I – ಅನ್ವಯಾನುಕ್ರಮ

ವಾಕ್ಯದಲ್ಲಿ ಕರ್ತೃಪದ ಮೊದಲು, ಕರ್ಮಪದ ಆನಂತರ, ಕ್ರಿಯಾಪದ ಕೊನೆಯಲ್ಲಿ ಬರುತ್ತದೆ.  ವಿಶೇಷಣಗಳು ಆಯಾಯ ಪದಗಳ ಹಿಂದೆ ಇರುತ್ತವೆ. ಇದು ಸಾಮಾನ್ಯ ನಿಯಮ.

ಉದಾಹರಣೆಗೆ:

‘ಮಹಾಶೂರನಾದ ಶ್ರೀ ರಾಮಚಂದ್ರನು ದುಷ್ಟನಾದ ರಾವಣನನ್ನು ತೀಕ್ಷ್ಣವಾದ ಬಾಣಗಳಿಂದ ಕೊಂದನು’.

ಇಲ್ಲಿ- ಶ್ರೀರಾಮಚಂದ್ರನು – ಕರ್ತೃ

ರಾವಣನನ್ನು – ಕರ್ಮ

ಕೊಂದನು – ಕ್ರಿಯಾಪದ

ಮೊದಲು ಕರ್ತೃಪದ; ಅದರ ಹಿಂದೆ ಆ ಕರ್ತೃಪದಕ್ಕೆ ವಿಶೇಷಣವಾದ ಮಹಾಶೂರನಾದ ಎಂಬ ವಿಶೇಷಣ, ಅನಂತರ ಕರ್ಮಪದ, ಅದರ ಹಿಂದೆ ಅದರ ವಿಶೇಷಣವಾದ ದುಷ್ಟನಾದ ಎಂಬ ವಿಶೇಷಣ[1].  ಅನಂತರ ಕ್ರಿಯಾಪದ; ಅದರ ಹಿಂದೆ ಯಾವ ಸಾಧನದಿಂದ ಕೊಂದನೋ ಆ ಸಾಧನವೇ ಕ್ರಿಯಾವಿಶೇ

ಷಣವಾಗಿ ಕ್ರಿಯಾಪದದ ಹಿಂದೆ ಬಂದಿದೆ.

ಈ ಅನ್ವಯಾನುಕ್ರಮವೂ ವ್ಯತ್ಯಾಸವಾಗಿ ಹೀಗೆಯೂ ಆಗಬಹುದು-

’ದುಷ್ಟನಾದ ರಾವಣನನ್ನು, ತೀಕ್ಷ್ಣವಾದ ಬಾಣಗಳಿಂದ ಮಹಾಶೂರನಾದ, ಶ್ರೀರಾಮಚಂದ್ರನು ಕೊಂದನು’.

ಇಲ್ಲಿ ಮೊದಲು ಕರ್ಮಪದ ಮತ್ತು ಅದರ ವಿಶೇಷಣ, ಅನಂತರ ಕ್ರಿಯೆಗೆ ಸಾಧನವಾದ ಬಾಣಗಳಿಂದ ಎಂಬಪದ; ಅನಂತರ ಮಹಾಶೂರನಾದ ರಾಮನು ಎಂಬ ಕರ್ತೃಪದ ಮತ್ತು ಅದರ ವಿಶೇಷಣ; ಕೊನೆಯಲ್ಲಿ ಕ್ರಿಯಾಪದ.  ಹೀಗೆ ಅನನ್ವಯವಾಗಿಯೂ ಇರುವುದುಂಟು.  ಪದ್ಯಗಳಲ್ಲಿ ಈ ರೀತಿಯು ವಿಶೇಷವಾಗಿ ಬರುತ್ತದೆ.  ಏಕೆಂದರೆ ಅವರು (ಪದ್ಯ ಬರೆಯುವವರು) ಪ್ರಾಸ, ಛಂದಸ್ಸು, ಗಣ-ಇತ್ಯಾದಿಗಳನ್ನು ಪಾಲಿಸುವುದಕ್ಕೋಸುಗ ಕರ್ತೃ, ಕರ್ಮ, ಕ್ರಿಯಾಪದಗಳನ್ನು ಕ್ರಮವಾಗಿ ಬರೆದಿರುವುದಿಲ್ಲ.  ನಾವು ಆ ಪದ್ಯಕ್ಕೆ ಅರ್ಥ ಹೇಳುವಾಗ ಅನ್ವಯಕ್ರಮದಲ್ಲಿಯೇ ಹೇಳಬೇಕಾಗುವುದು.  ಅಂದರೆ ಮೊದಲು ಕರ್ತೃಪದವನ್ನು ಆ ಪದ್ಯದಲ್ಲಿ ಹುಡುಕಿ, ಅನಂತರ ಕರ್ಮಪದ ಹುಡುಕಿ, ಕೊನೆಗೆ ಕ್ರಿಯಾಪದದ ಅರ್ಥ ಹೇಳಬೇಕು.  ಹೀಗೆ ಪದ್ಯಕ್ಕೆ ಅರ್ಥ ಹೇಳುವುದನ್ನೇ ಅನ್ವಯಾನುಕ್ರಮದಲ್ಲಿ ಅರ್ಥ ವಿವರಣೆ ಮಾಡುವುದು ಎಂದು ಹೆಸರು.  ಉದಾಹರಣೆಗೆ-

‘ಮಾಡಿಕೊಂಡನು ಪರಮ ಪುರುಷನಕೂಡ ತೋಟಿಯ ಸಿದ್ಧರಾಮನು’

ಇಲ್ಲಿ ಕ್ರಿಯಾಪದ ಮಾಡಿಕೊಂಡನು ಎಂಬುದು.  ಇದು ಮೊದಲೇ ಬಂದಿದೆ.  ಮಾಡಿಕೊಂಡನು ಎಂಬುದಕ್ಕೆ ಯಾರು ಎಂದು ಪ್ರಶ್ನೆಮಾಡಿದರೆ ಸಿದ್ಧರಾಮನು ಎಂಬ ಕರ್ತೃಪದ ಬರುವುದು.  ಏನನ್ನು ಮಾಡಿಕೊಂಡನು ಎಂದು ಪ್ರಶ್ನಿಸಿದಾಗ ತೋಟಿಯನು[2] ಎಂಬ ಕರ್ಮಪದ ಬರುವುದು.  ಹಾಗಾದರೆ ವಾಕ್ಯದಲ್ಲಿ-

‘ಸಿದ್ಧರಾಮನು ತೋಟಿಯನ್ನು ಮಾಡಿಕೊಂಡನು’ ಹೀಗೆ ಕರ್ತೃ ಕರ್ಮ ಕ್ರಿಯಾಪದ ಗಳು ಕ್ರಮವಾಗಿ ಬರುವಂತೆ ಅರ್ಥ ಹೇಳುವುದೇ ಅನ್ವಯಾನುಕ್ರಮವೆನಿಸುವುದು.  ಇವುಗಳಿಗೆ ವಿಶೇಷಣಗಳೇನಾದರೂ ಇವೆಯೇ ನೋಡಬೇಕು.  ಕರ್ತೃವಿಗಾಗಲೀ ಕರ್ಮಕ್ಕಾಗಲಿ ಇಲ್ಲಿ ವಿಶೇಷಣಗಳು ಇಲ್ಲ.  ‘ಮಾಡಿಕೊಂಡನು’ ಎಂಬ ಕ್ರಿಯಾಪದಕ್ಕೆ ‘ಪರಮಪುರುಷನಕೂಡ’ ಎಂಬ ಪದಸಮುಚ್ಚಯವು ವಿಶೇಷಣವಾಗಿದೆ.  ಹೀಗೆ ಅನನ್ವಯವಾಗಿರುವ ವಾಕ್ಯಗಳನ್ನು ಅನ್ವಯಾನುಕ್ರಮದಲ್ಲಿ ಅರ್ಥ ಹೇಳಬೇಕಾದುದನ್ನು ಮುಖ್ಯವಾಗಿ ಗಮನಿಸಬೇಕಾಗುವುದು.


[1] ಕೆಲವು ಸಂದರ್ಭದಲ್ಲಿ, ಈ ವಿಶೇಷಣಗಳು ವಿಶೇಷ್ಯದ ಮುಂದೆಯೂ ಬರುವುದುಂಟು.

[2] ತೋಟಿಯನು ಎಂಬ ಪ್ರಯೋಗವನ್ನು ತೋಟಿಯನ್ನು ಎಂಬ ಪದಕ್ಕೆ ಪ್ರತಿಯಾಗಿ ನಡುಗನ್ನಡದಲ್ಲಿ ಉಪಯೋಗಿಸುವುದುಂಟು.  ಇಲ್ಲಿ ದ್ವಿತೀಯಾವಿಭಕ್ತಿ ಅನು ಎಂದು ತಿಳಿಯಬೇಕು.