ಸಾಮಾನ್ಯ ವಾಕ್ಯ, ಸಂಯೋಜಿತ ವಾಕ್ಯ, ಮಿಶ್ರವಾಕ್ಯಗಳು

ಇದುವರೆಗೆ ವಾಕ್ಯವೆಂದರೇನು? ವಾಕ್ಯದಲ್ಲಿ ಅನ್ವಯಾನುಕ್ರಮ, ಆಧ್ಯಾಹಾರಗಳೆಂದರೇನು? ಎಂಬ ಬಗೆಗೆ ಸ್ಥೂಲವಾಗಿ ಕೆಲವು ವಿಷಯ ತಿಳಿದಿರುವಿರಿ.  ಈಗ ವಾಕ್ಯಗಳಲ್ಲಿ ಮೂರು ರೀತಿಯ ಪ್ರಧಾನವಾದ ಭೇದಗಳನ್ನು ಮಾತ್ರ ತಿಳಿದರೆ ಸಾಕು.

 

() ಸಾಮಾನ್ಯ ವಾಕ್ಯ

ಈ ಕೆಳಗಿನ ವಾಕ್ಯಗಳನ್ನು ನೋಡಿರಿ.

(ಅ) ಖಾನದೇಶವು ಮಲೇರಿಯಾದ ತವರೂರಾಗಿತ್ತು.

(ಆ) ಖಾನದೇಶದಲ್ಲಿ ವಿಶ್ವೇಶ್ವರಯ್ಯನವರು ಮಲೇರಿಯಾ ಬೇನೆಯಿಂದ ಬಳಲಿದರು.

(ಇ) ವಿಶ್ವೇಶ್ವರಯ್ಯನವರು ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ವರ್ಗಕ್ಕೆ ಅರ್ಜಿ ಹಾಕಿದರು.

(ಈ) ವಿಶ್ವೇಶ್ವರಯ್ಯನವರನ್ನು ರಸ್ತೆ ಮತ್ತು ಕಟ್ಟಡಗಳ ಮೇಲ್ವಿಚಾರಣೆಯ ವಿಭಾಗಕ್ಕೆ ವರ್ಗ ಮಾಡಿದರು.

ಈ ನಾಲ್ಕೂ ವಾಕ್ಯಗಳೂ ಒಂದೊಂದು ಪೂರ್ಣಕ್ರಿಯಾಪದದೊಡನೆ ಸ್ವತಂತ್ರ ವಾಕ್ಯಗಳಾಗಿವೆ.

 

(೯೭) ಒಂದು ಪೂರ್ಣಕ್ರಿಯಾಪದದೊಡನೆ ಸ್ವತಂತ್ರವಾಗಿರುವ ವಾಕ್ಯಗಳೇ ಸಾಮಾನ್ಯ ವಾಕ್ಯಗಳೆನಿಸುವುವು.

ಸಾಮಾನ್ಯ ವಾಕ್ಯದಲ್ಲಿ ಕ್ರಿಯಾಪದವು ಒಂದು ಮಾತ್ರ ಇರಬೇಕುಸಾಪೇಕ್ಷ ಕ್ರಿಯಾರೂಪಗಳು ಮಧ್ಯದಲ್ಲಿ ಬರಬಹುದು ಕೆಳಗೆ ಸಾಪೇಕ್ಷ ಕ್ರಿಯಾರೂಪಗಳಿಂದ ಕೂಡಿ, ಒಂದೇ ಕ್ರಿಯಾಪದದಿಂದ ಪೂರ್ಣಗೊಂಡ ಸಾಮಾನ್ಯ ವಾಕ್ಯ ನೋಡಿರಿ.

“ಖಾನದೇಶವು ಮಲೇರಿಯಾದಿಂದ ಕೂಡಿ, ವಿಶ್ವೇಶ್ವರಯ್ಯನವರ ಆರೋಗ್ಯದ ಮೇಲೆ ದುಷ್ಪರಿಣಾಮ ಮಾಡಿ, ಅವರು ಅಲ್ಲಿಂದ ವರ್ಗವಾಗುವಂತೆ ಮಾಡಿತು.”

ಇಲ್ಲಿ ‘ಮಾಡಿತು’ ಎಂಬ ಒಂದೇ ಕ್ರಿಯಾಪದವಿದ್ದು ‘ಕೂಡಿ, ಮಾಡಿ‘ ಎಂಬ ಸಾಪೇಕ್ಷ ಕ್ರಿಯೆಗಳು ಮಧ್ಯದಲ್ಲಿ ಬಂದಿವೆ.

 

() ಸಂಯೋಜಿತ ವಾಕ್ಯ

‘ಖಾನದೇಶವು ಮಲೇರಿಯಾದ ತವರೂರೆನಿಸಿತ್ತು; ಆದ್ದರಿಂದ ವಿಶ್ವೇಶ್ವರಯ್ಯನವರೂ ಅಲ್ಲಿ ಮಲೇರಿಯಾದಿಂದ ಬಳಲಬೇಕಾಯಿತು; ಈ ಕಾರಣದಿಂದಲೇ ಅವರು ಅಲ್ಲಿಂದ ವರ್ಗ ಮಾಡಿಸಿಕೊಂಡರು.’

ಮೇಲಿನ ಈ ವಾಕ್ಯ ಸಮೂಹದಲ್ಲಿ ಬೇರೆ ಬೇರೆ ಮೂರು ವಾಕ್ಯಗಳಿವೆ.  ಆದರೆ ಆ ವಾಕ್ಯಗಳು ಒಂದಕ್ಕೊಂದು ಸಂಯೋಜನೆಗೊಂಡು ಒಂದು ಪೂರ್ಣಾರ್ಥದ ವಾಕ್ಯವಾಗಿದೆ.  ಹೀಗೆ-

 

(೯೮) ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ, ಅದು ಸಂಯೋಜಿತ ವಾಕ್ಯವೆನಿಸಿಕೊಳ್ಳುವುದು.

ಉದಾಹರಣೆಗೆ:

ಶ್ರೀರಾಮನ ಅಶ್ವಮೇಧಯಾಗದ ಕುದುರೆಯು ವಾಲ್ಮೀಕಿಗಳ ಪುಣ್ಯಾಶ್ರಮದ ಉಪವನವನ್ನು ಹೊಕ್ಕಿತು; ಆಗ ಆ ತೋಟದ ಕಾವಲು ಮಾಡುತ್ತಿದ್ದ ಲವನು ಅದನ್ನು ಕಟ್ಟಿಹಾಕಿದನು; ಆದ್ದರಿಂದ ಲವನನ್ನು ಕುದುರೆಯ ಕಾವಲಿನ ಭಟರು ಹಿಡಿದುಕೊಂಡು ಹೋದರು.

ಇಲ್ಲಿ-

(i) ಶ್ರೀರಾಮನ ಅಶ್ವಮೇಧಯಾಗದ ಕುದುರೆಯು ವಾಲ್ಮೀಕಿಗಳ ಪುಣ್ಯಾಶ್ರಮದ ಉಪವನವನ್ನು ಹೊಕ್ಕಿತು.

(ii) ಆಗ ಆ ತೋಟದ ಕಾವಲು ಮಾಡುತ್ತಿದ್ದ ಲವನು ಅದನ್ನು ಕಟ್ಟಿಹಾಕಿದನು.

(iii) ಆದ್ದರಿಂದ ಲವನನ್ನು ಕುದುರೆಯ ಕಾವಲಿನ ಭಟರು ಹಿಡಿದುಕೊಂಡು ಹೋದರು.

ಈ ಮೂರು ಸ್ವತಂತ್ರ ಕ್ರಿಯಾಪದವುಳ್ಳ ವಾಕ್ಯಗಳು ಒಂದಕ್ಕೊಂದು ‘ಆಗಆದ್ದರಿಂದ-ಎಂಬ ಶಬ್ದಗಳ ಸಂಬಂಧದಿಂದ ಒಂದು ಅಭಿಪ್ರಾಯವನ್ನು ಪೂರ್ಣ ಹೇಳುವ ಸಂಯೋಜಿತ ವಾಕ್ಯವೆನಿಸಿದೆ.

 

() ಮಿಶ್ರವಾಕ್ಯ

() ನಮ್ಮ ಪರೀಕ್ಷೆ ಮುಗಿಯಿತೆಂದು, ತಂದೆಗೆ ಮಗನು ತಿಳಿಸಿದನು.

ಇಲ್ಲಿ ಪ್ರಧಾನ ಕ್ರಿಯಾಪದ ‘ತಿಳಿಸಿದನು’ ಎಂಬುದು, ‘ನಮ್ಮ ಪರೀಕ್ಷೆ ಮುಗಿಯಿತು ಎಂದು’ ಎಂಬ ಈ ಉಪವಾಕ್ಯವೇ ‘ತಿಳಿಸಿದನು’ ಎಂಬ ಕ್ರಿಯಾಪದದ ಕರ್ಮವಾಯಿತು.

() ಶಂಕರನಿಗೆ ವಿದ್ಯಾರ್ಥಿವೇತನ ಸಿಕ್ಕಿತೆಂಬುದನ್ನು ಅವನಿಂದಲೇ ಕೇಳಿದೆನು.

ಇಲ್ಲಿ ‘ಕೇಳಿದೆನು’ ಎಂಬ ಕ್ರಿಯಾಪದವು ಪ್ರಧಾನ ಕ್ರಿಯಾಪದ.  ಈ ಕ್ರಿಯಾಪದಕ್ಕೆ ಮೊದಲನೆಯ ವಾಕ್ಯವಾದ ಶಂಕರನಿಗೆ ವಿದ್ಯಾರ್ಥಿವೇತನ ಸಿಕ್ಕಿತು ಎಂಬುದನ್ನು ಎಂಬುದು ಕರ್ಮವಾಗಿ ಅಧೀನ ವಾಕ್ಯವೆನಿಸಿದೆ.  ಕೇಳಿದೆನು ಎಂಬ ಕ್ರಿಯಾಪದದ ಕರ್ತೃವು ಇಲ್ಲಿ ಹೇಳಲ್ಪಟ್ಟಿಲ್ಲ.  ನಾನು ಎಂದು ಆಧ್ಯಾಹಾರ ಮಾಡಿಕೊಳ್ಳಬೇಕಾಗುತ್ತದೆ.  ಇಂಥ-

 

(೯೯) ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನವಾಕ್ಯಕ್ಕೆ ಅಧೀನಗಳಾಗಿದ್ದರೆ ಅಂಥ ವಾಕ್ಯವನ್ನು ಮಿಶ್ರವಾಕ್ಯವೆನ್ನುತ್ತೇವೆ.

ಉದಾಹರಣೆಗೆ:

ಏನಾದರೂ ಮಾಡಿ ಭಾರತದಲ್ಲಿ ಮೋಟಾರು ಕಾರ್ಖಾನೆಯನ್ನು ಸ್ಥಾಪಿಸಲು ವಿಶ್ವೇಶ್ವರಯ್ಯನವರು ನಿರ್ಧರಿಸಿದರಾದರೂ, ಅವರ ನಿರ್ಧಾರಕ್ಕೆ ಬ್ರಿಟೀಷ್ ಸರಕಾರದ ಅಪ್ಪಣೆ ದೊರೆಯಲಿಲ್ಲವೆಂಬ ವಿಷಯ ತಿಳಿದಾಗ ಬಹುವಾಗಿ ಮರುಗಿದರು.

ಇಲ್ಲಿ ’ಬಹುವಾಗಿ ಮರುಗಿದರು’ ಎಂಬ ಪ್ರಧಾನ ವಾಕ್ಯಕ್ಕೆ – (೧) ಏನಾದರೂ ಮಾಡಿ ಭಾರತದಲ್ಲಿ ಮೋಟಾರು ಕಾರ್ಖಾನೆಯನ್ನು ಸ್ಥಾಪಿಸಲು ವಿಶ್ವೇಶ್ವರಯ್ಯನವರು ನಿರ್ಧರಿಸಿದರು.  (೨) ಅವರ ನಿರ್ಧಾರಕ್ಕೆ ಬ್ರಿಟೀಷ್ ಸರಕಾರದ ಅಪ್ಪಣೆ ದೊರೆಯಲಿಲ್ಲ.  ಎಂಬ ವಾಕ್ಯಗಳು ಉಪವಾಕ್ಯಗಳೆನಿಸಿ ಇದು ಮಿಶ್ರವಾಕ್ಯವೆನಿಸಿದೆ.