ಜಗತ್ತಿನಾದ್ಯಂತ ಮಾನವನ ಉಗಮ ಮತ್ತು ವಿಕಾಸದ ಬಗೆಗೆ ಚಿಂತನ ಮಂಥನಗಳು ನಡೆದಿವೆ. ಮಂಗನಿಂದ ಮಾನವನಾದ ಬಗೆಗೆ ಡಾರ್ವಿನ್‌ನು ತನ್ನ ವಾದವನ್ನು ಮಂಡಿಸಿದರೆ, ಇತಿಹಾಸವು ಮಾನವನ ಉಗಮ ಮತ್ತು ಬೆಳವಣಿಗೆಯ ಎಲ್ಲ ಹಂತಗಳ ವಿವೇಚನೆಯನ್ನು, ಕಾಲದಿಂದ ಕಾಲಕ್ಕೆ ಆದ ಬದಲಾವಣೆಗಳನ್ನು ತಿಳಿಸುತ್ತದೆ. ಪೊಟರೆ ಗುಹೆಗಳಿಂದ ಮೇಲೆದ್ದು ಬಂದ ಮನುಷ್ಯ ಇಂದು ಚಂದ್ರ ಮುಂತಾದ ಗ್ರಹಗಳಿಗೂ ದಾಳಿ ಇಡುವಷ್ಟು ಬೆಳೆದಿರುವುದು ಸೋಜಿಗದ ಸಂಗತಿಯಾಗಿ ಉಳಿದಲ್ಲ. ವಿಜ್ಞಾನ ಇಂದು ನಮ್ಮನ್ನು ಆಕರ್ಷಿಸಿದಂತೆ ಧರ್ಮ ಈ ಸಾವಿರಾರು ವರ್ಷಗಳಲ್ಲಿ ನಮ್ಮ ಮೇಲೆ ಪ್ರಭುತ್ವ ಸ್ಥಾಪಿಸಿಕೊಂಡು ಬಂದಿದೆ.

ಪ್ರಕೃತಿಯ ನಿಗೂಢತೆಗೆ ಉತ್ತರ ಸಿಗದೆ ಇದ್ದಾಗ ಆ ಎಲ್ಲವನ್ನು ದೇವರು ಮತ್ತು ಧರ್ಮದ ಹೆಸರಿನಲ್ಲಿ ನಂಬಿ ಜನ ಅದರ ನೆರಳಿನಲ್ಲಿಯೇ ಬದುಕಿದರು. ಆ ನಿಗೂಢ ಅಂಶಗಳ ಬಗೆಗೆ ಭಕ್ತಿ ಮತ್ತು ಗೌರವವನ್ನು ಬೆಳೆಸಿಕೊಂಡರು. ಆ ಅತೀಂದ್ರಿಯ ಶಕ್ತಿಗೆ ಮಣಿದು, ಮನುಷ್ಯನ ಹುಟ್ಟು-ಸಾವಿಗೆ ಬದುಕಿನ ಎಲ್ಲ ಆಗು-ಹೋಗುಗಳಿಗೆ ಅದೇ ಕಾರಣವೆಂದು ನಂಬಿದರು. ಆ ನಂಬಿಕೆಗಳೇ ಮುಂದೆ ಹಲವು ರೂಪದ ಕಥೆ, ಕಾವ್ಯಗಳಾಗಿ ರೂಪುಗೊಂಡವು. ಅವು ಜಾತಿಯ, ಭಾಷೆಯ ವಿಷಯಗಳನ್ನು ಒಳಗೊಂಡವು. ಈ ನಿಟ್ಟಿನಲ್ಲಿ ವಿಚಾರಮಾಡಿದಾಗ ಪ್ರತಿಯೊಂದು ಗುಂಪೂ ತಮ್ಮನ್ನು ಅತ್ಯಂತ ಪ್ರಾಚೀನವಾಗಿ ಗುರುತಿಸಿಕೊಳ್ಳಲು, ಮೇಲಾಗಿ ರೂಪಸಿಕೊಳ್ಳಲು ಪ್ರಯತ್ನಿಸಿವೆ. ಸಾಮಾಜಿಕ ಸಂದರ್ಭಗಳಲ್ಲಿ ಇವು ಅಗತ್ಯವೂ ಆಗಿವೆ.

ಹಾಗೆ ನೋಡಿದರೆ ಈ ವಿಷಯದಲ್ಲಿ ಕೊರಮರೂ ಹಿಂದೆ ಬಿದ್ದಿಲ್ಲ. ತಮ್ಮ ಜಾತಿಯ ಹುಟ್ಟಿನ ಬಗೆಗೆ, ಭಾಷೆಯ ಬಗೆಗೆ ಹಲವು ಕಥೆಗಳನ್ನು ರೂಪಿಸಿಕೊಂಡು ಸಾಮಾಜಿಕವಾಗಿ ಉತ್ತಮ ಸ್ಥಾನ-ಮಾನ ಗಳಿಸಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಜಾತಿಯ ಅಥವಾ ಆ ಪಂಗಡದ ಹುಟ್ಟು ದೈವನಿರ್ಮಿತವಾದದ್ದು ಎಂಬುದೇ ಅವರ ನಂಬಿಕೆ. ಈ ಬಗೆಯ ನಂಬಿಕೆ ಹಲವಾರು ಕಥೆಗಳಲ್ಲಿ ಕಂಡುಬರುತ್ತದೆ. ಅಂಥ ಕಥೆಗಳಲ್ಲೊಂದು “ಪಾರ್ವತಿ ಕೊರವಂಜಿ ಕಥೆ” ಪಾರ್ವತಿಯ ವಂಶೀಯರೇ ಕೊರಮರಾದರು ಎಂಬುದು.

[1]

ಶ್ರೀ ಬಿ.ವಿ. ಮಲ್ಲಾಪೂರ ಅವರು ಇಂಥದ್ದೇ ಕಥೆಯನ್ನು ಉದಾಹರಿಸುವದರ ಜೊತೆಗೆ “ಅರ್ಜುನನ ತಪಸ್ಸನ್ನು ಪರೀಕ್ಷಿಸಲು ಶಿವನು ಕಿರಾತನಾದಾಗ ಪಾರ್ವತಿ ಕೊರವಂಜಿಯ ವೇಷ ಧರಿಸಿದಳು. ಅವಳೇ ಕೊರವಿ ಎಂದು ಹೇಳುವವರೂ ಇದ್ದಾರೆ”[2] ಎನ್ನುತ್ತಾರೆ. ಇದರ ಜೊತೆಗೆ ಮತ್ತೊಂದು ಸ್ವಾರಸ್ಯಕರವಾದ ಕಥೆಯನ್ನು ಉಲ್ಲೇಖಿಸಿದ್ದಾರೆ. “ಪಾರ್ವತಿ ಒಂದು ಸಲ ಹಾವೊಂದರ ಹೊಟ್ಟೆಯಲ್ಲಿ ಬೆಲೆಬಾಳುವ ಹರಳುಗಳನ್ನು ತುಂಬಿ ಮೇದಾರನೊಬ್ಬನಿಗೆ ಅದರಿಂದ ತೊಟ್ಟಿಲೊಂದನ್ನು ತಯಾರಿಸಲು ಹೇಳಿದಳಂತೆ. ಆ ಹರಳುಗಳ ಕರಕರಧ್ವನಿಗೆ ಹೆದರಿ ಹಾವನ್ನು ಮುಟ್ಟಲು ಹಿಂಜರಿದನು. ಆಗ ಪಾರ್ವತಿ ಕೊರಚರವನೊಬ್ಬನಿಗೆ ಆ ಕೆಲಸ ಹೇಳಿದಳು. ಕೊರಚನು ಹಾವನ್ನು ಬಿದಿರು ಸಿಗಿಯುವಂತೆ ಸೀಳಿ ತೊಟ್ಟಿಲು ತಯಾರಿಸಿದನಂತೆ. ಸಂತೃಪ್ತಳಾದ ಪಾರ್ವತಿ ಕೊರಚನಿಗೆ ತಾನು ಕಣಿ ಹೇಳಲು ಬಳಸುತ್ತಿದ್ದ ಬಿದಿರಿನ ಮಾಂತ್ರಿಕ ದಂಡವನ್ನು ಮತ್ತು ಮರವನ್ನು ಕೊಟ್ಟಳಂತೆ. ಇದರಿಂದಾಗಿ ಕೊರವ ಹೆಣ್ಣು ಮಕ್ಕಳು ಕಣಿ ಹೇಳುವುದನ್ನೇ ಒಂದು ವೃತ್ತಿಯನ್ನಾಗಿ ಮಾಡಿಕೊಂಡರಂತೆ. ಮಹಾಭಾರತದಲ್ಲಿ ಕೊರವರು ಧರ್ಮರಾಜನ ವಂಶದವರೆಂದು ಸೂಚಿಸುವ ಒಂದು ಕಥೆಯಿದೆ. ಸೋದರರ ಜೊತೆ ಧರ್ಮರಾಜನು ವನವಾಸಕ್ಕೆ ಹೋದಾಗ ಅವನನ್ನು ಪ್ರೀತಿಸಿದ ಓರ್ವ ಹೆಣ್ಣುಮಗಳು ಕಣಿ ಹೇಳುವವಳ ವೇಷ ಧರಿಸಿ ಹೋಗಿ ಅವನನ್ನು ವರಿಸಿದಳಂತೆ. ಆಕೆಯ ಸಂತಾನವೇ ಕೊರವರೆಂದು ನಂಬಲಾಗುತ್ತದೆ. ಇಂದಿನ ಕೊರವರ ಚಾಣಾಕ್ಷತನ ಹಾಗೂ ಸಾಹಸಗಳನ್ನು ಹೋಲುವ ಕಾರ್ಯನಿರತ “ಕುರು” ಎಂಬ ಜನಾಂಗದ ಹೆಸರು ಮಹಾಭಾರತದಲ್ಲಿ ಮೂಲತಃ ಉತ್ತರದವರೆಂಬುದನ್ನು ಸೂಚಿಸುವ ಪ್ರಯತ್ನ ಇಲ್ಲಿದೆ.” ಇವೆಲ್ಲ ಚಮತ್ಕಾರವಾದ ವಾದವೇ ಹೊರತು ವಾಸ್ತವಾಂಶವಲ್ಲ. ಕೊರವರು ದಕ್ಷಿಣದ ದ್ರಾವಿಡ ವರ್ಗಕ್ಕೆ ಸೇರಿದವರೆಂಬುದನ್ನು ಸೂಚಿಸುವ ಅನೇಕ ಇತರ ಪುರಾವೆಗಳನ್ನು ಈ ಹಿಂದೆಯೇ ನೋಡಲಾಗಿದೆ.

ಜಾತಿಯೇ ಪ್ರಧಾನವಾದ ಸಮಾಜದಲ್ಲಿ ರಾಜಮಹಾರಾಜರಿಗೆ ಕಣಿ ಹೇಳುತ್ತಿದ್ದ ಈ ಜನ ತಮ್ಮನ್ನು ಕೀಳು ಎಂದು ಹೇಳಿಕೊಳ್ಳುವಂತಿರಲಿಲ್ಲ. (ಅದು ಮನುಷ್ಯನ ಸ್ವಭಾವವೂ ಅಲ್ಲ.) ಆದ್ದರಿಂದ ತಮ್ಮ ಬುಡಕಟ್ಟಿಗೆ ಸಾಮಾಜಿಕವಾಗಿ ಗೌರವ ರೂಢಿಸಿಕೊಳ್ಳಲು ಕುರುವಂಶದ ಜೊತೆ ತಮ್ಮ ಬಂಧುತ್ವವನ್ನು ಗುರುತಿಸಿಕೊಂಡು ಕಥೆ ಕಟ್ಟಿರಬಹುದು. ಈ ಬುಡಕಟ್ಟಿನ ಹಿನ್ನೆಲೆಯನ್ನು ಕುರಿತು ಮತ್ತೆರಡು ಕಥೆಗಳು ದೊರೆಯುತ್ತವೆ.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಿರೇಬಿದರೆ (ಬಿದರೇಗುಡಿ), ಚಿಕ್ಕನಾಯ್ಕನ ಹಳ್ಳಿಯ ಸೋರಲ ಮಾವು, ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಿಟ್ಟಿಹಳ್ಳಿ ಮುಂತಾದ ಕಡೆ ನೆಲೆಸಿರುವ ಕೊರಮರಲ್ಲಿ ಈ ಕಥೆಗಳು ಕೇಳಿಬರುತ್ತವೆ. ಬಿದರೇಗುಡಿಯಲ್ಲಿ ದೊರೆತ ಕಥೆ ಈ ರೀತಿ ಇದೆ. ” ಹಿಂದೆ ದಶರಥ ಮತ್ತು ಕೌಸಲ್ಯಾದೇವಿಯವರಿಗೆ ಮಕ್ಕಳಿರಲಿಲ್ಲ. ಅವರು ಮಕ್ಕಳಿಗಾಗಿ ಹಗಲಿರುಳು ಪರಿತಪಿಸುತ್ತಿದ್ದರು. ಶಿವ-ಪಾರ್ವತಿಯರ ಪ್ರಾರ್ಥನೆಯಲ್ಲಿಯೇ ಕಾಲ ಕಳೆಯುತ್ತಿದ್ದರು. ಇವರ ಭಕ್ತಿಯ ಮೊರೆ ಕೈಲಾಸದವರೆಗೂ ಮುಟ್ಟಿತು. ಶಿವಪಾರ್ವತಿಯರು ಭೂಲೋಕದ ಕಡೆ ಹೊರಟರು. ಅಯೋಧ್ಯೆಗೆ ಬರುವಾಗ ಶಿವನು ಕೊರಮನ ವೇಷವನ್ನು ಪಾರ್ವತಿಯು ಕೊರವಂಜಿಯ ವೇಷವನ್ನು ಧರಿಸಿ ಬಂದರು. ಪಟ್ಟಣದ ಹೊರಗೆ ಒಂದು ಮರದಡಿಯಲ್ಲಿ ಶಿವನನ್ನು ಬಿಟ್ಟು ತಾನೊಬ್ಬಳೇ ತಲೆಯಮೇಲೆ ಬಿದಿರಿನ ಗೋಡೆಯೊಂದನ್ನು ಹೊತ್ತು ಗಗ್ರದ ಕೋಲನ್ನು (ಮಾಂತ್ರದ ಕೋಲು) ಕೈಯಲ್ಲಿ ಹಿಡಿದು ಪಟ್ಟಣದ ರಾಜ ಬೀದಿಯಲ್ಲಿ ಕಣಿ ಹೇಳುತ್ತೇನೆಂದು ಸಾರುತ್ತಾ ಬಂದಳು. ಆಕೆಯನ್ನು ನೋಡಿದ ರಾಜಪರಿವಾದವರು ಅರಮನೆಗೆ ಕರೆದುಕೊಂಡು ಬಂದರು. ಆ ಕೊರವಂಜಿ ಕೌಸಲ್ಯದೇವಿಯ ಕೈ ನೋಡಿ ಕಣಿ ಹೇಳಿ ಮಕ್ಕಳ ಫಲ ಕೊಟ್ಟುಹೊರಟಳು. ಮಹರಾಣಿ ಮತ್ತು, ರತ್ನ, ವಜ್ರ ವೈಢೂರ್ಯಗಳನ್ನೆಲ್ಲ ಕೊಡಲು ಹೋದರೂ ಆಕೆ ಅವನ್ನೆಲ್ಲ ತಿರಸ್ಕರಿಸಿ, “ಅಮ್ಮಾ ಮತ್ತು-ರತ್ನ, ವಜ್ರ-ವೈಢೂರ್ಯವೆಲ್ಲ ನಮ್ಮ ಮನೆಯ ಹುಳುಕು ಜೋಳ. ಇದೆಲ್ಲ ನನಗೆ ಬೇಡ. ನಿನ್ನಲ್ಲಿಯೇ ಇರಲಿ ಫಲ ಆದನಂತರ ಕೊಡವೆಯಂತೆ” ಎಂದು ಹೇಳಿ ಹೊರಟಳಂತೆ. ಅದೇ ಸಮಯದಕ್ಕೆ ಪರಮೇಶ್ವರ ಒಂದು ಬಿದಿರು ದಬ್ಬೆಯನ್ನು ಹೆಗಲಮೇಲಿಟ್ಟುಕೊಂಡು, ಮಚ್ಚನ್ನು ಸೊಂಟದಲ್ಲಿ ಸಿಕ್ಕಿಸಿಕೊಂಡು, ” ಸಿಂಗೀ ಓ ಸಿಂಗೀ” ಎಂದು ಕೂಗುತ್ತ ಪಟ್ಟಣದ ಬೀದಿಗಳಲ್ಲಿ ಕೊರವಂಜಿಯನ್ನು ಹುಡುಕುತ್ತ ಬಂದು ಆಕೆಯನ್ನು ಕೂಡಿಕೊಂಡು ಕೈಲಾಸದತ್ತ ಹೋಗುವಾಗ ಪಾರ್ವತಿ ಶಿವನನ್ನು ಕುರಿತು “ಸ್ವಾಮಿ ನಾವು ಈ ವೇಷ ಧರಿಸಿದ್ದಕ್ಕೆ ಗುರುತು ಉಳಿಸಬೆಕು” ಎಂದು ಕೇಳಿಕೊಂಡಳಂತೆ. ಅದಕ್ಕೆ ಈಶ್ವರ ಇಬ್ಬರು ಮಕ್ಕಳನ್ನು ಸೃಷ್ಟಿಸಿ ತನ್ನ ಸೊಂಟದಲ್ಲಿದ್ದ ಮಚ್ಚನ್ನು ತೆಗೆದು ಆ ಮಚ್ಚಿಗೆ ಗೆಜ್ಜೆಕಟ್ಟಿ ಅಂಗೈ ಮೇಲೆ ಕುಣಿಸುತ್ತಾ ಆ ಮಕ್ಕಳಿಗೆ ಮಚ್ಚು ಹಿಡಯಲು ಹೇಳಿದನಂತೆ. ಒಬ್ಬನು ಮಚ್ಚಿನ ಮೇಲ್ಭಾಗವನ್ನು ಹಿಡಿದರೆ ಮತ್ತೊಬ್ಬನು ಕೆಳಬಾಗವನ್ನು ಹಿಡಿದನಂತೆ. ಅದರಂತೆ ತನ್ನ ಹೆಗಲ ಮೇಲಿನ ಬಿದಿರ ದಬ್ಬೆಯನ್ನು ಹಿಡಿಯಲು ಹೇಳಿದಾಗ, ಮಚ್ಚಿನ ಮೇಲ್ಭಾಗ ಹಿಡಿದ ಹುಡುಗ ದಬ್ಬೆಯ ತುದಿಯನ್ನು, ಇನ್ನೊಬ್ಬ ದಬ್ಬೆಯ ಬುಡದ ಭಾಗವನ್ನು ಹಿಡಿದನಂತೆ. ಮಚ್ಚಿನ ಕೆಳ ಹಿಡಿಯ ಭಾಗವನ್ನು ಹಿಡಿದವನಿಗೆ ಗೌರಿ ಮಗನಾಗು ಎಂದೂ, ಮಚ್ಚಿನ ತುದಿ ಭಾಗವನ್ನು ಹಿಡಿದವನಿಗೆ ಗಂಗೆ ಮಗನಾಗು ಎಂದು ವರವನ್ನು ಕೊಟ್ಟು ಇಬ್ಬರು ಹೆಣ್ಣುಮಕ್ಕಳನ್ನು ಸೃಷ್ಟಿಸಿ ಅವರಿಬ್ಬರಿಗೆ ಒಬ್ಬೊಬರನ್ನು ಒಪ್ಪಿಸಿ ಗೌರಿಯ ಮಗ ಕೊರಮನಾಗಲಿ, ಗಂಗೆಯ ಮಗ ಮೇದಾರನಾಗಲಿ ಎಂದು ಹರಸಿದನಂತೆ.

ಗೌರಿಮಕ್ಕಳು, ಗಂಗೆಮಕ್ಕಳು ಅಂದಿನಿಂದ ಬಿದಿರಿನ ಕೆಲಸ ಮಾಡುತ್ತಾ ಬಂದಿದ್ದಾರೆ. ಗಂಗೆಯ ಮಗ ಮೇದಾರ ಮಚ್ಚಿನ ಮೇಲ್ಭಾಗ ಹಿಡಿದಿದ್ದರಿಂದ ಅವನ ಮಚ್ಚಿಗೆ ಇಂದಿಗೂ ಹಿಡಿಯಿಲ್ಲ. ಕೊರಮರು ಬಳಸುವ ಮಚ್ಚಿಗೆ ಹಿಡಿ ಇದೆ. ಕೊರಮರು ಕೇರವು ಮರ ಮತ್ತು ಬೀಸಣಿಗೆಗಳನ್ನು ಮಾಡುವುದಿಲ್ಲ. ಅವುಗಳ ಅಣಿ ಗೌರಿಗದ್ದುಗೆ ಎಂದು ಕಾಲಿನಿಂದ ಮೆಟ್ಟುವುದಿಲ್ಲ. ಮೇದರು ಬಿದಿರನ್ನು ತುದಿಯಿಂದ ಸೀಳಿದರೆ ಕೊರಮರು ಬುಡದಿಂದ ಸೀಳುತ್ತಾರೆ. ಗೌರಿ ಮಕ್ಕಳಿಂದ ನಮ್ಮ ಜಾತಿ ಬೆಳೆಯಿತು. ಪಾರ್ವತಿಯಂತೆ ನಮ್ಮ ಕೊರವಂಜಿಯರು ಕಣಿ ಹೇಳುವುದನ್ನು, ಮಕ್ಕಳ ಫಲಕ್ಕೆ ಔಷಧಿ ಕೊಡುವುದನ್ನು ಬಹಳ ಹಿಂದಿನಿಂದಲೂ ರೂಢಿಸಿಕೊಂಡಿದ್ದಾರೆ. ಇದು ನಮಗೆ ದೈವದತ್ತವಾಗಿ ಬಂದ ಹಕ್ಕು.[3] ಎನ್ನುತ್ತಾರೆ ಕೊರಮರು.

ಈ ಮೇಲೆ ಹೇಳಿದ ಕಥೆಗೆ ಪಾಠಾಂತರವಿದ್ದು ಅದು ಇ ರೀತಿ ಇದೆ. “ದಶರಥ ಮಹಾರಾಜನಿಗೆ ಮದುವೆಯಾಗಿ ಎಷ್ಟು ವರ್ಷ ಕಳೆದರೂ ಮಕ್ಕಳಾಗಲಿಲ್ಲ. ಅದೇ ಚಿಂತೆಯಲ್ಲಿ ರಾಜ ರಾಣಿಯರು ಕಾಲ ಕಳೆಯುತ್ತಿದ್ದಾಗ ಒಬ್ಬ ಜೋಗಿ ಭಿಕ್ಷೆ ಬೇಡಲು ಬರುತ್ತಾನೆ. ಅಷ್ಟು ದೊಡ್ಡ ಅರಮನೆಯಲ್ಲಿ ಮಕ್ಕಳಾಗಲಿ, ಅವರ ಸದ್ದಾಗಲಿ ಇಲ್ಲದಿರುವುದನ್ನು ಕಂಡು ಭಿಕ್ಷೆ ನೀಡಲು ಬಂದ ರಾಣಿಯನ್ನು ಕುರಿತು “ನಿಮಗೆ ಮಕ್ಕಳಿಲ್ಲವೆ” ಎಂದು ಕೇಳಿ ನಿಜ ಸಂಗತಿಯನ್ನರಿತು “ಮಕ್ಕಳಿಲ್ಲದವರ ಕೈಯಲ್ಲಿ ಭಿಕ್ಷೆ ಸ್ವೀಕರಿಸುವದಿಲ್ಲ” ಎಂದು ಭಿಕ್ಷೆ ತಿರಸ್ಕರಿಸಿ ಹೋಗುತ್ತಾನೆ. ಈ ವಿಷಯ ದಶರಥನಿಗೆ ತಿಳಿದು ತುಂಬಾ ದುಃಖಿತನಾಗಿ “ನನಗೆ ಎಷ್ಟು ಐಶ್ವರ್ಯವಿದ್ದರೇನು? ಚಕ್ರವರ್ತಿಯಾದರೇನು? ಮಕ್ಕಳಿಲ್ಲದವನು ಭಿಕ್ಷಕುಕರಿಗಿಂತ ಕೀಳು” ಎಂದು ಚಿಂತಿಸಿ ಅರಮನೆಯ ಮುಂದೆ ತುಳಿಸಿ ಕಟ್ಟೆಯೊಂದನ್ನು ಕಟ್ಟಿಸಿ ಅದರಲ್ಲಿ ತುಳಸಿಗಿಡ ನೆಡಿಸಿ ತಾನು ಒಂದು ಕೋನೆಯಲ್ಲಿ ಸೇರಿಕೊಂಡು ಹನ್ನೆರಡು ವರ್ಷ ಉಪವಾಸ ಮಾಡಲು ನಿಶ್ಚಯಿಸುತ್ತಾನೆ. ತನ್ನ ರಾಣಿಗೆ ಹ್ನನೆರಡು ವರ್ಷಗಳವರೆಗೆ ಈ ಕೋಣೆಯ ಬಾಗಿಲು ಮುಚ್ಚಿರುತ್ತದೆ. ಅಷ್ಟರಲ್ಲಿ ಯಾರಾದರೂ ಬಂದು ಈ ಬಾಗಿಲನ್ನು ತೆಗೆಸಿದರೆ ನಮಗೆ ಮಕ್ಕಳಾಗುತ್ತವೆ. ಇಲ್ಲದಿದ್ದರೆ ನಾನು ಒಳಗೆ ಉಪವಾಸದಿಂದ ಸಾಯುತ್ತೇನೆ. ನಾನು ಸತ್ತಂದು ಈ ತುಳಸಿ ಸತ್ತು ಹೋಗುತ್ತದೆ ಎಂದು ಹೇಳಿ ಮತ್ರದಿಂದ ಬಾಗಿಲನ್ನು ಮುಚ್ಚಿ ಒಳಗೆ ಸೇರಿಕೊಳ್ಳುತ್ತಾನೆ. ರಾಣಿಯರು ದುಃಖಸಾಗರದಲ್ಲಿ ಮುಳುಗಿ ಹೋಗುತ್ತಾರೆ.

ಕೆಲವು ವರ್ಷಗಳು ಕಳೆದರೂ ಬಾಗಿಲು ತೆಗೆಸುವವರಾರೂ ಬರಲಿಲ್ಲ. ಹನ್ನೊಂದು ವರ್ಷ ಕಳೆಯುತ್ತಾ ಬಂತು. ಉಪವಾಸದಿಂದ ಕೃಶನಾದ ರಾಜ ಉಪವಾಸ ಮಾತ್ರ ನಿಲ್ಲಿಸಲಿಲ್ಲ. ಹೊರಗೆ ರಾಣಿಯರ ಗೋಳು ಪಾರ್ವತಿಗೆ ಮುಟ್ಟಿತು. “ಪ್ರತಿದಿನವೂ ಇರುವೊಂಬತ್ತುಕೋಟಿ ಜೀವರಾಶಿಗಳಿಗೆಲ್ಲ ಅನ್ನ ಅಳೆಯುವ ಈಶ್ವರನಿಗೆ ದಶರಥ ಕಾಣಿಸಲಿಲ್ಲವಲ್ಲ. ಇದು ಆತನ ಕರ್ಮವೇ ಸರಿ, ಯಾವುದಕ್ಕೂ ಕಾಲ ಕೂಡಿ ಬರಬೇಕು.” ಎಂದು ಪಾರ್ವತಿ ಚಿಂತಿಸುತ್ತಿರುವಾಗ ಶಿವ ತನ್ನ ಕಾಯಕ ಮುಗಿಸಿ ಮನೆಗೆ ಬರುತ್ತಾನೆ. “ಜಗತ್ತಿಗೇ ಅನ್ನ ಕೊಡುವ ನಿಮಗೆ ದಶರಥ ಕಾಣಲಿಲ್ಲವೇ?” ಎಂದು ಪ್ರಶ್ನಿಸುತ್ತಾಳೆ. ಇಷ್ಟು ವರ್ಷಗಳಿಂದಲೂ ಭಕ್ತಿಯಿಂದ ನಿಮ್ಮನ್ನೇ ಪೂಜಿಸುತ್ತಿರುವ ಆತನಿಗೆ ಒಂದು ದಾರಿ ತೋರಿಸಬೇಕು ಎಂದು ಕೇಳಿಕೊಂಡಾಗ ಪರಮೇಶ್ವರನು ತನ್ನ ಮರೆವೆಗೆ ತಾನೆ ಮರುಗಿ ಪಾರ್ವತಿ ಸಮೇತನಾಗಿ ತನ್ನ ವಾಹನವನ್ನೇರಿ ಅಯೋಧ್ಯೆಯ ಕಡೆಗೆ ಬರುತ್ತಾನೆ. ಪಟ್ಟಣ ಸಮೀಪಿಸುತ್ತಿದ್ದಂತೆಯೇ ಪಾರ್ವತಿ ರಥವನ್ನು ನಿಲ್ಲಿಸಲು ಹೇಳಿ “ಸ್ವಾಮಿ ನಾವು ಈ ವೇಷದಲ್ಲಿ ಹೋಗುವುದು ಬೇಡ, ಇಬ್ಬರೂ ವೇಷ ಮರೆಸಿಕೊಳ್ಳೋಣ. ನೀವು ಕೊರಮನಾಗಿ ಇಲ್ಲೇ ಈ ಮರದ ಕೆಳಗೆ ಒಂದು ಗೂಡೆ ಮಾಡುತ್ತಿರಿ. ನಾನು ಕೊರವಂಜಿಯಾಗಿ ಹೋಗಿ ದಶರಥನ ಇಚ್ಛೆ ಹೇಳುತ್ತೇನೆಂದು ಸಾರುತ್ತ ಬಂದಳು. ಕೊರವಂಜಿಯನ್ನು ಕಂಡ ದಾಸಿಯರು ರಾಣಿಯರಿಗೆ ವಿಷಯ ತಿಳಿಸಿದರು. ಕೊರವಂಜಿಯನ್ನು ಕರೆಸಿ ಕೌಸಲ್ಯೆ ಕಣಿ ಹೇಳುವಂತೆ ಬೇಡಿಕೊಂಡಳು.

ಕೊರವಂಜಿ ತನ್ನಿಷ್ಟ ದೇವತೆಯನ್ನು ಸ್ಮರಿಸುತ್ತ ರಾಣಿಯ ಕೈ ಹಿಡಿದು ನೋಡುತ್ತ, ಕಳೆದು ಹೋದ ಘಟನೆಗಳನ್ನು, ಮುಂದಾಗುವ ವಿಷಯವನ್ನು ಹೇಳುತ್ತ ದಶರಥ ಇದ್ದ ಕೊಠಡಿಯ ಬಾಗಿಲನ್ನು ಮಂತ್ರದಿಂದ ತೆಗೆಸಿ ಆತನನ್ನು ಆಶೀರ್ವದಿಸಿ ಮಕ್ಕಳ ಫಲ ಕೊಟ್ಟು, ಹೋಗುತ್ತಾಳೆ. ಇದರಿಂದ ಆನಂದಗೊಂಡ ರಾಣಿಯರು ಮುತ್ತು-ರತ್ನಗಳನ್ನು ಕೊಡಲು ಹೋದಾಗ ಅದಾವುದನ್ನೂ ಮುಟ್ಟದ ಕೊರವಂಜಿ “ಇವೆಲ್ಲವೂ ನಿಮ್ಮಲ್ಲಿಯೇ ಇರಲಿ. ಈ ಮುತ್ತು-ರತ್ನವಾದರೋ ನಮ್ಮ ಮನೆಯ ಹುಳುಕು ಜೋಳವಿದ್ದಂತೆ. ನಿಮಗೆ ಮಕ್ಕಳಾದ ಮೇಲೆ ತಿಳಿದುದನ್ನು ಕೊಡುವಿರಂತೆ” ಎಂದು ಹೇಳಿ ಅಕ್ಕಿಪಡಿಯನ್ನು ಪಡೆದು ಹೊರಡುತ್ತಾಳೆ. ಅಷ್ಟರಲ್ಲಿ ಕೊರಮನಾದ ಈಶ್ವರ ಕೊರವಂಜಿ ಗೂಡೆ ಮಾಡಿಕೊಂಡು ಕಾಯುತ್ತಿದ್ದ. ಪಾರ್ವತಿ ಬಂದ ಮೇಲೆ ನಿಜ ವೇಷಧರಿಸಿ ಕೈಲಾಸದತ್ತ ತೆರಳುವುದರಲ್ಲಿದ್ದಾಗ “ಸ್ವಾಮಿ, ನಾವು ಈ ವೇಷ ಧರಿಸಿದ್ದಕ್ಕೆ ಭೂಲೋಕದಲ್ಲಿ ಗುರುತು ಬೇಡವೇ?” ಎಂದು ಕೇಳಿದಳು. ಆಗ ಈಶ್ವರ ಒಂದು ಗಂಡನ್ನು, ಹೆಣ್ಣನ್ನು ಸೃಷ್ಟಿಸಿ ಗಂಡಿಗೆ ಬಿದಿರು ಮತ್ತು ಮಚ್ಚನ್ನು, ಹೆಣ್ಣಿಗೆ ಕೊರವಂಜಿ ಗೂಡೆ ಮತ್ತು ಮಂತ್ರ ದಂಡವನ್ನು ಕೊಟ್ಟು ನೀವಿಬ್ಬರೂ ಗಂಡಹೆಂಡಿರಾಗಿ ನೂರು ಮಕ್ಕಳನ್ನು ಪಡೆದು ಸುಖವಾಗಿ ಬಾಳಿರಿ ಎಂದು ಹೇಳಿ ಮಾಯವಾದರಂತೆ. ಅಂದಿನಿಂದಲೂ ನಾವು ಕುಕ್ಕೆಗಳನ್ನು ಮಾಡುತ್ತೇವೆ. ನಮ್ಮ ಹೆಣ್ಣು ಮಕ್ಕಳು ಕಣಿ ಹೇಳುತ್ತಾರೆ ಎಂದು ಕೊರಮರು ಹೇಳಿಕೊಳ್ಳುತ್ತಾರೆ. ಈ ಕಥೆಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳೆಂದರೆ ಜಾತಿ ಅತ್ಯಂತ ಪ್ರಾಚೀನವಾದದ್ದು. ಶಿವನಿಂದ ಉಂಟಾದದ್ದು. ದಶರಥನಿಗೂ ಕಣಿ ಹೇಳಿ ಮಕ್ಕಳ ಫಲ ಕೊಟ್ಟವರು ಕೊರಮರು. ಕಣಿ ನೂರಕ್ಕೆ ನೂರು ಸತ್ಯವೆಂಬುದು. ಇದರ ಉದ್ದೇಶವೆಂದರೆ ಇತರ ಜನಾಂಗದ ಹಾಗೆ ತಾವೂ ತಮ್ಮ ಹುಟ್ಟಿಗೆ ಉತ್ತಮವಾದ ಕಾರಣಗಳನ್ನು ರೂಢಿಸಿಕೊಳ್ಳುವುದು ಮತ್ತು ಸಾಮಾಜಿಕವಾಗಿ ತಮ್ಮನ್ನು ಇತರರ ಜೊತೆ ಕಂಡುಕೊಳ್ಳುವುದು, ಸಾಮಾಜಿಕ ತಿರಸ್ಕಾರದಿಂದ ತಪ್ಪಿಸಿಕೊಳ್ಳಬೇಕೆಂಬುದೂ ಇಲ್ಲಿ ತೋರುತ್ತದೆ.

ಶ್ರೀ ಇ. ಥರ್ಸ್‌‌ಟನ್ ಅವರು ಮತ್ತೊಂದು ಕಥೆಯನ್ನು ಸಂಗ್ರಹಿಸಿದ್ದಾರೆ. “ಅಗ್ನೇಶ್ವತುನ ಮಗನಾದ ವೆಣುಡು ಎಂಬ ಮಹಾಪುರುಷನು ಬ್ರಹ್ಮನು ನೇರವಂಶಜನಾಗಿದ್ದು, ಅವನು ಇಡೀ ವಿಶ್ವವನ್ನೇ ಆಳುತ್ತಿದ್ದನು. ಅವನು ಒಬ್ಬ ಪುತ್ರ ಮತ್ತು ಸಿಂಹಾಸನಕ್ಕೆ ಉತ್ತರಾಧಿಕಾರಿಯನ್ನು ಪಡೆಯಲು ಅಸಮರ್ಥನಾಗಿದ್ದನು. ಅವನು ಮೃತನಾದಾಗ ಅವನ ಮರಣದ ಹಾನಿ ತುಂಬಿಕೊಳ್ಳಲಾರದಷ್ಟು ದುರದೃಷ್ಟವೆಂದು ಎಣಿಸಲಾಗಿತ್ತು. ಅವನ ದೇಹವನ್ನು ರಕ್ಷಿಸಲಾಯಿತು. ಏಳು ಶಾಸಕ ಗ್ರಹಗಳು ಗಂಭೀರವಾಗಿ ಒಂದು ಕಡೆ ಕುಳಿತುಕೊಂಡವು. ಮತ್ತು ತಾವೇನು ಮಾಡಬೇಕಾಗಿದೆ ಎಂಬ ಬಗೆಗೆ ವಿಚಾರ-ವಿನಿಮಯ ನಡೆಸಿದವು. ಅಂತಿಮವಾಗಿ ಮೃತ ವೆಣುಡುವಿನ ಬಲ ತೊಡೆಯಿಂದ ಒಂದು ಜೀವವನ್ನು ಸೃಷ್ಟಿಸಲು ಒಮ್ಮತಕ್ಕೆ ಬಂದವು. ಮತ್ತು ಅವು ಯಥಾಪ್ರಕಾರವಾಗಿ ನಿಶುಡುವಿಗೆ ಆಕೃತಿ ಕೊಟ್ಟು ಅವನನ್ನು ಜೀವಗೊಳಿಸಿದವು. ಆದರೆ ಅವುಗಳ ಕೆಲಸ ಸಫಲವಾಗಲಿಲ್ಲ. ಏಕೆಂದರೆ ನಿಶುಡು ಶರೀರದಲ್ಲಿ ವಿಕೃತವಷ್ಟೇ ಅಲ್ಲ! ಅವನ ಮುಖವೂ ಸಹ ಭೀಭತ್ಸತೆಯಿಂದ ಕೂಡಿತ್ತು. ಅವನು ಸಿಂಹಾಸನಾರೂಢನಾಗಲು ಯೋಗ್ಯನಲ್ಲ ಎಂಬುದು ಗ್ರಹಗಳ ಇನ್ನೊಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಆದ್ದರಿಂದ ಮತ್ತೊಮ್ಮೆ ಅವು ಕಾರ್ಯಮಗ್ನವಾದವು. ಮತ್ತು ಅವು ವೆಣುಡುವಿನ ಬಲಭಜದಿಂದ ಒಂದು ಜೀವಿಯನ್ನು ಸೃಷ್ಟಿಸಿದವು. ಮತ್ತು ಅವುಗಳ ಎರಡನೆಯ ಪ್ರಯತ್ನ ಫಲಪ್ರದವಾಯಿತು. ಅವು ಈ ಎರಡನೆಯ ಜೀವಿಗೆ ಪ್ರೂತು ಚಕ್ರವರ್ತಿ ಎಂದು ಕರೆದವು. ಅವನು ತೃಪ್ತಿದಾಯಕನಾಗಿರುವ ಕಾರಣ ಅವನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿದವು. ಜೇಷ್ಠತೆಯನ್ನು ಮೀರಿದ ಕಾರಣ ಹಿರಿಯವನಾದ ನಿಶುಡು ಅಸಂತುಷ್ಟನಾದನು. ಅವನು ಒಂದು ಏಕಾಂತ ಪ್ರದೇಶವನ್ನು ಹುಡುಕಿ ಅಲ್ಲಿ ದೇವತೆಗಳೊಂದಿಗೆ ಮಾತನಾಡುತ್ತಾ, ಒಂದೊಮ್ಮೆ ನಾನು ಅಧಿಕಾರ ಮಾಡುವಂತಿಲ್ಲದಿದ್ದರೆ ತನ್ನನ್ನು ಸೃಷ್ಟಿಸಿದ್ದಾದರೂ ಏಕೆ ಎಂದು ಕೇಳಿದನು. ದೇವತೆಗಳು ಅವನಿಗೆ ಏನು ಹೇಳಿದರೆಂದರೆ ಆಗಲೇ ಒಬ್ಬ ಚಕ್ರವರ್ತಿಯನ್ನು ಸಿಂಹಾಸನಕ್ಕೇರಿಸಿದ ಕಾರಣ ಇವನಿಗೆ ಪಟ್ಟಾಭಿಷೇಕ ಮಾಡುವಂತಿಲ್ಲ. ಆದರೆ ಇವನು ಅರಣ್ಯಗಳ ಮೇಲೆ ಅಧಿಪತ್ಯ ನಡೆಸಲಿ. ಈ ಸಾಮರ್ಥ್ಯದಲ್ಲಿ ನಿಶುಡು ಬೋಯಾಗರು, ಚಿಂಚುಗಳು, ಯಾನಾಡಿಗಳು ಮತ್ತು ಕೊರವರಿಗೆ ಜನ್ಮಕೊಟ್ಟನು. ಬೋಯಾಗಾರು ಮಾತ್ರ ನ್ಯಾಯಬದ್ಧವಾದ ಮಕ್ಕಳು. ಇತರರು ಧರ್ಮಬಾಹಿರ ಮಕ್ಕಳು ಆಗಿದ್ದರು. ಕಾರಣವೇನೆಂದರೆ ತನ್ನ ಸಂತತಿಯಲ್ಲಿ ಕೆಲವರು ತಮ್ಮನ್ನು ಯಾರು ಸೃಷ್ಟಿಸಿದರು ಎಂಬುದನ್ನು ತಿಳಿಯಲು ಶಾಂತಚಿತ್ತರಾಗಿ ಕಾಯುತ್ತಿದ್ದುದರಿಂದ ತಮ್ಮನ್ನು ತಾವು ಯರಕಳ ಎಂದು ಕರೆದುಕೊಂಡರು.

ಇನ್ನೊಂದು ಕಥೆಯು ಕೊರವ ಹೆಸರನ್ನು ವಿವರಿಸುತ್ತದೆ. ಧರ್ಮರಾಜ ಮತ್ತು ದುರ್ಯೋಧನ ಎಂಬ ರಾಜರೊಡನೆ ಶತೃತ್ವ ಉಂಟಾದಾಗ ಧರ್ಮರಾಜನು ಕಚ್ಚಾಟವನ್ನು ತಪ್ಪಿಸುವ ಸಲುವಾಗಿ ಸ್ವ ಇಚ್ಛೆಯಿಂದ ದೇಶಾಂತರ ಹೋದನು. ಅವನನ್ನು ಪ್ರೀತಿಸುತ್ತಿದ್ದ ನಾರಿಯು ಅವನನ್ನು ಹುಡುಕಿಕೊಂಡು ಹೋದಳು. ಆದರೆ ತನ್ನ ಗುರುತು ಸಿಕ್ಕೀತು ಎಂಬ ಭಯದಿಂದ ಕಣಿ ಹೇಳುವವಳಂತೆ ಮಾರು ವೇಷ ಧರಿಸಿದಳು. ಈ ರೀತಿ ಅವನನ್ನು ಹುಡುಕಿ ಸೇರಿದಳು. ಇದರಿಂದ ಬೆಳೆದ ಸಂತತಿಯೇ “ಕುರು” ಎಂದರೆ “ಕಣಿ ಹೇಳು”. ಇದರಿಂದ ಕೊರವ ಆಯಿತು.”[4]

ಇಲ್ಲಿ ಹೇಳುವ ಮೊದಲ ಕಥೆಯಲ್ಲಿ ಕೊರವರ ಪ್ರಾಚೀನತೆ ಗೋಚರಿಸುತ್ತದೆ. “ಇದರ ಸಾಮಾನ್ಯ ಚೌಕಟ್ಟು, ಭಾಗವತಂ, ಇದರಲ್ಲಿ ಹೇಳುವ ಕಥೆಗೆ ಹೆಚ್ಚು ಕಡಿಮೆ ಅನುರೂಪಕವಾಗಿವೆ” ಎಂದು ಸಂಗ್ರಹಕಾರರು ಹೇಳಿದ್ದಾರೆ. ಅದೇನೇ ಇರಲಿ, ಚಾರಿತ್ರಿಕವಾಗಿ ನಿಶುಡು ಇದ್ದದ್ದೇ ಆದರೆ, ಅರಣ್ಯಗಳ ಮೇಲಿನ ಒಡೆತನ ಪಡೆದದ್ದೇ ಆದರೆ ಅವನ ನಿಯಂತ್ರಣಕ್ಕೊಳಪಟ್ಟ ಈ ಜನ ಅಥವಾ ಅವನ ಸಂತತಿಯು ಆತನನ್ನೇ ತಮ್ಮ ಮೂಲ ಪುರುಷನೆಂದು ಕಲ್ಪಿಸಿಕೊಂಡಿರುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಎರಡನೇ ಕಥೆಯಲ್ಲಿನ ಅಂಶಗಳು ಒಂದಕ್ಕೊಂದು ಭಿನ್ನವಾಗಿ ತೋರುತ್ತವೆ. ಧರ್ಮರಾಜನಂಥವನು ಮತ್ತೊಬ್ಬಳನ್ನು ಪ್ರೀತಿಸುತ್ತಿದ್ದ ಎಂಬುದು ಒಂದು ಅಭಾಸವಾದರೆ ಧರ್ಮರಾಯನಿಂದ ಈ ಬುಡಕಟ್ಟು ಮುಂದುವರೆಯಿತು ಎಂಬುದು ಮತ್ತೊಂದು ಅಭಾಸವಾಗುತ್ತದೆ. ಆದರೆ ಕೊರಮರ ಪ್ರಾಚೀನತೆಯನ್ನು ಗುರುತಿಸಲು ಮಾತ್ರ ಇವು ಸಹಾಯಕವಾಗುತ್ತವೆ.

ಈ ಪೌರಾಣಿಕ ಹಾಗೂ ಐತಿಹ್ಯಗಳು ಸತ್ಯ ಕಥೆಗಳಲ್ಲ. ಇವುಗಳ ಮೂಲ ಆಶಯಕ್ಕಾಗಿ ಇವು ಮಾನ್ಯವಾದವುಗಳು. ತಮ್ಮ ವಂಶ, ತಮ್ಮ ಹಿರಿಯರು ಉನ್ನತ ವರ್ಗದವರು, ಅತಿ ಪ್ರಾಚೀನ ಕಾಲದವರು, ತಮ್ಮ ವೃತ್ತಿ ಗೌರವಾನ್ವಿತವಾದುದೆಂದು ಹೇಳಿಕೊಳ್ಳುವ ಜನಪದರ ಸಾಮಾನ್ಯ ಪ್ರವೃತ್ತಿ ಇಂಥ ಪ್ರಾದೇಶಿಕ ಐತಿಹ್ಯಗಳ ಮೂಲ. ರಾಮಾಯಣ ಮಹಾಭಾರತ ಕಥೆಗಳಲ್ಲಿ ತಮ್ಮ ವಂಶದ ಹಿರಿಯರನ್ನು ತೋರಿಸುವ ಪ್ರಯತ್ನ ನಡೆದಿರುವುದು ಸ್ವಯಂವೇದ್ಯ.

 [1]       ಜಾನಪದ ಸಾಹಿತ್ಯ ದರ್ಶನ – 6, ಪು – 200.

[2]      – ಅದೇ – ಪು-200

[3]      ಅಂಕೀನಹಳ್ಳಿ ಪಾಪಯ್ಯನವರು ದಿ. ದೊಡ್ಡಮನೆ ಹನುಮಯ್ಯನವರು ಹೇಳಿದ್ದು 1976 ರಲ್ಲಿ.

[4]      E.Thurston – Castes and Tribes of southern India, Vol, III-k p-445. Translated by Prof. K.H. Prabhu.