ಬದುಕಿನ ಅನಿವಾರ್ಯ ಕಾರಣಗಳಿಂದಾಗಿ ದೇಶದ ಹಲವು ಭಾಗಗಳಲ್ಲಿ ಚದುರಿಹೋಗಿ ಬೇರೆ ಬೇರೆ ಹೆಸರುಗಳಿಂದ ಕರೆಸಿಕೊಳ್ಳುತ್ತಾ ಬದುಕುತ್ತಿರುವ “ಕೊರಮ ಬುಡಕಟ್ಟು” ಇಂದಿಗೂ ತನ್ನ ಮೂಲ ಸ್ವರೂಪದಿಂದ ತಾನು ಬದುಕುತ್ತಿರುವ ಸಮಾಜದ ಸಾಮೂಹಿಕ ಕಟ್ಟುಪಾಡುಗಳ ಪ್ರಭಾವಕ್ಕೆ ಒಳಗಾಗಿ ತಮ್ಮ ಮೂಲದ ಎಷ್ಟೋ ಅಂಶಗಳನ್ನು ಕಳೆದುಕೊಂಡಿದೆ. ಆದರೂ ಅವುಗಳನ್ನು ಗುರುತಿಸುವಂಥ ಆಧಾರಗಳು ಸೂಕ್ಷ್ಮವಾಗಿ ಅವಲೋಕಿಸಿದಾಗ ಇಂದಿಗೂ ಅದರಲ್ಲಿ ಕಂಡುಬರುತ್ತವೆ.

ಕೊರಮರು ಒಂದು ಬುಡಕಟ್ಟಿಗೆ ಸೇರಿದ ಜನ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಈ ವರೆಗೆ ಬುಡಕಟ್ಟನ್ನು ಕುರಿತು ಹೇಳಿರುವ ವಿದ್ವಾಂಸರ ದಾಖಲೆಗಳು ಮತ್ತು ಕೊರಮರಲ್ಲಿ ಉಳಿದುಕೊಂಡಿರುವ ಬುಡಕಟ್ಟಿನ ಲಕ್ಷಣಗಳು ಈ ಜನಾಂಗದ ಅಧ್ಯಯನಕ್ಕೆ ಅನುಕೂಲವಾಗಿವೆ. ಅರೆ-ಅಲೆಮಾರಿಗಳಾಗಿ ಕಾಡು ಮೇಡುಗಳಲ್ಲಿ ಉಳಿದು ಪಶುಸಂಗೋಪನೆ, ಬೆತ್ತ ಮತ್ತು ಬಿದಿರಿನ ಕೆಲಸ ಮಾಡುತ್ತಾ, ಭವಿಷ್ಯ ಹೇಳುವ ಕಾರ್ಯವನ್ನು ನಿರ್ವಹಿಸುತ್ತಾ ತಮ್ಮ ಸಮಾಜದ ಬಿಗಿ ಬಂಧಗಳೊಂದಿಗೆ ಶತಶತಮಾನಗಳಲ್ಲಿ ಸಾಗಿ ಬಂದಿದ್ದಾರೆ. ಈ ಬುಡಕಟ್ಟು ಇಂದು ನಾಗರೀಕತೆಯ ಪ್ರಭಾವದಿಂದಾಗಿ ಆಧುನಿಕವಾಗುತ್ತಿದೆ. ಈ ಬುಡಕಟ್ಟಿನ ಪ್ರಾಚೀನತೆಯನ್ನು ಗುರುತಿಸಲು ಕೆಲವು ಸಾಹಿತ್ಯಿಕ ಆಧಾರಗಳೂ, ಕೆಲವು ದಾಖಲೆಗಳು ಆಧಾರವಾಗುತ್ತವೆ. ಕ್ರಿಸ್ತಾಬ್ದದ ಆರಂಭದಲ್ಲಿ ರಚಿತವಾದ ಶಿಲಪ್ಪದಿಕಾರಮ್‌, ಕರ್ಣಪಾರ್ಯನ ನೇಮಿನಾಥಪುರಾಣಂ, ಶಿವಶರಣರ ವಚನಗಳು ಮತ್ತು ಜಾನಪದ ಸಾಹಿತ್ಯದಲ್ಲಿನ ಕೆಲವು ಸಂದರ್ಭಗಳು ಅಂತೆಯೇ ಡಾ|| ಒಪೆರ್ಟ್‌, ಶ್ರೀ ಇ. ಥರ್ಸಟನ್‌ ಮೊದಲಾದ ಅನೇಕ ಮಹನೀಯರ ದಾಖಲೆಗಳು ಪ್ರಮುಖವಾಗಿವೆ.

ಎಲ್ಲಾ ಬುಡಕಟ್ಟುಗಳ ಸಂಸ್ಕೃತಿಯೂ ಒಂದೇ ರೀತಿಯಾಗಿಲ್ಲ. ಬುಡಕಟ್ಟು ಮತ್ತು ಜನಾಂಗದ ವ್ಯತ್ಯಾಸವನ್ನು ಈಗಾಗಲೇ ಅನೇಕ ವಿದ್ವಾಂಸರು ಗುರುತಿಸಿದ್ದಾರೆ. “ಜಗತ್ತಿನಾದ್ಯಂತ ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ ಜನಗಳು ವಾಸ ಮಾಡುತ್ತಾರೆ. ಇವರ ಸಂಸ್ಕೃತಿಯನ್ನು ಕ್ರಮವಾಗಿ ನಗರ ಸಂಸ್ಕೃತಿ, ಗ್ರಾಮೀಣ ಸಂಸ್ಕೃತಿ ಎಂದು ಕರೆಯಬಹುದು. ಇವೆರಡನ್ನು ಬಿಟ್ಟರೆ ಇನ್ನೊಂದು ಸಾಂಸ್ಕೃತಿಕ ವರ್ಗದ ಸಂಸ್ಕೃತಿಯನ್ನು ಗುರುತಿಸಬಹುದು. ಇದೇ ಬುಡಕಟ್ಟುಗಳ ಸಂಸ್ಕೃತಿ.”

[1] ಇದನ್ನು ಈಚೆಗೆ ಉಪ ಸಂಸ್ಕೃತಿ ಎಂದು ಗುರುತಿಸಲಾಗುತ್ತಿದೆ. ಇಂಥ ಬುಡಕಟ್ಟುಗಳ ಸಂಸ್ಕೃತಿಗಳ ನಡುವೆಯೂ ಅನೇಕ ವ್ಯತ್ಯಾಸಗಳು ಗೋಚರಿಸುತ್ತವೆ. ಪ್ರತಿಯೊಂದು ಬುಡಕಟ್ಟು ತನ್ನ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳಲು, ತಮ್ಮದೇ ಆದ ಭಾಷೆಯನ್ನು ರೂಢಿಸಿಕೊಳ್ಳಲು ಸಾಧ್ಯವಾಗಿರುವುದು ಮೂಲ ಸಂಸ್ಕೃತಿಯ ಸಂದರ್ಭದಲ್ಲಿ ಅವು ದೂರ ಉಳಿದು ಭಿನ್ನ ಸಂಸ್ಕೃತಿಯನ್ನು ರೂಢಿಸಿಕೊಂಡದ್ದೇ ಕಾರಣವಾಗಿದೆ. ಕೊರಮ ಬುಡಕಟ್ಟು ಈ ಎಲ್ಲ ಅಂಶಗಳಿಂದ ಶ್ರೀಮಂತವಾಗಿದೆ. ಈ ನಿಟ್ಟಿನಲ್ಲಿ ಈಗ ದೊರೆಯುವ ಆಧಾರಗಳು ಇಂಥ ಅಧ್ಯಯನಕ್ಕೆ ಮಾರ್ಗದರ್ಶನ ಮಾಡುತ್ತವೆ.

ನಗರ ಮತ್ತು ಗ್ರಾಮೀಣ ಸಂಸ್ಕೃತಿಗಿಂತ ಭಿನ್ನವಾದ ಮಾತ್ರಕ್ಕೆ ಬುಡಕಟ್ಟು ಸಂಸ್ಕೃತಿ ಕೀಳಾದುದೇನೂ ಅಲ್ಲ. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ, ಸಮಾಜ ಬಂಧನಕ್ಕೆ ಪುಷ್ಟಿ ಕೊಡುವ ಗುಣಗಳನ್ನು ಇಲ್ಲಿಯೂ ಕಾಣುತ್ತೇವೆ. ಹಿರಿಯರಲ್ಲಿ ವಿನಯ, ದೇವರಲ್ಲಿ ಭಕ್ತಿ, ದುಡಿದು ತಿನ್ನುವ ಬುದ್ಧಿ, ಪರಿಸರದ ಮೇಲಿನ ಪ್ರೀತಿ, ಒಟ್ಟಾಗಿ ಬದುಕುವ ಲಕ್ಷಣ ಇವರಲ್ಲಿ ವಿಶೇಷವಾಗಿ ಕಂಡು ಬರುತ್ತವೆ. ಈ  ದಿಸೆಯಲ್ಲಿ ಕೊರಮ ಬುಡಕಟ್ಟು ಎಂಥ ಇತರ ಬುಡಕಟ್ಟುಗಳಂತೆ ತನ್ನ ಮೇಲ್ಮೆಯನ್ನು ಉಳಿಸಿಕೊಂಡಿದೆ. ವಿದ್ವಾಂಸರೂ ಕೂಡ ಈ  ಲಕ್ಷಣಗಳನ್ನು ತಮ್ಮ ದಾಖಲೆಗಳಲ್ಲಿ ಗುರುತಿಸಿರುವುದು ಗಮನಾರ್ಹ.

ಕೊರಮರನ್ನು ಕುರಿತು ಇ.ಥರ್ಸ್‌‌ಟನ್‌ ಅವರು ” They are known as Korava from the extreme south to the north of the North Aracot District, where they are called Korach or Korecha and in the Ceded districts they become yerukala or Yarakala”[2] ಎಂದು ಹೇಳಿದ್ದಾರೆ. ತಮಿಳುನಾಡಿನ ದಕ್ಷಿಣ ಅರ್ಕಾಟ್‌ಜಿಲ್ಲೆಯಲ್ಲಿ ಈ ಜನರಿಗೆ ಕೊರಚ, ಕೊರ್ಚ ಎಂದು ಹೆಸರು ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಇವರೇ ಯರುಕಲ ಅಥವಾ ಯರಕಲ ಎಂದು ಕರೆಸಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ಸತ್ಯವಾದುದು. ಇಲ್ಲಿ ಒಂದೇ ಪಂಗಡದ ಜನರು ಬೇರೆ ಬೇರೆ ಹೆಸರಿನಿಂದ ಕರೆಯುತ್ತಿದ್ದ ಬಗಗೆ, ಅಲ್ಲದೆ ತಮಿಳುನಾಡಿನ ಕೆಲ ಭಾಗಗಳಲ್ಲಿ ಇವರು ವಾಸವಾಗಿದ್ದ ಅಂಶಗಳನ್ನು ಈ ದಾಖಲೆ ಸ್ಪಷ್ಟಪಡಿಸುತ್ತದೆ. ಶ್ರೀ ಇ. ಥರ್ಸ್‌‌ಟನ್‌ಅವರು ಮುಂದುವರೆಯುತ್ತಾ ” Cognate with the Kepmaries is a class of Korava Pujaris (as they call themselves in their own village), who emanating from the small hamlet in the Tanjore district, are spread more or less all over India.”[3] ಎನ್ನುವಲ್ಲಿಯೂ ಕೂಡ ಕೊರಮರು ಮತ್ತು ಕೆಪ್ಪಮಾರಿಗಳು ಒಂದೇ ಮೂಲದವರು. ಅವರು ತಮಿಳುನಾಡಿನ ತಂಜಾವೂರು ಜಿಲ್ಲೆಯ ಒಂದು ಹಳ್ಳಿಯಿಂದ ಹೊರಟು ಭಾರತದಾದ್ಯಂತ ಚದುರಿಹೋಗಿದ್ದಾರೆ ಎನ್ನುವ ದಾಖಲೆಯಲ್ಲಿ ಸತ್ಯಾಂಶವಿದೆ.

ಶ್ರೀ ಫ್ರಾನ್‌ಸಿಸ್‌ ಅವರು ” The Koravas are, a Gypsy -tribe found all over the Tamil Country, but chiefly in Kurnool, Salem, Coimbatore and South Arcot.”[4] ಎಂದು ಕೊರವರ ನೆಲೆಗಳನ್ನು ಹೇಳಿದ್ದಾರೆ. ಕುರುವರು ತಮಿಳುನಾಡಿನ ಎಲ್ಲ ಕಡೆ ಕಂಡುಬಂದರೂ, ಮುಖ್ಯವಾಗಿ ಕರ್ನೂಲ, ಸೇಲಂ, ಕೊಯಂಬತ್ತೂರು, ಸೌತ್‌ಅರ್ಕಾಟ್‌ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಇವರು ಮೂಲ ನೆಲೆಯಲ್ಲಿ ಮೊದಲಿನಿಂದಲೂ ಇರುವವರು. ಅಂದರೆ ಒಂದೇ ಪ್ರದೇಶದಲ್ಲಿ ಬದುಕುತ್ತಿದ್ದವರು ಎಂಬುದನ್ನು ತಿಳಿಯಬಹುದು. ಇದಕ್ಕೆ ಅವರ ಮಾತೃಭಾಷೆಯೇ ಆಧಾರವಾಗಿ ನಿಲ್ಲುತ್ತದೆ. ದೇಶದ ತುಂಬಾ ಚದುರಿ ಹೋಗಿರುವ ಕೊರಮರು ಅನಾದಿಯಿಂದಲೂ ತಮಿಳಿಗೆ ಸಮೀಪವಾದ ಭಾಷೆಯನ್ನು ಉಳಿಸಿಕೊಂಡು ಬಂದಿದ್ದಾರೆ. ದ್ರಾವಿಡ ಮೂಲದ ತಮಿಳು ನೆಲೆ ತಮಿಳುನಾಡು ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದ್ದರಿಂದ ಕೊರಮ ಬುಡಕಟ್ಟಿನ ಮೂಲ ತಮಿಳುನಾಡು ಎಂಬುದು ಕೂಡ ಅಷ್ಟೇ ಪ್ರಬಲವಾಗಿ ನಿಂತುಕೊಳ್ಳುತ್ತದೆ. ಇದಕ್ಕೆ ಪೂರಕವಾಗಿ ಬುಚನನ್‌ರ ” ……….. Koravaras a mild tribe of Coimbature”[5] ಎನ್ನುವ ಮಾತು ಸಹಾಯಕ ದಾಖಲೆಯಾಗುತ್ತದೆ.

ಡಾ|| ಒಪೆರ್ಟ್‌ ಅವರು “………. It is Highly probable that the name and the occupation of the fortune-telling Kuruvandalu or Kuluvandalu induced the Telugu people to call this tribe yerukulavandlu, Dr. Oppert further connects Kurru with the root-ku,  a mountain, and in a Tamil work of the ninth century.”[6] ಎಂದು ದಾಖಲಿಸಿರುವಲ್ಲಿ ಈ ಬುಡಕಟ್ಟು ತಮಿಳುನಾಡಿನ ಬೆಟ್ಟ ಗುಡ್ಡಗಳಲ್ಲಿ ವಾಸಾಗಿದ್ದ ಬಗೆಗೆ ತಮಿಳಿನ ೯ನೆಯ ಶತಮಾನದ ಕಾವ್ಯದಲ್ಲಿ ಉಲ್ಲೇಖವಿರುವುದರ ಜೊತೆಗೆ ಅವರ ಉದ್ಯೋಗದ ಕಡೆಗೂ ಗಮನ ಸೆಳೆದಿದ್ದಾರೆ. ಮೇಲಿನ ಹೇಳಿಕೆಯಲ್ಲಿ ತೆಲುಗು ಪ್ರಾಂತ್ಯದಲ್ಲಿರುವ ಕೊರಮರ ಇತರ ಹೆಸರುಗಳ ಪರಿಚಯವೂ ಆಗುತ್ತದೆ.

ಹಿರೇಂದ್ರ ಕೆ. ರಕ್ಷಿತ್‌ ಅವರು ” The rest are the Idiga, a toddy drawing caste, the Bestha, a fishermen group and the yarukula, a migrated group from Tamil Nadu with semi-Wandering habits. The later a scheduled tribe, are a part of the larger population found also in Tamil Nadu and Mysore where they are known as Koracha, Korama etc.”[7] ಇವರು ತಮಿಳುನಾಡಿನಿಂದ ವಲಸೆ ಬಂದ ಜನ. ಅರೆ-ಅಲೆಮಾರಿಗಳಾದ ಇವರು ತಮಿಳುನಾಡಿನಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಮೈಸೂರು ಪ್ರಾಂತಯದಲ್ಲಿ ಇವರನ್ನು ಕೊರಚ, ಕೊರಮ ಎಂದು ಕರೆಯುತ್ತಾರೆ; ಎಂದು ಹೇಳಿರುವ ಮಾತು ಕೊರಮ ಬುಡಕಟ್ಟಿನ ಮೂಲವನ್ನು ಗುರುತಿಸುವ ಇನ್ನೊಂದು ದಾಖಲೆಯಾಗಿ ನಿಂತುಕೊಳ್ಳುತ್ತದೆ.

ಇದೇ ನಿಟ್ಟಿನಲ್ಲಿ ವಿಚಾರ ಮಾಡಿರುವ ಶ್ರೀ ಆರ್.ಇ. ಎಂಥೋವನ್‌ ಅವರು ” They are immigrants from Mysore and the Tamil speaking districts of Karnool, salem, South Arcot and Coimbature in Madras. Where they are generally know by the name of Kuruvan.”[8] ಎಂದು ಹೇಳಿದ್ದಾರೆ. ಕೊರಮ ಬುಡಕಟ್ಟು ತಮಿಳುನಾಡಿನಿಂದ ಬೇರೆ ಬೇರೆ ಕಡೆಗೆ ಚದುರಿಹೋಗಿದ್ದಾರೆ. ಅಲ್ಲಿ ಇವರನ್ನು “ಕುರುವಾನ” ಎಂದೂ ಕರೆಯುತ್ತಾರೆಂಬ ಅಂಶ ಅವರ ಮೂಲದ ಮೇಲೆ ಹೆಚ್ಚು ಬೆಳಕು ಚೆಲ್ಲುತ್ತದೆ. ತಮಿಳು ಮೂಲದ ಕೊರಮರು ಮೈಸೂರು ಭಾಗಕ್ಕೆ ವಲಸೆ ಬಂದು ನೆಲೆಸಿರುವರಲ್ಲದೆ ಇಲ್ಲಿನ ಮೂಲದವರಲ್ಲ.

“The origin and tradition of the tribe are buried in obscurity. It is very probable that they are an aboriginal tribe in the process of Hinduisation. Nevertheless mythological or fanciful legends are not wanting to explain their origin.”[9] ಎನ್ನುವ ಶ್ರೀ ಎಚ್‌.ವಿ. ನಂಜುಂಡಯ್ಯ ಮತ್ತು ಶ್ರೀ ಎಲ್‌.ಕೆ. ಅನಂತಕೃಷ್ಣ ಐಯ್ಯರ್ ಮಾತುಗಳನ್ನು ಗಮನಿಸಿದರೆ, ಕೊರಮರ ಮೂಲ ಅಸ್ಪಷ್ಟವಾಗಿದೆ. ಮತ್ತು ಅವರಿಗೆ ಸಂಬಂಧಪಟ್ಟ ಪುರಾಣ ಮತ್ತು ಐತಿಹ್ಯಗಳೂ ಕೂಡ ಆ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತಿಲ್ಲ ಎನ್ನುವ ಅಂಶ ತಿಳಿಯುತ್ತದೆ. ಆದರೆ ಇವರ ಮೇಲೆ ರಾಮಾಯಣ ಮತ್ತು ಮಹಾಭಾರತಗಳ ಪ್ರಭಾವ ಬಹಳವಿತ್ತು. ಹಿಂದೂ ಸಮಾಜದಲ್ಲಿ ಬೆರೆಯಬೇಕೆಂಬ ಮನೋಭಾವದಿಂದ ಅವರ ಮೂಲದ ಬಗೆಗೆ ಅವರೆ ಸೃಷ್ಟಿಸಿಕೊಂಡಿರುವ ಐತಿಹ್ಯ ಮತ್ತು ಕಥೆಗಳ ಮೂಲಕ ತಮ್ಮನ್ನು ಹಿಂದೂಗಳೊಡನೆ ಸಮೀಕರಿಸಿಕೊಂಡಿದ್ದಾರೆ. ರಾಮಾಯಣ ಮತ್ತು ಮಹಾಭರತಗಳ ಪ್ರಭಾವದಿಂದ ಸಾಂಸ್ಕೃತಿಕ ಬದಲಾವಣೆ ಹೊಂದಲು ಮಾಡಿದ ಪ್ರಯತ್ನ ಅವರ ಜೀವನ ಕ್ರಮದಲ್ಲಿಯೂ ತಿಳಿಯುತ್ತದೆ.

“In all probability they might have belonged to one of the aboriginal tribes of south India, and as Mr. Oppert opines, they must have been of the same stock as the vedans of Celon.”[10] ಎನ್ನುವಲ್ಲಿಯೂ ಕೊರಮರು ದಕ್ಷಿಣ ಭಾರತದ ಅರೆ-ಅಲೆಮಾರಿ ಬುಡಕಟ್ಟಿಗೆ ಸೇರಿದವರು. ಈ ನೆಲೆಯಹಿಂದ ಹೊರಟ ಒಂದು ಗುಂಪು ಸಿಂಹಳ ದ್ವೀಪಕ್ಕೂ ಹೋಗರಬಹುದು ಎಂಬುದು ತಿಳಿಯುತ್ತದೆ. ಕೊರಮ ಜನಾಂಗದವರು ಒಂದೆ ಮೂಲದಿಂದ ಹಲವು ಕಡೆಗೆ ಚದುರಿಹೋಗಿರುವ ಸಾಧ್ಯತೆಗಳಿವೆ.

“ದಕ್ಷಿಣ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವ ಜನಾಂಗದವರು “dolichocephalic leptorrhine”- ವಂಶಜರು. ಇವರು ಸಾಧಾರಣ ಎತ್ತರದ ನಸ್ಯ ಬಣ್ಣದ ತೆಳು ಛಾಯೆಯುಳ್ಳ ಚರ್ಮ ಹೊಂದಿದವರು. ಅನೇಕ ರೀತಿಯಲ್ಲಿ ಆದಿವಾಸಿಗಳೊಂದಿಗೆ, ಗುಡ್ಡಗಾಡು ಜನತೆಯೊಂದಿಗೆ ಸಮ್ಮಿಶ್ರಣ ಹೊಂದಿದ Brachycephalic Leptrorrhine,  ಇವರ ಪ್ರಭಾವವು ಕನ್ನಡ ಮತ್ತು ತಮಿಳು ಭಾಷೆಯನ್ನಾಡುವ ಜನಾಂಗಗಳಲ್ಲಿ ಕಂಡು ಬಂದಿದೆ. ಇತಿಹಾಸ ಪೂರ್ವದಲ್ಲಿಯೇ ಈ Brachycephalic  ಜನಾಂಗವು ಭಾರತದ ವಾತಾವರಣಕ್ಕೆ ತುಂಬಾ ಸರಿ ಹೊಂದಬಹುದೆಂದು ಮಾನವ ವಿಜ್ಞಾನಿ ಡಾ|| ಹಡ್ಸ್‌ನ ಅಭಿಪ್ರಾಯ ಪಡುತ್ತಾರೆ.”[11] ಎಂಬುದರ ಹಿನ್ನಲೆಯಲ್ಲಿ ವಿಚಾರ ಮಾಡಿದ ಶ್ರೀ. ಎಂ.ಟಿ. ದೂಪದ ಅವರು ಕನ್ನಡ ನಾಡಿನ ಆದಿವಾಸಿ ಹೆಸರನ್ನು ಹೇಳುವಾಗ “ಆಂಧ್ರ ಕರ್ನಾಟಕದ ಕೊರಮರು ಮತ್ತು ಕರ್ನಾಟಕದ ಕೊರಚ, ಕೊರಮರು…….”[12] ಎಂದು ನಮೂದಿಸಿರುವರು. ಇದರಿಂದ ಕರ್ನಾಟಕ ಮತ್ತು ಆಂಧ್ರಕ್ಕೆ ಬಹಳ ಹಿಂದೆಯೇ ಈ ಜನ ವಲಸೆ ಬಂದಿದ್ದಾರೆ. ಇಲ್ಲದಿದ್ದರೆ ಕರ್ನಾಟಕದ ಕೊರಮರು ತಮಿಳಿಗೆ ಸಮೀಪವಾದ ಭಾಷೆಯೊಂದನ್ನು ತಲತಲಾಂತರದಿಂದ ಉಳಿಸಿಕೊಂಡು ಬರಲು ಸಾಧ್ಯವಾಗುತ್ತಿರಲಿಲ್ಲ.

“ದಕ್ಷಿಣ ಭಾರತದಲ್ಲಿ ದ್ರಾವಿಡ ಭಾಷೆಯನ್ನಾಡುವ ಜನತೆಯನ್ನು ದ್ರಾವಿಡರೆಂದು ಗುರುತಿಸಲಾಯಿತು. ಇನ್ನು ಕೆಲವು ವಿದ್ವಾಂಸರು ಜನತೆಯ ಮೂಗು, ಕೂದಲನ್ನು ಪರೀಕ್ಷಿಸಿ ಇಲ್ಲಿಯ ಜನಾಂಗ “ಆದಿವಾಸಿಗಳು” ಎಂದು ಗುರುತಿಸಿದ್ದಾರೆ.[13] ಕ್ರಿಸ್ತಾರಂಭದ ತಮಿಳು ಪ್ರಾಚೀನ ಕಾವ್ಯ ಶಿಲಪ್ಪಾಧಿಕಾರಮ್‌ನಲ್ಲಿ ಅಲೆಮಾರಿ ಜನಾಂಗದ ಸ್ತೀಯರು ಕಣಿ ಹೇಳುವ ಸಲುವಾಗಿ ಪಕ್ಕದ ಕಾಡಿನಿಂದ ಬರುವ ವರ್ಣನೆ ಇದೆ. ಇದನ್ನು ನೋಡಿದರೆ ಈ ಬುಡಕಟ್ಟು ಅನಾದಿಯಿಂದ ಭವಿಷ್ಯ ಹೇಳುತ್ತಾ ಬಂದಿರಬಹುದು. ಇದು ತಮಿಳುನಾಡಿನ ಕಾಡುಗಳಲ್ಲಿ ನೆಲೆಸಿದ್ದ ಒಂದು ಪಂಗಡ ಎಂಬುದು ವೇದ್ಯವಾಗುತ್ತದೆ.

“ಸಮಾಜ ಶಾಸ್ತ್ರಜ್ಞರ ಪರಿಶೀಲನೆಯ ಪ್ರಕಾರ ಇವರು ಬಹುಮಟ್ಟಿಗೆ ಭರತಖಂಡದ ಪಶ್ಚಿಮ ಭಾಗದಲ್ಲಿಯೇ ವಿಶೇಷವಾಗಿ ವ್ಯಾಪಿಸಿರುವಂತಿದೆ. ಈ ಜನಾಂಗದವರನ್ನು ಒಮ್ಮೊಮ್ಮೆ “ಎರಕುಲರು” ಎಂದು ಕರೆಯುವುದುಂಟು. ಈಗ ಉಪಲಬ್ಧವಿರುವ ಸಾಮಗ್ರಿಗಳನ್ನೆಲ್ಲ ಪರಿಶೀಲಿಸಿದರೆ ಈ ಜಾತಿ ಸೂಚಕ ಮೂಲರೂಪ ತಮಿಳಿನಲ್ಲಿ ಬಳಕೆಯಿರುವ ಕೆಲವು ಪದಗಳಲ್ಲಿ ಹುದುಗಿರಬೇಕೆನಿಸುತ್ತದೆ.”[14] ಇವರು ತೆಲುಗು ಪ್ರಾಂತ್ಯಗಳಲ್ಲಿ ವಾಸಿಸುತ್ತಿದ್ದರೂ ತಮ್ಮ ಜಾತಿಸೂಚಕವಾದ ತಮಿಳಿನ ಮೂಲ ರೂಪವನ್ನು ಬಿಟ್ಟುಕೊಡಲಿಲ್ಲ. ದೇಶದ ಇತರೆ ಭಾಗಗಳಲ್ಲಿ ವಾಸಿಸುತ್ತಿರುವ ಕೊರಮರು ಇಂದಿಗೂ ಆ ಅಂಶವನ್ನು ಉಳಿಸಿಕೊಂಡಿದ್ದಾರೆ. ಈ ಮೇಲೆ ಹೇಳಿದ ಹೇಳಿಕೆಗಳಿಂದ ಇವರು ತಮಿಳುನಾಡಿನ ಗುಡ್ಡಗಾಡುಗಳಲ್ಲಿ ಬದುಕುತ್ತಿದ್ದ ಮೂಲ ನಿವಾಸಿಗಳು ಎಂಬುದು ಖಚಿತವಾಗುತ್ತದೆ. ಶ್ರೀ. ಬಿ.ವಿ.ಮಲ್ಲಾಪೂರ ಅವರು “ಈ ಬುಡಕಟ್ಟು ದಕ್ಷಿಣ ಮೂಲದ ಜನಾಂಗ ಎಂಬುದಂತೂ ನಿಜ”[15]  ಎಂದು ಮೇಲಿನ ವಿಷಯಕ್ಕೆ ಒತ್ತು ಕೊಟ್ಟಿದ್ದಾರೆ.

ಶ್ರೀ ಎಂ. ಶ್ಯಾಮಪ್ರಸಾದ್‌ ಅವರು “ಈ ಬುಡಕಟ್ಟಿನ ಜನ ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ವಾಸವಾಗಿದ್ದರು. ಆರ್ಯರು ಭಾರತಕ್ಕೆ ವಲಸೆ ಬರುವುದಕ್ಕಿಂತ ಮುಂಚೆ ದ್ರಾವಿಡರು, ಕೋಲರು ಮೂಲ ಪುರುಷರಾಗಿದ್ದಂತೆ ಕುರುವರು ಆದಿಭಾರತೀಯರು, ಮೂಲನಿವಾಸಿಗಳು. ಆರ್ಯ ಸಂಪರ್ಕ ಬೆಳೆದಂತೆ ಹಲವರು ಸಣ್ಣಪುಟ್ಟ ವ್ಯಾಪಾರಗಳಲ್ಲಿ ನಿರತರಾಗಿದ್ದರು. ಮತ್ತೆ ಕೆಲವರು ಭೂಮಾತೆಯನ್ನು ನಂಬಿದರು. ಊರುಗಳಲ್ಲಿ ನೆಲಸದೆ ಕೆಲವರು ಜೀವನಕ್ಕಾಗಿ ಅಲೆಮಾರಿಗಳಾಗಿ (Semi-nomadic)  ಹಂಚಿಹೋದರು”[16] ಎಂದಿದ್ದಾರೆ.

ಶ್ರೀ ಭುಜೇಂದ್ರ ಮಹೀಷವಾಡಿಯವರು ಕೂಡ ಕೊರವರ ಮೂಲದ ಬಗೆಗೆ ಹೇಳಿರುವ ಮಾತುಗಳು ಗಮನಾರ್ಹವಾಗಿವೆ. “ಭಾಮಾಕಥೆ, ಕೊರವಂಜಿಕಥೆಗಳು ನಮ್ಮಲ್ಲಿ ತಮಿಳು ಕೊರವಂಜಿ ಪಾತ್ರ ಸೃಷ್ಟಿ ಕನ್ನಡ ನೆಲದ್ದಲ್ಲ. ಆಂಧ್ರ ಮತ್ತು ತಮಿಳಿನಾಡಿನಿಂದಲೇ ನಮ್ಮಲ್ಲಿಗೆ ಬಂದು ಪ್ರಸಿದ್ಧಿ ಪಡೆಯಿತು.”[17]  ಆಂಧ್ರದ ಕೊರಮರ ಮೂಲವು ತಮಿಳುನಾಡು ಎಂಬ ಬಗೆಗೆ ಮಾಹಿತಿ ಇದರಿಂದ ದೊರೆಯುತ್ತದೆ. ಕರ್ನಾಟಕಕ್ಕೆ ಈ ಬುಡಕಟ್ಟು ವಲಸೆ ಬಂದ ಹಾಗೆಯೇ ಆಂಧ್ರಕ್ಕೂ ವಲಸೆ ಹೋಗಿ ಪ್ರಸಿದ್ಧಿ ಪಡೆದು ಸಾಹಿತ್ಯ ಕ್ಷೇತ್ರದ ಮೂಲಕ ಕನ್ನಡನಾಡನ್ನು ಪ್ರವೇಶಿಸಿರಬಹುದು, ತಮಿಳುನಾಡಿನಿಂದಲೂ ಪ್ರವೇಶಿಸಿರಬಹುದು.

ಕೊರಮ ಬುಡಕಟ್ಟಿನ ಭಾಷೆಯ ಆಧಾರದ ಮೇಲೆ ಪರಿಶೀಲಿಸಿದಾಗ ಈ ಬುಡಕಟ್ಟಿನ ಮೂಲ ನಿಖರವಾಗಿ ತಿಳಿಯುತ್ತದೆ. ಕರ್ನಾಟಕದಲ್ಲಿ ವಾಸಿಸುತ್ತಿರುವ ಕೊರಮರು, ಕೊರಚರು ಬೇರೆ ಬೇರೆ ಹೆಸರಿನಿಂದ ಆಯಾ ರಾಜ್ಯದಲ್ಲಿ ಬದುಕುತ್ತಿದ್ದರೂ ಅವರಾಡುತ್ತಿದ್ದ ಭಾಷೆ ಕಚ್ಚಾ ತಮಿಳು ಎಂಬುದು ಮನವರಿಕೆಯಾಗುತ್ತದೆ. ಕೊರಮರ ಭಾಷೆ ಈಗಿನ ಶುದ್ಧ ತಮಿಳು ಭಾಷೆ ಅಲ್ಲದಿದ್ದರೂ ಯಾವುದೋ ಒಂದು ಕಾಲದ ಕಚ್ಚಾರೂಪದ ತಮಿಳು ಎಂಬುದು ಆ ಭಾಷೆಯ ಸ್ವರೂಪದಿಂದ ಸಿದ್ಧವಾಗುತ್ತದೆ. ಇದೊಂದು “ಉಪಭಾಷೆ”ಯಾಗಿರುವಂತೆ ತೋರುತ್ತದೆ.

ಶ್ರೀ ಎಚ್‌.ವಿ. ನಂಜುಂಡಯ್ಯ ಮತ್ತು ಶ್ರೀ ಅನಂತ ಕೃಷ್ಣ ಐಯ್ಯರ್ ಅವರು ಕೊರಮರ ಭಾಷೆಯನ್ನು ಕುರಿತು ಬರೆಯುತ್ತಾ “The Koravas or Koramas speak Tamil, Telugu or Canarese, according to the localities in which they live. But in communicating among themselves, the Koravas and yarukulas speak a corrupt polyglot in which the words derived from different languages bear little resemblance. The words appear to belong to the three languages above mentioned.”[18] ಕೊರಮರು ಆಡುವ ಭಾಷೆ ಮತ್ತು ಆ ಭಾಷೆಯ ಶಬ್ದಗಳು ಇತೆ ದ್ರಾವಿಡ ಭಾಷೆಗಳಿಂದ ಬಂದಿರುವ ಬಗ್ಗೆ ಹೇಳಿದ್ದಾರೆ. ಆದರೆ ಇವರು ಈ ಭಾಷೆಯ ಶಬ್ದಗಳನ್ನು ಪರಿಶೀಲಿಸಿ ಅದರ ಮೂಲದ ಬಗೆಗೆ ಸರಿಯಾದ ಅಭಿಪ್ರಾಯವನ್ನು ಸೂಚಿಸಿಲ್ಲ. ಕೊರವರು ಮೂಲ ನೆಲೆಯಿಂದ ವಲಸೆ ಹೋದಮೆಲೆ, ತಾವು ಬಂದು ನೆಲೆಸಿದ ರಾಜ್ಯದ ಕಲೆ ಮತ್ತು ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದಂತೆ, ಭಾಷೆಯ ಪ್ರಭಾವಕ್ಕೂ ಒಳಗಾಗುವದು ಸಹಜ. ಭಾಷಾ ಕೊಡಕೊಳ್ಳುವ ದೃಷ್ಟಿಯಿಂದ ಲಕ್ಷಿಸಿದಾಗ ದ್ರಾವಿಡ ಮೂಲದ ಇತರೆ ಶಬ್ದಗಳು ಕೊರಮ ಭಾಷೆಯಲ್ಲಿ ಕಂಡುಬರಬಹುದು. ಆದರೆ ಇದು ತಮಿಳಿನ ಒಂದು ಉಪಭಾಷೆ ಎಂಬುದನ್ನು ತೆಗೆದು ಹಾಕುವಮತಿಲ್ಲ. ಈ ಮೆಲಿನ ಅಭಿಪ್ರಾಯವನ್ನೇ ಶ್ರೀ ಇ. ಥರ್ಸ್‌‌ಟನ್‌ ಅವರೂ ಕೂಡ ವ್ಯಕ್ತಪಡಿಸಿದ್ದಾರೆ[19]  ಮತ್ತು ಕೊರಮರ ನಾಲ್ಕು ಗೋತ್ರಗಳನ್ನು ಹೆಸರಿಸಿ (ಕಾವಾಡಿ, ಶ್ಯಾತಪಾಡಿ, ಮೇನಪಡಿ, ಮೆಂಡ್ರಗುತ್ತಿ) ಈ ಶಬ್ದಗಳು ಕಚ್ಚಾ ತಮಿಳು ಶಬ್ದಗಳು ಎಂದಿದ್ದಾರೆ. ಈ ಕಚ್ಚಾ ತಮಿಳು ರೂಪದ ಶಬ್ದಗಳೇ ಇತರೆ ರಾಜ್ಯಗಳಲ್ಲಿರುವ ಕೊರಮರ ಗೋತ್ರದ ಶಬ್ದಗಳೂ ಆಗಿರುವದರಿಂದ ಕೊರಮರ ಭಾಷೆಯ ಮೂಲ ತಮಿಳಿಗೆ ಸಮೀಪದವೆನ್ನಲಡ್ಡಿಯಿಲ್ಲ.

ಶ್ರೀ ಎಚ್‌. ಎ. ಸ್ಟೂಅರ್ಟ ಅವರು “In the Telugu country they are called yerukala vandalu or Korachavandlu, but they always speak of themselves as Kurru……”[20] ಎಂದು ಉಲ್ಲೇಖಿಸಿದ್ದಾರೆ. ಈ ಹೇಳಿಕೆಯನ್ನು ಪರಿಶೀಲಿಸಿದರೆ ಆಂಧ್ರದಲ್ಲಿನ ಕೊರಮರನ್ನು ಬೇರೆ ಹೆಸರಿನಿಂದ ಗುರುತಿಸುತ್ತಿದ್ದುದು ಅಲ್ಲದೆ, “ಕುರು” ಭಾಷೆಯನ್ನು ಮಾತನಾಡುತ್ತಿದ್ದ ಬಗ್ಗೆ ತಿಳಿಯುತ್ತದೆ. “ಕುರು” ಎಂಬುದು ಜಾತಿ ಸೂಚಕವಾದ ಶಬ್ದ. ಇದೇ ಆಂಧ್ರದಲ್ಲಿ ಭಾಷಾಸೂಚಕ ಶಬ್ದವೂ ಆಗಿ ಕಂಡುಬರುತ್ತದೆ. ಕುರು ಶಬ್ದ ಇವರ ಮೂಲ ನೆಲೆಯನ್ನು ಮತ್ತು ಅವರ ಮಾತೃಭಾಷೆಯನ್ನು ನಿರ್ದೇಶಿಸುತ್ತದೆ.

“ಈ ಬುಡಕಟ್ಟ ಜನಾಂಗವು ಇನ್ನೂ ಅಜ್ಞಾತವಾಗಿಯೇ ಇದೆ. ಇವರು ದಕ್ಷಿಣ ಭಾರತದ ಒಂದು ಬುಡಕಟ್ಟು ಜನಾಂಗವೆಂಬುದಂತೂ ನಿಜ” ಎನ್ನುವ ಶ್ರೀ ಬಿ.ವಿ. ಮಲ್ಲಾಪೂರ ಅವರ ಹೇಳಿಕೆ ಸತ್ಯಕ್ಕೆ ಹತ್ತಿರವಾಗಿದೆ.”[21]  ಶ್ರೀ ಆರ್.ಇ. ಎಂಥೋವನ್‌ ಅವರು “Their home tongue mixture of Telugu, Tamil and Kanarese including the country of their origin “[22] ಎಂದು ಹೇಳಿರುವಲ್ಲಿ ತೆಲುಗು, ತಮಿಳು, ಕನ್ನಡ ಶಬ್ದಗಳಷ್ಟೇ ಅಲ್ಲದೆ ಅವರ ಮೂಲ ಭಾಷೆಯಾಗಿರಬಹುದಾದ ಕಚ್ಚಾ ತಮಿಳು ಭಾಷೆಯಾಡುತ್ತಾರೆ. ಎನ್ನುವಲ್ಲಿ ತಮ್ಮ ಮೂಲ ಭಾಷೆಯ ಮೇಲೆ ತಾವು ವಾಸಿಸುವ ಪ್ರದೇಶದ ಭಾಷೆಯ ಪ್ರಭಾವ ಇದೆ ಎಂದು ಹೇಳಬೇಕಾಗುತ್ತದೆ. ದ್ರಾವಿಡ ಮೂಲದ ವಿವಿಧ ಭಾಷೆಗಳ ಶಬ್ದಗಳು ಕೊರಮ ಭಾಷೆಯಲ್ಲಿ ತೋರುವುದು ಸಹಜವಾಗಿದೆ. ಆದರೆ ತೆಲುಗು, ಕನ್ನಡ ಶಬ್ದಗಳಿಗಿಂತ ತಮಿಳು ಭಾಷೆಯ ಶಬ್ದಗಳೇ ಹೆಚ್ಚಾಗಿರುವಂತೆ ತೋರುತ್ತದೆ. ಶ್ರೀ ಎಂಥೋವನ್‌ ಅವರು ಕೊರಮರ ಬಗೆಗೆ ಬರೆಯುತ್ತ ಶ್ರೀ ಅಬೆದುಬೋಯಿಸ್‌ ಹೇಳಿರುವ ಈ ಮಾತುಗಳನ್ನು ಉಲ್ಲೇಖಿಸಿದ್ದಾರೆ. “Koravas besides speaking Telugu, Tamil and Kanarese, are said also to hav a Gipsy language of their own.”[23] ಕೊರಮರು ಅಲೆಮಾರಿಗಳಾಗಿದ್ದರಿಂದ ಆಯಾ ಪ್ರದೇಶದ ಭಾಷೆಯನ್ನು ಹೊಟ್ಟೆಯ ಪಾಡಿಗಾಗಿ ಕಲಿತರೂ ತಮ್ಮ ತಮ್ಮಲ್ಲಿ ತಮ್ಮದೇ ಆದ ಭಾಷೆಯನ್ನು ಮಾತನಾಡುತ್ತಿದ್ದರು. ಅದನ್ನು ಅಲೆಮರಿಗಳಾದ ಜಿಪ್ಸಿಗಳ ಭಾಷೆಯೆಂದು ಗುರುತಿಸಿದ್ದಾರೆ. ಇಂದಿಗೂ ಈ ಭಾಷೆ ತುಮಕೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳಲ್ಲಿ ವಾಸಿಸುವ ಜನರಲ್ಲಿ ಜೀವಂತವಾಗಿದೆ.

ಶ್ರೀ ಎಂ. ಕೆನಡಿ ಅವರು ಬೊಂಬಾಯಿ ಪ್ರಾಂತ್ಯದ ಈ ಜನರ ಬಗೆಗೆ ಬರೆಯುತ್ತಾ “—- Speak rude marathi or Kanarese, some times both. In the Deccan and among themselves they speak corrupt Arvi in the Karnatic, corrupt arvi each with certain peculiarities impossible to describe”[24] ಎಂದು ಬೊಂಬಾಯಿ ಪ್ರಾಂತ್ಯದಲ್ಲಿರುವ ಈ ಜನ ಮರಾಠಿಯನ್ನು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಜನ ಮರಾಠಿ ಅಥವಾ ಕನ್ನಡ ಇಲ್ಲವೆ ಎರಡನ್ನೂ ಮಾತನಾಡುವುದು ಸಹಜವೇ. ಆದರೆ ಕಚ್ಚಾ ತೆಲುಗು ಭಾಷೆಯನ್ನು ಮಾತನಾಡುವದರ ಬಗೆಗೆ ಹೇಳುವುದನ್ನು ನೋಡಿದರೆ ಅವರು ಆಂಧ್ರದಿಂದ ಮಹಾರಾಷ್ಟ್ರಕ್ಕೆ ವಲಸೆ ಬಂದವರು ಎಂಬುದು ಖಚಿತವಾಗುತ್ತದೆ. ಆದರೆ ಆಂಧ್ರ-ಕರ್ನಾಟಕಗಳಲ್ಲಿ ಇರುವ ಜನ ತಮಿಳಿಗೆ ಸಮೀಪದ ಭಾಷೆಯನ್ನಾಡುವುದರಿಂದ ಇವರ ಮೂಲ ತಮಿಳುನಾಡಿಗೇ ಸೇರಿರುತ್ತದೆ.

ಶ್ರೀ ಹಂಪ ನಾಗರಾಜಯ್ಯ ಅವರು ಹಳಗನ್ನಡ ಮತ್ತು ತಮಿಳಿನ ನಿಕಟ ಸಂಬಂಧವನ್ನು ಹೇಳುವಾಗ “ತಮಿಳಿನಲ್ಲಿ ಕೈಕಾಡಿ (Kaikadi),  ಕೊರ್ವೀ (Korvi), ಮತ್ತು ಯೆರುಕಲ (yuerukala) ಮುಂತಾದ ಉಪಭಾಷೆಗಳಿವೆ”[25]  ಎಂದಿದ್ದಾರೆ. ಅಲ್ಲದೆ ದ್ರಾವಿಡ ಭಾಷೆಗಳ ಉಪಭಾಷೆಗಳ ಬಗೆಗೆ ಹೇಳುತ್ತಾ ” ತಮಿಳು, ಕೊಯಮತ್ತೂರಿನ ತಮಿಳು, ಚೇಳ ದೇಶದ ತಮಿಳು, ಮೈಸೂರು ತಮಿಳು, ಕೈಕಾಡಿ ತಮಿಳು, ಯರುಕುಲ ತಮಿಳು, ಕೊರ್ವೇ ತಮಿಳು, ಜಾಪತ್ನಾ ತಮಿಳು, ಸಿಲೋನಿನ ತಮಿಳು ಇತ್ಯಾದಿ”[26] ಎಂದು  ಉದಾಹರಿಸಿದ್ದಾರೆ. ಇದರಿಂದ ಬೇರೆ ರಾಜ್ಯದಲ್ಲಿರುವ ಇವರಿಗೆ ಬೇರೆ ಬೇರೆ ಹೆಸರಿದ್ದರೂ ಅವರೆಲ್ಲರ ಮಾತೃಭಾಷೆ ತಮಿಳು ಅಥವಾ ತಮಿಳಿನ ಒಂದು ಉಪಭಾಷೆ ಎಂಬುದು ವ್ಯಕ್ತವಾಗುತ್ತದೆ. (ಇದಕ್ಕೆ ಸಂಬಂಧಸಿದ ಆಧಾರಗಳ ಚರ್ಚೆ ಮುಂದೆ ಭಾಷಾ ವಿವೇಚನೆಯಲ್ಲಿ ಬಂದಿದೆ).

ಶ್ರೀ ಬೆಲ್‌ಪೊರ ಅವರ ಪ್ರಕಾರ “….. the Koravas, or a certain section of them, i.e., the Kunchi Koravas, were known as yerkal Koravar, and they called the language they spoke Yerkal.”[27] ಕೊರವರು, ಕುಂಚಿಕೊರವರು, ಯರ್‌ಕಲ್‌ ಕೊರವರು ಬೇರೆ ಬೇರೆ ಹೆಸರಿನ ಒಂದೇ ಬುಡಕಟ್ಟಿನ ಜನ ಎಂಬುದು ಹಲವು ವಿದ್ವಾಂಸರ ದಾಖಲೆಗಲಿಂದ ವಿದತವಾಗುತ್ತದೆ. ಶ್ರಿ ಹಿರೇಂದ್ರ ಕೆ. ರಕ್ಷಿತ್‌ ಅವರ ಮಾತುಗಳು ಆಧಾರವಾಗಿ ನಿಲ್ಲುತ್ತವೆ ಒಂದು ಜನಾಂಗದ ಮೂಲವನ್ನು ಶೋಧಿಸುವಾಗ, ಈ ನಿಟ್ಟಿನಲ್ಲಿ ದೊರೆಯುವ ಗ್ರಂಥಸ್ಥ ದಾಖಲೆಗಳನ್ನಷ್ಟೆ ಅಲ್ಲದೆ ವಂಶಪಾರಂಪರ್ಯವಾಗಿ ಬದಲಾಗದೆ ಉಳಿದುಕೊಂಡು ಬಂದಿರುವ ಪದ್ಧತಿ, ಸಂಪ್ರದಾಯಗಳ ಕಡೆಗೂ ಗಮನ ಹರಿಸಬೇಕಾಗುತ್ತದೆ. ಇಂಥ ಅಂಶಗಳು ಸಂಶೋಧಕನಿಗೆ ಜೀವಂತ ಸಾಕ್ಷಿಗಳಾಗುತ್ತವೆ. ಒಂದು ಬುಡಕಟ್ಟು ಯಾವುದೋ ಹಂತದಲ್ಲಿ ರೂಢಿಸಿಕೊಂಡು ಬಂದ ಭಾಷೆಯನ್ನು ಸಾವಿರಾರು ವರ್ಷಗಳಲ್ಲಿ ಉಳಿಸಿಕೊಂಡು, ಆ ಬುಡಕಟ್ಟು ದೇಶದ ಅನೇಕ ಭಾಗದಲ್ಲಿ ಚದುರಿ ಬದುಕುತ್ತಿದ್ದರೂ ಅದೇ ಭಾಷೆಯನ್ನೇ ಮಾತನಾಡುತ್ತಿದ್ದರೆ ಅದರ ಮೂಲ ಒಂದೇ ಎಂಬುದನ್ನು ಅಲ್ಲಗಳೆಯಲಾಗವುದಿಲ್ಲ.

ಅದರಂತೆಯೇ ಆ ಬುಡಕಟ್ಟು ಮೂಲದಲ್ಲಿ ರೂಢಿಸಿಕೊಂಡಿದ್ದ ಕಟ್ಟುಪಾಡುಗಳು ವಿವಧೆಡೆಗಳಲ್ಲಿ ವಾಸಿಸುತ್ತಿರುವ ಆ ಬುಡಕಟ್ಟಿನಲ್ಲಿ ಇಂದಿಗೂ ಕಾಣಸಿಗುತ್ತಿದ್ದರೆ, ಅವರೆಲ್ಲ ಒಂದೇ ಮೂಲದಿಂದ ಬಂದವರು, ಕಾರಣಾಂತರಗಳಿಂದ ಬೇರೆ ಬೇರೆ ಕಡೆಗೆ ಚದುರಿ ಹೋಗಿದ್ದಾರೆ ಎಂಬುದು ಮನವರಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಕೊರಮ ಬುಡಕಟ್ಟಿನವರು ಆಂಧ್ರದಲ್ಲಿರಲಿ, ಬೊಂಬಾಯಿ ಪ್ರಾಂತ್ಯದಲ್ಲಿರಲಿ, ಕರ್ನಾಟಕದಲ್ಲೇ ನೆಲೆಸಿರಲಿ, ಇಂದಿಗೂ ಅವರ ಕುಲಪದ್ಧತಿಗಳಲ್ಲಿ ಒಂದೇ ರೀತಿಯ ಗೋತ್ರಗಳನ್ನು ಉಳಿಸಿಕೊಂಡಿದ್ದಾರೆ. ಆ ಗೋತ್ರದ ಹೆಸರುಗಳು ಇಂದಿಗೂ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಬಳಕೆಯಾಗುತ್ತಿವೆ. ಆ ಬುಡಕಟ್ಟು ವ್ಯವಸ್ಥಿತ ರೂಪವನ್ನು ಪಡೆದ ಮೇಲೆ ಒಂದು ಮೂಲದಿಂದ ಚದುರಿಹೋಗಿರುವುದನ್ನು ಸೂಚಿಸುತ್ತದೆ. ಇಲ್ಲದಿದ್ದರೆ ೧) ಕಾವಾಡಿ,  ೨)ಶ್ಯಾತವಾಡಿ ೩) ಮ್ಯಾನಪಾಡಿ ೪) ಮ್ಯಾಂಡ್ರಗುತ್ತಿ ಎನ್ನುವ ಈ ನಾಲ್ಕು ಬೆಡಗುಗಳು ದೇಶದ ಅನೇಕ ಭಾಗಗಳಲ್ಲಿ ವಾಸಿಸುವ ಕೊರಮರಲ್ಲಿ ಉಳಿಯುತ್ತಿರಲಿಲ್ಲ. ಶ್ರೀ ಎಚ್‌.ಕೆ. ನಂಜುಂಡಯ್ಯ ಮತ್ತು ಶ್ರೀ ಎಲ್‌.ಕೆ. ಅನಂತ ಕೃಷ್ಣ ಐಯ್ಯರ್ ಅವರು ಕೊರಮರ ಗೋತ್ರದ ಬಗೆಗೆ ಹೇಳುತ್ತ – “The have four exogamous clans: Satpadi, kavadi, Menpadi, Mendragutti”[28] ಎಂದು ಮೇಲಿನ ನಾಲ್ಕು ಗೋತ್ರದ ಹೆಸರುಗಳನ್ನು ಹೆಸರಿಸಿದ್ದಾರೆ. ಅದರಂತೆಯೇ ಶ್ರೀ ಎಂ. ಕೆನಡಿ ಅವರು “Each sub division is again divided into four clans or gothras namely: 1) Sathpadi, 2) Melpadi, 3) Kavadi,  4) Mendragutti. In Bombay presidency, Kaikadis (in which class for the purpose of this note are included the Koravas pamlors and korachas of the Carnatic) are to be found more or less in all the districts and states of the Deccan and the southern Maratha country.”[29] ಕೈಕಾಡಿ, ಕೊರವ, ಪಾಮುಲರು, ಕೊರಚ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುತ್ತ ಬದುಕುತ್ತಿರುವ ಬೊಂಬಾಯಿ ಪ್ರಾಂತ್ಯದ  ಈ ಜನರಲ್ಲಿಯೂ ಈ ಮೇಲೆ ಹೇಳಲಾದ ಕೊರಮರ ಗೋತ್ರಗಳನ್ನು ನೋಡಿದರೆ, ಮೈಸೂರು ಪ್ರಾಂತ್ಯದ, ಮುಂಬಯಿ ಪ್ರಾಂತ್ಯದ ಈ ಜನ ಒಂದೇ ಮೂಲದವರು ಎಂಬುದರ ಬಗೆಗೆ ಒಂದು ತೀರ್ಮಾನಕ್ಕೆ ಬರಬಹುದು.

ಶ್ರೀ ಇ. ಥರ್ಸ್‌‌ಟನ್‌ಅವರು ದಾಖಲಿಸಿರುವಂತೆ “But whatever they may call themselves, they all according to Mr. mainwaring, fall with in three divisions. viz., 1) Sakai, Sampathi, Sathupadi,  2) Kavadi or Gujjala, 3) Devarakonda, Mendra kutti or Menapadi”[30] ಇಲ್ಲಿಯೂ ಕೊಂಚ ವ್ಯತ್ಯಾಸದೊಂದಿಗೆ ಮೂರು ಗೋತ್ರಗಳು ಕಂಡು ಬರುತ್ತವೆ. ನಾಲ್ಕನೆಯದಾದ ಮೆಂಡ್ರಗುತ್ತಿ ಇಲ್ಲಿ ಮೆನ್ಪಾಡಿಯ ಮತ್ತೊಂದು ಹೆಸರಾಗಿ ಕಂಡು ಬರುತ್ತದೆಯೇ ಹೊರತು ಪ್ರತ್ಯೇಕ ಗೋತ್ರವಾಗಿ ಕಂಡು ಬರುವುದಿಲ್ಲ.[1]       ಡಾ. ತೀ.ನಂ. ಶಂಕರನಾರಾಯಣ, ಕಾಡುಗೊಲ್ಲರ ನಂಬಿಕೆ ಮತ್ತು ಸಂಪ್ರದಾಯಗಳು, ಪು-1

[2]        E.Thurston, Castes and Tribes of southern India, Vol, III-k, p-439

[3]        Madras Census Report – 1891, Quoted, E.Thurston, Castes and Tribes of southern India, Vol, III-k, p-440

[4]      Ibid., p-441.

[5]        Buchanan’s Mysore, Vol.I Quoted, R.E. Enthovan The Tribes and  castes  of Bombay Vol-II, p-267

[6]        Madras Journ lit, and Science 1988-89, Quoted, E.Thurston, Castes and Tribes of southern India, Vol, III-k, p-441

[7]      Hirendra K. Rakshit. Language culture and recein South india, p-223

[8]      R.E. Enthovan. The Tribes and  castes  of Bombay Vol-II, p-266

[9]        H.V. Nanjundaiah and L.K. Anantha Krishna lyer, The Mysore Tribes and Castes, Vol-III, p-585

[10]       Ibid., p-586.

[11]        ಎಂ.ಟಿ.ಧೂಪದ ಕರ್ನಾಟಕ ಜಾನಪದ ರಂಗಭೂಮಿ-61

[12]      Ibid., p – 61

[13]       Ibid., p – 61

[14]       ಕನ್ನಡ ಜಾನಪದ ವಿಶ್ವಕೋಶ. ಸಂಪುಟ – 5, ಪು – 371.

[15]       ಬಿ.ವ್ಹಿ. ಮಲ್ಲಾಪೂರ ಜಾನಪದ ಸಾಹಿತ್ಯ ದರ್ಶನ 6, ಪು- 200

[16]       ಎಂ. ಶ್ಯಾಮಪ್ರಸಾದ Souvenir, July 1983, Akila Karnataka Koramara Sangha, Banglore.

[17]       ಜಾನಪದ ಸಾಹಿತ್ಯ ದರ್ಶನ – 3 ಪು – 223.

[18]       H.V. Nanjundaiah and L.K. Anantha Krishna lyer, The Mysore Tribes and Castes, Vol-III, p-584

[19]       E.Thurston, Castes and Tribes of southern India, Vol, III-k, p-447

[20]     Madras Census Report – 1891, Quoted, E.Thurston, Castes and Tribes of southern India, Vol, III-k, p-440

[21]       ಜಾನಪದ ಸಾಹಿತ್ಯ ದರ್ಶನ – 6 ಪು – 200.

[22]      R.E. Enthovan The castes and  Tribes of Bombay Vol-II, p-266

[23]      Ibid., p – 267

[24]      Michael Kennedy, Criminal Classes in the Bombay Presidency, p-69

[25]     ಹಂಪ ನಾಗರಾಜಯ್ಯ ದ್ರಾವಿಡ ಭಾಷಾ ವಿಜ್ಞಾನ ಪು-113

[26]      – ಅದೇ – ಪು-398

[27]       Cyclopaedia of india Quoted, E.Thurston, Castes and Tribes of southern India, Vol, III-k, p-443

[28]     H.V. Nanjundaiah and L.K. Anantha Krishna lyer, The Mysore Tribes and Castes, Vol-III, p-588

[29]      Michael Kennedy, Criminal Classes in the Bombay Presidency,  p-63-64

[30]      E.Thurston, Castes and Tribes of southern India, p-449