– ಇತ್ಯಾದಿ.

 

ಅಭ್ಯಾಸ ಪ್ರಶ್ನೆಗಳು

(೧)       (ಅ) ಕೃದಂತನಾಮಪದಗಳೆಂದರೇನು? ಉದಾಹರಣೆಗಳೊಡನೆ ವಿವರಿಸಿರಿ.

(ಆ) ವರ್ತಮಾನ, ಭೂತ, ಭವಿಷ್ಯತ್ ಕೃದಂತಗಳಲ್ಲಿ ಬರುವ ಆಗಮಗಳಾವುವು? ಇವುಗಳಿಗೆ ಏನೆಂದು ಹೆಸರು?

(ಇ) ಕೃದಂತಭಾವನಾಮಗಳೆಂದರೇನು? ಉದಾಹರಣೆಯೊಂದಿಗೆ ವಿವರಿಸಿರಿ.

(ಈ) ಕೃದಂತಾವ್ಯಯಗಳೆಂದರೇನು? ಉದಾಹರಣೆಯೊಂದಿಗೆ ವಿವರಿಸಿರಿ.

(೨)       ಈ ಕೆಳಗೆ ಆವರಣ ಚಿಹ್ನೆಯೊಳಗಿನ ಸರಿಯಾದ ಉತ್ತರದ ಪದವೊಂದನ್ನು ಆರಿಸಿ ಬಿಟ್ಟಿರುವ ಸ್ಥಳದಲ್ಲಿ ಹಾಕಿರಿ.

(ಅ) ಧಾತುಗಳಿಗೆ _________ ಸೇರಿ ಕೃದಂತಗಳೆನಿಸುವುವು.  (ನಾಮವಿಭಕ್ತಿಪ್ರತ್ಯಯ, ಆಖ್ಯಾತಪ್ರತ್ಯಯ, ಕೃತ್‌ಪ್ರತ್ಯಯ)

(ಆ) ಧಾತುಗಳಿಗೆ ಕೃತ್‌ಪ್ರತ್ಯಯಗಳು ಸೇರುವಾಗ ನಿಷೇಧಾರ್ಥದಲ್ಲಿ_________ಪ್ರತ್ಯಯವು ಆಗಮವಾಗಿಬರುವುದು. (ದ, ವ, ಅದ, ಉವ)

(ಇ) ಕೃದಂತನಾಮಪ್ರಕೃತಿಗಳ ಮೇಲೆ ನಾಮವಿಭಕ್ತಿಗಳು ಸೇರುವಾಗ ಪುಲ್ಲಿಂಗದಲ್ಲಿ ______ ಎಂಬುದು ಕೃದಂತಕ್ಕೂ ನಾಮವಿಭಕ್ತಿ ಪ್ರತ್ಯಯಕ್ಕೂ ಮಧ್ಯದಲ್ಲಿ ಬರುವುದು.   (ಅದು, ಅವಳು, ಅವನು)

(ಈ) ಧಾತುಗಳಿಗೆ _________ ದಲ್ಲಿ ಕೃತ್‌ಪ್ರತ್ಯಯ ಸೇರಿ ಕೃದಂತಭಾವನಾಮ ಗಳಾಗುವುವು.   (ನಿಷೇಧಾರ್ಥದಲ್ಲಿ, ವಿಧ್ಯರ್ಥದಲ್ಲಿ, ಭಾವಾರ್ಥದಲ್ಲಿ)

(ಉ) ಮಾಟ ಎಂಬಲ್ಲಿ ಭಾವಾರ್ಥದಲ್ಲಿ ಧಾತುವಿನ ಮೇಲೆ ______ ಪ್ರತ್ಯಯ ಬಂದಿದೆ.     (ಡು, ಡ, ಟ)

(ಊ) ಕೊರೆತ ಎಂಬುದು ____(ಕೃದಂತಾವ್ಯಯ, ಕೃದಂತ, ಕೃದಂತಭಾವನಾಮ)

(೩)        ಕೆಳಗಣ ವಾಕ್ಯಗಳಲ್ಲಿ ತಪ್ಪುಗಳಿವೆ.  ಅವನ್ನು ಸರಿಪಡಿಸಿರಿ.

(ಅ) ಧಾತುವಿನ ಮೇಲೆ ಕರ್ತ್ರರ್ಥದಲ್ಲಿ ಅ ಎಂಬ ಕೃತ್‌ಪ್ರತ್ಯಯ ಬಂದಾಗ ಭವಿಷ್ಯತ್‌ಕಾಲದಲ್ಲಿ ದ ಎಂಬ ಪ್ರತ್ಯಯವೂ, ಭೂತಕಾಲದಲ್ಲಿ ಅದ ಎಂಬ ಪ್ರತ್ಯಯವೂ ಧಾತುವಿಗೂ ಆಖ್ಯಾತಪ್ರತ್ಯಯಕ್ಕೂ ಮಧ್ಯದಲ್ಲಿ ಬರುವುವು.

(ಆ) ಕೃದಂತನಾಮವಿಭಕ್ತಿಪ್ರತ್ಯಯಗಳು ಸೇರುವಾಗ ಪುಲ್ಲಿಂಗದಲ್ಲಿ ಅವಳು ಎಂಬುದೂ, ನಪುಂಸಕಲಿಂಗದಲ್ಲಿ ಅವನು ಎಂಬುದೂ ಕೃದಂತ ಮತ್ತು ನಾಮವಿಭಕ್ತಿಪ್ರತ್ಯಯಗಳಿಗೆ ಮಧ್ಯದಲ್ಲಿ ಬರುವುವು.

(ಇ) ಧಾತುಗಳಿಗೆ ನಿಷೇಧಾರ್ಥದಲ್ಲಿ ಕೃತ್‌ಪ್ರತ್ಯಯಗಳು ಸೇರಿ ಕೃದಂತಭಾವನಾಮಗಳೆನಿಸುವುವು.

(ಈ) ಧಾತುಗಳ ಮೇಲೆ ಅಲು, ಅಲಿಕ್ಕೆ ಪ್ರತ್ಯಯಗಳು ಬಂದು ಕೃದಂತಭಾವನಾಮಗಳೆನಿಸುವುವು.

(ಉ) ಮಾಡುವಿಕೆ, ಮಾಟ – ಈ ರೂಪಗಳು ಕೃದಂತಾವ್ಯಯಗಳು.

(ಊ) ಕುಣಿತ ಎಂಬಲ್ಲಿ ಕುಣಿತ ಎಂಬ ಧಾತುವಿನ ಮೇಲೆ ಅ ಎಂಬ ಕೃತ್‌ಪ್ರತ್ಯಯ ಬಂದಿದೆ.

(ಋ) ಗುರುವು ಬೋಧಿಸಲು ಶಿಷ್ಯನು ಕಲಿತನು-ಈ ವಾಕ್ಯವು ಏಕಕರ್ತೃಕಕ್ರಿಯೆ ಯಿಂದ ಕೂಡಿದೆ.

(ೠ) ನಾನು ತಿನ್ನುತ್ತ ಬಂದೆನು ಈ ವಾಕ್ಯವು ಭಿನ್ನಕರ್ತೃಕ ವಾಕ್ಯವೆನಿಸಿದೆ.

(ಎ) ಧಾತುಗಳಿಗೆ ಆಖ್ಯಾತಪ್ರತ್ಯಯಗಳು ಸೇರಿ ಕೃದಂತಗಳೆನಿಸುವುವು.

(ಏ) ಧಾತುಗಳಿಗೆ ಕೃತ್ ಪ್ರತ್ಯಯಗಳು ಸೇರಿ ಕ್ರಿಯಾಪದಗಳೆನಿಸುವುವು.