‘ತದ್ಧಿತ‘ ಎಂಬ ಹೆಸರಿನ ಪ್ರತ್ಯಯವನ್ನು ಅಂತದಲ್ಲಿ ಉಳ್ಳುದೇ ತದ್ಧಿತಾಂತವೆನಿಸುವುದು.  ಈ ಕೆಳಗಿನ ವಾಕ್ಯಗಳನ್ನು ನೋಡಿರಿ.

(೧) ಮೋಸವನ್ನು ಮಾಡುವವನು ಇದ್ದಾನೆ.

(೨) ಅಲ್ಲಿ ಕನ್ನಡವನ್ನು ಬಲ್ಲವರು ಬಹಳ ಜನರಿದ್ದರು.

(೩) ಹಾವನ್ನು ಆಡಿಸುವವನು ಬಂದನು.

(೪) ಮಡಿಯನ್ನು ಮಾಡುವವನು ಇನ್ನೂ ಬಂದಿಲ್ಲ.

ಮೇಲಿನ ನಾಲ್ಕು ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಎರಡೆರಡು ನಾಮಪದಗಳನ್ನು ಸೇರಿಸಿ ಅದೇ ಅರ್ಥಬರುವಂತೆ ಒಂದು ಪದವನ್ನಾಗಿ ಸಮಾಸದ ಹಾಗೆ ಮಾಡಬಹುದು.  ಹೀಗೆ ನಾವು ಸಂಕ್ಷೇಪಗೊಳಿಸಿ ಹೇಳಿದಾಗ ಕಾಲ, ಶ್ರಮ, ಧ್ವನಿ ಮೊದಲಾದವುಗಳ ಉಳಿತಾಯವಾಗುವುದು.  ಹಾಗಾದರೆ ಆ ಪದಗಳನ್ನು ಯಾವ ಕ್ರಮದಿಂದ ಕೂಡಿಸುತ್ತೇವೆ?  ಇತ್ಯಾದಿಗಳ ಬಗೆಗೆ ಕೆಳಗೆ ನೋಡಿರಿ.

(೧) ಮೋಸವನ್ನು ಮಾಡುವವನುಎಂಬಲ್ಲಿ ಮೋಸವನ್ನು ಎಂಬ ಪದದ ಮುಂದೆ ಮಾಡುವವನು ಎಂಬರ್ಥದಲ್ಲಿ ‘ಗಾರ ಪ್ರತ್ಯಯ ಸೇರಿಸಿ ಮೋಸವನ್ನು+ಗಾರ ಮಾಡುತ್ತೇವೆ.  ಒಂದೇ ಪ್ರಕೃತಿಯ ಮೇಲೆ ಎರಡು ಪ್ರತ್ಯಯ ಸೇರುವುದಿಲ್ಲ.  ಅನ್ನು ಎಂಬ ಪ್ರತ್ಯಯ ತೆಗೆದು-ಮೋಸ+ಗಾರ=ಮೋಸಗಾರ ಹೀಗೆ ಒಂದು ಹೊಸ ರೂಪ ಸಿದ್ಧವಾಯಿತು.  ಇಲ್ಲಿ ‘ಗಾರ’ ಎಂಬುದೇ ತದ್ಧಿತಪ್ರತ್ಯಯ.

(೨) ಕನ್ನಡವನ್ನು ಬಲ್ಲವನು-ಎಂಬಲ್ಲಿ ಕನ್ನಡವನ್ನು ಎಂಬುದರ ಮೇಲೆ ಬಲ್ಲವನು ಎಂಬರ್ಥದಲ್ಲಿ ‘ಇಗ’ ಪ್ರತ್ಯಯ ಸೇರಿದಾಗ ಕನ್ನಡವನ್ನು+ಇಗ=ಕನ್ನಡ+ಇಗ=ಕನ್ನಡಿಗ ಎಂಬ ರೂಪ ಸಿದ್ಧವಾಯಿತು.  ಇಲ್ಲಿ ‘ಇಗ’ ಎಂಬುದೇ ‘ತದ್ಧಿತ ಪ್ರತ್ಯಯ’.

(೩) ಹಾವನ್ನು ಆಡಿಸುವವನು-ಎಂಬಲ್ಲಿ ಹಾವನ್ನು ಎಂಬ ಪದದ ಮೇಲೆ ‘ಆಡಿಸುವವನು’ ಎಂಬರ್ಥದಲ್ಲಿ ‘ಆಡಿಗ’ ಎಂಬ ತದ್ಧಿತ ಪ್ರತ್ಯಯ ಬಂದು ಹಾವನ್ನು+ಆಡಿಗ=ಹಾವು+ಆಡಿಗ= ಹಾವಾಡಿಗ ಎಂಬ ರೂಪ ಸಿದ್ಧವಾಯಿತು.

(೪) ಮಡಿಯನ್ನು ಮಾಡುವವನುಎಂಬಲ್ಲಿ ಮಾಡುವವನು’ ಎಂಬರ್ಥದಲ್ಲಿ ವಳ (ವಾಳ) ಎಂಬ ಪ್ರತ್ಯಯವು ಬಂದು ಮಡಿಯನ್ನು+ವಳ=ಮಡಿ+ವಳ=ಮಡಿವಳ ಎಂಬ ರೂಪವಾಯಿತು.

ಮೋಸವನ್ನು-ಮಾಡುವವನೆಂಬರ್ಥದಲ್ಲಿ-ಗಾರ.

ಕನ್ನಡವನ್ನು-ಬಲ್ಲವನು ಎಂಬರ್ಥದಲ್ಲಿ-ಇಗ.

ಹಾವನ್ನು-ಆಡಿಸುವವನು ಎಂಬರ್ಥದಲ್ಲಿ-ಆಡಿಗ.

ಮಡಿಯನ್ನು-ಮಾಡುವವನು ಎಂಬರ್ಥದಲ್ಲಿ-ವಳ.

ಹೀಗೆ ಹಲವಾರು ಅರ್ಥಗಳಲ್ಲಿ-ಗಾರ, ಇಗ, ಆಡಿಗ, ವಳ-ಎಂಬ ಪ್ರತ್ಯಯಗಳು ನಾಮಪದಗಳ ಮೇಲೆ ಬಂದು ಹೋಸ ಬಗೆಯ ಪ್ರಕೃತಿಗಳಾಗುವುವು. ಇಲ್ಲಿ ಬಂದಿರುವ ಇಂಥ ಪ್ರತ್ಯಯಗಳನ್ನು ತದ್ಧಿತ ಪ್ರತ್ಯಯಗಳೆನ್ನುವರು. ಇಂಥ ತದ್ಧಿತ ಪ್ರತ್ಯಯಗಳನ್ನು ಅಂತದಲ್ಲಿ ಉಳ್ಳ ಶಬ್ದರೂಪವೇ ತದ್ಧಿತಾಂತ’ವೆನಿಸುವುದು.  ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

 

(೯೦) ತದ್ಧಿತಾಂತನಾಮಪದಗಳ ಮೇಲೆ ಹಲವಾರು ಅರ್ಥಗಳಲ್ಲಿ ಗಾರ, ಕಾರ, ಇಗ, ಆಡಿಗ, ವಂತ, ವಳ, ಇಕ, ಆಳಿಇತ್ಯಾದಿ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತಗಳೆನಿಸುವುವು.

ಈ ತದ್ಧಿತ ಪ್ರತ್ಯಯಗಳು ಸೇರುವಾಗ ಪ್ರಾಯಶಃ ಮಧ್ಯದ ವಿಭಕ್ತಿ ಪ್ರತ್ಯಯವು ಲೋಪವಾಗುವುದು.  ಇವುಗಳಲ್ಲಿ – () ತದ್ಧಿತಾಂತ ನಾಮ () ತದ್ಧಿತಾಂತ ಭಾವನಾಮ () ತದ್ಧಿತಾಂತಾವ್ಯಯಗಳೆಂದು ಮೂರು ಬಗೆ.

() ತದ್ಧಿತಾಂತ ನಾಮಗಳು

ನಾಮಪದಗಳ ಮೇಲೆ ಗಾರ, ಕಾರ, ಇಗ, ವಂತ ಇತ್ಯಾದಿ ಪ್ರತ್ಯಯಗಳು ಬಂದು ತದ್ಧಿತಾಂತ ನಾಮಗಳಾಗುವ ಬಗೆಯನ್ನು ಗಮನಿಸಿರಿ.

ಉದಾಹರಣೆಗೆ:

ತದ್ಧಿತ ಪ್ರತ್ಯಯ ನಾಮಪದ + ಅರ್ಥ = ತದ್ಧಿತ ಪ್ರತ್ಯಯ ತದ್ಧಿತಾಂತ ನಾಮ
ಗಾರ ಮಾಲೆಯನ್ನು + ಕಟ್ಟುವವನು = ಗಾರ ಮಾಲೆಗಾರ
ಬಳೆಯನ್ನು + ಮಾರುವವನು = ಗಾರ ಬಳೆಗಾರ
ಮೋಸವನ್ನು + ಮಾಡುವವನು = ಗಾರ ಮೋಸಗಾರ
ಪಾಲನ್ನು + ಹೊಂದುವವನು = ಗಾರ ಪಾಲುಗಾರ
ಛಲವನ್ನು + ಹೊಂದಿದವನು = ಗಾರ ಛಲಗಾರ
ಕಾರ ಓಲೆಯನ್ನು + ತರುವವನು = ಕಾರ ಓಲೆಕಾರ
ಕೋಲನ್ನು + ಹಿಡಿಯುವವನು = ಕಾರ ಕೋಲುಕಾರ
ಕೈದನ್ನು + ಹಿಡಿದಿರುವವನು = ಕಾರ ಕೈದುಕಾರ
ಇಗ ಕನ್ನಡವನ್ನು + ಬಲ್ಲವನು = ಇಗ ಕನ್ನಡಿಗ
ಲೆಕ್ಕವನ್ನು + ಬಲ್ಲವನು = ಇಗ ಲೆಕ್ಕಿಗ
ಚೆನ್ನನ್ನು + ಉಳ್ಳುವ = ಇಗ ಚೆನ್ನಿಗ
ಗಂದವನ್ನು + ಮಾರುವವನು = ಇಗ ಗಂದಿಗ
ಗಾಣವನ್ನು + ಆಡಿಸುವವನು = ಇಗ ಗಾಣಿಗ
ವಂತ ಹಣವನ್ನು + ಉಳ್ಳವನು = ವಂತ ಹಣವಂತ
ಸಿರಿಯನ್ನು + ಉಳ್ಳವನು = ವಂತ ಸಿರಿವಂತ
ವಳ ಮಡಿಯನ್ನು + ಮಾಡುವವನು = ವಳ ಮಡಿವಳ
= (ವಾಳ) ಮಡಿವಾಳ
ಹಡಪವನ್ನು + ಆಚರಿಸುವವನು = ವಳ ಹಡಪವಳ
ಆಡಿಗ ಹಾವನ್ನು + ಆಡಿಸುವವನು = ಆಡಿಗ ಹಾವಾಡಿಗ
ಹೂವನ್ನು + ಕಟ್ಟುವವನು = ಆಡಿಗ ಹೂವಾಡಿಗ
ಇಕ ಕರಿಯದನ್ನು (ಬಣ್ಣವನ್ನು) + ಉಳ್ಳವನು = ಇಕ ಕರಿಕ
ಬಿಳಿಯದನ್ನು(ಬಣ್ಣವನ್ನು) + ಉಳ್ಳವನು = ಇಕ ಬಿಳಿಕ
ಆಳಿ ಮಾತನ್ನು + ಹೆಚ್ಚು ಆಡುವ ಸ್ವಭಾವವುಳ್ಳವನು = ಆಳಿ ಮಾತಾಳಿ
ಓದನ್ನು + ಹೆಚ್ಚು ಆಚರಿಸುವವನು = ಆಳಿ ಓದಾಳಿ
ಆಳಿ ಜೂದನ್ನು + ಆಡುವವನು = ಆಳಿ ಜೂದಾಳಿ
ಗುಳಿ ಲಂಚವನ್ನು + ತೆಗೆದುಕೊಳ್ಳುವವನು = ಗುಳಿ ಲಂಚಗುಳಿ
ಅನೆಯ ಹತ್ತು + ಸಂಖ್ಯೆಯನ್ನುಳ್ಳುದು = ಅನೆಯ ಹತ್ತನೆಯ
ಒಂದು + ಸಂಖ್ಯೆಯನ್ನುಳ್ಳುದು = ಅನೆಯ ಒಂದನೆಯ
ಆರ ಕುಂಬವನ್ನು + ಮಾಡುವವನು = ಆರ ಕುಂಬಾರ
[1]
ಕಮ್ಮವನ್ನು + ಆಚರಿಸುವವನು = ಆರ ಕಮ್ಮಾರ[1]

ಇದರ ಹಾಗೆಯೆ ಉಳಿದ ಕಡೆಗೆ ಬೇರೆ ಬೇರೆ ಪ್ರತ್ಯಯಗಳು ಬಂದು ತದ್ಧಿತಾಂತಗಳಾಗುತ್ತ ವೆಂದು ತಿಳಿಯಬೇಕು.

 

ಸ್ತ್ರೀಲಿಂಗದಲ್ಲಿ ಬರುವ ತದ್ಧಿತ ಪ್ರತ್ಯಯಗಳು

(೯೧) ಸ್ತ್ರೀಲಿಂಗದಲ್ಲಿ ಇತಿ, ಇತ್ತಿ, ಗಿತ್ತಿ, ತಿ, , ಇತ್ಯಾದಿ ತದ್ಧಿತ ಪ್ರತ್ಯಯಗಳು ಬಂದು ಸ್ತ್ರೀಲಿಂಗದ ತದ್ಧಿತಾಂತಗಳು ಸಿದ್ಧಿಸುವುವು.

ಉದಾಹರಣೆಗೆ:

ಇತಿ – ಬೀಗಿತಿ, ಬ್ರಾಹ್ಮಣಿತಿ

ಇತ್ತಿ – ಒಕ್ಕಲಗಿತ್ತಿ, ಹೂವಾಡಗಿತ್ತಿ

ಗಿತ್ತಿ – ನಾಯಿಂದಗಿತ್ತಿ, ಅಗಸಗಿತ್ತಿ

ತಿ – ಗೊಲ್ಲತಿ, ವಡ್ಡತಿ, ಮಾಲೆಗಾರ‍್ತಿ

– ಅರಸಿ, ಅಣುಗಿ

– ಕಳ್ಳೆ, ಜಾಣೆ, ಗುಣವಂತೆ,  ಇತ್ಯಾದಿ-

 

() ತದ್ಧಿತಾಂತ ಭಾವನಾಮಗಳು

(ಅ) ಬಡತನ ಸಿರಿತನಗಳು ಸ್ಥಿರವಲ್ಲ.

(ಆ) ಊರ ಗೌಡಿಕೆ ರಾಮಣ್ಣನದು.

(ಇ) ನಮಗೆ ಅದೊಂದು ಹಿರಿಮೆ.

ಈ ಮೇಲಿನ ಮೂರು ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಬಡತನ, ಸಿರಿತನ, ಗೌಡಿಕೆ, ಹಿರಿಮೆ-ಈ ಶಬ್ದಗಳನ್ನು ಯೋಚಿಸಿ ನೋಡಿದರೆ-ಬಡವನ ಭಾವವೇಬಡತನ; ಸಿರಿವಂತನ ಭಾವವೇಸಿರಿತನ; ಗೌಡನ ಭಾವವೇಗೌಡಿಕೆ; ಹಿರಿಯದರ ಭಾವವೇ-‘ಹಿರಿತನ’ ಎಂದು ಅರ್ಥವಾಗುವುದು.  ಇಲ್ಲಿ ಬಂದಿರುವ ತನ, ಇಕೆ, ಮೆ-ಪ್ರತ್ಯಯಗಳು ಭಾವಾರ್ಥದಲ್ಲಿ ಬಡವನ, ಸಿರಿವಂತನ, ಗೌಡನ, ಹಿರಿಯದರ – ಇತ್ಯಾದಿ ನಾಮಪದಗಳ ಮೇಲೆ ಬಂದಿವೆ ಎಂಬುದನ್ನು ಕೆಳಗೆ ಗಮನಿಸಿರಿ.

ಬಡವ-ಬಡತನ (ಬಡವನ ಭಾವ-ತನ)

ಸಿರಿ  – ಸಿರಿತನ (ಸಿರಿ ಉಳ್ಳವನ ಭಾವ-ತನ)

ಗೌಡ-ಗೌಡಿಕೆ (ಗೌಡನ ಭಾವ-ಇಕೆ)

ಹಿರಿದು-ಹಿರಿಮೆ (ಹಿರಿದರ ಭಾವ-ಮೆ)

ಸಾಮಾನ್ಯವಾಗಿ ಈ ಪ್ರತ್ಯಯಗಳೆಲ್ಲ ಷಷ್ಠೀವಿಭಕ್ತ್ಯಂತಗಳಾದ ನಾಮಪದಗಳ ಮೇಲೆ ಬಂದಿವೆ. ಆದುದರಿಂದ ಈ ಬಗೆಗೆ ಸೂತ್ರವನ್ನು ಹೀಗೆ ಹೇಳಬಹುದು.

 

(೯೨) ತದ್ಧಿತಾಂತಭಾವನಾಮಗಳುಸಾಮಾನ್ಯವಾಗಿ ಷಷ್ಠೀವಿಭಕ್ತ್ಯಾಂತಗಳಾದ ನಾಮಪದಗಳ ಮುಂದೆ ಭಾವಾರ್ಥದಲ್ಲಿ ತನ, ಇಕೆ, ಪು, ಮೆಇತ್ಯಾದಿ ತದ್ಧಿತಪ್ರತ್ಯಯಗಳು ಸೇರಿ ತದ್ಧಿತಾಂತಭಾವನಾಮಗಳೆನಿಸುವುವು.

ಉದಾಹರಣೆಗೆ:

ಪ್ರತ್ಯಯ ನಾಮಪದ ಭಾವಾರ್ಥದಲ್ಲಿ ಪ್ರತ್ಯಯ ತದ್ಧಿತಾಂತ ಭಾವನಾಮ
ತನ ದೊಡ್ಡವನ (ಭಾವ) ತನ ದೊಡ್ಡತನ
ಜಾಣನ (ಭಾವ) ತನ ಜಾಣತನ; ಇದರಂತೆ ದಡ್ಡತನ, ಚಿಕ್ಕತನ, ಸಣ್ಣತನ, ಹುಡುಗತನ, ಕಿರಿತನ, ಕಳ್ಳತನ, ಕೆಟ್ಟತನ, ಸೋಮಾರಿತನ,  -ಇತ್ಯಾದಿ
ಇಕೆ ಬ್ರಾಹ್ಮಣನ (ಭಾವ) ಇಕೆ ಬ್ರಾಹ್ಮಣಿಕೆ
ಚಲುವಿನ (ಭಾವ) ಇಕೆ ಚಲುವಿಕೆ; ಇದರಂತೆ  ಗೌಡಿಕೆ, ಉನ್ನತಿಕೆ, ತಳವಾರಿಕೆ, -ಇತ್ಯಾದಿ
ಕಿವುಡನ (ಭಾವ) ಕಿವುಡು
ಕುಳ್ಳನ (ಭಾವ) ಕುಳ್ಳು; ಇದರಂತೆ ಕುರುಡು, ಕುಂಟು, ಮೂಕು, ತೊದಲು, -ಇತ್ಯಾದಿ.
ಪು ಬಿಳಿದರ (ಭಾವ) ಪು ಬಿಳುಪು[2]
ಕರಿದರ (ಭಾವ) ಪು ಕಪ್ಪು[2]
ಇನಿದರ (ಭಾವ) ಪು ಇಂಪು
ತಣ್ಣನೆಯದರ (ಭಾವ) ಪು ತಂಪು[2]
ನುಣ್ಣನೆಯದರ (ಭಾವ) ಪು ನುಣುಪು[2]
ಮೆ ಜಾಣನ (ಭಾವ) ಮೆ ಜಾಣ್ಮೆ
ಜಾಣೆಯ (ಭಾವ) ಮೆ ಜಾಣ್ಮೆ
ಕೂರಿತ್ತರ (ಭಾವ) ಮೆ ಕೂರ‍್ಮೆ
ಪಿರಿದರ (ಭಾವ) ಮೆ ಪೆರ‍್ಮೆ
ಹಿರಿದರ (ಭಾವ) ಮೆ ಹಿರಿಮೆ

 

() ತದ್ಧಿತಾಂತಾವ್ಯಯಗಳು

(ಅ) ಅವನು ರಾಮನಂತೆ ಕಾಣುವನು

(ಆ) ಊರವರೆಗೆ ನಡೆದನು

(ಇ) ಮನೆಯತನಕ ಕಳಿಸು

(ಉ) ಅವನಿಗೋಸುಗ ಬಂದೆನು

(ಊ) ಅವನಿಗಿಂತ ಚಿಕ್ಕವನು

ಮೇಲಿನ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ರಾಮನಂತೆ, ಊರವರೆಗೆ, ಮನೆಯತನಕ, ಅವನಿಗೋಸುಗ, ಅವನಿಗಿಂತ – ಇತ್ಯಾದಿ ಪದಗಳನ್ನು ಬಿಡಿಸಿದರೆ ರಾಮನ+ಅಂತೆ, ಊರ+ವರಗೆ, ಮನೆಯ+ತನಕ, ಅವನಿಗೆ+ಓಸುಗ, ಅವನಿಗೆ+ಇಂತಹೀಗಾಗುವುವು.  ಇಲ್ಲಿ ಬಂದಿರುವ ಅಂತೆ, ವರೆಗೆ, ತನಕ, ಓಸುಗ, ಇಂತ – ಇತ್ಯಾದಿ ಪ್ರತ್ಯಯಗಳು ನಾಮ ಪದಗಳ ಮುಂದೆ ಸೇರುವುವು.  ಆಗ ನಾಮಪದಗಳಲ್ಲಿರುವ , , , ಗೆ, ಗೆ – ಈ ನಾಮವಿಭಕ್ತಿಪ್ರತ್ಯಯಗಳು ಲೋಪವಾಗುವುದಿಲ್ಲ.  ಇಂಥ ಪದಗಳನ್ನು ತದ್ಧಿತಾಂತಾವ್ಯಯಗಳೆಂದು ಕರೆಯುವುದು ವಾಡಿಕೆ.

 

(೯೩) ನಾಮಪದಗಳ ಮುಂದೆ ಅಂತೆ, ವೊಲ್, ವೊಲು, ವೋಲ್, ವೋಲು, ತನಕ, ವರೆಗೆ, ಮಟ್ಟಿಗೆ, ಓಸ್ಕರ, ಇಂತ, ಆಗಿ, ಓಸುಗಇತ್ಯಾದಿ ಪ್ರತ್ಯಯಗಳು ಸೇರಿ ತದ್ಧಿತಾಂತಾವ್ಯಯಗಳೆನಿಸುವುವು.

ಈ ಪ್ರತ್ಯಯಗಳು ಬಂದಾಗ ನಾಮಪದದಲ್ಲಿರುವ ವಿಭಕ್ತಿಪ್ರತ್ಯಯವು ಲೋಪವಾಗುವುದಿಲ್ಲ.

ಉದಾಹರಣೆಗೆ:

ಅಂತೆ ರಾಮನಂತೆ, ಚಂದ್ರನಂತೆ, ಭೀಮನಂತೆ, ಅವನಂತೆ
ವೊಲ್ ರಾಮನವೊಲ್, ಚಂದ್ರನವೊಲ್, ಭೀಮನವೊಲ್, ಅವನವೊಲ್
ವೊಲು ರಾಮನವೊಲು, ಚಂದ್ರನವೊಲು, ಭೀಮನವೊಲು, ನಿನ್ನವೊಲು
ವೋಲು ಮನೆಯವೋಲು, ಅವನವೋಲು, ಚಂದ್ರನವೋಲು
ವೋಲ್ ಮನೆಯವೋಲ್, ಅವನವೋಲ್, ಚಂದ್ರನವೋಲ್
ತನಕ ಮನೆಯತನಕ, ಊರತನಕ, ಅಲ್ಲಿಯತನಕ
ವರೆಗೆ ಊರವರೆಗೆ, ಚಂದ್ರನವರೆಗೆ
ಮಟ್ಟಿಗೆ ಅವನಮಟ್ಟಿಗೆ, ನನ್ನಮಟ್ಟಿಗೆ, ನಿನ್ನಮಟ್ಟಿಗೆ
ಓಸ್ಕರ ಅವನಿಗೋಸ್ಕರ, ರಾಮನಿಗೋಸ್ಕರ
ಸಲುವಾಗಿ ನನ್ನ ಸಲುವಾಗಿ, ನಿನ್ನ ಸಲುವಾಗಿ
ಇಂತ ಅವನಿಗಿಂತ, ಇವನಿಗಿಂತ
ಆಗಿ ಅವನಿಗಾಗಿ, ನನಗಾಗಿ, ನಿನಗಾಗಿ
ಓಸುಗ ರಾಮನಿಗೋಸುಗ, ಕಳ್ಳನಿಗೋಸುಗ

[1] ಕುಂಭಕಾರ, ಕರ್ಮಕಾರ-ಎಂಬ ಸಂಸ್ಕೃತ ಪದಗಳು ತದ್ಭವವಾಗಿ, ಕುಂಬಾರ, ಕಮ್ಮಾರ ಪದಗಳು ಸಿದ್ಧಿಸಿದೆ ಎಂಬುದು ಕೆಲವರ ಮತ.  ಆದರೆ ಹಳಗನ್ನಡದಲ್ಲಿ ಆರ ಪ್ರತ್ಯಯ ಬಂದು ಕುಂಬರ, ಕಮ್ಮರ ಎಂದಾದ ಈ ಶಬ್ದಗಳು ಹೊಸಗನ್ನಡದಲ್ಲಿ ಕುಂಬಾರ, ಕಮ್ಮಾರ-ಎಂದು ಆದುವೆಂದು ತಿಳಿಯುವುದು ಯುಕ್ತ.

[2] ಹಳಗನ್ನಡದಲ್ಲಿ ಇವುಗಳ ರೂಪಗಳು ಬೆಳ್ಪು, ಕರ್ಪು, ತುಣ್ಪು, ನುಣ್ಪು-ಇತ್ಯಾದಿಯಾಗಿ ಆಗುವುವು.