ಹೈದರಾಬಾದ್ ಸಂಸ್ಥಾನದಲ್ಲಿ ಸ್ವಾತಂತ್ರ್ಯ ಹೋರಾಟ

ಹೈದರಾಬಾದ್ ಸಂಸ್ಥಾನದ ಕನ್ನಡ ಮತ್ತು ಇತರ ಭಾಷಾ ಪ್ರದೇಶಗಳ ಜನರ ಸ್ಥಿತಿ ನಾನಾ ರೀತಿಗಳಲ್ಲಿ ಶೋಚನೀಯವಾಗಿತ್ತು. ಮುಸಲ್ಮಾನರ ಪಕ್ಷಪಾತಿಯಾದ ಕಾನೂನುಗಳು ಜಾರಿಯಲ್ಲಿದ್ದುವು. ಹಿಂದುಗಳ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವುದೂ ಸಹ ಕಠಿಣವಾಗಿತ್ತು. ಕನ್ನಡದ ಕಲಿಕೆ, ಕನ್ನಡ ಪತ್ರಿಕೆಗಳ ಪ್ರಕಾಶನಗಳು ನಾನಾ ತೊಂದರೆ ಗಳನ್ನೆದುರಿಸಬೇಕಾಗಿತ್ತು.

1921ರಲ್ಲಿ ಸಾರ್ವಜನಿಕ ಪರಿಷತ್ತೊಂದನ್ನು ನಡೆಸುವ ಪ್ರಯತ್ನಗಳನ್ನು ಸರ್ಕಾರ ನಡೆಸಿತು. ಆದರೆ ‘ಹೈದರಾಬಾದ್ ಸ್ವದೇಶೀ ಲೀಗ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ವಿದೇಶೀ ಬಟ್ಟೆಗಳ ಬಹಿಷ್ಕಾರ, ಧ್ವಜವಂದನೆ ಮುಂತಾದ ಕಾರ್ಯಕ್ರಮಗಳನ್ನು ಕೆಲಕಾಲ ಜರುಗಿಸಲಾಯಿತು. 1935ರಲ್ಲಿ ‘ನಿಜಾಂ ಪ್ರಜಾಪರಿಷತ್ತು’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ನಾಗರಿಕ ಸ್ವಾತಂತ್ರ್ಯಗಳಿಗಾಗಿ ಹೋರಾಡಲು ಪ್ರಯತ್ನ ನಡೆದಾಗ, ಅದನ್ನು ಮತೀಯ ಸಂಸ್ಥೆ ಎಂದು ಹೆಸರಿಸಿ ಹತ್ತಿಕ್ಕಲಾಯಿತು. ಸುಮಾರು ಆ ವೇಳೆಯಲ್ಲಿ ಆರ್ಯ ಸಮಾಜವು ಹಿಂದುಗಳನ್ನು ಇಸ್ಲಾಮಿಗೆ ಮತಾಂತರಗೊಳಿಸುವುದರ ವಿರುದ್ಧ ಚಳವಳಿಯನ್ನಾರಂಭಿಸಿತು. ಆದರೆ ಮತಾಂತರವನ್ನು ಆರಂಭಿಸಿದ್ದ ‘‘ಇತ್ತೆಹಾದ್-ಉಲ್-ಮುಸ್ಲಿಮೀನ್’’ನ ಕಾರ್ಯ ಕರ್ತರು ಆ ಚಳವಳಿಯನ್ನು ಎದುರಿಸಿದರು. 1938ರಲ್ಲಿ ಕಾಂಗ್ರೆಸ್ಸನ್ನು ಸ್ಥಾಪಿಸುವ ಪ್ರಯತ್ನಕ್ಕೂ ಸರ್ಕಾರವು ನಿಷೇಧ ಹೇರಿತು. ಈ ಸುತ್ತಿನಲ್ಲಿ ನಿಜಾಂ ಸರ್ಕಾರ ಇತ್ತೆಹಾದ್, ರಜಕಾರರು ಎಂಬ ಅರೆ ಮಿಲಿಟರಿ ದಳವನ್ನು ಸಂಘಟಿಸಿ ಜನಸಾಮಾನ್ಯರನ್ನು ಬೆದರಿಸಲಾರಂಭಿಸಿತು.

ಈ ಪರಿಸ್ಥಿತಿಯಲ್ಲಿ ಪತ್ರಿಕೆಗಳ ಮೂಲಕ ರಾಷ್ಟ್ರೀಯ ಭಾವನೆಗಳು ವ್ಯಾಪಕವಾಗಿ ಹರಡಿದ್ದವು. ನಿಷೇಧವನ್ನು ಲೆಕ್ಕಿಸದೇ ಸಂಸ್ಥಾನ ಕಾಂಗ್ರೆಸ್ಸನ್ನು ಸ್ಥಾಪಿಸಿ ಸತ್ಯಾಗ್ರಹ ಚಳವಳಿ ಯೊಂದನ್ನು ನಡೆಸಲಾಯಿತು. ಹಲವರು ಬಂಧನಕ್ಕೊಳಗಾದರು. ಆದರೆ ಗಾಂಧೀಜಿಯವರ ಮಧ್ಯಪ್ರವೇಶದಿಂದ ಸತ್ಯಾಗ್ರಹಿಗಳ ಬಿಡುಗಡೆಯಾದರೂ, ಕಾಂಗ್ರೆಸ್ಸಿನ ಮೇಲಿನ ನಿಷೇಧ ಹೋಗಲಿಲ್ಲ. ಆಗ ‘ನಿಜಾಮ್ ಕರ್ನಾಟಕ ಪರಿಷತ್ತು’ ಸ್ಥಾಪನೆಯಾಯಿತು. ಜವಾಬ್ದಾರಿ ಸರ್ಕಾರ ರಚನೆ ಅದರ ಗುರಿ. ನಾಲ್ಕು ಸಮ್ಮೇಳನಗಳು ಜರುಗಿ ಜನರಲ್ಲಿ ನಿರ್ಭೀತ ಭಾವ ಬೆಳೆಯತೊಡಗಿತು. ಸಣ್ಣ ಸಂಸ್ಥಾನಗಳಲ್ಲಿಯ ಸಮಸ್ಯೆಗಳು ಬೇರೆ ರೀತಿಯವು. ರಾಜರು ಮರಾಠಿ ಪ್ರಿಯರು, ಜನರು ಕನ್ನಡಿಗರು. ಎಷ್ಟೋ ಕಡೆಗಳಲ್ಲಿ ಕಂದಾಯದ ದರ ಸ್ವೇಚ್ಛೆಯಾಗಿತ್ತು. ರಾಮದುರ್ಗ, ಜಮಖಂಡಿ, ಮುಧೋಳ ಮುಂತಾದ ಹಲವು ಸಂಸ್ಥಾನಗಳಲ್ಲಿ ಜನಾಂದೋಲನಗಳು ರೂಪುಗೊಂಡವು. ರಾಮದುರ್ಗದಲ್ಲಿ ಒಮ್ಮೆ ಜನರು ರೊಚ್ಚಿಗೆದ್ದು ಎಂಟು ಮಂದಿ ಪೊಲೀಸರನ್ನು ಸುಟ್ಟು ಹಾಕಿದ ಪ್ರಕರಣವು ಜರುಗಿತು. 1940ರ ದಶಕದ ಪ್ರಾರಂಭಕ್ಕೆ ಇಡೀ ಕರ್ನಾಟಕದಲ್ಲಿ ಜನರು ಎಚ್ಚೆತ್ತಿದ್ದರು.

 

ಕರ್ನಾಟಕದಲ್ಲಿ ಕ್ವಿಟ್ ಇಂಡಿಯಾ ಚಳವಳಿ

ಎರಡನೆಯ ಮಹಾಯುದ್ಧವು ಆರಂಭವಾದ ನಂತರ ಕಾಂಗ್ರೆಸ್ ಪ್ರಾಂತಗಳಲ್ಲಿ ತಾನು ವಹಿಸಿಕೊಂಡಿದ್ದ ಜವಾಬ್ದಾರಿಯನ್ನು ತ್ಯಜಿಸಲು ನಿರ್ಧರಿಸಿತು. ಮುಂಬೈ ಮತ್ತು ಮದರಾಸಿನ ಕಾಂಗ್ರೆಸ್ ಮಂತ್ರಿಮಂಡಲಗಳು ರಾಜೀನಾಮೆ ನೀಡಿದವು. 1940ರಲ್ಲಿ ಕಾಂಗ್ರೆಸ್ ವೈಯಕ್ತಿಕ ಸತ್ಯಾಗ್ರಹ ಚಳವಳಿಯನ್ನು ನಡೆಸಿತು. ಕರ್ನಾಟಕದಲ್ಲಿಯೂ ಹಲವಾರು ಮಂದಿ ಸೆರೆಮನೆ ಸೇರಿದರು.

1942ರ ಆಗಸ್ಟ್‌ನಲ್ಲಿ ಕಾಂಗ್ರೆಸ್ ಮುಂಬಯಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯನ್ನು ಕೂಡಿಸಿ ‘ಕ್ವಿಟ್ ಇಂಡಿಯಾ’ ಚಳವಳಿಯನ್ನು ಸಂಘಟಿಸಲು ನಿರ್ಧರಿಸಿತು. ಆದರೆ ನಾಯಕರನ್ನು ಸರ್ಕಾರವು ಬಂಧಿಸಿದ ಕಾರಣ ಜನರೇ ಹೋರಾಟವನ್ನಾರಂಭಿಸಿದರು. ಇದು ಸರಿಸುಮಾರಾಗಿ ಕರ್ನಾಟಕದಲ್ಲೆಲ್ಲ ಜರುಗಿತು. ಮೊದಲ ಪ್ರತಿಕ್ರಿಯೆ ನಗರಗಳಲ್ಲಿ ಅತ್ಯಂತ ವ್ಯಾಪಕವಾಗಿ ಕಂಡುಬಂತು. ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಮುಖ್ಯ ಪಾತ್ರಧಾರಿಗಳು. ಬೆಂಗಳೂರು ನಗರದಲ್ಲಿ ವ್ಯಾಪಕವಾಗಿ ಮುಷ್ಕರಗಳು ಜರುಗಿದವು. ಹಲವೆಡೆ ಗೋಲಿಬಾರ್‌ಗಳಾದುವು. ಅಂತಹ ಒಂದು ಗೋಲಿಬಾರಿನ ಸ್ಮಾರಕ ಬೆಂಗಳೂರಿನ ಮೈಸೂರು ಬ್ಯಾಂಕ್ ಚೌಕದಲ್ಲಿದೆ. ನಾಡಿನ ಎಲ್ಲ ನಗರಗಳಲ್ಲೂ ವಿದ್ಯಾರ್ಥಿಗಳ ಮುಷ್ಕರ ಗಳು ಸುಮಾರು ಎರಡು ತಿಂಗಳು ಕಾಲ ಜರುಗಿದುವು.

ವಿಧ್ವಂಸಕ ಕಾರ್ಯಗಳ ಚಳವಳಿಯನ್ನು ಈ ಹೋರಾಟದ ಎರಡನೆಯ ಹಂತವಾಗಿ ಪರಿಗಣಿಸಬಹುದು. ಸುಸಂಘಟಿತವಾಗಿ ಈ ಹಂತವು ಜರುಗಿದ ಜಿಲ್ಲೆಗಳಲ್ಲಿ ಧಾರವಾಡ ಮತ್ತು ಬೆಳಗಾವಿ ಮೊದಲ ಸ್ಥಾನ ಪಡೆಯುತ್ತವೆ. ರೈಲು ಕಂಬಿಗಳನ್ನು ಕೀಳುವುದು, ನಿಲ್ದಾಣಗಳಿಗೆ ಬೆಂಕಿ ಇಕ್ಕುವುದು, ಟೆಲಿಗ್ರಾಫ್ ತಂತಿಗಳನ್ನು ಕತ್ತರಿಸುವುದು, ಸರ್ಕಾರದ ಅಧಿಕಾರಿಗಳು ಸಂಗ್ರಹಿಸಿದ ಕಂದಾಯದ ಹಣವನ್ನು ಲೂಟಿ ಮಾಡುವುದು, ಅಂಚೆ ಸೇವೆಗೆ ಅಡ್ಡಿ ಮಾಡುವುದು, ಪೊಲೀಸರ ಮೇಲೆ ಹಲ್ಲೆ ಮುಂತಾದುವು ಆಗ ನಡೆದ ವಿಧ್ವಂಸಕ ಕ್ರಿಯೆಗಳು. 1942ರ ಸೆಪ್ಟೆಂಬರ್ 28ರಂದು ಜರುಗಿದ ಈಸೂರು ಘಟನೆಯು ಇಂತಹ ಒಂದು ವಿಧ್ವಂಸಕ ಕಾರ್ಯ. ಅದರಲ್ಲಿ ಒಬ್ಬ ಅಮಲ್ದಾರ, ಒಬ್ಬ ಸಬ್-ಇನ್ಸ್‌ಪೆಕ್ಟರ್ ಹತರಾಗಿ ಐವರು ಗಲ್ಲಿಗೇರಬೇಕಾಯಿತು. 1943ರ ಏಪ್ರಿಲ್ 1ರಂದು ಧಾರವಾಡ ಜಿಲ್ಲೆಯ ಹೊಸರಿತ್ತಿ ಗ್ರಾಮದಲ್ಲಿ ವಸೂಲಿ ಮಾಡಿ ತಂದಿರಿಸಿದ್ದ ಕಂದಾಯವನ್ನು ಲೂಟಿ ಮಾಡಿದ ಪ್ರಸಂಗದ ಚಕಮಕಿಯಲ್ಲಿ ಮೈಲಾರ ಮಹದೇವಪ್ಪ ಸೇರಿದಂತೆ ಮೂವರು ಹುತಾತ್ಮರಾದರು. 1943ರ ಜನವರಿ 20ರಂದು ಬೆಳಗಾವಿ ಜಿಲ್ಲೆಯ ತೇಲಗಿ ಗ್ರಾಮದಲ್ಲಿ 50 ಮಂದಿ ಒಮ್ಮೆಗೆ ದಾಳಿ ನಡೆಸಿ ವಸೂಲಾದ ಕಂದಾಯದ ಹಣವನ್ನು ಲೂಟಿ ಮಾಡಿದರು. ಈ ಜಿಲ್ಲೆಯಲ್ಲಿಯೇ 3 ತಂಡಗಳು 30ಕ್ಕೂ ಹೆಚ್ಚು ಕಾರ್ಯಾ ಚರಣೆಗಳನ್ನು ನಡೆಸಿದವು. ಧಾರವಾಡ ಜಿಲ್ಲೆಯಲ್ಲಿ ಹಲವಾರು ರೈಲ್ವೇ ನಿಲ್ದಾಣಗಳು ಭಸ್ಮವಾದುವು. 1942ರ ಆಗಸ್ಟ್‌ನಲ್ಲಿಯೇ ತಿಪಟೂರು ರೈಲ್ವೇ ನಿಲ್ದಾಣ ಹಲ್ಲೆಗೊಳಗಾಗಿ ಗೋಲಿಬಾರು ಜರುಗಿತು ಹಾಗೂ ಒಂದು ಮಾಲು ಗಾಡಿ ಭಸ್ಮವಾಯಿತು.

ಈ ಹಂತದ ಇನ್ನೊಂದು ಉಲ್ಲೇಖನೀಯ ಹೋರಾಟವೆಂದರೆ ಹಾಸನ ಜಿಲ್ಲೆಯ ಸಂತೆ ಸತ್ಯಾಗ್ರಹಗಳು. ಸುಂಕ ತೆರದೇ ಸಂತೆ ಜರುಗಿಸುವುದು ಇದರ ಮುಖ್ಯ ಕಾರ್ಯ ಕ್ರಮ. ಈ ಸಂಬಂಧವಾಗಿ ಚನ್ನರಾಯಪಟ್ಟಣದಲ್ಲಿ ಒಂದು ಗೋಲಿಬಾರು ಜರುಗಿತು. ನಿಟ್ಟೂರು ಮುಂತಾದ ಕೆಲವು ಗ್ರಾಮಗಳಲ್ಲಿ ಮಿಲಿಟರಿ ಪೊಲೀಸು ಪಡೆಗಳು ಬಂದು ವ್ಯಾಪಕವಾದ ಬಂಧನಗಳು ಜರುಗಿದವು. ಇವಲ್ಲದೇ, ಕಲ್ಲಚ್ಚಿನ ಪತ್ರಿಕೆಗಳನ್ನು ನಡೆಸು ವುದು, ಬಾಂಬು ಸಿಡಿಸುವುದು, ಟಿಕೆಟ್ ಇಲ್ಲದೆ ಸಾಮೂಹಿಕ ರೈಲು ಪ್ರಯಾಣ ಇಂತಹ ಕಾರ್ಯಗಳೂ ಜರುಗಿದುವು. ಹೈದರಾಬಾದ್ ಸಂಸ್ಥಾನದ ಪ್ರದೇಶಗಳಲ್ಲಿ ಮಾತ್ರ ಹೋರಾಟವು ವಿದ್ಯಾರ್ಥಿ ಮುಷ್ಕರಗಳು ಮತ್ತು ಕೆಲವರ ಬಂಧನಕ್ಕೆ ಸೀಮಿತವಾಗಿತ್ತು.

‘ಕ್ವಿಟ್ ಇಂಡಿಯಾ ಚಳವಳಿ’ಯು 1944ರ ಮೇ ತಿಂಗಳಲ್ಲಿ ಗಾಂಧೀಜಿಯವರು ಬಿಡುಗಡೆಯಾಗುವುದರೊಂದಿಗೆ ಮುಗಿದಂತಾಯಿತು. ಮುಂದಿನ ಮೂರು ವರ್ಷಗಳಲ್ಲಿ ಜರುಗಿದ ಐ.ಎನ್.ಎ.ೊವೀರರ ಬಿಡುಗಡೆಯ ಆಂದೋಲನ ಮುಂತಾದವುಗಳಲ್ಲಿ ಕರ್ನಾಟಕವೂ ಉತ್ಸಾಹದಿಂದ ಭಾಗವಹಿಸಿತು. 1947ರ ಆಗಸ್ಟ್ 15ರಂದು ಭಾರತವು ಸ್ವತಂತ್ರವಾಯಿತು. ಇಬ್ಬಾಗವೂ ಆಯಿತು. ಭಾರತವು ಸ್ವತಂತ್ರವಾದರೂ ಕರ್ನಾಟಕದ ಎಲ್ಲ ಭಾಗಗಳೂ ಸ್ವತಂತ್ರಗೊಳ್ಳಲಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೇ ಸೇರಿದ, ಸ್ವಾತಂತ್ರ್ಯಾ ನಂತರದ, ಎರಡು ಚಳವಳಿಗಳನ್ನು ನಾವು ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಅಂಗಗಳಾಗಿಯೇ ಪರಿಗಣಿಸುವುದು ಸೂಕ್ತ.