(೧೦೦) ಭಾಷೆಯಲ್ಲಿ ನಾವು ಮಾತನಾಡುವ ಮತ್ತು ಬರೆಯುವ, ಕಾವ್ಯಗಳಲ್ಲಿ ಬರುವ ಶಬ್ದಗಳು ವ್ಯಾಕರಣದ ಯಾವ ನಿಯಮಕ್ಕನುಗುಣವಾಗಿ ಸಿದ್ಧವಾಗಿವೆ? ಅವುಗಳ ಕಾರ್ಯ ಮತ್ತು ಪ್ರಯೋಜನಗಳೇನು? ಸಂಬಂಧವೇನು? ಎಂಬುದನ್ನು ತಿಳಿಸುವುದೇ ರೂಪನಿಷ್ಪತ್ತಿಯೆನಿಸುವುದು.

ಉದಾಹರಣೆಗೆ ಈ ವಾಕ್ಯವನ್ನು ನೋಡಿರಿ.

(i) ರಾಜನು ರಾಜ್ಯವನ್ನು ಆಳುತ್ತಾನೆ.

ಈ ವಾಕ್ಯದಲ್ಲಿ ಮೂರು ಪದಗಳಿವೆ.  ರಾಜನು ಎಂಬುದು ಕರ್ತೃಪದ, ರಾಜ್ಯವನ್ನು ಕರ್ಮಪದ, ಆಳುತ್ತಾನೆ ಎಂಬುದು ಕ್ರಿಯಾಪದ.  ಒಂದೊಂದು ಪದವೂ ಹೇಗೆ ರೂಪ ಸಿದ್ಧಿಯನ್ನು ವ್ಯಾಕರಣ ದೃಷ್ಟಿಯಿಂದ ಪಡೆದಿದೆ, ಎಂಬುದನ್ನು ನೋಡಿರಿ.

(೧) ರಾಜನು – ‘ರಾಜ’ ಎಂಬ ಅಕಾರಾಂತ ಪುಲ್ಲಿಂಗ ಪ್ರಕೃತಿಯ ಮೇಲೆ ಉ ಎಂಬ ಪ್ರಥಮಾವಿಭಕ್ತಿಪ್ರತ್ಯಯ ಬಂದು, ನಡುವೆ ನಕಾರಾಗಮವಾಗಿ ‘ರಾಜನು’ ಎಂಬ ರೂಪವೊಂದಿ, ‘ಆಳುತ್ತಾನೆ’ ಎಂಬ ಕ್ರಿಯೆಗೆ ಕರ್ತೃವಾಯಿತು.

(೨) ರಾಜ್ಯವನ್ನು – ‘ರಾಜ್ಯ’ ಎಂಬ ಅಕಾರಾಂತ ನಪುಂಸಕಲಿಂಗ ಪ್ರಕೃತಿಯು ದ್ವಿತೀಯಾವಿಭಕ್ತಿ ಏಕವಚನವನ್ನು ಹೊಂದಿ ‘ರಾಜ್ಯವನ್ನು’ ಎಂಬ ಪದವಾಗಿ ‘ಆಳುತ್ತಾನೆ’ ಎಂಬ ಕ್ರಿಯೆಗೆ ಕರ್ಮವಾಯಿತು (ಕರ್ಮಪದವಾಯಿತು).

(೩) ಆಳುತ್ತಾನೆ – ‘ಆಳು’ ಎಂಬ ಉಕಾರಾಂತ ಧಾತುವಿಗೆ ವರ್ತಮಾನಕಾಲದ ಪ್ರಥಮ ಪುರುಷ ಪುಲ್ಲಿಂಗ ಏಕವಚನದ ಆಖ್ಯಾತಪ್ರತ್ಯಯ ಬಂದು ‘ಆಳುತ್ತಾನೆ’ ಎಂಬ ಕ್ರಿಯಾಪದ ರೂಪಸಿದ್ಧಿ ಪಡೆಯಿತು.

ಹೀಗೆ ವಾಕ್ಯದಲ್ಲಿರುವ ಪ್ರತಿ ಶಬ್ದದ ರೂಪಸಿದ್ಧಿಯು ವ್ಯಾಕರಣ ನಿಯಮದಂತೆ ಹೇಗಾಯಿತೆಂದು ಹೇಳುವುದೇ ರೂಪನಿಷ್ಪತ್ತಿಯೆನಿಸುವುದು.

ಕೆಳಗಿನ ವಾಕ್ಯದಲ್ಲಿ ಬಂದಿರುವ ಶಬ್ದಗಳ ರೂಪನಿಷ್ಪತ್ತಿಯನ್ನು ಗಮನಿಸಿರಿ.

(i) ವಿಶ್ವೇಶ್ವರಯ್ಯನವರು ಉದ್ಯೋಗವನ್ನು ಹುಡುಕಿಕೊಂಡು ಹೋಗಲಿಲ್ಲ; ಉದ್ಯೋಗವೇ ಅವರನ್ನು ಹುಡುಕಿಕೊಂಡು ಬಂದಿತು.

(೧) ವಿಶ್ವೇಶ್ವರಯ್ಯನವರು – ‘ವಿಶ್ವೇಶ್ವರಯ್ಯ’ ಎಂಬ ಅಕಾರಾಂತಪುಲ್ಲಿಂಗನಾಮಪ್ರಕೃತಿಗೆ ಗೌರವಾರ್ಥದಲ್ಲಿ ಪ್ರಥಮಾ ಬಹುವಚನ.  ‘ಹೋಗಲಿಲ್ಲ[1]’ ಎಂಬ ಕ್ರಿಯೆಗೆ ಕರ್ತೃಪದ.

(೨) ಉದ್ಯೋಗವನ್ನು – ‘ಉದ್ಯೋಗ’ ಎಂಬ ಅಕಾರಾಂತ ನಪುಂಸಕಲಿಂಗ ನಾಮಪ್ರಕೃತಿ.                           ‘ಅನ್ನು‘ ಎಂಬ ದ್ವಿತೀಯಾವಿಭಕ್ತಿ ಏಕವಚನ.  ‘ಹೋಗಲಿಲ್ಲ‘ ಎಂಬ ಕ್ರಿಯಾಪದಕ್ಕೆ ಕರ್ಮಪದ.

(೩) ಹುಡುಕಿಕೊಂಡು – ‘ಹುಡುಕಿಕೊಳ್ಳು’ ಎಂಬ ಸಂಯುಕ್ತ ಧಾತುವಿನ ಭೂತ ನ್ಯೂನ.  ‘ಹುಡುಕಿಕೊಳ್ಳು‘ ಧಾತುವಿನ ಮೇಲೆ ‘ದು‘ ಪ್ರತ್ಯಯ ಬಂದು ‘ಹುಡುಕಿಕೊಂಡು‘ ಎಂಬ ಕೃದಂತಾವ್ಯಯವಾಗಿದೆ. ಇದು ‘ಹೋಗಲಿಲ್ಲ‘ ಎಂಬ ಕ್ರಿಯೆಗೆ ವಿಶೇಷಣವಾಗಿ ಬಂದಿದೆ.

(೪) ಹೋಗಲಿಲ್ಲ[2] – ‘ಹೋಗಲು‘‘ಇಲ್ಲ‘, ಎಂಬ ಎರಡು ಪದಗಳಿವೆ.  ‘ಹೋಗಲು‘ ಎಂಬುದು ‘ಹೋಗು‘ ಧಾತುವಿನ ಮೇಲೆ ‘ಅಲು‘ ಎಂಬ ಪ್ರತ್ಯಯ ಬಂದು ‘ಹೋಗಲು‘ ಎಂಬ ಕೃದಂತಾವ್ಯಯವಾಗಿದೆ.  ‘ಇಲ್ಲ‘ ಎಂಬುದು ನಿಷೇಧಾರ್ಥಕ ಕ್ರಿಯಾರ್ಥಕಾವ್ಯಯ.

(೫) ಉದ್ಯೋಗವು – ‘ಉದ್ಯೋಗ‘ ಎಂಬ ಅಕಾರಾಂತ ನಪುಂಸಕಲಿಂಗ ನಾಮ ಪ್ರಕೃತಿ. ಪ್ರಥಮಾವಿಭಕ್ತಿ ಏಕವಚನ, ಬಂದಿತು ಎಂಬ ಕ್ರಿಯೆಗೆ ಕರ್ತೃಪದ.

(೬) ಅವಧಾರಣಾರ್ಥಕ ಅವ್ಯಯ.

(೭) ಅವರನ್ನು – ‘ಅವನು‘ ಉಕಾರಾಂತ ಪುಲ್ಲಿಂಗ.  ಪುರುಷಾರ್ಥಕ ಸರ್ವನಾಮ                     (ಪ್ರಥಮಪುರುಷಪುಲ್ಲಿಂಗ) ದ ಮೇಲೆ ಗೌರವಾರ್ಥದಲ್ಲಿ ದ್ವಿತೀಯಾ ಬಹುವಚನದ ನಾಮವಿಭಕ್ತಿಪ್ರತ್ಯಯ ಬಂದು ‘ಅವರನ್ನು‘ ಎಂಬ ರೂಪವಾಗಿದೆ.

(೮) ಹುಡುಕಿಕೊಂಡು – ‘ಹುಡುಕಿಕೊಳ್ಳು‘ ಎಂಬ ಸಂಯುಕ್ತ ಧಾತುವಿನ ಭೂತ ನ್ಯೂನ.                          ‘ಹುಡುಕಿಕೊಳ್ಳು‘ ಧಾತುವಿನ ಮೇಲೆ ‘ದು‘ ಪ್ರತ್ಯಯ ಬಂದು, ಹುಡುಕಿಕೊಂಡು ಎಂಬ ಕೃದಂತಾವ್ಯಯವಾಗಿದೆ.  ಇದು ಅವರನ್ನು ಎಂಬ ಪದದೊಡನೆ ಬಂದಿತು ಎಂಬ ಕ್ರಿಯೆಗೆ ವಿಶೇಷಣವಾಗಿದೆ.

(೯) ಬಂದಿತು-‘ಬರು‘ ಧಾತು, ಭೂತಕಾಲ, ಪ್ರಥಮ ಪುರುಷ, ನಪುಂಸಕಲಿಂಗ, ಏಕವಚನ ಕ್ರಿಯಾಪದ.

ಈ ರೀತಿ ಮೇಲೆ ಹೇಳಿದ ಹಾಗೆ ವಾಕ್ಯಗಳಲ್ಲಿ ಬರುವ ಪ್ರತಿ ಪದಕ್ಕೂ ರೂಪನಿಷ್ಪತ್ತಿಯನ್ನು ಹೇಳಬೇಕು.


[1] ಹೋಗಲು ‘ಇಲ್ಲ’. ‘ಇಲ್ಲ’ ಎಂಬ ಅವ್ಯಯ ಕ್ರಿಯಾಪದ (ಕ್ರಿಯಾರ್ಥಕಾವ್ಯಯ) ಬರುವಾಗ ‘ಹೋಗಲು’ ಎಂಬ ಕೃದಂತಾವ್ಯಯದ ಜೊತೆಗೆ ಬಂದಿದೆ.  ‘ಹೋಗಲು’ ಎಂಬುದು ‘ಹೋಗು’ ಧಾತುವಿನ ಮೇಲೆ ‘ಅಲು’ ಪ್ರತ್ಯಯ ಸೇರಿ ಕೃದಂತಾವ್ಯಯವಾಗಿದೆ.

[2] ‘ಇಲ್ಲ’ ಎಂಬ ನಿಷೇಧಾರ್ಥಕ ಕ್ರಿಯಾರ್ಥಕಾವ್ಯಯವು ಕೆಲವು ಕಡೆ, ‘ಅಲು’ ಪ್ರತ್ಯಯಾಂತ ಕೃದಂತಾವ್ಯಯದ ಜೊತೆಗೆ ಪ್ರಯೋಗವಾಗುವುದು-ಉದಾಹರಣೆಗೆ: ಮಾಡಲಿಲ್ಲ, ತಿನ್ನಲಿಲ್ಲ, ನೋಡಲಿಲ್ಲ-ಇತ್ಯಾದಿ.  ಕೆಲವು ಕಡೆ ಸ್ವತಂತ್ರವಾಗಿಯೂ ಇರುವುದುಂಟು.  ನನ್ನಲ್ಲಿ ಅದು ಇಲ್ಲ, ಆತನು ಮನೆಯಲ್ಲಿ ಇಲ್ಲ-ಇತ್ಯಾದಿ.