ಅಭ್ಯಾಸ ಪ್ರಶ್ನೆಗಳು

೧.     (ಅ) ಅವ್ಯಯ ಎಂದರೇನು? ಅವ್ಯಯಗಳ ಪ್ರಭೇದ ತಿಳಿಸಿರಿ.

(ಆ) ಕೃದಂತಾವ್ಯಯ, ತದ್ಧಿತಾಂತಾವ್ಯಯಗಳೆಂದರೇನು? ವಿವರಿಸಿರಿ.

(ಇ) ಅನುಕರಣಾವ್ಯಯಗಳಾವುವು?

(ಈ) ಭಾವಸೂಚಕಾವ್ಯಯಗಳಾವುವು?

೨. ಈ ಕೆಳಗಣ ವಾಕ್ಯಗಳಲ್ಲಿ ಬಂದಿರುವ ಅನುಕರಣಾವ್ಯಯಗಳನ್ನು ಗುರುತಿಸಿರಿ.

(ಅ) ಹಾವು ಸರಸರ ಹರಿಯಿತು.

(ಆ) ಆಕಾಶದಲ್ಲಿ ಗುಡಗುಡು ಎಂದು ಗುಡುಗಿತು.

(ಇ) ಮನೆ ತಟತಟ ಸೋರುತ್ತದೆ.

(ಈ) ಕರಕರ ಹಲ್ಲು ಕಡಿದನು

(ಉ) ಬೆಂಕಿಯಲ್ಲಿ ಉಪ್ಪು ಚಟಚಟ ಸಿಡಿಯುವುದು.

೩. ಕೆಳಗಣ ವಾಕ್ಯಗಳಲ್ಲಿ ಬಂದಿರುವ ಭಾಸೂಚಕಾವ್ಯಯಗಳನ್ನು ಗುರುತಿಸಿರಿ.

(ಅ) ಅಯ್ಯೋ! ಶಂಕರನಿಗೆ ಕೇಡಾಯಿತೆ?

(ಆ) ಆಹಾ! ಎಂಥ ರಮ್ಯವಾದ ನೋಟವಿದು?

(ಇ) ಆ ದೃಶ್ಯವನ್ನು ನೆನೆಸಿಕೊಂಡರೆ ಅಬ್ಬಾ! ಎನಿಸುತ್ತದೆ.

(ಈ) ಲಕ್ಷ್ಮಣನು ಅಕ್ಕಟಾ! ಇನ್ನೇನು ಮಾಡಲೆಂದು ಹಲುಬಿದನು.

(ಉ) ಛೀ! ಅವನನ್ನು ಹೊಗಳಬೇಡ.

೪. ಕೆಳಗೆ ಬಂದಿರುವ ವಾಕ್ಯಗಳಲ್ಲಿನ ಸಾಮಾನ್ಯಾವ್ಯಯಗಳನ್ನೂ, ಕ್ರಿಯಾರ್ಥಕಾವ್ಯಯಗಳನ್ನೂ, ಅವಧಾರಣಾರ್ಥಕಾವ್ಯಯಗಳನ್ನೂ ಗುರುತಿಸಿರಿ.

(ಅ) ಅವನು ಆ ಪುಸ್ತಕವನ್ನೇ ಚೆನ್ನಾಗಿ ಓದಲಿಲ್ಲ.

(ಆ) ನೀನು ಸುಮ್ಮನೆ ಇಲ್ಲಿಯೇ ಇರು, ಅಲ್ಲಿಗೆ ಒಮ್ಮೆಲೇ ಹೋಗಬೇಡ.

(ಇ) ಆ ಮಾತಿಗೆ ತಟ್ಟನೆ ಉತ್ತರ ಕೊಡಲೇಬೇಡ.

(ಈ) ಮೆಲ್ಲಗೆ ಮಾತನಾಡುವುದನ್ನೇ ಅವನು ಕಲಿತಿಲ್ಲ.

(ಉ) ಆ ಬಳಿಕ ಬಂದವನು ರಾಮನೇ ಹೌದು.

೫. ಈ ಕೆಳಗಿನ ವಾಕ್ಯಗಳಲ್ಲಿ ಬಂದಿರುವ ಸಂಬಂಧಾರ್ಥಕಾವ್ಯಯಗಳನ್ನು ಗುರುತಿಸಿರಿ.

(ಅ) ಅವನೂ ಬರಲಿ; ನೀನೂ ಬಾ.

(ಆ) ಅವರಿಬ್ಬರೂ, ಒಟ್ಟಿಗೇ ಬರಲಿ.

(ಇ) ಶಂಕರ ಮತ್ತು ಅವನ ತಂಗಿ ಇಬ್ಬರೂ ಬಂದರು.

(ಈ) ನೀನು ಬರಬೇಕು ಆಗ ಎಲ್ಲ ಸರಿಹೋಗುವುದು.

(ಉ) ಅವನಿಗೆ ಅದು ಬೇಕಾಗಿಲ್ಲ, ಆದ್ದರಿಂದ ನಾವೂ ಕೊಡಲಿಲ್ಲ.

೬. ಕೆಳಗಿನ ವಾಕ್ಯಗಳಲ್ಲಿ ಬಂದಿರುವ ಕೃದಂತಾವ್ಯಯ, ತದ್ಧಿತಾಂತಾವ್ಯಯಗಳನ್ನು ಗುರುತಿಸಿರಿ.

(ಆ) ಅವನಂತೆ ವರ್ಣಿಸುವವರಾರು?

(ಆ) ಅವನ ಹಾಗೆ ನೀನೂ ಪ್ರಯತ್ನಿಸು.

(ಇ) ನೀನು ಹೋದರೆ ಮಾತ್ರ ಸಾಧ್ಯ.

(ಈ) ಆ ಕಾರ‍್ಯಮಾಡಲಿಕ್ಕೆ ಇವನಂತೆ ಬೇರೊಬ್ಬ ಸಮರ್ಥನಿಲ್ಲ.

(ಉ) ಊರತನಕ ಬಂದು ಕಳಿಸಿದರೆ ಸಾಕು.

೭.  ಕೆಳಗಿನ ವಾಕ್ಯಗಳಲ್ಲಿ ಬಿಟ್ಟಿರುವ ಸ್ಥಳಗಳಲ್ಲಿ ಮುಂದೆ ಆವರಣದಲ್ಲಿ ಕೊಟ್ಟಿರುವ ಒಂದು

ಸರಿ ಉತ್ತರ ಬರೆಯಿರಿ.

(ಆ)  ______ ನಮಗೆ ತೊಂದರೆ ಕೊಡುವುದು ಸರಿಯಲ್ಲ. (ಸುಮ್ಮನೆ, ನೆಟ್ಟಗೆ, ಕಮ್ಮಗೆ)

(ಆ) ಈ ಹೂವನ್ನು ದೇವರ ಪೂಜೆಗೆ ಉಪಯೋಗಿಸು ___ ಮಕ್ಕಳಿಗಾದರೂ ಕೊಡು. (ಮತ್ತು, ಆದರೆ, ಅಥವಾ)

(ಇ) ಮಳೆಯೇನೋ ಬಂದಿತು ______ ಕೆರೆ ತುಂಬಲಿಲ್ಲ. (ಆದ್ದರಿಂದ, ಆದುದರಿಂದ, ಆದರೆ)

(ಈ) ಗುಡಿಸಲಿಗೆ ಬೆಂಕಿಬಿತ್ತು _______ ಅಗ್ನಿಶಾಮಕದಳದವರು ಆರಿಸಿದರು. (ಮೆಲ್ಲಗೆ, ನೆಟ್ಟಗೆ, ಕೂಡಲೆ)

(ಉ) ವಿದ್ಯಾರ್ಥಿಗಳು ________ ಉಪಾಧ್ಯಾಯರು ಸೇರಿ ಈ ಶಾಲೆ ಕಟ್ಟಿದರು. (ಮತ್ತು, ಅಥವಾ, ಆದ್ದರಿಂದ)