1857ರ ದಂಗೆ ಮತ್ತು ದಂಗೆಯವರೆಗೆ

1799ರಲ್ಲಿ ಟಿಪ್ಪುಸುಲ್ತಾನನು ಮರಣವನ್ನಪ್ಪಿ, ಆತನ ರಾಜ್ಯವೆಲ್ಲ ಬ್ರಿಟಿಷರ ಅಧೀನಕ್ಕೆ ಬಂದಿತಾದರೂ, ಅದರ ಹಿಂದೆಯೇ ಆತನ ದಳಪತಿಗಳಲ್ಲೊಬ್ಬನಾಗಿದ್ದ ಧೋಂಡೂವಾಫ್ ಎಂಬುವವನು ದಕ್ಷಿಣ ಕನ್ನಡದ ಕೆಲವು ತುಂಡರಸರು, ಐಗೂರು ಪಾಳೆಯಗಾರ ವೆಂಕಟಾದ್ರಿ ನಾಯಕ ಮುಂತಾದವರನ್ನು ಕೂಡಿಕೊಂಡು ಹೋರಾಡಿದ. ಅದಾದ ನಂತರ 1824ರಲ್ಲಿ ಕಿತ್ತೂರಿನ ಹೋರಾಟ, ಸಂಗೊಳ್ಳಿ ರಾಯಣ್ಣನು ನಡೆಸಿದ ಹೋರಾಟ, ಇದಕ್ಕಿಂತ ದೊಡ್ಡ ವ್ಯಾಪ್ತಿಯ ನಗರದ ದಂಗೆಗಳನ್ನೂ ಉಲ್ಲೇಖಿಸಬಹುದು. ನಗರದ ದಂಗೆಯು ದುಬಾರಿ ಕಂದಾಯ ಮತ್ತು ಹೊಸದಾಗಿ ತಂದ ಜಮೀನು ಒಡೆತನದ ಪದ್ಧತಿಗಳಿಗೆ ವಿರುದ್ಧವಾಗಿ ಜರುಗಿದ ರೈತ ದಂಗೆ. ಅದಕ್ಕೆ ಹೊಂದಿಕೆಯಾದಂತೆ ಕೊಡಗು, ದಕ್ಷಿಣ ಕನ್ನಡದಲ್ಲಿ ಕಲ್ಯಾಣಪ್ಪನ ಕಾಟಕಾಯಿ ಎಂದು ಹೆಸರಾಗಿರುವ ದಂಗೆ ಜರುಗಿತು. ಇಂಗ್ಲಿಷ್ ದಾಖಲೆಗಳು ಇದನ್ನು ಕೆನರಾ ಬಂಡಾಯ ಎಂದು ಕರೆದಿವೆ. ಈ ಕಾಲದಲ್ಲಿ 1837ರ ಏಪ್ರಿಲ್ ತಿಂಗಳಲ್ಲಿ ಕೆಲವು ದಿನಗಳ ಕಾಲ ಮಂಗಳೂರು ನಗರವು ಬಂಡಾಯಗಾರರ ದಾಳದಲ್ಲಿತ್ತು.

1857ರಲ್ಲಿ ಸುರಪುರದ ವೆಂಕಟಪ್ಪ ನಾಯಕ, ಮುಂಡರಗಿ ಭೀಮರಾಯ, ನರಗುಂದದ ಬಾಬಾಸಾಹೇಬ ಮುಂತಾದ ಅರಸರು ದಂಗೆಯೆದ್ದರು. ಆ ವರ್ಷಗಳಲ್ಲಿ ನೂರಾರು ಬಂಡಾಯಗಾರರು ನೇಣುಗಂಬವನ್ನೇರಿದರು. ಈ ಸುತ್ತಿನಲ್ಲಿ ಜರುಗಿದ ಹಲಗಲಿಯ ಬೇಡರ ಬಂಡಾಯವನ್ನು ಹೊಸದಾಗಿ ಜಾರಿಯಾದ ಸಶಸ್ತ್ರ ಕಾಯಿದೆಯ ವಿರುದ್ದ ಬೇಡ ಸಮುದಾಯವು ನಡೆಸಿದ ಹೋರಾಟವನ್ನು ಒಂದು ವಿಶಿಷ್ಟ ಬಂಡಾಯ ಎಂಬುದಾಗಿ ಉಲ್ಲೇಖಿಸಬಹುದು.

 

ಬ್ರಿಟಿಷ್ ಆಳ್ವಿಕೆಯ ಪ್ರದೇಶಗಳಲ್ಲಿ ಸ್ವಾತಂತ್ರ್ಯ ಹೋರಾಟ

ಮುಂಬಯಿ ಮತ್ತು ಮದರಾಸು ಪ್ರಾಂತ್ಯಗಳಲ್ಲಿದ್ದ ಕನ್ನಡ ಪ್ರದೇಶಗಳಲ್ಲಿಯೂ 19ನೆಯ ಶತಮಾನದ ಕೊನೆಯ ವೇಳೆಗೆ ಜನಜಾಗೃತಿ ಹುಟ್ಟಿತು. 1885ರಲ್ಲಿ ಮುಂಬಯಿಯಲ್ಲಿ ಜರುಗಿದ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಸಂಸ್ಥಾಪನಾ ಸಮ್ಮೇಳನಕ್ಕೆ ಬಳ್ಳಾರಿ ಹಾಗೂ ಬೆಳಗಾವಿಯಿಂದಲೂ ಜನರು ಬಂದಿದ್ದರು. ವಿದ್ಯಾವಂತರ ನಡುವೆ ಆಯಾ ಪ್ರಾಂತ್ಯಗಳ ಪ್ರಮುಖ ಪತ್ರಿಕೆಗಳಿಂದಾಗಿ ರಾಷ್ಟ್ರೀಯ ಮನೋಭಾವ ಬೆಳೆಯಿತು. 1903ರಲ್ಲಿ ಧಾರವಾಡದಲ್ಲಿ ಮುಂಬಯಿ ಪ್ರಾಂತ್ಯದ ರಾಜಕೀಯ ಪರಿಷತ್ತು ಜರುಗಿತು. ಅದರಲ್ಲಿ ಬಾಲಗಂಗಾಧರ ತಿಲಕರು ಮತ್ತು ಮುಂಬಯಿ ಕಾಂಗ್ರೆಸ್ ನಾಯಕ ಫಿರೋಜ್ ಷಾ ಮೆಹತ್ ಅವರು ಭಾಗವಹಿಸಿದ್ದರು. ಆ ಸುತ್ತಿನಲ್ಲಿ ಈ ಕಿರುಲೇಖನದಲ್ಲಿ ಪ್ರಸ್ತಾಪಿಸಲು ಸಾಧ್ಯವಾಗದಷ್ಟು ಸಂಖ್ಯೆಯಲ್ಲಿ ಪತ್ರಿಕೆಗಳು ಹೊರಬಂದವು. ಉದಾಹರಣೆಯಾಗಿ ರಾಜಹಂಸ, ಕರ್ನಾಟಕ ವೃತ್ತ ಮುಂತಾದುವನ್ನು ಉಲ್ಲೇಖಿಸಬಹುದು.

1905ರಲ್ಲಿ ಬಂಗಾಳದ ವಿಭಜನೆಯ ವಿರುದ್ಧ ಸ್ವದೇಶಿ ಚಳವಳಿ ತಲೆ ಎತ್ತಿತು. 1908ರಲ್ಲಿ ತಿಲಕರಿಗೆ 6 ವರ್ಷಗಳ ದೇಶಾಂತರ ಸೆರೆವಾಸ ವಿಧಿಸಿದಾಗ ಅವರ ವಿರುದ್ದ ಪ್ರತಿಭಟನೆ ಜರುಗಿತು. ಬೆಳಗಾವಿ, ಧಾರವಾಡ, ಬಳ್ಳಾರಿ ಮುಂತಾದ ನಗರಗಳಲ್ಲೆಲ್ಲ ಈ ಸಂಬಂಧವಾದ ಸಭೆಗಳು ಜರುಗಿದವು. ತಿಲಕರು ಇಲ್ಲಿಯೂ ಜನಪ್ರಿಯರಾಗಿದ್ದ ಆ ಕಾಲದ ರಾಷ್ಟ್ರೀಯ ಮುಖಂಡರು. ತಿಲಕರು 6 ವರ್ಷಗಳ ಸೆರೆಮನೆ ಶಿಕ್ಷೆಯನ್ನು ಬರ್ಮಾದಲ್ಲಿರುವ ಮಾಂಡಲೆಯಲ್ಲಿ ಅನುಭವಿಸಿ ಹೊರಬಂದರು. ಅದರ ಮರುವರ್ಷ 1915ರಲ್ಲಿ ಗಾಂಧೀಜಿಯವರು ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ಮರಳಿದರು. 1916 ರಲ್ಲಿ ಬೆಳಗಾವಿಯಲ್ಲಿ ಜರುಗಿದ ಮುಂಬಯಿ ಪ್ರಾಂತ್ಯ ರಾಜಕೀಯ ಪರಿಷತ್ತಿಗೆ ಈ ಇಬ್ಬರು ನಾಯಕರೂ ಬಂದಿದ್ದರು. ಅಲ್ಲಿ ಹೋಂ ರೂಲ್ ಲೀಗ್ ಸ್ಥಾಪನೆಯಾಯಿತು. ಕರ್ನಾಟಕದಲ್ಲಿ ಜನಜಾಗ್ರತಿಯು ಹರಡಲು ಇದು ನಾಂದಿಯಾಯಿತು.

1919ರಲ್ಲಿ ರೌಲತ್ ಕಾಯ್ದೆಯ ವಿರುದ್ಧ ಗಾಂಧೀಜಿಯವರು ಸತ್ಯಾಗ್ರಹ ಚಳವಳಿಯನ್ನಾರಂಭಿಸಿದರು. ಆಗ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಜರುಗಿತು. ಇದರ ಜೊತೆಗೆ ಖಿಲಾಫತ್ ಸಮಸ್ಯೆಯೂ ಸೇರಿ ಅಸಹಕಾರ-ಖಿಲಾಫತ್ ಆಂದೋಲನ ಜರುಗಿತು. ಆಗ ಕರ್ನಾಟಕದ ಜನಸಾಮಾನ್ಯರಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಮಹಾತ್ಮಾ ಗಾಂಧಿಯವರು ಎರಡು ಬಾರಿ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡರು. ಈ ಆಂದೋಲನದಲ್ಲಿ ವಕೀಲರು ವೃತ್ತಿ ತ್ಯಜಿಸಿದರು. ಬಳ್ಳಾರಿ ಧಾರವಾಡ ಬೆಳಗಾವಿ ಎಲ್ಲೆಡೆಗಳಲ್ಲೂ ಬಿರುಸಾಗಿ ಚಳವಳಿ ಜರುಗಿತು. ಧಾರವಾಡದಲ್ಲಿ ಸೇಂದಿ ಅಂಗಡಿಯ ಬಳಿ ಸತ್ಯಾಗ್ರಹ ಮಾಡುತ್ತಿದ್ದ ಖಿಲಾಫತ್ ಕಾರ್ಯಕರ್ತರ ಮೇಲೆ ಗೋಲಿಬಾರ್ ಜರುಗಿ 3 ಮಂದಿ ಮೃತರಾದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿಯು ಉದ್ವೇಗಗೊಂಡು ಮುಂಬಯಿ ಗವರ್ನರರು ಅಲ್ಲಿ ಕೈಗೊಳ್ಳಬೇಕಾಗಿದ್ದ ಪ್ರವಾಸವನ್ನು ರದ್ದು ಪಡಿಸಬೇಕಾಯಿತು.

ಈ ವೇಳೆಗೆ ಗಾಂಧೀಜಿಯವರು ಖಾದಿ, ಪಾನ ನಿಷೇಧ, ಹಿಂದಿ ಪ್ರಚಾರ, ಅಸ್ಪೃಶ್ಯತಾ ನಿವಾರಣೆಗಳನ್ನೊಳಗೊಂಡ ರಚನಾತ್ಮಕ ಕಾರ್ಯಕ್ರಮವೊಂದನ್ನು ರೂಪಿಸಿ ಪ್ರಚುರ ಗೊಳಿಸಿದ್ದರು. ಚರಕದಲ್ಲಿ ನೂಲುವುದಂತೂ ಬೃಹತ್ ಚಳವಳಿಯಾಗಿ ರೂಪುಗೊಂಡು ಕರ್ನಾಟಕದಲ್ಲಿ ಖಾದಿ ಉದ್ಯಮವು ಆರಂಭವಾಯಿತು. 1921ರಲ್ಲಿ ಕಾಂಗ್ರೆಸ್ಸಿನ ಸಾಂಸ್ಥಿಕ ರಚನೆಯನ್ನು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಿದಾಗ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿ ಸ್ಥಾಪನೆಯಾಯಿತು. ಇದರಿಂದ ಕರ್ನಾಟಕದಲ್ಲಿ ಮುಂದಿನ ಹಂತಗಳಲ್ಲಿ ಹೋರಾಟದ ಸಂಘಟನೆಗೂ, ಸ್ವಾತಂತ್ರ್ಯಾನಂತರ ಕರ್ನಾಟಕವು ಏಕೀಕರಣವಾಗುವುದಕ್ಕೂ ನೆರವಾಯಿತು.ೊ1922ರಲ್ಲಿ ಚೌರೀಚೌರದ ಘಟನೆ ಜರುಗಿ ಗಾಂಧೀಜಿಯವರು ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡರಷ್ಟೆ. ಆಗ ನಿರಾಶರಾದ ಕಾಂಗ್ರೆಸ್ ಕಾರ್ಯಕರ್ತರನ್ನು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಲಾಯಿತು. ಇದರಿಂದಾಗಿ ಕಾಂಗ್ರೆಸ್ ಚುರುಕಾಗಿಯೇ ಉಳಿಯಿತು. 1927ರಲ್ಲಿ ಸೈಮನ್ ಆಯೋಗವು ಭೇಟಿ ನೀಡಿದಾಗ ಅದರ ಪ್ರವಾಸದಲ್ಲಿ ಕರ್ನಾಟಕದ ಯಾವುದೇ ನಗರವೂ ಸೇರಿರಲಿಲ್ಲ. ಆದರೆ ಇಡೀ ಭಾರತದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡವು. ಲಾಲಾ ಲಜಪತ್ ರಾಯರ ಮರಣ, ಸ್ಯಾಂಡರ್ಸ್ ಹತ್ಯೆ, ಭಗತ್ ಸಿಂಗ್‌ನ ವಿಚಾರಣೆ ಇವೆಲ್ಲವೂ ಕರ್ನಾಟಕದಲ್ಲಿಯೂ ಜನರನ್ನು ಬಡಿದೆಬ್ಬಿಸಿದವು. 1930ರ ಜನವರಿ 26ರಂದು ಕಾಂಗ್ರೆಸ್ ಮೊದಲನೆಯ ಸ್ವಾತಂತ್ರ್ಯ ದಿನವನ್ನಾಚರಿಸಿದಾಗ ಇದು ವ್ಯಕ್ತರೂಪ ತಳೆಯಿತು. ಗಾಂಧೀಜಿಯವರು ಕಾಯಿದೆ ಭಂಗ ಚಳವಳಿ ಅಥವಾ ಉಪ್ಪಿನ ಸತ್ಯಾಗ್ರಹಕ್ಕೆ ಕರೆ ನೀಡಿದಾಗ ಇಡೀ ಕರ್ನಾಟಕವು ಏಕಕಂಠದಿಂದ ‘‘ಉಘೇ’’ ಎಂದು ಸಾರಿ ಸೆಟೆದು ನಿಂತಿತು.

ಕರ್ನಾಟಕ ಕಾಂಗ್ರೆಸ್ ಸಮಿತಿಯ ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣ, ಸೇಂದಿ ಮರಗಳನ್ನು ಕಡಿಯುವುದು, ನಾನಾ ಬಗೆಯ ಅರಣ್ಯ ಸತ್ಯಾಗ್ರಹಗಳನ್ನು ಒಳಗೊಂಡ ಹೋರಾಟದ ಕಾರ್ಯಕ್ರಮವನ್ನು ರೂಪಿಸಿ, ವ್ಯವಸ್ಥೆಗೊಳಿಸುವ ಸಲುವಾಗಿ ಒಂದು ಉಪಸಮಿತಿಯನ್ನು ರಚಿಸಿತು. ಸತ್ಯಾಗ್ರಹ ನಡೆಸಲು ಸ್ವಯಂ ಸೇವಕರ ತರಬೇತಿ ಶಿಬಿರಗಳನ್ನು ತೆರೆಯಿತು. ಸಂಸ್ಥಾನಗಳಲ್ಲಿ ಚಳವಳಿಗೆ ಅವಕಾಶವಿರಲಿಲ್ಲವಾಗಿ ಮೈಸೂರಿನಿಂದ 300ಕ್ಕಿಂತ ಹೆಚ್ಚು ಮಂದಿ ಬ್ರಿಟಿಷ್ ಪ್ರಾಂತ್ಯಗಳಿಗೆ, ಮುಖ್ಯವಾಗಿ ಕಾರವಾರ ಜಿಲ್ಲೆಗೆ ಹೋಗಿ ಹೋರಾಟದಲ್ಲಿ ಭಾಗವಹಿಸಿದರು. ಉಪ್ಪಿನ ಸತ್ಯಾಗ್ರಹಕ್ಕೆ ಅಂಕೋಲಾ ಪ್ರಮುಖ ಕೇಂದ್ರವಾಗಿತ್ತು. 1930ರ ಏಪ್ರಿಲ್ 13ರಂದು ಸತ್ಯಾಗ್ರಹ ಪ್ರಾರಂಭವಾದಾಗ 35,000 ಮಂದಿ ಕಡಲ ಕರೆಯಲ್ಲಿ ಕೂಡಿದ್ದರು. ಕರ ನಿರಾಕರಣವು ಮುಖ್ಯವಾಗಿ ಕಾರವಾರ ಜಿಲ್ಲೆಯ ಶಿರಸಿ ಸಿದ್ಧಾಪುರ ಮತ್ತು ಧಾರವಾಡ ಜಿಲ್ಲೆಯ ಹಿರೇಕೆರೂರು ತಾಲ್ಲೂಕುಗಳಲ್ಲಿ ನಡೆಯಿತು. ಅಲ್ಲಿನ ಜನತೆ ತೋರಿದ ಆಸೀಮ ಸಾಹಸ, ಎದುರಿಸಿದ ಕಷ್ಟನಷ್ಟಗಳು, ಪ್ರದರ್ಶಿಸಿದ ತ್ಯಾಗ ಮನೋಭಾವಗಳು ಒಂದು ಮಹಾಕಾವ್ಯಕ್ಕೆ ವಸ್ತುವಾಗಬಲ್ಲಂತಹುದು. ಮಹಿಳಾ ಸತ್ಯಾಗ್ರಹಿಗಳು, ಮಾನಭಂಗದ ಪ್ರಸಂಗ ಒದಗಿದಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಲು ಸದಾ ತಮ್ಮ ಉಡಿಯಲ್ಲಿ ಒಂದು ಚೂರಿಯನ್ನು ಇಟ್ಟುಕೊಂಡಿರುತ್ತಿದ್ದರು. ಅಲ್ಲಿನ ದನಕರುಗಳೂ ಜನರೊಂದಿಗೆ ಬವಣೆಗೊಳಗಾದುವು ಎಂದರೆ ಇಂದಿನವರಿಗೆ ಆ ಮಹಾನ್ ಹೋರಾಟದ ಒಂದು ಅಂದಾಜು ನಿಲುಕಬಹುದು.

1933ರ ವೇಳೆಗೆ ಚಳವಳಿಯ ಭರಾಟೆ ತಗ್ಗಿ 1934ರಲ್ಲಿ ಅದನ್ನು ಹಿಂತೆಗೆದು ಕೊಳ್ಳಲಾಯಿತು. ಆ ವರ್ಷಗಳಲ್ಲಿ ನಡೆದ ಮೂರು ದುಂಡು ಮೇಜಿನ ಪರಿಷತ್ತುಗಳಲ್ಲಿ ಗಾಂಧೀಜಿಯವರು 2ನೆಯದರಲ್ಲಿ ಮಾತ್ರ ಭಾಗವಹಿಸಿದ್ದರು. 1935ರಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಮತಾಧಿಕಾರ ಹಾಗೂ ವಿಧಾನಸಭೆಯಲ್ಲಿ ಜವಾಬ್ದಾರಿಯುತ ಸರ್ಕಾರದ ವ್ಯವಸ್ಥೆ ಇದ್ದ ಫೆಡರೇಷನ್ ಕಾಯ್ದೆ ಜಾರಿಯಾಯಿತು. ಕಾಂಗ್ರೆಸ್ ಚುನಾವಣೆ ಯಲ್ಲಿ ಸ್ಪರ್ಧಿಸಿ, ಮುಂಬಯಿ ಮತ್ತು ಮದರಾಸು ಪ್ರಾಂತಗಳಲ್ಲಿ ಅಧಿಕಾರ ವಹಿಸಿಕೊಂಡಿತು. ಕನ್ನಡ ಪ್ರದೇಶಗಳಲ್ಲಿ ಕಾಂಗ್ರೆಸ್ ಜಯಭೇರಿ ಹೊಡೆಯಿತು ಹಾಗೂ ಕೆಲ ಕನ್ನಡಿಗರು ಮಂತ್ರಿಗಳಾದರು. ಈ ಚಳವಳಿಯಲ್ಲಿಯೂ, ಮುಂದೆಯೂ ಕಾಂಗ್ರೆಸ್ಸಿನ ಕಾರ್ಯಕ್ರಮದಲ್ಲಿ ಮಹತ್ವದ ಪಾತ್ರವಹಿಸಿದ ಹಿಂದುಸ್ತಾನಿ ಸೇನಾದಳವನ್ನು ಸಂಘಟಿಸಿದವರು ಕರ್ನಾಟಕದ ಎನ್.ಎಸ್. ಹರ್ಡೀಕರರು ಎಂಬುದನ್ನೂ ಮುಂದೆ ಹುತಾತ್ಮನಾದ ಮೈಲಾರ ಮಹದೇವಪ್ಪ ಗಾಂಧೀಜಿಯವರೊಂದಿಗೆ ದಂಡಿಯಾತ್ರೆಯಲ್ಲಿ ಪಾಲ್ಗೊಂಡ ಏಕೈಕ ಕನ್ನಡಿಗ ಎಂಬುದನ್ನೂ ಇಲ್ಲಿ ಸ್ಮರಿಸಬಹುದು.

 

ಮೈಸೂರು ಸಂಸ್ಥಾನದಲ್ಲಿ ಸ್ವಾತಂತ್ರ್ಯ ಹೋರಾಟ

1881ರಲ್ಲಿ ಮೈಸೂರು ಸಂಸ್ಥಾನವು ಬ್ರಿಟಿಷ್ ಕಮೀಷನರರ ಆಳ್ವಿಕೆಯಿಂದ ಮಹಾರಾಜರ ವಶಕ್ಕೆ ಬಂದಾಗಿನಿಂದ ಈಚಿನ ಬೆಳವಣಿಗೆಗಳನ್ನು ಮಾತ್ರ ಪ್ರಸ್ತಾಪಿಸಿದರೆ ಸಾಕು ಎಂದು ತೋರುತ್ತದೆ. 1881ರಲ್ಲಿ ದಿವಾನ್ ರಂಗಾಚಾರ್ಲು ಸ್ಥಾಪಿಸಿದ ಪ್ರಜಾ ಪ್ರತಿನಿಧಿ ಸಭೆ ಭಾರತದ ಆಡಳಿತ ವ್ಯವಸ್ಥೆಯಲ್ಲಿ, ಆ ಕಾಲಕ್ಕೆ ವಿನೂತನವಾದ ಒಂದು ಪ್ರಯೋಗವಾಗಿತ್ತು. 1894ರಲ್ಲಿ ಚಾಮರಾಜ ಒಡೆಯರು ನಿಧನರಾದಾಗ ಮದರಾಸಿನಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನವು ಸಂತಾಪ ನಿರ್ಣಯವನ್ನು ಮಾಡಿ ಅವರನ್ನು ಸ್ಮರಿಸಿದುದಕ್ಕೆ ಇದೂ ಒಂದು ಕಾರಣ. ಇಂತಹ ಹಲವು ಕ್ರಮಗಳಿಂದ, ಇಲ್ಲಿ ಕಂಡು ಬಂದ ಔದ್ಯಮಿಕ ಪ್ರಗತಿಯಿಂದ ಮತ್ತು ವಿದ್ಯುತ್  ಶಿಕ್ಷಣ ಮುಂತಾದ ಕ್ಷೇತ್ರಗಳ ಪ್ರಗತಿ ಯಿಂದ ಮಹಾರಾಜರ ಆಡಳಿತವು ಬಹುಕಾಲ ಜನಪ್ರಿಯವಾಗಿಯೇ ಇತ್ತು. ಮದರಾಸಿನ ಬ್ರಾಹ್ಮಣೇತರ ಪಕ್ಷ ಜಸ್ಟಿಸ್ ಪಾರ್ಟಿಯಿಂದ ಪ್ರಭಾವಿತವಾಗಿ ಇಲ್ಲಿ ಪ್ರಜಾಮಿತ್ರ ಮಂಡಲಿ ಹಾಗೂ ಪ್ರಜಾಪಕ್ಷಗಳು ರೂಪುಗೊಂಡವು. ಕರ್ನಾಟಕ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ 1924ರ ಸುತ್ತಿನಲ್ಲಿಯೇ ಕಾಂಗ್ರೆಸ್ ಕಾರ್ಯ ಪ್ರಾರಂಭವಾಯಿತು. 1928-29ರ ಬೆಂಗಳೂರಿನ ಗಣೇಶನ ಗಲಾಟೆ, ಇಬ್ಬರು ಪತ್ರಕರ್ತರ ವಿರುದ್ಧ ಜರುಗಿದ ರಾಜದ್ರೋಹ ಮೊಕದ್ದಮೆ, ನ್ಯಾಯ ಕೋರಿ ಇರ್ವಿನ್ ನಾಲಾ ರೈತರು ನಡೆಸಿದ ಚಳವಳಿ ಮುಂತಾದ ಘಟನೆಗಳಿಂದ ಸಂಸ್ಥಾನದಲ್ಲಿ ರಾಷ್ಟ್ರೀಯ ಪ್ರಜ್ಞೆ ಬೆಳೆಯಿತು.

ಮದರಾಸು ಮುಂಬೈ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಗಳು ಸ್ಥಾಪನೆಗೊಂಡುದರ ಪ್ರಭಾವದಿಂದಾಗಿ 1937ರಲ್ಲಿ ಪ್ರಜಾಪಕ್ಷ ಹಾಗೂ ರಾಜ್ಯದಲ್ಲಿದ್ದ ಕಾಂಗ್ರೆಸ್ ಒಗ್ಗೂಡಿ ‘ಮೈಸೂರು ಸಂಸ್ಥಾನ ಕಾಂಗ್ರೆಸ್’ ಅಸ್ತಿತ್ವಕ್ಕೆ ಬಂತು. 1938ರಲ್ಲಿ ಶಿವಪುರದ ಮೊದಲ ಅಧಿವೇಶನದಲ್ಲಿ ಕಾಂಗ್ರೆಸ್ ಧ್ವಜ ಹಾರಿಸಬಾರದೆಂದು ಆಜ್ಞೆ ಜಾರಿಯಾಗಿ ಅವರ ವಿರುದ್ಧ ಸತ್ಯಾಗ್ರಹ ಜರುಗಿತು. 15 ದಿನಗಳ ನಂತರ ವಿದುರಾಶ್ವತ್ಥದಲ್ಲಿ ಧ್ವಜ ಹಾರಿಸಿದ ಪ್ರಸಂಗದಲ್ಲಿ ಗೋಲೀಬಾರು ಜರುಗಿತು. 1939ರಲ್ಲಿ ಸಂಸ್ಥಾನ ಕಾಂಗ್ರೆಸ್ ಒಂದು ಸತ್ಯಾಗ್ರಹ ಚಳವಳಿ ನಡೆಸಿತು. ಇವುಗಳ ಜೊತೆಗೆ ಕಾಂಗ್ರೆಸ್ ಮುಂದಾಳುಗಳು ಶ್ರಮವಹಿಸಿ ಬೆಂಗಳೂರು, ಭದ್ರಾವತಿ, ಕೋಲಾರ ಚಿನ್ನದ ಗಣಿಗಳು ಮುಂತಾದವುಗಳಲ್ಲಿ ಕಾರ್ಮಿಕ ಸಂಘಗಳನ್ನು ಕಟ್ಟಿ ಇಲ್ಲಿನ ಕಾರ್ಮಿಕ ವರ್ಗದಲ್ಲಿ ರಾಷ್ಟ್ರೀಯ ಮನೋಭಾವವನ್ನು ಬೆಳೆಸಿದರು. ಇವೆಲ್ಲದರ ಪರಿಣಾಮವಾಗಿ 50ರ ದಶಕದ ಪ್ರಾರಂಭದಲ್ಲಿ ಇಲ್ಲಿ ಜನ ಜಾಗೃತಿಯು ಬ್ರಿಟಿಷ್ ಪ್ರಾಂತಗಳ ಮಟ್ಟಿಗೆ ಪ್ರಬಲವಾಗಿಯೂ ವ್ಯಾಪಕವಾಗಿಯೂ ಹರಡಿತ್ತು.