ಪೂರ್ವೋತ್ತರ ಪದಗಳಿರುತ್ತವೆ.
ತಾವರೆಯಂತೆ + ಕಣ್ಣು = ತಾವರೆಗಣ್ಣು (ಉಪಮಾನಪೂರ್ವಪದ ಕರ್ಮಧಾರಯ)
ಪುಂಡರೀಕದಂತೆ + ಅಕ್ಷಗಳು = ಪುಂಡರೀಕಾಕ್ಷಗಳು ( )
(iv) ಉಪಮಾನವು ಉತ್ತರಪದದಲ್ಲಿಯೂ ಇರುವುದುಂಟು.
ಅಡಿಗಳು | + | ತಾವರೆಯಂತೆ | = | ಅಡಿದಾವರೆ |
ಮುಖವು | + | ಕಮಲದಂತೆ | = | ಮುಖಕಮಲ |
ಪಾದಗಳು | + | ಕಮಲಗಳಂತೆ | = | ಪಾದಕಮಲ |
ಕರವು | + | ಕಮಲದಂತೆ | = | ಕರಕಮಲ |
(v) ಕೆಲವು ಕಡೆ ಅವಧಾರಣೆಯ ಎಂದರೆ ನಿರ್ಧರಿಸಿ ಹೇಳುವ ಅರ್ಥದ ಏ ಎಂಬ ಸ್ವರವು ಅಂತ್ಯದಲ್ಲಿ ಉಳ್ಳಪದವು ಪೂರ್ವಪದವಾಗಿ ಸಮಾಸವಾಗುವುದುಂಟು. ಇದಕ್ಕೆ ಅವಧಾರಣಾಪೂರ್ವಪದಕರ್ಮಧಾರಯ ಸಮಾಸ ಎನ್ನುವರು.
ಫಲವೇ | + | ಆಹಾರ | = | ಫಲಾಹಾರ[6] |
ನಖವೇ | + | ಆಯುಧ | = | ನಖಾಯುಧ |
ವಿಶ್ವವೇ | + | ರಂಗಭೂಮಿ | = | ವಿಶ್ವರಂಗಭೂಮಿ |
ಸುಖವೇ | + | ಜೀವನ | = | ಸುಖಜೀವನ |
ವಾತವೇ | + | ಆಹಾರ | = | ವಾತಾಹಾರ |
– ಇತ್ಯಾದಿ.
(vi) ಇನ್ನು ಕೆಲವು ಕಡೆ ಸಂಭಾವನೆ ಮಾಡಿದಾಗ ಅಂದರೆ ಊಹೆ ಮಾಡಿದಾಗ (ಇಂಥ ಹೆಸರಿದೆ ಎಂದು ಊಹೆ ಮಾಡಿ ಹೇಳಿದಾಗ) ಕರ್ಮಧಾರಯ ಸಮಾಸವಾಗುವುದು. ಇವು ಸಂಭಾವನಾಪೂರ್ವಪದ ಕರ್ಮಧಾರಯ ಸಮಾಸಗಳೆನಿಸುವುವು[7].
ಕಾವೇರೀ ಎಂಬ ನದಿ = ಕಾವೇರೀನದಿ.
ನಳನೆಂಬರಾಜ = ನಳರಾಜ.
ಸ್ತ್ರೀ ಎಂಬ ದೇವತೆ = ಸ್ತ್ರೀದೇವತೆ.
ಭೂಮಿಯೆಂಬ ಮಾತೆ = ಭೂಮಾತೆ.
ವಿಂಧ್ಯವೆಂಬ ಪರ್ವತ = ವಿಂಧ್ಯಪರ್ವತ.
ಈಗ ಕೆಳಗೆ ಕೆಲವೊಂದು ಕರ್ಮಧಾರಯ ಸಮಸ್ತಪದಗಳ ಪಟ್ಟಿಯನ್ನೇ ಕೊಟ್ಟಿದೆ. ಇವೆಲ್ಲ ಹಳಗನ್ನಡಕಾವ್ಯಗಳಲ್ಲಿ ವಿಶೇಷವಾಗಿ ಪ್ರಯೋಗಿಸಲ್ಪಡುತ್ತವೆ. ಅಲ್ಪ ಸ್ವಲ್ಪ ಹಳಗನ್ನಡ ಗದ್ಯ ಪದ್ಯ ಭಾಗಗಳನ್ನು ಓದುವ ನೀವು ಇವುಗಳ ಸ್ಥೂಲಪರಿಚಯ ಮಾಡಿಕೊಂಡರೆ ಸಾಕು.
(vii) ಚೆಂಗಣಗಿಲೆ, ಕೆಂಗಣಗಿಲೆ, ಚೆಂದೆಂಗು, ಕೆಂದೆಂಗು, ಚೆಂಬವಳ್, ಚೆಂದಳಿರ್, ಕೆಂದಳಿರ್, ಕೇಸಕ್ಕಿ, ಪೆರ್ಮರ್, ಪೆರ್ಬಾಗಿಲ್, ಕೆಮ್ಮಣ್ಣು, ಕೆಂಜೆಡೆ, ನಿಡುಗಣ್, ನಿಟ್ಟುಸಿರ್, ನಿಟ್ಟೋಟ, ಕೆಮ್ಮುಗಿಲ್, ಕೆನ್ನೀರ್, ಬೆನ್ನೀರ್, ಬೆಂಬೂದಿ, ಬೆಂಗದಿರ್, ತಂಗದಿರ್, ಪೇರಾನೆ, ಪೇರಡವಿ, ಪೇರಾಲ, ತೆಳ್ವಸಿರ್, ಕಿಸುಮಣ್, ಪೆರ್ವಿದಿರ್, ಪರ್ವೊದರ್, ತೆಳ್ಗದಂಪು, ಒಳ್ಗನ್ನಡ, ಬೆಳ್ಮುಗಿಲ್, ಬಲ್ಮುಗುಳ್, ಬೆಳ್ದಾವರೆ, ಕಟ್ಟಿರುಳ್, ಕಟ್ಟಿರುವೆ, ಕಟ್ಟಾಳ್, ತಣ್ಣಿಳಲ್, ತಂಬೆಲರ್, ತಂಗಾಳಿ-ಇತ್ಯಾದಿ.
(೩) ದ್ವಿಗುಸಮಾಸ
ಎರಡು+ಕೆಲ=ಇಕ್ಕೆಲ (ಇರ್ಕೆಲ), ಮೂರು+ಮಡಿ=ಮುಮ್ಮಡಿ -ಇಕ್ಕೆಲ, ಮುಮ್ಮಡಿ ಇತ್ಯಾದಿ ಸಮಸ್ತಪದಗಳು ಪೂರ್ವದ ಪದವು ಸಂಖ್ಯಾವಾಚಕವಾಗಿ ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗಿವೆ. ದ್ವಿಗುಸಮಾಸವೆಂದರೆ ಪೂರ್ವಪದವು ಸಂಖ್ಯಾವಾಚಕವಾಗಿಯೇ ಇರಬೇಕು.
(೭೯) ದ್ವಿಗುಸಮಾಸ:- ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗುಸಮಾಸವೆನಿಸುವುದು. (ಇದೂ ಕೂಡ ತತ್ಪುರುಷ ಸಮಾಸದ ಒಂದು ಭೇದವೇ ಎಂದು ಹೇಳುವರು.)
(i) ಕನ್ನಡ – ಕನ್ನಡ ಶಬ್ದಗಳು ಸೇರಿ ಆದುದಕ್ಕೆ–
ಉದಾರಹಣೆಗೆ:-
ಒಂದು | + | ಕಟ್ಟು | = | ಒಗ್ಗಟ್ಟು | (ಕಕಾರಕ್ಕೆ ಗಕಾರಾದೇಶ) |
ಎರಡು | + | ಮಡಿ | = | ಇಮ್ಮಡಿ | |
ಮೂರು | + | ಮಡಿ | = | ಮುಮ್ಮಡಿ | |
ನಾಲ್ಕು | + | ಮಡಿ | = | ನಾಲ್ವಡಿ | (ಮಕಾರಕ್ಕೆ ವಕಾರಾದೇಶ) |
ಐದು | + | ಮಡಿ | = | ಐವಡಿ (ಐದುಮಡಿ) | ( ) |
ಎರಡು | + | ಬಾಳ್ | = | ಇರ್ವಾಳ್ | |
ಎರಡು | + | ತೆರ | = | ಎರಳ್ತೆರ (ಇರ್ತೆರ) | |
ಎರಡು | + | ಪೆಂಡಿರ್ | = | ಇರ್ವೆಂಡಿರ್ (ಇರ್ಪೆಂಡಿರ್) | |
ಎರಡು | + | ಮಾತು | = | ಎರಳ್ಮಾತು | |
ಮೂರು | + | ಗಾವುದ | = | ಮೂಗಾವುದ | |
ಮೂರು | + | ಕಣ್ಣು | = | ಮುಕ್ಕಣ್ಣು | |
ಒಂದು | + | ಕಣ್ಣು | = | ಒಕ್ಕಣ್ಣು |
(ii) ಸಂಸ್ಕೃತ – ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ[8]–
ಪಂಚಗಳಾದ | + | ಇಂದ್ರಿಯಗಳು | = | ಪಂಚೇಂದ್ರಿಯಗಳು |
ಸಪ್ತಗಳಾದ | + | ಅಂಗಗಳು | = | ಸಪ್ತಾಂಗಗಳು |
ಪಂಚಗಳಾದ | + | ವಟಗಳು | = | ಪಂಚವಟಗಳು |
ದಶಗಳಾದ | + | ವಾಯುಗಳು | = | ದಶವಾಯುಗಳು |
ದಶಗಳಾದ | + | ಮುಖಗಳು | = | ದಶಮುಖಗಳು |
ತ್ರಿ ಆದ | + | ನೇತ್ರಗಳು | = | ತ್ರಿನೇತ್ರಗಳು |
ಸಪ್ತಗಳಾದ | + | ಲೋಕಗಳು | = | ಸಪ್ತಲೋಕಗಳು |
ಅಷ್ಟಾದಶಗಳಾದ | + | ಪುರಾಣಗಳು | = | ಅಷ್ಟಾದಶಪುರಾಣಗಳು |
ಸಪ್ತಗಳಾದ | + | ಸ್ವರಗಳು | = | ಸಪ್ತಸ್ವರಗಳು |
ಏಕವಾದ | + | ಅಂಗ | = | ಏಕಾಂಗ |
ದ್ವಿ ಆದ | + | ಶಿರ | = | ದ್ವಿಶಿರ |
ಸಪ್ತಗಳಾದ | + | ಸಾಗರಗಳು | = | ಸಪ್ತಸಾಗರಗಳು |
(೪) ಅಂಶಿಸಮಾಸ
ಅಂಗೈ, ಮುಂಗೈ – ಈ ಸಮಸ್ತಪದಗಳನ್ನು ಕೈಯ+ಅಡಿ[9]=ಅಂಗೈ, ಕೈಯ+ಮುಂದು= ಮುಂಗೈ – ಇತ್ಯಾದಿಯಾಗಿ ಬಿಡಿಸಿ ಹೇಳಬಹುದು. ಈ ಎರಡು ಪದಗಳಲ್ಲಿ-ಒಂದು ಕೈ ಎಂಬ ಪದವೂ, ಇನ್ನೊಂದು ಅದರ (ಕೈಯ) ಒಂದು ಅಂಶವನ್ನು ಹೇಳುವ ‘ಅಡಿ’ ಎಂಬ ಪದವೂ ಇವೆ. ಕೈ ಯೆಂಬುದು ಅನೇಕ ಅಂಶಗಳನ್ನೊಳಗೊಂಡ ಅಂಶಿ, ‘ಅಡಿ’ ಎಂಬುದು ಅಂಶ. ಹೀಗೆ ಒಂದು ಅಂಶಿ ಒಂದು ಅಂಶ ಇವುಗಳನ್ನೊಳಗೊಂಡು ಸಮಾಸವಾಗುವುದೇ ಅಂಶಿಸಮಾಸ. ಇಲ್ಲಿ ಪೂರ್ವಪದ, ಉತ್ತರದ ಎರಡೂ ಪದಗಳು ಸೇರಿ ಸಮಾಸಗಳಾದ ಮೇಲೆ (ಅಂಗೈ-ಮುಂಗೈ ಹೀಗಾದ ಮೇಲೆ) ಅಡಿ, ಮುಂದು-ಎಂಬ ಪೂರ್ವಪದಗಳ ಅರ್ಥವೇ ಪ್ರಧಾನವಾಗುವುದು. ಸಂಸ್ಕೃತದಲ್ಲಿ ಹೀಗೆ ಪೂರ್ವಪದದ ಅರ್ಥ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅವ್ಯಯೀಭಾವವೆನ್ನುವರು. ಅದನ್ನನುಸರಿಸಿ ಕನ್ನಡದಲ್ಲೂ ಕೆಲವರು ಈ ಅಂಶಿಸಮಾಸವನ್ನು ‘ಅವ್ಯಯೀಭಾವ’ ಎಂದು ಕರೆಯುವುದುಂಟು[10].
(೮೦) ಅಂಶಿಸಮಾಸ:- ಪೂರ್ವೋತ್ತರಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಆರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆನ್ನುವರು. (ಇದನ್ನು ಕೆಲವರು ಅವ್ಯಯೀಭಾವವೆಂದೂ ಕರೆಯುವುದುಂಟು.)
ಕೈಯ | + | ಅಡಿ | = | ಅಂಗೈ | – | (ಅಡಿ ಶಬ್ದದಲ್ಲಿರುವ ಡಿ ಅಕ್ಷರಕ್ಕೆ ಅನುಸ್ವಾರಾದೇಶ ಮತ್ತು ಕಕಾರಕ್ಕೆ ಗಕಾರಾದೇಶ) |
ಕಾಲ | + | ಅಡಿ | = | ಅಂಗಾಲು | – | (ಅಡಿ ಶಬ್ದದಲ್ಲಿರುವ ಡಿ ಕಾರಕ್ಕೆ ಅನುಸ್ವಾರ, ಕಕಾರಕ್ಕೆ ಗಕಾರಾದೇಶ) |
ಕೈಯ | + | ಮುಂದು | = | ಮುಂಗೈ | – | (ಮುಂದು ಎಂಬುದರಲ್ಲಿನ ದುಕಾರ ಲೋಪ) |
ಕಾಲು | + | ಮೇಲು | = | ಮೇಂಗಾಲ್ | – | (ಮೇಲು ಶಬ್ದದಲ್ಲಿರುವ ಲು ಕಾರಕ್ಕೆ ಅನುಸ್ವಾರ, ಕಕಾರಕ್ಕೆ ಗಕಾರಾದೇಶ) |
ಕೈಯ | + | ಮೇಲು | = | ಮೇಂಗೈ | – | ( ) |
ಕಾಲ | + | ಮುಂದು | = | ಮುಂಗಾಲ್ | ||
ಪಗಲಿನ | + | ಮುಂದು | = | ಮುಂಬಗಲ್ |
ಇಲ್ಲ | + | ಪಿಂತು | = | ಪಿತ್ತಿಲ್[11] |
ತಲೆಯ | + | ಹಿಂದು | = | ಹಿಂದಲೆ |
ತಲೆಯ | + | ಮುಂದು | = | ಮುಂದಲೆ |
ಮೂಗಿನ | + | ತುದಿ | = | ತುದಿಮೂಗು |
ಹುಬ್ಬಿನ | + | ಕೊನೆ | = | ಕೊನೆಹುಬ್ಬು |
ಹುಬ್ಬಿನ | + | ಕುಡಿ | = | ಕುಡಿಹುಬ್ಬು |
ಕಣ್ಣ | + | ಕಡೆ | = | ಕಡೆಗಣ್ಣು |
ಕೋಟೆಯ | + | ಕೆಳಗು | = | ಕೆಳಗೋಟೆ |
ಕೆರೆಯ | + | ಕೆಳಗು | = | ಕೆಳಗೆರೆ (ಕಿಳ್ಕೆರೆ-ಹ.ಗ.) |
ಕೋಟೆಯ | + | ಮೇಗು | = | ಮೇಗೋಟೆ |
ಪೊಡೆಯ | + | ಕೆಳಗು | = | ಕಿಳ್ಪೊಡೆ (ಕೆಳಗು ಶಬ್ದಕ್ಕೆ ಕಿಳ್ ಆದೇಶ) |
ಮೈಯ | + | ಹೊರಗು | = | ಹೊರಮೈ |
ಮೈಯ | + | ಒಳಗು | = | ಒಳಮೈ |
ತುಟಿಯ | + | ಕೆಳಗು | = | ಕೆಳದುಟಿ |
(i) ಸಂಸ್ಕೃತದ ಅವ್ಯಯೀಭಾವಸಮಾಸಕ್ಕೆ–
ಉದಾಹರಣೆ:-
ಕಾಲವು | + | ಅತಿಕ್ರಮಿಸದಂತೆ ಉಳ್ಳದ್ದು | = | ಯಥಾಕಾಲ[12] |
ಅರ್ಥವು | + | ಅತಿಕ್ರಮಿಸದಂತೆ ಉಳ್ಳದ್ದು | = | ಯಥಾರ್ಥ |
ಸ್ಥಿತಿಯನ್ನು | + | ಅತಿಕ್ರಮಿಸದಂತೆ ಉಳ್ಳದ್ದು | = | ಯಥಾಸ್ಥಿತಿ ನಿಮಿತ್ತವಲ್ಲದುದು = ನಿರ್ನಿಮಿತ್ತ |
ಮೇಲಿನ ಸಂಸ್ಕೃತದ ಅವ್ಯಯೀಭಾವ ಸಮಾಸದಲ್ಲಿ ಯಥಾ, ನಿರ್-ಇತ್ಯಾದಿ ಪದಗಳು, ಅವ್ಯಯಗಳು, ಕಾಲ, ಅರ್ಥ, ಸ್ಥಿತಿ, ನಿಮಿತ್ತ-ಮೊದಲಾದವು ನಾಮಪದಗಳು. ಹೀಗೆ ಒಂದು ಅವ್ಯಯವು ನಾಮಪದದೊಡನೆ ಸೇರಿ ಸಮಾಸವಾಗಿ ಅವ್ಯಯೀಭಾವವೆನಿಸುವುದು. ಕನ್ನಡದಲ್ಲಿ ಈ ಪದಗಳು ಅಂದರೆ ಯಥಾರ್ಥ, ಯಥಾಸ್ಥಿತಿ-ಇತ್ಯಾದಿ ಪದಗಳ ಬಳಕೆಯಲ್ಲಿರುವುದರಿಂದ ಇಲ್ಲಿ ಈ ಉದಾಹರಣೆಗಳನ್ನು ಕೊಟ್ಟಿದೆ.
(೫) ದ್ವಂದ್ವಸಮಾಸ
(ಅ) ಆತನು ಹೊಲಮನೆ ಮಾಡಿಕೊಂಡಿದ್ದಾನೆ.
(ಆ) ಕೆರೆಕಟ್ಟೆಗಳನ್ನು ಕಟ್ಟಿಸಿದನು.
ಇತ್ಯಾದಿ ವಾಕ್ಯಗಳಲ್ಲಿ ಬಂದಿರುವ ಹೊಲಮನೆ, ಕರೆಕಟ್ಟೆ ಈ ಎರಡು ಪದಗಳನ್ನು ಬಿಡಿಸಿ ಬರೆದರೆ ಹೊಲವನ್ನು + ಮನೆಯನ್ನು = ಹೊಲಮನೆಗಳನ್ನು ಅಥವಾ ಹೊಲಮನೆಯನ್ನು ಎಂದೂ, ಕರೆಯನ್ನು + ಕಟ್ಟೆಯನ್ನು, ಕರೆಕಟ್ಟೆಗಳನ್ನು ಅಥವಾ ಕೆರೆಕಟ್ಟೆಯನ್ನು – ಇತ್ಯಾದಿಯಾಗಿ ಹೇಳಬಹುದು.
ಇಲ್ಲಿ ಈ ಪೂರ್ವದಲ್ಲಿ ಬಂದ ಸಮಾಸಗಳಂತೆ ಪೂರ್ವದ ಅಥವಾ ಉತ್ತರದ ಯಾವುದಾದರೊಂದು ಪದದ ಅರ್ಥಕ್ಕೆ ಪ್ರಧಾನತೆ ಇರದೆ, ಎಲ್ಲ ಪದಗಳ ಅರ್ಥವೂ ಪ್ರಧಾನವಾಗಿರುವುವು. ಹೊಲವನ್ನು ಮಾಡಿಕೊಂಡನು. ಮನೆಯನ್ನು ಮಾಡಿಕೊಂಡನು-ಎಂದರೆ ಹೊಲ, ಮನೆ ಎರಡೂ ಪದಗಳಿಗೆ ‘ಸಹಯೋಗ’ ತೋರುತ್ತದೆ. ಹೊಲಕ್ಕೆ ಮನೆಯ, ಮನೆಗೆ ಹೊಲದ ಸಹಯೋಗ ಕರ್ತೃವಿಗೆ ಇದೆ ಎಂದು ಅರ್ಥ. ಇದು ಹಾಗೆಯೆ ಕೆರೆಯನ್ನು, ಕಟ್ಟೆಯನ್ನು ಇವೆರಡು ಶಬ್ದಗಳಿಗೂ ಕರ್ತೃಪದಕ್ಕೂ ಸಹಯೋಗವಿರುತ್ತದೆ. ಹೀಗೆ ಸಹಯೋಗ ತೋರುವಂತೆ ಹೇಳುವ ಸಮಾಸವೇ ದ್ವಂದ್ವಸಮಾಸವೆನಿಸುವುದು. ಈ ಸಮಾಸದಲ್ಲಿ ಎರಡಕ್ಕಿಂತ ಹೆಚ್ಚು ಪದಗಳೂ ಇರಬಹುದು. ಈ ಸಮಾಸದ ಸೂತ್ರವನ್ನು ಕೆಳಗಿನಂತೆ ಹೇಳಬಹುದು.
(೮೧) ದ್ವಂದ್ವಸಮಾಸ:- ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವಸಮಾಸವೆಂದು ಹೆಸರು.
ಉದಾಹರಣೆಗೆ:-
(i) ಕನ್ನಡ – ಕನ್ನಡ ಶಬ್ದಗಳು ಸೇರಿ ಸಮಾಸವಾಗುವುದಕ್ಕೆ:
ಕೆರೆಯೂ + ಕಟ್ಟೆಯೂ + ಬಾವಿಯೂ | = | ಕೆರೆಕಟ್ಟೆಬಾವಿಗಳು ಅಥವಾ |
= | ಕೆರೆಕಟ್ಟೆಬಾವಿ | |
ಗಿಡವೂ, ಮರವೂ, ಬಳ್ಳಿಯೂ, ಪೊದೆಯೂ | = | ಗಿಡಮರಬಳ್ಳಿಪೊದೆಗಳು |
= | ಗಿಡಮರಬಳ್ಳಿಪೊದೆ | |
ಆನೆಯೂ, ಕುದುರೆಯೂ, ಒಂಟೆಯೂ | = | ಆನೆಕುದುರೆಒಂಟೆಗಳು |
= | ಆನೆಕುದುರೆಒಂಟೆ | |
ಗುಡುಗು, ಸಿಡಿಲೂ, ಮಿಂಚು | = | ಗುಡುಗುಸಿಡಿಲುಮಿಂಚುಗಳು |
= | ಗುಡುಗುಸಿಡಿಲುಮಿಂಚು |
ಇಲ್ಲಿ ದ್ವಂದ್ವಸಮಾಸವಾದ ಮೇಲೆ ಸಮಸ್ತಪದವು ಬಹುವಚನಾಂತವಾಗಿಯೂ, ಏಕವಚನಾಂತವಾಗಿಯೂ ನಿಲ್ಲುವುದುಂಟು. ಅದು ಹೇಳುವವರ ಇಚ್ಚೆ. ಏಕವಚನಾಂತವಾಗಿ ನಿಂತರೆ ಸಮಾಹಾರದ್ವಂದ್ವ ವೆಂದೂ, ಬಹುವಚನಾಂತವಾಗಿ ನಿಂತರೆ ಇತರೇತರುಯೋಗ ದ್ವಂದ್ವ ವೆಂದೂ ಹೆಸರು.
(ii) ಸಂಸ್ಕೃತ – ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗುವುದಕ್ಕೆ:-
ಗಿರಿಯೂ+ವನವೂ+ದುರ್ಗವೂ=ಗಿರಿವನದುರ್ಗಗಳು=ಗಿರಿವನದುರ್ಗ
ಸೂರ್ಯನೂ+ಚಂದ್ರನೂ+ನಕ್ಷತ್ರವೂ=ಸೂರ್ಯಚಂದ್ರನಕ್ಷತ್ರಗಳು=ಸೂರ್ಯಚಂದ್ರನಕ್ಷತ್ರ
ಕರಿಯೂ+ತುರಗವೂ+ರಥವೂ=ಕರಿತುರಗರಥಗಳು=ಕರಿತುರಗರಥ – ಇತ್ಯಾದಿ.
(೬) ಬಹುವ್ರೀಹಿ ಸಮಾಸ
ಹಣೆಗಣ್ಣ, ಮುಕ್ಕಣ್ಣ, ನಿಡುಮೂಗ -ಈ ಸಮಾಸಪದಗಳನ್ನು ಬಿಡಿಸಿಬರೆದರೆ ಹಣೆಯಲ್ಲಿ+ಕಣ್ಣುಉಳ್ಳವ, ಮೂರು+ಕಣ್ಣುಉಳ್ಳವ, ನಿಡಿದು+ಮೂಗುಉಳ್ಳವ – ಹೀಗೆ ಆಗುತ್ತವೆ. ಹಣೆಯಲ್ಲಿ+ಕಣ್ಣು -ಈ ಎರಡೂ ಪದಗಳ ಅರ್ಥವು ಇಲ್ಲಿ ಮುಖ್ಯವೇ ಅಲ್ಲ. ಈ ಎರಡೂ ಪದಗಳ ಅರ್ಥದಿಂದ ಹೊಳೆಯುವ ಸಮಾಸದಲ್ಲಿಲ್ಲದ ಶಿವ ಎಂಬ ಅನ್ಯ ಪದದ ಅಂದರೆ ಮೂರನೆಯ ಪದದ ಅರ್ಥವೇ ಲಕ್ಷ್ಯ (ಮುಖ್ಯವಾದುದು), ಮೂರು+ಕಣ್ಣು ಉಳ್ಳವನು ಯಾರೋ ಅವನು-ಅಂದರೆ ಶಿವ ಎಂಬುದರ ಅರ್ಥ ಮುಖ್ಯ. ಅದರಂತೆ ನಿಡಿದಾದ ಮೂಗು ಉಳ್ಳ ವ್ಯಕ್ತಿ ಯಾರೋ ಅವನೇ ಮುಖ್ಯಾರ್ಥ. ಇಲ್ಲಿ ಶಿವ ಎಂಬ ಪದಕ್ಕೆ ಹಣೆಯಲ್ಲಿ ಕಣ್ಣು-ಎಂಬೆರಡು ಪದಗಳು ವಿಶೇಷಣಗಳು. ಅಥವಾ ಇವೆರಡೂ ಪದಗಳಿಗೆ ಶಿವ ಎಂಬುದು ವಿಶೇಷ್ಯವಾಯಿತು. ಇದರ ಹಾಗೆಯೇ ಉಳಿದವುಗಳನ್ನು ತಿಳಿಯಬೇಕು. ಹೀಗೆ ಸಮಾಸದಲ್ಲಿರುವ ಪದಗಳ ಅರ್ಥಕ್ಕೆ ಪ್ರಾಧಾನ್ಯತೆಯೇ ಇಲ್ಲದೆ ಅನ್ಯವಾದ ಬೇರೊಂದು ಪದದ ಅರ್ಥವು ಪ್ರಧಾನವಾಗಿ ಇಲ್ಲಿ ಇರುತ್ತದೆ.
(೮೨) ಬಹುವ್ರೀಹಿ ಸಮಾಸ:- ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ (ಅನ್ಯಪದದ) ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸವೆನ್ನುವರು.
ಉದಾಹರಣೆಗೆ:
(i) ಕನ್ನಡ – ಕನ್ನಡ ಪದಗಳು ಸೇರಿ ಸಮಾಸವಾಗುವುದಕ್ಕೆ–
ಮೂರು+ಕಣ್ಣು-ಉಳ್ಳವ=ಮುಕ್ಕಣ್ಣ (ಮೂರು ಪದಕ್ಕೆ ಮುಕ್ ಆದೇಶ)
ನಾಲ್ಕು+ಮೊಗ-ಉಳ್ಳವ=ನಾಲ್ಮೊಗ (ನಾಲ್ಕು ಪದಕ್ಕೆ ನಾಲ್ ಆದೇಶ)
ಕೆಂಪು(ಆದ) ಕಣ್ಣು-ಉಳ್ಳವ=ಕೆಂಗಣ್ಣ.
ಡೊಂಕು(ಆದ) ಕಾಲು-ಉಳ್ಳವ=ಡೊಂಕುಗಾಲ.
ಕಡಿದು(ಆದ) ಚಾಗ-ಉಳ್ಳವ-ಕಡುಚಾಗಿ.
ಮೇಲೆ ಹೇಳಿದ ಎಲ್ಲ ಉದಾಹರಣೆಗಳನ್ನು ನೋಡಿದರೆ ಪೂರ್ವದ ಉತ್ತರದ ಪದಗಳೆರಡೂ ಸಮಾನ ವಿಭಕ್ತಿಯಿಂದ ಕೂಡಿವೆ. ಅಂದರೆ ಒಂದೇ ವಿಭಕ್ತ್ಯಂತವಾಗಿವೆ. ಹೀಗೆ ಪೂರ್ವೋತ್ತರಪದಗಳೆರಡೂ ಸಮಾನ ವಿಭಕ್ತಿಯಿಂದ ಕೂಡಿದ್ದರೆ ಅದನ್ನು ‘ಸಮಾನಾಧಿಕರಣ’ ಬಹುವ್ರೀಹಿ ಎಂದು ಕರೆಯುವರು. ಭಿನ್ನ ಭಿನ್ನ (ಬೇರೆ ಬೇರೆ) ವಿಭಕ್ತಿಗಳಿಂದ ಕೂಡಿದ್ದರೆ ‘ವ್ಯಧಿಕರಣ’ ಬಹುವ್ರೀಹಿ ಎನ್ನುವರು. ವ್ಯಧಿಕರಣ ಬಹುವ್ರೀಹಿಗೆ ಕೆಳಗಣ ಉದಾಹರಣೆಗಳನ್ನು ನೋಡಿರಿ.
ವಿ | + | ಅಧಿಕರಣ | – | ವ್ಯಧಿಕರಣ | = | ವಿಗತವಾದ ಅಧಿಕರಣ |
ಹಣೆಯಲ್ಲಿ | + | ಕಣ್ಣು | – | ಉಳ್ಳವ | = | ಹಣೆಗಣ್ಣ (ಶಿವ) |
ಕಿಚ್ಚು | + | ಕಣ್ಣಿನಲ್ಲಿ | – | ಆವಂಗೋ ಅವನು | = | ಕಿಚ್ಚುಗಣ್ಣ (ಶಿವ) |
ಇದರ ಹಾಗೆಯೇ ಹಳಗನ್ನಡದಲ್ಲಿ ಬರುವ ಕೆಲವು ಉದಾಹರಣೆಗಳನ್ನು ನೋಡಿರಿ.
ಕೊಂಕಿದುದು+ಬಿಲ್-ಆವಂಗೋ=ಕೊಂಕುವಿಲ್ಲ (ಸಮಾನಾಧಿಕರಣ)
ಅಲರ್ಗಳ್+ಕಣೆಗಳ್-ಆವಂಗೋ=ಅಲರ್ಗಣೆಯ (ಸಮಾನಾಧಿಕರಣ)
ಬಗ್ಗದ ತೊವಲು+ಉಡಿಗೆ-ಆವಂಗೋ=ಬಗ್ಗದೊವಲುಡೆಯಂ (ಸಮಾನಾಧಿಕರಣ)
ಇದರ ಹಾಗೆಯೇ ಮೀನನ್ನು ಕೊಲ್ಲುವವ-ಮೀಂಗುಲಿ, ಹಲ್ಲು ಇಲ್ಲದುದು-ಹಲ್ಲಿಲಿ, ಕಬ್ಬನ್ನು ಬಿಲ್ಲಾಗಿ ಉಳ್ಳವ-ಕರ್ಬುವಿಲ್ಲ. (ಕಬ್ಬನ್ನು+ಬಿಲ್ಲಾಗಿ ಉಳ್ಳವ ಕರ್ಪುವಿಲ್ಲ).
ಮೇಲಿನ ಉದಾಹರಣೆಗಳನ್ನು ನೋಡಿದರೆ, ಸಮಾಸವಾದ ಮೇಲೆ ‘ಅ’ ಅಥವಾ ‘ಇ’ ಎಂಬ ಪ್ರತ್ಯಯಗಳು ಸೇರಿದುದು ಕಂಡುಬರುವುದು. ‘ಡೊಂಕುಗಾಲ’ ಎಂಬಲ್ಲಿ ‘ಅ’ ಎಂಬುದೂ, ‘ಕಡುಚಾಗಿ’ ಎಂಬಲ್ಲಿ ‘ಇ’ ಎಂಬುದೂ ಬಂದಿವೆ. ಇದರ ಹಾಗೆಯೇ ಎಲ್ಲ ಕಡೆಗೂ ಬಹುವ್ರೀಹಿಸಮಾಸದಲ್ಲಿ ‘ಅ’ ಅಥವಾ ‘ಇ’ ಪ್ರತ್ಯಯಗಳು ಬರುತ್ತವೆ. ಇವಕ್ಕೆ ಸಮಾಸಾಂತ ಪ್ರತ್ಯಯಗಳೆಂದು ಕರೆಯುವರು.
(ii) ಸಂಸ್ಕೃತ – ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗುವುದಕ್ಕೆ ಉದಾಹರಣೆ:-
ಚಕ್ರವು+ಪಾಣಿಯಲ್ಲಿ ಆವಂಗೋ ಅವನು=ಚಕ್ರಪಾಣಿ (ವ್ಯಧಿಕರಣ)
ಫಾಲದಲ್ಲಿ+ನೇತ್ರವನ್ನು ಉಳ್ಳವನು=ಫಾಲನೇತ್ರ (ವ್ಯಧಿಕರಣ)
ಇಕ್ಷುವನ್ನು+ಕೋದಂಡವನ್ನಾಗಿ ಉಳ್ಳವ=ಇಕ್ಷುಕೋದಂಡ (ಸಮಾನಾಧಿಕರಣ)
ಇದುವರೆಗೆ ಬಹುವ್ರೀಹಿ ಸಮಾಸದ ಹಲವಾರು ಉದಾಹರಣೆಗಳನ್ನು ತಿಳಿದಿರಿ. ಇನ್ನೂ ಕೆಲವು ರೀತಿಯ ಉದಾಹರಣೆಗಳು ನಮಗೆ ಇಲ್ಲಿ ಕಾಣಬರುತ್ತವೆ. ಕೆಳಗೆ ವಿವರಿಸಿರುವುದನ್ನು ನೋಡಿರಿ.
“ಅವರಿಗೆ ದೊಡ್ಡ ‘ಹಣಾಹಣಿ’ಯೇ ಆಯಿತು” ಹೀಗೆ ಹೇಳುವುದುಂಟು. ‘ಹಣಾಹಣಿ’ ಎಂದರೆ ಹಣಿಯುವುದರಿಂದ, ಹಣಿಯುವುದರಿಂದ ಆದ ಯುದ್ಧವೇ ‘ಹಣಾಹಣಿ’ ಇಲ್ಲಿ ಜಗಳವೇ ಅನ್ಯಪದವಾಯಿತು. ಇದರಂತೆ-
ಕೋಲಿನಿಂದ+ಕೋಲಿನಿಂದ ಮಾಡಿದ ಜಗಳ-ಕೋಲಾಕೋಲಿ.
ಖಡ್ಗದಿಂದ+ಖಡ್ಗದಿಂದ ಮಾಡಿದ ಜಗಳ-ಖಡ್ಗಾ ಖಡ್ಗಿ.
ಹಣಾಹಣಿ, ಕೋಲಾಕೋಲಿ, ಖಡ್ಗಾಖಡ್ಗಿ ಇತ್ಯಾದಿ ಸಮಾಸಗಳನ್ನು ವ್ಯತಿಹಾರ ಲಕ್ಷಣ ವೆಂದು ಬಹುವ್ರೀಹಿಸಮಾಸದಲ್ಲಿ ಒಂದು ಬಗೆಯಾಗಿ ಹೇಳುವರು.
(೭) ಕ್ರಿಯಾಸಮಾಸ
(i) ಮನೆಕಟ್ಟಿದನು
(ii) ಊರುಸೇರಿದನು
(iii) ಕಣ್ಗಾಣದೆ ಇದ್ದನು
(iv) ಮೈಮರೆದು ಕುಳಿತನು
ಮೇಲಿನ ವಾಕ್ಯಗಳಲ್ಲಿ ಗೆರೆ ಎಳೆದಿರುವ ಸಮಸ್ತಪದಗಳನ್ನು ಬಿಡಿಸಿದರೆ-
ಮನೆಯನ್ನು + ಕಟ್ಟಿದನು
ಕಣ್ಣನ್ನು + ಕಾಣದೆ
ಊರನ್ನು + ಸೇರಿದನು
ಮೈಯನ್ನು + ಮರೆತು
ಎಂದು ಆಗುವುವು. ಪೂರ್ವದಲ್ಲಿರುವ ಪದಗಳೆಲ್ಲ ದ್ವಿತೀಯಾವಿಭಕ್ತ್ಯಂತಗಳಾದ ನಾಮಪದ ಗಳಾಗಿವೆ. ಉತ್ತರದಲ್ಲಿ ಮಾತ್ರ ಕಟ್ಟಿದನು, ಸೇರಿದನು ಎಂಬ ಕ್ರಿಯಾಪದಗಳೂ, ಕಾಣದೆ, ಮರೆತು ಇತ್ಯಾದಿ ಅಪೂರ್ಣ ಕ್ರಿಯೆಗಳೂ (ಕೃದಂತಗಳೂ)[13] ಇವೆ. ಅಂದರೆ ಉತ್ತರ ಪದಗಳೆಲ್ಲ ಕ್ರಿಯೆಯಿಂದ ಕೂಡಿವೆ ಎನ್ನಬಹುದು. ಒಟ್ಟಿನಲ್ಲಿ ಮೇಲೆ ಹೇಳಿದ ಎಲ್ಲ ಪೂರ್ವಪದಗಳು ದ್ವಿತೀಯಾಂತ ನಾಮಪದಗಳಿಂದಲೂ, ಉತ್ತರಪದವು ಕ್ರಿಯೆಯಿಂದಲೂ ಕೂಡಿವೆ ಎನ್ನಬಹುದು. ಕೆಲವು ಕಡೆ-ನೀರಿನಿಂದ+ಕೂಡಿ=ನೀರ್ಗೂಡಿ, ಹೀಗೆ ತೃತೀಯಾಂತ ವಾಗಿಯೂ ಪೂರ್ವಪದವಿರಬಹುದು. ಆದರೆ ದ್ವಿತೀಯಾವಿಭಕ್ತ್ಯಂತವಾಗಿರುವುದೇ ಹೆಚ್ಚು. ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
(೮೩) ಕ್ರಿಯಾಸಮಾಸ:- ಪೂರ್ವಪದವು ಪ್ರಾಯಶಃ ದ್ವಿತೀಯಾಂತವಾಗಿದ್ದು ಉತ್ತರದಲ್ಲಿರುವ ಕ್ರಿಯೆಯೊಡನೆ ಸೇರಿ ಆಗುವ ಸಮಾಸವನ್ನು ಕ್ರಿಯಾಸಮಾಸವೆನ್ನುವರು.
ಪ್ರಾಯಶಃ ಎಂದು ಸೂತ್ರದಲ್ಲಿ ಹೇಳಿರುವುದರಿಂದ ಬೇರೆ ವಿಭಕ್ತಿಗಳು ಬರುತ್ತವೆಂದು ತಿಳಿಯಬೇಕು. ಈ ಸಮಾಸದಲ್ಲಿ ಅರಿಸಮಾಸ ದೋಷವಿಲ್ಲ.
(i) ಕನ್ನಡ – ಕನ್ನಡ ಶಬ್ದಗಳು ಸೇರಿ ಆಗುವ ಸಮಾಸಕ್ಕೆ ಉದಾಹರಣೆ–
ಮೈಯನ್ನು | + | ತಡವಿ | = | ಮೈದಡವಿ (ತಕಾರಕ್ಕೆ ದಕಾರಾದೇಶ) |
ಕೈಯನ್ನು | + | ಮುಟ್ಟಿ | = | ಕೈಮುಟ್ಟಿ |
ಕಣ್ಣನ್ನು | + | ಮುಚ್ಚಿ | = | ಕಣ್ಣುಮುಚ್ಚಿ |
ತಲೆಯನ್ನು | + | ಕೊಡವಿ | = | ತಲೆಗೊಡವಿ (ಕಕಾರಕ್ಕೆ ಗಕಾರಾದೇಶ) (ತಲೆಕೊಡವಿ) |
ಮೈಯನ್ನು | + | ಮುಚ್ಚಿ | = | ಮೈಮುಚ್ಚಿ |
ತಲೆಯನ್ನು | + | ತೆಗೆದನು | = | ತಲೆದೆಗೆದನು (ತಕಾರಕ್ಕೆ ದಕಾರಾದೇಶ) |
ಕಣ್ಣನ್ನು | + | ತೆರೆದನು | = | ಕಣ್ಣು ತೆರೆದನು |
ಕಣ್ಣಂ | + | ತೆರೆ | = | ಕಣ್ದೆರೆ (ಹ.ಗ. ರೂಪ) (ತಕಾರಕ್ಕೆ ದಕಾರಾದೇಶ) |
ಕೈಯನ್ನು | + | ಪಿಡಿದು | = | ಕೈವಿಡಿದು (ಪಕಾರಕ್ಕೆ ವಕಾರಾದೇಶ) |
ಮಣೆಯನ್ನು | + | ಇತ್ತು | = | ಮಣೆಯಿತ್ತು |
ಬಟ್ಟೆಯನ್ನು | + | ತೋರು | = | ಬಟ್ಟೆದೋರು (ತಕಾರಕ್ಕೆ ದಕಾರಾದೇಶ) |
ಕೈಯನ್ನು | + | ಕೊಟ್ಟನು | = | ಕೈಕೊಟ್ಟನು |
ದಾರಿಯನ್ನು | + | ಕಾಣನು | = | ದಾರಿಗಾಣನು (ಕಕಾರಕ್ಕೆ ಗಕಾರಾದೇಶ) |
(ii) ಪೂರ್ವಪದವು ಬೇರೆ ವಿಭಕ್ತ್ಯಂತ ತರುವುದಕ್ಕೆ–
ನೀರಿನಿಂದ | + | ಕೂಡಿ | = | ನೀರ್ಗೂಡಿ (ಕಕಾರಕ್ಕೆ ಗಕಾರ) |
ಬೇರಿನಿಂದ | + | ಬೆರಸಿ | = | ಬೇರುವೆರಸಿ (ಬಕಾರಕ್ಕೆ ವಕಾರ) |
ಕಣ್ಣಿನಿಂದ | + | ಕೆಡು | = | ಕೆಂಗೆಡು (ಕಕಾರಕ್ಕೆ ಗಕಾರ) |
ಬೇರಿನಿಂ | + | ಬೆರಸಿ | = | ಬೇರ್ವೆರಸಿ (ಬಕಾರಕ್ಕೆ ವಕಾರ) |
ನೀರಿನಲ್ಲಿ | + | ಮಿಂದು | = | ನೀರುಮಿಂದು[14] |
(iii) ಹಳಗನ್ನಡ ಕ್ರಿಯಾಸಮಾಸ ರೂಪಗಳು–
ಮೈಯಂ | + | ತೊಳೆದು | = | ಮೈದೊಳೆದು |
ಒಳ್ಳುಣಿಸಂ | + | ಇಕ್ಕಿ | = | ಒಳ್ಳುಣಿಸಿಕ್ಕಿ |
ಮುದ್ದಂ | + | ಗೈದು | = | ಮುದ್ದುಗೈದು |
ವಿಳಾಸಮಂ | + | ಮೆರೆದು | = | ವಿಳಾಸಂಮೆರೆದು |
ಬೇರಿನಂ | + | ಬೆರೆಸಿ | = | ಬೇರ್ವೆರಸಿ[15] |
ಕೈಯಂ | + | ತೊಳೆದು | = | ಕೈದೊಳೆದು |
(iv) ಸಂಸ್ಕೃತ ನಾಮಪದದೊಡನೆ ಕನ್ನಡದ ಕ್ರಿಯೆಯು ಸೇರಿ ಆಗುವ ಕ್ರಿಯಾಸಮಾಸದ ಉದಾಹರಣೆಗಳು–
ಕಾರ್ಯವನ್ನು | + | ಮಾಡಿದನು | = | ಕಾರ್ಯಮಾಡಿದನು |
ಸತ್ಯವನ್ನು | + | ನುಡಿದನು | = | ಸತ್ಯನುಡಿದನು |
ಮಾನ್ಯವನ್ನು | + | ಮಾಡಿದನು | = | ಮಾನ್ಯಮಾಡಿದನು |
ಕಾವ್ಯವನ್ನು | + | ಬರೆದನು | = | ಕಾವ್ಯಬರೆದನು |
(೮) ಗಮಕಸಮಾಸ
ಆ ಮನೆ, ಆ ಊರು, ಈ ಮನುಷ್ಯ, ಈ ಹೆಂಗಸು ಇತ್ಯಾದಿ ಸಮಸ್ತಪದಗಳನ್ನು ವಿಗ್ರಹ ವಾಕ್ಯ ಮಾಡಿದರೆ (ಬಿಡಿಸಿ ಬರೆದರೆ), ಅದು+ಮನೆ=ಆ ಮನೆ, ಅದು+ಊರು=ಆ ಊರು, ಇವನು+ಮನುಷ್ಯ=ಈ ಮನುಷ್ಯ, ಇವಳು+ಹೆಂಗಸು=ಈ ಹೆಂಗಸು ಇತ್ಯಾದಿ ರೂಪಗಳಾ ಗುವುವು. ಇಲ್ಲಿ ಪೂರ್ವಪದಗಳೆಲ್ಲ ಅದು, ಇವನು, ಇವಳು ಇತ್ಯಾದಿ ಸರ್ವನಾಮಪದಗ ಳಾಗಿವೆ. ಹೀಗೆ ಪೂರ್ವಪದವು ಸರ್ವನಾಮವಾಗಿ ಉತ್ತರದ ನಾಮಪದದೊಡನೆ ಸೇರಿ ಸಮಾಸವಾಗಿವೆ.
ಸುಡುಗಾಡು, ಹುರಿಗಡಲೆ-ಇತ್ಯಾದಿ ಸಮಸ್ತಪದಗಳನ್ನು ಬಿಡಿಸಿ ಬರೆದರೆ, ಸುಡುವುದು+ಕಾಡು, ಹುರಿದುದು+ಕಡಲೆ-ಹೀಗೆ ಆಗುತ್ತದೆ. ಇಲ್ಲಿಯ ಈ ವಿಗ್ರಹ ವಾಕ್ಯಗಳನ್ನು ಗಮನಿಸಿದರೆ, ಪೂರ್ವಪದಗಳು ಸುಡುವುದು, ಹುರಿದುದು-ಇತ್ಯಾದಿ ಕೃದಂತ ನಾಮಗಳಿಂದ ಕೂಡಿವೆ. ಉತ್ತರದಲ್ಲಿ ನಾಮಪದಗಳಿವೆ. ಹೀಗೆ ಪೂರ್ವಪದವು ಸರ್ವನಾಮವಾದರೂ ಆಗಿರಬಹುದು; ಕೃದಂತವಾದರೂ ಆಗಿರಬಹುದು. ಉತ್ತರದಲ್ಲಿ ನಾಮಪದವಿರಬೇಕು. ಹೀಗಾಗುವ ಸಮಾಸವನ್ನೇ ಗಮಕಸಮಾಸ ವೆನ್ನುತ್ತಾರೆ[16]. ಇದರ ಸೂತ್ರವನ್ನು ಗಮನಿಸಿ.
(೮೪) ಗಮಕಸಮಾಸ:- ಪೂರ್ವಪದವು ಸರ್ವನಾಮ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸವನ್ನು ಗಮಕಸಮಾಸವೆಂದು ಕರೆಯುವರು. ಈ ಸಮಾಸದಲ್ಲಿ ಅರಿಸಮಾಸ ದೋಷವನ್ನು ಎಣಿಸಕೂಡದು.
ಉದಾಹರಣೆಗೆ:-
(i) ಪೂರ್ವಪದವು ಸರ್ವನಾಮದಿಂದ ಕೂಡಿರುವುದಕ್ಕೆ–
ಅವನು | + | ಹುಡುಗ | = | ಆ ಹುಡುಗ |
ಅವಳು | + | ಹೆಂಗಸು | = | ಆ ಹೆಂಗಸು |
ಅದು | + | ಕಲ್ಲು | = | ಆ ಕಲ್ಲು |
ಇವನು | + | ಗಂಡಸು | = | ಈ ಗಂಡಸು |
ಇವಳು | + | ಮುದುಕಿ | = | ಈ ಮುದುಕಿ |
ಇದು | + | ನಾಯಿ | = | ಈ ನಾಯಿ |
(ಮೇಲಿನ ಅವನು, ಅವಳು, ಅದು – ಎಂಬುದಕ್ಕೆ ‘ಆ’ ಎಂಬುದೂ, ಇವನು, ಇವಳು, ಇದು – ಎಂಬುದಕ್ಕೆ ‘ಈ’ ಎಂಬುದೂ ಆದೇಶಗಳಾಗಿ ಬಂದಿವೆ.)
(ii) ಪೂರ್ವಪದ ಕೃದಂತವಾಗಿರುವುದಕ್ಕೆ–
ಮಾಡಿದುದು | + | ಅಡಿಗೆ | = | ಮಾಡಿದಡಿಗೆ |
ತಿಂದುದು | + | ಕೂಳು | = | ತಿಂದಕೂಳು |
ಅರಳುವುದು | + | ಮೊಗ್ಗು | = | ಅರಳುಮೊಗ್ಗು |
ಸೊಕ್ಕಿದುದು | + | ಆನೆ | = | ಸೊಕ್ಕಾನೆ |
ಕಡೆಯುವುದು | + | ಕೋಲು | = | ಕಡೆಗೋಲು |
ಉಡುವುದು | + | ದಾರ | = | ಉಡುದಾರ |
ಬೆಂದುದು | + | ಅಡಿಗೆ | = | ಬೆಂದಡಿಗೆ |
ಆರಿದುದು | + | ಅಡಿಗೆ | = | ಆರಿದಡಿಗೆ |
ಸಿಡಿಯುವುದು | + | ಮದ್ದು | = | ಸಿಡಿಮದ್ದು |
(iii) ಉತ್ತರದ ಸಂಸ್ಕೃತ ಪದದೊಡನೆ ಕೂಡಿರುವ ಸಮಾಸಕ್ಕೆ–
ತಿಂದುದು | + | ಅನ್ನ | = | ತಿಂದಅನ್ನ |
ಬೇಯಿಸುದುದು | + | ಪಕ್ವಾನ್ನ | = | ಬೇಯಿಸಿದ ಪಕ್ವಾನ್ನ |
ಅವನು | + | ಮನುಷ್ಯ | = | ಆ ಮನುಷ್ಯ |
ಮಾಡಿದುದು | + | ಕಾರ್ಯ | = | ಮಾಡಿದ ಕಾರ್ಯ |
ಬೀಸುವುದು | + | ಚಾಮರ | = | ಬೀಸುವಚಾಮರ |
ಪೊಡೆವುದು | + | ಭೇರಿ | = | ಪೊಡೆವಭೇರಿ |
ಪೂಸಿದುದು | + | ಭಸ್ಮ | = | ಪೂಸಿದಭಸ್ಮ |
ಕಂಡುದು | + | ವಿಚಾರ | = | ಕಂಡವಿಚಾರ |
ನೋಡಿದುದು | + | ದೃಶ್ಯ | = | ನೋಡಿದ ದೃಶ್ಯ |
ನೆಯ್ದುದು | + | ವಸ್ತ್ರ | = | ನೆಯ್ದ ವಸ್ತ್ರ |
ತೆಯ್ದುದು | + | ಶ್ರೀಗಂಧ | = | ತೆಯ್ದ ಶ್ರೀಗಂಧ |
-ಇತ್ಯಾದಿ.
ಇದುವರೆಗೆ ಕನ್ನಡ ಸಮಾಸಗಳ ಬಗೆಗೆ ವಿವರವಾಗಿ ಅನೇಕ ಅಂಶಗಳನ್ನು ತಿಳಿದಿದ್ದೀರಿ. ಈಗ ಹಳೆಗನ್ನಡ, ನಡುಗನ್ನಡ ಕಾವ್ಯಗಳಲ್ಲಿ ಪ್ರಯೋಗವಾಗಿರುವ ಮುಖ್ಯವಾದ ಕೆಲವು ಸಮಾಸಗಳ ಪಟ್ಟಿಯನ್ನು ಕೊಟ್ಟಿದೆ. ಅವುಗಳ ಸ್ಥೂಲವಾದ ಜ್ಞಾನ ಮಾಡಿಕೊಳ್ಳಿರಿ.
ನುಣ್ಚರ | – | ನುಣ್ಣಿತು | + | ಸರ | = | ನುಣ್ಚರ | (ಕ.ಧಾ.ಸ.) |
ಇಂಚರ | – | ಇನಿದು | + | ಸರ | = | ಇಂಚರ | (ಕ.ಧಾ.ಸ.) |
ಇನಿವಾತು | – | ಇನಿದು | + | ಮಾತು | = | ಇನಿವಾತು | (ಕ.ಧಾ.ಸ.) |
ನುಣ್ಗದಪು | – | ನುಣ್ಣಿತು | + | ಕದಪು | = | ನುಣ್ಗದಪು | (ಕ.ಧಾ.ಸ.) |
ಹೆದ್ದೇಗ | – | ಹಿರಿದು | + | ತೇಗ | = | ಹೆದ್ದೇಗ | (ಕ.ಧಾ.ಸ.) |
ಹೆಮ್ಮಾರಿ | – | ಹಿರಿದು | + | ಮಾರಿ | = | ಹೆಮ್ಮಾರಿ | (ಕ.ಧಾ.ಸ.) |
ಹೆದ್ದಾರಿ | – | ಹಿರಿದು | + | ದಾರಿ | = | ಹೆದ್ದಾರಿ | (ಕ.ಧಾ.ಸ.) |
ಹೇರಡವಿ | – | ಹಿರಿದು | + | ಅಡವಿ | = | ಹೇರಡವಿ | (ಕ.ಧಾ.ಸ.) |
ಹೇರಾನೆ | – | ಹಿರಿದು | + | ಆನೆ | = | ಹೇರಾನೆ | (ಕ.ಧಾ.ಸ.) |
ಪೇರಾನೆ | – | ಪಿರಿದು | + | ಆನೆ | = | ಪೇರಾನೆ | (ಕ.ಧಾ.ಸ.) |
ಪೇರಡವಿ | – | ಪಿರಿದು | + | ಅಡವಿ | = | ಪೇರಡವಿ | (ಕ.ಧಾ.ಸ.) |
ಪೆರ್ಮರ | – | ಪಿರಿದು | + | ಮರ | = | ಪೆರ್ಮರ | (ಕ.ಧಾ.ಸ.) |
ಪೆರ್ವಿದಿರ್ | – | ಪಿರಿದು | + | ಬಿದಿರ್ | = | ಪೆರ್ವಿದಿರ್ | (ಕ.ಧಾ.ಸ.) |
ಪೆರ್ವೊದರ್ | – | ಪಿರಿದು | + | ಪೊದರ್ | = | ಪೆರ್ವೊದರ್ | (ಕ.ಧಾ.ಸ.) |
ಕೆಂದಳಿರು | – | ಕೆಚ್ಚನೆ | + | ತಳಿರು | = | ಕೆಂದಳಿರು | (ಕ.ಧಾ.ಸ.) |
ಚೆಂದಳಿರು | – | ಕೆಚ್ಚನೆ | + | ತಳಿರು | = | ಚೆಂದಳಿರು | (ಕ.ಧಾ.ಸ.) |
ಚೆಂದೆಂಗು | – | ಕೆಚ್ಚನೆ | + | ತೆಂಗು | = | ಚೆಂದೆಂಗು | (ಕ.ಧಾ.ಸ.) |
ಕೆಂದೆಂಗು | – | ಕೆಚ್ಚನೆ | + | ತೆಂಗು | = | ಕೆಂದೆಂಗು | (ಕ.ಧಾ.ಸ.) |
ಚೆಂಗಣಗಿಲೆ | – | ಕೆಚ್ಚನೆ | + | ಕಣಗಿಲೆ | = | ಚೆಂಗಣಗಿಲೆ | (ಕ.ಧಾ.ಸ.) |
ಕೆಂಗಣಗಿಲೆ | – | ಕೆಚ್ಚನೆ | + | ಕಣಗಿಲೆ | = | ಕೆಂಗಣಗಿಲೆ | (ಕ.ಧಾ.ಸ.) |
ಚೆಂಬವಳ | – | ಕೆಚ್ಚನೆ | + | ಪವಳ | = | ಚೆಂಬವಳ | (ಕ.ಧಾ.ಸ.) |
ಕೆಂಬವಳ | – | ಕೆಚ್ಚನೆ | + | ಪವಳ | = | ಕೆಂಬವಳ | (ಕ.ಧಾ.ಸ.) |
ಕಿಸುವಣ್ | – | ಕೆಚ್ಚನೆ | + | ಪಣ್ | = | ಕಿಸುವಣ್ | (ಕ.ಧಾ.ಸ.) |
ಕೇಸಕ್ಕಿ | – | ಕೆಚ್ಚನೆ | + | ಅಕ್ಕಿ | = | ಕೇಸಕ್ಕಿ | (ಕ.ಧಾ.ಸ.) |
ಕೆಂಜೇಳು | – | ಕೆಚ್ಚನೆ | + | ಚೇಳು | = | ಕೆಂಜೇಳು | (ಕ.ಧಾ.ಸ.) |
ಕೆಂಜೆಡೆ | – | ಕೆಚ್ಚನೆ | + | ಜಡೆ | = | ಕೆಂಜೆಡೆ | (ಕ.ಧಾ.ಸ.) |
ಕಿಸುಸಂಜೆ | – | ಕೆಚ್ಚನೆ | + | ಸಂಜೆ | = | ಕಿಸುಸಂಜೆ | (ಕ.ಧಾ.ಸ.) |
ಕೆಂಗಣ್ಣು | – | ಕೆಚ್ಚನೆ | + | ಕಣ್ಣು | = | ಕೆಂಗಣ್ಣು | (ಕ.ಧಾ.ಸ.) |
ಕೆನ್ನೀರು | – | ಕೆಚ್ಚನೆ | + | ನೀರು | = | ಕೆನ್ನೀರು | (ಕ.ಧಾ.ಸ.) |
ಬೆಂಬೂದಿ | – | ಬೆಚ್ಚನೆ | + | ಬೂದಿ | = | ಬೆಂಬೂದಿ | (ಕ.ಧಾ.ಸ.) |
ಬೆನ್ನೀರು | – | ಬೆಚ್ಚನೆ | + | ನೀರು | = | ಬೆನ್ನೀರು | (ಕ.ಧಾ.ಸ.) |
ಬಿಸಿನೀರು | – | ಬಿಸಿಯಾದ | + | ನೀರು | = | ಬಿಸಿನೀರು | (ಕ.ಧಾ.ಸ.) |
ಚೆಂದುಟಿ | – | ಕೆಚ್ಚನೆ | + | ತುಟಿ | = | ಚೆಂದುಟಿ | (ಕ.ಧಾ.ಸ.) |
ಚೆನ್ನೈದಿಲೆ | – | ಕೆಚ್ಚನೆ | + | ನೈದಿಲೆ | = | ಚೆನ್ನೈದಿಲೆ | (ಕ.ಧಾ.ಸ.) |
ಚೆಂಬೊನ್ | – | ಕೆಚ್ಚನೆ | + | ಪೊನ್ | = | ಚೆಂಬೊನ್ | (ಕ.ಧಾ.ಸ.) |
ಬಿಸುಸುಯ್ | – | ಬೆಚ್ಚನೆ | + | ಸುಯ್ | = | ಬಿಸುಸುಯ್ | (ಕ.ಧಾ.ಸ.) |
ಬೆಂಗದಿರ್ | – | ಬೆಚ್ಚನೆ | + | ಕದಿರ್ | = | ಬೆಂಗದಿರ್ | (ಕ.ಧಾ.ಸ.) |
ಬಿಸಿಗದಿರು | – | ಬಿಸಿದು | + | ಕದಿರು | = | ಬಿಸಿಗದಿರು | (ಕ.ಧಾ.ಸ.) |
ತಣ್ಗದಿರ್ | – | ತಣ್ಣನೆ | + | ಕದಿರ್ | = | ತಣ್ಗದಿರ್ | (ಕ.ಧಾ.ಸ.) |
ತಣ್ಗದಿರ | – | ತಣ್ಣನೆಯ | + | ಕದಿರ್ ಉಳ್ಳವ | = | ತಣ್ಗದಿರ | (ಬಹುವ್ರೀಹಿ) |
ಬೆಂಗದಿರ | – | ಬೆಚ್ಚನೆಯ | + | ಕದಿರುಉಳ್ಳವ | = | ಬೆಂಗದಿರ | (ಬಹುವ್ರೀಹಿ) |
ಕಟ್ಟಾಳ್ | – | ಕಡಿದು | + | ಆಳ್ | = | ಕಟ್ಟಾಳ್ | (ಕ.ಧಾ.ಸ.) |
ಕಟ್ಟುಬ್ಬಸ | – | ಕಡಿದು | + | ಉಬ್ಬಸ | = | ಕಟ್ಟುಬ್ಬಸ | (ಕ.ಧಾ.ಸ.) |
ಕಟ್ಟಾಸರ್ | – | ಕಡಿದು | + | ಆಸರ್ | = | ಕಟ್ಟಾಸರ್ | (ಕ.ಧಾ.ಸ.) |
ಕಟ್ಟುಬ್ಬೆಗ | – | ಕಡಿದು | + | ಉಬ್ಬೆಗ | = | ಕಟ್ಟುಬ್ಬೆಗ | (ಕ.ಧಾ.ಸ.) |
ಕಟ್ಟಪ್ಪಣೆ | – | ಕಡಿದು | + | ಅಪ್ಪಣೆ | = | ಕಟ್ಟಪ್ಪಣೆ | (ಕ.ಧಾ.ಸ.) |
ಕಡುಗತ್ತಲೆ | – | ಕಡಿದು | + | ಕತ್ತಲೆ | = | ಕಡುಗತ್ತಲೆ | (ಕ.ಧಾ.ಸ.) |
ಕಟ್ಟಡವಿ | – | ಕಡಿದು | + | ಅಡವಿ | = | ಕಟ್ಟಡವಿ | (ಕ.ಧಾ.ಸ.) |
ಕಡುರಾಗ | – | ಕಡಿದು | + | ರಾಗ | = | ಕಡುರಾಗ | (ಕ.ಧಾ.ಸ.) |
ಕಡುಮಮತೆ | – | ಕಡಿದು | + | ಮಮತೆ | = | ಕಡುಮಮತೆ | (ಕ.ಧಾ.ಸ.) |
ಕಡುಚಾಗ | – | ಕಡಿದು | + | ಚಾಗ | = | ಕಡುಚಾಗ | (ಕ.ಧಾ.ಸ.) |
ಕುರುವಣೆ | – | ಕಿರಿದು | + | ಮಣೆ | = | ಕುರುವಣೆ | (ಕ.ಧಾ.ಸ.) |
ಕುರುಗಿಡ | – | ಕಿರಿದು | + | ಗಿಡ | = | ಕುರುಗಿಡ | (ಕ.ಧಾ.ಸ.) |
ಕರುಮಾಡು | – | ಕಿರಿದು | + | ಮಾಡು | = | ಕರುಮಾಡು | (ಕ.ಧಾ.ಸ.) |
ಕುತ್ತೆಸಳ್ | – | ಕಿರಿದು | + | ಎಸಳ್ | = | ಕುತ್ತೆಸಳ್ | (ಕ.ಧಾ.ಸ.) |
ಬೆಳ್ವಟ್ಟೆ | – | ಬಿಳಿದು | + | ಬಟ್ಟೆ | = | ಬೆಳ್ವಟ್ಟೆ | (ಕ.ಧಾ.ಸ.) |
ಬೆಳ್ಗೊಡೆ | – | ಬಿಳಿದು | + | ಕೊಡೆ | = | ಬೆಳ್ಗೊಡೆ | (ಕ.ಧಾ.ಸ.) |
ಬೆಳ್ಮುಗಿಲ್ | – | ಬಿಳಿದು | + | ಮುಗಿಲ್ | = | ಬೆಳ್ಮುಗಿಲ್ | (ಕ.ಧಾ.ಸ.) |
ತಂಬೆಲರ್ | – | ತಣ್ಣನೆ | + | ಎಲರ್ | = | ತಂಬೆಲರ್ | (ಕ.ಧಾ.ಸ.) |
ತಂಗಾಳಿ | – | ತಣ್ಣನೆ | + | ಗಾಳಿ | = | ತಂಗಾಳಿ | (ಕ.ಧಾ.ಸ.) |
ತಂಗೂಳ್ | – | ತಣ್ಣನೆ | + | ಕೂಳ್ | = | ತಂಗೂಳ್ | (ಕ.ಧಾ.ಸ.) |
ತಣ್ಣೀರ್ | – | ತಣ್ಣನೆ | + | ನೀರ್ | = | ತಣ್ಣೀರ್ | (ಕ.ಧಾ.ಸ.) |
ಮೆಲ್ಲೆಲರ್ | – | ಮೆಲ್ಲಿತು | + | ಎಲರ್ | = | ಮೆಲ್ಲೆಲರ್ | (ಕ.ಧಾ.ಸ.) |
ಮೆಲ್ಲೆದೆ | – | ಮೆಲ್ಲಿತು | + | ಎದೆ | = | ಮೆಲ್ಲೆದೆ | (ಕ.ಧಾ.ಸ.) |
ಮೆಲ್ವಾತು | – | ಮೆಲ್ಲಿತು | + | ಮಾತು | = | ಮೆಲ್ವಾತು | (ಕ.ಧಾ.ಸ.) |
ಮೆಲ್ವಾಸು | – | ಮೆಲ್ಲಿತು | + | ಪಾಸು | = | ಮೆಲ್ವಾಸು | (ಕ.ಧಾ.ಸ.) |
ಮೆಲ್ನುಡಿ | – | ಮೆಲ್ಲಿತು | + | ನುಡಿ | = | ಮೆಲ್ನುಡಿ | (ಕ.ಧಾ.ಸ.) |
ಕಾರಿರುಳ್ | – | ಕರಿದು | + | ಇರುಳ್ | = | ಕಾರಿರುಳ್ | (ಕ.ಧಾ.ಸ.) |
ಕಾರೊಡಲ್ | – | ಕರಿದು | + | ಒಡಲ್ | = | ಕಾರೊಡಲ್ | (ಕ.ಧಾ.ಸ.) |
ಕಾರ್ಮೋಡ | – | ಕರಿದು | + | ಮೋಡ | = | ಕಾರ್ಮೋಡ | (ಕ.ಧಾ.ಸ.) |
ಕಾರಡವಿ | – | ಕರಿದು | + | ಅಡವಿ | = | ಕಾರಡವಿ | (ಬಹುವ್ರೀಹಿ) |
ಕಮ್ಮಲರ್ | – | ಕಮ್ಮನೆ | + | ಮಲರ್ | = | ಕಮ್ಮಲರ್ | (ಬಹುವ್ರೀಹಿ) |
ಕಮ್ಮೆಲರ್ | – | ಕಮ್ಮನೆ | + | ಎಲರ್ | = | ಕಮ್ಮೆಲರ್ | (ಕ.ಧಾ.ಸ.) |
ಎಳವಳ್ಳಿ | – | ಎಳದು | + | ಬಳ್ಳಿ | = | ಎಳವಳ್ಳಿ | (ಕ.ಧಾ.ಸ.) |
ಎಳಗರು | – | ಎಳದು | + | ಕರು | = | ಎಳಗರು | (ಕ.ಧಾ.ಸ.) |
ಎಳಗಾಳಿ | – | ಎಳದು | + | ಗಾಳಿ | = | ಎಳಗಾಳಿ | (ಕ.ಧಾ.ಸ.) |
ನೀರ್ವೊನಲ್ | – | ನೀರಿನ | + | ಪೊನಲ್ | = | ನೀರ್ವೊನಲ್ | (ಷ.ತ.ಸ.) |
ನೀರ್ವಾವು | – | ನೀರಿನ | + | ಪಾವು | = | ನೀರ್ವಾವು | (ಷ.ತ.ಸ.) |
ನೀರ್ಗುಡಿ | – | ನೀರಂ | + | ಕುಡಿ | = | ನೀರ್ಗುಡಿ | (ಕ್ರಿಯಾಸಮಾಸ) |
ಬೇರ್ವೆರಸಿ | – | ಬೇರಿನಿಂ | + | ಬೆರಸಿ | = | ಬೇರ್ವೆರಸಿ | (ಕ್ರಿಯಾಸಮಾಸ) |
ನೀರ್ಗೂಡಿ | – | ನೀರಿನಿಂ | + | ಕೂಡಿ | = | ನೀರ್ಗೂಡಿ | (ಕ್ರಿಯಾಸಮಾಸ) |
ಬಳೆದೊಟ್ಟಂ | – | ಬಳೆಯಂ | + | ತೊಟ್ಟಂ | = | ಬಳೆದೊಟ್ಟಂ | (ಕ್ರಿಯಾಸಮಾಸ) |
ಕೆಳೆಗೊಟ್ಟಂ | – | ಕೆಳೆಯಂ | + | ಕೊಟ್ಟಂ | = | ಕೆಳೆಗೊಟ್ಟಂ | (ಕ್ರಿಯಾಸಮಾಸ) |
ಮರೆವೊಕ್ಕಂ | – | ಮರೆಯಂ | + | ಪೊಕ್ಕಂ | = | ಮರೆವೊಕ್ಕಂ | (ಕ್ರಿಯಾಸಮಾಸ) |
ಪ್ರಿಯಂನುಡಿ | – | ಪ್ರಿಯಮಂ | + | ನುಡಿ | = | ಪ್ರಿಯಂನುಡಿ | (ಕ್ರಿಯಾಸಮಾಸ) |
ರಂಗಂಬೊಕ್ಕಂ | – | ರಂಗಮಂ | + | ಪೊಕ್ಕಂ | = | ರಂಗಂಬೊಕ್ಕಂ | (ಕ್ರಿಯಾಸಮಾಸ) |
ಕಡಂಗೊಂಡಂ | – | ಕಡಮಂ | + | ಕೊಂಡಂ | = | ಕಡಂಗೊಂಡಂ | (ಕ್ರಿಯಾಸಮಾಸ) |
ಬಳಪಂಗೊಳೆ | – | ಬಳಪಮಂ | + | ಕೊಳೆ | = | ಬಳಪಂಗೊಳೆ | (ಕ್ರಿಯಾಸಮಾಸ) |
ವಜ್ರಂಗೊಳೆ | – | ವಜ್ರಮಂ | + | ಕೊಳೆ | = | ವಜ್ರಂಗೊಳೆ | (ಕ್ರಿಯಾಸಮಾಸ) |
ಚಕ್ರಂಗೊಳೆ | – | ಚಕ್ರಮಂ | + | ಕೊಳೆ | = | ಚಕ್ರಂಗೊಳೆ | (ಕ್ರಿಯಾಸಮಾಸ) |
ಬಿಲ್ಗೊಳೆ | – | ಬಿಲ್ಲಂ | + | ಕೊಳೆ | = | ಬಿಲ್ಗೊಳೆ | (ಕ್ರಿಯಾಸಮಾಸ) |
ಎರಳ್ಮಾತು | – | ಎರಡು | + | ಮಾತು | = | ಎರಳ್ಮಾತು | (ದ್ವಿಗುಸಮಾಸ) |
ಎರಳ್ತೆರ | – | ಎರಡು | + | ತೆರ | = | ಎರಳ್ತೆರ | (ದ್ವಿಗುಸಮಾಸ) |
ಇರ್ವಾಳ್ | – | ಎರಡು | + | ಬಾಳ್ | = | ಇರ್ವಾಳ್ | (ದ್ವಿಗುಸಮಾಸ) |
ಇರ್ವೆಂಡಿರ್ | – | ಎರಡು | + | ಪೆಂಡಿರ್ | = | ಇರ್ವೆಂಡಿರ್ | (ದ್ವಿಗುಸಮಾಸ) |
ಇರ್ಕಟ್ಟು | – | ಎರಡು | + | ಕಟ್ಟು | = | ಇರ್ಕಟ್ಟು | (ದ್ವಿಗುಸಮಾಸ) |
ಇರ್ತಡಿ | – | ಎರಡು | + | ತಡಿ | = | ಇರ್ತಡಿ | (ದ್ವಿಗುಸಮಾಸ) |
ಇರ್ತೆರ | – | ಎರಡು | + | ತೆರ | = | ಇರ್ತೆರ | (ದ್ವಿಗುಸಮಾಸ) |
ಇತ್ತಂಡ | – | ಎರಡು | + | ತಂಡ | = | ಇತ್ತಂಡ | (ದ್ವಿಗುಸಮಾಸ) |
ಇರ್ಕ್ಕೆಲ | – | ಎರಡು | + | ಕೆಲ | = | ಇರ್ಕ್ಕೆಲ | (ದ್ವಿಗುಸಮಾಸ) |
ಇಮ್ಮಡಿ | – | ಎರಡು | + | ಮಡಿ | = | ಇಮ್ಮಡಿ | (ದ್ವಿಗುಸಮಾಸ) |
ಮೂವಾಳ್ | – | ಮೂರು | + | ಬಾಳ್ | = | ಮೂವಾಳ್ | (ದ್ವಿಗುಸಮಾಸ) |
ಮುಮ್ಮಡಿ | – | ಮೂರು | + | ಮಡಿ | = | ಮುಮ್ಮಡಿ | (ದ್ವಿಗುಸಮಾಸ) |
ಮೂವಡಿ | – | ಮೂರು | + | ಮಡಿ | = | ಮೂವಡಿ | (ದ್ವಿಗುಸಮಾಸ) |
ನಾಲ್ವಡಿ | – | ನಾಲ್ಕು | + | ಮಡಿ | = | ನಾಲ್ವಡಿ | (ದ್ವಿಗುಸಮಾಸ) |
ಒರ್ನುಡಿ | – | ಒಂದು | + | ನುಡಿ | = | ಒರ್ನುಡಿ | (ದ್ವಿಗುಸಮಾಸ) |
ಒರ್ಪಿಡಿ | – | ಒಂದು | + | ಪಿಡಿ | = | ಒರ್ಪಿಡಿ | (ದ್ವಿಗುಸಮಾಸ) |
ಏವಂದಂ | – | ಏತರ್ಕೆ | + | ಬಂದಂ | = | ಏವಂದಂ | (ಕ್ರಿಯಾಸಮಾಸ) |
ಏವೋದಂ | – | ಏತರ್ಕೆ | + | ಪೋದಂ | = | ಏವೋದಂ | (ಕ್ರಿಯಾಸಮಾಸ) |
ಏವೇಳ್ವೆಂ | – | ಏನಂ | + | ಪೇಳ್ವೆಂ | = | ಏವೇಳ್ವೆಂ | (ಕ್ರಿಯಾಸಮಾಸ) |
ಏಗೆಯ್ದಂ | – | ಏನಂ | + | ಗೈದಂ | = | ಏಗೈದಂ | (ಕ್ರಿಯಾಸಮಾಸ) |
ಕಿತ್ತಡಿ | – | ಕಿರಿದು | + | ಅಡಿ | = | ಕಿತ್ತಡಿ | (ಬಹುವ್ರೀಹಿಸಮಾಸ) |
ಕುತ್ತಡಿ | – | ಕಿರಿದು | + | ಅಡಿ | = | ಕುತ್ತಡಿ | (ಬಹುವ್ರೀಹಿಸಮಾಸ) |
ಕಿತ್ತೀಳೆ | – | ಕಿರಿದು | + | ಈಳೆ | = | ಕಿತ್ತೀಳೆ | (ಕ.ಧಾ.ಸ.) |
ಕುತ್ತೆಸಳ್ | – | ಕಿರಿದು | + | ಎಸಳ್ | = | ಕುತ್ತೆಸಳ್ | (ಕ.ಧಾ.ಸ.) |
ಕಿತ್ತೆಸಳ್ | – | ಕಿರಿದು | + | ಎಸಳ್ | = | ಕಿತ್ತೆಸಳ್ | (ಕ.ಧಾ.ಸ.) |
ಪಂದೊಗಲ್ | – | ಪಚ್ಚನೆ | + | ತೊಗಲ್ | = | ಪಂದೊಗಲ್ | (ಕ.ಧಾ.ಸ.) |
ಪಂದಲೆ | – | ಪಚ್ಚನೆ | + | ತಲೆ | = | ಪಂದಲೆ | (ಕ.ಧಾ.ಸ.) |
ಕಿಸುಗಣಗಿಲೆ | – | ಕೆಚ್ಚನೆ | + | ಕಣಗಿಲೆ | = | ಕಿಸುಗಣಗಿಲೆ | (ಕ.ಧಾ.ಸ.) |
ಪಂದಳಿರ್ | – | ಪಚ್ಚನೆ | + | ತಳಿರ್ | = | ಪಂದಳಿರ್ | (ಕ.ಧಾ.ಸ.) |
ಕೂರಿಲಿ | – | ಕೂರ್ | + | ಇಲ್ಲದುದು | = | ಕೂರಿಲಿ | (ಬಹುವ್ರೀಹಿ ಸಮಾಸ) |
ಪಲ್ಲಿಲಿ | – | ಪಲ್ | + | ಇಲ್ಲಿದುದು | = | ಪಲ್ಲಿಲಿ | (ಬಹುವ್ರೀಹಿ ಸಮಾಸ) |
ಅಗಿಲಿಲಿ | – | ಅಗಿಲ್ | + | ಇಲ್ಲದುದು | = | ಅಗಿಲಿಲಿ | (ಬಹುವ್ರೀಹಿ ಸಮಾಸ) |
ಮೀಂಗುಲಿ | – | ಮೀನಂ | + | ಕೊಲ್ಲುವವ | = | ಮೀಂಗುಲಿ | (ಬಹುವ್ರೀಹಿ ಸಮಾಸ) |
ಅರಗುಲಿ | – | ಅರಮಂ | + | ಕೊಲ್ಲುವವ | = | ಅರಗುಲಿ | (ಬಹುವ್ರೀಹಿ ಸಮಾಸ) |
ಬೆಳಗಲಿ | – | ಬೆಳಕು | + | ಇಲ್ಲದುದು | = | ಬೆಳಗಲಿ | (ಬಹುವ್ರೀಹಿ ಸಮಾಸ) |
ನಾಣಿಲಿ | – | ನಾಣ್ | + | ಇಲ್ಲದುದು | = | ನಾಣಿಲಿ | (ಬಹುವ್ರೀಹಿ ಸಮಾಸ) |
ಕಡುಚಾಗಿ | – | ಕಡಿದು | + | ಜಾಗವುಳ್ಳವ | = | ಕಡುಚಾಗಿ | (ಬಹುವ್ರೀಹಿ ಸಮಾಸ) |
ಕಡುರಾಗಿ | – | ಕಡಿದು | + | ರಾಗವುಳ್ಳವ | = | ಕಡುರಾಗಿ | (ಬಹುವ್ರೀಹಿ ಸಮಾಸ) |
ಮೂವಟ್ಟೆ | – | ಮೂರು | + | ಬಟ್ಟೆ | = | ಮೂವಟ್ಟೆ | (ದ್ವಿಗುಸಮಾಸ) |
ಮೂಲೋಕ | – | ಮೂರು | + | ಲೋಕ | = | ಮೂಲೋಕ | (ದ್ವಿಗುಸಮಾಸ) |
ಮುಕ್ಕೊಡೆ | – | ಮೂರು | + | ಕೊಡೆ | = | ಮುಕ್ಕೊಡೆ | (ದ್ವಿಗುಸಮಾಸ) |
ಮುಪ್ಪೊಳಲ್ | – | ಮೂರು | + | ಪೊಳಲ್ | = | ಮುಪ್ಪೊಳಲ್ | (ದ್ವಿಗುಸಮಾಸ) |
ಮುಪ್ಪರಿ | – | ಮೂರು | + | ಪುರಿ | = | ಮುಪ್ಪರಿ | (ದ್ವಿಗುಸಮಾಸ) |
ಮುಮ್ಮಾತು | – | ಮೂರು | + | ಮಾತು | = | ಮುಮ್ಮಾತು | (ದ್ವಿಗುಸಮಾಸ) |
ಮುಚ್ಚೋಟು | – | ಮೂರು | + | ಚೋಟು | = | ಮುಚ್ಚೋಟು | (ದ್ವಿಗುಸಮಾಸ) |
ಮೂಗೇಣ್ | – | ಮೂರು | + | ಗೇಣ್ | = | ಮೂಗೇಣ್ | (ದ್ವಿಗುಸಮಾಸ) |
ಮೂಗಾವುದಂ | – | ಮೂರು | + | ಗಾವುದಂ | = | ಮೂಗಾವುದಂ | (ದ್ವಿಗುಸಮಾಸ) |
ಮುಯ್ಯಡಿ | – | ಮೂರು | + | ಅಡಿ | = | ಮುಯ್ಯಡಿ | (ದ್ವಿಗುಸಮಾಸ) |
ಐಗಂಡುಗ | – | ಐದು | + | ಕಂಡುಗ | = | ಐಗಂಡುಗ | (ದ್ವಿಗುಸಮಾಸ) |
ನಾಲ್ವೆರಲ್ | – | ನಾಲ್ಕು | + | ಬೆರಲ್ | = | ನಾಲ್ವೆರಲ್ | (ದ್ವಿಗುಸಮಾಸ) |
ಆರುಮಡಿ | – | ಆರು | + | ಮಡಿ | = | ಆರುಮಡಿ | (ದ್ವಿಗುಸಮಾಸ) |
ನಟ್ಟಡವಿ | – | ಅಡವಿಯ | + | ನಡು | = | ನಟ್ಟಡವಿ | (ಅಂಶಿಸಮಾಸ) |
ನಟ್ಟಿರುಳ್ | – | ಇರುಳಿನ | + | ನಡು | = | ನಟ್ಟಿರುಳ್ | (ಅಂಶಿಸಮಾಸ) |
ನಡುವಗಲ್ | – | ಪಗಲಿನ | + | ನಡು | = | ನಡುವಗಲ್ | (ಅಂಶಿಸಮಾಸ) |
ನಡುಮನೆ | – | ಮನೆಯ | + | ನಡು | = | ನಡುಮನೆ | (ಅಂಶಿಸಮಾಸ) |
ನಡುಬೆನ್ನು | – | ಬೆನ್ನಿನ | + | ನಡು | = | ನಡುಬೆನ್ನು | (ಅಂಶಿಸಮಾಸ) |
ಕುಡಿವುರ್ವು | – | ಪುರ್ಬಿನ | + | ಕುಡಿ | = | ಕುಡಿವುರ್ವು | (ಅಂಶಿಸಮಾಸ) |
ತುದಿಮೂಗು | – | ಮೂಗಿನ | + | ತುದಿ | = | ತುದಿಮೂಗು | (ಅಂಶಿಸಮಾಸ) |
ಮುಂದಲೆ | – | ತಲೆಯ | + | ಮುಂದು | = | ಮುಂದಲೆ | (ಅಂಶಿಸಮಾಸ) |
ಹಿಂದಲೆ | – | ತಲೆಯ | + | ಹಿಂದು | = | ಹಿಂದಲೆ | (ಅಂಶಿಸಮಾಸ) |
ಕಿಬ್ಬೊಟ್ಟೆ | – | ಹೊಟ್ಟೆಯ | + | ಕೆಳಗು | = | ಕಿಬ್ಬೊಟ್ಟೆ | (ಅಂಶಿಸಮಾಸ) |
ಉಂಗುರಚಿನ್ನ | – | ಉಂಗುರಕ್ಕೆ | + | ಚಿನ್ನ | = | ಉಂಗುರಚಿನ್ನ | (ತತ್ಪುರುಷ ಸಮಾಸ) |
ತೇರ್ಮರ | – | ತೇರಿಗೆ | + | ಮರ | = | ತೇರ್ಮರ | (ತತ್ಪುರುಷ ಸಮಾಸ) |
ಪಕ್ಕಿಗೂಡು | – | ಪಕ್ಕಿಯ | + | ಗೂಡು | = | ಪಕ್ಕಿಗೂಡು | (ತತ್ಪುರುಷ ಸಮಾಸ) |
ಅನೆಮರಿ | – | ಆನೆಯ | + | ಮರಿ | = | ಅನೆಮರಿ | (ತತ್ಪುರುಷ ಸಮಾಸ) |
ಮರಗಾಲ್ | – | ಮರದ | + | ಕಾಲ್ | = | ಮರಗಾಲ್ | (ತತ್ಪುರುಷ ಸಮಾಸ) |
ಮರವಾಳ್ | – | ಮರದ | + | ಬಾಳ್ | = | ಮರವಾಳ್ | (ತತ್ಪುರುಷ ಸಮಾಸ) |
ಬೇಹುಚದುರ | – | ಬೇಹಿನಲ್ಲಿ | + | ಚದುರ | = | ಬೇಹುಚದುರ | (ತತ್ಪುರುಷ ಸಮಾಸ) |
ಎಣ್ದೆಸೆ | – | ಎಂಟು | + | ದೆಸೆ | = | ಎಣ್ದೆಸೆ | (ದ್ವಿಗುಸಮಾಸ) |
ಮೂಲೋಕ | – | ಮೂರು | + | ಲೋಕ | = | ಮೂಲೋಕ | (ದ್ವಿಗುಸಮಾಸ) |
ಐಗಾವುದ | – | ಐದು | + | ಗಾವುದ | = | ಐಗಾವುದ | (ದ್ವಿಗುಸಮಾಸ) |
ನಾಲ್ಮೊಗ | – | ನಾಲ್ಕು | + | ಮೊಗ | = | ನಾಲ್ಮೊಗ | (ದ್ವಿಗುಸಮಾಸ) |
ನಾಲ್ಮೊಗಂ | – | ನಾಲ್ಕು | + | ಮೊಗ ಉಳ್ಳವ | = | ನಾಲ್ಮೊಗಂ | (ಬಹುವ್ರೀಹಿಸಮಾಸ) |
ಕಂಪುಣಿ | – | ಕಂಪನ್ನು | + | ಉಣ್ಬುದು ಆವುದೋ | = | ಕಂಪುಣಿ | (ಬಹುವ್ರೀಹಿಸಮಾಸ) |
ಕಲ್ಗುಟಿಗ | – | ಕಲ್ಲನ್ನು | + | ಕುಟ್ಟುವವನು | = | ಕಲ್ಕುಟಿಗ | (ಬಹುವ್ರೀಹಿಸಮಾಸ) |
Leave A Comment