ಸಾಮಾಜಿಕ ಮತ್ತು ಆರ್ಥಿಕ ಅವನತಿ

ರಾಜಕೀಯವಾಗಿ ಪರಾಧೀನವಾದುದರಿಂದಾಗಿ ಆದ ಪರಿಣಾಮಗಳು ಬಹುಮುಖ ವಾದಂತಹವು. ಬಹಳ ಕಾಲದಿಂದಲೂ ಭಾರತೀಯ ಸಮಾಜದ ಅಡಿಪಾಯವಾಗಿದ್ದ, ಪರಸ್ಪರ ಹಂಗುಗಳ ಮೇಲೆ ವ್ಯವಸ್ಥೆಗೊಂಡಿದ್ದ ಸ್ವಾವಲಂಬಿ ಗ್ರಾಮ ವ್ಯವಸ್ಥೆಯು ಮುರಿದು ಬಿದ್ದು, ನ್ಯಾಯ ವಿತರಣೆಯು ಸರ್ಕಾರದ ಹತೋಟಿಗೆ ಒಳಪಟ್ಟು ಗ್ರಾಮ ಪಂಚಾಯಿತಿಗಳು, ರೂಢಿಬದ್ಧ ಪದ್ಧತಿಗಳು ಅರ್ಥಹೀನವಾದುವು. ಕೃಷಿಯೊಂದಿಗೆ ಜನರ ಆರ್ಥಿಕ ಜೀವನದ ಬೆನ್ನೆಲುಬಾಗಿದ್ದ ಕುಶಲ ಕೈಗಾರಿಕೆಗಳೆಲ್ಲ ಮುರಿದುಬಿದ್ದುವು. ಮೊದಲಿಗೆ ಹತ್ತಿ, ಜವಳಿ ಅಂದರೆ ನೂಲುವುದು ಮತ್ತು ನೇಯ್ಗೆ, ಬಳಿಕ ಕಬ್ಬಿಣ, ಬೆಲ್ಲ – ಹೀಗೆ ಸಾಲು ಸಾಲಾಗಿ ದೇಶೀಯ ಕೈಗಾರಿಕೆಗಳೆಲ್ಲ ಕುಸಿದು ಬಿದ್ದವು. ಈ ಪರಿಸ್ಥಿತಿಯನ್ನು ಕುರಿತು ಕಾರ್ಲ್‌ಮಾರ್ಕ್ಸ್ 1853ರ ಒಂದು ಲೇಖನದಲ್ಲಿ

1813ರವರೆಗೆ ಭಾರತವು ಮುಖ್ಯವಾಗಿ ರಫ್ತು ದೇಶವಾಗಿತ್ತು. ನಂತರ ಆಮದು ದೇಶವಾಗುತ್ತ ಹೋಯಿತು… ಅನಾದಿ ಕಾಲದಿಂದಲೂ ಇಡೀ ಜಗತ್ತಿನ ಹತ್ತಿ ಜವಳಿ ಉತ್ಪಾದನೆಯ ಬೃಹತ್ ಕಾರ್ಯಾಗಾರವಾಗಿದ್ದ ಭಾರತವು ಈಗ ಇಂಗ್ಲಿಷ್ ಹುರಿನೂಲು ಮತ್ತು ಅರಳೆ ವಸ್ತ್ರಗಳಿಂದ ಮುಳುಗಿ ಹೋಯಿತು

ಎಂದು ಬರೆದಿದ್ದಾರೆ.

ಜನರು ನಿರುದ್ಯೋಗಿಗಳಾದರು, ನಿರ್ಗತಿಕರಾದರು. ನೀರಾವರಿಗೆ ಕೆರೆಗಳನ್ನೇ ನಂಬಿ ಕೊಂಡಿದ್ದ ಕರ್ನಾಟಕದಲ್ಲಿ ಅವು ನಿರ್ಲಕ್ಷ್ಯಕ್ಕೊಳಗಾದವು. ಕಣಜ, ಹಗೇವುಗಳಲ್ಲಿ ಧಾನ್ಯ ಸಂಗ್ರಹ ಮಾಡುವ ಪದ್ಧತಿ ಕಣ್ಮರೆಯಾಗುತ್ತ ಬಂತು. ಅರಣ್ಯ ಕಾಯಿದೆಗಳು ಬಂದು ಗ್ರಾಮಸ್ಥರು, ಆದಿವಾಸಿಗಳು ಮುಂತಾದವರು ಅವುಗಳಿಂದ ದೊರೆಯುತ್ತಿದ್ದ ಸವಲತ್ತು ಗಳಿಂದ ವಂಚಿತರಾದರು.

ನಮ್ಮ ಬಡ ದೇಶದಿಂದ ವಸೂಲಾಗುತ್ತಿದ್ದ ಕಂದಾಯದ ಗಣನೀಯ ಪ್ರಮಾಣವು ಇಂಗ್ಲಿಷ್ ಅಧಿಕಾರಿಗಳ ಸಂಬಳ, ನಿವೃತ್ತಿ ವೇತನಗಳು, ಬಡ್ಡಿ ಎಂದು ಬ್ರಿಟನ್ನಿಗೆ ಸಾಗತೊಡಗಿತು. ದೇಶ ದಾರಿದ್ರ್ಯಕ್ಕೀಡಾಯಿತು. ಮೇಲಿಂದ ಮೇಲೆ ಕ್ಷಾಮಗಳು ಕಾಡ ತೊಡಗಿದವು. 1876-78ರ ಧಾತು-ಈಶ್ವರ ಕ್ಷಾಮವು ಕರ್ನಾಟಕದ ಲಕ್ಷಾಂತರ ಜನರನ್ನು ಕಬಳಿಸಿತು. ಇಡೀ ಜನಾಂಗವನ್ನು ವಿಷಣ್ಣತೆ ಆವರಿಸಿತು. 19ನೆಯ ಶತಮಾನವನ್ನು ಭಾರತವನ್ನು ಕಣ್ಣೀರು ಹಾಗೂ ಕತ್ತಲುಗಳಿಗೆ ದೂಡಿದ ಶತಮಾನ ಎಂದು ಕರೆದರೆ ತಪ್ಪಾಗಲಾರದು.

ಬೆಳಕಿನ ಎಳೆಗಳು

ಈ ದುಸ್ಥಿತಿಯಲ್ಲಿಯೂ ನಿಧಾನವಾಗಿ ಬೆಳಕಿನ ಎಳೆಗಳು ಮೂಡಿದವು. ಅಂತಹ ಮೊದಲ ಎಳೆ ಕನ್ನಡಕ್ಕೆ ಮುದ್ರಣ ಬಂದುದು. ಆರಂಭದಲ್ಲಿ ಮುದ್ರಣವು ಯಾವ ಉದ್ದೇಶಕ್ಕಾಗಿಯೇ ಬಳಕೆಯಾಗಿದ್ದಿರಲಿ, 19ನೆಯ ಶತಮಾನದ ಕೊನೆಯ ವೇಳೆಗೆ ದೇಶಭಕ್ತಿಯನ್ನು ಪ್ರಸಾರ ಮಾಡುವ ಹಲವು ಪತ್ರಿಕೆಗಳು ಹೊರಬರಲಾರಂಭವಾದವು. ಮುಂದೆ ಸಂಯುಕ್ತ ಕರ್ನಾಟಕ, ವಿಶ್ವ ಕರ್ನಾಟಕ, ತಾಯಿನಾಡು, ಕರ್ಮವೀರ, ಜನವಾಣಿ, ಕಂಠೀರವ ಹೀಗೆ ಅಸಂಖ್ಯಾತ ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟದಲ್ಲಿ ವಹಿಸಿದ್ದ ಪಾತ್ರ ಮಹತ್ತರವಾದುದು. ಪುಸ್ತಕಗಳು, ಕರಪತ್ರಗಳೂ ಸಹ ಉಲ್ಲೇಖನೀಯ ಪಾತ್ರ ವಹಿಸಿವೆ.

ಎರಡನೆಯ ಎಳೆ ಆಧುನಿಕ ಶಿಕ್ಷಣ. ಓದು ಬರಹ ಹರಡಿದಂತೆ ಹೆಚ್ಚು ಹೆಚ್ಚು ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾದವು. ಬೆಳಗಾವಿಯ ಕರ್ನಾಟಕ ಲಿಂಗಾಯತ ಎಜುಕೇಷನ್ ಸೊಸೈಟಿ (ಕೆ.ಎಲ್.ಇ.ಸೊಸೈಟಿ) 1884ರಲ್ಲಿ ಸ್ಥಾಪನೆಯಾಯಿತು. ಈ ಸಂಸ್ಥೆಗಳ ಮೂಲಕ ಶಿಕ್ಷಣ ಪಡೆದವರು ಮುಂದಿನ ಶತಮಾನದಲ್ಲಿ ಚುರುಕುಗೊಂಡ ಸ್ವಾತಂತ್ರ್ಯ ಹೋರಾಟದ ನಾಯಕರಾದರು.

ಮೂರನೆಯ ಎಳೆ ಆಧುನಿಕ ಉದ್ಯಮಗಳ ಸ್ಥಾಪನೆ. ರೈಲುಮಾರ್ಗಗಳು, ಅಂಚೆ-ತಂತಿ ಸೌಕರ್ಯಗಳು, ವಿದ್ಯುತ್ ಉತ್ಪಾದನೆ ಇವೆಲ್ಲವೂ ಹೊಸ ಜೀವನ ಶೈಲಿಯೊಂದಕ್ಕೆ ನಾಂದಿ ಹಾಡಿದವು. 1851ರಲ್ಲಿ ಮುಂಬೈನ ಮೊದಲನೆಯ ಜವಳಿ ಗಿರಣಿ ಸ್ಥಾಪನೆಯಾದರೆ, ಬೆಂಗಳೂರಿನ ಮೈಸೂರು ಮಿಲ್ಸ್ 1874ರಲ್ಲಿ, ಬಿನ್ನಿಮಿಲ್ಸ್ 1875ರಲ್ಲಿ ಆರಂಭವಾದವು.

ಬ್ರಿಟಿಷ್ ಆಳ್ವಿಕೆಯಿಂದ ಉಂಟಾದ ಈ ದುಷ್ಪರಿಣಾಮಗಳು ಮತ್ತು ಸತ್ಪರಿಣಾಮ ಗಳೆರಡನ್ನೂ ಹಿನ್ನೆಲೆಯಲ್ಲಿಟ್ಟುಕೊಂಡು, ಕರ್ನಾಟಕದಲ್ಲಿ ರೂಪು ತಳೆದ ಸ್ವಾತಂತ್ರ್ಯ ಹೋರಾಟದ ಒಂದು ಸ್ಥೂಲ ಚಿತ್ರಣವನ್ನು ಕಾಣಬಹುದು.