ಇಂದು ನಾವು ಕಾಣುತ್ತಿರುವ ಕರ್ನಾಟಕ ರಾಜ್ಯವು ಒಂದು ರಾಜಕೀಯ ಆಡಳಿತ ಘಟಕವಾಗಿ ಅಸ್ತಿತ್ವಕ್ಕೆ ಬಂದುದು 1956ರಲ್ಲಿ. ಆಗ ಅದು ಮೈಸೂರು ಎಂಬ ಹೆಸರಿನಲ್ಲಿ ರೂಪು ತಳೆದು, 1973ರಲ್ಲಿ ಕರ್ನಾಟಕ ಎಂಬ ಈಗಿನ ಹೆಸರನ್ನು ಪಡೆಯಿತು.

1799ರ ನಾಲ್ಕನೇ ಮೈಸೂರು ಯುದ್ಧ ಮತ್ತು 1817ರ ಮೂರನೆಯ ಮರಾಠ ಯುದ್ಧಗಳ ಮೂಲಕ ದಕ್ಷಿಣ ಭಾರತವು ಇಡಿಯಾಗಿ ಬ್ರಿಟಿಷರ ಹತೋಟಿಗೆ ಒಳಪಟ್ಟಿತು. ಇದರಲ್ಲಿ ಎಲ್ಲ ಕನ್ನಡ ಭಾಷಾ ಪ್ರದೇಶಗಳು ಸೇರಿದ್ದರೂ ನಾನಾ ರಾಜಕೀಯ ಕಾರಣಗಳ ಫಲವಾಗಿ ಅವು 19 ವಿವಿಧ ರಾಜಕೀಯ ಆಡಳಿತ ಘಟಕಗಳಲ್ಲಿ ಹರಿದು ಹಂಚಿ ಹೋದವು. ಅದಕ್ಕೂ ಮುಂಚೆ ಕನ್ನಡ ಭಾಷಿಕ ಜನರೆಲ್ಲ ಒಂದೇ ರಾಜಕೀಯ ಆಡಳಿತಕ್ಕೆ ಒಳಪಟ್ಟಿದ್ದುದು ಅಪರೂಪ. ಈ 19 ಘಟಕಗಳನ್ನು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು.

1.  ಬ್ರಿಟೀಷ್ ನೇರ ಆಳ್ವಿಕೆ : ಮುಂಬಯಿ ಪ್ರಾಂತದ ಬೆಳಗಾವಿ, ಬಿಜಾಪುರ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳು. ಮದರಾಸ್ ಪ್ರಾಂತ್ಯದ ದಕ್ಷಿಣ ಕನ್ನಡ, ಬಳ್ಳಾರಿ ಜಿಲ್ಲೆಗಳು ಮತ್ತು ಕೊಳ್ಳೇಗಾಲ ತಾಲ್ಲೂಕು, ಕೊಡಗು

2.  ಮೈಸೂರು ಸಂಸ್ಥಾನ : ಇಂದಿನ ಮೈಸೂರು, ಚಾಮರಾಜನಗರ, ಬೆಂಗಳೂರುನಗರ, ಬೆಂಗಳೂರು ಗ್ರಾಮಂತರ, ಕೋಲಾರ, ತುಮಕೂರು, ಮಂಡ್ಯ, ಹಾಸನ, ಚಿಕ್ಕಮಗ ಳೂರು, ಶಿವಮೊಗ್ಗ ಚಿತ್ರದುರ್ಗ, ದಾವಣೆಗೆರೆ ಜಿಲ್ಲೆಯ ಪ್ರದೇಶಗಳು.

3.  ಹೈದಾರಾಬಾದ್ ಸಂಸ್ಥಾನ : ಬೀದರ್, ಗುಲ್ಬರ್ಗ, ರಾಯಚೂರು (ಇಂದಿನ ಕೊಪ್ಪಳ ಜಿಲ್ಲೆಯೂ ಸೇರಿದಂತೆ) ಜಿಲ್ಲೆಗಳು

4.       ಕೊಲ್ಲಾಪುರ, ಸಂಡೂರು, ಸಾಂಗ್ಲಿ ಮುಂತಾದ 14 ದೇಶೀಯ ಸಂಸ್ಥಾನಗಳು – ಇವುಗಳಲ್ಲಿ ಕೆಲವು ಭಾಗಶಃ ಮತ್ತು ಕೆಲವು ಪೂರ್ಣ ಕನ್ನಡ ಪ್ರದೇಶಗಳು.

5. ಬೆಂಗಳೂರು, ಬೆಳಗಾವಿ ಮತ್ತು ಬಳ್ಳಾರಿ ದಂಡು ಪ್ರದೇಶಗಳು.

ಈ ಎಲ್ಲ ಪ್ರದೇಶಗಳಲ್ಲಿಯೂ ಸ್ವಾತಂತ್ರ್ಯಾಕಾಂಕ್ಷೆ ಹಾಗೂ ರಾಷ್ಟ್ರೀಯ ಭಾವನೆಗಳು ಭಾರತದ ಇತರೆಡೆಗಳಂತೆಯೇ ಅಭಿವೃದ್ದಿಗೊಂಡವಾದರೂ ಸ್ವಾತಂತ್ರ್ಯ ಹೋರಾಟವು ತಳೆದ ರೂಪಗಳಲ್ಲಿ ಭೇದಗಳಿವೆ. ಆದ್ದರಿಂದ ಮೊದಲಿಗೆ ಕರ್ನಾಟಕಕ್ಕೆಲ್ಲ ಅನ್ವಯವಾಗುವ ಒಂದು ಸ್ಥೂಲ ಹಿನ್ನೆಲೆಯನ್ನು ನೀಡಿ, ಅನಂತರ ಹೋರಾಟದ ವಿಚಾರವನ್ನು ಪ್ರಸ್ತಾಪಿಸಲಾಗುವುದು. ಹೋರಾಟದ ವಿವರಣೆಯನ್ನು ಈ ರೀತಿ ವಿಂಗಡಿಸಲಾಗಿದೆ. ಮೊದಲಿಗೆ 1857ರ ದಂಗೆ ಮತ್ತು ಅದಕ್ಕೂ ಹಿಂದಿನ ಹೋರಾಟಗಳು, ಅನಂತರ ನಾವು ನೀಡಿರುವ ವಿಂಗಡಣೆಯ ಪ್ರಕಾರ ವಿವರಣೆ ಮತ್ತು 40ರ ದಶಕದ ಹೋರಾಟಗಳು. ಇವುಗಳನ್ನು ಪ್ರಸ್ತಾಪಿಸಿ, ಕೊನೆಯಲ್ಲಿ ಸ್ವಾತಂತ್ರ್ಯ ಬಂದ ಮೇಲೆ ಜರುಗಿದ ಆದರೆ ಅದಕ್ಕೇ ಸಂಬಂಧಪಟ್ಟ ಎರಡು ಹೋರಾಟಗಳನ್ನು ವಿವರಿಸಲಾಗುವುದು.