ಎಂದು ವಾಕ್ಯಗಳು ಮೂರು ಬಗೆ

() ಪ್ರತಿಯೊಂದು ವಾಕ್ಯದಲ್ಲೂ ಕರ್ತೃಪದ ಮತ್ತು ಅದರ ವಿಶೇಷಣಗಳು, ಕರ್ಮಪದ ಅದರ ವಿಶೇಷಣಗಳು, ಕ್ರಿಯಾಪದ ಅದರ ವಿಶೇಷಣಗಳೂ ಇರುತ್ತವೆ. ವಿಶೇಷಣಗಳು ಇಲ್ಲದೆಯೂ ಇರುವುದುಂಟು.

() ಅಕರ್ಮಕಧಾತುವಿನ ಕ್ರಿಯಾಪದವುಳ್ಳ ವಾಕ್ಯದಲ್ಲಿ ಕರ್ಮಪದವಿರುವುದಿಲ್ಲ.

() ಅನ್ವಯಾನು ಕ್ರಮವೆಂದರೆ ಮೊದಲು ಕರ್ತೃಪದ, ಆಮೇಲೆ ಕರ್ಮಪದ ಅನಂತರ ಕ್ರಿಯಾಪದ ಬರುವಂತೆ ಜೋಡಿಸುವಿಕೆ. ಕರ್ತೃ, ಕರ್ಮ, ಕ್ರಿಯೆಗಳಿಗಿರುವ ವಿಶೇಷಣಗಳನ್ನು ಇವುಗಳ ಹಿಂದೆಯೇ ಜೋಡಿಸಿ ಹೇಳಬೇಕು.

() ಕರ್ತೃ, ಕರ್ಮ, ಕ್ರಿಯಾಪದಗಳು ಒಮ್ಮೊಮ್ಮೆ ವಾಕ್ಯಗಳಲ್ಲಿ ಬಿಟ್ಟುಹೋಗಿದ್ದರೆ, ಇರುವ ಪದಗಳ ಅರ್ಥದ ಸಹಾಯದಿಂದ ಇರಬೇಕಾದ ಪದಗಳನ್ನು ಊಹಿಸಿ ಸೇರಿಸುವುದು ಆಧ್ಯಾಹಾರ.

() ವಾಕ್ಯದಲ್ಲಿ ಬರುವ ಪ್ರತಿಯೊಂದು ಪದವನ್ನು ಅದು ವ್ಯಾಕರಣದ ದೃಷ್ಟಿಯಿಂದ ಹೇಗೆ ರೂಪಸಿದ್ಧಿಯನ್ನು ಪಡೆಯಿತೆಂಬುದನ್ನು ಹೇಳುವುದು ರೂಪನಿಷ್ಪತ್ತಿಯೆನಿಸುವುದು.

 

ಅಭ್ಯಾಸ ಪ್ರಶ್ನೆಗಳು

(೧) ವಾಕ್ಯಗಳನ್ನು ಸ್ಥೂಲವಾಗಿ ಎಷ್ಟು ವಿಧಗಳಾಗಿ ವಿಂಗಡಿಸಬಹುದು?

(೨) ಸಾಮಾನ್ಯ ವಾಕ್ಯವೆಂದರೇನು?

(೩) ಸಂಯೋಜಿತ ವಾಕ್ಯವೆಂದರೇನು? ಉದಾಹರಣೆಯೊಂದಿಗೆ ವಿವರಿಸಿರಿ.

(೪) ಮಿಶ್ರವಾಕ್ಯಕ್ಕೆ ಒಂದು ಉದಾಹರಣೆ ಕೊಡಿರಿ.

(೫) ಆಧ್ಯಾಹಾರವೆಂದರೇನು? ಇವನು ನನ್ನ ಮಗ ಈ ವಾಕ್ಯದಲ್ಲಿ ಮಾಡಬೇಕಾದ ಆಧ್ಯಾಹಾರ ಪದವಾವುದು?

(೬) ಓಡಿಬಂದೆನು.  ಓಡಿಹೋಗು.  ಅವಸರದಿಂದ ಬಾ.  ನಾಳೆ ಹೋಗುವಿಯಂತೆ.  ನನಗೆ ನಾಲ್ಕು ಜನ ಮಕ್ಕಳು.  ಈ ವಾಕ್ಯಗಳಲ್ಲಿ ಯಾವ ಯಾವ ಪದಗಳನ್ನು ಆಧ್ಯಾಹಾರ ಮಾಡಬೇಕು?

(೭) ರಾಮನಿಗೆ ಅವಸರವಾಗಿತ್ತು; ಆದ್ದರಿಂದ ವೇಗವಾಗಿ ಓಡುತ್ತಿದ್ದನು; ಆಗ ಕಲ್ಲನ್ನೆಡವಿ ಬಿದ್ದನು; ಬಿದ್ದ ಕಾರಣದಿಂದ ಕಾಲು ಮುರಿಯಿತು. – ಈ ವಾಕ್ಯ ವೃಂದವನ್ನು ಎಂಥ ವಾಕ್ಯವೆನ್ನುತ್ತೀರಿ? ಏಕೆ? ವಿವರಿಸಿರಿ.

(೮) ನಾನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆನೆಂಬುದು ಈಗತಾನೆ ಬಂದ ಈ ಪತ್ರದಿಂದ ತಿಳಿಯಿತು. – ಈ ವಾಕ್ಯವು ಎಂಥ ವಾಕ್ಯ? ಏಕೆ? ವಿವರಿಸಿರಿ.

(೯) ರೂಪನಿಷ್ಪತ್ತಿಯೆಂದರೇನು? ರಾಮನು ಪುಸ್ತಕವನ್ನು ಓದುತ್ತಾನೆ ಈ ವಾಕ್ಯದಲ್ಲಿ ಬಂದಿರುವ ಪದಗಳ ರೂಪನಿಷ್ಪತ್ತಿಯನ್ನು ಹೇಳಿರಿ.

(೧೦)     (i) ಮಾಡು ಧಾತುವಿನ ವರ್ತಮಾನಕಾಲದ ಪ್ರಥಮ ಪುರುಷ, ಪುಲ್ಲಿಂಗ, ಏಕವಚನ ರೂಪ ಬರೆಯಿರಿ.

(ii) ತಿನ್ನು ಧಾತುವಿನ ಭೂತಕಾಲ ಮಧ್ಯಮಪುರುಷ ಏಕವಚನದ ರೂಪಸಿದ್ಧಿ ಹೇಗೆ?

(iii) ಮನೆ ಎಂಬ ವಸ್ತುವಾಚಕ ನಪುಂಸಕಲಿಂಗ ದ್ವಿತೀಯಾ ಬಹುವಚನ ರೂಪಸಿದ್ಧಿ ಹೇಗಾಗುವುದು?

(೧೧) ಕೆಳಗಿನ ವಾಕ್ಯಗಳು ತಪ್ಪಿನಿಂದ ಕೂಡಿವೆ.  ಆ ತಪ್ಪುಗಳನ್ನು ಸರಿಪಡಿಸಿ ಬರೆಯಿರಿ.

(i) ತಿಂದನು ಎಂಬುದು ತಿಂದು ಧಾತುವಿನ ಭವಿಷ್ಯತ್ ಕಾಲದ   ಪ್ರಥಮಪುರುಷ ಪುಲ್ಲಿಂಗಬಹುವಚನರೂಪ.

(ii) ಮಾಡುತ್ತೇನೆ ಎಂಬುದು ಮಾಡು ಧಾತುವಿನ ವರ್ತಮಾನ ಕಾಲ      ಪ್ರಥಮಪುರುಷಪುಲ್ಲಿಂಗ ಏಕವಚನರೂಪ.

(iii) ಹೊಲದಲ್ಲಿ-ಎಂಬುದು ಹೊಲದ ಎಂಬ ಅಕಾರಾಂತ ನಪುಂಸಕಲಿಂಗ ಪ್ರಕೃತಿಯ ತೃತೀಯಾ ವಿಭಕ್ತಿ ಬಹುವಚನರೂಪ.

(iv) ಚೆನ್ನಾಗಿ-ಎಂಬುದು ಒಂದು ನಾಮಪದ.

(೧೨) ಈ ಕೆಳಗಿನ ವಾಕ್ಯಗಳಲ್ಲಿ ಬಿಟ್ಟಿರುವ ಸ್ಥಳಗಳಲ್ಲಿ ಆವರಣದಲ್ಲಿರುವ ಒಂದು ಸರಿಯುತ್ತರವನ್ನು ಆರಿಸಿ ಬರೆಯಿರಿ.

(i) ಮಾಡಿದನು ಎಂಬುದು ಮಾಡು ಧಾತುವಿನ ಭೂತಕಾಲ ………….. ಪುಲ್ಲಿಂಗ ಏಕವಚನ. (ಮಧ್ಯಮಪುರುಷ, ಉತ್ತಮಪುರುಷ, ಪ್ರಥಮಪುರುಷ)

(ii) ಕೊಳ್ಳುತ್ತಾನೆ-ಎಂಬುದು ಕೊಳ್ಳು ಧಾತುವಿನ …………. ಕಾಲದ ಪ್ರಥಮ ಪುರುಷ ಪುಲ್ಲಿಂಗ ಏಕವಚನ ರೂಪ.  (ವರ್ತಮಾನಕಾಲ, ಭೂತ, ಭವಿಷ್ಯತ್)

(iii) ಊರಿಗೆ-ಎಂಬ ಪದವು ಊರು ಎಂಬ ಉಕಾರಾಂತ ನಪುಂಸಕಲಿಂಗದ ………. ವಿಭಕ್ತಿ ಏಕವಚನ.  (ಪಂಚಮೀ, ಚತುರ್ಥೀ, ಸಪ್ತಮೀ)

(iv) ಮಾಡಲು ಎಂಬುದು ಮಾಡು ಧಾತುವಿನ ಮೇಲೆ ಅಲು ಎಂಬ ಪ್ರತ್ಯಯ ಬಂದು …………. ಎನಿಸಿದೆ.   (ಕೃದಂತಭಾವನಾಮ, ಕೃದಂತಾವ್ಯಯ, ಭಾವಕೃದಂತ)

(v) ಇಲ್ಲ ಎಂಬುದು ಒಂದು ನಿಷೇಧಾರ್ಥಕ ………. ಆಗಿದೆ. (ಧಾತು, ಕ್ರಿಯಾರ್ಥಕಾವ್ಯಯ, ಭಾವಕೃದಂತ)