ಜಲಚರ ಸಸ್ಯಗಳನ್ನು ಹೊರತುಪಡಿಸಿದರೆ ಸಸ್ಯಗಳನ್ನು ಬೆಳೆಯಲು ಭೂಮಿ ಆಧಾರ ಸ್ಥಂಭವಿದ್ದ ಹಾಗೆ. ಸಸ್ಯದ ಬೇರುಗಳು ಭೂಮಿಯೊಳಗಿಳಿದು ಸಸ್ಯಕ್ಕೆ ಆಹಾರ ಮತ್ತು ಬಲ ಕೊಡುತ್ತವೆಯಲ್ಲದೇ ಭೂಮಿಯಲ್ಲಿರುವ ಪೋಷಕಾಂಶಗಳು ಮತ್ತು ನೀರನ್ನು ಸಸ್ಯದ ವಿವಿಧ ಭಾಗಗಳಿಗೆ ಪೂರೈಸುವ ಕಾರ್ಯವನ್ನು ನಿರ್ವಹಿಸುತ್ತವೆ. ಅಂದರೆ ಭೂಮಿ ಇರುವಲ್ಲಿ ಸಸ್ಯಗಳನ್ನು ಬೆಳೆಯುವುದು ಸುಲಭವೆಂದಾಯಿತು. ಆದರೆ ಇದೇ ವ್ಯವಸ್ಥೆಯನ್ನು ಭೂಮಿಯಿಂದ ಹೊರಗಡೆ ಇರುವ ಸಸ್ಯಗಳಿಗೆ ಒದಗಿಸಿದರೆ ಅಲ್ಲಿಯೂ ಸಸ್ಯಗಳನ್ನು ಸುಲಭವಾಗಿ ಬೆಳೆಯಬಹುದು. ಮತ್ತು ಅವು ನಮಗೆ ನಿರೀಕ್ಷಿತ ಫಲ ಕೊಡುವುದರಲ್ಲಿ ಸಂದೇಹವಿಲ್ಲ.

’ಕುಂಡ’ ಗಳಲ್ಲಿ ಸಸ್ಯ ಬೆಳೆಯಲು ವ್ಯವಸ್ಥೆ ಮಾಡಬಹುದಾಗಿದೆ. ಇಲ್ಲಿ ಸಸ್ಯಗಳು ತೊಂದರೆ ಇಲ್ಲದೆ ಬೇರು ಬಿಟ್ಟು, ಅವು ತಮ್ಮ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಸೂಕ್ತವಾದ ಮಣ್ಣು, ಗೊಬ್ಬರ, ಮರಳು ಇತ್ಯಾದಿಗಳನ್ನು ಸೂಕ್ತ ಪ್ರಮಾಣದಲ್ಲಿ ಮಿಶ್ರಣ ಮಾಡಿ ಹದಗೊಳಿಸಿ ಕುಂಡಗಳಲ್ಲಿ ತುಂಬಬೇಕು. ನಂತರ ಬೀಜ ಬಿತ್ತುವುದು ಇಲ್ಲವೇ ತುಂಡುಗಳ ನಾಟಿ ಇಲ್ಲವೇ ಬೇರು ಬಿಟ್ಟಂತಹ ಸಸ್ಯಗಳನ್ನು ನಾಟಿ ಮಾಡಬಹುದು. ಅಲ್ಲದೇ ಮಡಿಗಳಲ್ಲಿ ಬೀಜ ಬಿತ್ತನೆ ಮಾಡಿ ಬೆಳೆಸಿದ ಚಿಕ್ಕ ಎಳೆ ಸಸಿಗಳನ್ನೂ ಕುಂಡಗಳಲ್ಲಿ ನಾಟಿ ಮಾಡಿ ಬೆಳೆಸಬಹುದಾಗಿದೆ. ಈ ರೀತಿಯಾಗಿ ಕುಂಡಗಳಲ್ಲಿ ನೆಟ್ಟ ಸಸಿಗಳಿಗೆ ನೀರು ಮತ್ತು ಪೋಷಕಾಂಶಗಳನ್ನು ಪೂರೈಸಿ ರಕ್ಷಣೆ ಒದಗಿಸಿ  ಬೆಳೆಯುವ ಕ್ರಮವನ್ನೇ ಕುಂಡಗಳಲ್ಲಿನ ಬೇಸಾಯ ಪದ್ಧತಿ ಎನ್ನಬಹುದು.

ನರ್ಸರಿಗಳಲ್ಲಿ ಕುಂಡಗಳಲ್ಲಿ ಒಟ್ಲು ಬಿಡುವುದು ಹಾಗೂ ಸಸ್ಯಗಳನ್ನು ಬೆಳೆಯುವುದು ಸಾಮಾನ್ಯ. ಕೆಲವು ಹಣ್ಣಿನ ಗಿಡಗಳು, ತರಕಾರಿಗಳು ಮತ್ತು ಹೂವಿನ ಗಿಡಗಳನ್ನು ಕುಂಡಗಳಲ್ಲಿ ಬೆಳೆಯಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಅಲಂಕಾರಿನ ಸಸಿಗಳನ್ನು ಕುಂಡಗಳಲ್ಲಿ ಬೆಳೆಸುವುದೇ ಹೆಚ್ಚು.

ಕುಂಡಗಳಲ್ಲಿನ ಬೇಸಾಯದ ಮಹತ್ವ

೧. ಗಿಡ ಬೆಳೆಯಲು ಭೂಮಿ ಇರದಿರುವಾಗ ಮತ್ತು ಮಣ್ಣಿನಿಂದ ಕೂಡಿದ ಪ್ರದೇಶ ಕಡಿಮೆ ಇರುವಲ್ಲಿ ಕುಂಡಗಳಲ್ಲಿ ಸಸಿಗಳನ್ನು ಬೆಳೆಸಬಹುದು.

೨. ನಗರ ಪ್ರದೇಶಗಳಲ್ಲಿ ಸ್ಥಳದ ಅಭಾವವಿದೆ. ಇಂತಹ ಸಂದರ್ಭಗಳಲ್ಲಿ ಕುಂಡಗಳಲ್ಲಿನ ಬೇಸಾಯ ಸಸ್ಯ ಪ್ರೇಮಿಗಳ ಆಸೆಯನ್ನು ಪೂರೈಸುವುದು.

೩. ಮನೆಯ ಸುತ್ತಲೂ ಇರುವ ಹೆಚ್ಚುವರಿ ಸ್ಥಳದಲ್ಲಿ ಪೌಳಿ ಗೋಡೆ ಮೇಲೆ, ಮಹಡಿ ಮೇಲೆ, ಕಿಟಕಿಗಳಲ್ಲಿ, ಕಟ್ಟೆಗಳ ಮೇಲೆ ಮತ್ತು ಗಾಳಿ ಬೆಳಕು ಸುಲಭವಾಗಿ ಲಭ್ಯವಿರುವ ಇನ್ನಿತರ ಸ್ಥಳಗಳಲ್ಲಿ ಕುಂಡಗಳನ್ನಿಟ್ಟು ಸಸ್ಯಪಾಲನೆ ಮಾಡಬಹುದು. ಇದರಿಂದ ವೃಥಾ ವ್ಯರ್ಥವಾಗುತ್ತಿರುವ ಖಾಲಿ ಸ್ಥಳ ಉಪಯೋಗಕ್ಕೆ ಬಂದಂತಾಗುವುದು.

೪. ಕುಂಡಗಳನ್ನು ನಮಗೆ ಬೇಕೆಂದಾಗ ಬೇಕಾದ ಕಡೆ ಸ್ಥಳಾಂತರಿಸಬಹುದು. ಇದು ಒಂದು ಹೆಚ್ಚುವರಿ ಅನುಕೂಲ.

೫. ಭೂಮಿಯ ಮೇಲೆ ಬೆಳೆಯುವ ಗಿಡಗಳಿಗೆ ಹೋಲಿಸಿದಾಗ ಕುಂಡಗಳಲ್ಲಿರುವ ಸಸ್ಯಗಳನ್ನು ಕಳೆಗಳಿಂದ ಮುಕ್ತವಾಗಿರಿಸಲು ಅನುಕೂಲ ಹಾಗೂ ಕೀಟ ಮತ್ತು ರೋಗಗಳ ಹತೋಟಿ ಸುಲಭ.

ಒಟ್ಟಾರೆ ಕುಂಡಗಳಲ್ಲಿ ಸಸ್ಯಗಳ ವೈಯಕ್ತಿಕ ಕಾಳಜಿ ಹೆಚ್ಚು. ಹೀಗಾಗಿ ಅವುಗಳನ್ನು ಸದೃಢವಾಗಿ ಬೆಳೆಸಲು ಸಾಧ್ಯವಾಗುವುದು.

ವಿವಿಧ ಮಾದರಿಯ ಕುಂಡಗಳು

ಕುಂಡಗಳು ಹಲವಾರು ಬಗೆ ಮತ್ತು ವಿವಿಧ ಗಾತ್ರ ಹಾಗೂ ಆಕಾರಗಳಲ್ಲಿ ದೊರೆಯುತ್ತವೆ. ಅವುಗಳೆಂದರೆ: ೧. ಮಣ್ಣಿನಿಂದ ಮಾಡಿ ಸುಟ್ಟಂತಹ ಕಪ್ಪು ಮತ್ತು ಕೆಂಪು ಬಣ್ಣದ ಕುಂಡಗಳು, ೨. ಸಿಮೆಂಟ್ ಕುಂಡಗಳು, ೩. ಪ್ಲಾಸ್ಟಿಕ್ ಕುಂಡಗಳು/ಪಾಕೆಟ್‌ಗಳು ಮತ್ತು ೪. ಹಲಗೆ ಮತ್ತು ಲೋಹದಿಂದ ಮಾಡಿದ ಕುಂಡಗಳು ಇತ್ಯಾದಿ.

ಇವುಗಳಲ್ಲಿ ನಮಗೆ ಅನುಕೂಲಕರವಾದುವುಗಳನ್ನು ಉಪಯೋಗಿಸುವುದು ಸೂಕ್ತ. ಮಣ್ಣಿನ ಕುಂಡಗಳು ಅದರಲ್ಲೂ ಕೆಂಪು ಬಣ್ಣದವುಗಳು ನೋಡಲು ಆಕರ್ಷಕವಾಗಿರುತ್ತವೆ. ಆದರೆ ಹೆಚ್ಚು ಬಾಳಿಕೆ ಬರಲಾರವು. ಸಾಗಾಣಿಕೆ ಸಮಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುವುದು.

ಒಂದು ಕುಂಡದಿಂದ ಮತ್ತೊಂದಕ್ಕೆ ಸಸ್ಯವನ್ನು ವರ್ಗಾಯಿಸುವಾಗ ಜಾಗ್ರತೆ ವಹಿಸಬೇಕಾಗುವುದು. ಮಣ್ಣಿನ ಕುಂಡಗಳನ್ನು ಆಯ್ಕೆ ಮಾಡುವಾಗ ಗುಣಮಟ್ಟವನ್ನು ಪರೀಕ್ಷಿಸಬೇಕು. ಚೆನ್ನಾಗಿ ಸುಟ್ಟ ಹಾಗೂ ಗಟ್ಟಿಯಾದವುಗಳನ್ನೇ ಉಪಯೋಗಿಸಬೇಕು. ಏಕೆಂದರೆ ಒಮ್ಮೆ ಸಸಿಗಳನ್ನು ನಾಟಿ ಮಾಡಿದ ಮೇಲೆ ಮಧ್ಯದಲ್ಲಿ ಕುಂಡದಿಂದ ತೊಂದರೆಯುಂಟಾದರೆ ಸಸಿಗೆ ಧಕ್ಕೆ ಉಂಟಾಗುವುದು. ನಷ್ಟಕ್ಕೆ ಒಳಗಾದ ಕುಂಡಗಳಿಂದ ಸಸಿಗಳನ್ನು ಬೇರೆ ಕುಂಡಗಳಿಗೆ ತಕ್ಷಣವೇ ವರ್ಗಾಯಿಸುವುದು ಒಳ್ಳೆಯದು.

ಸಿಮೆಂಟ್ ಕುಂಡಗಳ ಬಾಳಿಕೆ ಹೆಚ್ಚು. ಹೆಚ್ಚು ಭಾರವಿರುವುದರಿಂದ ಸಾಗಾಣಿಕೆಗೆ ಕಷ್ಟ. ಸಾಕಷ್ಟು ದೊಡ್ಡ ಗಾತ್ರಗಳಲ್ಲೂ ದೊರೆಯುವ ಈ ಕುಂಡಗಳಲ್ಲಿ ಹೆಚ್ಚು ಕಾಲ ಗಿಡಗಳನ್ನು ಬೆಳೆಯಬಹುದು. ಸಾಮಾನ್ಯವಾಗಿ ಖಾಯಂ ಆಗಿ ನಾಟಿ ಮಾಡುವ ಸಮಯದಲ್ಲಿ ಸಿಮೆಂಟಿನ ಕುಂಡಗಳನ್ನು ಉಪಯೋಗಿಸುವರು.

ಸಿಮೆಂಟಿನ ಕುಂಡಗಳು ವಿವಿಧ ಕೋನಾಕೃತಿಗಳಲ್ಲಿ ಮತ್ತು ವಿನ್ಯಾಸಗಳಲ್ಲಿ ನಮಗೆ ದೊರೆಯುತ್ತವೆ. ಉತ್ತಮ ಗುಣಮಟ್ಟದವುಗಳನ್ನು ಆಯ್ಕೆ ಮಾಡಬೇಕಾಗಿರುವುದು ಅಗತ್ಯ. ಕಳಪೆ ಮಟ್ಟದ ಕುಂಡಗಳು ಮಧ್ಯೆ ಬಿರುಕು  ಬಿಡುತ್ತವೆ. ಆ ಸಮಯದಲ್ಲಿ ಅದನ್ನು ಸರಿಪಡಿಸುವುದಾಗಲೀ ಅಥವಾ ಬೇರೊಂದಕ್ಕೆ ವಗಾಯಿಸುವುದಾಗಲೀ ಸಮಸ್ಯೆ ಎನಿಸುವುದು.

ಪ್ಲಾಸ್ಟಿಕ್ ಕುಂಡಗಳು ಹೆಚ್ಚು ಅನುಕೂಲಕರ. ಸುಂದರವಾದ ಬಣ್ಣ ಮತ್ತು ವಿನ್ಯಾಸಗಳಲ್ಲಿ ಇವು ದೊರೆಯುತ್ತವೆ. ಅತಿ ಚಿಕ್ಕ ಗಾತ್ರದ ಕುಂಡಗಳನ್ನು ಪ್ಲಾಸ್ಟಿಕ್ ನಿಂದ ತಯಾರಿಸಬಹುದು. ಸಾಗಾಣಿಕೆ ಸುಲಭ. ಮನೆಗಳಲ್ಲಿ ಉಪಯೋಗಿಸಲು ಅನುಕೂಲ. ಆದರೆ ಅತಿ ದೊಡ್ಡ ಗಾತ್ರದ ಪ್ಲಾಸ್ಟಿಕ್ ಕುಂಡಗಳು ದೊರಯುವುದು ಕಷ್ಟ.

ಮರದ ಹಲಗೆ ಮತ್ತು ಲೋಹದಿಂದ ಮಾಡಿದ ಕುಂಡಗಳು ಬಳಕೆಯಲ್ಲಿ ಅಷ್ಟಾಗಿ ಇಲ್ಲ. ಏಕೆಂದರೆ ಇವುಗಳ ಬೆಲೆ ದುಬಾರಿ. ಬಾಳಿಕೆಯೂ ಕಡಿಮೆ.

ಕುಂಡಗಳನ್ನು ಸೆಂ.ಮೀ. ಗಳಲ್ಲಿ ಅಳತೆ ಮಾಡುವರು. ಸುಮಾರು ೫-೪೫ ಸೆಂ.ಮೀ ಅಳತೆಯ ಕುಂಡಗಳು ಎಲ್ಲೆಡೆ ದೊರೆಯುವುವು. ಗಿಡದ ಗಾತ್ರ, ಬೆಳೆಯುವ ರೀತಿ ಮತ್ತು ವಯಸ್ಸಿಗನುಗುಣವಾಗಿ ಕುಂಡಗಳನ್ನು ಬಳಸಬೇಕಾಗುವುದು.

೫-೧೫ಸೆಂ.ಮೀ. ಅಳತೆಯ ಕುಂಡಗಳಲ್ಲಿ ಚಿಕ್ಕ ಸಸಿಗಳನ್ನು ನಾಟಿ ಮಾಡಬಹುದು. ವಾರ್ಷಿಕ ಗಿಡಗಳಿಗೆ ೨೨ ಸೆಂ.ಮೀ ಅಳತೆಯ ಕುಂಡಗಳು ಮತ್ತು ಬಹು ವಾರ್ಷಿಕ ಗಿಡಗಳಿಗೆ ಸುಮಾರು ೩೫-೪೫ ಸೆಂ.ಮೀ. ಇರುವ ಕುಂಡಗಳು ಸಾಕಾಗುತ್ತವೆ. ಕುಂಡಗಳಲ್ಲಿ ಬಳ್ಳಿಗಳನ್ನೂ ಬೆಳೆಯಬಹುದು. ೩೫ ಸೆಂ.ಮೀ. ವ್ಯಾಸವಿರುವ ಕುಂಡಗಳು ಬಳ್ಳಿ ಬೆಳೆಯಲು ಸೂಕ್ತ.

ಕುಂಡಗಳನ್ನು ತುಂಬಿಸುವುದು

ಕುಂಡಕ್ಕೆ ಮಿಶ್ರಣವನ್ನು ಸಿದ್ಧಪಡಿಸಿಟ್ಟುಕೊಂಡು ಕ್ರಮಬದ್ಧವಾಗಿ ಕುಂಡಗಳಿಗೆ ತುಂಬಿ ಸಸಿಗಳನ್ನು ನಾಟಿ ಮಾಡಬೇಕು. 

 ಕುಂಡಗಳನ್ನು ತುಂಬುವ ಮೊದಲು ಸ್ವಚ್ಛಗೊಳಿಸಬೇಕು. ಮಣ್ಣಿನ ಕುಂಡಗಳು ಹೊಸವಾದರೆ ನೀರಿನಲ್ಲಿ ನೆನೆಸಿ ನಂತರ ಉಪಯೋಗಿಸಬೇಕು. ಕುಂಡದ ತಳದಲ್ಲಿ ಅಥವಾ ತಳದ ಪಾರ್ಶ್ವದಲ್ಲಿ ಸಣ್ಣ ರಂಧ್ರ ಸರಿಯಾಗಿರುವುದನ್ನು ಗಮನಿಸಬೇಕು. ನಂತರ ರಂಧ್ರದ ಮೇಲೆ ಮಡಿಕೆಯ ಚೂರು ಇಲ್ಲವೇ ತೆಂಗಿನ ನಾರಿನಿಂದ ಮುಚ್ಚಬೇಕು. ಇದರಿಂದ ಕುಂಡಗಳಿಂದ ಹೆಚ್ಚುವರಿ ನೀರು ಬಸಿದು ಹೋಗಲು ಅನುಕೂಲವಾಗುವುದು.

ನಂತರ ಕುಂಡಕ್ಕೆ ಮಿಶ್ರಣವನ್ನು ತುಂಬಬೇಕು. ಪೂರ್ತಿಯಾಗಿ ಕುಂಡ ತುಂಬಿದ ಮೇಲೆ ಸುಮಾರು ೧.೨೫ ಸೆಂ.ಮೀ. ಸ್ಥಳ ಬಿಡಬೇಕು. ಆಮೇಲೆ ಮಣ್ಣಿನ ಉಂಡೆಯೊಂದಿಗಿನ ಸಸ್ಯವನ್ನು ಅಥವಾ ತುಂಡಗಳನ್ನು ಸೂಕ್ತವಾದ ಆಳಕ್ಕೆ ನಾಟಿ ಮಾಡಿ ನೀರು ಕೊಡಬೇಕು. ನೀರು ಹಾಕಲು ನೀರು ಹನಿಸುವ ಡಬ್ಬಗಳನ್ನು ಬಳಸುವುದು ಸೂಕ್ತ.

ಕುಂಡ ಮಿಶ್ರಣ: ಕುಂಡ ಮಿಶ್ರಣ ಸತ್ವಭರಿತವಾಗಿದ್ದು ನೀರು ಸುಲಭವಾಗಿ ಬಸಿದು ಹೋಗುವಂತಿರಬೇಕು. ಮೇಲ್ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರಗಳನ್ನು ಸಮ ಪ್ರಮಾಣದಲ್ಲಿ ಮಿಶ್ರ ಮಾಡಬೇಕು. ಕೊಟ್ಟಿಗೆ ಗೊಬ್ಬರ ಚೆನ್ನಾಗಿ ಕಳಿತಿರಬೇಕು. ಕಸಕಡ್ಡಿ ಇತ್ಯಾದಿಗಳನ್ನು ಆರಿಸಿ ಹದವಾದ ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರಗಳನ್ನು ಬ್ಯಾವಿಸ್ಟೀನ್ ಶಿಲೀಂಧ್ರನಾಶಕದಿಂದ ಸಿಂಪಡಿಸಿ ನಂತರ (ಪ್ರತಿ ಲೀಟರ್‌‌ನೀರಿಗೆ ೨ಗ್ರಾಂ) ಕುಂಡಗಳಿಗೆ ತುಂಬಬೇಕು. ಇದರಿಂದ ಶಿಲೀಂಧ್ರ ರೋಗಗಳನ್ನು ತಡೆಗಟ್ಟಬಹುದು.

ಕುಂಡಗಳಲ್ಲಿ ಮರುನಾಟಿ

ಕುಂಡಗಳಲ್ಲಿನ ಪೋಷಕಾಂಶಗಳು ಗಿಡದ ಬೆಳವಣಿಗೆಗೆ ಸಾಲದೇ ಇರುವಾಗ ಮತ್ತು ಗಿಡ ಸದೃಢವಾಗಿ ಬೆಳೆಯಲು ಹೊಸ ಮಿಶ್ರಣ ತುಂಬಿದ ಬೇರೊಂದು ಕುಂಡಕ್ಕೆ ವರ್ಗಾಯಿಸುವ ಕ್ರಮವೇ ಕುಂಡದ ಮರು ನಾಟಿ. 

ಚಿತ್ರ ೧೪ರಲ್ಲಿ ತೋರಿಸಿರುವಂತೆ ಎಡಗೈನ ಎರಡು ಬೆರಳುಗಳ ಮಧ್ಯೆ ಗಿಡದ ಕಾಂಡವನ್ನು ಸಿಕ್ಕಿಸಿಕೊಂಡು, ಬಲ ಅಂಗೈಯನ್ನು ಕುಂಡದ ತಳಭಾಗದಿಂದ ಕೆಳಕ್ಕೆ ನಿಧಾನವಾಗಿ ಬಡಿದು, ಗಿಡ ಕುಂಡದಿಂದ ಹೊರಕ್ಕೆ ಬರುವಂತೆ ತಗೆಯಬೇಕು. ನಂತರ ಸಿದ್ಧವಾಗಿರುವ ಹೊಸ ಮಿಶ್ರಣ ತುಂಬಿದ ಬೇರೊಂದು ಕುಂಡಕ್ಕೆ ವರ್ಗಾಯಿಸಿ ನಾಟಿ ಮಾಡಬೇಕು. ಹೀಗೆ ಹೊಸ ಕುಂಡಕ್ಕೆ ವರ್ಗಾಯಿಸುವಾಗ ಕುಂಡ ಮೊದಲಿನಷ್ಟಿರಬಹುದು ಅಥವಾ ಸ್ವಲ್ಪ ದೊಡ್ಡದಾಗಿರಬಹುದು.

ಗಿಡವನ್ನು ಕುಂಡದಿಂದ ಹೊರತೆಗೆದು ಪುನಃ ನೆಡುವುದು: ಮುಖ್ಯ ಕ್ಷೇತ್ರದಲ್ಲಿ ನಾಟಿ ಮಾಡಬೇಕಾಗಿರುವ ಸಂದರ್ಭದಲ್ಲಿ, ಕುಂಡದಿಂದ ಅಂತಿಮವಾಗಿ ಗಿಡವನ್ನು ಬೇರ್ಪಡಿಸಬೇಕಾಗುವುದು. ಕುಂಡದ ಮರು ನಾಟಿಯಲ್ಲಿ ಗಿಡವನ್ನು ಕುಂಡದಿಂದ ಹೊರ ತೆಗೆಯಬೇಕು. ಉಂಡೆ/ಹೆಪ್ಪು ಬೇರುಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಿ ಮಣ್ಣಿನೊಂದಿಗೆ ಗಿಡವನ್ನು ಹೊರ ತೆಗೆಯಬೇಕು.

ನಂತರ ನಾಟಿ ಮಾಡುವ ಕ್ಷೇತ್ರದಲ್ಲಿ ಶಿಫಾರಸು ಮಾಡಿದ ಅಳತೆಯಲ್ಲಿ ಗುಂಡಿಗಳನ್ನು ತೋಡಿ ಮಣ್ಣು, ಗೊಬ್ಬರ ಮತ್ತು ಮರಳು ಮಿಶ್ರಣ ತುಂಬ ಬೇಕು. ನಾಟಿ ಮಾಡುವ ಸಮಯದಲ್ಲಿಯೇ ಗಿಡವನ್ನು ಕುಮಡದಿಂದ ಬೇರ್ಪಡಿಸಬೇಕು. ಹೀಗೆ ಬೇರ್ಪಡಿಸಿದ ಗಿಡವನ್ನು ಗುಮಡಿಯ ಮಧ್ಯ ಭಾಗದಲ್ಲಿ ಸೂಕ್ತವಾದ ಆಳಕ್ಕೆ ನಾಟಿ ಮಾಡಬೇಕು. ನಂತರ ಗಿಡದ ಸುತ್ತಲ ತರಗೆಲೆಗಳನ್ನು ಹರಡಿ ತೇವಾಂಶ ಕಾಪಾಡುವ ವ್ಯವಸ್ಥೆ ಮಾಡುವುದು ಒಳ್ಳೆಯದು. ನಿಯಮಿತವಾಗಿ ನೀರು ಪೂರೈಕೆ ಮಾಡುತ್ತಾ ಕ್ಷೇತ್ರವನ್ನು ಕಳೆಗಳಿಂದ ಮುಕ್ತವಾಗಿರಿಸಬೇಕು.

ರೆಂಬೆಯ ತುಂಡುಗಳಿಂದ ಬೇರು ಬರಿಸಿ ನಾಟಿ ಮಾಡುವ ಪದ್ಧತಿಯಲ್ಲಿ ಪಾಲಿಥೀನ್ ಚೀಲಗಳನ್ನು ಉಪಯೋಗಿಸುವುದು ಸೂಕ್ತ. ವಿವಿಧ ಗಾತ್ರದ ಪಾಲಿಥೀನ್ ಚೀಲಗಳು ದೊರೆಯುತ್ತವೆ. ಕುಂಡಕ್ಕೆ ಮಿಶ್ರಣ ತುಂಬಿದ ಹಾಗೆ ಈ ಚೀಲಗಳಿಗೂ ತುಂಬಿ ತುಂಡುಗಳನ್ನು ನಾಟಿ ಮಾಡಬಹುದು. ಬೇರೆ ಬಂದ ಬಳಿಕ ಕುಂಡದಲ್ಲಿ ಇಲ್ಲವೇ ನಾಟಿ ಕ್ಷೇತ್ರದಲ್ಲಿ ನೆಡಬಹುದು. ಇಂತಹ ಚೀಲಗಳಲ್ಲಿ ಮಿಶ್ರಣ ತುಂಬಿ ನೀರು ಪೂರೈಕೆ ಮಾಡಿ ಹದಗೊಳಿಸಿ ಬೀಜ ಬಿತ್ತನೆ ಮಾಡಿಯೂ ಸಸಿ ಬೆಳೆಸಬಹುದು. ಮೊದಲ ಹಂತದಲ್ಲಿ ಸಸಿ ಬೆಳೆಸಲು ಪಾಲಿಥೀನ್ ಚೀಲಗಳು ಹೆಚ್ಚು ಪ್ರಯೋಜನಕಾರಿ.

ಕಡಿಮೆ ವೆಚ್ಚದಲ್ಲಿ ಪಾಲಿಥೀನ್ ಚೀಲಗಳಲ್ಲಿ ಹೆಚ್ಚು ಸಸಿಗಳನ್ನು ಬೆಳೆಸಲು ಸಾಧ್ಯ. ಚೀಲಗಳಲ್ಲಿ ಬೀಜ ಬಿತ್ತನೆ ಮಾಡಿಯಾಗಲೀ ಅಥವಾ ತುಂಡು ನಾಟಿ ಮಾಡಿದ ಮೇಲೆ ಚೀಲಗಳಲ್ಲಿ ಕಳೆ ಹಾಗೂ ಇತರ ಸಸ್ಯ ಕಳೆ ಬೆಳೆಯದಂತೆ ಎಚ್ಚರ ವಹಿಸಬೇಕು. ಇಲ್ಲವಾದರೆ ಇರುವ ಪೋಷಕಾಂಶಗಳು ಮತ್ತು ನೀರು ವ್ಯರ್ಥವಾಗುವುದಲ್ಲದೇ ಸಸಿಗಳ ಬೆಳವಣಿಗೆಯೂ ಕುಂಠಿತಗೊಳ್ಳುವುದು.

ಚೀಲಗಳ ಕೆಳಗೆ ಪಾಲಿಥೀನ್ ಹಾಳೆಯನ್ನು ಹಾಸಿದ್ದರೆ ಭೂಮಿಯಿಂದ ಚೀಲಗಳ ನಡುವೆ ಇತರೆ ಕಳೆ ಸಸಿಗಳು ಬೆಳೆಯುವುದು ತಪ್ಪುತ್ತದೆ ಹಾಗೂ ಪಾಲಿಥೀನ್ ಚೀಲಗಳಿಂದ ಸಸಿಗಳ ಬೇರು ಹೊರಬಂದು ಭೂಮಿಯೊಳಗೆ ಇಳಿಯುವ ಸಂದರ್ಭಗಳು ಇರುತ್ತವೆ. ಆದ್ದರಿಂದ ಕುಂಡದ ಕೆಳಗೆ ಈ ರೀತಿ ಪಾಲಿಥೀನ್ ಹಾಳೆ ಹಾಸುವುದು ಉತ್ತಮ.

ಕೈತೋಟದಲ್ಲಿ ಹೂವು ಮತ್ತು ಅಲಂಕಾರಿಕಾ ಬೆಳೆಗಳ ಬೇಸಾಯ

. ಗುಲಾಬಿ: ಗುಲಾಬಿ ’ಹೂವುಗಳ ರಾಣಿ’ ಎಂದು ಪ್ರಸಿದ್ಧಿಯಾಗಿದೆ. ಇದಕ್ಕೆ ಆಕರ್ಷಿತರಾಗದವರಿಲ್ಲ. ಇದನ್ನು ಬಿಡಿಹೂವುಗಳಿಗಾಗಿಯೇ ಹೆಚ್ಚಾಗಿ ಬೆಳೆಯುವರು. ನಮ್ಮ ರಾಜ್ಯದಲ್ಲಿ ಹೆಚ್ಚು ಜನಪ್ರಿಯವಾದ ಹೂವಿನ ಬೆಳೆ ಇದಾಗಿದೆ.

ತಂಪಾದ ಹಾಗೂ ಒಣ ಹವೆ ಈ ಬೆಳೆಗೆ ಸೂಕ್ತ. ನೀರು ಸರಿಯಾಗಿ ಬಸಿದು ಹೋಗುವ ಮರಳುಮಿಶ್ರಿತ ಕೆಂಪು ಮಣ್ಣು ಈ ಬೆಳೆಗೆ ಸೂಕ್ತ. ಗಿಡಗಳನ್ನು ಜೂನ್-ಅಕ್ಟೋಬರ್‌‌ತಿಂಗಳವರೆಗೆ ನಾಟಿ ಮಾಡಬಹುದು.

ಗುಲಾಬಿ ತಳಿಗಳು ಅಮೆರಿಕನ್ ಹೆರಿಟೇಜ್, ಅಮೆರಿಕನ್ ಹೋಮ್, ಸೂಪರ್‌‌ಸ್ಟಾರ್‌‌, ಬ್ಲಾಕ್ ರೂಬಿ, ಪೂಸಾ ಸೋನಿಯಾ, ಸ್ವೀಟ್ ಹಾರ್ಟ್‌, ಬೇಬಿ ರೋಸ್, ರಾಣಿ ಎಲಿಜಬೆತ್, ಮಾಂಟಿಜೂಮ, ಕರೋನ್ ಇತ್ಯಾದಿ ತಳಿಗಳು ಜನಪ್ರಿಯವಾಗಿದ್ದು, ಈ ತಳಿಗಳಲ್ಲಿ ಕೆಂಪು, ಬಿಳಿ, ಹಳದಿ, ಗುಲಾಬಿ ಬಣ್ಣದ ತಳಿಗಳನ್ನೂ ಕಾಣಬಹುದು.

ಇದನ್ನು ಮಡಿಗಳಲ್ಲಿ ಬೆಳಯಬೇಕಿದ್ದರೆ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ೪೫ ಘನ ಸೆಂ.ಮೀ. ಗಾತ್ರದ ಗುಂಡಿ ತೋಡಿ ಗೊಬ್ಬರ ಮಿಶ್ರಣ ತುಂಬಿ, ಸಂಕೀರ್ಣ ತಳಿಗಳಿಗೆ ೭೫ ಸೆಂ.ಮೀ. x ೭೫ಸೆಂ.ಮೀ ಮತ್ತು ಉಳಿದವುಗಳಿಗೆ ೬೦ ಸೆಂ.ಮೀ x ೬೦ ಸೆಂ.ಮೀ ಅಂತರ ಕೊಟ್ಟು ನೆಡಬೇಕು. ಕಣ್ಣು ಹಾಕಿದ ಸಸಿಗಳನ್ನು ನಾಟಿಗೆ ಉಪಯೋಗಿಸುವುದು ಸೂಕ್ತ.

ಸಸಿಗಳನ್ನು ಗುಂಡಿಯ ಮಧ್ಯ ಭಾಗದಲ್ಲಿ ನೆಟ್ಟು ಕೋಲಿನಾಸರೆ ಕೊಡಬೇಕು. ವಾತಾವರಣವನ್ನನುಸರಿಸಿ ನೀರು ಪೂರೈಕೆ ಮಾಡಬೇಕು. ಗುಲಾಬಿ ಮಿಶ್ರಣವು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಗಿಡಗಳನ್ನು ಸವರಿದ ಒಂದು ವಾರದ ನಂತರ ಪ್ರತಿ ಗಿಡಕ್ಕೆ ೧೦೦ ಗ್ರಾಂ ಈ ಮಿಶ್ರಣವನ್ನು ಕೊಡಬೇಕಾಗುವುದು.

ಕಸಿ ಗಂಟಿನ ಕೆಳಭಾಗದಲ್ಲಿ ಬರುವ ಚಿಗುರನ್ನು ತೆಗೆದುಹಾಕಬೇಕು. ಗಿಡಗಳನ್ನು ಮೇ-ಜೂನ್ ಮತ್ತು ಅಕ್ಟೋಬರ್‌‌ನವೆಂಬರ್‌‌ತಿಂಗಳುಗಳಲ್ಲಿ ಸವರಬೇಕು ಮತ್ತು ಹೂವುಗಳನ್ನು ದೊಡ್ಡದಾಗಿ ಬೆಳೆಸಲು ಗಿಡದಲ್ಲಿ ಮೊಗ್ಗುಗಳನ್ನು ಕಡಿಮೆ ಮಾಡಬೇಕು. ಗಿಡಗಳನ್ನು ಸವರಿದ ನಂತರ ೪೦-೫೦ದಿನಗಳಲ್ಲಿ ಹೂವುಗಳು ಕೊಯ್ಲಿಗೆ ಬರುತ್ತವೆ. ಬೆಳಗಿನ ಅಥವಾ ಸಂಜೆಯ ವೇಳೆಯಲ್ಲಿ ಕೊಯ್ಲು ಮಾಡಬೇಕು. ಹೂವುಗಳನ್ನು ಕೊಯ್ಲು ಮಾಡುವಾಗ ಸುಮಾರು ೩೦ ಸೆಂ.ಮೀ. ಉದ್ದದ ಕಾಂಡದೊಂದಿಗೆ ಕತ್ತರಿಸಬೇಕು.

. ಆಂತೂರಿಯಂ: ಇದೊಂದು ಅಲಂಕಾರಿಕ ಸಸ್ಯ. ನೆರಳನ್ನು ಬಯಸುವ ಇದು ಆಕರ್ಷಕ ಹೂವು ಮತ್ತು ಎಲೆಗಳನ್ನು ಹೊಂದಿದೆ. ದೊಡ್ಡದೊಡ್ಡ ಸಮಾರಂಭಗಳಲ್ಲಿ ಶೋಭೆಗಾಗಿ ಈ ಹೂವುಗಳನ್ನು ಬಳಸುವುದುಂಟು. ತುಂಬಾ ಬೇಡಿಕೆ ಇರುವ ಹೂವುಗಳಲ್ಲು ಆಂತೂರಿಯಂ ಕೂಡಾ ಒಂದಾಗಿದೆ.

ಹೆಚ್ಚು ಉಷ್ಣವಿರುವ ಪ್ರದೇಶಗಳು ಇದನ್ನು ಬೆಳೆಯಲು ಸೂಕ್ತವಲ್ಲ. ವಿವಿಧ ಬಗೆಯ ತಳಿಗಳು ಬೇಸಾಯದಲ್ಲಿವೆ. ಬೀ ಮತ್ತು ಸಸಿಗಳಿಂದ ಸಸ್ಯೋತ್ಪಾದನೆ ಮಾಡಬಹುದು. ಅಂಗಾಂಶ ಕೃಷಿಯಿಂದಲೂ ಸಸಿಗಳನ್ನು ಪಡೆಯಬಹುದು. ಕುಂಡಗಳಲ್ಲಿ ಯಶಸ್ವಿಯಾಗಿ ಬೆಳೆಯಬಹುದು. ಮಳೆಗಾಲದಲ್ಲಿ ಹೆಚ್ಚು ಹೂವುಗಳನ್ನು ಪಡೆಯಬಹುದು. ಹೂವುಗಳು ಸುಮಾರು ನಾಲ್ಕು ವಾರಗಳವರೆಗೆ ತಾಜಾತನ ಕಾಯ್ದುಕೊಳ್ಳುತ್ತವೆ. ಗಿಡವೊಂದರಿಂದ ಸುಮಾರು ೧೦-೧೨ ಹೂವುಗಳನ್ನು ಪಡೆಯಬಹುದು.

. ಜರ್ಬೆರಾ: ಇದು ಸೂರ್ಯಕಾಂತಿ ಜಾತಿಗೆ ಸೇರಿದ ಹೂವಿನ ಬೆಳೆ. ಬಹು ವಾರ್ಷಿಕ ಗಿಡ. ಇದನ್ನು ’ಆಫ್ರಿಕನ್ ಡೇಸಿ’ ಎಂದೂ ಕರೆಯುವರು. ಅಲಂಕಾರಕ್ಕಾಗಿ ಬೆಳೆಯುವ ಜರ್ಬೆರಾ ಹೂವಿನ ಬೆಳೆಯನ್ನು ಮಡಿ ಮತ್ತು ಕುಂಡಗಳಲ್ಲಿ ಬೆಳೆಯಬಹುದು. ಹೂವಿನ ತೋಟಗಳಲ್ಲಿ ಜರ್ಬೆರಾ ಬೆಳೆ ಅಂದವಾಗಿ ಕಾಣುವುದು. ಹೂವಿನ ದಾನಿಗಳಲ್ಲಿ ಜೋಡಿಸಲು ಜರ್ಬೆರಾ ಉಪಯೋಗಿಸುತ್ತಾರೆ.

ಬೀಜದಿಂದ ಅಥವಾ ಕಂದುಗಳಿಂದ ಸಸ್ಯೋತ್ಪಾದನೆ ಮಾಡಬಹುದು. ವಿವಿಧ ಬಣ್ಣದ ತಳಿಗಳನ್ನು ಜರ್ಬೆರಾ ಹೊಂದಿದೆ. ಬಿಳಿ, ಕೆಂಪು, ಹಳದಿ, ಗುಲಾಬಿ ಬಣ್ಣಗಳು ಮುಖ್ಯವಾದುವುಗಳು.

೩೦ಸೆಂ.ಮೀ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಬೇಕು. ನಾಟಿ ಮಾಡಿದ ಎರಡು ತಿಂಗಳಿಗೆ ಹೂವುಗಳನ್ನು ಪಡೆಯಬಹುದು. ಉದ್ದದ ತೊಟ್ಟಿನೊಂದಿಗೆ ಹೂವುಗಳನ್ನು ಕೊಯ್ಲು ಮಾಡಬೇಕು. ಸುಮಾರು ಮೂರು ವರ್ಷಗಳವರೆಗೆ ಹೂವು ಸಿಗುತ್ತಿರುತ್ತದೆ.

. ಕಾರ್ನೇಶನ್: ಕಾರ್ನೇಶನ್ ಹೂವಿನ ದಾನಿಗಳಲ್ಲಿಡಲು ಮತ್ತು ಹೂವಿನ  ಮಾಡಲೆ ತಯಾರಿಸಲು ಬೆಳೆಯುವರಲ್ಲದೇ ಸುಗಂಧ ದ್ರವ್ಯ ತೆಗೆಯಲೂ ಉಪಯೋಗಿಸುತ್ತಾರೆ. ಇದನ್ನು ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯಬಹುದು. ಮಡಿ ಮತ್ತು ಕುಂಡಗಳಲ್ಲಿಯೂ ಬೆಳೆಯಬಹುದು. ಬೀಜ ಬಿತ್ತನೆ ಮಾಡಿ ಇಲ್ಲವೆ ಕಾಂಡದ ತುಂಡು ನಾಟಿ ಮಾಡಿ ಬೇರು ಬರಸಿ ನಂತರ ನಾಟಿ ಮಾಡಬಹುದು.

ನಾಟಿ ಮಾಡುವಾಗ ೩೦ ಸೆಂ.ಮೀ x ೩೦ ಸೆಂ.ಮೀ ಅಂತರ ನೀಡಬೇಕು. ಪೂರ್ಣ ಅರಳಿದ ಹೂವುಗಳನ್ನು ಕೊಯ್ಲು ಮಾಡಬೇಕು. ತೊಟ್ಟು ಮತ್ತು ಎಲೆಗಳೊಂದಿಗೆ ಹೂವುಗಳನ್ನು ಕಟಾವು ಮಾಡಬೇಕು. ನಾಟಿ ಮಾಡಿದ ನಾಲ್ಕು ತಿಂಗಳ ನಂತರ ಹೂವು ಕಾಣಿಸಿಕೊಳ್ಳುತ್ತವೆ.

. ಅಕ್ಯಾಲಿಫ: ಅಕ್ಯಾಲಿಫ ಒಳಾಂಗಣದಲ್ಲಿ ಬೆಳೆಯುವ ಅಲಂಕಾರಿಕ ಸಸ್ಯ. ನೆರಳು ಮತ್ತು ಬಿಸಿಲುಗಳೆರಡರಲ್ಲೂ ಸಮೃದ್ಧಿಯಾಗಿ ಬೆಳೆಯುವುದು. ಇದು ಪೊದೆಯಾಕಾರದ ಗಿಡ. ಎಲೆಗಳು ಅಗಲವಾಗಿದ್ದು ವಿವಿಧ ಬಣ್ಣಗಳನ್ನು ಹೊಂದಿರುತ್ತವೆ. ಸಣ್ಣ ಎಲೆಗಳನ್ನು ಹೊಂದಿದ ಇದರ ಮತ್ತೊಂದು ಪ್ರಭೇದವೂ ಉಂಟು. ಕೊಂಬೆಗಳನ್ನು ನೆಟ್ಟು ಮತ್ತು ಕುಂಡಗಳಲ್ಲಿ ಗೊಬ್ಬರ ಮಿಶ್ರಣ ತುಂಬಿ ನಾಟಿ ಮಾಡಿ ಬೆಳೆಸಬಹುದು.

. ಕ್ಯಾಕ್ಟಸ್: ಕ್ಯಾಕ್ಟಸ್‌ಗಳು ಕಳ್ಳಿ ಜಾತಿಗೆ ಸೇರಿದವುಗಳಾಗಿವೆ. ಅಂದಕ್ಕೋಸ್ಕರ ಇವುಗಳನ್ನು ಬೆಳೆಸುವರು. ಕ್ಯಾಕ್ಟಸ್‌ನಲ್ಲಿ ವಿವಿಧ ಬಗೆಯ ಆಕಾರ ಹೊಂದಿದ ಗಿಡಗಳಿವೆ. ಕೆಲವು ಜಾತಿಗಳು ಹೂವುಗಳನ್ನೂ ಬಿಡುತ್ತವೆ. ಕ್ಯಾಕ್ಟಸ್‌ಗಳನ್ನು ಬೀಜದಿಂದ ಅಭಿವರದ್ಧಿ ಪಡಿಸಬಹುದು ಮತ್ತು ಕಾಂಡದ ತುಂಡುಗಳನ್ನೂ ಸಸ್ಯಾಭಿವೃದ್ಧಿಗೆ ಉಪಯೋಗಿಸಬಹುದಾಗಿದೆ. ಮನೆ ಮುಂದೆ ಬೆಳೆಸಲು ’ಪೆನೇರಿಸ್’, ’ಫ್ಯಾಸ್ಟೀವಿಯಂ’ ಕ್ಯಾಕ್ಟಸ್‌ಗಳು ಉತ್ತಮ. ಕುಂಡಗಳಲ್ಲೂ ಕ್ಯಾಕ್ಟಸ್‌ಗಳನ್ನು ಯಶಸ್ವಿಯಾಗಿ ಬೆಳೆಸಬಹುದು. ಇವುಗಳಿಗೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲ.

. ಶೀತಾಳೆ ಗಿಡಗಳು: ಶೀತಾಳೆ ಗಿಡಗಳದೇ ಒಂದು ಪ್ರತ್ಯೇಕ ಲೋಕ. ಇವುಗಳನ್ನು ಎಲ್ಲೆಡೆ ಬೆಳೆಯುವುದು ಕಷ್ಟ. ಆದರೆ ಕೆಲವನ್ನಾದರೂ ಕೈತೋಟದಲ್ಲಿ ಬೆಳೆಯಬಹುದು. ಹೆಚ್ಚು ತೇವಾಂಶ ಮತ್ತು ನೇರ ಬಿಸಿಲು ಬೀಳುವ ಸ್ಥಳ ಶೀತಾಳೆ ಗಿಡಗಳನ್ನು ಬೆಳೆಯಲು ಆಯ್ಕೆ ಮಾಡಿಕೊಳ್ಳಬೇಕು. ಕೆಲವುಗಳನ್ನು ಮನೆಯ ಹತ್ತಿರ ಕುಂಡಗಳಲ್ಲಿ ಬೆಳೆಯಬಹುದು. ಅಂತಹವುಗಳನ್ನು ಆಯ್ಕೆ ಮಾಡಿಕೊಂಡು ಬೆಳೆಯಬಹುದು. ಶೀತಾಳೆ ಗಿಡಗಳಿಂದ ಸಾಕಷ್ಟು ಆದಾಯ ಬರುತ್ತದೆ. ಸಭೆ ಸಮಾರಂಭಗಳು,  ಸಾಂಪ್ರದಾಯಿಕ ಕಾರ್ಯಕ್ರಮಗಳು, ಮನರಂಜನಾ ಸ್ಥಳಗಳು, ಕಚೇರಿ ಕಟ್ಟಡಗಳಲ್ಲಿ ಇವುಗಳನ್ನು ಬಳಸುವುದು ಹೆಚ್ಚುತ್ತಿದೆಯಲ್ಲದೇ ಶೀತಾಳೆ ಗಿಡಗಳನ್ನು ಬೆಳೆಯುವುದು ಒಂದು ಉತ್ತಮ ಹವ್ಯಾಸವೆನ್ನಬಹುದು.

* * *