ವಾಕ್ಯ ಅರ್ಥವತ್ತಾಗಿರಬೇಕಾದರೆ ಕರ್ತೃ ಕರ್ಮ ಕ್ರಿಯಾಪದಗಳಿರಬೇಕೆಂದೂ ಕೆಲವು ಕಡೆ ಕರ್ಮಪದವಿರುವುದಿಲ್ಲವೆಂದೂ ಈ ಹಿಂದೆ ತಿಳಿದಿದ್ದೀರಿ.  ಆದರೆ ಕೆಲವು ಕಡೆ ಕ್ರಿಯಾಪದ ಮತ್ತು ಕರ್ತೃಪದಗಳಿಲ್ಲದೆಯೇ ವಾಕ್ಯಗಳಿರುವುದುಂಟು.

ಉದಾಹರಣೆಗೆ:

(i) X[1] ಈಗ ಬಂದನು (ಇಲ್ಲಿ ಕರ್ತೃಪದವಿಲ್ಲ)

ಎಂಬಲ್ಲಿ ‘ಬಂದನು’ ಎಂಬ ಒಂದು ಕ್ರಿಯಾಪದ ಮಾತ್ರ ಇದೆ. ‘ಯಾರು?’ ಎಂದು ಪ್ರಶ್ನಿಸಿದಾಗ ಬಂದನು ಎಂಬುದು ಪುಲ್ಲಿಂಗವಾಗಿರುವುದರಿಂದ ‘ಅವನು’ ಆತನು’ ಎಂಬ ಯಾವುದಾದರೂ ಒಂದು ಪದವನ್ನು ‘ಆಧ್ಯಾಹಾರ’ ಮಾಡಬೇಕಾಗುವುದು.

 

(ii) ಹುಡುಗನು ಬುದ್ಧಿವಂತ X

ಇಲ್ಲಿ ಕ್ರಿಯಾಪದವೇ ಇಲ್ಲ.  ಹುಡುಗನು, ಬದ್ಧಿವಂತ, ಈ ಎರಡು ಪದಗಳ ಆಧಾರದ ಮೇಲೆ ಪುಲ್ಲಿಂಗವನ್ನು ಹೇಳುವ ಕ್ರಿಯಾಪದವಿರಬೇಕೆಂದು ಊಹಿಸಿ ಆಗಿದ್ದಾನೆ, ಆಗುತ್ತಾನೆ, ಆದನು-ಎಂಬ ಏಕವಚನಾಂತವಾದ ಕ್ರಿಯಾಪದವನ್ನು ಆಯಾ ಸಂದರ್ಭಕ್ಕೆ ಅನುಗುಣವಾಗಿ ಆಧ್ಯಾಹಾರ ಮಾಡಬೇಕು.

 

(iii) ಅವನು X ತಿಂದನು

ಇಲ್ಲಿ ಕರ್ತೃಪದವಿದೆ, ಕ್ರಿಯಾಪದವಿದೆ.  ತಿಂದನು ಎಂಬ ಕ್ರಿಯಾಪದ ಸಕರ್ಮಕವಾದ್ದರಿಂದ ಕರ್ಮಪದ ಬೇಕೇಬೇಕು.  ಆಗ ಈ ವಾಕ್ಯ ಬಂದ ಸಂದರ್ಭವನ್ನು ತಿಳಿದು ಅನ್ನವನ್ನು, ತಿಂಡಿಯನ್ನು, ಹಣ್ಣನ್ನು …… ಇತ್ಯಾದಿಯಾದ ಒಂದು ಪದವನ್ನು ಊಹಿಸಿ ಹೇಳಲೇಬೇಕಾಗುವುದು.  ಆದರೆ ಕರ್ಮಪದಗಳ ಆಧ್ಯಾಹಾರ ತೀರ ಕಡಿಮೆ.  ಕರ್ತೃಪದ ಕ್ರಿಯಾಪದಗಳ ಆಧ್ಯಾಹಾರದ ಸಂದರ್ಭ ವಿಶೇಷವಾಗಿ ಬರುತ್ತದೆ.

 

(೯೬) ವಾಕ್ಯದಲ್ಲಿ ಬಿಟ್ಟುಹೋಗಿರುವ ಪದಗಳನ್ನು ವಾಕ್ಯಾರ್ಥದ ಪೂರ್ತಿಗಾಗಿ ಇರುವ ಪದಗಳ ಆಧಾರದಿಂದ ಊಹಿಸಿಕೊಂಡು ಸೇರಿಸುವುದೇ ಆಧ್ಯಾಹಾರ ವೆನಿಸುವುದು.

ಉದಾಹರಣೆಗೆ:

(i) ಕರ್ತೃಪದಗಳ ಆಧ್ಯಾಹಾರಕ್ಕೆ ಉದಾಹರಣೆ

(೧)  X ಈಗ ಹೋದನು                       (ಅವನು)

(೨)  X  ನಾಳೆ ಬರುತ್ತೇನೆ                     (ನಾನು)

(೩)  X  ಮೊನ್ನೆ ಬಂದನು                      (ಅವನು)

(೪)  X  ಒಂದು ತಿಂಗಳ ನಂತರ ಹೋಗೋಣ (ನಾವು)

 

(ii) ಕರ್ಮಪದಗಳ ಆಧ್ಯಾಹಾರಕ್ಕೆ ಉದಾಹರಣೆ

ಈಗತಾನೆ X ಅವನು ತಿಂದನು

(ಇಲ್ಲಿ ಹಣ್ಣನ್ನು, ತಿಂಡಿಯನ್ನು – ಇತ್ಯಾದಿ ಸಂದರ್ಭಕ್ಕೆ ಅನುಗುಣವಾಗಿ ಆಧ್ಯಾಹಾರ ಪದವನ್ನು ಊಹಿಸಬೇಕು)

 

(iii) ಕ್ರಿಯಾಪದಗಳ ಆಧ್ಯಾಹಾರಕ್ಕೆ ಉದಾಹರಣೆ

(೧) ಅವರ ಮನೆ ಎಲ್ಲಿ X ?          (ಇದೆ)

(೨) ನಿನ್ನೆ ಕೊಟ್ಟ ಪುಸ್ತಕವೆಲ್ಲಿ X ?        (ಇದೆ)

(೩) ನಾನು ಮಾಧ್ಯಮಿಕ ಶಾಲೆಯ ವಿದ್ಯಾರ್ಥಿ X      (ಆಗಿದ್ದೇನೆ)

(೪) ಅದು ಬಹು ದೊಡ್ಡ ವಿಚಾರ X     (ಆಗಿದೆ)

(೫) ಎಲ್ಲವೂ ತನಗೇ  X ಎಂದನು       (ಬೇಕು)

(೬) ನನಗೆ ಐವರು ಪುತ್ರರು  X                           (ಇರುವರು)

(೭) ಈತನೇ ಹಿರಿಯಮಗ X                            (ಆಗಿದ್ದಾನೆ)

(೮) ಅಲ್ಲಿ ಆಡುವವಳೇ ನನ್ನ ಮಗಳು X             (ಆಗಿದ್ದಾಳೆ)

(೯) ರಾಮ ಬಂದನು, ಭೀಮನೂ ಕೂಡ X          (ಬಂದನು)

ಹೀಗೆ ವಾಕ್ಯಗಳಲ್ಲಿ ಬಿಟ್ಟು ಹೋಗಿರುವ ಪದಗಳನ್ನು ಅಲ್ಲಿರುವ ಇತರ ಪದಗಳ ಸಹಾಯದಿಂದ ಊಹಿಸಿ ಹೇಳುವುದೇ ಆಧ್ಯಾಹಾರವೆಂದ ಹಾಗಾಯಿತು.


[1] ಇಲ್ಲದಿರುವ ಪದದ ಸ್ಥಳದಲ್ಲಿ X ಗುರುತು ಮಾಡಲಾಗಿದೆ.  ಅಲ್ಲಿ ವಾಕ್ಯದಲ್ಲಿರುವ ಇತರ ಪದಗಳ ಆಧಾರದ ಮೇಲೆ ಇರಬೇಕಾದ ಪದವನ್ನು ಊಹಿಸಿ ಹೇಳಬೇಕು.