ಹಿಂದೆ ನಾಮಪದಪ್ರಕರಣದಲ್ಲಿ ನಾಮಪ್ರಕೃತಿಗಳು ನಾಲ್ಕು ಪ್ರಕಾರಗಳೆಂದು ತಿಳಿಸಿದೆ.

(೧) ಸಹಜನಾಮಪ್ರಕೃತಿಗಳು

(೨) ಕೃದಂತಗಳು

(೩) ತದ್ಧಿತಾಂತಗಳು

(೪) ಸಮಾಸಗಳು – ಎಂದೇ ಆ ನಾಲ್ಕುವಿಧವಾದ ನಾಮಪ್ರಕೃತಿಗಳು.

ಸಹಜನಾಮಪ್ರಕೃತಿಗಳೆಂದರೇನು? ಅವು ನಾಮವಿಭಕ್ತಿಪ್ರತ್ಯಯ ಸೇರಿ, ನಾಮಪದಗಳಾಗು ವಿಕೆ, ಅವುಗಳ ಲಿಂಗ, ವಚನಾದಿಗಳ ಬಗೆಗೂ, ಸಮಾಸವೆಂದರೇನು? ಅವುಗಳ ಪ್ರಕಾರಗಳ ಬಗೆಗೂ ಹಿಂದಿನ ಪ್ರಕರಣಗಳಲ್ಲಿ ತಿಳಿದಿದ್ದೀರಿ.  ಈಗ ಕೃದಂತ, ತದ್ಧಿತಾಂತಗಳೆಂದರೇನೆಂಬ ಬಗೆಗೆ ತಿಳಿಯಿರಿ.

ಮೊದಲು ಕೃದಂತಪ್ರಕರಣದಲ್ಲಿ ಕೃದಂತಗಳ ಬಗೆಗೂ, ಅನಂತರ ತದ್ಧಿತಾಂತ ಪ್ರಕರಣದಲ್ಲಿ ತದ್ಧಿತಾಂತಗಳ ಬಗೆಗೂ ವಿವರಗಳನ್ನು ನೋಡಿರಿ.

ಧಾತು ಕ್ರಿಯಾಪದ ಕೃದಂತ ನಾಮಪ್ರಕೃತಿ ಕೃದಂತ ನಾಮಪದ
(೧) ಮಾಡು ಮಾಡಿದನು ಮಾಡಿದ ಮಾಡಿದವನು, ಮಾಡಿದವನನ್ನು, ಮಾಡಿದವನಿಂದ -ಇತ್ಯಾದಿ
(೨) ಹೋಗು ಹೋಗುವನು ಹೋಗುವ ಹೋಗುವವನು, ಹೋಗುವವನನ್ನು, ಹೋಗುವವನಿಂದ -ಇತ್ಯಾದಿ
(೩) ತಿನ್ನು ತಿನ್ನುತ್ತಾನೆ ತಿನ್ನುವ ತಿನ್ನುವವನು, ತಿನ್ನುವವನನ್ನು, ತಿನ್ನುವವನಿಗೆ, ತಿನ್ನುವವನಲ್ಲಿ -ಇತ್ಯಾದಿ
(೪) ಬರೆ ಬರೆಯುವನು ಬರೆಯುವ ಬರೆಯುವವನು, ಬರೆಯುವವನನ್ನು -ಇತ್ಯಾದಿ

 

ಮೇಲಿನ ನಾಲ್ಕು ಉದಾಹರಣೆಗಳಲ್ಲಿ-ಮಾಡು, ಹೋಗು, ತಿನ್ನು, ಬರೆ-ಈ ನಾಲ್ಕು ಧಾತುಗಳು-ಮಾಡಿದನು, ಹೋಗುವನು, ತಿನ್ನುತ್ತಾನೆ, ಬರೆಯುವನು ಈ ನಾಲ್ಕು ರೀತಿಯ ಕ್ರಿಯಾಪದಗಳಾಗಿವೆ.  ಇವು ಕ್ರಿಯಾಪದಗಳಾಗುವ ರೀತಿಯನ್ನು ಹಿಂದಿನ ಕ್ರಿಯಾಪದ ಪ್ರಕರಣದಲ್ಲಿ ತಿಳಿದಿದ್ದೀರಿ.  ಅವುಗಳ ಮುಂದಿರುವ ಮಾಡಿದ, ಹೋಗುವ, ತಿನ್ನುವ, ಬರೆಯುವ- ಇವು ಕ್ರಮವಾಗಿ – ಮಾಡು+ದ+ಅ=ಮಾಡಿದ, ಹೋಗು+ವ+ಅ=ಹೋಗುವ, ತಿನ್ನು+ವ+ಅ=ತಿನ್ನುವ, ಬರೆ+ಉವ+ಅ=ಬರೆಯುವ – ಹೀಗಾಗಿವೆ.  ಇವು ಎಲ್ಲಾ ಕಡೆಗೂ ಕೊನೆಯಲ್ಲಿ ಅ ಎಂಬ ಪ್ರತ್ಯಯವನ್ನೂ ಮಧ್ಯದಲ್ಲಿ ದ, ವ, ಉವ ಇತ್ಯಾದಿ ಪ್ರತ್ಯಯಗಳನ್ನೂ ಹೊಂದಿವೆ.  ಧಾತುಗಳು ಹೀಗೆ – ಮಾಡಿದ, ಹೋಗುವ, ತಿನ್ನುವ, ಬರೆಯುವ – ಇತ್ಯಾದಿ ರೂಪ ಪಡೆದ ಮೇಲೆ ಧಾತುವಿನಿಂದ ಹುಟ್ಟಿದ ನಾಮಪ್ರಕೃತಿಗಳೆನಿಸಿದವು.  ಅಥವಾ ಕೃದಂತನಾಮ ಪ್ರಕೃತಿಗಳೆನಿಸಿದವು.  ಇನ್ನು ಇವುಗಳ ಮೇಲೆ-ಉ, ಅನ್ನು, ಇಂದ, ಗೆ, ಇಗೆ, ಕ್ಕೆ, ಅಕ್ಕೆ, ದೆಸೆಯಿಂದ, ಅ, ಅಲ್ಲಿ – ಇತ್ಯಾದಿ ಸಪ್ತ ವಿಧವಾದ ನಾಮವಿಭಕ್ತಿಪ್ರತ್ಯಯಗಳೂ ಸೇರಿ ಕೃದಂತನಾಮಪದಗಳೆನಿಸುತ್ತವೆ.  ಇಂಥವನ್ನೇ ನಾವು ಸಾಧಿತ ನಾಮಗಳು ಎನ್ನುತ್ತೇವೆ.  ಮೇಲಿನ ಉದಾಹರಣೆಗಳಲ್ಲಿ ಕೊನೆಯಲ್ಲಿ ಬಂದಿರುವ ಅ ಎಂಬುದೇ ಕೃತ್‌ಪ್ರತ್ಯಯ.  ಇಂಥ ಕೃತ್‌ಪ್ರತ್ಯಯವನ್ನು ಅಂತದಲ್ಲಿ ಉಳ್ಳದ್ದೇ ಕೃದಂತ.  ಮಧ್ಯದಲ್ಲಿ ಬಂದಿರುವ ದ, ವ, ಉವಗಳು ಕಾಲವನ್ನು ಸೂಚಿಸುವ ಪ್ರತ್ಯಯಗಳು.  ಇವಕ್ಕೆ ಕಾಲಸೂಚಕ ಪ್ರತ್ಯಯಗಳೆನ್ನುವರು.  ಹಾಗಾದರೆ ಕೃದಂತವೆಂದರೇನು? ಎಂಬ ಬಗೆಗೆ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

 

(೮೬) ಕೃದಂತ:- ಧಾತುಗಳಿಗೆ ಕೃತ್ಪ್ರತ್ಯಯಗಳು ಸೇರಿ ಕೃದಂತಗಳೆನಿಸುವುವು. ಇವಕ್ಕೆ ಕೃನ್ನಾಮಗಳೆಂದೂ ಹೆಸರು.

ಕೃದಂತಗಳು ಕೃದಂತನಾಮ (ಕೃನ್ನಾಮ), ಕೃದಂತ ಭಾವನಾಮ, ಕೃದಂತಾವ್ಯಯ ಗಳೆಂದು ಮೂರು ವಿಧ.

ಉದಾಹರಣೆಗೆ:-

ಕೃದಂತನಾಮ ಕೃದಂತಭಾವನಾಮ ಕೃದಂತಾವ್ಯಯ
ಮಾಡಿದ ಮಾಟ ಮಾಡಿ
ತಿನ್ನುವ ತಿನ್ನುವಿಕೆ ತಿಂದು
ನಡೆಯುವ ನಡೆತ ನಡೆಯುತ್ತ
ಹೋಗದ ಹೋಗುವಿಕೆ ಹೋಗಲು

 

() ಕೃದಂತ ನಾಮಗಳು

(೮೭) ಕೃದಂತನಾಮಗಳು:- ಧಾತುಗಳಿಗೆ ಕರ್ತೃ ಮೊದಲಾದ ಅರ್ಥಗಳಲ್ಲಿ ಸಾಮಾನ್ಯವಾಗಿ ಎಂಬ ಕೃತ್ಪ್ರತ್ಯಯವು ಬರುವುದು. ಆಗ ಧಾತುವಿಗೂ ಕೃತ್ಪ್ರತ್ಯಯಕ್ಕೂ ಮಧ್ಯದಲ್ಲಿ ವರ್ತಮಾನ, ಭವಿಷ್ಯತ್ಕಾಲಗಳಲ್ಲಿ ಉವ ಎಂಬ ಕಾಲಸೂಚಕ ಪ್ರತ್ಯಯಗಳೂ, ಭೂತಕಾಲದಲ್ಲಿ ಎಂಬ ಕಾಲಸೂಚಕ ಪ್ರತ್ಯಯವೂ, ನಿಷೇಧಾರ್ಥದಲ್ಲಿ ಅದ ಎಂಬುದೂ ಆಗಮಗಳಾಗುತ್ತವೆ. ಇವನ್ನೇ ಕೃದಂತನಾಮಗಳೆ ನ್ನುವರು.

ಇವು ನಾಮಪ್ರಕೃತಿಗಳೆನಿಸಿದ್ದರಿಂದ ಇವುಗಳ ಮೇಲೆ ನಾಮವಿಭಕ್ತಿಪ್ರತ್ಯಯಗಳು ಸೇರಿ ನಾಮಪದಗಳಾಗುವುವು.

ಉದಾಹರಣೆಗೆ:-

(i) ವರ್ತಮಾನ ಕೃದಂತಕ್ಕೆ

ಮಾಡು + + = ಮಾಡುವ
ತಿನ್ನು + + = ತಿನ್ನುವ
ಬರೆ + ಉವ + = ಬರೆಯುವ

 

ಇದರಂತೆ-ಹೋಗುವ, ಬರುವ, ತಿನ್ನುವ, ನೋಡುವ, ಓಡುವ, ನಡೆಯುವ, ಕಾಣುವ, ಕೊಡುವ

[1].

(ii) ಭೂತ ಕೃದಂತಕ್ಕೆ

ಮಾಡು + + = ಮಾಡಿದ
ತಿನ್ನು + + = ತಿಂದ
ಹೋಗು + + = ಹೋದ

 

ಇದರಂತೆ ಬರೆದ, ನೋಡಿದ, ನಡೆದ, ಕಂಡ, ಕರೆದ-ಇತ್ಯಾದಿ.

(iii) ನಿಷೇಧ ಕೃದಂತಕ್ಕೆ

ಮಾಡು + ಅದ + = ಮಾಡದ
ತಿನ್ನು + ಅದ + = ತಿನ್ನದ

 

ಇದರಂತೆ ಹೋಗದ, ಬರದ, ನೋಡದ, ನುಡಿಯದ, ಬರೆಯದ-ಇತ್ಯಾದಿ.

ಮೇಲೆ ಹೇಳಿದ ವರ್ತಮಾನ, ಭವಿಷ್ಯತ್, ಭೂತ, ನಿಷೇಧಾರ್ಥ ಕೃದಂತನಾಮಗಳೆಲ್ಲ ಈಗ ನಾಮವಿಭಕ್ತಿಪ್ರತ್ಯಯ ಹತ್ತಲು ಸಿದ್ಧವಾದವು. ಇವುಗಳ ಮೇಲೆ ನಾಮವಿಭಕ್ತಿಪ್ರತ್ಯಯಗಳು ಸೇರುವಾಗ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳಲ್ಲಿ ಆಗುವ ವ್ಯಾಕರಣ ವಿಶೇಷಗಳನ್ನು ಈ ಕೆಳಗೆ ನೋಡಿರಿ.

(i) ಪುಲ್ಲಿಂಗದಲ್ಲಿ

ಕೃದಂತ ನಾಮಪದಗಳು
ಮಾಡುವ ಮಾಡುವ + ಅವನು + = ಮಾಡುವವನು
ಮಾಡುವ + ಅವರು + = ಮಾಡುವವರು
ಮಾಡುವ + ಅವನು + ಅನ್ನು = ಮಾಡುವವನನ್ನು
ಮಾಡಿದ + ಅವನು + = ಮಾಡಿದವನು (ಏ.ವ.)
ಮಾಡಿದ + ಅವರು + = ಮಾಡಿದವರು (ಬ.ವ.)
ಮಾಡಿದ + ಅವರು + ಇಂದ = ಮಾಡಿದವರಿಂದ (ಬ.ವ.)
ಮಾಡದ + ಅವನು + = ಮಾಡದವನು (ಏ.ವ.)
ಮಾಡದ + ಅವನು + ಅಲ್ಲಿ = ಮಾಡದವನಲ್ಲಿ (ಏ.ವ.)
ಮಾಡದ + ಅವರು + ಅಲ್ಲಿ = ಮಾಡದವರಲ್ಲಿ (ಬ.ವ.)

 

(ii) ಸ್ತ್ರೀಲಿಂಗದಲ್ಲಿ

ಕೃದಂತ ನಾಮಪದಗಳು
ಬರೆದ ಬರೆದ + ಅವಳು + = ಬರೆದವಳು (ಏ.ವ.)
ಬರೆದ + ಅವಳು + ಅನ್ನು = ಬರೆದವಳನ್ನು (ಏ.ವ.)
ಬರೆದ + ಅವರು + ಇಂದ = ಬರೆದವರಿಂದ (ಬ.ವ.)
ಬರೆದ + ಅವಳು + ಇಗೆ = ಬರೆದವಳಿಗೆ (ಏ.ವ.)
ಬರೆದ + ಅವರು + ಇಗೆ = ಬರೆದವರಿಗೆ (ಬ.ವ.)
ಬರೆದ + ಅವಳು + ಅಲ್ಲಿ = ಬರೆದವಳಲ್ಲಿ (ಏ.ವ.)
ಬರೆದ + ಅವಳು + = ಬರೆದವಳೇ (ಏ.ವ.)
ತಿನ್ನದ + ಅವಳು + = ತಿನ್ನದವಳು
ತಿನ್ನದ + ಅವರು + ಅನ್ನು = ತಿನ್ನದವರನ್ನು
ತಿನ್ನದ + ಅವಳು + ಇಂದ = ತಿನ್ನದವಳಿಂದ

 

(iii) ನಪುಂಸಕಲಿಂಗದಲ್ಲಿ

ಕೃದಂತ ನಾಮಪದಗಳು
ಹೋಗುವ ಹೋಗುವ + ಉದು + = ಹೋಗುವುದು
ಹೋಗುವ + ಉದು + ಅನ್ನು = ಹೋಗುವುದನ್ನು
ಹೋಗುವ + ಉವು + ಅನ್ನು = ಹೋಗುವುವನ್ನು
ಹೋಗುವ + ಉದು + ಅರು + ಇಂದ = ಹೋಗುವುದರಿಂದ
ಹೋಗುವ + ಉದು + ಅಕ್ಕೆ = ಹೋಗುವುದಕ್ಕೆ
ಹೋಗುವ + ಉದು + ಅರು + ಅಲ್ಲಿ = ಹೋಗುವುದರಲ್ಲಿ
ಹೋಗುವ + ಉವು + ಗಳು + ಅಲ್ಲಿ = ಹೋಗುವುವುಗಳಲ್ಲಿ
(ಅವು) ಹೋಗುವವುಗಳಲ್ಲಿ
ಹೋದ + ಉದು + ಅನ್ನು = ಹೋದುದನ್ನು
ಹೋದ + ಉವು + ಗಳು + ಇಂದ = ಹೋದುವುಗಳಿಂದ

– ಇತ್ಯಾದಿ

ಮೇಲೆ ಹೇಳಿದ ಉದಾಹರಣೆಗಳನ್ನೆಲ್ಲ ನೋಡಿದರೆ ಕೃದಂತಗಳ ಮೇಲೆ ನಾಮವಿಭಕ್ತಿಪ್ರತ್ಯಯಗಳು ಸೇರುವಾಗ ಕೃದಂತಕ್ಕೂ, ನಾಮವಿಭಕ್ತಿಪ್ರತ್ಯಯಕ್ಕೂ ಮಧ್ಯದಲ್ಲಿ ಪುಲ್ಲಿಂಗ ಏಕವಚನದಲ್ಲಿ ಅವನು ಎಂಬುದೂ, ಬಹುವಚನದಲ್ಲಿ ಅವರು ಎಂಬ ಸರ್ವನಾಮಗಳೂ ಆಗಮಗಳಾಗಿ ಬರುತ್ತವೆ.

ಸ್ತ್ರೀಲಿಂಗದ ಏಕವಚನದಲ್ಲಿ ಅವಳು ಬಹುವಚನದಲ್ಲಿ ಅವರು ಎಂಬ ಸರ್ವನಾಮ ಬರುತ್ತವೆ.

ನಪುಂಸಕಲಿಂಗದ ಏಕವಚನದಲ್ಲಿ ಉದು (ಅದು) ಮತ್ತು ಬಹುವಚನದಲ್ಲಿ ಉವು (ಅವು) ಎಂಬ ಸರ್ವನಾಮಗಳು ಬರುತ್ತವೆ[2].

() ಇದುವರೆಗೆ ತಿಳಿಸಿದ ಕೃದಂತನಾಮಗಳು ನಾಮಪದಗಳನ್ನು ವಿಶೇಷಿಸುತ್ತವೆ.

(i) ವರ್ತಮಾನಭವಿಷ್ಯತ್ ಕೃದಂತಗಳು ನಾಮಪದಗಳನ್ನು ವಿಶೇಷಿಸುವುದಕ್ಕೆ

ಮಾಡುವ ಕೆಲಸ

ಹಾಡುವ ಪದ

ನೋಡುವ ಕಾರ‍್ಯ

ತಿನ್ನುವ ಪದಾರ್ಥ – ಇತ್ಯಾದಿ.

 

(ii) ಭೂತಕೃದಂತಗಳು ನಾಮಪದಗಳನ್ನು ವಿಶೇಷಿಸುವುದಕ್ಕೆ

ಮಾಡಿದ ಕೆಲಸ

ಹಾಡಿದ ಪದ

ನೋಡಿದ ಕಾರ‍್ಯ

ತಿಂದ ಪದಾರ್ಥ – ಇತ್ಯಾದಿ.

 

(iii) ನಿಷೇಧಕೃದಂತಗಳು ನಾಮಪದಗಳನ್ನು ವಿಶೇಷಿಸುವುದಕ್ಕೆ

ಮಾಡದ ಕೆಲಸ

ಹಾಡದ ಪದ

ನೋಡದ ಕಾರ‍್ಯ

ತಿನ್ನದ ಪದಾರ್ಥ – ಇತ್ಯಾದಿ.

 

() ಕೃದಂತಭಾವನಾಮಗಳು (ಭಾವಕೃದಂತ)

(i) ಆತನ ಓಟ ಚೆನ್ನಾಗಿತ್ತು

(ii) ಅದರ ನೆನಪು ಇಲ್ಲ

(iii) ಗಡಿಗೆಯ ಮಾಟ ಸೊಗಸು

(iv) ಇದರ ಕೊರೆತ ಹಸನಾಗಿದೆ

ಮೇಲಿನ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಓಟ, ಮಾಟ, ನೆನಪು, ಕೊರೆತ-ಈ ಶಬ್ದಗಳನ್ನು ಗಮನಿಸಿರಿ.

ಓಡುವ ರೀತಿಯೇ ಓಟ – ಓಡು + .

ಮಾಡಿರುವ ರೀತಿಯೇ ಮಾಟ – ಮಾಡು + .

ನೆನೆಯುವ ರೀತಿಯೇ ನೆನಪು – ನೆನೆ + ಅಪು.

ಕೊರೆದಿರುವಿಕೆಯೇ ಕೊರೆತ – ಕೊರೆ +.

ಇವೆಲ್ಲ ಕ್ರಿಯೆಯ ಭಾವವನ್ನು ತಿಳಿಸುತ್ತದೆ.  ಆದುದರಿಂದ ಇವನ್ನು ಕೃದಂತ ಭಾವನಾಮಗಳು ಅಥವಾ ಭಾವಕೃದಂತಗಳು ಎನ್ನುತ್ತಾರೆ.

 

(೮೮) ಕೃದಂತಭಾವನಾಮಗಳುಧಾತುಗಳ ಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳು ಸೇರಿ ಕೃದಂತಭಾವನಾಮಗಳೆನಿಸುವುವು.

ಉದಾಹರಣೆಗೆ:

ಧಾತು + ಭಾವಾರ್ಥದಲ್ಲಿ ಕೃತ್ಪ್ರತ್ಯಯ = ಕೃದಂತ ಭಾವನಾಮ ಇದರಂತೆ ಇರುವ  ಇತರ ರೂಪಗಳು
ಮಾಡು + ವುದು[3] = ಮಾಡುವುದು ನೋಡುವುದು, ತಿನ್ನುವುದು
ತಿನ್ನು + ಇಕೆ = ತಿನ್ನುವಿಕೆ ನೋಡುವಿಕೆ, ಬರೆಯುವಿಕೆ, ಕೊರೆಯುವಿಕೆ
ಅಂಜು + ಇಕೆ = ಅಂಜಿಕೆ ನಂಬಿಕೆ, ಹೊಗಳಿಕೆ,  ತೆಗಳಿಕೆ, ಆಳಿಕೆ,  ನಾಚಿಕೆ, ಬಳಲಿಕೆ, ಕಲಿಕೆ
ಉಡು + ಇಗೆ = ಉಡಿಗೆ ತೊಡಿಗೆ, ಅಡಿಗೆ,  ಮುತ್ತಿಗೆ, ಹಾಸಿಗೆ, ಏಳಿಗೆ
ಉಡು + ಗೆ = ಉಡುಗೆ ತೊಡುಗೆ, ನಂಬುಗೆ, ಹೊಲಿಗೆ, ಏಳ್ಗೆ
ಬರು + ಅವು = ಬರವು ಸೆಳವು, ಮರವು, ಒಲವು, ಕಳವು, ತೆರವು
ಸಾ + ವು = ಸಾವು ನೋವು, ಮೇವು,  ದಣಿವು, ಅರಿವು
ಕೊರೆ + = ಕೊರೆತ ಸೆಳೆತ, ಕಟೆತ, ಇರಿತ,  ತಿವಿತ, ಕುಣಿತ, ಒಗೆತ
ಓಡು + = ಓಟ ಮಾಟ, ಕೂಟ, ನೋಟ, ಆಟ, ಕಾಟ
ನಡೆ + ವಳಿ = ನಡೆವಳಿ ನುಡಿವಳಿ, ಸಲುವಳಿ, ಹಿಡಿವಳಿ, ಕೂಡುವಳಿ, ಮುಗಿವಳಿ
ಕಾ + ಪು = ಕಾಪು ಮೇಪು, ತೀರ್ಪು, ತಿಳಿಪು, ಹೊಳೆಪು, ನೆನೆಪು,
ಹೊಳೆ + ಅಪು = ಹೊಳಪು ನೆನಪು
ಮುಗ್ಗು + ಅಲು = ಮುಗ್ಗಲು ಒಣಗಲು, ಜಾರಲು,
ಬಿಕ್ಕಲು, ಒಕ್ಕಲು
ನಗು + = ನಗೆ ಹೊರೆ
ಬೆರೆ + ಅಕೆ = ಬೆರಕೆ ಮೊಳಕೆ
ಬೆಳೆ + ವಳಿಕೆ = ಬೆಳೆವಳಿಕೆ ತಿಳಿವಳಿಕೆ, ನಡೆವಳಿಕೆ
ಮೆರೆ + ವಣಿಗೆ = ಮೆರೆವಣಿಗೆ ಬೆಳವಣಿಗೆ, ಬರೆವಣಿಗೆ
ಅಳೆ + ಅತೆ = ಅಳತೆ ನಡತೆ
ಮುಳಿ + ಸು = ಮುಳಿಸು ತೊಳೆಸು, ಮುನಿಸು
ಮುರಿ + ಅಕು = ಮುರಕು ಹರಕು
ನಡುಗು + ಉಕ = ನಡುಕ ಮುರುಕ
ಒಪ್ಪು + ಇತ = ಒಪ್ಪಿತ ತಪ್ಪಿತ

 

(೧) ಕೆಲವು ಧಾತುಗಳು ಅಲ್ಪಸ್ವಲ್ಪ ವ್ಯತ್ಯಾಸದಿಂದ ಭಾವಕೃದಂತ (ಭಾವನಾಮ)ಗಳಾಗುವುವು.

ಧಾತು ಭಾವಕೃದಂತ ನಾಮಪದ
ಕಿಡು ಕೇಡು ಕೇಡನ್ನು, ಕೇಡಿನಿಂದ.
ಬಿಡು ಬೀಡು ಬೀಡನ್ನು, ಬೀಡಿನಿಂದ, ಬೀಡಿಗೆ.
ಪಡು ಪಾಡು ಪಾಡನ್ನು, ಪಾಡಿನಿಂದ, ಪಾಡಿಗೆ.

 

(೨) ಕೆಲವು ಧಾತುಗಳು ಇದ್ದ ರೂಪದಲ್ಲಿಯೇ ಭಾವಕೃದಂತ (ಕೃದಂತ ಭಾವನಾಮ) ಗಳಾಗುವುವು.

ಧಾತು ಭಾವಕೃದಂತ ನಾಮಪದ
ನಡೆ ನಡೆ ನಡೆಯನ್ನು, ನಡೆಯಿಂದ
ನುಡಿ ನುಡಿ ನುಡಿಯು, ನುಡಿಯನ್ನು, ನುಡಿಯಿಂದ, ನುಡಿಗೆ-ಇತ್ಯಾದಿ
ಓದು ಓದು ಓದು, ಓದನ್ನು, ಓದಿನಿಂದ, ಓದಿನಲ್ಲಿ-ಇತ್ಯಾದಿ
ಕಟ್ಟು ಕಟ್ಟು ಕಟ್ಟು, ಕಟ್ಟನ್ನು, ಕಟ್ಟಿನಿಂದ, ಕಟ್ಟಿಗೆ, ಕಟ್ಟಿನಲ್ಲಿ
ಅಂಟು ಅಂಟು ಅಂಟನ್ನು, ಅಂಟಿನ ದೆಸೆಯಿಂದ, ಅಂಟಿನಲ್ಲಿ
ಹಿಡಿ ಹಿಡಿ ಹಿಡಿಯನ್ನು, ಹಿಡಿಯಿಂದ
ಉರಿ ಉರಿ ಉರಿಯನ್ನು, ಉರಿಯಿಂದ
ಹೇರು ಹೇರು ಹೇರನ್ನು, ಹೇರಿನಿಂದ, ಹೇರಿನಲ್ಲಿ
ಉಗುಳು ಉಗುಳು ಉಗುಳನ್ನು, ಉಗುಳಿನ, ಉಗುಳಿನಲ್ಲಿ
ಹುಟ್ಟು ಹುಟ್ಟು ಹುಟ್ಟನ್ನು, ಹುಟ್ಟಿನ, ಹುಟ್ಟಿನಲ್ಲಿ
ಚಿಗುರು ಚಿಗುರು ಚಿಗುರನ್ನು, ಚಿಗುರಿನಲ್ಲಿ
ಬೆಳೆ ಬೆಳೆ ಬೆಳೆಯನ್ನು, ಬೆಳೆಯಲ್ಲಿ
ಸವಿ ಸವಿ ಸವಿಯನ್ನು, ಸವಿಯಲ್ಲಿ
ಗುದ್ದು ಗುದ್ದು ಗುದ್ದನ್ನು, ಗುದ್ದಿನಲ್ಲಿ
ಬದುಕು ಬದುಕು ಬದುಕನ್ನು, ಬದುಕಿನಲ್ಲಿ

 

(೩) ಹಳಗನ್ನಡದ ಕೆಲವು ಕೃದಂತ ಭಾವನಾಮಗಳು ಹೊಸಗನ್ನಡದಲ್ಲಿ ರೂಪಾಂತರ ಹೊಂದುತ್ತವೆ.

ಏಳ್ಗೆ-ಏಳಿಗೆ, ಸಲ್ಗೆ-ಸಲಿಗೆ, ಕಾಣ್ಕೆ-ಕಾಣಿಕೆ, ಒಲ್ಮೆ-ಒಲುಮೆ, ಪೂಣ್ಕೆ-ಪೂಣಿಕೆ – ಇತ್ಯಾದಿ.

 

() ಕೃದಾಂತಾವ್ಯಯಗಳು (ಅವ್ಯಯಕೃದಂತ)

ಧಾತುವಿನಿಂದ ಹುಟ್ಟಿ ಅವ್ಯಯದ ಗುಣವನ್ನು ಪಡೆದಂಥ ಶಬ್ದ ರೂಪಗಳೇ ಕೃದಂತಾವ್ಯಯಗಳು ಅಥವಾ ಅವ್ಯಯಕೃದಂತಗಳು. ಈ ಕೆಳಗಿನ ಕೆಲವು ಉದಾಹರಣೆ ನೋಡಿರಿ.

(೧) ರಾಮನು ಉಣ್ಣದೆ ಮಲಗಿದನು.

(೨) ಮಳೆ ಬರಲು ಕರೆ ತುಂಬಿತು.

(೩) ಅವನು ಬರುತ್ತ ತಿಂದನು.

(೪) ಅದನ್ನು ಬರೆದು ಕಳುಹಿಸಿದನು.

(೫) ಅಲ್ಲಿಗೆ ಹೋಗಲಿಕ್ಕೆ ತಡವಾಯಿತು.

ಮೇಲಿನ ವಾಕ್ಯಗಳಲ್ಲಿ ದಪ್ಪಕ್ಷರ ಶಬ್ದಗಳಾದ ಉಣ್ಣದೆ, ಬರಲು, ಬರುತ್ತ, ಬರೆದು, ಹೋಗಲಿಕ್ಕೆ-ಮುಂತಾದವುಗಳು ಉಣ್ಣು+ಅದೆ, ಬರು+ಅಲು, ಬರು+ಉತ್ತ, ಬರೆ+ದು, ಹೋಗು+ಅಲಿಕ್ಕೆಹೀಗೆ ಧಾತುಗಳ ಮೇಲೆ-ಅದೆ, ಅಲು, ಉತ್ತ, ದು, ಅಲಿಕ್ಕೆ-ಇತ್ಯಾದಿ ಪ್ರತ್ಯಯಗಳು ಬಂದು ಆದ ಶಬ್ದರೂಪಗಳು.  ಇವು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಗಳಲ್ಲೂ, ಏಕವಚನ ಬಹುವಚನಗಳಲ್ಲೂ ಒಂದೇ ರೂಪವಾಗಿರುತ್ತವೆ.  ಅಲ್ಲದೆ ಇವುಗಳ ಮೇಲೆ ಇನ್ನಾವ ವಿಭಕ್ತಿಪ್ರತ್ಯಯಗಳೂ ಬರುವುದಿಲ್ಲ.  ಆದ್ದರಿಂದ-ಇಂಥ ಶಬ್ದಗಳು ಅವ್ಯಯದ[4] ಗುಣವನ್ನು ಪಡೆದವು.  ಆದ್ದರಿಂದಲೇ ಇವುಗಳನ್ನು ಅವ್ಯಯಕೃದಂತಗಳು ಅಥವಾ ಕೃದಂತಾವ್ಯಯಗಳು ಎನ್ನುವರು.  ಕೆಳಗಿನ ಸೂತ್ರವನ್ನು ಗಮನಿಸಿರಿ.

(೮೯) ಧಾತುಗಳ ಮೇಲೆ ಉತ, ಉತ್ತ, ಅದೆ, ದರೆ, ಅಲು, ಅಲಿಕ್ಕೆ, , , ದುಇತ್ಯಾದಿ ಪ್ರತ್ಯಯಗಳು ಸೇರಿ ಕೃದಂತಾವ್ಯಯಗಳೆನಿಸುವುವು.

ಇವು ಪೂರ್ಣಕ್ರಿಯಾರ್ಥವನ್ನು ಕೊಡದೆ, ಇನ್ನೊಂದು ಕ್ರಿಯೆಯನ್ನಪೇಕ್ಷಿಸುವುದರಿಂದ ಇವನ್ನು ಅಪೂರ್ಣಕ್ರಿಯೆ ಅಥವಾ ನ್ಯೂನಕ್ರಿಯೆಗಳೆಂದು ಕರೆಯುವರು.

() ರಾಮನು ಉಣ್ಣುತ್ತಾ ಮಾತಾಡಿದನು.

ಎಂಬ ಈ ವಾಕ್ಯದಲ್ಲಿ ರಾಮನೆಂಬ ಕರ್ತೃವು ಉಣ್ಣುವ ಮತ್ತು ಮಾತನಾಡುವ ಕ್ರಿಯೆಗಳೆರಡನ್ನೂ ಮಾಡಿದನಾದ್ದರಿಂದ ಇಂಥವು ಏಕಕರ್ತೃಕ ಕ್ರಿಯೆಗಳು.

() ಮಳೆ ಬರಲು ಕೆರೆ ತುಂಬಿತು.

ಎಂಬ ಈ ವಾಕ್ಯದಲ್ಲಿ ಬರಲು ಎಂಬ ಕ್ರಿಯೆಗೆ ಮಳೆಯೂ, ತುಂಬುವ ಕ್ರಿಯೆಗೆ ಕೆರೆಯೂ ಕರ್ತೃಗಳಾದ್ದರಿಂದ ಇವೆರಡೂ ಕ್ರಿಯೆಗೆ ಬೇರೆ ಬೇರೆ ಕರ್ತೃಗಳು ಇದ್ದಹಾಗಾಯಿತು.  ಇಂಥವನ್ನು ಭಿನ್ನಕರ್ತೃಗಳು ಎನ್ನುತ್ತಾರೆ.

ಉದಾಹರಣೆಗೆ:

ಪ್ರತ್ಯಯಗಳು ಧಾತು + ಪ್ರತ್ಯಯ = ಅವ್ಯಯಕೃದಂತ
ಉತ ಮಾಡು + ಉತ = ಮಾಡುತ, ಇದರಂತೆ ನೋಡುತ, ಮಾರುತ, ಬರುತ
ಉತ್ತ[5] ತಿನ್ನು + ಉತ್ತ = ತಿನ್ನುತ್ತ, ಇದರಂತೆ ನೋಡುತ್ತ, ನಡೆಯುತ್ತ, ಬರುತ್ತ
ಅದೆ ಮಾಡು + ಅದೆ = ಮಾಡದೆ, ಇದರಂತೆ ನೋಡದೆ, ತಿನ್ನದೆ, ಬರೆಯದೆ
ಅಲು ಬರು + ಅಲು = ಬರಲು, ಇದರಂತೆ ತಿನ್ನಲು, ಉಣ್ಣಲು, ನೋಡಲು, ನುಡಿಯಲು, ಬರೆಯಲು
ಅಲಿಕ್ಕೆ ತಿನ್ನು + ಅಲಿಕ್ಕೆ = ತಿನ್ನಲಿಕ್ಕೆ, ಇದರಂತೆ ಮಾಡಲಿಕ್ಕೆ, ತಿಳಿಯಲಿಕ್ಕೆ, ಬರಲಿಕ್ಕೆ, ನಡೆಯಲಿಕ್ಕೆ
ಹೇಳು + = ಹೇಳ[6], ಇದರಂತೆ ಮಾಡ, ನೋಡ, ನುಡಿಯ
ಮಾಡು + = ಮಾಡಿ, ಇದರಂತೆ ಹೇಳಿ, ಕೇಳಿ, ನೋಡಿ
ದು ತಿನ್ನು + ದು = ತಿಂದು, ಇದರಂತೆ ನುಡಿದು, ನಡೆದು, ಕರೆದು, ಬರೆದು

ಈಗ ಏಕಕರ್ತೃಕ ಕೃದಂತಾವ್ಯಯಗಳು ಮತ್ತು ಭಿನ್ನಕರ್ತೃಕ ಕೃದಂತಾವ್ಯಯಗಳಲ್ಲಿ ಯಾವ ಯಾವ ಪ್ರತ್ಯಯಗಳು ಬರುತ್ತವೆಂಬುದರ ವ್ಯವಸ್ಥೆಯನ್ನು ನೋಡಿರಿ.

() ಏಕಕರ್ತೃಕ ಕೃದಂತಾವ್ಯಯಗಳು.

(i) ಒಂದು ಕರ್ತೃವಿನಿಂದ ಎರಡು ಕ್ರಿಯೆಗಳು ನಡೆದಾಗ ಮೊದಲು ಹೇಳುವ ಕ್ರಿಯೆಯಲ್ಲಿ ಭೂತಕಾಲ ತೋರಿದರೆ ದು ಅಥವಾ ಇ ಪ್ರತ್ಯಯಗಳು ಬರುತ್ತವೆ.

[7](ಅ) ಅದನ್ನು ತಿಂದು ಹೋದನು (ತಿನ್ನು+ದು=ತಿಂದು)

83(ಆ) ಆ ಕೆಲಸವನ್ನು ಮಾಡಿ ಬಂದೆನು (ಮಾಡು+ಇ=ಮಾಡಿ)

-ಇಲ್ಲಿ ತಿಂದು, ಮಾಡಿ ಎಂಬುವೆರಡೂ ಮೊದಲ ಕ್ರಿಯೆಗಳು ಮುಗಿದು ಹೋದ (ಭೂತ) ಕಾಲವನ್ನು ತೋರಿಸುತ್ತವಾದ್ದರಿಂದ, ದು, ಇ ಪ್ರತ್ಯಯಗಳು ಬಂದಿವೆ.

 

(ii) ಒಂದೇ ಕರ್ತೃವಿನಿಂದ ಏಕಕಾಲದಲ್ಲಿ ಎರಡು ಕ್ರಿಯೆಗಳುಂಟಾದಾಗ ಮೊದಲನೆಯ ಕ್ರಿಯೆಯ ಮೇಲೆ ಉತ್ತ (ಉತ್ತಾ) ಪ್ರತ್ಯಯವೂ, ನಿಷೇಧ ತೋರಿದರೆ ಅದೇ ಪ್ರತ್ಯಯವೂ ಬರುವುವು.

(ಅ) ಅವನು ಉಣ್ಣುತ್ತ ಮಾತನಾಡಿದನು (ಏಕಕಾಲದಲ್ಲಿ ನಡೆದ ಕ್ರಿಯೆಗಳು)

(ಆ) ಅವನು ಉಣ್ಣದೆ ಹೋದನು (ನಿಷೇಧ)

-ಇಲ್ಲಿ ಮೊದಲ ವಾಕ್ಯದಲ್ಲಿ ಮಾತನಾಡುವ ಕ್ರಿಯೆ, ಉಣ್ಣುವ ಕ್ರಿಯೆಗಳು ಒಬ್ಬನಿಂದಲೇ ಏಕಕಾಲದಲ್ಲಿ ಆಗಿವೆ.  ಆದ್ದರಿಂದ ಉತ್ತ ಎಂಬುದೂ, ಎರಡನೆಯ ವಾಕ್ಯದಲ್ಲಿ ನಿಷೇಧ ಕ್ರಿಯೆ, ಹೋಗುವ ಕ್ರಿಯೆಗಳೆರಡೂ ಒಬ್ಬ ಕರ್ತೃವಿನಿಂದ ನಡೆದಿವೆ.  ಆದ್ದರಿಂದ ಅದೆ ಎಂಬುದು ಮೊದಲ ಕ್ರಿಯೆಯ ಮೇಲೆ ಬಂದಿದೆ.

(iii) ಒಂದು ಕರ್ತೃವಿನಿಂದ ಏಕಕಾಲದಲ್ಲಿ ಎರಡು ಕ್ರಿಯೆಗಳುಂಟಾದಾಗ ಪ್ರಯೋಜನ ತೋರಿದರೆ ಅಲು ಅಲಿಕ್ಕೆ ಪ್ರತ್ಯಯಗಳು ಮೊದಲನೆಯ ಕ್ರಿಯೆಯ ಮೇಲೆ ಬರುತ್ತವೆ.

(ಅ) ಅವನು ತಿನ್ನಲು ಹೋದನು (ಪ್ರಯೋಜನ)

(ಆ) ಅವನು ತಿನ್ನಲಿಕ್ಕೆ ಹೋದನು (    ”    )

-ಮೇಲಿನ ಎರಡೂ ವಾಕ್ಯಗಳಲ್ಲಿ ಹೋಗುವ ಕ್ರಿಯೆಯು ತಿನ್ನುವ ಪ್ರಯೋಜನಕ್ಕಾಗಿ.  ಆದ್ದರಿಂದ ಮೊದಲ ಕ್ರಿಯೆಯ ಮೇಲೆ ಅಲು, ಅಲಿಕ್ಕೆ ಪ್ರತ್ಯಯಗಳು ಬಂದಿವೆ.

 

() ಭಿನ್ನಕರ್ತೃಕ ಕೃದಂತಾವ್ಯಯಗಳು

(i) ಬೇರೆ ಬೇರೆ ಕರ್ತೃಗಳಿಂದ ಎರಡು ಕ್ರಿಯೆಗಳುಂಟಾದಾಗ ಕಾರಣ ತೋರುವಾಗ ಅಲು ಮತ್ತು ದು ಪ್ರತ್ಯಯಗಳು ಮೊದಲ ಕ್ರಿಯೆಯ ಮೇಲೆ ಬರುತ್ತವೆ.

ಉದಾಹರಣೆಗೆ:

(ಅ) ಹೊಲ ಬೆಳೆಯಲು ರೈತನು ಸುಖ ಹೊಂದಿದನು.

(ಆ) ಹೊಲ ಬೆಳೆದು ರೈತನಿಗೆ ಸುಖ ಬಂದಿತು.

(ii) ಬೇರೆ ಬೇರೆ ಕರ್ತೃಗಳಿಂದ ಎರಡು ಕ್ರಿಯೆಗಳು ಏಕ ಕಾಲದಲ್ಲಿ ತೋರಿದರೆ ಉತ್ತ, ದು, ಅದೆ ಪ್ರತ್ಯಯಗಳು ಬಂದಾಗ ಅವುಗಳ ಮುಂದೆ ಇರಲು ಇರಲಾಗಿ ಎಂಬುವು ಸೇರುವುವು.

ಉದಾಹರಣೆಗೆ:

(ಅ) ಅವನು ಬರುತ್ತಿರಲು ಎಲ್ಲರೂ ಓಡಿದರು.

(ಆ) ಅವನು ಬರುತ್ತಿರಲಾಗಿ ಎಲ್ಲರೂ ಓಡಿದರು.

(ಇ) ಅವನು ಬರದಿರಲು ನಾವು ಮನೆಗೆ ಹೋದೆವು.

(ಈ) ಅವನು ಬರದಿರಲಾಗಿ ನಾವು ಮನೆಗೆ ಹೋದೆವು.

(ಉ) ಅವನು ಬಂದಿರಲು ನಾವೇಕೆ ಬರಬಾರದು.

(ಊ) ಅವನು ಬಂದಿರಲಾಗಿ ನಾವೇಕೆ ಬರಬಾರದು.

(iii) ಎರಡು ಕ್ರಿಯೆಗಳು ಬೇರೆ ಬೇರೆ ಕರ್ತೃಗಳಿಂದ ನಡೆದಾಗ ಪಕ್ಷಾರ್ಥ ತೋರಿದರೆ ದರೆ ಎಂಬುದೂ, ಭಾವಾರ್ಥ ತೋರಿದರೆ ಅ ಎಂಬುದೂ ಬರುವುವು.

ಉದಾಹರಣೆಗೆ:

(೧) ಪಕ್ಷಾರ್ಥಕ್ಕೆ

(ಅ) ಮಳೆ ಬಂದರೆ, ಕರೆ ತುಂಬುವುದು.

(ಆ) ನೀವು ಬಂದರೆ ನಾವು ಬರುತ್ತೇವೆ.

(೨) ಭಾವಾರ್ಥಕ್ಕೆ

(ಅ) ಅವನು ನನ್ನನ್ನು ಹೋಗ ಹೇಳಿದನು. (ಹೋಗು+ಅ=ಹೋಗ)

(ಆ) ಅವನಿಗೆ ಅಲ್ಲಿ ಮಾಡ ಕೆಲಸವಿಲ್ಲ.  (ಮಾಡು+ಅ=ಮಾಡ)

ಮೇಲಿನ ವಾಕ್ಯಗಳಲ್ಲಿನ ‘ಮಾಡ’ ‘ಹೋಗ’ ಇವು ಭಾವಾರ್ಥಕ ಕ್ರಿಯೆಗಳೆಂದು ತಿಳಿಯಬೇಕು.


[1] ವರ್ತಮಾನ ಮತ್ತು ಭವಿಷ್ಯತ್ ಕೃದಂತಗಳು ಒಂದೇ ರೂಪವಾಗಿರುತ್ತವೆ.  ಇವೆರಡು ಕೃದಂತಗಳಲ್ಲೂ ಕಾಲಸೂಚಕ ಪ್ರತ್ಯಯ ಒಂದೇ ತೆರನಾಗಿರುತ್ತದೆ.  ಕೆಲವರು ವರ್ತಮಾನ ಕೃದಂತಗಳೇ ಇರುವುದಿಲ್ಲ ಎಂದೂ ಹೇಳುವುದುಂಟು.

[2] ನಪುಂಸಕಲಿಂಗದಲ್ಲಿ-ಹೋಗುವುದರಿಂದ-ಇತ್ಯಾದಿಗಳಿಗೆ ಪ್ರತಿಯಾಗಿ ಹೋಗುವಂತಹುದರಿಂದ, ನಡೆಯುವಂಥಾದ್ದರಿಂದ, ತಿನ್ನುವವುಗಳಿಂದ ಎಂಬುದಕ್ಕೆ ತಿನ್ನುವಂತಹವುಗಳಿಂದ, ತಿನ್ನುವಂಥವುಗಳಿಂದ-ಇತ್ಯಾದಿಯಾಗಿ ಹೊಸಗನ್ನಡದಲ್ಲಿ ಉಪಯೋಗಿಸುವುದುಂಟು.  ನಡೆಯುವುದನ್ನು, ನಡೆಯುವದನ್ನು-ಹೀಗೆ ಎರಡು ರೂಪಗಳ ಪ್ರಯೋಗವೂ ರೂಢಿಯಲ್ಲುಂಟು.  ಏಕವಚನದಲ್ಲಿ ಅವನು ಎಂಬುದೂ, ಬಹುವಚನದಲ್ಲಿ ಅವರು ಎಂಬ ಸರ್ವನಾಮಗಳೂ ಆಗಮಗಳಾಗಿ ಬರುತ್ತವೆ.

[3] ಸಾಮಾನ್ಯವಾಗಿ ಎಲ್ಲ ಧಾತುಗಳ ಮೇಲೂ ಭಾವಾರ್ಥದಲ್ಲಿ ವುದು, ವಿಕೆ – ಎಂಬ ಪ್ರತ್ಯಯಗಳು ಬರುತ್ತವೆ.  ವಿಕೆ ಪ್ರತ್ಯಯಕ್ಕೆ ಪ್ರತಿಯಾಗಿ ಕೆಲವರು ಇಕೆ ಬರುತ್ತದೆಂದು ಹೇಳಿ ನೋಡುವಿಕೆ (ನೋಡು+ವ್+ಇಕೆ=ನೋಡುವಿಕೆ) ಇತ್ಯಾದಿ ರೂಪಗಳು ಆಗುತ್ತವೆನ್ನುತ್ತಾರೆ..  ಆದರೆ ಇವೆರಡೂ ಪ್ರತ್ಯಯಗಳು ಬೇರೆಬೇರೆಯೇ ಆಗಿವೆ.

[4] ಅವ್ಯಯ ಎಂದರೆ ಲಿಂಗ, ವಚನ, ವಿಭಕ್ತಿಗಳಿಂದ ವ್ಯತ್ಯಾಸವಾಗದ ಶಬ್ದರೂಪ.  ಇವುಗಳ ವಿಷಯವನ್ನು ಮುಂದೆ ತಿಳಿಯುತ್ತೀರಿ.

[5] ಉತ್ತ ಪ್ರತ್ಯಯವನ್ನು ಹೊಸಗನ್ನಡದಲ್ಲಿ ಕೆಲವರು ಉತ್ತಾ ಎಂದು ಹೇಳಿ ಹೋಗುತ್ತಾ, ಬರುತ್ತಾ, ತಿನ್ನುತ್ತಾ ಇತ್ಯಾದಿಯಾಗಿ ಕೃದಂತಾವ್ಯಯಗಳನ್ನು ಬಳಸುವುದುಂಟು.

[6] ಹೇಳ ಬಂದನು, ಹೇಳ ಬಂದಳು, ಮಾಡ ಬಂದಳು, ನುಡಿಯ ಬಂದನು, ನುಡಿಯ ಬಂದಿತು-ಇತ್ಯಾದಿಗಳು ಈ ಶಬ್ದಗಳು ಬಂದ ವಾಕ್ಯಗಳು.

[7] ಮಾಡಿ, ತಿಂದು, ನೋಡಿ, ನೀಡಿ, ಉಂಡು, ಕೊಟ್ಟು ಇವೆಲ್ಲ ಭೂತನ್ಯೂನಗಳು.