“ಕೊರಮ” ಇದು ಜಾತಿ ಸೂಚಕವಾದ ಪದ. ಈ ಶಬ್ದದ ಬಗೆಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ. ಕರ್ನಾಟಕದಲ್ಲಿ “ಕೊರಮ”ರನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವ ಹಾಗೆ ಬೇರೆ ರಾಜ್ಯಗಳಲ್ಲಿಯೂ ಇವರನ್ನು ವಿವಿಧ ಹೆಸರುಗಳಿಂದಲೇ ಗುರ್ತಿಸುತ್ತಾರೆ. ಕರ್ನಾಟಕದಲ್ಲಿ ಇವರನ್ನು ಕೊರಮರು, ಕೊರಮ ಶೆಟ್ಟರು, ಕೊರವರು, ಕೋತಿ ಕೊರಮರು. ಭಜಂತ್ರಿಗಳು ಎಂದೆಲ್ಲ ಗುರುತಿಸಿದರೆ, ಹೆಣ್ಣುಮಕ್ಕಳನ್ನು “ಕೊರವಿ” “ಕೊರಮಿ” “ಕೊರವಂಜಿ” ಮುಂತಾದ ಹೆಸರುಗಳಿಂದ ಗುರುತಿಸುತ್ತಾರೆ.

“ಕೊರವಂಜಿ ಶಬ್ದ ಪ್ರಮುಖ ದ್ರಾವಿಡ ಭಾಷೆಗಳಲ್ಲಿ ಕಂಡು ಬರುತ್ತದೆ. ತಮಿಳಿನ ಪುಲ್ಲಿಂಗರೂಪ “ಕುರವನ್‌” ಎಂದಾದರೆ “ಕುರುತ್ತಿ,” “ಕುರವಿ,” ಕುರವಂಚಿ (ಜಿ) ಎಂಬ ಹಲವಾರು ಸ್ತ್ರೀ ರೂಪಗಳಿವೆ. ಇದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ “ಕೊರವಂಜಿ,” “ಕೊರವತಿ” ಕೊರವಿತಿ, ತೆಲುಗಿನಲ್ಲಿ “ಕೊರವತ”, “ಕೊರವಂಜಿ” – ಮುಂತಾದ ರೂಪಗಳು ಪ್ರಯೋಗದಲ್ಲಿವೆ.”

[1]

ಕೊರಮರು ತಮ್ಮ ಜಾತಿಯ ಬಗೆಗೆ ಹೇಳುವ ಕಥೆಗಳಲ್ಲಿ ನೇರವಾಗಿ ದೇವರಿಂದಲೇ ಸೃಷ್ಟಿಯಾದ ಜಾತಿ ಎಂಬ ಧಾರ್ಮಿಕ ಅಂಶವನ್ನು ಕಾಣಬಹುದಾದರೂ ಕೊರಮ, ಶಬ್ದ ನಿಷ್ಪತ್ತಿಗೆ ಒಂದು ನಿಶ್ಚಿತವಾದ ಕಾರಣ ಇಲ್ಲದೆ ಇಲ್ಲ. ಕುರು- ಎಂಬ ಧಾತುವಿಗೆ ಸಂಸ್ಕೃತದಲ್ಲಿ “ಮಾಡು” ಎಂಬ ಅರ್ಥವಿದೆ. ಅಂದರೆ ದುಡಿಯುವುದು. ಈ ದುಡಿಯುವವರೇ “ಕುರವ” ರಾದರು ಎಂದು ಅರ್ಥೈಸಬಹುದಾದರೂ, ಈ ಜನ ದ್ರಾವಿಡ ಮೂಲದವರಾಗಿದ್ದರಿಂದ ಇವರ ಜಾತಿಸೂಚಕ ಶಬ್ದವನ್ನು ದ್ರಾವಿಡ ಭಾಷೆಗಳ ಮೂಲದಲ್ಲಿಯೇ ಹುಡುಕಬೇಕಾಗುತ್ತದೆ.

ಕನ್ನಡ ರತ್ನಕೋಶದಲ್ಲಿ ಕುರುವ ಶಬ್ದಕ್ಕೆ ಗುರುತು ಎನ್ನುವ ಅರ್ಥವನ್ನು ಸೂಚಿಸಲಾಗಿದೆ. ಗುರುತು, ಸಂಕೇತ ಅಥವಾ ಕುರುಹು ಶಬ್ದಗಳ ಅರ್ಥ ಒಂದೇ ಆಗಿರುವುದರಿಂದ ಸಂಕೇತ ಅಥವಾ ಕುರುಹುಗಳನ್ನರಿತು ವಿವರಿಸುತ್ತಿದ್ದ (ಕಣಿ ಹೇಳುತ್ತಿದ್ದ) ಜನ ಇವರಾದ್ದರಿಂದ ಕುರದಿಂದ ಕುರವರಾಗಿದ್ದಾರೆ ಎಂದು ಹೇಳುವುದು ಸತ್ಯಕ್ಕೆ ಹತ್ತಿರವಿದ್ದಂತೆ ತೋರುತ್ತದೆ.

“ಕನ್ನಡ ನಿಘಂಟು” ವಿನಲ್ಲಿಯೂ “ಕುರುವ” ಶಬ್ದಕ್ಕೆ ನೀರಿನಿಂದ ಸುತ್ತುವರಿದ ಪ್ರದೇಶ, ದ್ವೀಪ, ಗುಡ್ಡ, ದಿಬ್ಬ ಎನ್ನುವ ಅರ್ಥವಿದೆ. ಒಂದು ನಿರ್ಧಿಷ್ಟ ಸ್ಥಳದಲ್ಲಿ ನೆಲೆಯಾಗಿದ್ದ ಈ ಜನರನ್ನು ಗುರುತಿಸುವ ಸೂಚನೆ ಈ ಶಬ್ದದಲ್ಲಿ ಕಂಡು ಬರುತ್ತದೆಯಾದರೂ, ಆ ಸ್ಥಳಕ್ಕೆ ಈ ಹೆಸರು ಬರಲು ಕೊರಮರು ಕಣಿ (ಭವಿಷ್ಯ) ಹೇಳುತ್ತಿದ್ದುದೇ ಪ್ರಮುಖ ಕಾರಣವಾಗಿರಬಹುದು. ಇವರು ಕಣಿ ಹೇಳುತ್ತಿದ್ದ ಬಗ್ಗೆ ಈವರೆಗೆ ಲಭ್ಯವಾಗಿರುವ ದಾಖಲೆಗಳಲ್ಲಿ ಪ್ರಮಾಣಗಳಿವೆ.

ಕೊರಮರು ಕನ್ನಡ ನಾಡಿನಾದ್ಯಂತ ಕಂಡುಬಂದರೂ ಸಮಾಜಶಾಸ್ತ್ರಜ್ಞರ ಪ್ರಕಾರ ಇವರು ದಕ್ಷಿಣ ಭಾರತದಲ್ಲಿನ ದ್ರಾವಿಡ ಮೂಲಕ್ಕೆ ಸೇರಿದವರು. ಮದರಾಸು ಪ್ರಾಂತ್ಯದ ಸೌತ್‌ಅರ್ಕಾಟ್‌, ತಂಜವೂರು, ತಿರುಚಿನಾಪಳ್ಳಿ, ಸೇಲಂ, ಕೊಯಂಬತ್ತೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ತಮಿಳುನಾಡಿನ ಒಂದು ಸ್ಥಳ ಕುರು ಕೊರಮ ಶಬ್ದಕ್ಕೆ ಹೆಚ್ಚು ಪುಷ್ಟಿ ಕೊಡುತ್ತಿರುವುದರಿಂದಲೂ, ಕೊರಮರ ಭಾಷೆಯೂ ತಮಿಳಿನ ಒಂದು ರೂಪವೇ ಆಗಿರುವುದರಿಂದಲೂ ಆ ಪ್ರದೇಶದ ಒಂದು ಸ್ಥಳದಿಂದ ಇವರು ಇತರೆಡೆಗೆ ಚದುರಿ ಹೋಗಿದ್ದಾರೆಂಬ ಮಾನವ ಶಾಸ್ತ್ರಜ್ಞರ ಸಕಾರಣ ಊಹೆ ನಂಬಿಕೆಗೆ ಅರ್ಹವಾಗಿದೆ.

“The name Korcha or Koracha says, Mr. Turston appears to be of a later date than Korava and is said to be derived form the Hindustani Kuri (Sly), Korinigga (Sly look) becomding corrupted into Koracha. But the two words Korcha and Korama are otherwise derived from the verb Kuru meaning to divine or prognasticate, and are applied to the tribe owing to their profession of forture-telling which their women practice. There is still another derivation of these terms from a word which means hillman (ef. Tamil Kurini- a hill country) showing that these tribes man are wild hill man living in jungles. In the Telugu districts, the tribes man are called “Yurukula” Which comes from the root eru or yerru, which signifies to know or divine -Koravanji makkalu means children of the koravanji, a female fortune-teller. “[2]

“ಇಲ್ಲಿ ಹೇಳಿರುವ ವಿಷಯಗಳನ್ನು ಗಮನಿಸಿದಾಗ ಇತರೆ ವಿಷಯಗಳಿಗಿಂತ ಮುಖ್ಯವಾಗಿ ಈ ಜನ ಭವಿಷ್ಯ(ಕಣಿ) ಹೇಳುವವರಾಗಿದ್ದರು ಎಂಬುದು ಖಚಿತವಾಗುತ್ತದೆ. ಕನ್ನಡದಲ್ಲಿ ಕುರುಹು ಎಂಬುದಕ್ಕೆ ಗುರುತು ಎನ್ನುವ ಅರ್ಥವಿರುವುದಾದರೂ ತಮಿಳಿನಲ್ಲಿ Kuruni-a hill country. Kuriniga ಎಂಬುದು ಗಿರಿಜನರನ್ನು ಸೂಚಿಸುತ್ತಿರುವದರಿಂದ ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತಾ ಕಣಿ ಹೇಳುವ ವೃತ್ತಿಯನ್ನು ಅನುಸರಿಸುತ್ತ ಬಂದುದರಿಂದ ಈ ಜನಾಂಗಕ್ಕೆ ಕುರವ-ಕೊರವ-ಕೊರಮ ಎಂಬ ಹೆಸರು ರೂಢಿಯಾಗಿದೆ. ಕುರುಹನ್ನು ಹೇಳುತ್ತಿದ್ದವರು ಕೊರವರಾಗಿ, ಅವರಿದ್ದ ಸ್ಥಳವೇ “ಕುರು”ವಾಗಿ ರೂಢಿಯಲ್ಲಿ ಬೆಳೆದು ಬಂದಂತೆ ತೋರುತ್ತದೆ. ಕುರು ಎನ್ನುವ ಶಬ್ದಕ್ಕೆ ಎತ್ತರವಾದ ಪ್ರದೇಶ “ಕಲ್ಲು ಕುರುಟೆ” ಮುಂತಾದ ಪ್ರಯೋಗಗಳು ಕನ್ನಡ ಜನಭಾಷೆಯಲ್ಲಿರುವುದನ್ನು ಇಲ್ಲಿ ಗಮನಿಸಬಹುದು.

ಶಿಲಪ್ಪದಿಕಾರಮ್‌ನಲ್ಲಿ ಕಾಡಿನ ಹೆಣ್ಣೊಬ್ಬಳು ಭವಿಷ್ಯ ಹೇಳುವ ಸಲುವಾಗಿ ರಾಜ-ರಾಣಿಯರಲ್ಲಿಗೆ ಬರುವ ಅಂಶ ಇದಕ್ಕೆ ಪುಷ್ಟಿ ಕೊಡುತ್ತದೆ.[3]

ಡಾ|| ಓಪರ್ಟ ಅವರು ಕುರು ಶಬ್ದದ ಮೂಲ “ಕು” ಅಂದರೆ ಒಂದು ಪರ್ವತ. ೯ ನೇ ಶತಮಾನದ ಒಂದು ತಮಿಳು ಕೃತಿಯಲ್ಲಿ “ಕುರು” ಅಥವಾ “ಕುರ” (ಕುರಮಗಳ್‌) ಎನ್ನುವ ಪದ ಒಂದು ಪರ್ವತದಲ್ಲಿನ ಒಂದು ಬುಡಕಟ್ಟು ಜನರನ್ನು ಕುರಿತು ಹೇಳುತ್ತದೆ ಎಂಬುದನ್ನು ಹೇಳುವ ಬಗ್ಗೆ “Kuru with root “ku”. a mountain, and in a Tamil work of the ninth century. Kuru or Kura (kurumagal) is given as the name of a hill tribe. A strong argument in favour of the caste name connected with the profession of fortune-telling is aforded by the fact that woman go about the streets calling out” Yerukoamma, Yaruko” i.e. Prophecies.”[4]  ಎಂಬ ಮಾತುಗಳನ್ನು ಹೇಳಿದ್ದಾರೆ. ಇಲ್ಲಿಯೂ ಕೂಡ ಈ ಜನಾಂಗ ಕಣಿ ಹೇಳುತ್ತಿದ್ದುದು ತೋರಿ ಬರುತ್ತದೆ. ಇಲ್ಲಿ ಕನ್ನಡದಲ್ಲಿ ಬಳಕೆಯಾಗಿರುವ ಕುರುಹು ಶಬ್ದಕ್ಕೆ ಗುರುತು ಮಾತ್ರವಲ್ಲದೆ, ವ್ಯಕ್ತಿಯ ಹಿನ್ನೆಲೆ ಅಥವಾ ಪೂರ್ವಾಪರ ಎಂದೂ ಬಳಕೆಯಾಗುತ್ತದೆ (ಉದಾಃ ಅಕ್ಕಮಹಾದೇವಿ ಅನುಭವ ಮಂಟಪ ಪ್ರವೇಶ ಮಾಡುವಾಗ ನಿನ್ನ ಕುರುಹು ಹೇಳಿ ಒಳಗೆ ಬಾ ಎಂಬ ಪ್ರಯೋಗದಲ್ಲಿ ಈ ಧ್ವನಿ ಇದೆ) ಅಲ್ಲದೆ ಕೂನ ಮತ್ತು ಕುರುಹು ಎಂಬ ಪದಗಳ ವಿಶಿಷ್ಟ ಬಳಕೆಯನ್ನು ಇಲ್ಲಿ ಗಮನಿಸಬಹುದು. ಕೂನ ಎಂದರೆ ಮುಖಚರ್ಯೆ ಅಥವಾ ಆಕಾರ, ಗುರುತು; ಕುರುಹು ಎಂದರೆ ಹಿನ್ನೆಲೆ. ಈ ಕಣಿ ಹೇಳುತ್ತಿದ್ದುದರಿಂದಲೇ ಇವರು, ಕುರುವ-ಕೊರವರಾದರು. ಇವರು ನೆಲೆಸಿದ ಸ್ಥಳವೇ ಕು ಅಥವಾ ಕುರುವಾಯಿತು. ಆದ್ದರಿಂದ ಈ ಜನ ಅನುಸರಿಸುತ್ತಿದ್ದ ಉದ್ಯೋಗದಿಂದಲೇ ಜಾತಿಯ ಹೆಸರು ರೂಢವಾಯಿತು ಎಂಬಂತೆ ತೋರುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕಣಿ ಹೇಳುವ ಕಸುಬನ್ನು ಈ ಜಾತಿಯ ಹೆಣ್ಣುಮಕ್ಕಳೇ ನಿರ್ವಹಿಸುತ್ತಿದ್ದುದು. ಇದನ್ನು ಪುಷ್ಟೀಕರಿಸುವ ಹಲವಾರು ದಾಖಲೆಗಳೂ ಕೂಡ ದೊರೆಯುತ್ತವೆ. ಕು ಅಥವಾ ಭವಿಷ್ಯ ಹೇಳುವವರು ಇತರೆ ಜಾತಿಯವರಲ್ಲಾದರೆ ಗಂಡಸರೇ ಹೆಚ್ಚು ಕಂಡು ಬರುತ್ತಾರೆ. (ಉದಾಃ ಕುರ್ರಮಾವ, ಹೆಳವರೂ ಹೀಗೆ ಕಣಿ ಹೇಳುವ ವೃತ್ತಿಯವರಿದ್ದಾರೆ) ಕೊರಮರಲ್ಲಾದರೆ ಕೊರವಂಜಿಯವರು ಕೇರಿ ಕೇರೆಗಳಿಗೆ ಹೋಗಿ ಕಣಿ ಹೇಳಲು ಅಲ್ಲಿಯ ಹೆಣ್ಣುಮಕ್ಕಳನ್ನು ಕರೆಯುತ್ತಾರೆ. ಆದರೆ ಗಂಡಸರು ಈ ವೃತ್ತಿಯನ್ನು ಅವಲಂಬಿಸುವುದಿಲ್ಲ. ಕಾರಣ ಕಣಿ ವೃತ್ತಿಯಿಂದಲೇ ಕೊರವ ಬುಡಕಟ್ಟಿನ ಹೆಸರು ಬಂತು ಎಂಬುದನ್ನು ಸಂಪೂರ್ಣವಾಗಿ ಒಪ್ಪುವುದು ಕಷ್ಟ.

ಪುಲ್ಲಿಂಗ – ಕು – ಕುರ – ಕುರು – ಕುರಣಿಗ – ಕುರುವ – ಕೊರವ – ಕುರವನ್‌ ಕೊರಮ – ಕೊರಚ ಎಂದಾದರೆ, ಸ್ತ್ರೀಲಿಂಗ ರೂಪ, ಕು – ಕುರ – ಕುರು – ಕುರವಿ – ಕೊರವಿ – ಕೊರವತ – ಕೊರವಿತಿ – ಕುರಂಜಿ – ಕೊರಮಿ – ಕೊರವಂಚಿ – ಕೊರವಂಜಿ ಎಂದು ಕಾಲದಿಂದ ಕಲಕ್ಕೆ ರೂಪಾಂತರಗೊಂಡಿದೆ ಎಂಬುದು ತಿಳಿಯುತ್ತದೆ.

ವಿಲ್ಸನ್‌ ಮತ್ತು ಇತರರ ಪ್ರಕಾರ “It has been suggested, for example, that yeru is connected with erra, meaning red. In Telugu yerukala vandalu would mean fortune- tellers.”[5]  ಎಂದಿದ್ದಾರೆ. ಎರ್ರ ಎಂದರೆ ಕೊರಮ ಭಾಷೆಯಲ್ಲಿಯೂ ಕೆಂಪು ಎಂದೆ ಇದೆ. ತೆಲುಗಿನಲ್ಲಿ ಯರುಕಲವಂಡಲು ಎಂಬುದು ಕಣಿ ಹೇಳುವವರು ಎಂದು ಗುರುತಿಸಿರುವುದರಿಂದ ಅವರ ವೃತ್ತಿಯಿಂದ ಆ ಹೆಸರು ಬಂದಿದೆ ಎಂಬುದು ತಿಳಿಯುತ್ತದೆ. ಸಾಮಾನ್ಯವಾಗಿ ದ್ರಾವಿಡ ಭಾಷೆಗಳಲ್ಲಿ ಎರ್ರ ಎಂದರೆ ಕೆಂಪು ಎಂಬ ಅರ್ಥವಿದೆಯಾದರೂ ಆ ಕುಲಸಂಬಂಧಕ್ಕೂ ಕೆಂಪು ಎನ್ನುವ ಅರ್ಥಕ್ಕೂ ನೇರ ಸಂಬಂಧವಿದ್ದಂತೆ ಇಲ್ಲ. ಡಾ|| ಓಪರ್ಟ್‌ ಅವರು” it is highly probable that the name and the occupation of the fortune telling kuruvandlu or Kuluvandlu indeed the Telugu people to call this tribe yarukulavandlu.”[6] ಎಂದು ಹೇಳುವ ಈ ಮಾತಿನಿಂದಲೂ ಅವರ ಕಣಿ ಹೇಳುವ ವೃತ್ತಿಯಿಂದಲೇ ಜಾತಿಯ ಹೆಸರು ಬಂದಿದೆ ಎಂಬುದು ವಿಧಿತವಾಗುತ್ತದೆ. ಕರ್ನಾಟಕದ ಕೊರಮರಿಗೂ ಕೂಡ, ಕೊರಮ ಎಂಬ ಹೆಸರು ಈ ಮೇಲೆ ಹೇಳುವಂತೆ ಅವರ ಕಣಿ ಹೇಳುವ ವೃತ್ತಿಯಿಂದಲೇ ಬಂದಿರಬಹುದೆಂದು ತೋರುತ್ತದೆ.

ದ್ರವಿಡಿಯನ್‌ ಎಟಮಲಾಜಿಕಲ್‌ಡಿಕ್ಸನರಿ (ಡಿ.ಇ.ಡಿ) ನಂಬರ್ 1530-“Kuram Kurava tribe, palmistry as practised by Kurava women; Kuravan, man of a caste of flowers, snake -catchers, basket-makers, and fortune -tellers; fem,. Kuratti, Kurvavi, Kuravanei, Kuravanar, the Kurava tribe of the mountain, Kurunci, hilly tract, kuricci village, in the hilly tract; —- ma; Kuruvan wandering tribe of basket-makers, snake-catchers, and Gipssies, Kurucci hill country, …………. Ka. Korava, Korama man of a now settled tribe who make baskets, mats, etc; are mujicians etc., fem. Koravanji, Koravati, Koraviti (Commonly forture-tellers) ಮೇಲಿನ ವಿವಿಧ ಪ್ರಯೋಗಗಳು ಕೊರವ ಜನಾಂಗದ ಹೆಸರಿನ ಮೂಲ ಮತ್ತು ಅವರ ವೃತ್ತಿಯನ್ನು ಖಚಿತಗೊಳಿಸುತ್ತವೆ.[1]       ಡಾ|| ಜಿ. ವರದರಾಜರಾವ್ ಜಾನಪದ – 2 (ಸಂ;1, ಸಂ;2) ಜುಲೈ 69, ಪು-7.

[2]      M.V. Nanjundaiah and L.K. Anantha Krishna lyer, The Mysore Tribes and Castes, Vol-III, p-483

[3]        Quoted, E.Thurston, Castes and Tribes of southern India, Vol, III, p-443

[4]      Dr. Oppert, Tirumurukairupaddi, Quoted, E.Thurston, Castes and Tribes of southern India, Vol, III-k, p-441

[5]        Ibid.,

[6]      Ibid.,