ನಾವು ನಮ್ಮ ಮನಸ್ಸಿನ ಅಭಿಪ್ರಾಯಗಳನ್ನು ಇತರರಿಗೆ ಮಾತುಗಳ ಮೂಲಕ ತಿಳಿಯಪಡಿಸುತ್ತೇವೆ.  ಅಥವಾ ಬರೆವಣಿಗೆಯಿಂದ ತಿಳಿಯಪಡಿಸುತ್ತೇವೆ.

(೧) ಮಗುವು ಓಡಿತು.

(೨) ದೇವರು ಲೋಕವನ್ನು ಕಾಪಾಡುವನು.

(೩) ಭೀಮನಿಂದ ಬಕಾಸುರನು ಕೊಲ್ಲಲ್ಪಟ್ಟನು.

ಹೀಗೆ ಮೇಲೆ ಹೇಳಿರುವ ವಾಕ್ಯಗಳೆಲ್ಲ ಒಂದು ಸಂಪೂರ್ಣಾರ್ಥವನ್ನು ಕೊಡತಕ್ಕವುಗಳು. ಈ ವಾಕ್ಯಗಳಲ್ಲಿ ಒಂದೊಂದು ಪದವು ಇಲ್ಲದಿದ್ದರೂ ಅರ್ಥವು ಪೂರ್ಣವಾಗದೆ ಪುನಃ ಪ್ರಶ್ನೆ ಮಾಡಬೇಕಾಗುತ್ತದೆ.

() ಓಡಿತು:- ಹೀಗೆ ಒಂದೇ ಕ್ರಿಯಾಪದ ಹೇಳಿದಾಗ ಓಡಿದುದು ಯಾವುದು? ಎಂಬ ಪ್ರಶ್ನೆ ಬಂದೇ ಬರುತ್ತದೆ.  ಪೂರ್ಣಾರ್ಥವು ಈ ಒಂದೇ ಪದದಿಂದ ಆಗದು.  ಆದ್ದರಿಂದ ಅದನ್ನು ವಾಕ್ಯವೆನ್ನಲಾಗುವುದಿಲ್ಲ.

(೨) ದೇವರು ಲೋಕವನ್ನು:- ಹೀಗೆ ಕರ್ತೃ ಕರ್ಮ ಎರಡನ್ನೇ ಹೇಳಿದಾಗ, ದೇವರು ಲೋಕವನ್ನು ಏನು ಮಾಡಿದನು? ಎಂಬ ಪ್ರಶ್ನೆ ಏಳುವುದು.  ಆಗ ಕ್ರಿಯಾಪದ ಬೇಕೇ ಬೇಕಾಗುವುದು.

() ಭೀಮನಿಂದ ಕೊಲ್ಲಲ್ಪಟ್ಟನು:- ಎಂದಾಗ ಕೊಲ್ಲಲ್ಪಟ್ಟವನಾರು? ಎಂಬ ಕರ್ಮಪದದ ಬಗೆಗೆ ಪ್ರಶ್ನೆ ಎದ್ದೇ ಏಳುತ್ತದೆ.  ಹಾಗಾದರೆ ವಾಕ್ಯವೆಂದರೆ, ಕರ್ತೃ, ಕರ್ಮ, ಕ್ರಿಯಾಪದಗಳಿಂದ ಕೂಡಿದ ಪದ ಸಮೂಹವೆಂದಹಾಗಾಯಿತು.  ಆದರೆ ಕೆಲವು ವಾಕ್ಯಗಳಲ್ಲಿ ಕರ್ಮಪದದ ಅವಶ್ಯಕತೆ ಇರುವುದಿಲ್ಲ.  ಏಕೆಂದರೆ ಕ್ರಿಯಾ ಪದವೇ ಕರ್ಮವನ್ನು ಅಪೇಕ್ಷಿಸುವುದಿಲ್ಲ.  ಮಗು ಓಡಿತು ಎಂಬಲ್ಲಿ ಕರ್ಮಪದದ ಅರ್ಥವಿಲ್ಲ.

(೧) ಚಿಕ್ಕಮಗುವು ಹಾಡುತ್ತಾ ಕುಣಿಯುತ್ತಾ ಓಡಿತು.

(೨) ಮಹಾಶಕ್ತನಾದ ದೇವರು ಸಮಸ್ತ ಲೋಕಗಳನ್ನು ಪ್ರೀತಿಯಿಂದ ಕಾಪಾಡುವನು.

(೩) ಮಹಾಶೂರನಾದ ಭೀಮನಿಂದ ದುಷ್ಟನಾದ ಬಕನು ಪೂರ್ವಕಾಲದಲ್ಲಿ ಕೊಲ್ಲಲ್ಪಟ್ಟನು.

ಮೊದಲು ಹೇಳಿದ ಮೂರು ವಾಕ್ಯಗಳಲ್ಲಿ ಇನ್ನೂ ಕೆಲವು ಹೊಸಪದ ಸೇರಿಸಿ ವಾಕ್ಯ ಮಾಡಲಾಗಿದೆ.  ಮೊದಲ ಸಲ-

‘ಮಗು ಓಡಿತು’ ಇಷ್ಟೇ ಹೇಳಿತ್ತು.  ಈಗ ಚಿಕ್ಕ ಮಗುವು ಹಾಡುತ್ತ ಕುಣಿಯುತ್ತ ಓಡಿತು.

ಇಲ್ಲಿ- (i) ಮಗುವುಚಿಕ್ಕಮಗು

(ii) ಓಡಿದುದುಹಾಡುತ್ತ, ಕುಣಿಯುತ್ತ.

ಹಾಗಾದರೆ ಮಗು ಎಂಬ ಕರ್ತೃಪದಕ್ಕೆ ಚಿಕ್ಕಮಗು ಎಂಬುದೂ, ಓಡಿತು ಎಂಬುದಕ್ಕೆ ಹಾಡುತ್ತ, ಕುಣಿಯುತ್ತ, ಎಂಬುವೂ ವಿಶೇಷಣಗಳು.

 

(೯೫) ಕರ್ತೃಪದ, ಕರ್ಮಪದ, ಕ್ರಿಯಾಪದಗಳಿಂದ ಅವುಗಳ ವಿಶೇಷಣಗಳಿಂದ ಕ್ರಮವಾಗಿ ಬರೆದ ಪದಸಮೂಹವೇ ವಾಕ್ಯವೆನಿಸುವುದು.

ಅನೇಕ ವಾಕ್ಯಗಳನ್ನು ಪರಸ್ಪರ ಸಂಬಂಧವುಂಟಾಗುವಂತೆ ಜೋಡಿಸುವುದೇ ವಾಕ್ಯರಚನೆ ಎನಿಸುವುದು.