ಅನಾದಿ ಕಾಲದಿಂದಲೂ ಒಂದಲ್ಲ ಒಂದು ಕಾರಣದಿಂದ ಭಾರತೀಯ ಜನಪದ ಸಮುದಾಯದಲ್ಲಿ ಜನಾನುರಾಗಿಗಳಾಗಿ ಬದುಕುತ್ತಾ ಬಂದಿರುವ ಕೊರಮರು ಕರ್ನಾಟಕದಲ್ಲಿಯೂ ಕಾಣಸಿಗುತ್ತಾರೆ. ಇತರ ಬುಡಕಟ್ಟುಗಳ ಹಾಗೆ ಇವರೂ ಕೂಡ ಕಾಡು-ಮೇಡುಗಳಲ್ಲಿ ಬದುಕುತ್ತ ಪ್ರತ್ಯೇಕತೆಯನ್ನು ಉಳಿಸಿಕೊಂಡು, ತಮ್ಮದೇ ಆದ ವೇಷ-ಭೂಷಣಗಳಿಂದ, ಆಚಾರ-ವಿಚಾರಗಳಿಂದ, ನುಡಿ-ನಡಾವಳಿಗಳಿಂದ ತಮ್ಮತನವನ್ನು ಕಾಯ್ದುಕೊಂಡು ಸಾಗಿ ಬಂದಿದ್ದಾರೆ. ಬಡತನ, ಮೌಢ್ಯ, ಕಂದಾಚಾರ, ಅನಕ್ಷರತೆಗಳಿಂದ ಬಳಲುತ್ತಿರುವ ಈ ಬುಡಕಟ್ಟು, ಹಿಂದುಳಿದ ಸಮಾಜವಾಗಿಯೇ ಉಳಿದು ನಿರೀಕ್ಷಿತ ಪ್ರಗತಿ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. ಆಧುನಿಕತೆ ಈಚೀಚೆಗೆ ಈ ಜನಾಂಗದಲ್ಲಿ ಕಾಣಸಿಗುತ್ತದೆ.

ಹಿಂದೆ ಬೆಟ್ಟ ಗುಡ್ಡಗಳಲ್ಲಿ ಉಳಿದು ದನಕರುಗಳ ಪಾಲನೆ ಮಾಡುತ್ತ ಜೊತೆಜೊತೆಗೆ ಬೆತ್ತ-ಬಿದಿರಿನ ಬುಟ್ಟಿಗಳನ್ನು ಮಾಡುವ, ಕಣಿ ಹೇಳುವ, ಅಂತ್ರ ಕಟ್ಟುವ, ಹಚ್ಚೆಹಾಕುವ ಕೆಲಸಗಳನ್ನು ಈ ಬುಡಕಟ್ಟು ಮೈಗೂಡಿಸಿಕೊಂಡು ಬಂದಿದೆ. ಧರ್ಮನಿಷ್ಠೆಯ ಹಿಂದೂ ಜನ ಇವರ ವೃತ್ತಿಗಳನ್ನು ಪೋಷಿಸುತ್ತಾ ಬಂದರು. ಇವರು ಮಾಡಿದ ತಟ್ಟಿ, ಬುಟ್ಟಿಗಳು ಜನಪದದ ಅಗತ್ಯದ ವಸ್ತುಗಳಾದವು. ಇವರ ಕಣಿ ಮನಸ್ಸಿಗೆ ಮುದವನ್ನೋ, ಕೊರಗಿಗೆ ಪರಿಹಾರವನ್ನೋ ಉಂಟು ಮಾಡುತ್ತಿದ್ದುದರಿಂದ ಜನ ಆ ಕಡೆಗೂ ಗಮನ ಹರಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಕೊರವಂಜಿಗೆ ದಕ್ಕಿರುವ ಸ್ಥಾನ ಆಕೆಯ ವರ್ಣಮಯ ಬದುಕನ್ನು ಪರಿಚಯಿಸುತ್ತದೆ.

ಈ ಕೊರಮರು ಇತರ ಜನಾಂಗ ಹಾಗೂ ಬುಡಕಟ್ಟಿನ ಜೊತೆ ಬೆರೆಯದೆ ತಮ್ಮ ಪ್ರತ್ಯೇಕತೆಯನ್ನು ಕಾಯ್ದುಕೊಂಡು ಬಂದಿರುವರು. ಇವರು ಅನುಸರಿಸಿದ ಜೀವನ ವಿಧಾನ, ಆಡುತ್ತಿದ್ದ ಭಾಷೆ ಮತ್ತು ಆಚರಣೆಗಳು ಜಾನಪದ ಸಂಸ್ಕೃತಿಗೆ ಕೊಟ್ಟ ಕೊಡುಗೆಗಳಾಗಿವೆ. ಜಾತಿ ಜಾತಿಗಳಲ್ಲಿ ತೋರುವ ನಾಗರಿಕ ಜನಾಂಗದಲ್ಲಿರುವ ಸಮಾನ ಆಚರಣೆಗಳು ಇವರಲ್ಲಿ ಕಂಡುಬಂದರೂ, ಬುಡಕಟ್ಟುಗಳು ಸಾಮಾನ್ಯವಾಗಿ ತಮ್ಮದೇ ಆದ ವಿಶೇಷ ಆಚರಣೆಗಳನ್ನು ಹೊಂದಿರುತ್ತವೆ. ಕೊರಮ ಬುಡಕಟ್ಟು ಕೂಡ ತನ್ನದೇ ಆದ ವೈಶಿಷ್ಟ್‌ಯಗಳನ್ನು ಉಳಿಸಿಕೊಂಡಿದೆ. ಒಂದು ಬುಡಕಟ್ಟು ಜಾನಪದದ ಒಂದು ಅಂಗ. ಸಾಮಾನ್ಯವಾಗಿ ಜನಪದ ಸಂಸ್ಕೃತಿ ಎಂಬುದು ಇಂಥ ಎಲ್ಲ ಬುಡಕಟ್ಟು ಜನಾಂಗದ ಉಪಸಂಸ್ಕೃತಿಗಳ ಮೊತ್ತವಾಗಿದೆ. “ಈ ನಿಟ್ಟಿನಿಂದ ನೋಡಿದಾಗ “ಜನಪದ ಸಂಸ್ಕೃತಿ” ಬೇರೆಯಲ್ಲ. “ಜನಪದ” ಬೇರೆಯಲ್ಲ. ಏಕೆಂದರೆ “ಜಾನಪದ” ಎಂಬುದು ಜನಪದದ ಸಮಗ್ರ ನಾಗರಿಕತೆಯನ್ನು ಅದರ ಕಲೆಗಳನೆಂತೋ ಅಂತೆ ಅದರ ಉಡುಗೆ-ತೊಡುಗೆ, ಆಚಾರಗಳನ್ನು, ಮೂಢನಂಬಿಕೆಗಳನ್ನು ಮತ್ತು ಉಪಕರಣಗಳನ್ನು ಒಳಗೊಂಡಿದೆ.”

[1] ಎಂಬ ಅಂಶ ಗಮನೀಯವಾದುದು. ಕಾರಣ ಬುಡಕಟ್ಟುಗಳ ಸಂಸ್ಕೃತಿ, ಭಾರತೀಯ ಸಂಸ್ಕೃತಿಗೆ ನೀಡಿದ ಕಾಣಿಕೆ ಕಡಿಮೆಯೇನಲ್ಲ. “ಆದರೆ ಶಿಷ್ಟ ಜನರು ಭಾರತೀಯ ಸಂಸ್ಕೃತಿಯ ಬಗೆಗೆ ವಿಚಾರ ಮಾಡುವಾಗ ಜಾತಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಬುಡಕಟ್ಟುಗಳ ಸಂಸ್ಕೃತಿಯನ್ನು ಕಡೆಗಣಿಸಿರುವದು ಕಂಡುಬರುತ್ತದೆ. ಆರಂಭದಲ್ಲಿ ವೃತ್ತಿಗನುಗುಣವಾಗಿ ವರ್ಗೀಕರಿಸಲ್ಪಟ್ಟ ಜಾತಿ ವ್ಯವಸ್ಥೆ  ಕಾಲಕ್ರಮೇಣ ಸಾಮಾಜಿಕ ಶೋಷಣೆಯ ಸಾಧನವಾಗಿ ಮಾತ್ರ ಪರಿಣಮಿಸಿತು.”[2]

ಬ್ರಿಟಿಷರು ತಮ್ಮ ಆಳ್ವಿಕೆಯ ಕಾಲದಲ್ಲಿ ಈ ಕೊರಮ ಬುಡಕಟ್ಟನ್ನು ಗುರುತಿಸಿ ಅಪರಾಧಿ (criminal tribes) ವರ್ಗಕ್ಕೆ ಸೇರಿಸಿದ್ದು, ಅವರ ಸಾಮಾಜಿಕ, ಭೌದ್ಧಿಕ ಮತ್ತು ಆರ್ಥಿಕಾಭಿವೃದ್ಧಿಗೆ ಮಾರಕವಾಯಿತು. ಕಳ್ಳತನ ಮಾಡುವದು ಈ ಕೊರಮರಲ್ಲಿ ವೃತ್ತಿಯಂತೆ ರೂಢಿಯಲ್ಲಿದ್ದುದು ತಿಳಿದು ಬಂದರೂ ಎಲ್ಲರೂ ಕಳ್ಳತನದಿಂದಲೇ ಜೀವನ ಸಾಗಿಸುತ್ತಿದ್ದರು ಎಂದರ್ಥವಲ್ಲ. ಆದ್ದರಿಂದ ಭಾರತೀಯ ಜನಜೀವನದಲ್ಲಿ ಇವರ ಸ್ಥಿತಿಗತಿ ಒಂದು ಸಾಮಾಜಿಕ ದುರಂತ ಎಂದೇ ಹೇಳಬೇಕು. ಕಳ್ಳತನ ಮಾಡುವುದರಿಂದಾಗಿ ಸಮಾಜದ ದೃಷ್ಟಿಯಲ್ಲಿ ಹೀನಾಯವಾಗಿ ಕಂಡ ಈ ಜನ ಸರಿಯಾದ ಮಾರ್ಗದರ್ಶನ, ಪುರಸ್ಕಾರಗಳಿಲ್ಲದೆ ಮತ್ತೂ ಹಿಂದುಳಿಯುವಂತಾಯಿತು. ಸಮಾಜದ ಬೆಳವಣಿಗೆಯ ಮುಖ್ಯ ಪ್ರವಾಹಕ್ಕೆ ಸೇರಿಕೊಳ್ಳದೆ, ತಮ್ಮ ವೈಶಿಷ್ಟ್ಯವನ್ನು ಉಳಿಸಿಕೊಂಡು ಇಂದಿಗೂ “ಬುಡಕಟ್ಟು” ಜನಾಂಗವಾಗಿಯೇ ಉಳಿದಿರುವುದು ದುರ್ದೈವ. ಅವರ ಬಗೆಗೆ ಅಧ್ಯಯನಗಳು ವಿಶೇಷವಾಗಿ ನಡೆದಿಲ್ಲ.

ಈ ಬುಡಕಟ್ಟಿನ ಬಗ್ಗೆ ಅಲ್ಲೊಂದು ಇಲ್ಲೊಂದು ಬಿಡಿ ಲೇಖನಗಳು ಪ್ರಕಟವಾಗಿವೆಯಾದರೂ ಸಮಗ್ರವಾದ ಅಧ್ಯಯನ ಈವರೆಗೆ ಆದಂತಿಲ್ಲ. ಜನಪದ ಸಂಸ್ಕೃತಿಯ ಬಹು ಮುಖ್ಯವಾದ ಎಷ್ಟೋ ಅಂಶಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ, ಬುಡಕಟ್ಟುಗಳೂ ಕೂಡ ತಮ್ಮ ಮೂಲ ದ್ರವ್ಯಗಳನ್ನು ಕಳೆದುಕೊಂಡು ನಾಗರೀಕತೆಯ ಪ್ರವಾಹದಲ್ಲಿ ತೇಲಿ ಹೋಗುತ್ತಿವೆ. ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲ್ಲನ್ನಿಕ್ಕಿದರು ಎನ್ನುವುದಕ್ಕಿಂತ ಕೊರಮರು ಪರಂಪರೆಯಿಂದ ಮೈಗೂಡಿಕೊಂಡು ಬಂದ ಜೀವನ ಮೌಲ್ಯಗಳು ಕಳಚುವ ಮೊದಲೇ ಈ ಜನರ ಸಂಸ್ಕೃತಿಯ ಅಧ್ಯಯನದ ಅವಶ್ಯಕತೆಗಳನ್ನರಿತು ದಕ್ಷಿಣ ಕರ್ನಾಟಕದಲ್ಲಿನ ಕೆಲವು ಜಿಲ್ಲೆಗಳಲ್ಲಿ ಸಾಂದ್ರವಾಗಿ ವಾಸವಾಗಿರುವ ಈ ಜನರನ್ನು ಕೇಂದ್ರವಾಗಿಟ್ಟುಕೊಂಡು ಕ್ಷೇತ್ರ ಕಾರ್ಯವನ್ನಾರಂಭಿಸಿದೆ. ಕೊರಮ ಜನಾಂಗದವನಾದ ನಾನು ನನ್ನ ಬುಡಕಟ್ಟಿನ ಒಳ-ಹೊರಗನ್ನು ಇತರರಿಗಿಂತ ಹೆಚ್ಚು ಪ್ರಮಾಣಬದ್ಧವಾಗಿ, ನಿಖರವಾಗಿ ಹೇಳಲು ಸಾಧ್ಯವೆನ್ನುವ ನಂಬಿಕೆಯಿಂದ, ಅಲ್ಲದೆ ನಮ್ಮ ಜನತೆ ಈ ಬಗ್ಗೆ ಪ್ರೋತ್ಸಾಹ ಕೊಟ್ಟೇ ಕೊಡುತ್ತಾರೆ ಎಂಬ ವಿಶ್ವಾಸದಿಂದ ಪ್ರಸ್ತುತ ಅಧ್ಯಯನಕ್ಕೆ ತೊಡಗಿದೆ.

ಈ ಪ್ರಬಂಧದಲ್ಲಿ “ಕೊರಮ” ಬುಡಕಟ್ಟಿನ ಆದಷ್ಟೂ ಮೂಲ ಸಾಂಸ್ಕೃತಿಕ ಕರೂಪವನ್ನು ಹುಡುಕುವ ಪ್ರಯತ್ನ ಮಾಡಲಾಗಿದೆ. ಈ ಜನರಲ್ಲಿ ಹಿರಿಯ ಯಜಮಾನರ ತಮ್ಮ ಬುಡಕಟ್ಟಿನ ಇತಿಹಾಸವನ್ನು ಹೆಚ್ಚು ತಿಳಿದುಕೊಂಡವರ ಜತೆಯಲ್ಲಿ ಸಮಾಲೋಚಿಸಿ, ಮೂಲ ಸಾಮಗ್ರಿಯನ್ನು ಕಲೆಹಾಕುವ ಜೊತೆಗೆ ಸಾಂಸ್ಕೃತಿಕ ದಾಖಲೆಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಈ ಕೊರಮ ಜನಾಂಗದವರು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ವಿರಳವಾಗಿ ವ್ಯಾಪಿಸಿರುವರು, ಅರೆ ಅಲೆಮಾರಿಗಳಾಗಿರುವ ಈ ಜನಾಂಗದ ಅಧ್ಯಯನಕ್ಕೆ ಮುಖ್ಯವಾಗಿ ತುಮಕೂರು, ಹಾಸನ, ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿನ ಪ್ರಮುಖವಾದ “ಕೊರಮರ ಹಟ್ಟಿ” ಗಳನ್ನು ಆರಿಸಿಕೊಂಡು ಕ್ಷೇತ್ರಕಾರ್ಯಕ್ಕೆ ಬಳಸಿಕೊಂಡು ಈ ಪ್ರಬಂಧವನ್ನು ಸಿದ್ಧಪಡಿಸಿದ್ದೇನೆ. ಆಧುನಿಕ ಕಕ್ಷೆಯಲ್ಲಿ ಕೊರಮರ ಜೀವನದ ರೀತಿ ಮತ್ತು ದೃಷ್ಟಿಗಳು ಹೇಗೆ ಬರಬಲ್ಲವು ಎನ್ನುವದರ ಜೊತೆಗೆ ನಿಸರ್ಗದೊಡನೆ ಇವರ ಸಂಬಂಧವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲೆತ್ನಿಸಿದ್ದೇನೆ. ಅಲ್ಲಲ್ಲಿ. ಸಮಾನಾಂತರವಾಗಿ ಬೆಳೆದಿರುವ ಜಾನಪದದ ಜೀವನ ಹಾಗೂ ಇತರ ಬುಡಕಟ್ಟುಗಳ ಜನರ ರೀತಿ-ನೀತಿಗಳೊಡನೆ ಹೋಲಿಸುವ ಪ್ರಯತ್ನ ಮಾಡಲಾಗಿದೆ. ಬುಡಕಟ್ಟು ಜನಾಂಗಗಳ ಅಧ್ಯಯನಕ್ಕೆ ಈ ಮುಂಚಿನವರು ಅನುಸರಿಸಿದ ವಿಧಾನಗಳನ್ನು ಗಮನಿಸಿ, ಸೂಕ್ತ ಬದಲಾವಣೆಗಳೊಡನೆ “ಒಂದು ಅಧ್ಯಯನ ಮಾದರಿ”ಯನ್ನೂ ರೂಪಿಸಲಾಗಿದೆ.

ಭಾರತದ ಅನೇಕ ಬುಡಕಟ್ಟುಗಳಲ್ಲೊಂದಾದ ಕೊರಮರು ತಮ್ಮ ಬದುಕಿನ ವೈವಿಧ್ಯತೆಯಿಂದಾಗಿ ಅತಿ ಪ್ರಾಚೀನ ಕಾಲದಿಂದಲೂ ಜನಮಾನಸವನ್ನು ಸೆಳೆಯುತ್ತಾ ತಮ್ಮದೇ ಆದ ಕಟ್ಟುಪಾಡುಗಳೊಂದಿಗೆ ಬದುಕುತ್ತಾ ಬಂದಿದ್ದಾರೆ. ಈ ಬುಡಕಟ್ಟಿನ ಮೂಲ ಸ್ವರೂಪ ಅಥವಾ ಜಾನಪದೀಯ ಅಂಶಗಳು ಕಾಲಾಂತರದ ಸಾಮಾಜಿಕ ಸ್ಥಿತ್ಯಂತರಗಳಿಂದಾಗಿ ದಿನದಿಂದ ದಿನಕ್ಕೆ ಮರೆಯಾಗುತ್ತಾ ಹೋಗುತ್ತಿವೆ. ಆದ್ದರಿಂದ ಪ್ರತಿಯೊಂದು ಬುಡಕಟ್ಟಿನ ಮಾನವ ಶಾಸ್ತ್ರೀಯ ಮತ್ತು ಸಂಸ್ಕೃತೀಯ ಅಧ್ಯಯನ ಇಂದು ಅಗತ್ಯವಾಗಿ ಆಗಬೇಕಾಗಿದೆ. ಈ ದೃಷ್ಟಿಯಿಂದ ಕೊರಮ ಬುಡಕಟ್ಟಿನ ಐತಿಹಾಸಿಕ ವಿವರಗಳನ್ನು (ಮೌಖಿಕ ಮತ್ತು ಗ್ರಾಂಥಿಕ) ಅವರ ಜೀವನ ಕ್ರಮದ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಅವಲೋಕಿಸಿ ಬದುಕಿನ ಒಳಪದರುಗಳನ್ನು ಅಭ್ಯಸಿಸಬೇಕಾಗಿದೆ. ಕಾರಣ ಇಂದು ಹೊಸ ಸಮಾಜವೊಂದನ್ನು ನಿರ್ಮಿಸುವ ಕಾರ್ಯದಲ್ಲಿ ನಾವೆಲ್ಲ ತೊಡಗಿರುವದರಿಂದ ಅದಕ್ಕೆ ಬೇಕಾದ ಮೌಲ್ಯಗಳನ್ನು ಹಿಂದಿನ ಆ ಸಮಾಜದ ಅಧ್ಯಯನದಿಂದ ರೂಢಿಸಿಕೊಳ್ಳಬೇಕಾಗಿದೆ.[1]        ನಂ. ತಪಸ್ವೀಕುಮಾರ್ ಜಾನಪದ ಸಂಸ್ಕೃತಿ ಪೀಠಿಕೆ-III

[2]        ಡಾ. ತೀ.ನಂ. ಶಂಕರನಾರಾಯಣ, ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು. ಪುಟ-10.