ಇದುವರೆಗೆ-ಸಾಮಾನ್ಯ ವಾಕ್ಯ, ಸಂಯೋಜಿತವಾಕ್ಯ, ಮಿಶ್ರವಾಕ್ಯಗಳ ಸಾಮಾನ್ಯ ಪರಿಚಯ ಮಾಡಿಕೊಂಡಿರಿ.  ಒಂದೊಂದು ವಾಕ್ಯದಲ್ಲೂ ಕರ್ತೃ, ಕರ್ಮ (ಸಕರ್ಮಕ ಧಾತುವಾಗಿದ್ದರೆ ಮಾತ್ರ), ಕ್ರಿಯಾಪದಗಳು ಮುಖ್ಯವಾಗಿರಬೇಕು.  ಒಮ್ಮೊಮ್ಮೆ ವಾಕ್ಯದಲ್ಲಿ ಈ ಪದಗಳಲ್ಲಿ ಯಾವುದಾದರೂ ಒಂದು ಪದವಿರದಿದ್ದರೆ, ಸಂದರ್ಭ ಮತ್ತು ಇರುವ ಪದಗಳ ಅರ್ಥದ ಸಹಾಯದಿಂದ ಇರಬೇಕಾದ ಪದದ ಆಧ್ಯಾಹಾರ ಮಾಡಿಕೊಳ್ಳಬೇಕಾಗುತ್ತದೆ.  ಹೀಗಿರುವ ಕರ್ತೃ, ಕರ್ಮ, ಕ್ರಿಯೆಗಳಿಂದ ಕೂಡಿದ ವಾಕ್ಯದಲ್ಲಿ ಕರ್ತೃವಿಗೂ ಕರ್ಮಕ್ಕೂ, ಕ್ರಿಯಾಪದಕ್ಕೂ ವಿಶೇಷಣ ಪದಗಳೂ ಇರುತ್ತವೆ.

ಉದಾಹರಣೆಗೆ-

ದೊಡ್ಡ ದೊಡ್ಡ ಮಕ್ಕಳು ತಂದೆ ತಾಯಿಗಳ ಕಾರ್ಯದಲ್ಲಿ ತಮ್ಮ ಕೈಲಾದ ಸಹಾಯವನ್ನು ಅವಶ್ಯವಾಗಿ ಮಾಡಲೇಬೇಕು.

ಈ ವಾಕ್ಯದಲ್ಲಿ ‘ಮಾಡಲೇಬೇಕು’-ಎಂಬುದೇ ಕ್ರಿಯಾಪದ.  ‘ಮಕ್ಕಳು’-ಕರ್ತೃ, ‘ಸಹಾಯವನ್ನು’-ಕರ್ಮ.  ಅಂದರೆ ‘ಮಕ್ಕಳು ಸಹಾಯವನ್ನು ಮಾಡಲೇಬೇಕು’ ಎಂಬ ಈ ಮೂರು ಪದಗಳು ಕ್ರಮವಾಗಿ ಕರ್ತೃ, ಕರ್ಮ, ಕ್ರಿಯೆಗಳಾದರೆ-ಇವುಗಳಿಗೆ ಒಂದೊಂದಕ್ಕೂ ವಿಶೇಷಣ ಪದಗಳಿವೆ.

(i) ಮಕ್ಕಳು-ಎಂಬುದಕ್ಕೆ ‘ದೊಡ್ಡ ದೊಡ್ಡ’ ಎಂಬಿವು ವಿಶೇಷಣಗಳು.

(ii) ಸಹಾಯವನ್ನು-ಎಂಬುದಕ್ಕೆ ತಂದೆ ತಾಯಿಗಳ ಕಾರ‍್ಯದಲ್ಲಿ ಎಂಬ ಪದಗಳೂ,

(iii) ಮಾಡಲೇಬೇಕು[1]-ಎಂಬ ಕ್ರಿಯಾಪದಕ್ಕೆ ಅವಶ್ಯವಾಗಿ ಎಂಬುದೂ ವಿಶೇಷಣಗಳು.

ಹೀಗೆ ಕರ್ತೃ, ಕರ್ಮ, ಕ್ರಿಯಾಪದ ಇತ್ಯಾದಿ ಪ್ರಧಾನ ಪದಗಳಿಗೆ ಇರುವ ಕರ್ತೃ ವಿಶೇಷಣಗಳು, ಕರ್ಮವಿಶೇಷಣಗಳು, ಕ್ರಿಯಾವಿಶೇಷಣಗಳೇ ಮೊದಲಾದುವನ್ನು ಅವುಗಳ ಸಂಬಂಧವನ್ನು ಬೇರ್ಪಡಿಸಿ ಹೇಳುವ ವಿಧಾನವೇ ವಾಕ್ಯವಿಭಜನೆಯೆನಿಸುವುದು.   ಕ್ರಮದಿಂದ ನಮಗೆ ವಾಕ್ಯ ರಚನೆ ಸ್ಪಷ್ಟವಾಗುವುದು.


[1] ಮಾಡಲೇಬೇಕು ಎಂಬಲ್ಲಿ ಬೇಕು ಎಂಬುದಿಷ್ಟೇ ಅವ್ಯಯಕ್ರಿಯಾಪದ.  (ಕ್ರಿಯಾರ್ಥಕಾವ್ಯಯ) ಮಾಡಲೇಬೇಕು ಎಂದು ಕ್ರಿಯಾಪದವಾಗಿ ತೋರಿಸುವುದು ಕೇವಲ ಸ್ಪಷ್ಟತೆಗೋಸ್ಕರ ಮಾತ್ರ.