ಕೀಟ ಮತ್ತು ರೋಗಗಳಿಂದ ಸಸ್ಯಗಳ ರಕ್ಷಣೆ ಬಹು ಮುಖ್ಯ. ಯಾವುದೇ ಬೆಳೆ ಎಷ್ಟೇ ಸಮೃದ್ಧಿಯಾಗಿ ಬೆಳೆದಿದ್ದರೂ ಅಲ್ಪ ಸಮಯದಲ್ಲಿಯೇ ಕೀಟ ಅಥವಾ ರೋಗಕ್ಕೆ ತುತ್ತಾದರೆ ನಷ್ಟ ಖಂಡಿತ. ಕೀಟ ಮತ್ತು ರೋಗಗಳ ಹಾವಳಿ ಸಸ್ಯಗಳಿಗೆ ತಪ್ಪಿದ್ದಲ್ಲ. ಆದರೆ ಕೆಲವು ಕ್ರಮಗಳನ್ನು ಸಕಾಲದಲ್ಲನುಸರಿಸುವುದರಿಂದ ಆಗಬಹುದಾದ ನಷ್ಟವನ್ನು ತಪ್ಪಿಸಬಹುದು ಅಥವಾ ಕಡಿಮೆ ಮಾಡಬಹುದು.

ಸಸ್ಯ ಸಂರಕ್ಷಣೆ ಎಂದರೆ ಬೆಳೆಗಳನ್ನು ಕಾಡುವ ನೈಸರ್ಗಿಕ ವೈರಿಗಳಿಂದ ರಕ್ಷಿಸುವುದು. ಅಂದರೆ ಬೆಳೆಯುವ ಹಂತದಲ್ಲಿ ಅವುಗಳನ್ನು ರಕ್ಷಿಸುವುದು ಸಸ್ಯ ಸಂರಕ್ಷಣೆಯ ನಿಯಮ. ಹಾಗಾದರೆ ಬೆಳೆಗಳ ನೈಸರ್ಗಿಕ ವೈರಿಗಳಾವುವೆಂದರೆ ಕೀಟಗಳು, ಅಣು ಜೀವಿಗಳು, ನಂಜು, ದುಂಡುಜಂತುಗಳು ಇತ್ಯಾದಿ. ಇವು ನಾನಾ ರೀತಿಯಲ್ಲಿ ಸಸ್ಯ ಬೆಳವಣಿಗೆಗೆ ತೊಂದರೆಯನ್ನುಂಟು ಮಾಡುತ್ತವೆ. ಸರಿಯಾದ ಕ್ರಮ ತೆಗೆದುಕೊಳ್ಳದೆ ಹೋದರೆ ಬೆಳವಣಿಗೆ ಕುಂಠಿತಗೊಂಡ ಬೆಳೆ ನಾಶವಾಗುವ ಹಂತವನ್ನೂ ತಲುಪಬಹುದು. ಇವೆಲ್ಲವುಗಳ ನಿಯಂತ್ರಣವೇ ಸಸ್ಯ ಸಂರಕ್ಷಣೆ.

ಸಸ್ಯ ಸಂರಕ್ಷಣಾ ವಿಧಾನಗಳು

ಎಲ್ಲ ರೀತಿಯಿಂದಲೂ ಸಸ್ಯಗಳನ್ನು ರಕ್ಷಿಸುವುದಕ್ಕೆ ಸಸ್ಯ ಸಂರಕ್ಷಣೆಯಲ್ಲಿ ನಾಲ್ಕು ಪ್ರಮುಖ ವಿಧಾನಗಳನ್ನು ಅನುಸರಿಸಲಾಗುವುದು. ಅವುಗಳೆಂದರೆ:

. ಹೊರತ ಪಡಿಸುವುದು: ಬೆಳೆ ಬೆಳೆಯುವ ಪ್ರದೇಶದಲ್ಲಿ ರೋಗವನ್ನುಂಟು ಮಾಡುವ ರೋಗಾಣುಗಳು ಪ್ರವೇಶಿಸದಂತೆ ನೋಡಿಕೊಳ್ಳುವುದು. ರೋಗ ಪೀಡಿತ ಪ್ರದೇಶದಿಂದ ಬೀಜ ಮತ್ತು ಮಣ್ಣುಗಳನ್ನು ತೆಗೆದುಕೊಂಡು ಬಂದು ಉಪಯೋಗಿಸುವುದನ್ನು ಕೈಬಿಟ್ಟರೆ ಬೀಜ ಮತ್ತು ಮಣ್ಣುಗಳ ಮುಖಾಂತರ ಬರುವ ರೋಗಾಣುಗಳನ್ನು ತಡೆಯಬಹುದಾಗಿದೆ. ಇದನ್ನು ಕಾನೂನು ಮೂಲಕ ಸಾಧಿಸಲು ಸಾಧ್ಯ. ಆದರೆ ಇಲ್ಲಿ ಗಾಳಿ ಮೂಲಕ ಹರಡುವ ರೋಗಗಳನ್ನು ತಡೆಯುವುದು ಅಸಾಧ್ಯ.

. ನಿರ್ಮೂಲನೆ: ಇಲ್ಲಿ ರೋಗ ಪೀಡಿತ ಸಸ್ಯ ಅಥವಾ ಸಸ್ಯ ಭಾಗವನ್ನು ಕ್ಷೇತ್ರದಿಂದ ಹೊರತೆಗೆದು ಅದನ್ನು ನಾಶಪಡಿಸುವುದು ಎಂದು ಅರ್ಥ.

. ಸಂರಕ್ಷಣೆ: ಮೇಲಿನ ಎರಡೂ ಪದ್ಧತಿಗಳು ಉಪಯೋಗವಾಗದೇ ಇದ್ದಾಗ ರಾಸಾಯನಿಕಗಳನ್ನು ಉಪಯೋಗಿಸಬೇಕಾಗುವುದು. ಇದು ಸಿಂಪರಣೆ, ಧೂಳೀಕರಣ ಅಥವಾ ಬೇರೆ ವಿಧಾನವಾಗಿರಬಹುದು. ಒಟ್ಟಿನಲ್ಲಿ ಸಸ್ಯಗಳಿಗೆ ರಾಸಾಯನಿಕಗಳನ್ನು ಬಳಸಿ ರೋಗದಿಂದ ಕಾಪಾಡುವುದು ಇರ ಮುಖ್ಯ ಉದ್ದೇಶ.

. ಸೋಂಕು ರಕ್ಷಣೆ: ಇದು ಸಸ್ಯಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ತುಂಬುವ ಕ್ರಮ. ಇದು ಸಂಕರಣ ಕ್ರಿಯೆ ಕಾರ್ಯದಿಂದ ಅಥವಾ ನಿರೋಧಕ ಸಸಿಗಳನ್ನು ಬಳಸುವುದರಿಂದ ಸಾಧ್ಯ.

ಈ ನಾಲ್ಕೂ ಪದ್ಧತಿಗಳನ್ನು ಸಸ್ಯ ಬೆಳೆ ಪ್ರದೇಶ ಅಥವಾ ಸಸ್ಯದ ಸ್ಥಿತಿಗಳಿಗನುಗುಣವಾಗಿ ಅನುಸರಿಸಬೇಕಾಗುವುದು.

ಸಸ್ಯ ಸಂರಕ್ಷಣಾ ಉಪಕರಣಗಳು

ಸಸ್ಯ ಸಂರಕ್ಷಣಾ ಉಪಕರಣಗಳಲ್ಲಿ ಇಂದು ಸಾಕಷ್ಟು ಪ್ರಗತಿಯಾಗಿ, ವಿವಿಧ ಬಗೆಯ ಉಪಕರಣಗಳು ಆಕರ್ಷಕ ಹಾಗೂ ಅನುಕೂಲಕರ ಆಕಾರಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಸರಕಾರವೂ ಫಲಾನುಭವಿಗಳನ್ನು ಆಯ್ಕೆ ಮಾಡಿ, ರಿಯಾಯಿತಿ ದರದಲ್ಲಿ ಈ ಉಪಕರಣಗಳನ್ನು ಒದಗಿಸುತ್ತಿದೆ. ಮಾನವ ಶಕ್ತಿ ಬಳಸಿ, ಯಂತ್ರಗಳನ್ನು ಉಪಯೋಗಿಸುವುದು ಜೊತೆಗೆ ಬ್ಯಾಟರಿ ಶೆಲ್ಗಳನ್ನಳವಡಿಸಿ ಈ ಉಪಕರಣಗಳನ್ನು ನಡೆಸಬಹುದಾಗಿದೆ. ಇವುಗಳಲ್ಲಿ ಕೈತೋಟದ ದೃಷ್ಟಿಯಿಂದ ಹೆಚ್ಚಾಗಿ ಬಳಸಲ್ಪಡುವ ಮತ್ತು ತೋಟಗಳಲ್ಲಿ ಉಪಯೋಗಿಸುವ ಕೆಲವು ಉಪಕರಣಗಳನ್ನು ಕುರಿತು ತಿಳಿಯೋಣ.

. ನ್ಯಾಪ್ ಸ್ಯಾಕ್ ಸಿಂಪರಣಾ ಯಂತ್ರ: ಸಸಿಗಳು ಒತ್ತೊತ್ತಾಗಿರುವಲ್ಲಿ ಹಾಗೂ ಸಾಮಾನ್ಯವಾಗಿ ತರಕಾರಿ ಮತ್ತು ಇತರ ಬೆಳೆಗಳಿಗೆ ಸಿಂಪಡಿಸಲು ಉಪಯೋಗಿಸುವರು. ಈ ಕಾರ್ಯವನ್ನು ಒಬ್ಬರೇ ನಿರ್ವಹಿಸಬಹುದು.

. ಗಟಾರ್‌‌ಸಿಂಪರಣಾ ಯಂತ್ರ: ಇದರಲ್ಲಿ ಹೆಚ್ಚುವರಿಯಾಗಿ ಒತ್ತಡ ನಿರ್ಮಾಣ ಮಾಡಲು ಸಾಧ್ಯ. ಹೀಗಾಗಿ ಇದನ್ನು ಕಾಫಿ ಪ್ಲಾಂಟೇಶನ್‌ಗಳು, ತೋಟಗಳು ಇತ್ಯಾದಿ ಬೆಳೆಗಳಿಗೆ ಸಿಂಪಡಿಸಲು ಉಪಯೋಗಿಸುತ್ತಾರೆ.

. ಕೈಯಿಂದ ಒತ್ತುವ ಸಿಂಪರಣಾ ಯಂತ್ರ: ಕೈತೋಟಗಳಲ್ಲಿ, ಸಂಗ್ರಹಣಾ ಕೊಠಡಿಗಳಲ್ಲಿ ಹಾಗೂ ಮನೆಗಳಲ್ಲಿ ಇದನ್ನು ಉಪಯೋಗಿಸುವರು.

. ಸಣ್ಣ ಸಿಂಪರಣಾ ಯಂತ್ರ: ಇದನ್ನು ಮನೆ ಮತ್ತು ಹೂವಿನ ತೋಟಗಳಲ್ಲಿ ಸಿಂಪಡಿಸಲು ಹೆಚ್ಚು ಉಪಯೋಗಿಸುವರು.

. ಕಾಲಿನಿಂದ ಒತ್ತುವ ಸಿಂಪರಣಾ ಯಂತ್ರ: ತೋಟಗಳಲ್ಲಿ ಹಾಗೂ ಎತ್ತರವಾಗಿ ಬೆಳೆದಿರುವ ಮರಗಳಿಗೆ ಸಿಂಪರಣೆ ಮಾಡಲು ಉಪಯೋಗಿಸುತ್ತಾರೆ.

. ಧೂಳೀಕರಣ ಯಂತ್ರ: ಧೂಳೀಕರಣಕ್ಕಾಗಿ ಇದನ್ನು ಉಪಯೋಗಿಸುವರು. ಪುಡಿ ರೂಪದಲ್ಲಿರುವ ರಾಸಾಯನಿಕವನ್ನು ಬೆಳೆಯ ಮೇಲೆ ಸಮನಾಗಿ ಬೀಳುವಂತೆ ಮಾಡಲು ಇದು ಅನುಕೂಲವಾಗಿದೆ.

ಮುಖ್ಯವಾದ ಕೀಟರೋಗಗಳ ನಿಯಂತ್ರಣ

ಕೈತೋಟದ ಬೆಳೆಗಳಿಗೆ ಬೀಳುವ ಇನ್ನೂ ಕೆಲವು ಪ್ರಮುಖ ಕೀಟ-ರೋಗಗಳು ಮತ್ತು ಅವುಗಳ ಪರಿಹಾರ ಕುರಿತು ತಿಳಿದುಕೊಳ್ಳುವುದು ಅವಶ್ಯಕ. ಸಾಮಾನ್ಯವಾಗಿ ಕೈತೋಟದಲ್ಲಿ ಬಾಧೆಯನ್ನುಂಟು ಮಾಡುವ ಕೀಟಗಳೆಂದರೆ ಗೆದ್ದಲು, ಇರುವೆ, ಎಲೆ ತಿನ್ನುವಹುಳು ಮತ್ತು ಶಲ್ಕ ಕೀಟ.

. ಗೆದ್ದಲು: ಗೆದ್ದಲು ಹುಳುಗಳು ಸಸಿಗಳ ಬೇರುಗಳನ್ನು ತಿನ್ನುವುದರಿಂದ ಸಸಿಗಳು ಕ್ಷೀಣಿಸಿ ಕ್ರಮೇಣ ಒಣಗಿ ಹೋಗುತ್ತವೆ. ಗೆದ್ದಲು ಹುಳುಗಳು ಹುತ್ತುಗಳನ್ನು ರಚಿಸುತ್ತವೆ. ಮೊದಲು ಈ ಹುತ್ತಗಳನ್ನು ಹುಡುಕುವ ಕಾರ್ಯ ಕೈಗೊಂಡು ನಂತರ ಅದರಲ್ಲಿಯ ’ರಾಣಿ’ ಹುಳುವನ್ನು ನಾಶಪಡಿಸಬೇಕು.

ಮುಂದೆ ಹುತ್ತ ಬೆಳೆಯದಂತೆ ವಿಷಪೂರಿತ ರಾಸಾಯನಿಕಗಳನ್ನು ಹಾಕಬೇಕು. ಇದಕ್ಕೆ ಅಲ್ಯೂಮಿನಿಯಂ ಫಾಸ್ಫೈಡ್ ಮಾತ್ರೆಗಳನ್ನು ಉಪಯೋಗಿಸಬಹುದು. ಒಂದು ಮೀಟರ್‌‌ಸುತ್ತಳತೆಯ ಹುತ್ತಕ್ಕೆ ಎರಡು ಮಾತ್ರೆ ಅಲ್ಯೂಮಿನಿಯಂ ಫಾಸ್ಫೈಡ್‌ಗಳನ್ನು ಹಾಕಿ ಅದರಲ್ಲಿ ಗಾಳಿ ಪ್ರವೇಶಿಸದಂತೆ ಎಲ್ಲ ರಂಧ್ರಗಳನ್ನು ಹಸಿ ಮಣ್ಣಿನಿಂದ ಮುಚ್ಚಿದರೆ ಗೆದ್ದಲು ಹುಳುಗಳು ನಾಶವಾಗುತ್ತವೆ.

. ಇರುವೆ: ಇರುವೆಗಳು ಬೇರುಗಳನ್ನು ಕಡಿದು ನಾಶ ಮಾಡುತ್ತವೆ. ಇರುವೆ ಗೂಡುಗಳನ್ನು ಪತ್ತೆ ಮಾಡಿ ನಂತರ ಗೂಡಿಗೆ ಹೆಪ್ಟಾಕ್ಲೋರ್‌‌ಪುಡಿ ಉದಿರಿಸಿದರೆ ಇರುವೆಗಳು ನಾಶವಾಗುತ್ತವೆ.

. ಎಲೆ ತಿನ್ನುವ ಹುಳು: ಹಲವಾರು ಬಗೆಯ ಹುಳುಗಳು ಹಣ್ಣು-ತರಕಾರಿ ಬೆಳೆಗಳ ಎಲೆಗಳನ್ನು ತಿನ್ನುತ್ತವೆ. ಇದರಿಂದ ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುವುದು. ಹತೋಟಿಗಾಗಿ ೨ ಮಿ.ಲೀ. ಕ್ವಿನಾಲ್‌ಫಾಸ್ ಅಥವಾ ಮಾನೋಕ್ರೋಟೋಫಾಸ್ ಕೀಟನಾಶಕಗಳನ್ನು ಪ್ರತಿ ಲೀಟರ್‌‌ನೀರಿನಲ್ಲಿ ಮಿಶ್ರ ಮಾಡಿ ಸಿಂಪಡಿಸಬೇಕು.

. ಶಲ್ಕ ಕೀಟ: ಈ ಕೀಟಗಳು ಕಾಂಡದಿಂದ ರಸ ಹೀರುವುದರಿಂದ ಕೊಂಬೆಗಳು ಕ್ಷೀಣಿಸಿ ಒಣಗಲು ಪ್ರಾರಂಭಿಸುತ್ತವೆ. ೨ ಮಿ.ಲೀ. ಮೀಥೈಲ್ ಪ್ಯಾರಾಥಿಯಾನ್ ಕೀಟನಾಶಕವನ್ನು ಪ್ರತಿ ಲೀಟರ್‌‌ನೀರಿನಲ್ಲಿ ಮಿಶ್ರ ಮಾಡಿ ಸಿಂಪಡಿಸಿ ಹತೋಟಿ ಮಾಡಬಹುದು.

ಕೈತೋಟದಲ್ಲಿ ಹಣ್ಣು, ತರಕಾರಿ, ಹೂವಿನ ಬೆಳೆ, ಹೀಗೆ ಬಗೆಬಗೆಯ ಗಿಡ ಮತ್ತು ಬಳ್ಳಿಗಳನ್ನು ಬೆಳೆಯುತ್ತೇವೆ. ಒಂದೊಂದು ಬೆಳೆಗೆ ಪ್ರಮುಖವಾಗಿ ಒಂದೊಂದು ರೀತಿಯ ಕೀಟ ಅಥವಾ ರೋಗದ ಬಾಧೆ ಕಂಡುಬರುವುದು.

ಬೋರ್ಡೋ ದ್ರಾವಣ ತಯಾರಿಕೆ ಮತ್ತು ಬಳಕೆ

ಕೈತೋಟ ಎಬ್ಬಿಸುವವರು ಶಿಲೀಂಧ್ರ ನಾಶಕವೊಂದನ್ನು ಮನೆಯಲ್ಲಿ ತಾವೇ ತಯಾರಿಸಿಕೊಳ್ಳಬಹುದು. ಅದೇ, ’ಬೋರ್ಡೊ ಮಿಶ್ರಣ’. ಶಿಲೀಂಧ್ರಗಳಿಂದ ಬರುವ ಹಲವಾರು ರೋಗಗಳನ್ನು ಇದು ನಿವಾರಿಸುತ್ತದೆ. ಕಡಿಮೆ ಬೆಲೆಗೆ ಪೇಟೆಯಲ್ಲಿ ಸುಲಭವಾಗಿ ದೊರೆಯುವ ಸುಣ್ಣ ಮತ್ತು ಮೈಲುತ್ತುತಗಳಿಂದ ಬೋರ್ಡೊ ಮಿಶ್ರಣ ತಯಾರಿಸಬಹುದು.

ಬೋರ್ಡೋ ದ್ರಾವಣ ತಯಾರಿಸುವ ವಿಧಾನ: ಬೋರ್ಡೊ ದ್ರಾವಣವನ್ನು ಶೇ. ೧.೦, ೦.೫, ೦.೨೫ ಹೀಗೆ ಅವಶ್ಯಕತೆಗಳನುಸಾರವಾಗಿ ಉಪಯೋಗಿಸುತ್ತಾರೆ. ಆದರೆ ಸಾಮಾನ್ಯವಾಗಿ ಶೇ. ೧.೦ರ ಬೋರ್ಡೊ ದ್ರಾವಣವನ್ನೇ ಹೆಚ್ಚಾಗಿ ಉಪಯೋಗಿಸುವರು. ಶೇ. ೧.೦ಬೋರ್ಡೊ ದ್ರಾವಣ ತಯಾರಿಸುವ ವಿಧಾನ ಹೀಗಿದೆ.

ಒಂದು ಕಿ.ಗ್ರಾಂ ಸುಣ್ಣ ಮತ್ತು ಒಂದು ಕಿ.ಗ್ರಾಂ ಮೈಲುತುತ್ತವನ್ನು ಪ್ರತ್ಯೇಕವಾಗಿ ೫೦ ಲೀ. ನೀರಿನಲ್ಲಿ ಕರಗಿಸಿ ದ್ರಾವಣ ತಯಾರಿಸಿ, ನಂತರ ಇವೆರಡೂ ದ್ರಾವಣಗಳನ್ನು ಮೂರನೆ ಪಾತ್ರೆಗೆ ಒಂದೇ ಸಮನೆ ನಿಧಾನವಾಗಿ ಸುರಿಯಬೇಕು. ಇವೆರಡೂ ದ್ರಾವಣಗಳು ಸರಿಯಾಗಿ ಮೀಶ್ರವಾಗುವಂತೆ ಉದ್ದವಾದ ಕೋಲಿನಿಂದ ಕದಡಿದರೆ ೧೦೦ ಲೀ. ಮಿಶ್ರಣ ಸಿದ್ಧವಾಗುವುದು. ಇದೇ ಶೇ. ೧.೦ ಬೋರ್ಡೊ ಮಿಶ್ರಣ.

ಸುಣ್ಣ, ಮೈಲುತುತ್ತ ಹಾಗೂ ನೀರಿನ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡುತ್ತಾ ಶೇ. ೦.೫, ಶೇ. ೦.೨೫ರ ಮಿಶ್ರಣ ತಯಾರಿಸಬಹುದು.

ಮಿಶ್ರಣ ತಯಾರಿಸುವಾಗ ಅನುಸರಿಸಬೇಕಾದ ನಿಯಮಗಳು

೧. ಮಿಶ್ರಣ ತಯಾರಿಕೆಯಲ್ಲಿ ಮಣ್ಣಿನ, ಪ್ಲಾಸ್ಟಿಕ್, ಸಿಮೆಂಟ್ ಅಥವಾ ತಾಮ್ರದ ಪಾತ್ರೆಗಳನ್ನು ಮಾತ್ರವೇ ಉಪಯೋಗಿಸಬೇಕು.

೨. ನಮಗೆ ಬೇಕಾಗುವಷ್ಟು ಮಿಶ್ರಣವನ್ನು ಮಾತ್ರ ತಯಾರಿಸಿಕೊಳ್ಳಬೇಕು. ಹೆಚ್ಚು ಕಾಲ ಸಂಗ್ರಹಿಸಿಟ್ಟರೆ ಅದರ ಶಿಲೀಂಧ್ರನಾಶಕ ಗುಣಮಟ್ಟ ಕುಸಿಯುತ್ತದೆ ಅಥವಾ ಇಲ್ಲವಾಗುತ್ತದೆ.

೩. ಹೊಳಪುಳ್ಳ ಚಾಕುವನ್ನು ಮಿಶ್ರಣದಲ್ಲಿ ಅದ್ದಿ ತೆಗೆಯುವುದರ ಮೂಲಕ ಅಧಿಕ ತಾಮ್ರದ ಅಂಶವಿರುವುದನ್ನು ತಿಳಿದುಕೊಳ್ಳಬಹುದು. ಒಂದು ವೇಳೆ ತಾಮ್ರದ ಅಂಶ ಅಧಿಕವಿದ್ದಲ್ಲಿ ಚಾಕುವಿನ ಮೇಲೆ ಕೆಂಪು ಮಿಶ್ರಿತ ಕಂದು ಬಣ್ಣದ ಗುರುತುಗಳು ಕಂಡುಬರುತ್ತವೆ. ಆಗ ಸುಣ್ಣದ ನೀರನ್ನು ಸೇರಿಸುತ್ತಾ ಹೋಗಬೇಕು.

೪. ಮಿಶ್ರಣ ತಯಾರಿಕೆಗೆ ತಾಜಾ ಸುಣ್ಣವನ್ನೇ ಬಳಸಿ. ಚಿಪ್ಪು ಸುಣ್ಣ ತುಂಬಾ ಸೂಕ್ತ.

ಬೋರ್ಡೊ ಮಿಶ್ರಣದ ಉಪಯೋಗಗಳು: ಬೋರ್ಡೊ ಮಿಶ್ರಣವು ಒಂದು ಉತ್ತಮ ಶಿಲೀಂಧ್ರ ನಾಶಕವೆಂದು ಪರಿಗಣಿಸಲ್ಪಟ್ಟಿದೆ. ಈ ಮಿಶ್ರಣವನ್ನು ಉಪಯೋಗಿಸಿ ಈ ಮುಂದೆ ತಿಳಿಯಪಡಿಸಿದ ಬೆಳೆಗಳಿಗೆ ಬರುವ ರೋಗಗಳನ್ನು ಹತೋಟಿ ಮಾಡಬಹುದು.

ಬೆಳೆಗಳು ರೋಗಗಳು
೧. ಮಾವು ಚಿಬ್ಬು ರೋಗ
೨. ಬಾಳೆ ಮಚ್ಚೆ ರೋಗ
೩. ದ್ರಾಕ್ಷಿ ಕೆಂಪು ಸುಡು ಮತ್ತು ಬೂಜು
೪.ನಿಂಬೆ ಕಜ್ಜಿ
೫. ದಾಳಿಂಬೆ ಕೊಳೆ ರೋಗ
೬. ತೆಂಗು ಅಣಬೆ ರೋಗ
೭. ಅಡಿಕೆ ಕೊಳೆ ರೋಗ
೮. ಕರಿಮೆಣಸು ಸೊರಗು ರೋಗ
೯. ಮೆಣಸಿನಕಾಯಿ ಎಲೆಚುಕ್ಕೆ ರೋಗ ಇತ್ಯಾದಿ

ಬೋರ್ಡೊ ಪೇಸ್ಟ್ ತಯಾರಿಕೆ:  ಬೋರ್ಡೊ ಮಿಶ್ರಣಕ್ಕೆ ಉಪಯೋಗಿಸಿದ ಸುಣ್ಣ ಮತ್ತು ಮೈಲುತುತ್ತಗಳು ಬೋರ್ಡೊ ಪೇಸ್ಟ್ ತಯಾರಿಕೆಗೂ ಉಪಯೋಗಿಸಲಾಗುವುದು. ಆದರೆ ಇಲ್ಲಿ ನೀರು, ಸುಣ್ಣ ಹಾಗೂ ಮೈಲುತುತ್ತದ ಪ್ರಮಾಣಗಳು ಬೇರೆ ಬೇರೆಯಾಗಿರುತ್ತವೆ.

ಎರಡು ಕಿ.ಗ್ರಾಂ ಮೈಲುತುತ್ತ, ನಾಲ್ಕು ಕಿ.ಗ್ರಾಂ ಸುಣ್ಣ ಮತ್ತು ೪೫ ಲೀಟರ್‌‌ನೀರನ್ನು ಉಪಯೋಗಿಸಿ ಪೇಸ್ಟ್ ತಯಾರಿಸುವರು. ಬೋರ್ಡೊ ಮಿಶ್ರಣದಂತೆಯೇ ಪೇಸ್ಟ್ ತಯಾರಿಸುವ ಈ ವಿಧಾನದಲ್ಲಿ ಉಪಯೋಗಿಸುವ ನೀರಿನ ಪ್ರಮಾಣವೂ ಕಡಿಮೆ.

ಬೋರ್ಡೊ ಪೇಸ್ಟನ್ನು ತೆಂಗು ಬೆಳೆಯಲ್ಲಿ ಸುಳಿ ಕೊಳೆಯುವ ರೋಗಕ್ಕೆ ಉಪಯೋಗಿಸುವರು. ವಿಶೇಷವಾಗಿ ಸಸ್ಯಗಳು ಕತ್ತರಿಸಿದ ಭಾಗಕ್ಕೆ ಈ ಪೇಸ್ಟ್ ಲೇಪನ ಮಾಡಿದರೆ ಆ ಭಾಗಗಳ ಮೂಲಕ ಬರುವ ರೋಗಗಳನ್ನು ತಡೆಗಟ್ಟಬಹುದು.

ಕೀಟನಾಶಕಗಳ ಬಳಕೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳು

ಕೀಟನಾಶಕಗಳನ್ನು ಬಳಸುವಾಗ ಮತ್ತು ಬಳಸಿದ ನಂತರ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ.

೧. ಕೀಟನಾಶಕಗಳನ್ನು ಮಕ್ಕಳು ಹಾಗೂ ಪ್ರಾಣಿಗಳಿಂದ ದೂರವಿಡಬೇಕು.

೨. ಕೀಟನಾಶಕ ಡಬ್ಬಿಗಳ ಮುಚ್ಚಳ ತೆಗೆಯುವ ಚಾಕು ಮತ್ತು ಮಿಶ್ರಣ ಬೆರೆಸಿಕೊಳ್ಳಲು ಉಪಯೋಗಿಸುವ ಬಕೆಟ್ ಇತ್ಯಾದಿಗಳನ್ನು ಬೇರೆ ಯಾವುದಕ್ಕೂ ಉಪಯೋಗ ಮಾಡಬಾರದು.

೩. ಕೀಟನಾಶಕಗಳ ಡಬ್ಬಿಯ ಮೇಲೆ ಇರುವ ಸೂಚನೆಗಳನ್ನು ಗಮನಿಸಿ ತಜ್ಞರು ಶಿಫಾರಸು ಮಾಡಿದ ರೀತಿಯಲ್ಲೇ ಉಪಯೋಗಿಸಬೇಕು.

೪. ಸಿಂಪರಣೆ ಮಾಡುವಾಗ ಕೈಗಳಿಗೆ ರಬ್ಬರ್‌‌ಚೀಲ ಮತ್ತು ಮೂಗಿಗೆ ತೆಳು ಬಟ್ಟೆ ಕಟ್ಟಿಕೊಳ್ಳಬೇಕು.

೫. ಕೀಟನಾಶಕಗಳನ್ನು ಬಳಸಿದ ಮೇಲೆ ಖಾಲಿಯಾಗಿರುವ ಡಬ್ಬಿಗಳನ್ನು ನಾಶಪಡಿಸಬೇಕು.

೬. ಗಿಡಗಳಿಗೆ ಕೀಟನಾಶಕಗಳನ್ನು ಸಿಂಪರಣೆ ಮಾಡಿದ ನಂತರ ನಿಗದಿತ ಸಮಯದ ನಂತರವೇ ಹಣ್ಣು-ತರಕಾರಿಗಳನ್ನು ಕಿತ್ತು ಚೆನ್ನಾಗಿ ತೊಳೆದು ಉಪಯೋಗಿಸಬೇಕು.

ಸಸ್ಯ ಸಂರಕ್ಷಣಾ ಉಪಕರಣಗಳ ನಿರ್ವಹಣೆ: ಉಪಕರಣಗಳನ್ನು ಬಳಸುವಾಗ ಪದೇ ಪದೇ ಅವುಗಳನ್ನು ಪರೀಕ್ಷಿಸುತ್ತಿರಬೇಕು. ಕಬ್ಬಿಣದ ಭಾಗಗಳನ್ನು ಗ್ರೀಸ್‌ನಿಂದ ಒರೆಸಿ, ಪ್ಲಾಸ್ಟಿಕ್ ಮತ್ತು ರಬ್ಬರ್‌‌ಭಾಗಗಳಿಗೆ ಎಣ್ಣೆ ಸವರುತ್ತಿರಬೇಕು. ಈ ಕ್ರಮವನ್ನನುಸರಿಸುವುದರಿಂದ ಅವು ಸರಿಯಾಗಿ ಉಪಯೋಗವಾಗುತ್ತವೆಯಲ್ಲದೇ ಆಗಾಗ ಕೆಡದೆ ತುಂಬಾ ದಿನಗಳವರೆಗೆ ಬಾಳಿಕೆಯೂ ಬರುತ್ತವೆ. ವಿಶೇಷ ಕಾಳಜಿ ವಹಿಸುವುದರಿಂದ ಉತ್ತಮ ನಿರ್ವಹಣೆ ಮಾಡಿದಂತಾಗುವುದು.

೧. ಸಿಂಪರಣೆ ಕೆಲಸ ಮುಗಿದ ಮೇಲೆ ಉಪಕರಣಗಳನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಬೇಕು.

೨. ಸಮಯ ಸಿಕ್ಕಾಗ ಉಪಕರಣಗಳ ಭಾಗಗಳನ್ನು ಬಿಚ್ಚಿ ನೀರಿನಿಂದ ತೊಳೆದು ಸ್ವಚ್ಛಗೊಳಿಸಬೇಕು.

೩. ಯಂತ್ರದ ಬಿಡಿಭಾಗಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಖಾತ್ರಿ ಪಡೆದುಕೊಳ್ಳಬೇಕು.

೪. ಸಿಂಪರಣಾ ಉಪಕರಣಕ್ಕೆ ದ್ರಾವಣ ತುಂಬುವಾಗ ಸೋಸುವ ಜರಡಿ ಉಪಯೋಗಿಸಬೇಕು.

೫. ಡಸ್ಟರ್‌‌ ಉಪಕರಣವನ್ನು ಉಪಯೋಗಿಸಿದ ಮೇಲೆ, ಬಟ್ಟೆಯಿಂದ ಒರೆಸಬೇಕು.

* * *