ಹಣ್ಣು, ತರಕಾರಿ, ಸಂಬಾರು ಬೆಳೆಗಳು ಮತ್ತು ಹೂವಿನ ಬೆಳೆಗಳು ಕೊಯ್ಲು ಮಾಡಿದ ಮೇಲೆ ಸಾಧ್ಯವಾದ ಮಟ್ಟಿಗೆ ಅವು ಕೆಡದೇ ಬಹು ದಿನಗಳವರೆಗೆ ಗುಣಮಟ್ಟ  ಕಾಯ್ದುಕೊಳ್ಳಲು ಕೆಲವು ನಿಯಮಗಳನ್ನು ಅನುಸರಿಸಬೇಕಾಗುವುದು. ಅದನ್ನೇ ಕೊಯ್ಲೋತ್ತರ ನಿರ್ವಹಣೆ ಎನ್ನುವರು. ಕೊಯ್ಲು ಮಾಡುವ ಸಂದರ್ಭದಲ್ಲಿ ತೋರುವ ನಿಷ್ಕಾಳಜಿ ಮತ್ತು ಕೊಯ್ಲಿನ ನಂತರದ ನಿರ್ವಹಣೆಯಲ್ಲಿ ತಾಂತ್ರಿಕತೆ ಇಲ್ಲದಿರುವುದು ಬಹುಪಾಲು ನಷ್ಟಕ್ಕೆ ಕಾರಣಗಳಾಗುತ್ತವೆ. ಕೊಯ್ಲು ಹಂತದವರೆಗೆ ಎಲ್ಲ ಕ್ರಮಗಳನ್ನು ಅನುಸರಿಸಿ ನಂತರ ಹಾನಿಗೊಳಗಾದರೆ ’ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎನ್ನುವಂತಾಗುತ್ತದೆ. ಆದ್ದರಿಂದ ಕೊಯ್ಲು ಹಂತದಲ್ಲಿ ಅನುಸರಿಸಬೇಕಾದ ಪದ್ಧತಿಗಳಿಂದ ಹಿಡಿದು ಅಂತಿಮವಾಗಿ ಗ್ರಾಹಕನ ಕೈಸೇರುವವರೆಗೆ ಕೆಡುವಿಕೆಯನ್ನು ತಡೆಯಬೇಕಾಗುವುದು.

ಹಣ್ಣುತರಕಾರಿಗಳ ಕೆಡುವಿಗೆ ಕಾರಣಗಳು

ಹಣ್ಣು ಮತ್ತು ತರಕಾರಿಗಳು ಬೇಗನೆ ಕೆಟ್ಟು ಹೋಗುವ ಪದಾರ್ಥಗಳಾಗಿವೆ. ಹೀಗಾಗಿ ಹೆಚ್ಚು ಕಾಳಜಿ ವಹಿಸಬೇಕಾಗಿರುವುದು ಅವಶ್ಯ. ಆದ್ದರಿಂದ ಹಣ್ಣು ಮತ್ತು ತರಕಾರಿಗಳು ಕೆಡಲು ಕಾರಣಗಳು ಮತ್ತು ಪರಿಹಾರೋಪಯಗಳನ್ನು ತಿಳಿದುಕೊಳ್ಳಬೇಕು.

. ಉಸಿರಾಟ ಕ್ರಿಯೆ: ಸಸ್ಯಗಳಿಗೆ ಜೀವವಿದೆ ಎಂದ ಮೇಲೆ ಅವು ನೀಡುವ ಉತ್ಪನ್ನ (ಫಲ) ಗಳಿಗೂ ಜೀವವಿದ್ದು ಅವು ಕೊಯ್ಲು ಮಾಡಿದ ನಂತರವೂ ಉಸಿರಾಡುತ್ತಿರುತ್ತವೆ. ಹೀಗೆ ಉಸಿರಾಡುವಾಗ ಈ ಫಲಗಳಲ್ಲಿ ಇರುವ ಆಹಾರಾಂಶಗಳು ಕಡಿಮೆಯಾದಂತೆ ಫಲಗಳು ಕೆಡಲಾರಂಭವಾಗುತ್ತವೆ. ಉಸಿರಾಟ ಹೆಚ್ಚಿದಂತೆಲ್ಲ ಅಂದರೆ ಹೆಚ್ಚು ಉಸಿರಾಡುವ ಹಣ್ಣು ತರಕಾರಿಗಳು ಬೇಗನೆ ಕೆಡುತ್ತವೆ.

. ತೇವಾಂಶ ಕಳೆದುಕೊಳ್ಳುವುದು: ಹಣ್ಣು-ತರಕಾರಿಗಳಲ್ಲಿ ಶೇಕಡಾ ೮೦ ರಿಂದ ೯೫ ರಷ್ಟು ನೀರಿನ ಅಂಶವಿರುತ್ತದೆ. ಈ ನೀರಿನ ಅಂಶ ಕ್ರಮೇಣ ಕಡಿಮೆಯಾಗುತ್ತಾ ಹೋಗಿ ತೇವಾಂಶ ಕಳೆದುಕೊಂಡ ಹಣ್ಣು ತರಕಾರಿಗಳ ತೂಕವೂ ಕಡಿಮೆಯಾಗಿ ಬಾಡಿ ಸುಕ್ಕುಗಟ್ಟುತ್ತವೆ.

. ಕೊಯ್ಲು ಮಾಡುವ ಹಂತ: ಹಣ್ಣು ಮತ್ತು ತರಕಾರಿಗಳನ್ನು ಸೂಕ್ತ ಸಮಯದಲ್ಲಿ ಕೊಯ್ಲು ಮಾಡಬೇಕು. ಇಲ್ಲವಾದರೆ ಅವುಗಳ ಗುಣಮಟ್ಟ ಹಾಳಾಗುವುದು ಹಾಗೂ ತಾಜಾತನವೂ ನಶಿಸುವುದು. ಕೊಯ್ಲು ಮಾಡುವಾಗ ಅವುಗಳಿಗೆ ಗಾಯಗಳಾಗದಂತೆ ಎಚ್ಚರ ವಹಿಸಬೇಕು. ಏಕೆಂದರೆ ಗಾಯಗಳ ಮೂಲಕ ಸೂಕ್ಷ್ಮಾಣು ಜೀವಿಗಳು ಒಳ ಸೇರುವುದರಿಂದ ನಷ್ಟಕ್ಕೆ ತುತ್ತಾಗುತ್ತವೆ.

. ಕೊಯ್ಲೋತ್ತರ ರೋಗ ಬಾಧೆ: ಹಣ್ಣು-ತರಕಾರಿಗಳು ಗಿಡಗಳಲ್ಲಿರುವಾಗ ಮಾತ್ರವಲ್ಲದೆ ಗಿಡಗಳಿಂದ ಬೇರ್ಪಟ್ಟಾಗಲೂ ರೋಗಗಳಿಗೆ ತುತ್ತಾಗಿ ಹಾನಿಗೊಳಗಾಗುತ್ತವೆ. ಇದರಲ್ಲಿ ಕೊಳೆಯುವಿಕೆ ಬಹು ಮುಖ್ಯವಾದುದು.

ಕೆಡುವಿಕೆಯನ್ನು ತಡೆಯುವ ವಿಧಾನಗಳು

ಕೊಯ್ಲಿನ ನಂತರ ಹಣ್ಣು-ತರಕಾರಿಗಳು ಸಾಕಷ್ಟು ದಿನಗಳವರೆಗೆ ಕೆಡದಂತಿಡಲು ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ನಷ್ಟವನ್ನು ಕಡಿಮೆ ಮಾಡಲು ಸಾಧ್ಯವಿದೆ.

. ವರ್ಗೀಕರಿಸುವುದು: ಹಣ್ಣು-ತರಕಾರಿಗಳನ್ನು ಅವುಗಳ ಬಲಿಯುವಿಕೆ, ಗಾತ್ರ, ಆಕಾರ, ತೂಕ, ಬಣ್ಣ ಮತ್ತು ರೋಗಗಳಿಂದ ಮುಕ್ತವಾಗಿರುವಿಕೆ ಇತ್ಯಾದಿಗಳ ಆಧಾರದಿಂದ ಬೇರೆ ಬೇರೆ ವರ್ಗಗಳಾಗಿ ವಿಂಗಡಿಸಬಹುದು. ಈ ಅಂಶಗಳನ್ನು ಅವಲಂಬಿಸಿ ಪ್ರತ್ಯೇಕಿಸಿ ಪ್ಯಾಕ್ ಮಾಡುವುದು ಒಳ್ಳೆಯದು. ಈ ಕ್ರಮ ಅನುಸರಿಸುವುದರಿಂದ ನಷ್ಟ ಕಡಿಮೆಯಾಗುವುದಲ್ಲದೇ ಮಾರುಕಟ್ಟೆಯಲ್ಲಿ ಒಳ್ಳೆಯ ಬಲೆ ಮತ್ತು ಬೇಡಿಕೆ ಸಿಗುತ್ತದೆ. ಮನೆಯಲ್ಲೇ ಉಪಯೋಗಿಸುವುದಾದರೆ ಉತ್ತಮ ಗುಣಮಟ್ಟದ ಹಣ್ಣು-ತರಕಾರಿಗಳನ್ನು ಪಡೆದಂತಾಗುವುದು.

. ಲೇಪನ ಮಾಡುವುದು: ಕೊಯ್ಲುತ್ತರ ಹಣ್ಣು-ತರಕಾರಿಗಳಿಗೆ ಮೇಣದ ಲೇಪನ ಮಾಡುವುದರಿಂದ ತೇವಾಂಶ ನಷ್ಟವಾಗುವುದನ್ನು ನಿಯಂತ್ರಿಸಬಹುದು. ಶಿಲೀಂಧ್ರ ನಾಶಕಗಳನ್ನು ಮೇಣದೊಂದಿಗೆ ಸೇರಿಸಿ ಲೇಪನ ಮಾಡುವುದರಿಂದ ಕೆಡುವಿಕೆಯನ್ನು ಕಡಿಮೆಗೊಳಿಸಲು ಸಾಧ್ಯ. ಇದರಿಂದ ಫಸಲಿಗೆ ಉತ್ತಮ ಬೆಲೆ ಸಿಗುವುದು.

. ಪ್ಯಾಕಿಂಗ್: ವಿಶೇಷವಾಗಿ ದೂರದ ಸ್ಥಳಗಳಿಗೆ ಹಣ್ಣು-ತರಕಾರಿಗಳನ್ನು ಸಾಗಿಸುವಾಗ ಚೆನ್ನಾಗಿ ಪ್ಯಾಕ್  ಮಾಡುವುದು ಅವಶ್ಯಕ.

ಆಯಾ ಹಣ್ಣು-ತರಕಾರಿಗಳಿಗೆ ಹೊಂದುವ ವಸ್ತುಗಳನ್ನೇ ಪ್ಯಾಕಿಂಗ್ ಸಾಮಗ್ರಿಗಳಾಗಿ ಉಪಯೋಗಿಸಬೇಕು. ಇದರಿಂದ ಜಜ್ಜುವಿಕೆ ಅಥವಾ ಕುಲುಕಾಟದಿಂದ ಆಗಬಹುದಾದ ಗಾಯಗಳಿಂದ ರಕ್ಷಿಸಬಹುದು ಮತ್ತು ಸಾಗಾಣಿಕೆಯಲ್ಲಿ ಅನುಕೂಲವಾಗುವುದು. ಮರದ ಪೆಟ್ಟಿಗೆಗಳು, ಬಿದಿರಿನ ಬುಟ್ಟಿಗಳು, ಕಾರ್ಡ್‌ಬೋರ್ಡ್‌, ಪ್ಲಾಸ್ಟಿಕ್ ಚೀಲ ಮತ್ತು ಗನ್ನಿ ಚೀಲಗಳನ್ನು ಪ್ಯಾಕಿಂಗ್ ಸಾಮಗ್ರಿಗಳಾಗಿ ಉಪಯೋಗಿಸಬಹುದು.

ಸಂಬಾರ ಬೆಳೆಗಳ ಸಂಸ್ಕರಣೆ

ಸಂಬಾರ ಪದಾರ್ಥಗಳು ಬೇಗನೇ ಕೆಡುವುದಿಲ್ಲ. ಹಣ್ಣು ಮತ್ತು ತರಕಾರಿಗಳಿಗೆ ಹೋಲಿಸಿದಾಗ ಸಂಬಾರ ಪದಾರ್ಥಗಳ ಬಾಳಿಕೆ ತುಂಬಾ ದೀರ್ಘವಾದದ್ದೆಂದೇ ಹೇಳಬಹುದು. ವರ್ಷವಿಡೀ ಒಂದಿಲ್ಲೊಂದು ಸಂಬಾರ ಪದಾರ್ಥವನ್ನು ಉಪಯೋಗಿಸುತ್ತಲೇ ಇರುತ್ತೇವೆ. ಈ ಪದಾರ್ಥಗಳ ಕೆಲವು ಬೆಳೆಗಳ ಕೊಯ್ಲು ನಂತರದ ನಿರ್ವಹಣೆ ತಿಳಿಯೋಣ.

. ಅರಿಸಿನ: ಜನವರಿ-ಮಾರ್ಚ್‌ತಿಂಗಳ ಅವಧಿಯಲ್ಲಿ ಅರಿಸಿನ ಕೊಯ್ಲು ಮಾಡಬೇಕು. ಬೇರು ಕಾಂಡಗಳನ್ನು ಭೂಮಿಯಿಂದ ತೆಗೆಯುವಾಗ ಗಾಯಗಳಾಗದಂತೆ ನೋಡಿಕೊಳ್ಳಬೇಕು. ನಂತರ ಬೇರು ಕಾಂಡಗಳಿಗೆ ಅಂಟಿಕೊಂಡಿರುವ ಮಣ್ಣನ್ನು ತೆಗೆದು ಸ್ವಚ್ಛಗೊಳಿಸಬೇಕು. ಒಂದು ದೊಡ್ಡ ಪೀಪಾಯಿಯಲ್ಲಿ ಬೇರು ಕಾಂಡಗಳನ್ನು ತುಂಬಿ ನೀರಿನಿಂದ ಕಾಂಡಗಳನ್ನು ಅನುಕೂಲಕರವಾದ ತಾಮ್ರದ ಪಾತ್ರೆಯಲ್ಲಿ ಹಾಕಿ, ಅರಿಸಿನ ಎಲೆಗಳನ್ನು ಮೇಲೆ ಹರಡಿ ನಂತರ ಪಾತ್ರೆಗೆ ನೀರು ತುಂಬಬೇಕು. ಆಮೇಲೆ ಅವೆಲ್ಲ ಸೇರಿಕೊಂಡು ಚೆನ್ನಾಗಿ ಕುದಿಯುವಂತೆ ಬೇಯಿಸಬೇಕು. ನಂತರ ಬೇರು ಕಾಂಡಗಳನ್ನು ಹೊರತೆಗೆದು ಸುಮಾರು ೧೫ ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಬೇಕು. ಈ ರೀತಿ ಒಣಗಿಸಿದ ಬೇರು ಕಾಂಡಗಳನ್ನು ಒರಟಾದ ಮೇಲ್ಮೈ ಮೇಲೆ ತಿಕ್ಕಬೇಕು.

. ಜೀರಿಗೆ: ಕೊಯ್ಲಾದ ನಂತರ ಎರಡು ದಿನ ಶೇಖರಿಸಿ, ನಂತರ ಬಿಸಿಲಿನಲ್ಲಿ ಹರಡಿ ಒಣಗಿಸಬೇಕು. ಕೋಲಿನಿಂದ ಬಡಿದು ಕಾಳು ಬೇರ್ಪಡಿಸಿ, ಸ್ವಚ್ಛಗೊಳಿಸಿ ಮತ್ತೆ ಬಿಸಿಲಿನಲ್ಲಿ ಹರಡಿ ಒಣಗಿಸಬೇಕು. ನಂತರ ಡಬ್ಬಿಗಳಲ್ಲಿ ಅಥವಾ ಗಾಜಿನ ಬಾಟಲುಗಳಲ್ಲಿ ಶೇಖರಿಸಿಟ್ಟುಕೊಳ್ಳಬಹುದು. (ಕೊಯ್ಲು ಹಂತವನ್ನು ಸರಿಯಾಗಿ ಗಮನಿಸಬೇಕು ತಡವಾದಲ್ಲಿ ಬೀಜಗಳು ಉದುರಿ ಬೀಳುವುದುಂಟು).

. ಸಾಸುವೆ: ಗಿಡದಲ್ಲಿ ಶೇ. ೭೫ರಷ್ಟು ಕಾಯಿಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಬೇಕು. ಕಾಳುಗಳನ್ನು ಬೇರ್ಪಡಿಸಿದ ಮೇಲೆ ಶುದ್ಧಗೊಳಿಸಿ ಶೇಖರಿಸಬೇಕು. ಶೇಕರಿಸುವ ಮೊದಲು ಬೀಜಗಳನ್ನು ಚೆನ್ನಾಗಿ ಒಣಗಿಸಬೇಕು. ಬಿತ್ತನೆಗಾಗಿ ಬೀಜ ಶೇಖರಿಸುವಂತಿದ್ದರೆ ಶಿಲೀಂಧ್ರ ನಾಶಕಗಳಾದ ಕ್ಯಾಪ್ಟಾನ್ ಅಥವಾ ಥೈರಾಮನ್ನು ಪ್ರತಿ ಕಿ.ಗ್ರಾಂ ಬೀಜಕ್ಕೆ ಮೂರು ಗ್ರಾಂನಂತೆ ಹಾಕಿ ಉಪಚರಿಸಬೇಕು. ಮತ್ತು ತೇವಾಂಶ ಶೇ. ೫ಅನ್ನು ಮೀರಬಾರದು.

. ಶುಂಠಿ: ಗುಪ್ತಾಕಾಂಡಗಳನ್ನು ಭೂಮಿಯಿಂದ ಅಗೆದು ತೆಗೆದ ಮೇಲೆ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಬೇಕು. ಹಸಿ ಶುಂಠಿಯಿಂದ ಒಣ ಶುಂಠಿ ತಯಾರಿಸಬಹುದು. ಒಣ ಶುಂಠಿ ತಯಾರಿಸಬೇಕಾದಲ್ಲಿ ಸ್ವಲ್ಪ ತಡವಾಗಿ ಕೊಯ್ಲು ಮಾಡಬೇಕು. ಅಂದರೆ ಹಸಿ ಶುಂಠಿಗಾಗಿ ನಾಟಿ ಮಾಡಿದ ಆರು ತಿಂಗಳ ನಂತರ ಕೊಯ್ಲು ಮಾಡಿದರೆ, ಒಣ ಶುಂಠಿಗಾಗಿ ಸುಮಾರು ಎಂಟು ತಿಂಗಳಾದರೂ ಬೇಕಾಗುತ್ತದೆ. ಕಾಂಡಗಳನ್ನು ಭೂಮಿಯಿಂದ ಅಗೆದು ತೆಗೆದ ಮೇಲೆ ೧೦-೧೨ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಸ್ವಚ್ಛಗೊಳಿಸಿ ಅವುಗಳ ಹೊರ ಪದರವನ್ನು ಕೆರೆದು ತೆಗೆದು ಹಾಕಬೇಕು. ಆಮೇಲೆ ಸುಮಾರು ಒಂದು ವಾರದವರೆಗೆ ಬಿಸಿಲಿನಲ್ಲಿ ಹರಡಿ ಒಣಗಿಸಬೇಕು.

ಹೂವಿನ ತಾಜಾತನದ ಸಂರಕ್ಷಣೆ

ಹೂವಿನ ಬೇಸಾಯದಲ್ಲೂ ಕೊಯ್ಲೋತ್ತರ ನಿರ್ವಹಣೆ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಹೂವು ಅರಳಿದ ಮೇಲೆ ಅವುಗಳ ಮುಂದಿನ ಜೀವನಚಕ್ರ ಅಥವಾ ಕಾಲಾವಧಿ ಒಂದೊಂದು ಹೂವಿನದು ಒಂದೊಂದು ರೀತಿಯಾಗಿದೆ. ಕೆಲವು ತಾಂತ್ರಿಕತೆಗಳನ್ನ ಅನುಸರಿಸುವುದರಿಂದ ಹೂವು ಬಾಡುವ ಅವಧಿಯನ್ನು ಮುಂದೂಡಬಹುದು.

೧. ಬೆಳಗಿನ ಹೊತ್ತಿನಲ್ಲಿ ಹೂವುಗಳನ್ನು ಕತ್ತರಿಸಿ ತೆಗೆಯುವುದು ಒಳ್ಳೆಯದು.

೨. ಸಮೀಪ ಅಥವಾ ದೂರದ ಮಾರುಕಟ್ಟೆಗಳನ್ನು ಅವಲಂಬಿಸಿ ಹೂವುಗಳ ಕೊಯ್ಲು ಹಂತ ಸರಿದೂಗಿಸಿಕೊಳ್ಳಬೇಕು.

೩. ಆಯಾ ಹೂವುಗಳನ್ನನುಸರಿಸಿ ತೊಟ್ಟಿನೊಂದಿಗೆ ಕೊಯ್ಲು ಮಾಡಬೇಕು.

೪. ಪ್ಯಾಕ್ ಮಾಡುವಾಗ ಒತ್ತಡ ಹಾಕದೇ ಹಗುರವಾಗಿ ಜೋಡಿಸಬೇಕು.

೫. ಹೊರ ದೇಶಗಳಿಗೆ ರಫ್ತು ಮಾಡುವ ಹೂವುಗಳನ್ನು ನಿಯಮಾವಳಿಗನುಸಾರವಾಗಿ ಪ್ಯಾಕ್ ಮಾಡಬೇಕಾಗುವುದು.

೬. ತೊಟ್ಟಿನೊಂದಿಗೆ ಕತ್ತರಿಸುವ ಹೂವುಗಳನ್ನು ಕೊಯ್ಲು ಮಾಡಲು ಸವರುಗತ್ತರಿಯನ್ನು ಉಪಯೋಗಿಸಿದರೆ ಹೂವುಗಳು ಹಾಳಾಗುವುದಿಲ್ಲ.

ಹೂವುಗಳನ್ನು ಕೊಯ್ಲು ಮಾಡಿದ ಮೇಲೆ ಅವು ನಾನಾ ಕಾರಣಗಳಿಂದ ಹಾಳಾಗುತ್ತವೆ. ಹೂವುಗಳು ಕೊಯ್ಲು ಮಾಡಿದ ಮೇಲೂ ಉಸಿರಾಡುತ್ತಿರುತ್ತವೆ. ಈ ಉಸಿರಾಟ ಕ್ರಿಯೆಯಿಂದಾಗಿ ತೇವಾಂಶ ನಷ್ಟವಾಗಿ ಬಾಡುತ್ತವೆ ಮತ್ತು ಸರಿಯಾದ ಸಮಯದಲ್ಲಿ ಕೊಯ್ಲು ಮಾಡದೇ ಹೋದರೆ ಗುಣಮಟ್ಟವೂ ಹಾಳಾಗುವುದು. ಅದೇ ರೀತಿಯಾಗಿ ಉಷ್ಣಾಂಶ ಸಹ ಹೂವುಗಳ ಮೇಲೆ ಪರಿಣಾಮ ಬೀರುವುದು. ಅಧಿಕ ಉಷ್ಣಾಂಶದಲ್ಲಿ ಹೂವುಗಳನ್ನು ಶೇಖರಿಸುವುದರಿಂದಲೂ ಅವು ಹಾನಿಗೊಳಗಾಗುತ್ತವೆ. ಇದಲ್ಲದೇ ಮಾರಾಟಕ್ಕೆಂದು ಮಾರುಕಟ್ಟೆಗೆ ಸಾಗಿಸುವಾಗ ಮತ್ತು ಶೇಕರಣೆ ಮಾಡುವಾಗ ಎಚ್ಚರವಹಿಸದಿದ್ದರೆ ಹಾನಿ ಸಂಭವಿಸುತ್ತದೆ.

ಆದ್ದರಿಂದ ಹೂವುಗಳ ಗುಣಮಟ್ಟವನ್ನು ಕಾಪಾಡಲು ಮತ್ತು ಆಗುವ ನಷ್ಟವನ್ನು ತಪ್ಪಿಸಲು ಈ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು.

೧. ಸರಿಯಾದ ಸಮಯದಲ್ಲಿ ಕೊಯ್ಲು ಮಾಡಿ, ಅದಷ್ಟು ಬೇಗ ಮಾರುಕಟ್ಟಿಗೆ ಸಾಗಿಸಬೇಕು.

೨. ತೊಟ್ಟುಗಳೊಂದಿಗೆ ಕತ್ತರಿಸಬೇಕಾದ ಹೂವುಗಳನ್ನು ಮುಂಜಾನೆ ಮತ್ತು ಬಿಡಿ ಹೂವುಗಳನ್ನು ಸಾಯಂಕಾಲ ಕೊಯ್ಲು ಮಾಡುವುದು ಒಳ್ಳೆಯದು.

೩. ಕೊಯ್ಲಿನ ನಂತರ ಹೂವುಗಳನ್ನು ತಕ್ಷಣ ನೀರಿನಲ್ಲಿ ಅದ್ದಬೇಕು ಅಥವಾ ನೀರಿನಲ್ಲಿ ಸಂಗ್ರಹಿಸಬೇಕು.

೪. ಶೈತ್ಯಾಗಾರದ ವ್ಯವಸ್ಥೆ ಇರುವಾಗ ಅದರಲ್ಲಿ ಶೇಖರಿಸುವುದು ಉತ್ತಮ.

೫. ಹೂವುಗಳನ್ನು ವರ್ಗೀಕರಿಸಿ (ಗುಣಮಟ್ಟವನ್ನಾಧರಿಸಿ) ಪ್ರತ್ಯೇಕವಾಗಿ ಪ್ಯಾಕ್ ಮಾಡಬೇಕು.

೬. ಕೊಯ್ಲು ಮಾಡಿದ ಹೂವುಗಳನ್ನು ಬಿದಿರಿನ ಬುಟ್ಟಿ/ಪಾಲಿಥೀನ್ ಚೀಲ/ಕಾಗದ/ತೆಳು ರಟ್ಟುಗಳಿಂದ ಪ್ಯಾಕ್ ಮಾಡಬಹುದು.

* * *